ಮಂಗಳವಾರ, ಮೇ 11, 2021
24 °C

ಪ್ರಧಾನಿ ಹುದ್ದೆ ಖಾಲಿಯಾಗಿಲ್ಲ, ಪೈಪೋಟಿ ಪ್ರಾರಂಭ

ದಿನೇಶ್ ಅಮೀನ್ ಮಟ್ಟು Updated:

ಅಕ್ಷರ ಗಾತ್ರ : | |

ತನಗೊಲಿದು ಬಂದಿದ್ದ ಪ್ರಧಾನಿ ಪಟ್ಟವನ್ನು `ತ್ಯಾಗ~ ಮಾಡಿ ಆ ಸ್ಥಾನದಲ್ಲಿ ಮನಮೋಹನ್‌ಸಿಂಗ್ ಅವರನ್ನು ಕೂರಿಸಿದಾಗ ಒಂದಷ್ಟು ಸಂಸದರು ಸೋನಿಯಾಗಾಂಧಿ ಪರ ಕಣ್ಣೀರು ಸುರಿಸಿದ್ದು ಬಿಟ್ಟರೆ ಭಿನ್ನಮತದ ಸಣ್ಣ ಸೊಲ್ಲು ಕೂಡಾ ಕೇಳಿರಲಿಲ್ಲ. ಯುಪಿಎ ಸರ್ಕಾರದ ಮೊದಲ ಅವಧಿಯುದ್ದಕ್ಕೂ ಪ್ರಧಾನಿ ಕಾರ್ಯಾ ಲಯದ ಮುಂದೆ `ಹುದ್ದೆ ಖಾಲಿ ಇಲ್ಲ~ ಎನ್ನುವ ಬೋರ್ಡ್ ಇದ್ದ ಕಾರಣ ಪ್ರಧಾನಿ ಹುದ್ದೆಯ ಪ್ರಬಲ ಆಕಾಂಕ್ಷಿಗಳು ಕೂಡಾ ಆಸೆಯನ್ನು ನುಂಗಿ ಕೊಂಡು ಪಾಲಿಗೆ ಬಂದದ್ದನ್ನು ಅನುಭವಿಸಿ ಕೊಂಡು ತೆಪ್ಪಗಿದ್ದರು. ಯಾರೂ ಬಾಗಿಲು ಬಡಿಯಲು ಹೋಗಿರಲಿಲ್ಲ. ಆದರೆ ಎರಡನೇ ಅವಧಿಯ ಎರಡನೇ ವರ್ಷ ಪ್ರಾರಂಭವಾಗು ತ್ತಿದ್ದಂತೆಯೇ ಒಂದಾದರ ಮೇಲೊಂದರಂತೆ ಹಗರಣಗಳು ಹೊರ ಬರುತ್ತಿರುವುದು ಮಾತ್ರವಲ್ಲ, ಅವುಗಳಲ್ಲಿ ಹೆಚ್ಚಿನವು ಪ್ರಧಾನಿ ಕಾರ್ಯಾಲಯದ ಸುತ್ತವೇ ಸುತ್ತುತ್ತಿರುವುದು ಕಾಂಗ್ರೆಸ್‌ನಲ್ಲಿರುವ ಹಿರಿತಲೆಗಳಲ್ಲಿ ಹಳೆಯ ಆಸೆ ಚಿಗುರೊಡೆಯಲು ಕಾರಣವಾಗಿದೆ. ಇದು ಯುಪಿಎ ಸರ್ಕಾರದಲ್ಲಿ ನಡೆಯುತ್ತಿರುವ `ಆಂತರಿಕ ಯುದ್ಧ~ಕ್ಕೆ ಕಾರಣ.ಕಾರಣ ಇನ್ನೂ ಒಂದು ಇದೆ. ಮನಮೋಹನ್‌ಸಿಂಗ್ ಈಗಿನ ಅವಧಿಯನ್ನು ಪೂರ್ಣಗೊಳಿಸಿದರೆ ರಾಹುಲ್‌ಗಾಂಧಿಯವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸಿ ಮುಂದಿನ ಚುನಾವಣೆ ಯನ್ನು ಎದುರಿಸುವ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ದಿನ ಕಳೆಯುತ್ತಿತ್ತು. ಆದರೆ ಈ ಹುದ್ದೆ ಎರಡನೇ ಅವಧಿಯ ಮಧ್ಯದಲ್ಲಿಯೇ ಖಾಲಿಯಾಗಬಹುದೆಂಬ ಕಲ್ಪನೆ ಪಕ್ಷಕ್ಕೆ ಇರಲಿಲ್ಲ. ಅನಿರೀಕ್ಷಿತವಾದ ಇಂತಹ ಬೆಳವಣಿಗೆಯನ್ನು ಎದುರಿಸಲು ಅದರಲ್ಲಿ ಸಿದ್ಧತೆ ಇಲ್ಲ. ಹಗರಣಗಳ ಕಳಂಕದಿಂದಾಗಿ ಪಕ್ಷದ ವರ್ಚಸ್ಸು ತೀವ್ರಗತಿಯಲ್ಲಿ ಕುಸಿಯುತ್ತಿರುವ ಈ ಸಮಯದಲ್ಲಿ ರಾಹುಲ್‌ಗಾಂಧಿಯವರನ್ನು ಪ್ರಧಾನಿ ಸ್ಥಾನದಲ್ಲಿ ಕೂರಿಸಿ ಹೆಸರು ಕೆಡಿಸಿಕೊ ಳ್ಳುವ ಮನಸ್ಸೂ ಸೋನಿಯಾಗಾಂಧಿಯವರಿ ಗಾಗಲಿ, ಅವರ ನಿಕಟವರ್ತಿಗಳಿಗಾಗಲಿ ಇದ್ದ ಹಾಗಿಲ್ಲ. ಆದ್ದರಿಂದ ಒಂದೊಮ್ಮೆ ಮನಮೋಹನ್‌ಸಿಂಗ್ ಅವರನ್ನು ಬದಲಾವಣೆ ಮಾಡಲೇಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾದರೆ ಈಗ ಸಂಪುಟದಲ್ಲಿರುವವ ರಲ್ಲಿಯೇ ಯಾರನ್ನಾದರೂ ಹುಡುಕಲೇಬೇಕಾ ಗುತ್ತದೆ. ಇದರ ವಾಸನೆ ಮೂಗಿಗೆ ಬಡಿದ ನಂತರವೇ ಪರಸ್ಪರ ಕೆಸರೆರೆಚುವ `ಸೋರಿಕೆ~ಗಳು ಪ್ರಾರಂಭವಾಗಿರುವುದು.ಸದ್ಯಕ್ಕೆ ಸ್ಪರ್ಧಾ ಕಣದಲ್ಲಿರುವವರು ಇಬ್ಬರು. ಈ ಇಬ್ಬರ ಗುಣಾವಗುಣಗಳಲ್ಲಿ ಬಹಳಷ್ಟು ಸಾಮ್ಯತೆಗಳಿವೆ. ಇಬ್ಬರೂ ಬುದ್ಧಿವಂತರು, ಅನುಭವಿಗಳು ಮತ್ತು ಮಹತ್ವಾಕಾಂಕ್ಷಿಗಳು. ಇಬ್ಬರೂ ಉತ್ತರ ಭಾರತೀಯರಲ್ಲ, ಇಬ್ಬರ ಹಿಂದಿ ಭಾಷೆಯೂ ಅಷ್ಟಕ್ಕಷ್ಟೇ. ಇಬ್ಬರೂ ಒಂದಷ್ಟು ದಿನ ಕಾಂಗ್ರೆಸ್ ಬಿಟ್ಟು ಹೋಗಿ ಮತ್ತೆ ಸೇರಿಕೊಂಡವರು. ಯುಪಿಎ ಸರ್ಕಾರ ಈಗ ಪತನದ ಅಂಚಿಗೆ ಬಂದು ನಿಂತಿದ್ದರೆ ಅದಕ್ಕೆ ಇವರಿಬ್ಬರೂ ಕಾರಣ. ಇವರಿಬ್ಬರ ರಾಜಕೀಯ ಮಹತ್ವಾಕಾಂಕ್ಷೆಗಳ ನಡುವಿನ ಸಂಘರ್ಷ ಮಾತ್ರವಲ್ಲ, ಇವರು ಹೊಂದಿರುವ ಖಾತೆಗಳ ನಿರ್ವಹಣೆಯಲ್ಲಿನ ವೈಫಲ್ಯ ಕೂಡಾ ಯುಪಿಎ- 2ರ ಭವಿಷ್ಯವನ್ನು ಮಂಕುಗೊಳಿಸಿದೆ. ನಿಯಂತ್ರ ಣಕ್ಕೆ ಸಿಗದೆ ಜ್ವಲಿಸುತ್ತಿರುವ ದೇಶದ ಎರಡು ಸಮಸ್ಯೆಗಳಾದ ಬೆಲೆ ಏರಿಕೆ ಮತ್ತು ಆಂತರಿಕ ಅಭದ್ರತೆಗೆ ಹಣಕಾಸು ಮತ್ತು ಗೃಹ ಖಾತೆಗಳನ್ನು ಹೊಂದಿರುವ ಇವರಲ್ಲದೆ ಮತ್ತೆ ಯಾರು ಹೊಣೆ? ಮೇಲ್ನೋಟಕ್ಕೆ ಈ ಇಬ್ಬರ ನಡುವೆ ಕಾಣುವ ಏಕೈಕ ವ್ಯತ್ಯಾಸವೆಂದರೆ ಒಬ್ಬರದ್ದು ಬಂಗಾಳಿ ಕಚ್ಚೆ, ಇನ್ನೊಬ್ಬರದ್ದು ಮದ್ರಾಸಿ ಪಂಚೆ. ಈ ಇಬ್ಬರಲ್ಲಿ ಒಬ್ಬರು ಕೇಂದ್ರ ಹಣಕಾಸು ಸಚಿವ ಪ್ರಣಬ್ ಮುಖರ್ಜಿ, ಇನ್ನೊಬ್ಬರು ಗೃಹಸಚಿವ ಪಳನಿಯಪ್ಪನ್ ಚಿದಂಬರಂ.ಚಿದಂಬರಂ ಅವರಿಗೆ ಹೋಲಿಸಿದರೆ ಪ್ರಧಾನಿ ಹುದ್ದೆಗೆ ಪ್ರಣಬ್ ಮುಖರ್ಜಿ ಹೆಚ್ಚು ಅರ್ಹರು ಎಂಬುದರಲ್ಲಿ ಅನುಮಾನ ಇಲ್ಲ. ಅವರ ಅನುಭವ, ಸಾಧನೆ ಮತ್ತು ಇಲ್ಲಿಯವರೆಗೆ ಹಗರಣಗಳಿಂದ ಮುಕ್ತವಾದ ವಿವಾದಾತೀತ ವ್ಯಕ್ತಿತ್ವ ಯಾರಲ್ಲಿಯಾದರೂ ಗೌರವ ಹುಟ್ಟಿಸು ವಂತಹದ್ದು. ಎಂತಹ ಬಿಕ್ಕಟ್ಟನ್ನಾದರೂ ಲೀಲಾ ಜಾಲವಾಗಿ ಬಗೆಹರಿಸಬಲ್ಲಂತಹ ಸಾಮರ್ಥ್ಯ ಈ `ಬಂಗಾಳಿ ದಾದಾ~ನಿಗೆ ಇದೆ ಎನ್ನುವುದರಲ್ಲಿ ಅನುಮಾನ ಇಲ್ಲ. ಮುಂಬೈನ 9/11 ಭಯೋತ್ಪಾದಕರ ದಾಳಿ ನಡೆದಾಗ ಪಾಕಿಸ್ತಾನಕ್ಕೆ ಕಟುಮಾತುಗಳ ಎಚ್ಚರಿಕೆ ಕೊಟ್ಟಿದ್ದು ವಿದೇಶಾಂಗ ಸಚಿವರಲ್ಲ, ಪ್ರಣಬ್ ಮುಖರ್ಜಿ. ಅಣ್ಣಾ ಹಜಾರೆ ಚಳವಳಿಯನ್ನು ನಿಭಾಯಿಸಲಾಗದೆ ಸೋತು ಹೋಗಿದ್ದಾಗ ಕೊನೇ ಕ್ಷಣದಲ್ಲಿ ಬಿಕ್ಕಟ್ಟನ್ನು ಬಗೆಹರಿಸಿದ್ದು ಇದೇ ಪ್ರಣಬ್ ಮುಖರ್ಜಿ. ಮುಳುಗುತ್ತಿರುವಂತೆ ಕಾಣುತ್ತಿರುವ ಯುಪಿಎ ಹಡಗನ್ನು ಕೈಗೆ ಕೊಟ್ಟರೆ ಈ ಸ್ಥಿತಿಯಲ್ಲಿಯೂ ಇವರು ಅದನ್ನು ದಡ ಸೇರಿಸಿದರೆ ಅಚ್ಚರಿ ಏನಿಲ್ಲ.ಆದರೆ ಕಾಂಗ್ರೆಸ್ ಪಕ್ಷದಲ್ಲಿ ಪ್ರಧಾನಿಯಾಗಲು ಈ ಅರ್ಹತೆಗಳು ಸಾಕಾಗುವುದಿಲ್ಲ. ಅಂತಿಮವಾಗಿ ಆ ಪಕ್ಷದಲ್ಲಿನ ಸ್ಥಾನಮಾನ ನಿರ್ಧಾರವಾ ಗುವುದು ನೆಹರೂ ಕುಟುಂಬದ ಮೇಲಿರುವ ನಿಷ್ಠೆಯ ಆಧಾರದ ಮೇಲೆ. ಈ ಒಂದು ವಿಷಯದಲ್ಲಿ ಪ್ರಣಬ್ ಮುಖರ್ಜಿ ಎಡವಿದ್ದಾರೆ. ಇಂದಿರಾಗಾಂಧಿಯವರ ಹತ್ಯೆ ನಡೆದಾಗ ಪ್ರಧಾನಿ ಪಟ್ಟಕ್ಕೆ ತಮ್ಮದು ಸಹಜ ಆಯ್ಕೆ ಎಂದು ಅವರು ತಿಳಿದುಕೊಂಡಿದ್ದರು. ಇದನ್ನು ಆ ಕ್ಷಣದಲ್ಲಿ ತಮ್ಮ ಜತೆಯಲ್ಲಿದ್ದ ರಾಜೀವ್‌ಗಾಂಧಿಯವರಿಗೆ ಪ್ರಣಬ್ ಪರೋಕ್ಷವಾಗಿ ತಿಳಿಸಿದ್ದೇ ಪ್ರಮಾದವಾಗಿ ಹೋಯಿತು. ಇವರ ಮಹತ್ವಾಕಾಂಕ್ಷೆ ಕಂಡು ಬೆಚ್ಚಿಬಿದ್ದಿರಬಹುದಾದ ರಾಜೀವ್‌ಗಾಂಧಿ,  ಅವರನ್ನು ಸಂಪುಟಕ್ಕೂ ಸೇರಿಸದೆ ಹೊರಗಿಟ್ಟಿದ್ದರು. ಈ ರೀತಿ ನಿರ್ಲಕ್ಷ್ಯಕ್ಕೊಳಗಾಗಿದ್ದ ಪ್ರಣಬ್ ಕೊನೆಗೆ ಪಕ್ಷವನ್ನೇ ತ್ಯಜಿಸಿ ಮಾಜಿ ಮುಖ್ಯಮಂತ್ರಿ ಆರ್.ಗುಂಡೂರಾವ್‌ರಂತಹವರ ಜತೆಗೂಡಿ ಸ್ವಂತ ಪಕ್ಷ ಕಟ್ಟಿದ್ದರು. ಅವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಲು ರಾಜೀವ್‌ಗಾಂಧಿ ಅಧಿಕಾರ ಕಳೆದುಕೊಳ್ಳಬೇಕಾಯಿತು.ಕಾಂಗ್ರೆಸ್ ಪಕ್ಷದ ಏಕಚಕ್ರಾಧಿಪತ್ಯ ಇರುವಾಗಲೇ ಹೊರಗೆ ಕತ್ತು ಚಾಚಿರುವ ಪ್ರಣಬ್ ಮುಖರ್ಜಿ, ಪಕ್ಷದ ಈಗಿನ ದುರ್ಬಲ ಸ್ಥಿತಿಯಲ್ಲಿ ನಿಷ್ಠರಾಗಿ ಉಳಿಯ ಬಲ್ಲರೇ ಎಂಬ ಆತಂಕ ಸೋನಿಯಾಗಾಂಧಿ ಮತ್ತು ಅವರ ಬಂಟರಿಗೆ ಇದ್ದಂತೆ ಕಾಣುತ್ತಿದೆ.ಪಿ.ಚಿದಂಬರಂ ಅವರೂ ಒಂದಷ್ಟು ವರ್ಷ ಕಾಂಗ್ರೆಸ್ ತೊರೆದು ಹೋದವರು. ಆದರೆ ಆ ಕಾಲದಲ್ಲಿ ಕಾಂಗ್ರೆಸ್ ಪಕ್ಷ ನೇರವಾಗಿ ನೆಹರೂ ಕುಟುಂಬದ ಸದಸ್ಯರ ಕೈಯಲ್ಲಿ ಇರಲಿಲ್ಲ ಎನ್ನುವ ಅಂಶವೊಂದು ಅವರ ರಕ್ಷಣೆಗೆ ಇದೆ. 1996ರಲ್ಲಿ ಜಯಲಲಿತಾ ಜತೆಯಲ್ಲಿನ ಮೈತ್ರಿಯನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷ ತ್ಯಜಿಸಿ `ತಮಿಳು ಮಾನಿಲಾ ಕಾಂಗ್ರೆಸ್~ (ಟಿಎಂಸಿ) ಸೇರಿದ್ದರು. ಅಧಿಕಾರ ಕಳೆದುಕೊಂಡಿದ್ದ ಆ  ದಿನಗಳಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದವರು ಸೀತಾರಾಮ್ ಕೇಸರಿ. ಟಿಎಂಸಿಯಿಂದ ಆಯ್ಕೆಯಾಗಿದ್ದ ಚಿದಂಬರಂ ಸಂಯುಕ್ತರಂಗದ ಸಂಪುಟದಲ್ಲಿ ಹಣಕಾಸು ಸಚಿವರೂ ಆಗಿದ್ದರು.ಅಧಿಕಾರ ಇಲ್ಲದೆ ವನವಾಸದಲ್ಲಿದ್ದಾಗ ದೂರ ಇದ್ದ ಚಿದಂಬರಂ 2004ರ ಚುನಾವಣೆಯ ಹೊತ್ತಿಗೆ ಮತ್ತೆ ಕಾಂಗ್ರೆಸ್ ಸೇರಿಕೊಂಡವರು. ಪಕ್ಷ ನಿಷ್ಠೆಯ ವಿಷಯದಲ್ಲಿ ಪ್ರಣಬ್ ಅವರಂತೆ ಚಿದಂಬರಂ ಅವರು ನೆಹರೂ ಕುಟುಂಬಕ್ಕೆ ಸವಾಲು ಹಾಕದೆ ಇರುವ ಕಾರಣ ಈ `ನಿಷ್ಠಾಂತರ~ವನ್ನು ಸೋನಿಯಾ ಕುಟುಂಬ ಕ್ಷಮಿಸಿದ ಹಾಗಿದೆ. ಈ ಕಾರಣದಿಂದಾಗಿಯೇ ಒಂದೊಮ್ಮೆ ಮನಮೋಹನ್‌ಸಿಂಗ್ ಅವರನ್ನು ಬದಲಾವಣೆ ಮಾಡುವ ಸಂದರ್ಭ ಎದುರಾದರೆ ಪಿ. ಚಿದಂಬರಂ ಒಬ್ಬ ಪ್ರಮುಖ ಅಭ್ಯರ್ಥಿ ಎನ್ನುವ ಬಗ್ಗೆ ಚರ್ಚೆ ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ಒಳಚಾವಡಿಗಳಲ್ಲಿ ಚರ್ಚೆಯಾಗುತ್ತಿತ್ತು.ಆದರೆ ಪ್ರಣಬ್ ಅವರಂತೆ ಚಿದಂಬರಂ ಹಗರಣಗಳಿಂದ ಮುಕ್ತರಾದವರೂ ಅಲ್ಲ. ಷೇರು ಹಗರಣದಲ್ಲಿ ಶಾಮೀಲಾಗಿದ್ದ `ಫೇರ್‌ಗ್ರೋತ್~ ಕಂಪೆನಿಯಲ್ಲಿನ ಬಂಡವಾಳ ಹೂಡಿಕೆ, ವಿವಾದಾತ್ಮಕ ವೇದಾಂತ ಗಣಿ ಕಂಪೆನಿಯ ಆಡಳಿತ ಮಂಡಳಿಯ ಸದಸ್ಯತ್ವ. ಹೀಗೆ ಹಲವಾರು ವಿವಾದಗಳಲ್ಲಿ ಚಿದಂಬರಂ ಪಾತ್ರ ಚರ್ಚೆ ಯಾಗಿದೆ. ಆದರೆ ಅವರ ಬುದ್ಧಿವಂತಿಕೆ ಮತ್ತು ಸಾಮರ್ಥ್ಯ ಇಂತಹ ಎಲ್ಲ ಕಳಂಕಗಳನ್ನು ಮುಚ್ಚಿ ಹಾಕುತ್ತಾ ಬಂದಿದೆ. ಮುಂಬೈನಲ್ಲಿ 9/11 ಪಾಕ್ ಭಯೋತ್ಪಾದಕರ ದಾಳಿ ನಡೆದ ನಂತರ ಗೃಹ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದ ಚಿದಂಬರಂ ಹೆಚ್ಚು ಕಡಿಮೆ ಒಂದು ವರ್ಷ ಎಲ್ಲರ ಕಣ್ಮಣಿಯಾಗಿದ್ದರು. ಮಾವೋವಾದಿಗಳು ಮತ್ತು ಭಯೋತ್ಪಾದನೆ ಬಗೆಗಿನ ಅವರ ನಿಲುವುಗಳನ್ನು ವಿರೋಧಪಕ್ಷವಾದ ಬಿಜೆಪಿ ಕೂಡಾ ಕೊಂಡಾ ಡಿತ್ತು. `ಕೆಟ್ಟ ಪಕ್ಷದಲ್ಲಿರುವ ಒಳ್ಳೆಯ ವ್ಯಕ್ತಿ~ ಎಂದು ಬಣ್ಣಿಸುವವರೆಗೆ ಬಿಜೆಪಿ ನಾಯಕರ `ಚಿದಂಬರ ಪ್ರೀತಿ~ ಉಕ್ಕಿ ಹರಿದಿತ್ತು.ಬಹುಶಃ ಈ ಯಶಸ್ಸು ಮತ್ತು ಅಭಿನಂದ ನೆಗಳಿಂದಾಗಿಯೋ ಏನೋ ಚಿದಂಬರಂ ಹೆಚ್ಚು ಹೆಚ್ಚು ದುರಹಂಕಾರಿಯಾಗುತ್ತಾ ಹೋದರು. ಯುಪಿಎ ಸಂಪುಟದಲ್ಲಿ ಅವರು ಹೆಚ್ಚು ಕಡಿಮೆ ಎಲ್ಲರ ಜತೆ ಕಾಲು ಕೆರೆದು ಜಗಳ ಮಾಡಿದ್ದಾರೆ. ವಿದೇಶಾಂಗ ವ್ಯವಹಾರ ಸಚಿವ ಎಸ್.ಎಂ.ಕೃಷ್ಣ ಪಾಕಿಸ್ತಾನದ ಪ್ರವಾಸದಲ್ಲಿದ್ದಾಗ ಇತ್ತ ಗೃಹಖಾತೆ ಕಾರ‌್ಯದರ್ಶಿ ಜಿ.ಕೆ.ಪಿಳ್ಳೆ ಹೇಳಿಕೆ ನೀಡಿ ಮುಂಬೈ ದಾಳಿಯಲ್ಲಿ ಪಾಕಿಸ್ತಾನದ ಐಎಸ್‌ಐ ಸಂಪೂರ್ಣ ವಾಗಿ ಪಾಲ್ಗೊಂಡಿತ್ತು ಎಂದು ಆರೋಪಿಸಿ ಮುಜುಗರಕ್ಕೀಡು ಮಾಡಿದ್ದರು.

ಪ್ರಣಬ್ ಅವರ ಬಜೆಟ್ ಬಗ್ಗೆ ಪತ್ರಿಕಾ ಸಂದರ್ಶ ನದಲ್ಲಿಯೇ ಟೀಕೆ ಮಾಡಿದ್ದರು. ಜಾತಿಗಣತಿ ಆಗಬೇಕೆಂದು ಸಂಪುಟ ಸಭೆಯಲ್ಲಿ ಪ್ರಣಬ್ ಹೇಳಿದಾಗ ಅದನ್ನು ವಿರೋಧಿಸಿದ್ದರು. ಮಾವೋವಾದಿಗಳ ದಮನಕ್ಕೆ ಸೇನೆಯನ್ನು ಬಳಸಬೇಕೆಂಬ ಚಿದಂಬರಂ ಹೇಳಿಕೆಯನ್ನು ಆಂಟನಿ ವಿರೋಧಿಸಿದ್ದರು. ಜ್ಞಾನೇಶ್ವರಿ ರೈಲು ಅಪಘಾತದ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂಬ ಮಮತಾ ಬ್ಯಾನರ್ಜಿ ಬೇಡಿಕೆಯನ್ನು ಒಪ್ಪಿಕೊಳ್ಳಲಿಲ್ಲ. ಇಂಧನ ಖಾತೆ ಸಚಿವ ಸುಶೀಲ್‌ಕುಮಾರ್ ಶಿಂಧೆ ಚೀನಾದಿಂದ ವಿದ್ಯುತ್ ಸಲಕರಣೆಗಳನ್ನು ಆಮದು ಮಾಡಿ ಕೊಳ್ಳುವುದನ್ನು ವಿರೋಧಿಸಿದ್ದರು. ತೆಲಂಗಾಣ ಚಳವಳಿಯನ್ನು ಸರಿಯಾಗಿ ಗ್ರಹಿಸಲಾಗದೆ ಕೈಗೊಂಡ ಅವಸರದ ತೀರ್ಮಾನದಿಂದಾಗಿ ಆಂಧ್ರಪ್ರದೇಶ ಕಾಂಗ್ರೆಸ್ ಕೈಬಿಟ್ಟು ಹೋಗುತ್ತಿದೆ. ಇತ್ತೀಚಿಗೆ ಅಣ್ಣಾ ಹಜಾರೆ ಅವರನ್ನು ಬಂಧಿಸುವ ಮೂರ್ಖ ತೀರ್ಮಾನ ಕೂಡಾ ಅವರದ್ದೇ. ಗೃಹಸಚಿವರಾಗಿ ಮೊದಲ ಒಂದು ವರ್ಷ ಸಾಧಿಸಿದ್ದ ಯಶಸ್ಸನ್ನು ಅದರ ನಂತರ ಮುಂದುವರಿಸಿಕೊಂಡು ಹೋಗಲು ಅವರಿಗೆ ಸಾಧ್ಯವಾಗಿಲ್ಲ. ಪುಣೆಯ ಜರ್ಮನ್ ಬೇಕರಿ ಮೇಲೆ ನಡೆದ ದಾಳಿಯಿಂದ ಇತ್ತೀಚಿನ ದೆಹಲಿ ಹೈಕೋರ್ಟ್ ಆವರಣದಲ್ಲಿ ನಡೆದ ದಾಳಿಯ ವರೆಗೆ ಚಿದಂಬರಂ ಅವರ ಸರಣಿ ವೈಫಲ್ಯ ಮುಂದುವರಿದಿದೆ. ಇನ್ನೊಂದೆಡೆ ಮಾವೋ ವಾದಿಗಳ ಹಿಂಸಾಚಾರವನ್ನು ನಿಯಂತ್ರಿಸಲು ಕೂಡಾ ಅವರು ಸೋತಿದ್ದಾರೆ.ಇದೇ ಹೊತ್ತಿಗೆ ಸರಿಯಾಗಿ 2ಜಿ ತರಂಗಾಂತರ ಹಗರಣದಲ್ಲಿ ಅವರ ಪಾತ್ರವನ್ನು ವಿವರಿಸುವ ಅಧಿಕೃತ ದಾಖಲೆ ಪತ್ರಗಳು  ಹೊರಬೀಳುತ್ತಿವೆ. ಮನಮೋಹನ್‌ಸಿಂಗ್ ಕುರ್ಚಿ ಅಲ್ಲಾಡು ತ್ತಿರುವುದಕ್ಕೂ ಈ ಸೋರಿಕೆಗೂ ಸಂಬಂಧ ಇಲ್ಲ ಎಂದು ಹೇಳುವ ಹಾಗಿಲ್ಲ. ರಾಜಕೀಯ ಬೆಳವಣಿಗೆಗಳೆಲ್ಲವೂ ಕಾಕತಾಳೀಯವಾಗಿ ನಡೆಯುವುದಿಲ್ಲ. 2ಜಿ ತರಂಗಾಂತರ ಹಗರಣದ ಬಗ್ಗೆ ಮಾಹಿತಿ ಹಕ್ಕು ಕಾಯಿದೆಯಡಿ ಕೆಲವು ದಾಖಲೆಗಳನ್ನು ಕೇಳಿದ್ದ ಬಿಜೆಪಿ ಕಾರ‌್ಯಕರ್ತ, ಪ್ರಧಾನಿ ಕಾರ‌್ಯಾಲಯದಿಂದ ಬಂದಿರುವ ದಾಖಲೆಗಳ ಕಂತೆಯನ್ನು ನೋಡಿ ಬೆಚ್ಚಿ ಬಿದ್ದಿದ್ದಾರೆ. ಆ ನಿರೀಕ್ಷೆ ಅವರಿಗೆ ಇರಲಿಲ್ಲ.ಪ್ರಧಾನಿ ಕಾರ್ಯಾಲಯದ ಈ ಔದಾರ‌್ಯ ಸಹಜ ವಾದುದಲ್ಲ. ಇದರ ಹಿಂದೆ ಕೆಲವರು ಹಣಕಾಸು ಸಚಿವರ, ಇನ್ನು ಕೆಲವರು ಮನಮೋಹನ್‌ಸಿಂಗ್ ಅವರಿಗೆ ಆತ್ಮೀಯವಾಗಿರುವ ಅಧಿಕಾರಿಗಳ ಕೈವಾಡವನ್ನು ಕಾಣುತ್ತಿದ್ದಾರೆ. ಘಟನೆಗಳು ಒಂದೊಂದಾಗಿ ಬಿಚ್ಚಿಕೊಳ್ಳುತ್ತಿರುವುದನ್ನು ನೋಡಿದರೆ ಚಿದಂಬರಂ ನಿರ್ಗಮನ ಖಚಿತ ವಾದಂತಿದೆ. ತಮ್ಮನ್ನು ಭೇಟಿಯಾಗಲು ಬಯಸಿದ್ದ ಚಿದಂಬರಂ ಅವರಿಗೆ  ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವಕಾಶ ನಿರಾಕರಿಸಿರುವುದು ಇದರ ಮೊದಲ ಸೂಚನೆ.ಮುಂದಿನ ಸರದಿ ಯಾರದ್ದು ಎನ್ನುವುದಷ್ಟೇ ಈಗಿನ ಪ್ರಶ್ನೆ. ಅದು ಮನಮೋಹನ್‌ಸಿಂಗ್ ಅವರದ್ದೇ ಆಗಿದ್ದರೆ ಪ್ರಣಬ್ ಮುಖರ್ಜಿಯವರು ವರ್ಷಗಳಿಂದ ಕಾವು ಕೊಟ್ಟು ಇಟ್ಟುಕೊಂಡಿರುವ ಕನಸು ನನಸಾದೀತು. 2ಜಿ ತರಂಗಾಂತರ ಹಗರಣ ದಿನದಿಂದ ದಿನಕ್ಕೆ ಪಡೆಯುತ್ತಿರುವ ತಿರುವು ಗಳನ್ನು ನೋಡಿದರೆ ಮುಂದಿನ ಸರದಿ ಪ್ರಣಬ್ ಮುಖರ್ಜಿ ಅವರದ್ದೂ ಆಗಬಹುದು. ಅಂತಹದ್ದೇನಾದರೂ ನಡೆದರೆ ಮನಮೋಹನ್‌ಸಿಂಗ್ ಕುರ್ಚಿ ಒಂದಷ್ಟು ಕಾಲ ಸುರಕ್ಷಿತ. ಇದಕ್ಕಲ್ಲವೇ ರಾಜಕೀಯವನ್ನು ಚದುರಂಗದಾಟ ಎನ್ನುವುದು.

(ನಿಮ್ಮ ಅನಿಸಿಕೆಗಳನ್ನು ತಿಳಿಸಿ: 

 editpagefeedback@prajavani.co.in  

   

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.