ಭಾನುವಾರ, ಮೇ 9, 2021
25 °C

ಪ್ರೀತಿಯ ಈ ಪರಿಧಿ ಬಲು ದೊಡ್ಡದು

ಶಿವರಾಮ್ Updated:

ಅಕ್ಷರ ಗಾತ್ರ : | |

ನನ್ನ ತಾಯಿಯ ನೈತಿಕತೆಯ ನೆರಳಲ್ಲೇ ಬೆಳೆದವನು ನಾನು. ನಾವು ಮಲ್ಲೇಶ್ವರದಲ್ಲಿ ವಾಸವಿದ್ದೆವು. ಮನೆಯಲ್ಲಿ ಸ್ನಾನಕ್ಕೆ ಇದ್ದದ್ದು ಕಟ್ಟಿಗೆ ಒಲೆ. ಅದಕ್ಕೆ ಡಿಪೋದಿಂದ ಉರುವಲು ತರುತ್ತಿದ್ದೆವು. ಹಾಗೆ ಉರುವಲು ತೆಗೆದುಕೊಂಡು ಬರಲು ಹೋಗಿದ್ದ ಒಂದು ದಿನ ನಮ್ಮ ಮನೆಯ ಹಿಂದಿನ ಬೀದಿಗೆ ಕೋರ್ಟ್‌ನಿಂದ ಅಮೀನ ಬಂದಿದ್ದರು. ಒಂದು ಸಂಸಾರವನ್ನು ಕಾನೂನುಬದ್ಧವಾಗಿಯೇ ರಸ್ತೆಗೆ ಹಾಕಿ ಮನೆಯನ್ನು ವಶಕ್ಕೆ ತೆಗೆದುಕೊಂಡರು. ನಾವು ಬರುವ ಹೊತ್ತಿಗೆ ರಸ್ತೆಗೆ ಬಂದಿದ್ದ ಆ ಮಹಿಳೆ ಕೈಲಿ ಸಣ್ಣ ಮಗುವಿತ್ತು. ಅವರನ್ನು ಕಂಡು ನನ್ನ ತಾಯಿಯ ಕರುಳು ಚುರ‌್ರೆಂದಿತು. ಆಗ ನಮ್ಮ ತಾಯಿ ಇನ್ನೊಂದು ಸಣ್ಣ ಮನೆ ಕಟ್ಟಿಸಿದ್ದರು. ಆ ಮನೆಗೆ ಮಹಿಳೆ ಹಾಗೂ ಮಗುವನ್ನು ಕರೆದುಕೊಂಡು ಬಂದು, ಬರೀ 50 ರೂಪಾಯಿ ಬಾಡಿಗೆಗೆ ಕೊಟ್ಟರು. ಅದಕ್ಕೆ ನನ್ನ ತಂದೆಯ ಅನುಮತಿಗೂ ಕಾಯಲಿಲ್ಲ.ನನ್ನ ತಾಯಿ ಜಾಗ ಕೊಟ್ಟ ಆ ಮಹಿಳೆಯ ಗಂಡ ಕೂಡ ಕೋರ್ಟ್‌ನಲ್ಲೇ ಕೆಲಸ ಮಾಡುತ್ತಿದ್ದರು. ಹಿರಿಯ ವ್ಯಕ್ತಿ. ಆಗ ಭಾರತ-ಪಾಕಿಸ್ತಾನ ಯುದ್ಧ ನಡೆಯುತ್ತಿದ್ದ ಸಂದರ್ಭ. ಬೆಂಗಳೂರಲ್ಲಿ `ಬ್ಲ್ಯಾಕ್‌ಔಟ್~ ಆಗುತ್ತಿತ್ತು. ಬಾಂಬ್ ದಾಳಿಯ ಭೀತಿ ಇದ್ದದ್ದರಿಂದ ಪ್ರತಿ ಮನೆಯಲ್ಲಿ ಒಂದು ಸಣ್ಣ ಬಲ್ಬ್ ಅಷ್ಟೇ ಉರಿಸಬೇಕಿತ್ತು. ಆದರೆ, ಆ ಮನೆಯಲ್ಲಿದ್ದವರು ಎಲ್ಲಾ ಲೈಟ್‌ಗಳನ್ನು ಹಾಕುತ್ತಿದ್ದರು. ಅದನ್ನು ಪ್ರಶ್ನಿಸಿದ್ದಕ್ಕೆ ನಮ್ಮ ಮೇಲೇ ಹಾರಿಕೆಯ ಮಾತುಗಳನ್ನಾಡಿದರು. ಮನೆ ಕೊಟ್ಟಿದ್ದ ನನ್ನ ತಾಯಿಗೇ ತೊಂದರೆ ಕೊಡಲಾರಂಭಿಸಿದರು. ನಾವು ಪ್ರಶ್ನಿಸಿದ್ದನ್ನೇ ದೊಡ್ಡದು ಮಾಡಿ, ನನ್ನ ತಾಯಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟರು. ತಾಯಿ ಠಾಣೆಗೆ ಹೋಗಬೇಕಾಗಿ ಬಂತು. ಕರ್ನಾಟಕ ಕಂಡ ಪ್ರಾಮಾಣಿಕ ಪೊಲೀಸ್ ಅಧಿಕಾರಿ ಎಂ.ಕೆ.ಗಣಪತಿ ಆಗ ಆ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಆಗಿದ್ದರು. ನಾನು ಕೆಲಸಕ್ಕೆ ಸೇರಿದ ಮೇಲೆ ಗೊತ್ತಾಯಿತು, ಸಿಆರ್‌ಪಿಸಿ ಪ್ರಕಾರ ವಿಚಾರಣೆಗೆ ಮಹಿಳೆಯರನ್ನು ಠಾಣೆಗೆ ಕರೆದುಕೊಂಡು ಬರುವಂತಿರಲಿಲ್ಲ.ಆ ದಿನ ಠಾಣೆಗೆ ಸಬ್ ಇನ್ಸ್‌ಪೆಕ್ಟರ್ ಬಂದ ನಂತರ ವಿಷಯ ತಿಳಿದು, ಬಾಡಿಗೆಗೆ ಇದ್ದವರನ್ನೇ ಬೈದು ಕಳಿಸಿದ್ದರು. ಆಗ ನನ್ನ ತಾಯಿ ಹೇಳಿದರು- `ಅಲ್ಲಿದ್ದ ಪೊಲೀಸರು ಅಷ್ಟೇನೂ ಚೆನ್ನಾಗಿ ವರ್ತಿಸಲಿಲ್ಲ. ಆದರೆ, ಆ ಸಬ್ ಇನ್ಸ್‌ಪೆಕ್ಟರ್ ಬಂದಾಗ ಠಾಣೆಯಲ್ಲಿ ವಿದ್ಯುತ್ ಸಂಚಾರವಾಯಿತು. ನೀನೂ ಪೊಲೀಸ್ ಆಗು~. ಆಗ ನಾನು `ನಾನೆಲ್ಲಿ ಪೊಲೀಸ್ ಆಗ್ತೀನಿ, ಬಿಡಮ್ಮಾ~ ಎಂದಿದ್ದೆ. ಆದರೆ, ಮುಂದೆ ಅವರ ಬಯಕೆಯಂತೆಯೇ ಪೊಲೀಸ್ ಆದದ್ದಕ್ಕೆ ಕಾರಣ ನನ್ನ ಸ್ನೇಹಿತರು.ಕೊತ್ವಾಲನ ಬೆನ್ನಿಗೆ ಬಿದ್ದಾಗ, ಶಿವರಾಸನ್ ನಗರದ ಹೊರವಲಯದ ಮನೆಯಲ್ಲಿ ಬೀಡು ಬಿಟ್ಟಾಗ ಮನೆಯನ್ನೇ ಮರೆತು ಕೆಲಸ ಮಾಡಿದವರು ನಾವು. ಅಂಥ ಸಂದರ್ಭಗಳಲ್ಲಿ ನಾನು ಕೆಲವು ದಿನಗಳ ನಂತರ ಮನೆಗೆ ಹೋದರೆ, ನನ್ನ ತಾಯಿ ನೊಂದುಕೊಳ್ಳುತ್ತಿದ್ದರು. ತಮ್ಮ ಆಸೆಯೇ ನನಗೆ ಮುಳುವಾಯಿತೇನೋ ಅಂತ ಅನ್ನಿಸಿದಾಗಲೆಲ್ಲಾ ಅವರು ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತಿದ್ದರು. ನನ್ನ ಆ ತಾಯಿಯೇ ನೈತಿಕವಾಗಿ ನನಗೆ ಧೈರ್ಯ ತುಂಬಿದ್ದು.ನಾನು ಪೊಲೀಸ್ ಕೆಲಸಕ್ಕೆ ಸೇರುವ ಮೊದಲು ಇದ್ದ ಪರಿಸ್ಥಿತಿಯೇ ಬೇರೆ. ಯಾಕೆಂದರೆ, ತುರ್ತುಪರಿಸ್ಥಿತಿ ಹಾಗೂ ಅದಕ್ಕೂ ಮೊದಲು ಪೊಲೀಸರ ಬಗ್ಗೆ ಜನರಿಗೆ ಅಷ್ಟೇನೂ ಒಳ್ಳೆಯ ಭಾವನೆ ಇರಲಿಲ್ಲ. ತುರ್ತುಪರಿಸ್ಥಿತಿಯ ಕಾಲದಲ್ಲಿ ನಡೆದ ರಾಜಕೀಯ ಚಟುವಟಿಕೆ, ಜಯಪ್ರಕಾಶ್ ನಾರಾಯಣರ ನವನಿರ್ಮಾಣ ವೇದಿಕೆಯ ಹೋರಾಟ ಇವನ್ನೆಲ್ಲಾ ನೋಡನೋಡುತ್ತಲೇ ನಾನೂ ಬೆಳೆದೆ. ಆಗ ರಾಜಕೀಯದಲ್ಲಿ ವಿದ್ಯಾರ್ಥಿ ಸಮೂಹ ಪ್ರಮುಖ ಪಾತ್ರ ವಹಿಸುತ್ತಿತ್ತು. ಜನರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯದ ಅರಿವು ಬರತೊಡಗಿತ್ತು. ಆ ಸಂದರ್ಭದಲ್ಲಿ ನಾನು ಪೊಲೀಸ್ ಇಲಾಖೆಗೆ ಭರ್ತಿಯಾಗಿದ್ದು.ಈ ಇಲಾಖೆಗೆ ಸೇರಲು ಸಿಕ್ಕಾಪಟ್ಟೆ ಹಣ ಕೊಡಬೇಕಂತೆ ಅಂತ ಈಗಲೂ ನನ್ನನ್ನು ಜನ ಕೇಳುತ್ತಾರೆ. ನಾನು ಕೆಲಸಕ್ಕೆ ಭರ್ತಿಯಾದಾಗ ಅಂಥ ಯಾವುದೇ ಕೆಟ್ಟ ಚಾಳಿ ಇರಲಿಲ್ಲ. ಅರ್ಹತೆಯ ಕಾರಣಕ್ಕೇ ನಾವೆಲ್ಲಾ ಆಯ್ಕೆಯಾಗಿದ್ದೆವು. ನಮ್ಮದು ಕರ್ನಾಟಕ ಅದುವರೆಗೆ ಕಂಡ ಅತಿ ದೊಡ್ಡ ಬ್ಯಾಚ್. ಒಟ್ಟು 200ಕ್ಕೂ ಹೆಚ್ಚು ಜನ ತರಬೇತಿಯಲ್ಲಿದ್ದೆವು. 60-70 ಜನರಿಗೆ ತರಬೇತಿ ಕೊಡಬಹುದಾದ ಸ್ಥಳಾವಕಾಶ, ಸೌಕರ್ಯ ಇದ್ದ ಕಡೆ ಅಷ್ಟೂ ಮಂದಿಗೆ ತರಬೇತಿ ನೀಡಿದ್ದರು. ಹೀಗೆ ತರಬೇತಿ ಕೊಟ್ಟರೆ ಅಶಿಸ್ತು ಬಂದುಬಿಡುತ್ತದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದರು. ಆದರೆ, ನಾವು ಹೇಳಿಕೊಟ್ಟಿದ್ದನ್ನು ಮನಸ್ಸಿಟ್ಟು ಕಲಿತೆವು. ಈಗಲೂ ನಮ್ಮ ರಾಜ್ಯದಲ್ಲಿ ಒಂದು ಲಕ್ಷ ಪೊಲೀಸರ ಕೊರತೆ ಇದೆ.ನಾನು ಪೊಲೀಸ್ ಕೆಲಸಕ್ಕೆ ಸೇರಿದ್ದು ಒಲ್ಲದ ಮನಸ್ಸಿನಿಂದಲೇ. ತಂದೆ-ತಾಯಿಯ ಪ್ರೀತಿಯುಂಡು ಬೆಳೆದ ನನ್ನಿಂದ ಸ್ನೇಹಿತರೇ ಅರ್ಜಿ ಹಾಕಿಸಿದರು. ನಮ್ಮದು ವಿಶೇಷ ತಂಡ. ಒಳ್ಳೆಯ ಕ್ರೀಡಾಪಟುಗಳು, ವಾಗ್ಮಿಗಳು, ಬುದ್ಧಿವಂತರು ಎಲ್ಲರೂ ಇದ್ದರು. ತರಬೇತಿ ಸಂದರ್ಭದಲ್ಲೇ ಕೆಎಎಸ್ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಸಾಗಿ ಹೋದವರೂ ಇದ್ದರು.ತುರ್ತುಪರಿಸ್ಥಿತಿಯ ನಂತರ ಪೊಲೀಸ್ ದೌರ್ಜನ್ಯ ಕಂಡು, ಬೇರೆ ಬೇರೆ ಆಯೋಗಗಳು ರಚಿತವಾದ ನಂತರ ನಾವು ಇಲಾಖೆಗೆ ಭರ್ತಿಯಾಗಿದ್ದು. ಹಾಗಾಗಿ ಇಲಾಖೆಯಲ್ಲಿ ಗಮನಾರ್ಹ ಸುಧಾರಣೆಗಳಾಗಿದ್ದವು. ನಮಗೆ ಪಾಠ ಹೇಳಿದವರಲ್ಲಿ ನಿರುತ್ಸಾಹಿಗಳು ಇದ್ದಂತೆ ಉತ್ಸಾಹದ ಚಿಲುಮೆಗಳಂಥವರೂ ಇದ್ದರು. ಕೆ.ಶ್ರೀನಿವಾಸನ್ ಪ್ರಿನ್ಸಿಪಾಲ್. ಅವರೂ ಸೇರಿದಂತೆ ಅನೇಕ ಹಿರಿಯ ಅಧಿಕಾರಿಗಳು ಪೊಲೀಸರ ಬಗ್ಗೆ ಗೌರವ ಮೂಡಿಸಿದ್ದರು. ಬೆಂಗಳೂರು ನಗರಕ್ಕೇ ನನ್ನ ಪೋಸ್ಟಿಂಗ್ ಆದದ್ದು. ಕಳ್ಳಬಟ್ಟಿ, ಮಟ್ಕಾ ದಂಧೆ ತಡೆದಾಗ ಜನರಿಗೆ ಪೊಲೀಸರ ಮೇಲೆ ವಿಶ್ವಾಸ ಬಂದಿದ್ದನ್ನು ನಾನು ಪ್ರೊಬೆಷನರಿ ಪೀರಿಯೆಡ್‌ನಲ್ಲೇ ಕಂಡಿದ್ದೆ. ಪೊಲೀಸರ ಬಗ್ಗೆ ಗೌರವ ಮೂಡಬೇಕಾದರೆ ನಾವೆಲ್ಲಾ ಜನಮುಖಿಯಾಗಬೇಕು ಎಂಬುದು ಬೇಗ ನನಗೆ ಅರಿವಾಯಿತು.ಬಿ.ಎನ್.ಗರುಡಾಚಾರ್, ಹರ್ಲಂಕರ್, ಮರಿಸ್ವಾಮಿ, ಟಿ.ಜಯಪ್ರಕಾಶ್, ಅನ್ವರುದ್ದೀನ್, ಮುದ್ದಯ್ಯ ಮೊದಲಾದವರು ನನಗೆ ಪೋಸ್ಟಿಂಗ್ಸ್ ಕೊಡಿಸಿದ ಅಧಿಕಾರಿಗಳು. ಅವರ ಬಗ್ಗೆ ನನಗೆ ತುಂಬಾ ಗೌರವ.ನಾನು ಯಾವುದೇ ಪೊಲೀಸ್ ಠಾಣೆಗೆ ಹೋದರೂ ಬಂದವರಿಗೆ ಕೂರುವ ವ್ಯವಸ್ಥೆ ಮಾಡಿ, ಅವರು ಮನಬಿಚ್ಚಿ ಅಹವಾಲು ಹೇಳುವ ವ್ಯವಸ್ಥೆ ಮಾಡಿದೆ. ಜನರಿಗೆ ನನ್ನ ಮೇಲೆ ನಂಬಿಕೆ ಬಂತು.ಯಾರೇ ಪೊಲೀಸ್ ಠಾಣೆಗೆ ಬಂದಾಗ ಏಕವಚನದಲ್ಲಿ ಮಾತನಾಡಬಾರದು ಎಂಬುದು ನನಗೆ ನಾನೇ ಹಾಕಿಕೊಂಡ ನಿಯಮ. ನಾನು ಬಾಣಸವಾಡಿ ಪೊಲೀಸ್ ಠಾಣೆಯಲ್ಲಿದ್ದಾಗ 1980ರಲ್ಲಿ ಅಜ್ಜ-ಅಜ್ಜಿ ದೂರು ಕೊಡಲು ಬಂದರು. ನನ್ನ ಸ್ನೇಹಿತ ಟಿ.ಎಸ್.ಸುಬ್ರಮಣ್ಯ ಅಲ್ಲಿ ಕುಳಿತಿದ್ದರು. ದೂರು ಕೊಟ್ಟ ನಂತರ ಅಜ್ಜ-ಅಜ್ಜಿಯನ್ನು ಸಮಾಧಾನ ಪಡಿಸಿ, ಕಾಫಿ ಕೊಡಿಸಿದೆ. ಆ ಹಿರಿಯ ಜೀವಗಳಿಗೆ ಅಚ್ಚರಿಯಾಯಿತು. ಪೊಲೀಸರಿಂದ ಅಂಥ ಪ್ರತಿಕ್ರಿಯೆ ಸಿಗುತ್ತದೆ ಎಂದು ಅವರು ನಿರೀಕ್ಷಿಸಿಯೇ ಇರಲಿಲ್ಲವಂತೆ. ನನಗೆ ಆಶೀರ್ವಾದ ಮಾಡಿ ಹೊರಟರು. ಅಲ್ಲಿ ಅವರು ಕೊಡೆ ಮರೆತಿದ್ದರು. ಬೆಲ್ ಮಾಡಿ ಕಾನ್‌ಸ್ಟೇಬಲ್‌ನನ್ನು ಕರೆಸಿ, ಆ ಅಜ್ಜನನ್ನು ಕರೆಯುವಂತೆ ಹೇಳಿದೆ. `ಏ ಮುದುಕಾ... ಬಾರಯ್ಯ ಇಲ್ಲಿ. ಕೊಡೆ ಬಿಟ್ಟಿದೀಯಾ... ತಗೊಂಡು ಹೋಗು~ ಎಂದು ಕಾನ್‌ಸ್ಟೇಬಲ್ ಜೋರುದನಿಯಲ್ಲಿ ಕರೆದರು.ನನಗೆ ನೋವಾಯಿತು. ಅಜ್ಜ ಬಂದ ತಕ್ಷಣ ಆ ಕಾನ್‌ಸ್ಟೇಬಲ್‌ನ ಕರೆಸಿದೆ. ಅವರಲ್ಲಿ ಕ್ಷಮಾಪಣೆ ಕೇಳಿ ಎಂದು ಕಾನ್‌ಸ್ಟೇಬಲ್‌ಗೆ ಹೇಳಿದೆ. `ಯಾಕೆ ಸರ್~ ಎಂದು ಕೇಳಿದರು. ಅಷ್ಟು ವಯಸ್ಸಾದವರನ್ನು ಹಾಗೆ ಕರೆಯುವುದು ಶ್ರೇಯಸ್ಸಲ್ಲ ಎಂದೆ. ಇನ್ನು ಮುಂದೆ ಎಂದಿಗೂ ಹಾಗೆ ಕರೆಯೋಲ್ಲ ಎಂದ ಆ ಕಾನ್‌ಸ್ಟೇಬಲ್ ಕಣ್ಣಲ್ಲಿ ನೀರಿತ್ತು. ಅಲ್ಲಿದ್ದ ನನ್ನ ಸ್ನೇಹಿತ ಜೀವನಪರ್ಯಂತ ಅದನ್ನು ಉಳಿಸಿಕೋ ಎಂದು ಸಲಹೆ ಕೊಟ್ಟರು. ಅದನ್ನು ನಾನು ಸೇವಾವಧಿಯ ಉದ್ದಕ್ಕೂ ಪಾಲಿಸಿಕೊಂಡೇ ಬಂದೆ.ಆತ್ಮತೃಪ್ತಿ, ವೃತ್ತಿ ಸಂತೃಪ್ತಿಯನ್ನು ಸಂಪೂರ್ಣವಾಗಿ ನಾನು ಪಡೆದಿದ್ದೇನೆ. ಅದರ ಹಿಂದೆ ನನ್ನ ಸಹೋದ್ಯೋಗಿಗಳು, ಜನರ ಕೊಡುಗೆ ಅಪಾರ. ಪೊಲೀಸ್ ವ್ಯವಸ್ಥೆಯಲ್ಲಿ ಹೇಗಿರಬೇಕು ಎಂಬುದನ್ನು ಕಲಿಸಿದ್ದು ನನ್ನ ತಾಯಿ.ಕಾಲಕ್ರಮೇಣ ನನ್ನ ಬಾತ್ಮೀದಾರರ ಜಾಲ ಬಹಳ ವಿಸ್ತೃತವಾಗಿ ಬೆಳೆಯಿತು. ಪತ್ನಿ ಲತಾ, ಮಗ ರಕ್ಷಿತ್, ಮಗಳು ಸ್ಪಂದನಾ ವಿಜಯ ರಾಘವೇಂದ್ರ, ನನ್ನ ಅಕ್ಕ-ತಂಗಿಯರು, ತಮ್ಮಂದಿರು ಎಲ್ಲರೂ ನನ್ನ ವೃತ್ತಿಯ ತಾಕಲಾಟವನ್ನು ಹಂಚಿಕೊಂಡಿದ್ದಾರೆ. ಅವೇಳೆಯಲ್ಲಿ ಮನೆಗೆ ಬಂದಾಗಲೂ ಬಾಗಿಲು ತೆಗೆದಿದ್ದಾರೆ. ವೃತ್ತಿಮಾತ್ಸರ್ಯದಲ್ಲಿ ನಾವು ನಲುಗಿಹೋಗಿದ್ದರೂ ನಿಗೂಢವಾದ ಕೇಸನ್ನು ಪತ್ತೆ ಮಾಡಿದಾಗ ಮತ್ತೆ ಅರಳಿದ್ದೇವೆ. ಅಮಾಯಕ ಹೆಣ್ಣುಮಕ್ಕಳಿಗೆ ಸಹಾಯ ಮಾಡುವ ಅವಕಾಶ ಸಿಕ್ಕಾಗ ಖುಷಿಪಟ್ಟಿದ್ದೇವೆ.ಈ ಅಂಕಣ ಬರೆಯಲು ಪ್ರಾರಂಭಿಸಿದಾಗ ಪ್ರಜಾವಾಣಿಯ ಓದುಗರು ಈ ಮಟ್ಟದಲ್ಲಿದ್ದಾರೆ ಎಂದು ಗೊತ್ತೇ ಇರಲಿಲ್ಲ. ಕರ್ನಾಟಕದ ಮೂಲೆಮೂಲೆಗಳಿಂದ ನನಗೆ ಪ್ರತಿಕ್ರಿಯೆಗಳು ಬಂದವು. ಗಲ್ಫ್ ದೇಶಗಳಿಂದ, ಅಮೆರಿಕ, ಇಂಗ್ಲೆಂಡ್, ಚೀನಾ, ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಕನ್ನಡಿಗರಿಂದಷ್ಟೇ ಅಲ್ಲದೆ ಸ್ವಿಟ್ಜರ‌್ಲೆಂಡ್‌ನಂಥ ದೇಶದಲ್ಲಿ ಇರುವವರಿಂದಲೂ ಪ್ರತಿಕ್ರಿಯೆ ವ್ಯಕ್ತವಾದದ್ದು ನೋಡಿ ನಾನು ಚಕಿತಗೊಂಡೆ. ಕೋಮುಗಲಭೆಗಳ ಬಗ್ಗೆ ಬರೆದಾಗ, ಆ ಗಲಭೆಗಳಲ್ಲಿ ನಲುಗಿದವರು ಫೋನ್ ಮಾಡಿ ತಮ್ಮ ಕಷ್ಟಗಳನ್ನು ಹಂಚಿಕೊಂಡರು. ಮಾನವೀಯ ಸಂಗತಿಗಳನ್ನು ಪ್ರಸ್ತಾಪ ಮಾಡಿದಾಗಲೆಲ್ಲಾ ಕಣ್ಣುತೇವ ಮಾಡಿಕೊಂಡು ಅನೇಕರು ಮಾತನಾಡಿದ್ದಿದೆ.ಇಷ್ಟೆಲ್ಲಾ ಜನಪ್ರೀತಿಗೆ ಕಾರಣವಾದ `ಪ್ರಜಾವಾಣಿ~ಗೆ ನಾನು ಕೃತಜ್ಞ. ಅಂದಹಾಗೆ, ಮೇ ತಿಂಗಳ ಎರಡನೇ ವಾರ ನಾನು ಬರೆದ ಅಂಕಣ ಬರಹ ಪುಸ್ತಕದ ರೂಪದಲ್ಲಿ ಹೊರಬರಲಿದೆ. ಮತ್ತೆ ಬರೆಯುವ ಮನಸ್ಸಾಗುವವರೆಗೆ ಕಾಯುವುದಷ್ಟೇ ನನ್ನ ಇರಾದೆ.

ಶಿವರಾಂ ಅವರ ಮೊಬೈಲ್ ಸಂಖ್ಯೆ- 9448313066

 (ಮುಗಿಯಿತು)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.