ಶನಿವಾರ, ಮಾರ್ಚ್ 6, 2021
18 °C

ಬಂಗ್ಲೆ ನವೀಕರಣ ಎಂಬ ಕಲೆ

ಜಿಎಮ್ಮಾರ್ Updated:

ಅಕ್ಷರ ಗಾತ್ರ : | |

ಬಂಗ್ಲೆ ನವೀಕರಣ ಎಂಬ ಕಲೆ

ಒಂದು ವಾರದಿಂದ ಪೆಕರ ಕಾಣಿಸ್ತಾ ಇಲ್ಲ ಯಾಕೆ? ಎಂದು ಸ್ನೇಹಿತರೆಲ್ಲಾ ಕಸಿವಿಸಿ­ಗೊಂಡಿ­ದ್ದರು. ರಾಜ್ಯದಲ್ಲಿ ಚುನಾ­ವಣೆ­ಯೂ ಮುಗಿದು ಹೋಯಿತು. ಪಕ್ಕದ ರಾಜ್ಯ­ಗಳಲ್ಲೂ ಮತದಾನ ಮುಗಿಯಿತು. ಆದರೂ ಪೆಕರ ಕಾಣಿಸ್ತಾನೇ ಇಲ್ವಲ್ಲಾ? ಗುವಾ­ಹಟಿ ಎಕ್ಸ್‌ಪ್ರೆಸ್ ರೈಲಿ­ನಲ್ಲಿ ಏನಾ­­ದರೂ ಪ್ರಯಾ­ಣಿ­ಸಿದನಾ? ಸ್ನೇಹಿತರು ಒಬ್ಬೊ­ಬ್ಬರೂ ಒಂದೊಂದು ರೀತಿಯಲ್ಲಿ ಯೋಚಿ­ಸು­ತ್ತಿ­ದ್ದಂತೆಯೇ ದೂರ­ದಲ್ಲಿ ಪೆಕರ ನಡೆದು­ಕೊಂಡು ಬರು­ವುದು ಕಾಣಿಸಿತು. ಬಹಳ ಸುಸ್ತಾ­ದವ­ನಂತೆ, ತಳ್ಳಾಡಿಕೊಂಡು ಬರುತ್ತಿದ್ದ ಪೆಕರ­ನನ್ನು ಕಂಡು ಎಲ್ಲರೂ ಅಯ್ಯೋ ಎಂದು ಲೊಚ­ಗುಟ್ಟಿ­ದರು. ಪಾಪ, ಭಯಂಕರ ಬಿಸಿಲಿನಿಂದಾಗಿ ಪೆಕರ ಬಳಲಿ­ಬೆಂಡಾಗಿ ಬಿಟ್ಟಿದ್ದಾನೆ ಎಂದು ಕೆಲ­ವರಿಗೆ ಸಿಂಪಥಿ. ಲೋಡ್‌ಶೆಡ್ಡಿಂಗ್ ಇದೆ, ವಿದ್ಯುತ್ ಇಲ್ಲ, ಆದರೂ ವಿದ್ಯುತ್‌ಕಂಬ ಏರಿ ಶಾಕ್ ಹೊಡೆಸಿ­ಕೊಂಡವನ ಹಾಗೆ ಕಾಣ್ತಾ ಇದ್ದಾ­ನಲ್ಲಾ ಎಂದು ಮತ್ತೊಬ್ಬ ಸ್ನೇಹಿತ ಕನಿಕರಿಸಿದ.‘ಏನಯ್ಯಾ ಪೆಕರ, ಒಂದು ವಾರದಿಂದ ಕಾಣ್ತಾ ಇರಲಿಲ್ಲವಲ್ಲಾ? ಏನ್ ಸಮಾಚಾರ?’ ಎಂದು ಸ್ನೇಹಿತರು ಪ್ರಶ್ನಿಸಿದರು.

‘ಏನಿಲ್ಲಾ, ಮನೆ ನವೀಕರಣ ಮಾಡಿಸ್ತಾ ಇದ್ದೆ’- ಎಂದು ಪೆಕರ ಕೂಲಾಗಿ ಉತ್ತರಿಸಿದ.ಎಲ್ಲರೂ ಒಮ್ಮೆಲೇ ಬೆಚ್ಚಿಬಿದ್ದರು. ‘ಮನೆ ಚೆನ್ನಾ­ಗಿಯೇ ಇತ್ತಲ್ಲಪ್ಪ. ಸುಣ್ಣ ಬಣ್ಣ ಫಸ್ಟ್‌­ಕ್ಲಾಸಾ­­ಗಿತ್ತು. ಹೊಸ ಮನೆ ಬೇರೆ, ನವೀಕರಣ ಏನ್ ಮತ್ ಯಾಕ್ ಮಾಡಿಸ್ದೆ?’ - ಎಲ್ಲರೂ ಒಮ್ಮೆಲೇ ಅಚ್ಚರಿಯಿಂದ ಪ್ರಶ್ನಿಸಿದರು.‘ಮನೆಯಲ್ಲಿ ಸ್ನಾನಗೃಹ ಸೋರ್ತಾ ಇತ್ತು. ಶೌಚಾ­ಲಯ, ಅಡುಗೆ ಕೋಣೆ ನವೀಕರಣ ಮಾಡಿ­ಸಿದೆ. ಶೌಚಾಲಯದಲ್ಲಿ ಅಮೆರಿಕನ್ ‘ಕಮೋಡ್’ ಹಾಕಿಸ್ದೆ, ನೀರು ಪೂರೈಕೆ ಕೊಳವೆ­ಗ­ಳನ್ನು ಚೇಂಜ್ ಮಾಡಿಸ್ದೆ. ಮಹಡಿಯಲ್ಲಿ ನೀರು ಸೋರದಂತೆ ಸಿಮೆಂಟ್ ಲೇಪ ಹಾಕಿಸ್ದೆ.ಇಡೀ ಮನೆಗೆ ಹೊಸದಾಗಿ ಕಲರ್ ಮಾಡಿಸ್ದೆ, ಸ್ಟಡೀ ರೂಂ ಚಿಕ್ಕದಾಗಿತ್ತು, ಗೋಡೆ ಒಡೆದು ವಿಶಾಲ ಕೊಠಡಿ ಮಾಡ್ದೆ, ಜನ ನನ್ನನ್ನು ನೋಡಲು ಬರ್ತಾರೆ, ಅವರಿಗೆ ತಗಡಿನ ಶೀಟ್ ಬಳಸಿ ಶೆಡ್ ಮಾಡ್ದೆ, ಮನೆ ಸುತ್ತ ಕಾಂಪೌಂಡ್ ಚಿಕ್ಕದಾ­ಯಿತು. ರೋಡ್‌ನಲ್ಲಿ ಹೋಗೋವ­ರಿ­ಗೆಲ್ಲಾ ಒಳಗೆ ಏನ್ ನಡೀತಿದೆ ಅಂತ ಗೊತ್ತಾಗುತ್ತೆ. ಅದಕ್ಕೆ ಗೋಡೆ ಎತ್ತರ ಮಾಡಿ­ಸಿದೆ. ಮನೆ ಒಳಗೆ ಏನ್ ನಡೀತಿದೆ ಅನ್ನೋದು ಯಾರಿ­ಗೂ ಗೊತ್ತಾ­ಗ­ಬಾರ್ದು. ಆ ತರಹ ಮಾಡಿಸಿದ್ದೀನಿ. ಸ್ವಲ್ಪ ಗಾರ್ಡನ್ ಕಾಮಗಾರಿ...’ ಪೆಕರ ಪಟ್ಟಿಯನ್ನು ಬೆಳೆಸುತ್ತಲೇ ಹೋದ.‘ಹೋಲ್ಡಾನ್...ಹೋಲ್ಡಾನ್...ಏನಯ್ಯಾ ಇದು, ಬ್ರೇಕ್ ಇಲ್ಲದ ಬಸ್ ತರಹ ಹೋಗ್ತಾನೇ ಇದೀಯಾ? ನಿನ್ನ ಕತೆ ಕೇಳಿದ್ರೆ ಲೋಕೋ­ಪ­ಯೋಗಿ ಸಚಿವರು ಮಾಡಿದ ಧಾಂ..­ಧೂಂ.. ಕಣ್ಮುಂದೆ ಬರ್ತಾ ಇದೆ’ ಎಂದು ಸ್ನೇಹಿತನೊಬ್ಬ ಹೇಳಿದ.‘ನಮ್ಮ ಲೋಕೋಪಯೋಗಿ ಸಚಿವರ ಮನೇಲಿ ಪಾಪ, ‘ಕಮೋಡ್’ ಸರಿಯಿರ­ಲಿಲ್ಲ­ವಂತೆ, ಅದಕ್ಕೆ ಸರ್ಕಾರಿ ಬಂಗಲೆಗೆ ಮುಕ್ಕಾಲು­ಕೋಟಿ ರೂಪಾಯಿ ಸುರಿದು ’ಸರ್ಕಾರದ ಆಸ್ತಿ’ ಕಾಪಾಡಿದ್ದಾರಂತೆ! ಎಂಥಾ ತ್ಯಾಗ?! ಎಂಥಾ ಬ್ರಿಲಿಯಂಟ್ ಮೈಂಡು!’ ಮತ್ತೊಬ್ಬ ಲೊಚಗುಟ್ಟಿದ.

‘ಮುಕ್ಕಾಲು ಕೋಟಿ ಅಂದ್ರೆ, ಯಾರಪ್ಪನ ಮನೆ ದುಡ್ಡು? ಜನಸಾಮಾನ್ಯರ ತೆರಿಗೆ ಹಣಾನಾ ಈ ರೀತಿ ತಿಂದು ಹಾಕಿ, ಹುರಿದು­ಮುಕ್ಕಿದ್ರೆ ಇದನ್ನು ದೇಶ ಸೇವೆ ಅಂತಾರಾ? ಮುಕ್ಕಾಲು ಕೋಟಿ ಹಣದಲ್ಲಿ ಒಂದು ಹೊಸ ಮನೆಯನ್ನೇ ಖರೀದಿ ಮಾಡಬಹುದು, ಬಡವರಿಗೆ ಇಪ್ಪತ್ತೈದು ಜನತಾಮನೆ ಕಟ್ಟಿಸಿಕೊಡಬಹುದಿತ್ತು’‘ರಾಜ್ಯದ ೧೬೪ ತಾಲೂಕುಗಳಲ್ಲಿ ಬರ ತಾಂಡವ­­ವಾಡ್ತಾ ಇದೆ. ಕುಡಿಯುವ ನೀರಿಲ್ಲದೆ ಜನ ಪರದಾಡ್ತಾ ಇದಾರೆ. ಇಂಥಾ ಸಮಯ­ದಲ್ಲಿ ಲೋಕೋಪಯೋಗಿ ಸಚಿವರಿಗೆ ‘ಕಮೋಡ್’­ ಇಲ್ಲದ್ದೇ ಮೋಸ್ಟ್ ಅರ್ಜೆಂಟ್ ಸಮಸ್ಯೆ­ಯಾಯ್ತೇ? ಎಂದು ಹಿಸ್ ಎಕ್ಸ್‌ಲೆನ್ಸಿ ಗವರ್ನರ್ ಸಾಹೇಬರೇ ಗರಂ ಆಗಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡದ್ದು ಗೊತ್ತಿಲ್ವಾ?’‘ಅಷ್ಟು ವಯಸ್ಸಾದವರಿಗೇ ಮೈಯೆಲ್ಲಾ ಉರೀತಿ­ರ­ಬೇಕಾ­ದರೆ, ನಮ್ಮಂಥ ಬಿಸಿ ರಕ್ತದ ತರುಣರ ರಕ್ತ ಕೊತಕೊತ ಕುದಿಯ­ಬೇಡವೇ?’ ಪೆಕರನ ಸ್ನೇಹಿತರು ಆವೇಶದಿಂದ ಪಾಯಿಂಟ್ ಮೇಲೆ ಪಾಯಿಂಟ್ ಹಾಕತೊಡಗಿದರು.ಸಚಿವರಿಗೆ ಬೇಕಂತೆ ಸರ್ಕಾರಿ ಬಂಗಲೆ

ನವೀಕರಣ ಅನ್ನೋದು ಹೊಸ ಕಲೆ

ಮಂತ್ರಿ ಆದ ಮೇಲೆ ಇಷ್ಟೂ ಬೇಡ್ವೆ ತಲೆ

ಬರ-ಗಿರ ಇದೆ ಅನ್ನೋದು ಶುದ್ಧ ತರಲೆ

‘ಹಿಸ್ ಎಕ್ಸಲೆನ್ಸಿ ಸಾಹೇಬರು ಸರ್ಕಾರದ ವಿರುದ್ಧ ಕೆಂಡಕಾರ್ತಾ ಇದ್ದಾರೆ. ಆಡಳಿತ ವೈಖರಿ ಸರಿಯಿಲ್ಲ ಎಂದು ತಾರಾಮಾರಾ ತರಾಟೆಗೆ ತೆಗೆದು­ಕೊಂಡಿದ್ದಾರೇನೋ ಸರಿ, ಆದರೆ ಪಾಪ, ಅಯ್ಯ ಅವರು ಏನ್ ಮಾಡೋಕಾಗುತ್ತೇ? ಡಜನ್ ಮಂದಿ ಐಎಎಸ್‌ಗಳು ಅಯ್ಯ ಅವರ ವಿರುದ್ಧ ತಿರುಗಿ ಬಿದ್ದಿ­ದ್ದಾರಂತಲ್ಲಾ? ಅಯ್ಯ ಅವರು ಏತಿ ಅಂದರೆ ಐಎಎಸ್‌ಗಳು ಪ್ರೇತಿ ಎನ್ನುತ್ತಿ­ದ್ದಾರಂತೆ, ಇನ್ನು ಡೆವಲಪ್‌­ಮೆಂಟ್ ವರ್ಕ್ ಏನಾಗುತ್ತೇ? ಹೇಗಾಗುತ್ತೇ? ಇದೆಲ್ಲಾ ಸೇಮ್‌­­ಪಾರ್ಟಿಯವರಾದ ಹಿಸ್ ಎಕ್ಸ್‌ಲೆನ್ಸಿಗೆ ಗೊತ್ತಾಗಲ್ವ?’ ಎಂದು ಪೆಕರ, ಅಭಿವೃದ್ಧಿ ಕಾರ್ಯ ಮಂದಗತಿ ಹಿಡಿದಿ­ರು­ವುದರ ಒಳರಹಸ್ಯ­ವನ್ನು ಸ್ನೇಹಿತರ ಮುಂದಿಟ್ಟ.‘ಡಜನ್ ಮಂದಿ ಐಎಎಸ್‌ಗಳು ತಿರುಗಿ ಬಿದ್ದಿ­ರೋದು ಮಾತ್ರ್ರ ನಿನಗೆ ಗೊತ್ತು. ಡಜನ್ ಸಚಿವರೂ ಅಯ್ಯ ಅವರ ಮಾತು ಕೇಳ್ತಾ ಇಲ್ಲಾ ಅನ್ನೋದು ನಿನಗೆ ಗೊತ್ತಿಲ್ಲವಾ? ಸಚಿವ­ರನ್ನು ಕಂಟ್ರೋಲ್ ಮಾಡೋಕ್ಕಾಗುತ್ತಾ? ವಿಧಾನ­ಸೌಧದ ಕೊಠಡಿ­­ಯನ್ನೇ ಒಡೆದು ತಮಗೆ ಬೇಕಾದಂತೆ ಕಟ್ಟಿಕೊಂಡರು. ಏನ್ ಮಾಡೋಕ್ಕಾ­ಗುತ್ತೇ? ಈ ಹಿಂದಿನ ಸರ್ಕಾರ ಇದ್ದಾ­ಗಲೂ ಬಹುತೇಕ ಸಚಿವರು ಬಂಗಲೆಗಳನ್ನು ಸರ್ಕಾರಿ ದುಡ್ಡಿ­ನಲ್ಲಿ ನವೀಕರಿಸಿಕೊಳ್ಳೋದರಲ್ಲೇ ಅಧಿಕಾರ ಪೂರ್ತಿ ಕಳೆದರು. ಇನ್ನು ಅಭಿವೃದ್ಧಿ ಎಲ್ಲಿಂದ ಮಾಡ್ತಾರೆ?’ ಪೆಕರನ ಸ್ನೇಹಿತ ದಬಾಯಿಸಿದ.‘ಸರ್ಕಾರಿ ಬಂಗಲೆ ನವೀಕರಣದ ಹೆಸರಿನಲ್ಲಿ ನಡೆ­ಯುತ್ತಿ­ರು­­ವು­ದೆಲ್ಲಾ ‘ಸ್ವಾಹಾಕಾರ್ಯ’ ಅನ್ನೋದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ನವೀಕರಣದ ಹೆಸರಿನಲ್ಲಿ ಬಂಗಲೆ ಸೇರುವ ಲಕ್ಷಾಂತರ ರೂಪಾಯಿ ದುಬಾರಿ ಪೀಠೋಪ­ಕರಣ­­ಗಳು, ಐಷಾರಾಮಿ ವಸ್ತುಗಳು, ಸಚಿವರು ಮನೆ ಖಾಲಿ­ಮಾಡು­­ವಾಗ ಅವರ ಸ್ವಗೃಹಕ್ಕೆ ಸ್ಥಳಾ­ಂತರ­­ವಾಗುತ್ತದೆ. ಇವರ ದಗಲ್ಬಾಜಿ ನಮಗೆ ಗೊತ್ತಿಲ್ಲವಾ? ಬೇರೆ ಕಡೆ ಇದೆ ಅವರ ಮನೆ. ಸರ್ಕಾರಿ ಬಂಗಲೆಯಲ್ಲಿರೋದು ಹಾಗೇ ಸುಮ್ಮನೆ’ ಎಂದು ಮತ್ತೊಬ್ಬ ಸ್ನೇಹಿತ ಖಾರವಾಗಿ ಪ್ರತಿಕ್ರಿಯಿಸಿದ.‘ಬಹುತೇಕ ಸಚಿವರು, ಎಲ್ಲ ಶಾಸಕರು ಬೆಂಗಳೂರಿನಲ್ಲಿ ಒಂದು ಸ್ವಂತ ಮನೆ ಕಟ್ಟಿ­ಕೊಂಡಿ­ದ್ದಾರೆ. ಜೊತೆಗೆ ಅದು ಸಾಲದೂ ಅಂತಾ ಸಿಎಂಗೆ ದುಂಬಾಲು­ಬಿದ್ದು ಬಿಡಿಎ ಸೈಟು ಹೊಡ್ಕೊ­ಂಡಿ­ದ್ದಾರೆ. ಇನ್ನೂ ಸಾಲದು ಅಂಥಾ ಸ್ವಂತ ಮನೇಲಿ­ದ್ದುಕೊಂಡೇ ಸರ್ಕಾರದಿಂದ ಮನೆ ಬಾಡಿಗೆ ಎಣಿಸಿ­ಕೊಳ್ಳು­ತ್ತಿದ್ದಾರೆ. ಹುಟ್ಟಿದರೇ ಶಾಸಕನಾಗಿ ಹುಟ್ಟಬೇಕು...’ ಎಂದು ಸ್ನೇಹಿತ ಹಾಡಲು ಶುರು ಮಾಡಿದ.‘ಲೋಕೋಪಯೋಗಿ ಇಲಾಖೆ ಸಚಿವರ ಮನೆ ದುರಸ್ತಿ ವಿಷಯ ಒಂದ್‌ಕಡೆ ಇರ್ಲಿ ಮಾರಾಯ. ವಿಧಾನ ಸಭೆ ಮೇಲ್ಮನೆ ಆಧುನೀಕರಣಕ್ಕೇ ಕೋಟ್ಯಂತರ ರೂಪಾಯಿ ಖರ್ಚು ಮಾಡ್ತಾ ಇದಾರಲ್ಲಾ? ಕಮಿಷನ್ ಯಾರಿಗೆ ಹೋಗುತ್ತೆ? ಮೇಲ್ಮನೆ ಸಭಾಂಗಣಕ್ಕೆ ಜರ್ಮನಿ ಮೈಕೇ ಬೇಕಂತೆ. ವಿಧಾನ­ಮಂಡಲ ಸದಸ್ಯರ ಆಸನಗಳಿಗೆ ಹೊದಿಸಲು ಇಟಲಿ­ಯಿಂದಲೇ ಚರ್ಮ ಆಮದು ಮಾಡಿಕೊಳ್ಳುತ್ತಿ­ದ್ದಾರೆ. ಪರಿಷತ್ತಿನ ನೆಲ­ಹಾಸು ಅಮೆರಿಕದಿಂದ ಆಮದಾಗ್ತಾ ಇದೆ. ಒಟ್ಟಿನಲ್ಲಿ ನಮ್ಮ ವಿಧಾನ­­­­ಸೌಧಕ್ಕೆ ಮೂರು ರಾಷ್ಟ್ರಗಳ ವಸ್ತು­ಗಳು ಬಂದು ಸೇರ್ತಾ ಇದೆ. ಜೈ ಪ್ರಜಾ­ಪ್ರಭುತ್ವ’ ಎಂದು ಪೆಕರ ವ್ಯಂಗ್ಯವಾಡಿದ.‘ಮೂರು ರಾಷ್ಟ್ರವಲ್ಲಾ, ಆರು ರಾಷ್ಟ್ರಗಳ ವಸ್ತುಗಳು ಬಂದು ಬಿದ್ರೂ, ನಮ್ ವಿಧಾನ­ಸ­ಭೇಲಿ ಕಿತ್ತಾಡೋದು ತಪ್ಪಲ್ಲಾ ಮಾರಾಯ. ಅಭಿವೃದ್ಧಿ ಬಗ್ಗೆ ಯಾರೂ ಚರ್ಚೆ ಮಾಡಲ್ಲ. ಸ್ವಯಂವೃದ್ಧಿ ಬಗ್ಗೆನೇ ಯೋಚ್ನೆ ಮಾಡ್ತಾರೆ’‘ವಿಧಾನಸಭೇಲಿ ಅವರು ಮಾಡೋದೇನು ಅಂತ ಹಿರೇಮಠರು ಈಗಾಗ್ಲೆ ಹೇಳ್ತಾನೇ ಇದ್ದಾರೆ. ಆದರೆ ಅವರು, ಸರ್ಕಾರಿ ನೌಕರರು ನಿಮ್ಮ ಹಳ್ಳಿಗಳಿಗೆ ಬಂದರೆ ಕಟ್ಟಿಹಾಕಿ, ಮೂರು­ದಿನ ಊಟ ಹಾಕಬೇಡಿ, ಸಾಲಾಗಿ ನಿಲ್ಲಿಸಿ ಕಡಿ­ಯಿರಿ’ ಎಂದು ವೀರಾವೇಶದಿಂದ ಹೇಳುತ್ತಾ ಜನದಂಗೆಗೆ ಪ್ರಚೋದಿ­ಸು­ತ್ತಿದ್ದಾರೆ. ತಾನು ಕಳ್ಳ ಪರರ ನಂಬ ಎನ್ನುವಂತಾಯಿತು ನಮ್ಮ ಜನಪ್ರತಿನಿಧಿಗಳ ಕಥೆ ಎಂದು ಪೆಕರ ಷರಾ ಬರೆದ.‘ಕಂಡೋರ ಬಂಗ್ಲೆ ವಿಷಯ ಮಾತನಾಡಿ ನಾವ್ಯಾಕೆ ನಾಲಿಗೆ ಕೆಡಿಸಿಕೊಳ್ಳಬೇಕು, ನಡೀರಿ ಎಲ್ಲಿಯಾದರೂ ಬೈಟು ಕಾಫಿ ಕುಡಿಯೋಣ’ ಎಂದು ಎಲ್ಲರೂ ಚದುರಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.