ಮಂಗಳವಾರ, ಮೇ 18, 2021
30 °C

ಫಿಡೆಲ್ ಕ್ಯಾಸ್ಟ್ರೊ: ಮಾರ್ಕ್ವೆಜ್ ಕಂಡ ಮುಖಗಳು

ನಟರಾಜ್ ಹುಳಿಯಾರ್ Updated:

ಅಕ್ಷರ ಗಾತ್ರ : | |

ಫಿಡೆಲ್ ಕ್ಯಾಸ್ಟ್ರೊ: ಮಾರ್ಕ್ವೆಜ್ ಕಂಡ ಮುಖಗಳು

ಮೊನ್ನೆ ಫಿಡೆಲ್ ಕ್ಯಾಸ್ಟ್ರೊನ ಚಿತಾಭಸ್ಮವನ್ನು ಅವನ ನೆಚ್ಚಿನ ಕ್ರಾಂತಿಕಾರಿ ಚಿಂತಕ ಜೋಸ್ ಮಾರ್ತಿಯ ಸಮಾಧಿಯ ಪಕ್ಕದಲ್ಲಿಟ್ಟ ದಿನ, ಹಿಂದೊಮ್ಮೆ ಮಾರ್ಕ್ವೆಜ್ ಜೊತೆ ಮಾತಾಡುತ್ತಾ, ‘ಮುಂದಿನ ಜನ್ಮದಲ್ಲಿ ಲೇಖಕನಾಗಿ ಹುಟ್ಟಬೇಕೆಂಬುದು ನನ್ನ ಆಸೆ’ ಎಂದು ಫಿಡೆಲ್ ಹೇಳಿದ್ದು ನೆನಪಾಯಿತು. ಜಗತ್ತಿನ ಶ್ರೇಷ್ಠ ಲೇಖಕರಲ್ಲೊಬ್ಬನಾದ ಕೊಲಂಬಿಯಾದ ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ ತನ್ನ ಗೆಳೆಯ, ಕ್ರಾಂತಿಕಾರಿ ನಾಯಕ ಫಿಡೆಲ್ ಕ್ಯಾಸ್ಟ್ರೊ ಬಗ್ಗೆ ಸದಾ ಹೃದಯ ತುಂಬಿ ಮಾತಾಡುತ್ತಿದ್ದ. ‘ಫಿಡೆಲ್ ಬಗ್ಗೆ ಮಾತಾಡುವಾಗ ನಾನು ತೀರ್ಮಾನ ಕೊಡುವ ಸ್ಥಾನದಲ್ಲಿ ನಿಂತು ಮಾತಾಡಲಾರೆ; ಭಾವನೆಗಳ ಲೋಕದಿಂದ ಮಾತ್ರ ಮಾತಾಡಬಲ್ಲೆ’ ಎಂದ ಮಾರ್ಕ್ವೆಜ್,  ‘ಈ ಜಗತ್ತಿನಲ್ಲಿ ನಾನು ಅತ್ಯಂತ ಪ್ರೀತಿಸುವ ವ್ಯಕ್ತಿ ಫಿಡೆಲ್’ ಎಂದಿದ್ದ. ಕ್ಯಾಸ್ಟ್ರೊಗಿಂತ ಎರಡು ವರ್ಷ ಮೊದಲೇ ತೀರಿಕೊಂಡ ಮಾರ್ಕ್ವೆಜ್ ನಿಲುವು ಕೊನೆಯವರೆಗೂ ಹಾಗೇ ಇದ್ದಂತಿತ್ತು.ಒಮ್ಮೆ ಮಾರ್ಕ್ವೆಜ್ ಬರಹಗಾರರ ಕಮ್ಮಟದಲ್ಲಿ ಮಾತಾಡುತ್ತಿರುವಾಗ, ಲೇಖಕನೊಬ್ಬ ‘ಕ್ಯಾಸ್ಟ್ರೊ ಒಬ್ಬ ಸರ್ವಾಧಿಕಾರಿ’ ಎಂದಾಗ, ಮಾರ್ಕ್ವೆಜ್ ಹೇಳಿದ: ‘ಚುನಾವಣೆ ನಡೆಸುವುದೊಂದೇ ಪ್ರಜಾಪ್ರಭುತ್ವವಾದಿಯಾಗಿರುವ ಮಾರ್ಗವಲ್ಲ.’ ಆದರೆ ಗೆಳೆಯ ಮಾಡಿದ್ದನ್ನೆಲ್ಲ ಮಾರ್ಕ್ವೆಜ್ ಒಪ್ಪುತ್ತಿದ್ದನೆಂದಲ್ಲ. ಜೆಕೊಸ್ಲೊವಾಕಿಯದಲ್ಲಿ ಸೋವಿಯತ್ ಯೂನಿಯನ್ ಹಸ್ತಕ್ಷೇಪ ಮಾಡಿದ್ದನ್ನು ಕ್ಯಾಸ್ಟ್ರೊ ಬೆಂಬಲಿಸಿದರೆ, ಮಾರ್ಕ್ವೆಜ್ ಅದನ್ನು ಪ್ರತಿಭಟಿಸಿದ್ದ.ಅಧಿಕಾರ ‘ಮಾನವನ ಅತ್ಯುನ್ನತ ಮಹತ್ವಾಕಾಂಕ್ಷೆ ಹಾಗೂ ಇಚ್ಛಾಶಕ್ತಿಯ ರೂಪ’ ಎಂದು ಅರಿತಿದ್ದ ಮಾರ್ಕ್ವೆಜ್, ಪ್ರಖ್ಯಾತ ಲೇಖಕನಾದ ಮೇಲೆ ಹಲವು ದೇಶಗಳ ರಾಜಕೀಯ ನಾಯಕರನ್ನು ಹತ್ತಿರದಿಂದ ಬಲ್ಲವನಾಗಿದ್ದ. ಆದರೆ ಫಿಡೆಲ್ ಜೊತೆಗಿನ ಅವನ ಸ್ನೇಹ ಬೆಳೆದದ್ದು ಸಾಹಿತ್ಯದ ಮೂಲಕ. ಒಂದು ರಾತ್ರಿ ಮಾರ್ಕ್ವೆಜ್ ಹಾಗೂ ಫಿಡೆಲ್ ಮಾತಾಡುತ್ತಾ ಕೂತಿದ್ದರು.ಇನ್ನೇನು ಬೆಳಗಿನ ಜಾವ ಆಗುತ್ತಿರುವಂತೆ, ಫಿಡೆಲ್ ‘ಇವತ್ತು ಓದಬೇಕಾಗಿರುವ ಪುಸ್ತಕಗಳು ನನಗಾಗಿ ಕಾಯುತ್ತಿವೆ’ ಎನ್ನುತ್ತಾ ಮೇಲೆದ್ದು, ‘ಇವನ್ನೆಲ್ಲ ಓದಬೇಕಾದದ್ದು ಅನಿವಾರ್ಯ; ಆದರೆ ಬೋರಿಂಗ್ ಹಾಗೂ ಶ್ರಮದಾಯಕ ಕೂಡ’ ಎಂದ. ಅದಕ್ಕೆ ಮಾರ್ಕ್ವೆಜ್ ‘ನಡುನಡುವೆ ಒಳ್ಳೆಯ, ಆದರೆ ಕೊಂಚ ಲೈಟ್ ಆದ ಪುಸ್ತಕಗಳನ್ನು ಓದುವುದು ಆ ಭಾರವನ್ನು ಕಳೆಯುವ ಉಪಾಯ’ ಎಂದು ಪುಸ್ತಕಗಳ ಪಟ್ಟಿ ನೀಡಿದರೆ, ಫಿಡೆಲ್ ಅವನ್ನೆಲ್ಲ ಓದಿಬಿಟ್ಟಿದ್ದ; ಅಷ್ಟೇ ಅಲ್ಲ, ಅವುಗಳ ಬಗ್ಗೆ ತನ್ನ ಅಭಿಪ್ರಾಯಗಳನ್ನೂ ಹೇಳತೊಡಗಿದ!‘ಫಿಡೆಲ್ ಎಂಥ ದೈತ್ಯ ಓದುಗನೆಂಬುದು ಅನೇಕರಿಗೆ ಗೊತ್ತಿರಲಿಕ್ಕಿಲ್ಲ’ ಎನ್ನುವ ಮಾರ್ಕ್ವೆಜ್, ಅವತ್ತು ಬೆಳಗಿನ ಜಾವ ಫಿಡೆಲ್‌ಗೆ ತನ್ನ ‘ದಿ ಟೇಲ್ ಆಫ್ ಎ ಶಿಪ್ ರೆಕ್ಡ್ ಸೈಲರ್’ ಪುಸ್ತಕ ಕೊಟ್ಟ. ಮಾರನೆಯ ದಿನ ಹನ್ನೆರಡು ಗಂಟೆಯ ಹೊತ್ತಿಗೆ ಸಿಕ್ಕ ಫಿಡೆಲ್, ಆ ಪುಸ್ತಕದಲ್ಲಿದ್ದ ತಪ್ಪುಗಳನ್ನು ತೋರಿಸಿಕೊಟ್ಟ! ಫಿಡೆಲ್‌ಗೆ ಸಾಹಿತ್ಯಲೋಕ ಪ್ರಿಯವಾಗಿದ್ದುದನ್ನು ಕಂಡ ಮಾರ್ಕ್ವೆಜ್ ಅವನನ್ನು ಭೇಟಿಯಾಗುವಾಗಲೆಲ್ಲ ಹಲಬಗೆಯ ಪುಸ್ತಕಗಳನ್ನು ಒಯ್ಯತೊಡಗಿದ.ಫಿಡೆಲ್ ಬರೆಯುವುದರ ಖುಷಿ ಕಂಡುಕೊಂಡಿದ್ದುದನ್ನೂ ಮಾರ್ಕ್ವೆಜ್ ಅರಿತ. ಫಿಡೆಲ್ ಕಾರಿನಲ್ಲಿ ಹೋಗುವಾಗ ನೋಟ್ ಬುಕ್ಕಿನಲ್ಲಿ ಬರೆಯುತ್ತಿದ್ದ. ಒಳ್ಳೆಯ ಲೇಖಕನಂತೆ ತಕ್ಕ ನುಡಿಗಟ್ಟಿಗಾಗಿ ತಡಕಾಡುತ್ತಿದ್ದ. ಬರೆದದ್ದನ್ನು ಹೊಡೆದುಹಾಕಿ ಮಾರ್ಜಿನ್ನಿನಲ್ಲಿ ಇನ್ನೇನೋ ಸೇರಿಸುತ್ತಿದ್ದ.  ಸರಿಯಾದ ಪದ ಸಿಕ್ಕುವ ತನಕ ಹಲವು ದಿನ ನಿಘಂಟುಗಳನ್ನು ಹುಡುಕುತ್ತಿದ್ದ; ಅವರಿವರನ್ನು ಕೇಳುತ್ತಿದ್ದ.ಕ್ರಾಂತಿಕಾರಿ ಹೋರಾಟದ ಮೂಲಕ ಬಟಿಸ್ಟಾ ಸರ್ಕಾರವನ್ನು ಕಿತ್ತೊಗೆದ ಮೇಲೆ ಹವಾನಾದಲ್ಲಿ ಫಿಡೆಲ್ ಮಾಡಿದ ಏಳು ಗಂಟೆಯ ಭಾಷಣ ವಿಶ್ವದಾಖಲೆಯಿರಬಹುದು ಎನ್ನುವ ಮಾರ್ಕ್ವೆಜ್‌ಗೆ ಅವತ್ತು ಎಲ್ಲಿ ಹೋದರೂ ಫಿಡೆಲ್ ಭಾಷಣ ಕೇಳುತ್ತಲೇ ಇತ್ತು. ಅವನ ಮಾತಿನ, ವಾದದ ಮಾಂತ್ರಿಕ ಶಕ್ತಿ ಮಾರ್ಕ್ವೆಜ್‌ಗೆ ಅರಿವಾಗುತ್ತಾ ಹೋಯಿತು. ಫಿಡೆಲ್ ಒರಟು ದನಿ ಕೇಳಿದ ಡಾಕ್ಟರು ಇನ್ನು ಐದು ವರ್ಷಗಳಲ್ಲಿ ಅವನು ಮಾತು ಕಳೆದುಕೊಳ್ಳಲಿದ್ದಾನೆಂದು ಹೇಳಿದರು. 1962ರಲ್ಲೊಂದು ದಿನ ಫಿಡೆಲ್ ಮಾತು ನಿಂತು ಹೋಯಿತು; ಆದರೆ ಮರಳಿ ಬಂತು!   ಚಿಂತನೆ, ಕ್ರಿಯೆ ಹಾಗೂ ಜನರ ಜೊತೆಗಿನ ಮಾತುಕತೆಯ ಮೂಲಕ ವಿಕಾಸಗೊಳ್ಳುತ್ತಿದ್ದ ಫಿಡೆಲ್ ಮಾತಿನ ವೈಶಿಷ್ಟ್ಯವನ್ನು ಮಾರ್ಕ್ವೆಜ್ ಮಾತಿನಲ್ಲೇ ಕೇಳಿ: ‘ಸಣ್ಣಗಿನ ದನಿಯಲ್ಲಿ, ಮಾತಾಡಲೋ ಬೇಡವೋ ಎಂಬ ಅನುಮಾನದಲ್ಲೇ ಫಿಡೆಲ್ ಮಾತು ಶುರುವಾಗುತ್ತಿತ್ತು. ಖಚಿತವಿರದ ದಿಕ್ಕಿನಲ್ಲಿ, ಮಂಜಿನಲ್ಲಿ ತಡವರಿಸುತ್ತಾ ಅವನ ಮಾತು ಮುಂದಡಿಯಿಡುತ್ತಿತ್ತು. ಅವನು ಇಂಚಿಂಚೇ ಬೇರು ಬಿಡುತ್ತಾ, ಹಟಾತ್ತನೊಮ್ಮೆ ದೊಡ್ಡ ಪಂಜದ ಹೊಡೆತದ ಮೂಲಕ ಜನರನ್ನು ಹಿಡಿದಿಟ್ಟುಕೊಳ್ಳಲಾರಂಭಿಸುತ್ತಿದ್ದ.ಆಮೇಲೆ ಜನರ ಜೊತೆಗಿನ ಮಾತುಕತೆಯ ಮೂಲಕ ಅವರಿಂದ ಪಡೆಯುವುದೂ ಕೊಡುವುದೂ ಶುರುವಾಗುವುದು. ಇಂಥ ಉದ್ವಿಗ್ನತೆಯಲ್ಲಿ ಅವನ ಉತ್ತುಂಗ ಸ್ಥಿತಿ ಸೃಷ್ಟಿಯಾಗುವುದು. ಇದು ಅವನ ಸ್ಫೂರ್ತಿಯ ನೆಲೆ. ಈ ರಮ್ಯಘನತೆಯ ಉಜ್ವಲತೆಯನ್ನು ನೋಡದವರು, ಅನುಭವಿಸದವರು ಮಾತ್ರ ಅದನ್ನು ಅಲ್ಲಗಳೆಯಬಲ್ಲರು.’ಮಾರ್ಕ್ವೆಜ್ ಕಂಡಂತೆ ಫಿಡೆಲ್ ಕಮ್ಯುನಿಸಮ್ಮಿನ ಕ್ಲೀಷೆಗಳನ್ನು, ವಾಸ್ತವದ ನಂಟು ಕಳಚಿಕೊಂಡ ಭಾಷೆಯನ್ನು ಬಳಸುವವನಲ್ಲ. ತನ್ನ ಪ್ರೀತಿಯ ಲೇಖಕ ಜೋಸ್ ಮಾರ್ತಿಯ ಮಾತುಗಳನ್ನು ಬಿಟ್ಟರೆ ಬೇರೆ ಲೇಖಕರನ್ನು ಅವನು ಹೆಚ್ಚು ಉಲ್ಲೇಖಿಸುವುದಿಲ್ಲ. ಜೋಸ್ ಮಾರ್ತಿಯ ಇಪ್ಪತ್ತೆಂಟು ಸಂಪುಟಗಳನ್ನೂ ಓದಿದ್ದ ಫಿಡೆಲ್, ಮಾರ್ತಿಯ ಚಿಂತನೆಯನ್ನು ಮಾರ್ಕ್ಸ್‌ವಾದಿ ಕ್ರಾಂತಿಯ ರಕ್ತನಾಳಗಳ ಜೊತೆ ಬೆರೆಯುವಂತೆ ಮಾಡಿದ. ಪ್ರತಿಕೂಲ ಸ್ಥಿತಿ ಎದುರಾದಾಗಲೆಲ್ಲ ಫಿಡೆಲ್ ತೀವ್ರವಾಗುತ್ತಾ ಹೋಗುತ್ತಿದ್ದ.ಗೆಳೆಯನೊಬ್ಬ ಒಮ್ಮೆ ಫಿಡೆಲ್‌ಗೆ ಹೇಳಿದನಂತೆ: ‘ಪರಿಸ್ಥಿತಿ ತೀರಾ ಬಿಗಡಾಯಿಸಿರಬೇಕು; ಅದಕ್ಕೇ ಇಷ್ಟೊಂದು ಉಜ್ವಲವಾಗಿ ಕಾಣುತ್ತಿದ್ದೀಯ.’ ಮಾತಾಡುತ್ತಲೇ ಚಿಂತಿಸುವ, ಚಿಂತಿಸುತ್ತಲೇ ಮಾತಾಡಿ ಸ್ಪಷ್ಟತೆ ಪಡೆಯುವ ಫಿಡೆಲ್ ನಡುರಾತ್ರಿಯಲ್ಲಿ ಗೆಳೆಯನೊಬ್ಬನ ಮನೆಗೆ ಹೋಗಿ ‘ಐದು ನಿಮಿಷ ಮಾತ್ರ’ ಎಂದು ನಿಂತೇ ಮಾತಾಡತೊಡಗುತ್ತಾನೆ.ಮಾತುಕತೆ ಉಕ್ಕಿಸಿದ ಎನರ್ಜಿಯಿಂದಾಗಿ ಗಂಟೆಗಟ್ಟಲೆ ಮಾತಾಡುತ್ತಾನೆ; ಕೊನೆಗೆ ಆರಾಮಕುರ್ಚಿಯಲ್ಲಿ ಕೂತು ‘ನಾನೀಗ ಹೊಸ ಮನುಷ್ಯನಾದೆ ಎನ್ನಿಸುತ್ತಿದೆ’ ಎನ್ನುತ್ತಾನೆ.ಮಾರ್ಕ್ವೆಜ್ ಬರೆಯುತ್ತಾನೆ: ‘ಮಾತಾಡಿ ದಣಿದ ಫಿಡೆಲ್, ಮಾತಿನಲ್ಲೇ ದಣಿವಾರಿಸಿಕೊಳ್ಳುವುದು ಹೀಗೆ.’ ಮಾರ್ಕ್ವೆಜ್ ಪ್ರಕಾರ, ರಾಜಕಾರಣಿಯಾಗಿ ಫಿಡೆಲ್‌ನ ಅದ್ಭುತ ಶಕ್ತಿಯೆಂದರೆ ಒಂದು ಸಮಸ್ಯೆ ಎಲ್ಲಿ ಹುಟ್ಟಿ, ಹೇಗೆ ಬೆಳೆಯುತ್ತಿದೆ ಎಂಬುದನ್ನು ಆಳವಾಗಿ ಗ್ರಹಿಸುವುದು. ಅದು ಕೂಡ ಹಲಬಗೆಯ ಮಾತುಕತೆಗಳ ಮೂಲಕವೇ ಬೆಳೆಯುತ್ತಾ ಹೋಗುವುದು.ಒಮ್ಮೆ ಹಲವು ತಿಂಗಳುಗಳ ಚಿಂತನೆ, ಮಾತುಕತೆಯ ಮೂಲಕ ಫಿಡೆಲ್, ಲ್ಯಾಟಿನ್ ಅಮೆರಿಕದ ದೇಶಗಳು ತೀರಿಸಬೇಕಾದ ಸಾಲ ಕುರಿತು ತರ್ಕಬದ್ಧವಾಗಿ ವಿವೇಚಿಸಿ, ‘ಆ ಸಾಲವನ್ನು ಲ್ಯಾಟಿನ್ ಅಮೆರಿಕನ್ ದೇಶಗಳು ತೀರಿಸಬೇಕಾಗಿಲ್ಲ’ ಎಂಬುದನ್ನು ತೋರಿಸಿದ.  ಇಂಥ ವಿವೇಚನೆಯ ಜೊತೆಗೆ ಫಿಡೆಲ್‌ಗಿದ್ದ ಅದ್ಭುತ ಶಕ್ತಿಯೆಂದರೆ ನೆನಪು.ಬೆಳಗಾಗೆದ್ದು ಸುಮಾರು ಇನ್ನೂರು ಪುಟಗಳಷ್ಟು ಸುದ್ದಿಯೊಂದಿಗೆ ಫಿಡೆಲ್‌ನ ಬೆಳಗಿನ ಉಪಾಹಾರ; ಪ್ರತಿದಿನ ಓದಲೇಬೇಕಾದ ಕೊನೇಪಕ್ಷ ಐವತ್ತು ದಾಖಲೆಗಳು; ಜೊತೆಗೆ ಪುಸ್ತಕಗಳು. ಅವನ್ನು ಹೇಗೆ ನೆನಪಿಟ್ಟುಕೊಳ್ಳುತ್ತಾನೆ, ಓದಲು ಅವನಿಗೆ ಎಲ್ಲಿಂದ ಟೈಮ್ ಸಿಗುತ್ತದೆ, ಅವನ ಓದಿನ ಸ್ಪೀಡ್ ಹೇಗಿರಬಹುದು... ಊಹಿಸುವುದು ಕಷ್ಟ. ಅವನ ಕಾರಿನಲ್ಲಿ ಯಾವಾಗಲೂ ಓದಲು ಒಂದು ಲೈಟ್ ಇರುತ್ತಿತ್ತು.ಎಷ್ಟೋ ಸಲ ಫಿಡೆಲ್ ಬೆಳಗಿನ ಜಾವ ಓದಲು ಒಯ್ದ ಪುಸ್ತಕದ ಬಗ್ಗೆ ಬೆಳಗ್ಗೆಗಾಗಲೇ ಮಾತಾಡಿದ್ದಿದೆ.  ಆರ್ಥಿಕತೆಯ, ಚರಿತ್ರೆಯ ಪುಸ್ತಕಗಳೆಂದರೆ ಅವನಿಗೆ ಇಷ್ಟ. ಹಾಗೆಯೇ ತೀವ್ರ ಮಾತುಕತೆಗಳು. ಈ ಎಲ್ಲದರ ಮೂಲಕ ಫಿಡೆಲ್ ಹಲವು ದೇಶಗಳನ್ನು ಬಲ್ಲವನಾಗಿದ್ದ. ಅದರಲ್ಲೂ ಅಮೆರಿಕದ ಜನ, ಅಲ್ಲಿನ ಅಧಿಕಾರ ರಚನೆಗಳು, ಅಮೆರಿಕನ್ ಸರ್ಕಾರಗಳು ಕ್ಯೂಬಾಕ್ಕೆ ಒಡ್ಡುವ ಅಡೆತಡೆಗಳು, ಅವನ್ನು ಎದುರಿಸುವ ಮಾರ್ಗಗಳು ಎಲ್ಲವನ್ನೂ ಗ್ರಹಿಸುತ್ತಿದ್ದ. ತನ್ನ ಅಧಿಕಾರಿಗಳು ಸತ್ಯ ಬಚ್ಚಿಟ್ಟರೂ ಅದು ಫಿಡೆಲ್‌ಗೆ ತಿಳಿಯುತ್ತಿತ್ತು...ಜಗತ್ತಿನ ಬಹುದೊಡ್ಡ ಲೇಖಕರಲ್ಲೊಬ್ಬನಾದ ಮಾರ್ಕ್ವೆಜ್ ಕೊಟ್ಟಿರುವ ಈ ಆತ್ಮೀಯ, ಅಥೆಂಟಿಕ್ ಫಿಡೆಲ್ ಚಿತ್ರಗಳನ್ನು ನೋಡುತ್ತಿದ್ದರೆ ಫಿಡೆಲ್ ಥರದ ನಾಯಕರೊಳಗಿನ ಚಾಲಕಶಕ್ತಿ ಹಾಗೂ ಇಂದಿನ ಬಂಡವಾಳಶಾಹಿಯ ಕ್ರೌರ್ಯವನ್ನು ಎದುರಿಸಲು ಚಿಂತಕ-ನಾಯಕರು ಹುಡುಕಿಕೊಡುವ ಹಾದಿಗಳು ಸ್ಪಷ್ಟವಾಗಿ ಕಾಣತೊಡಗುತ್ತವೆ.

ಕೊನೆ ಟಿಪ್ಪಣಿ: ‘ಮಧ್ಯಮಜೀವಿ’ಗಳಿಗೆ ಫಿಡೆಲ್ ಪಾಠಗಳುಇವತ್ತಿನ ಅಂಕಣದಲ್ಲಿ ಕ್ಯಾಸ್ಟ್ರೊನ ಬೌದ್ಧಿಕ ಮುಖಗಳನ್ನು ಹೆಚ್ಚು ಬಿಂಬಿಸಲು ಕಾರಣವಿದೆ. ಇವತ್ತು ಎಡವೂ ಅಲ್ಲದ, ಬಲವೂ ಅಲ್ಲದ ಮಾರ್ಗವೊಂದಿದೆ ಎಂದು ಮುಗ್ಧವಾಗಿ ನಂಬುವವರಿರಬಹುದು. ಆದರೆ ಎಡಪಂಥೀಯ ಚಿಂತನೆಯಿಲ್ಲದಿದ್ದರೆ ಕಳೆದ ನೂರು ವರ್ಷಗಳಲ್ಲಿ ಅನೇಕ ದೇಶಗಳ ಜನಜೀವನವೇ ಬದಲಾಗುತ್ತಿರಲಿಲ್ಲ. ಇದು ಫಿಡೆಲ್ ಮಾತು- ಕ್ರಿಯೆಗಳನ್ನು ಕಂಡಾಗಲೂ ಹೊಳೆಯುತ್ತದೆ.ಕಳೆದ ಇಪ್ಪತ್ತೈದು ವರ್ಷಗಳಲ್ಲಿ ಕ್ಯಾಪಿಟಲಿಸಮ್ಮಿನಿಂದಾಗಿ ಹೆಚ್ಚಿರುವ ಸಂಪತ್ತಿನ ಭಯಾನಕ ಕೇಂದ್ರೀಕರಣ, ಅದು ಸೃಷ್ಟಿಸುತ್ತಿರುವ ಕಂದರ ಕುರಿತು ಜವಾಬ್ದಾರಿಯುತ ಎಡಪಂಥೀಯ ಚಿಂತಕರು ಬರೆಯದಿದ್ದರೆ ಯಾರಿಗೂ ಈ ಭೀಕರ ಮುಖಗಳ ಬಗ್ಗೆ ಸ್ಪಷ್ಟತೆ ಇರುತ್ತಿರಲಿಲ್ಲ.1999ರಲ್ಲಿ ವೆನಿಜುವೆಲಾ ವಿಶ್ವವಿದ್ಯಾಲಯದಲ್ಲಿ ಫಿಡೆಲ್ ಮಾಡಿದ ‘ಬ್ಯಾಟಲ್ ಆಫ್ ಐಡಿಯಾಸ್’ ಭಾಷಣ ಒಂದನ್ನಷ್ಟೇ ಮಧ್ಯಮವರ್ಗದ ‘ಮಧ್ಯಮಮಾರ್ಗ’ಗಳ ಸೋಮಾರಿವಲಯ ಓದಿದರೂ ಸಾಕು: ಇವತ್ತಿನ ನಿಜವಾದ ಸವಾಲುಗಳೆದುರು ತಮ್ಮ ಜಾಣನುಡಿಗಟ್ಟುಗಳು ಎಷ್ಟು ಬೋಗಸ್ ಎಂಬುದು ಹೊಳೆಯುತ್ತದೆ.ಮಾರ್ಕ್ಸ್ ಚಿಂತನೆಗಳಿಲ್ಲದಿದ್ದರೆ  ಇಲ್ಲಿ ಸ್ತ್ರೀವಾದವಾಗಲೀ, ಇನ್ನಿತರ ಬಗೆಯ ಸಮಾಜವಾದಗಳಾಗಲೀ ಹುಟ್ಟುವುದು ಕಷ್ಟವಿತ್ತು. ಅಂಬೇಡ್ಕರ್ ಮಾರ್ಕ್‌್ಸವಾದವನ್ನು ಒಪ್ಪದವರಂತೆ ಕಂಡರೂ, ಅವರ ಲೇಬರ್ ಪಾರ್ಟಿ, ‘ಪ್ರಭುತ್ವ ಸಮಾಜವಾದ’ದ ಕಲ್ಪನೆ, ಭೂ ರಾಷ್ಟ್ರೀಕರಣ, ಬುದ್ಧ-ಮಾರ್ಕ್‌್ಸರನ್ನು ಹೋಲಿಸಿದ ರೀತಿಗಳಲ್ಲಿ ಮಾರ್ಕ್‌್ಸವಾದದ ಪ್ರೇರಣೆಯಿತ್ತು. ದಲಿತ ಚಳವಳಿ ತನ್ನ ಉಜ್ವಲ ಘಟ್ಟದಲ್ಲಿ ಮಾರ್ಕ್‌್ಸವಾದದಿಂದ ತಾತ್ವಿಕ, ಸಂಘಟನಾತ್ಮಕ ಪ್ರೇರಣೆಗಳನ್ನು ಪಡೆದಿದ್ದನ್ನು ಮರೆಯಬಾರದು.ಎಲ್ಲ ಬಗೆಯ ಚಿಂತನೆಗಳಿಗೂ ಸ್ಥಗಿತತೆ ಬರಬಹುದು. ಆದರೆ ಕ್ಯಾಸ್ಟ್ರೊ  ರೀತಿ ತಂತಮ್ಮ ನಾಡುಗಳ ವಾಸ್ತವಗಳಿಗೆ ತಕ್ಕಂತೆ ಚಿಂತನೆಗಳನ್ನು ಮರುರೂಪಿಸಿಕೊಳ್ಳುವ ಬೌದ್ಧಿಕತೆ; ಚಿಂತನೆಗಳನ್ನು ಜಾರಿಗೆ ತರಬಲ್ಲ ಪ್ರಾಕ್ಟಿಕಲ್ ಮಾರ್ಗಗಳಿಂದ ಮಾರ್ಕ್‌್ಸವಾದಕ್ಕೆ ಸಮಕಾಲೀನತೆ ಬರುತ್ತದೆಯೇ ಹೊರತು, ಅದರ ಗಿಳಿಪಾಠದಿಂದಾಗಲೀ, ಅದನ್ನು ಗ್ರಹಿಸಲಾಗದ ಸಲೀಸು ಮಧ್ಯಮಮಾರ್ಗದಿಂದಾಗಲೀ ಅಲ್ಲ.ಈ ಕಾಲದ ಶ್ರೇಷ್ಠ ವಿಮರ್ಶಕರಲ್ಲೊಬ್ಬನಾದ ಟೆರಿ ಈಗಲ್ಟನ್ ಇಪ್ಪತ್ತೊಂದನೆಯ ಶತಮಾನದ ವಾಸ್ತವದಲ್ಲಿ ಕಾಲೂರಿ ನಿಂತು ಬರೆದಿರುವ ‘ವೈ ಮಾರ್ಕ್ಸ್ ವಾಸ್ ರೈಟ್’ ಪುಸ್ತಕವನ್ನು ಮುಕ್ತವಾಗಿ ಓದಿದರೆ ನಮ್ಮ ಅನೇಕ ಬೌದ್ಧಿಕ ಗೊಂದಲಗಳು ಕಡಿಮೆಯಾಗಬಲ್ಲವು. ಈ ಪುಸ್ತಕವನ್ನು ‘ಕಾರ್ಪೊರೇಟ್ ಕಾಲದಲ್ಲೂ ಮಾರ್ಕ್‌್ಸವಾದ ಪ್ರಸ್ತುತ’ (ಚಿಂತನ ಪುಸ್ತಕ) ಎಂದು ಆರ್.ಕೆ.ಹುಡಗಿ ಅನುವಾದಿಸಿದ್ದಾರೆ.ಸಾಹಿತ್ಯ ವಿಮರ್ಶೆಯಲ್ಲಿ ಸರಳ ಕಮ್ಯುನಿಸಮ್ಮಿನ ನಿರ್ದೇಶನಗಳಿಂದ ಹುಟ್ಟುವ ಸಮಸ್ಯೆಗಳ ಜೊತೆಗೆ ಇಡೀ ಮಾರ್ಕ್‌್ಸವಾದವನ್ನೇ ಸಮೀಕರಿಸಿ ಗೊಂದಲಗೊಂಡು, ಗೊಂದಲ ಹಂಚುವವರು ಈ ಯುಗದ ಮಹತ್ವದ ಪಠ್ಯಗಳಲ್ಲೊಂದಾದ ‘ಕಮ್ಯುನಿಸ್ಟ್ ಮ್ಯಾನಿಫೆಸ್ಟೊ’ ಹಾಗೂ ಇನ್ನಿತರ ಮಾರ್ಕ್‌್ಸವಾದಿ ಪಠ್ಯಗಳನ್ನು ಇವತ್ತಿನ ಕ್ಯಾಪಿಟಲಿಸಮ್ಮಿನ ಭೀಕರ ಕುಣಿತದ ಕಾಲದಲ್ಲಿ ಓದಿ ಸ್ಪಷ್ಟತೆ ಪಡೆಯುವುದು ಒಳ್ಳೆಯದು. ಹಾಗೆಯೇ, ಸಾಹಿತ್ಯ ಸೃಷ್ಟಿಯ ಸ್ವಾಯತ್ತತೆಯಲ್ಲಿ ಖಚಿತ ನಂಬಿಕೆಯಿಟ್ಟಿದ್ದ ಮಾರ್ಕ್ವೆಜ್, ಕಮ್ಯುನಿಸ್ಟನಾದ ಫಿಡೆಲ್‌ನನ್ನು ಯಾಕೆ ದೊಡ್ಡ ನಾಯಕನೆಂದು ಒಪ್ಪಿಕೊಂಡಿದ್ದ ಎಂಬುದರ ಬಗೆಗೂ ಮುಕ್ತವಾಗಿ ಯೋಚಿಸಬೇಕು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.