ಮಂಗಳವಾರ, ಮೇ 18, 2021
23 °C

ಪೋಲೆಂಡಿನಲ್ಲಿ ಭಾರತ ಒಕ್ಕೂಟದ ಕನಸು

ಎಚ್.ಎಸ್.ಶಿವಪ್ರಕಾಶ್ Updated:

ಅಕ್ಷರ ಗಾತ್ರ : | |

ಪೋಲೆಂಡಿನಲ್ಲಿ ಭಾರತ ಒಕ್ಕೂಟದ ಕನಸು

ಕೆಲವು ದಿನಗಳ ಹಿಂದೆ ಪೋಲೆಂಡಿನಲ್ಲಿದ್ದಾಗ ಒಬ್ಬ ಅತ್ಯಂತ  ವಿಶೇಷ ವ್ಯಕ್ತಿಯನ್ನು ಭೇಟಿ ಮಾಡುವ, ಅವರೊಂದಿಗೆ ದೀರ್ಘ ಚರ್ಚೆ ನಡೆಸುವ ಅವಕಾಶ ಬಂದಿತು. ಆ ರವಿವಾರ ಮಧ್ಯಾಹ್ನ ಮೂರು ಗಂಟೆಗೆ ವಾರ್ಸಾ ರೈಲ್ವೆನಿಲ್ದಾಣದಲ್ಲಿ ನಾನು ಬಂದಿಳಿದಾಗ ಅಲ್ಲಿ ನನ್ನ ಆತಿಥೇಯರಾಗಿದ್ದ ಸಂಸ್ಕೃತ ತಜ್ಞ ಪ್ರೊ.ಮೆಯೋರ್ ನನಗಾಗಿ ಕಾಯುತ್ತಿದ್ದರು. ಆ ಸಂಜೆ ಐದು ಗಂಟೆಗೆ ಪ್ರೊ.ಮರಿಯಾ ಬರ್ಸ್ಕಿ ಅವರು ನನ್ನನ್ನು ತಮ್ಮಲ್ಲಿಗೆ ಕರೆತರಲು ಹೇಳಿದ್ದಾರೆಂದು ತಿಳಿಸಿದರು. ನನಗೆ ತುಂಬಾ ಸಂತೋಷವಾಯಿತು.ಪ್ರೊ.ಬರ್ಸ್ಕಿ ಅವರ ಸಂಸ್ಕೃತ ನಾಟಕ ಕುರಿತ ಬರವಣಿಗೆಯ ಪರಿಚಯ ನನಗಿತ್ತು. ವಾರ್ಸಾ ವಿಶ್ವವಿದ್ಯಾಲಯದಲ್ಲಿ ಭಾರತೀಯ ಅಧ್ಯಯನ ವನ್ನು ಭದ್ರ ಬುನಾದಿಯ ಮೇಲೆ ನಿಲ್ಲಿಸಿದವರು ಅವರೆಂಬುದನ್ನೂ ಅರಿತಿದ್ದೆ. ಅಲ್ಲದೆ  `ಕಾಮ ಸೂತ್ರ'ವನ್ನು ಪೋಲಿಷ್ ಭಾಷೆಗೆ ತರ್ಜುಮೆ ಮಾಡಿ ಅದನ್ನು ಪೋಲೆಂಡಿನಲ್ಲಿ ಬಹಳ ಜನಪ್ರಿಯಗೊಳಿಸಿದರೆಂಬುದೂ ಗೊತ್ತಿತ್ತು. ಆ ಅನುವಾದಿತ ಕೃತಿ ಕಮ್ಯುನಿಸ್ಟ್ ಪೋಲೆಂಡಿನಲ್ಲಿ ಅದೆಷ್ಟು ಜನಪ್ರಿಯವಾಯಿತೆಂದರೆ ಅನುವಾದಕ ರಾದ ಬರ್ಸ್ಕಿಯವರ ಜನಪ್ರಿಯತೆಯೂ ಶಿಖರಕ್ಕೇರಿತು.

ಭಾರತೀಯ ಆಧ್ಯಯನದಲ್ಲಿ ಹಲವು ಜನ ಶಿಷ್ಯರಿಗೆ ಪ್ರವೇಶ ನೀಡಿದ ಬರ್ಸ್ಕಿ ಅವರು, ಪೋಲೆಂಡಿನ ವಿಖ್ಯಾತ ಅಕಡೆಮಿಕ್‌ಗಳಲ್ಲಿ ಒಬ್ಬರು. ಇಡೀ ಸಮಾಜದ ಮೇಲೆ ಅವರ ಪ್ರಭಾವ ಯಾವ ಮಟ್ಟಿಗಿತ್ತೆಂದರೆ ಕಮ್ಯುನಿಸ್ಟ್ ಸರ್ಕಾರ ಕೊನೆಗೊಂಡು ಪೋಲೆಂಡ್ ಪ್ರಜಾ ಪ್ರಭುತ್ವದ ಹಾದಿ ಹಿಡಿದಾಗ ಬರ್ಸ್ಕಿ ಅವರು ಭಾರತದಲ್ಲಿ ಪೋಲೆಂಡಿನ ರಾಜದೂತರಾಗಿ ನೇಮಕಗೊಂಡು ಸೇವೆ ಸಲ್ಲಿಸಿದರು. ಭಾರತೀಯ ಭಾಷಾ ಸಾಹಿತ್ಯಗಳ ಬಗ್ಗೆ ವಿಶೇಷವಾಗಿ ರಂಗ ಭೂಮಿಯ ಬಗ್ಗೆ ಆಳವಾದ ಆಸಕ್ತಿಯುಳ್ಳ ಅವರು ನನ್ನ ಬಗ್ಗೆ ಕೇಳಿದ್ದರೆಂದು ಪೋಲೆಂಡಿನ ನನ್ನ ಸೋದರಿ ಪ್ರೊ.ಮೋನಿಕಾ ಜಿನ್ ಹೇಳಿದ್ದರು. ಅವರು ನನಗಾಗಿ ಕಾಯುತ್ತಿದ್ದಾರೆಂದೂ ತಿಳಿಸಿದ್ದರು.ನಾನು ವಾರ್ಸಾಗೆ ಹೋದಂದು ಬೇಸಿಗೆಯ ದಿನವಾಗಿದ್ದರೂ ಬಿಸಿಲಿನ ಸುಳಿವೇ ಇರಲಿಲ್ಲ. ಒಂದೇ ಸಮ ಜಡಿ ಮಳೆ ನಮ್ಮ ಮಲೆನಾಡನ್ನು ನೆನಪಿಸುತ್ತಿತ್ತು. ಸಂಜೆ ಐದರ ಮಳೆಯಲ್ಲಿ ಪ್ರೊ. ಮೆಯೋರ್ ನನ್ನನ್ನು ಕಿಕ್ಕಿರಿದ ಟ್ರಾಂ ಒಂದರಲ್ಲಿ ನನ್ನ ಅತಿಥಿ ಗೃಹದಿಂದ ನಗರದ ಮಧ್ಯಭಾಗಕ್ಕೆ ಕರೆದೊಯ್ದರು. ಎರಡನೇ ಮಹಾಯುದ್ಧದಲ್ಲಿ ಶೇಕಡಾ ಎಂಬತ್ತರಷ್ಟು ಬಾಂಬಿನ ದಾಳಿಗೆ ಬಲಿಯಾಗಿದ್ದ ವಾರ್ಸಾ ಈಗಲೂ ಒಂದು ಐತಿಹಾಸಿಕ ನಗರದಂತೆ ಕಂಗೊಳಿಸುತ್ತಿದೆ.ವಿಶ್ವವಿದ್ಯಾಲಯದ ಪಕ್ಕದಲ್ಲೇ ಇರುವ ಖಾನಾವಳಿಯೊಂದರಲ್ಲಿ ಪ್ರೊ.ಬರ್ಸ್ಕಿ ನಮಗಾಗಿ ಕಾಯುತ್ತಿದ್ದರು. ಆ ಖಾನಾವಳಿಯ ತುಂಬಾ ಯುದ್ಧಪೂರ್ವ ಯುಗದ ಸ್ಮಾರಕಗಳು. ಆ ಯುಗದ ಸುಂದರಿಯರ ಅರೆಬೆತ್ತಲೆ ಚಿತ್ರಗಳು ಕೆಂಪು ಇಟ್ಟಿಗೆಯ ಗೋಡೆಗಳನ್ನು ಅಲಂಕರಿ ಸಿದ್ದವು. ಅಲ್ಲಿನ ಕುರ್ಚಿ ಮೇಜುಗಳೆಲ್ಲಾ ನೂರು ವರ್ಷ ಹಿಂದಿನ ಕತೆಗಳನ್ನು ಹೇಳುತ್ತಿದ್ದವು. ಅದರ ಒಟ್ಟು ವಾತಾವರಣ ಇಂದಿನ ಯೂರೋಪಿ ನದಲ್ಲ. ಮೂಲೆಯ ಮೇಜೊಂದರಲ್ಲಿ ಕೆಂಪು ವೈನನ್ನು ಹೀರುತ್ತಾ ಕಾಯುತ್ತಿದ್ದ ಬರ್ಸ್ಕಿ ಅವರಿಗೆ ಪ್ರೊ.ಮೆಯೋರ್ ನನ್ನ ಪರಿಚಯ ಮಾಡಿಸಿದರು. ನಾನು ಅವರನ್ನು ಮೊದಲ ಸಲ ನೋಡುತ್ತಿದ್ದೆ. ಅವರು ಯೂರೋಪಿಗರಿಗಿಂತಾ ಪಶ್ಚಿಮ ಉತ್ತರ ಪ್ರದೇಶದ ಅರವತ್ತರ ಹರೆಯದ ಒಬ್ಬ ಜಾಟ್ ಜಮೀನುದಾರನಂತೆ ಕಾಣುತ್ತಿದ್ದರು.ಪ್ರೀತಿಯಿಂದ ಕೈ ಕುಲುಕಿ ಮಾತಾಡತೊಡಗಿ ದರು: `ನೀವು ಬಂದದ್ದು ತುಂಬಾ ಸಂತೋಷ. ಭಾರತೀಯ ರಂಗಭೂಮಿ ನನ್ನ ಆಸಕ್ತಿಯ ಕ್ಷೇತ್ರ ಗಳಲ್ಲೊಂದು. ನನ್ನ ತಂದೆ-ತಾಯಿ ಇಬ್ಬರೂ ರಂಗನಟರು. ನಾನೂ ರಂಗಾಭಿನಯ ಮಾಡಿದ್ದೇನೆ. ಭಾರತೀಯ ರಂಗಭೂಮಿಯಲ್ಲಿ ಕನ್ನಡದ ರಂಗಭೂಮಿಗೆ ವಿಶೇಷ ಜಾಗವಿದೆ ಎಂದು ಬಲ್ಲೆ. ಪ್ರಸಿದ್ಧ ನಾಟಕಕಾರರಲ್ಲಿ ಗಿರೀಶ್ ಕಾರ್ನಾಡ್ ಮುಖ್ಯರು. ಇನ್ನೊಬ್ಬರು ನೀವು...'ನಾನು ಸಂಕೋಚದಿಂದ ಹೇಳಿದೆ: `ನಿಮ್ಮ ಪ್ರೀತಿಯ ಮಾತುಗಳಿಗಾಗಿ ಕೃತಜ್ಞತೆಗಳು. ಗಿರೀಶರು ವಿಶ್ವವಿಖ್ಯಾತ ನಾಟಕಕಾರರು ನಿಜ. ನಾನು ಅವರಿಗಿಂತ ವಯಸ್ಸು ಮತ್ತು ಕೀರ್ತಿಯಲ್ಲಿ ತುಂಬಾ ಕಿರಿಯ. ನನ್ನ ಪ್ರಕಾರ ಕನ್ನಡ ನಾಟಕ ರಚನೆಯ ಇನ್ನೊಬ್ಬ ದಿಗ್ಗಜ ರೆಂದರೆ ಚಂದ್ರಶೇಖರ ಕಂಬಾರರು. ಅವರು ಖಂಡಿತಾ ನನಗಿಂತ ದೊಡ್ಡವರು'.ಬರ್ಸ್ಕಿ ಅವರು: `ಆ ಹೆಸರನ್ನು ನಾನು ಕೇಳಿಯೇ ಇಲ್ಲವಲ್ಲ'. ನಾನೆಂದೆ: `ಹಲವು ಸಲ ಸಿದ್ಧಿಗೂ ಪ್ರಸಿದ್ಧಿಗೂ ನೇರ ಸಂಬಂಧವಿರುವುದಿಲ್ಲ. ಅದೃಷ್ಟವೆನ್ನು ವುದೂ ಒಂದಿದೆ. ಉದಾಹರಣೆಗೆ ನಿಮ್ಮ ಇಬ್ಬರು ಕವಿಗಳಿಗೆ ನೊಬೆಲ್ ಬಹುಮಾನ ಸಿಕ್ಕಿದೆ. ಅದರಲ್ಲಿ ಮೊದಲನೆಯವರಾದ ಮಿಲೋಷ್ ನನ್ನ ಪ್ರಕಾರ ಬಹುದೊಡ್ಡ ಕವಿ. ಇನ್ನೊಬ್ಬರಾದ ಸಿಂಬ್ರೋಸ್ಕಾ ಒಳ್ಳೆ ಕವಿ ನಿಜ. ಆದರೆ ಅವರಿಗಿಂತ ಉತ್ತಮರಿಗೆ ಆ ಗೌರವ ಸಿಕ್ಕಿಲ್ಲ. ಪೋಲೆಂಡಿನ ಬಹು ದೊಡ್ಡ ಕವಿಗಳಾದ ಜ್ವಿಗ್ನೂ ಹರ್ಬರ್ಟ ಗಾಗಲಿ ರೊಜೆವಿಚ್‌ಗಾಗಲಿ ನೊಬೆಲ್ ಸಿಗಲೇ ಇಲ್ಲ'.ಬರ್ಸ್ಕಿಯವರು ಕಂಬಾರರ ಮತ್ತು ನನ್ನ ಬರವಣಿಗೆಯ ಬಗ್ಗೆ ಪ್ರಶ್ನೆಗಳನ್ನು ಕೇಳಿದರು. ನಾನು ನನಗೆ ಗೊತ್ತಿದ್ದ ಮಾಹಿತಿ ನೀಡಿದೆ. ನಂತರ ಆಧುನಿಕೋತ್ತರ ಭಾರತೀಯ ಸಾಹಿತ್ಯದ ಬಗ್ಗೆ ನನ್ನನ್ನು ಕೇಳಿದರು. ಭಾರತದಲ್ಲಿ ಪಶ್ಚಿಮದ ರೀತಿಯ ಉತ್ತರಾಧುನಿಕತೆ ಇಲ್ಲವೆಂದೂ ಆ ತರಹದ್ದು ಏನಾದರೂ ಇದ್ದರೆ ದಲಿತ, ಆದಿವಾಸಿ ಮತ್ತು ಸ್ತ್ರೀ ಸಾಹಿತ್ಯವೆಂದು ಅವರಿಗೆ ವಿವರಿಸಿದೆ.ಎಲ್ಲವನ್ನೂ ಕೇಳಿಸಿಕೊಂಡ ಅವರು ಮುಂದು ವರಿದು ಹೇಳಿದರು: `ನನ್ನ ಮುಖ್ಯ ಕ್ಷೇತ್ರ ಸಂಸ್ಕೃತ. ಆದರೆ ಅದೊಂದೇ ಭಾರತವಲ್ಲವೆಂದು ಬ್ಲ್ಲಲೆ. ನಾನು ಹಿಂದಿಯನ್ನು ಹಿಂದಿ ಭಾಷಿಕರಷ್ಟೇ ಸೊಗಸಾಗಿ ಮಾತಾಡಬಲ್ಲೆ. ಕೇರಳದಲ್ಲಿ ಹಲವು ಸಾರಿ ದೀರ್ಘಕಾಲ ನೆಲೆಸಬೇಕಾಗಿ ಬಂದದ್ದರಿಂದ ಮಲಯಾಳಂ ಅನ್ನೂ ಸಲೀಸಾಗಿ ಮಾತಾಡು ತ್ತೇನೆ'. ದಿಢೀರನೆ ಶುದ್ಧ ಮಲಯಾಳಂಗೆ ತಿರುಗಿದರು: `ನ್ಯಾನ್ ಕೇರಳತ್ತಿಲ್ ಇಂದ ವರ್ಷಂ ಮೂಣು ಮಾಸಂ ತಾಮಸಿಚ್ಚು...' (ಈ ವರ್ಷ ಕೇರಳದಲ್ಲಿ ಮೂರು ತಿಂಗಳು ತಂಗಿದ್ದೆ).ಮತ್ತೆ ನಮ್ಮ ಸಾಮಾನ್ಯ ಭಾಷೆಯಾದ ಇಂಗ್ಲಿಷ್‌ಗೆ ಹೊರಳಿದರು: `ನಾನು ಕೂಡಿ ಯಾಟ್ಟಂ ಕಲಿಯುತ್ತಿದ್ದೇನೆ. ಭಾರತವನ್ನು ಪೂರ್ತಿ ಅರ್ಥ ಮಾಡಿಕೊಳ್ಳಬೇಕಾದರೆ ಆಧುನಿಕ ಭಾಷೆಗಳನ್ನು ಬದಲಾಗುತ್ತಿರುವ ತಥ್ಯಗಳನ್ನೂ ವಿಶ್ಲೇಷಿಸುವುದು ಅಗತ್ಯ. ಆದರೆ ಭಾರತವನ್ನು ಹಳೆಯ ಚಿಂತನಾ ಪರಿಕರಗಳಿಂದ ಅರ್ಥಮಾಡಿ ಕೊಳ್ಳುವವರು ನಮ್ಮಂಥ ವಿದೇಶಿ ಇಂಡಾಲಜಿಸ್ಟ ರು ಮಾತ್ರವಲ್ಲ. ನಿಮ್ಮ ಬುದ್ಧಿ ಜೀವಿಗಳೂ ಅದೇ ತಪ್ಪು ಮಾಡುತ್ತಾರೆ.ಉದಾಹರಣೆಗೆ ನಿಮ್ಮ ಸ್ವಾತಂತ್ರ್ಯೋತ್ತರ ಯುಗದ ರಾಷ್ಟ್ರೀಯತೆಯನ್ನೇ ಗಮನಿಸಿ. ನನ್ನ ಪ್ರಕಾರ ಯೂರೋಪಿನ ಬಗೆಯ ರಾಷ್ಟ್ರೀಯತೆ ಕಲ್ಪನೆ ಭಾರತಕ್ಕೆ ಅಪ್ರಸ್ತುತ. ಯೂರೋಪಿನಲ್ಲಿ ಪೋಲೆಂಡ್ ಒಂದು ರಾಷ್ಟ್ರ. ಹಾಗೇ ಇಂಗ್ಲೆಂಡ್, ಜರ್ಮನಿ ಅಥವಾ ಇತರ ದೇಶಗಳು. ಬಹುಮಟ್ಟಿಗೆ ಒಂದು ಭಾಷೆ, ಒಂದು ಧರ್ಮ, ಒಂದು ಸಂಸ್ಕೃತಿ. ಆದರೆ ಭಾರತದ ಅಸ್ತಿತ್ವ ಆ ತೆರನದಲ್ಲ. ನಿಮ್ಮಲ್ಲಿ ದಿಗ್ಭ್ರಮೆಗೊ ಳಿಸುವಷ್ಟು ಧರ್ಮಗಳು, ಸಂಸ್ಕೃತಿಗಳು, ಪ್ರದೇಶ ಗಳು, ಭಾಷೆಗಳು, ಸಾಹಿತ್ಯಗಳು, ಜಾತಿಗಳು, ಉಪಜಾತಿಗಳು. ಹೀಗಾಗಿ ಯೂರೋಪಿನ ರಾಷ್ಟ್ರಗಳಾಗಲಿ ಅವುಗಳ ರಾಷ್ಟ್ರೀಯತೆಯಾಗಲಿ ಭಾರತಕ್ಕೆ ಒಪ್ಪುವುದಿಲ್ಲ' ಎಂದರು.`ಹಾಗಿದ್ದರೆ ಭಾರತದ ರಾಷ್ಟ್ರೀಯತೆ ಹೇಗಿರಬೇಕೆಂದು ನಿಮ್ಮ ಅಭಿಪ್ರಾಯ?'- ನಾನು ಕೇಳಿದೆ. ಅವರೆಂದರು: `ಭಾರತ ಒಂದು ರಾಷ್ಟ್ರವಲ್ಲ. ಅದು ಯೂರೋಪಿನ ಒಕ್ಕೂಟದ ಹಾಗೆ ಹಲವು ರಾಷ್ಟ್ರಗಳ ಒಕ್ಕೂಟವಾಗಬೇಕು. ಯೂರೋಪ್ ಒಕ್ಕೂಟವಾಗುವ ಮೊದಲು ಕೆಲವು ರಾಷ್ಟ್ರಗಳು ಮಾತ್ರ ಪ್ರಗತಿ ಸಾಧಿಸಿದ್ದವು. ಒಕ್ಕೂಟವಾದ ಮೇಲೆ ಬಲಿಷ್ಠ ಮತ್ತು ದುರ್ಬಲ ರಾಷ್ಟ್ರಗಳೆರ ಡಕ್ಕೂ ಒಳಿತಾಗಿದೆ. ಅಂತರರಾಷ್ಟ್ರೀಯ ವೇದಿಕೆ ಗಳಲ್ಲಿ ನಮ್ಮ ಬಲ ಹತ್ತು ಪಟ್ಟಾಗಿದೆ. ಗ್ರೀಸ್, ಇಟಲಿ ಮುಂತಾದ ರಾಷ್ಟ್ರಗಳು ಹಿಂದುಳಿದಿವೆ, ನಿಜ. ಈಗ ಅವರೂ ನಮ್ಮ ಭಾಗವಾಗಿರುವು ದರಿಂದ ನಾವೆಲ್ಲರೂ ಅವರ ಏಳಿಗೆಗಾಗಿ ಶ್ರಮಿಸುತ್ತಿದ್ದೇವೆ. ಅಲ್ಲದೆ ನಾವೆಲ್ಲರೂ ಸ್ವತಂತ್ರ ಸಣ್ಣಪುಟ್ಟ ರಾಷ್ಟ್ರಗಳಾಗಿರುವುದರಿಂದ ಪ್ರಗತಿ ಸಾಧಿಸುವುದು ಸುಲಭ'.`ಹಾಗೆಂದರೆ ಭಾರತವನ್ನು ತುಂಡು ತುಂಡು ಮಾಡಬೇಕೆಂದು ಹೇಳುತ್ತಿದ್ದೀರ?' `ಅಲ್ಲ. ಇದು ಭಾರತವನ್ನು ಸಬಲಗೊಳಿಸುವ ಮಾರ್ಗ. ಇಡೀ ಭಾರತಕ್ಕೆ ಒಂದೇ ರಕ್ಷಣಾಪಡೆ ಇರಲಿ. ಒಂದೇ ಕರೆನ್ಸಿ ಇರಲಿ. ಆದರೆ ಕರ್ನಾಟಕ, ಉತ್ತರಪ್ರದೇಶ. ಬಂಗಾಳ ಇತ್ಯಾದಿ ಎಲ್ಲ ರಾಜ್ಯ ಗಳೂ ಪ್ರತ್ಯೇಕ ರಾಷ್ಟ್ರಗಳಾದಾಗ ಅವೆಲ್ಲವೂ ಸಶಕ್ತವಾಗುತ್ತವೆ. ಉದಾಹರಣೆಗೆ ವಿಶ್ವಸಂಸ್ಥೆ ಯಲ್ಲಿ ಇಷ್ಟೊದು ದೊಡ್ಡ ಬಹುಸಂಸ್ಕೃತೀಯ ಭಾರತಕ್ಕಿರುವುದು ಒಂದು ವೋಟು.ಲಕ್ಸಂಬರ್ಗ್‌ನಂಥ ಪುಟ್ಟಾತಿ ಪುಟ್ಟ ರಾಷ್ಟ್ರಕ್ಕೂ ಒಂದು ವೋಟು. ಇದು ಅನ್ಯಾಯ. ಭಾರತದಲ್ಲಿ ಇಪ್ಪತ್ನಾಲ್ಕು ರಾಷ್ಟ್ರಗಳಾದರೆ ವಿಶ್ವಸಂಸ್ಥೆಯಲ್ಲಿ ಇಪ್ಪತ್ನಾಲ್ಕು ವೋಟುಗಳಿರುತ್ತವೆ. ಅಂತರ ರಾಷ್ಟ್ರೀಯ ಅದಾನಪ್ರದಾನಗಳಲ್ಲಿ ಲಾಭವಾಗು ತ್ತದೆ. ನಿಮ್ಮವರಿಗೆ ಇದು ಹೊಳೆಯುತ್ತಿಲ್ಲ. ನನ್ನ ಈ ವಿಚಾರಗಳ ಬಗ್ಗೆ ನಾನು ಬರೆಯುತ್ತಿದ್ದೇನೆ. ಚರ್ಚೆಯಾಗಲಿ. ಒಪ್ಪುವುದು ಬಿಡುವುದು ನಿಮ್ಮಗಳಿಗೆ ಬಿಟ್ಟದ್ದು. ಆದರೆ ಭಾರತದ ಪ್ರೇಮಿಯಾದ ನನಗೆ ಹೀಗನಿಸುತ್ತಿದೆ. ಇದು ನನ್ನ ಹಲವು ದಶಕಗಳ ಚಿಂತನೆಯ ಫಲ' ಎಂದರು.ಮುಂದುವರಿದು ಹೇಳಿದರು: `ಭಾರತದ ಏಕತೆ ಸಾಂಸ್ಕೃತಿಕವಾದದ್ದು. ಉದಾಹರಣೆ ಜಾತಿ ಪದ್ಧತಿ. ಅದನ್ನು ನಿಮ್ಮಂತಹವರು ವಿರೋಧಿಸು ತ್ತೀರೆಂದು ನನಗೆ ಗೊತ್ತು. ಆದರೆ ಯಾಕೆ ಜಾತಿ ಎನ್ನುವುದು ತೊಲಗಿಲ್ಲ, ಯೋಚಿಸಿದ್ದೀರ?' ನಾನು ಸ್ವಲ್ಪ ಸಿಟ್ಟಿನಿಂದಲೇ ಹೇಳಿದೆ: `ಜಾತಿ ಯನ್ನು ಒಂದು ರಚನೆಯಾಗಿ ಹೊರಗಿನಿಂದ ನೋಡುವವರಿಗೆ- ಉದಾಹರಣೆಗೆ ಹೋಮೋ ಹಯರಾರ್ಕಿಕಸ್ ಬರೆದ ಲೂಯಿ ದೊಮೋ ನಂಥ ಮಾನವಶಾಸ್ತ್ರಜ್ಞರಿಗೆ- ಅದೊಂದು ಸುಂದರವಾದ ವ್ಯವಸ್ಥೆಯಾಗಿ ಕಾಣಬಹುದು.

ಐರ್ಲೆಂಡಿನ ಕವಿ ಯೇಟ್ಸ್ ಮತ್ತು ಜಪಾನಿನ ಪ್ರಸಿದ್ಧ ಬರಹಗಾರ ಯೂಕಿಯೋ ಮಿಷಿಮಾ ಇಬ್ಬರೂ ಜಾತಿ ಪದ್ಧತಿಯನ್ನು ಮೆಚ್ಚಿ ಅದನ್ನು ತಮ್ಮ ತಮ್ಮ ದೇಶಗಳಿಗೆ ಆಮದು ಮಾಡಿಕೊಳ್ಳ ಬೇಕೆಂದು ಆಶೆಪಟ್ಟಿದ್ದರು. ಜಾತಿ ಪದ್ಧತಿಯಿಂದ ಲಾಭ ಪಡೆಯುವ ಮೇಲುಜಾತಿಗಳವರಿಗೂ ಅದು ಹಿತವಾಗಿರಬಹುದು. ಆದರೆ ಅದರ ಅನುಭವಸತ್ಯ ತುಳಿತಕ್ಕೊಳಗಾದ ಜಾತಿಯವರಿಗೆ ಹೇಗೆ ಕಂಡಿತೆಂಬುದು ಹೊರಗಿನವರಿಗೆ ಹೇಗೆ ಗೊತ್ತಾಗಬೇಕು?' ಎಂದು ಸವಾಲು ಹಾಕಿದೆ.ಅಲ್ಲದೆ, `ಪ್ರೊ.ಬರ್ಸ್ಕಿ ಸಾಹೇಬರೆ ಭಾರತೀಯ ಇತಿಹಾಸದ ಹಿರಿಯ ಚೇತನಗಳು ಜಾತಿಯನ್ನಲ್ಲ ಗಳೆವ ಪಂಥಗಳನ್ನು ಕಟ್ಟಿ ಜಾತಿ ಪದ್ಧತಿಯನ್ನು ಮೀರಲು ಪ್ರಯತ್ನಿಸುತ್ತಲೇ ಬಂದಿದ್ದಾರಲ್ಲ' ಎಂದೆ. ಪ್ರೊ.ಬರ್ಸ್ಕಿ: `ಜಾತಿ ಶೋಷಣಾ ವ್ಯವಸ್ಥೆ ಎಂಬುದನ್ನು ಬಲ್ಲೆ. ಆ ಶೋಷಣೆ ಹೋಗುತ್ತಿದೆ, ಇನ್ನೂ ಹೋಗಬೇಕು. ಆದರೆ ನನ್ನ ವಿಚಾರ ಇದು: ಸಾಂಸ್ಕೃತಿಕ ವೈವಿಧ್ಯದ ಕುರುಹಾಗಿ ಅದಿದ್ದರೆ ಏನು ತಪ್ಪು? ಇಲ್ಲಿ ಇದೆಯಾದರೆ ಎಂಬ ಪ್ರಶ್ನೆಯೇ ಇಲ್ಲ. ಇದೆ.

ನಿಮ್ಮ ಎಲ್ಲ ಸೆಕ್ಯುಲರ್ ಪಕ್ಷಗಳು ಚುನಾವಣೆಗೆ ಟಿಕೆಟ್ಟು ನೀಡುವ ಮೊದಲು ಅಭ್ಯರ್ಥಿಗೆ ಯಾವ ಯಾವ ಜಾತಿಯ ವರು ವೋಟು ಹಾಕುತ್ತಾರೆ ಅಂತ ಲೆಕ್ಕಾಚಾರ ಮಾಡಿ ತಾನೆ ಟಿಕೆಟ್ಟು ಕೊಡುವುದು? ಮತದಾರ ರಿಗೂ ಅಭ್ಯರ್ಥಿಯ ಜಾತಿ ಮುಖ್ಯ. ನಿಮ್ಮ ಮಂತ್ರಿಮಂಡಲಗಳ ರಚನೆಯಲ್ಲೂ ಜಾತಿಯ ಗಣಿತ ಕೆಲಸ ಮಾಡುತ್ತದೆ. ಅಂದರೆ ಎಲ್ಲ ಜಾತಿ ಗಳೂ ಸಬಲಗೊಳ್ಳುತ್ತಿವೆ. ಶೋಷಣೆಯ ನೆಲೆ ಗಳು ಸವೆಯುತ್ತಿವೆ. ಮೇಲುಕೀಳಿನ ಭಾವನೆ ಯಿಂದ ಜಾತಿಯ ಕಲ್ಪನೆಯನ್ನು ಬಿಡಿಸಿದರೆ ಜಾತಿಯಿಂದ ಯಾವ ನಷ್ಟವಿದೆ? ಮುಖ್ಯ ಜಾತಿಗಳೆಲ್ಲವೂ ಭಾರತದಾದ್ಯಂತ ಹಬ್ಬಿರುವುದ ರಿಂದ ಈ ಜಾತಿಗಳು ಪ್ರಾದೇಶಿಕ ವೈವಿಧ್ಯವನ್ನು ಮೀರಿದ ರಾಷ್ಟ್ರವ್ಯಾಪಿ ಸಂಬಂಧಸೂತ್ರಗಳಾ ಗುತ್ತವೆ.ಜಾತಿ ಭಾರತೀಯರ ಮಾನಸದಲ್ಲಿ ಎಷ್ಟು ಆಳವಾಗಿ ಕೆಲಸ ಮಾಡುತ್ತದೆ ಎಂಬುದಕ್ಕೆ ಅವರು ಎರಡು ನಿದರ್ಶನಗಳನ್ನು ನೀಡಿದರು. `ಇದಕ್ಕೆ ಅಪವಾದಗಳೂ ಭಾರತದ ಗತದಲ್ಲಿ ಮತ್ತು ವರ್ತಮಾನದಲ್ಲಿ ಸಿಗುತ್ತವೆ. ಉದಾಹರಣೆಗೆ ಕ್ಷತ್ರಿಯ ಕುಲದವಳಾದ ಮೀರಾ ಅಂತ್ಯಜವೆಂದು ಪರಿಗಣಿಸಲಾಗಿದ್ದ ಚಮ್ಮಾರ ಜಾತಿಯ ರವಿದಾಸನನ್ನು ಗುರುವಾಗಿ ಸ್ವೀಕರಿಸಿದಳು.ಇಂತಹ ಹಲವು ಉದಾಹರ ಣೆಗಳಿವೆ. ಅಲ್ಲದೆ ಇಂದಿನ ಭಾರತ ಆಧುನೀಕ ರಣದ ಪ್ರಭಾವದಲ್ಲಿ ಬದಲಾಗುತ್ತಿದೆ. ನಗರ ಗಳಲ್ಲಿ ಲಾಂಡ್ರಿ ನಡೆಸುವರೆಲ್ಲರೂ ಅಗಸರಲ್ಲ. ಚಪ್ಪಲಿ ತಯಾರಿಸುವ ಕಾರ್ಖಾನೆಯ ಕೆಲಸಗಾರ ರೆಲ್ಲರೂ ಚಮ್ಮಾರರಲ್ಲ. ವಿದ್ಯೆ ಕಲಿಸುವರೆಲ್ಲರೂ ಬ್ರಾಹ್ಮಣರಲ್ಲ. ವ್ಯಾಪಾರ ಮಾಡುವವರೆಲ್ಲರೂ ವೈಶ್ಯರಲ್ಲ. ಅಲ್ಲದೆ ಜಾತಿ ಪದ್ಧತಿ ಇಡೀ ಭಾರತ ದಲ್ಲಿ ಸಾರ್ವತ್ರಿಕವಲ್ಲ. ಈಶಾನ್ಯ ಭಾರತದ ಅಸ್ಸಾಂ, ಮಣಿಪುರ, ಮೇಘಾಲಯ, ಅರುಣಾ ಚಲ ಪ್ರದೇಶಗಳ ಸಮಸ್ಯೆಗಳು ಜಾತಿಮೂಲ ವಾಗಿರದೆ ಬುಡಕಟ್ಟುಮೂಲವಾಗಿವೆಯಲ್ಲ' ಎಂದೆ.`ಆದರೆ ಭಾರತದ ಬಹುತೇಕ ರಾಜ್ಯಗಳಲ್ಲಿ ಜಾತಿ ಇನ್ನೂ ಇದೆ. ಇದು ಯಾಕೆ ಹೋಗುತ್ತಿಲ್ಲ, ಯೋಚಿಸಿ. ನಾನು ಶೋಷಣಾವ್ಯವಸ್ಥೆಯಾಗಿ ಜಾತಿ ಮುಂದುವರಿಯಬೇಕೆಂದು ಹೇಳುತ್ತಿಲ್ಲ. ಭಾರತೀಯ ಸಮಾಜದ ವೈವಿಧ್ಯ ಮತ್ತು ಏಕತೆಯ ಸಂದರ್ಭದಲ್ಲಿ ಜಾತಿಗಳ ಅಸ್ತಿತ್ವವನ್ನು ಸೃಜನಾತ್ಮಕವಾಗಿ ಬಳಸಿಕೊಳ್ಳಬಹುದೆ ಎಂಬುದು ನನ್ನ ವಿಚಾರ' ಎಂದರು ಪ್ರೊ.ಬರ್ಸ್ಕಿ. ಭಾರತ ಮತ್ತು ಪೋಲೆಂಡಿನ ಬಗ್ಗೆ ಇತರ ಹಲವು ವಿಚಾರಗಳ ವಿನಿಮಯದ ನಂತರ ರಾತ್ರಿಯಾಗಿತ್ತು. ಪ್ರೊ.ಬರ್ಸ್ಕಿ ಅವರಿಗೆ ವಿದಾಯ ಹೇಳುವ ಸಮಯ ಬಂದಿತ್ತು.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.