ಗುರುವಾರ , ಮೇ 13, 2021
40 °C

ಬೆಟ್ಟಕುರುಬ ಮಹಿಳೆ ಕಲಿಸಿದ ಸ್ವಾವಲಂಬನೆ ಪಾಠ

ಡಾ.ಆರ್.ಬಾಲಸುಬ್ರಹ್ಮಣ್ಯಂ Updated:

ಅಕ್ಷರ ಗಾತ್ರ : | |

ಬೆಟ್ಟಕುರುಬ ಬುಡಕಟ್ಟು ಪಂಗಡಕ್ಕೆ ಸೇರಿದ ಮಹಿಳೆ ಮೇಧಿಗೂ ಬಿದಿರಿಗೂ ಅವಿನಾಭಾವ ಸಂಬಂಧ. ಕಾಡಿನಲ್ಲಿ ಬಿದಿರು ಸಂಗ್ರಹಿಸುವುದು, ಅದನ್ನು ವಿವಿಧ ವಸ್ತುಗಳನ್ನಾಗಿ ಪರಿವರ್ತಿಸಿ ಮಾರುವುದು... ಇಂತಹ ಕಾಯಕದ ಸುತ್ತಲೇ ಆಕೆಯ ಬದುಕು ಹೆಣೆದುಕೊಂಡಿದೆ. ಒಟ್ಟಿನಲ್ಲಿ ಮೇಧಿ ಮತ್ತು ಆಕೆಯ ಕುಟುಂಬಕ್ಕೆ ಬಿದಿರೇ ಸರ್ವಸ್ವ.ಬಿದಿರಿನ ಚಿಗುರನ್ನು (ಕಳಲೆ) ಅವರು ತಿನ್ನುತ್ತಾರೆ, ಬಿದಿರಿನಿಂದ ಮನೆ ಬಳಕೆಯ ಹಲವಾರು ವಸ್ತುಗಳನ್ನು ಮಾಡಿ ಸ್ಥಳೀಯ ರೈತರಿಗೆ ಮಾರುತ್ತಾರೆ. ತಮ್ಮ ಮನೆಗಳನ್ನು ಕಟ್ಟಿ ಕೊಳ್ಳಲೂ ಅವರು ಬಿದಿರು ಬಳಸುತ್ತಾರೆ. ಇಷ್ಟ ದೈವವನ್ನು ಬರ ಮಾಡಿಕೊಳ್ಳುವಾಗ, ತಾವು ಬೆವರು ಬಸಿದು ಬೆಳೆದ ಬೆಳೆ ತಿನ್ನಲು ಬರುವ ಪುಂಡಾನೆಗಳನ್ನು ಬೆದರಿಸಿ ಓಡಿಸಲು ಬೇಕಾದ ಜೋರು ಶಬ್ದ ಮಾಡಲು... ಹೀಗೆ ನಾನಾ ಕಾರಣ ಗಳಿಗೆ ಬಿದಿರಿಗೂ ಅವರಿಗೂ ಬಿಡಲಾರದ ನಂಟು.ಎರಡು ಎಕರೆ ಕೃಷಿ ಭೂಮಿ ಹೊಂದಿದ್ದ ಮೇಧಿ ತನ್ನ ಗಂಡ ಮತ್ತು ಮೂವರು ಮಕ್ಕ ಳೊಂದಿಗೆ ಸಂತೃಪ್ತ ಜೀವನ ನಡೆಸುತ್ತಿದ್ದಳು. ಬ್ರಹ್ಮಗಿರಿ ಹಾಗೂ ಹೊಸಹಳ್ಳಿ ಬುಡಕಟ್ಟು ಶಾಲೆಯ ನಡುವೆ ಆಕೆಯ ಮನೆ ಇತ್ತು. ಬಿದಿರಿನ ಮೆಳೆಗಳ ಮೇಲೆ ಕಟ್ಟಿಕೊಂಡಿದ್ದ ಹುಲ್ಲು ಹೊದಿಕೆಯ ಮನೆಯನ್ನು ಆ ಕುಟುಂಬ ಪ್ರತಿ ಮುಂಗಾ ರಿನ ನಂತರ ದುರಸ್ತಿ ಮಾಡಿಕೊಳ್ಳುವುದನ್ನು ಹಲವಾರು ವರ್ಷಗಳಿಂದ ನಾನು ಕಂಡಿದ್ದೆ.

 

ಇದರಿಂದ ಮರುಗಿದ ನಾನು ಅವರಿಗೊಂದು `ಪಕ್ಕಾ~ ಮನೆಯ ಅಗತ್ಯ ಇದೆ ಎಂದು ಮನಗಂಡಿದ್ದೆ. ಆಗ 1994- 95ರ ಕಾಲವಾಗಿತ್ತು, ಆಗಷ್ಟೇ ಮಹಿಳೆ ಯರಿಗಾಗಿ ಸ್ವಸಹಾಯ ಗುಂಪುಗಳನ್ನು ರಚಿಸಲು ನಾವು ಆರಂಭಿಸಿದ್ದೆವು.

 

ತನ್ನ ಬುಡಕಟ್ಟು ಹಾಡಿ ಯಲ್ಲಿ ಆರಂಭಿಸಿದ್ದ ಇಂತಹ ಸ್ವಸಹಾಯ ಗುಂಪೊಂದಕ್ಕೆ ಮೇಧಿಯೂ ಸದಸ್ಯಳಾಗಿದ್ದಳು. ಈ ಮಹಿಳೆಯರಿಗಾಗಿ ನಾವು ಗೃಹ ನಿರ್ಮಾಣ ಯೋಜನೆಯೊಂದನ್ನು ರೂಪಿಸಿದ್ದೆವು. ನಮ್ಮ ಈ ಆರ್ಥಿಕ ನೆರವಿನ ಲಾಭ ಮೇಧಿಯ ಕುಟುಂಬಕ್ಕೂ ದಕ್ಕಲಿ ಎಂಬುದು ನಮ್ಮ ಅಭಿಲಾಷೆಯಾಗಿತ್ತು.ಸ್ಥಳೀಯ ಸಂದರ್ಭಗಳು ಮತ್ತು ಬುಡಕಟ್ಟು ಜನರ ಸಾಮರ್ಥ್ಯದ ಸರಿಯಾದ ಅರಿವಿಲ್ಲದೆ ನಾವು ನಮ್ಮ ಎಂಜಿನಿಯರುಗಳು ಅಥವಾ ನಿರ್ಮಾಣ ತಂಡ ರೂಪಿಸಿದ ಮಾದರಿಯಲ್ಲೇ ಅವರಿಗೆ ಮನೆಗಳನ್ನು ನಿರ್ಮಿಸಿಕೊಡಬೇಕು ಎಂದು ನಿರ್ಧರಿಸಿದ್ದೆವು. ಮೇಧಿಯನ್ನು ನಾವು ಭೇಟಿಯಾಗಿ `ಚೆನ್ನಾಗಿ ಬಾಳಿಕೆ ಬರುವ ಗಟ್ಟಿಯಾದ ಮನೆಯ ಅಗತ್ಯ ನಿನಗಿದೆಯೇ~ ಎಂದು ಕೇಳಿದಾಗ, ಆಕೆ ಹೇಳಿದ ಮಾತು ನನಗಿನ್ನೂ ಚೆನ್ನಾಗಿ ನೆನಪಿದೆ.ನಮ್ಮ ಉದ್ದೇಶದಿಂದ ಆಕೆಗೆ ಸಂತಸವೇನೋ ಆಯಿತಾದರೂ ತಾನು ವಾಸಿಸುತ್ತಿದ್ದ ಮನೆ ಗಟ್ಟಿಯಾಗಿರಲಿಲ್ಲ ಎಂದಾಗಲಿ ಅಥವಾ ವಾಸಯೋಗ್ಯವಾದುದಲ್ಲ ಎಂದಾಗಲಿ ಆಕೆಗೆ ಎಂದೂ ಅನಿಸಿರಲೇ ಇಲ್ಲ. ನಾವು `ಮನೆ ನಿರ್ಮಾಣಕ್ಕೆ ಎಷ್ಟು ಹಣ ಖರ್ಚು ಮಾಡು ತ್ತಿದ್ದೇವೆ~ ಎಂದಾಕೆ ಕೇಳಿದಳು. `ಸುಮಾರು 20 ಸಾವಿರ ರೂಪಾಯಿ~ ಎಂದು ನಾವು ತಿಳಿಸಿದೆವು.ಆಗ ಮೇಧಿ ಅತ್ಯಂತ ಸರಳವಾದ ಒಂದು ಪ್ರಶ್ನೆ ಕೇಳಿದಳು. ತಾನು ನಿಜವಾಗಲೂ ಚೆನ್ನಾಗಿರುವ ಮನೆಯಲ್ಲಿ ವಾಸಿಸಬೇಕೆಂದು ನಾವು ಬಯಸು ತ್ತಿದ್ದೇವೆಯೋ ಅಥವಾ ದೃಢವಾದದ್ದು ಎಂದು ನಾವು ನಂಬಿರುವ ಹಾಗೂ ನಮ್ಮ ಅಭಿವೃದ್ಧಿ ಯೋಜನೆಯ ಭಾಗವಾದ ಒಂದು ಮನೆಯನ್ನು ಆಕೆಗೆ ಕೊಡುವುದೇ ನಮ್ಮ ಉದ್ದೇಶವೋ ಎಂದಾಕೆ ಪ್ರಶ್ನಿಸಿದಳು. ಆಕೆ ಇಷ್ಟಪಡುವ ರೀತಿ ಯಲ್ಲೇ ಮನೆ ಇರಬೇಕೆಂಬುದು ನಮ್ಮ ಉದ್ದೇಶ ವಾಗಿತ್ತಾದರೂ ಈ ಪ್ರಶ್ನೆ ನಮ್ಮ ನಿರೀಕ್ಷೆಗೆ ಮೀರಿತ್ತಾದ್ದರಿಂದ ಸಹಜವಾಗಿಯೇ ನಮಗೆ ಇರುಸುಮುರುಸು ಉಂಟಾಯಿತು.`ಮನೆ ಕಟ್ಟಲು ನೀವು ಖರ್ಚು ಮಾಡುವ 20 ಸಾವಿರ ರೂಪಾಯಿಯನ್ನು ನನಗೇ ಕೊಟ್ಟುಬಿಡಿ, ಅದ ರಿಂದ ನನಗೆ ಬೇಕಾದ ರೀತಿಯಲ್ಲಿ ನಾನೇ ಮನೆ ಕಟ್ಟಿಕೊಳ್ಳುತ್ತೇನೆ~ ಎಂದು ಹೇಳಿದಳು. ಆಗ ನನ್ನ ಮುಖದಲ್ಲಿ ಕಂಡ ಅಪನಂಬಿಕೆಯನ್ನು ಗಮನಿಸಿದ ಮೇಧಿ, ತನ್ನ ಮನದಿಂಗಿತವನ್ನು ಸೌಮ್ಯವಾಗೇ ನನಗೆ ವಿವರಿಸಿದಳು.

ತಾನು ಹಾಗೂ ತನ್ನ ಜನ ಶತಶತಮಾನಗಳಿಂದಲೂ ಅರಣ್ಯದ ಪ್ರತಿಕೂಲ ವಾತಾವರಣದಲ್ಲೇ ಬದುಕುತ್ತಾ ಬಂದವರು, ಹೀಗಾಗಿ ತಮ್ಮನ್ನು ತಾವು ಹೇಗೆ ರಕ್ಷಿಸಿಕೊಳ್ಳ ಬೇಕು ಎಂಬ ಅರಿವು ತಮಗೆ ಚೆನ್ನಾಗಿಯೇ ಇದೆ; ಅಲ್ಲದೆ ಒಂದು ಒಳ್ಳೆಯ ಮನೆಯನ್ನು ಸ್ವತಃ ಕಟ್ಟಿಕೊಳ್ಳುವ ಜ್ಞಾನ ಮತ್ತು ಕೌಶಲವೂ ತಮಗಿದೆ, ಅದಕ್ಕೆ ತಕ್ಕಂತೆ ಅಗತ್ಯ ಹಣದ ನೆರವು ಸಹ ಸಿಕ್ಕರೆ ಒಳ್ಳೆಯ ಮೇಲ್ಛಾವಣಿ ಮತ್ತು ಸಿಮೆಂಟ್ ಗೋಡೆಗಳನ್ನೇ ಕಟ್ಟಿಕೊಳ್ಳುತ್ತೇವೆ ಎಂದಾಕೆ ವಿವರಿಸಿದಳು. ನಾವು ಕೊಡುವ ಹಣದಿಂದ ಇದನ್ನೇ ತಾನೇ ನಾವು ನಿರೀಕ್ಷಿಸುವುದು ಎಂಬರ್ಥವೂ ಆಕೆಯ ಮಾತಿನಲ್ಲಿ ಧ್ವನಿಸುತ್ತಿತ್ತು.ಆ ದಿನಗಳಲ್ಲಿ ನನಗೆ ಜನರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಅನುಭವ ಆಗಿರಲಿಲ್ಲ ಮತ್ತು ಅವರ ಎಲ್ಲ ಸಮಸ್ಯೆಗಳಿಗೂ ನನ್ನ ಬಳಿ ಉತ್ತರ ಇದೆ ಎಂದೇ ನಾನು ಭಾವಿಸಿದ್ದೆ. ಜನರ ಮಾತುಗಳನ್ನು ಕೇಳಿಸಿಕೊಳ್ಳುವ, ಅವರ ಸಮಸ್ಯೆ ಗಳನ್ನು ಅವರದೇ ದೃಷ್ಟಿಕೋನದಿಂದ ಅರ್ಥೈ ಸುವ, ಅವುಗಳಿಗೆ ಅವರ ಶಕ್ತ್ಯನುಸಾರ ಮತ್ತು ಅವಶ್ಯಕತೆಗೆ ತಕ್ಕಂತೆ ಪರಿಹಾರ ಕಂಡುಕೊಳ್ಳುವ ಕಲೆಗಾರಿಕೆ ಇನ್ನೂ ನನಗೆ ಸಿದ್ಧಿಸಿರಲಿಲ್ಲ.ಹೀಗಾಗಿ ಮೇಧಿಗೆ 20 ಸಾವಿರ ರೂಪಾಯಿ ಕೊಡುವುದು ದಂಡ ತೆತ್ತಂತೆ ಎಂದೇ ನಾನು ಭಾವಿಸಿದ್ದೆ. ಒಲ್ಲದ ಮನಸ್ಸಿನಿಂದಲೇ ಆಕೆಗೆ ಮುಂಗಡ ಹಣ ಕೊಡಲು ಒಪ್ಪಿಕೊಂಡೆ. ಆದರೆ ಅಚ್ಚರಿ ಎಂಬಂತೆ, ನಾವು ಆಕೆಗೆ ಕೊಟ್ಟ ಹಣದಿಂದ ಇತರೆಡೆ ನಾವು ಕಟ್ಟುತ್ತಿದ್ದ ಮನೆಗಳಿಗಿಂತಲೂ ದೊಡ್ಡದಾದ (ಇಂದಿಗೂ ಚೆನ್ನಾಗಿಯೇ ಇರುವ) ಮನೆಯನ್ನು ಆಕೆ ಕಟ್ಟಿದ್ದಳು.ಮೇಧಿ ಮತ್ತು ಆಕೆಯ ಮನೆಯವರೆಲ್ಲ ಸೇರಿ ಮನೆಯ ವಿನ್ಯಾಸವನ್ನು ಸಿದ್ಧಪಡಿಸಿದ್ದುದಷ್ಟೇ ಅಲ್ಲ, ಅದರ ಪ್ರತಿ ಕೆಲಸ ವನ್ನೂ ಖುದ್ದಾಗಿ ನಿಂತು ಮಾಡಿದ್ದರು. ಇದು ಗಾಂಧೀಜಿ ಅವರು ಸಾಕಷ್ಟು ಬರೆದಿರುವ, ನಿಜ ವಾದ ಅರ್ಥದ ಸ್ವಾವಲಂಬನೆಯ ಸಂದೇಶವೇ ಆಗಿತ್ತು.ಸ್ವಾವಲಂಬನೆ ಎಂಬುದು ವ್ಯಕ್ತಿಯೊಬ್ಬನ ಸಾಮರ್ಥ್ಯ ಅಥವಾ ಆರ್ಥಿಕ ಸ್ವಾತಂತ್ರ್ಯ ಗಳಿಸುವುದಷ್ಟೇ ಅಲ್ಲ,. ಅದನ್ನೂ ಮೀರಿದ ರೀತಿಯಲ್ಲಿ, ಅತ್ಯಂತ ಆಳವಾದ ಮಾನಸಿಕ ನೆಲೆಗಟ್ಟಿನಲ್ಲಿ ಸ್ವಾತಂತ್ರ್ಯದ ಪರಿಕಲ್ಪನೆಯನ್ನು ಅನುಭವಿಸುವುದೇ ಆಗಿದೆ.

 

ಸ್ವಾವಲಂಬನೆಯನ್ನು ಕೇವಲ ದೈಹಿಕ ಅಥವಾ ಆರ್ಥಿಕ ಮಾನ ದಂಡಗಳಲ್ಲಿ ಅಳೆಯಲು ಸಾಧ್ಯವಿಲ್ಲ. ಅದು ಇಂತಹ ತತ್ವಗಳ ಆಧಾರದ ಮೇಲೇ ರೂಪು ಗೊಂಡಿರುವ ಸಮುದಾಯಗಳನ್ನು ಪ್ರತಿನಿಧಿ ಸುವುದರಿಂದ, ಈ ಜನರಲ್ಲಿ ಅಂತರ್ಗತವಾಗಿ ಹೋಗಿರುವ ಸಾಮರ್ಥ್ಯದ ನೆಲೆಯಲ್ಲೇ ಅದನ್ನು ವಿಶ್ಲೇಷಿಸ ಬೇಕಾಗುತ್ತದೆ.ಮೇಧಿ ಸ್ವಸಾಮರ್ಥ್ಯ ಮತ್ತು ಕೌಶಲಪೂರ್ಣ ವಾದ ಒಬ್ಬ ವ್ಯಕ್ತಿಯಷ್ಟೇ ಅಲ್ಲ, ಬುಡಕಟ್ಟು ಮಹಿಳೆ ಆದ ಕಾರಣದಿಂದಲೇ ದೊರೆತ ಜ್ಞಾನ, ಅರಿವು ಹಾಗೂ ಸ್ಥಿತಿಸ್ಥಾಪಕ ಗುಣದ ಪ್ರತಿನಿಧಿ ಯೂ ಆಗಿದ್ದಾಳೆ. 50 ಸಾವಿರಕ್ಕೂ ಹೆಚ್ಚು ವರ್ಷಗಳ ಮಾನವ ವಿಜ್ಞಾನದ ಇತಿಹಾಸವೇ ಆಕೆಯ ಬೆನ್ನಿಗಿದೆ.ಇದು ಆಕೆಗೆ ಅಪರಿಮಿತವಾದ ವಿಶ್ವಾಸವನ್ನಷ್ಟೇ ಅಲ್ಲ, ತನ್ನ ಸ್ವಾವಲಂಬನೆಯ ಮನೋಬಲವನ್ನು ಮೂರ್ತ ರೂಪದಲ್ಲಿ ಸಾಕಾರಗೊಳಿಸುವ ಶಕ್ತಿಯನ್ನೂ ಆಕೆಗೆ ಒದಗಿಸಿ ಕೊಟ್ಟಿದೆ. ಆದರೆ, ಅದಕ್ಕೆ ನಿಮಿತ್ತಮಾತ್ರವಾಗಿ ಬೇಕಾಗಿರುವುದು ನನ್ನಂತಹ ಹೊರಗಿನವರ ಅಲ್ಪ ಪ್ರಮಾಣದ ಸಹಾಯಹಸ್ತ ಮಾತ್ರ.ದುರದೃಷ್ಟಕರ ಸಂಗತಿಯೆಂದರೆ ಸರ್ಕಾರ ವಾಗಲಿ ಅಥವಾ ಸರ್ಕಾರೇತರ ಸಂಸ್ಥೆಗಳಾಗಲಿ ಸಮುದಾಯಗಳಲ್ಲಿ ಬೆಸೆದುಹೋಗಿರುವ ಇಂತಹ ಗಹನವಾದ ಮತ್ತು ಆಳವಾದ ಸಾಮ ರ್ಥ್ಯವನ್ನು ಅರ್ಥಮಾಡಿಕೊಳ್ಳುವ ಗೋಜಿಗೇ ಹೋಗಿಲ್ಲ.

 

ಒಂದು ವೇಳೆ ಅಭಿವೃದ್ಧಿಯ ಹೆಸರಿನಲ್ಲಿ ಸಮುದಾಯಗಳಿಗಾಗಿ ನಾವು ರೂಪಿಸುವ ಅಸಂಖ್ಯಾತ ಯೋಜನೆಗಳ ಭಾಗವಾಗಿ ನಾವು ಇವರ ಆಗುಹೋಗುಗಳನ್ನು ಆಲಿಸಿ, ಅದಕ್ಕೆ ತಕ್ಕಂತೆ ಪ್ರತಿಕ್ರಿಯಿಸಿದರೆ ಎಂತಹ ಅಚ್ಚರಿಗಳನ್ನು ಸಾಧಿಸಬಹುದು ಅಲ್ಲವೇ? ಬಹಳಷ್ಟು ಹಿಂದಿನಿಂದಲೂ ಜನ ಸಮಸ್ಯೆಗಳಿಗೆ ತಮ್ಮದೇ ರೀತಿಯಲ್ಲಿ ಪರಿಹಾರ ಕಂಡು ಕೊಳ್ಳುತ್ತಾ ಬಂದಿದ್ದಾರೆ.

 

ಅಷ್ಟೇ ಅಲ್ಲ, ದಿನನಿತ್ಯವೂ ಅವುಗಳೊಂದಿಗೆ ಹೆಣಗಾಡುತ್ತಲೇ ಅವುಗ ಳನ್ನು ನಿಭಾಯಿಸಿಕೊಂಡು ಬಂದಿದ್ದಾರೆ ಎಂಬ ವಾಸ್ತವ ಸಂಗತಿಯನ್ನೂ ನಾವು ಅರ್ಥ ಮಾಡಿ ಕೊಳ್ಳಬೇಕು. ಸೇವೆ ಮಾಡಲು ನಾವು ಮುಂದಾಗುವಾಗ ಈ ಸೂಕ್ಷ್ಮವಾದ ಸ್ವಾವಲಂಬನೆಯ ಚೌಕಟ್ಟಿಗೆ ಯಾವುದೇ ಧಕ್ಕೆಯಾ ಗದಂತೆ ನೋಡಿಕೊಳ್ಳಬೇಕಾದದ್ದು ನಮ್ಮ ಧರ್ಮ.

 

ಏಕೆಂದರೆ ಇಂತಹ ಸಮುದಾಯಗಳಿಗೆ ಸ್ವಾವಲಂಬನೆ ಎಂಬುದು ಅವರ ಘನತೆ ಮತ್ತು ಆತ್ಮಾಭಿಮಾನದೊಂದಿಗೇ ಮಿಳಿತವಾಗಿ ಹೋಗಿ ರುವ ಸಂಗತಿ. ಆದ್ದರಿಂದ ನಮ್ಮ ಅಭಿವೃದ್ಧಿಯ ಪ್ರಯತ್ನಗಳಿಂದ ಒಡಮೂಡುವ ಫಲಿತಾಂಶ ಅವರ ಆತ್ಮಾಭಿಮಾನವನ್ನು ಕುಂದಿಸಿ ಅಶಕ್ತರ ನ್ನಾಗಿಸುವಂತೆ ಇರಬಾರದು.ನನ್ನ ಅನುಭವದಿಂದಲೇ ಹೇಳುವುದಾದರೆ, ತಮ್ಮ ಅಭಿವೃದ್ಧಿಯ ಅಗತ್ಯವನ್ನು ಅರಿಯುವ ಸಾಮರ್ಥ್ಯ ಸಹ ಸಮುದಾಯಗಳಿಗೆ ರಕ್ತಗತ ವಾಗಿಯೇ ಬಂದಿರುತ್ತದೆ. ಆದರೂ ಒಟ್ಟಾರೆ ಆಗಬೇಕಾದ ಬಾಹ್ಯ ಪರಿವರ್ತನೆ ಏನೆಂದರೆ, ನಮ್ಮಂತಹ ಮಧ್ಯವರ್ತಿಗಳು ಈ ಸಮುದಾ ಯಗಳನ್ನು ಸೂಕ್ಷ್ಮವಾಗಿ ಅವಲೋಕಿಸಬೇಕು ಮತ್ತು ಅವುಗಳಿಂದ ಸಾಕಷ್ಟು ಕಲಿಯಬೇಕು.ಈ ಮೂಲಕ ನಾವು ಕಂಡುಕೊಳ್ಳುವ ಸಂಗತಿಗಳನ್ನು ಅಗತ್ಯ ಎನಿಸಿದಾಗ ಮಾತ್ರ ಮಧ್ಯಪ್ರವೇಶಿಸಿ ಸಾಂದರ್ಭಿಕ ಪ್ರಸ್ತುತತೆ ಮತ್ತು ಸಾಂಸ್ಕೃತಿಕವಾಗಿ ಸೂಕ್ತ ಎನಿಸುವ ಸಮಯ, ಸಂದರ್ಭಕ್ಕೆ ತಕ್ಕಂತೆ ಅವರ ಒಳಿತಿಗಾಗಿ ಅದನ್ನು ಬಳಸಬೇಕು.ಹೀಗೆ ಮಾನವ ಅಭಿವೃದ್ಧಿಗೆ ಸಂಬಂಧಿಸಿದ ಸಂಕೀರ್ಣ ಸಮಸ್ಯೆಗಳಲ್ಲಿ ನಾನು ಸಿಲುಕಿ ಕೊಂಡಾಗಲೆಲ್ಲ ಮೇಧಿ ನನಗೆ ಕಲಿಸಿದ ಪಾಠ ಸದಾ ನನಗೆ ನೆನಪಾಗುತ್ತಲೇ ಇರುತ್ತದೆ.(ನಿಮ್ಮ ಅನಿಸಿಕೆಗಳನ್ನು ತಿಳಿಸಿ: editpagefeedback@prajavani.co.in)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.