ಭಾನುವಾರ, ಮೇ 9, 2021
28 °C

ಮತಾಂತರ

ಗುರುರಾಜ ಕರ್ಜಗಿ Updated:

ಅಕ್ಷರ ಗಾತ್ರ : | |

ಚಂದ್ರಶೇಖರ ಭಾರತಿ ಮಹಾಸ್ವಾಮಿಗಳು ಶೃಂಗೇರಿಪೀಠದ ಹಿಂದಿನ ಜಗದ್ಗುರುಗಳಾಗಿದ್ದವರು. ಅವರು ಬ್ರಹ್ಮಜ್ಞಾನವನ್ನು ಪಡೆದು ಜೀವನ್ಮುಕ್ತರಾದವರು.ಅವರ ದರ್ಶನ ಮಾತ್ರದಿಂದಲೇ ಜೀವನವನ್ನು ಬದಲಾಯಿಸಿಕೊಂಡವರು ಅನೇಕ. ಅವರೊಂದು ಚಲಿಸುವ ದೈವವಾಗಿದ್ದವರು. ಅಧ್ಯಾತ್ಮದಲ್ಲಿ ಎಂತೋ ಅಂತೆಯೇ ಆಶ್ರಮ ನಿರ್ವಹಣೆಯಲ್ಲಿ, ಸಮಾಜ ಪರಿವರ್ತನೆಯ ವಿಷಯದಲ್ಲಿ, ದೀನಜನರಿಗೆ ತೋರುವ ಅನುಕಂಪೆಯಲ್ಲೂ ಅದ್ವಿತೀಯರಾಗಿದ್ದವರು.ಅವರ ದರ್ಶನಕ್ಕಾಗಿ, ಆಶೀರ್ವಾದಕ್ಕಾಗಿ ಶ್ರೀಮಠಕ್ಕೆ ಬರುತ್ತಿದ್ದ ಜನ ಅಪಾರ, ಆದಷ್ಟೂ ಮಟ್ಟಿಗೆ ಜನರಿಗೆ ದರ್ಶನವನ್ನಿತ್ತು, ಸೂಕ್ತ ಮಾರ್ಗದರ್ಶನ ನೀಡಿ ಸಮಾಧಾನವನ್ನು ನೀಡುತ್ತಿದ್ದರು ಗುರುಗಳು.

 

ಒಂದು ಬಾರಿ ಯುರೋಪ್ ದೇಶಗಳಿಂದ ಅನೇಕ ಜನ ತರುಣ-ತರುಣಿಯರು ಶೃಂಗೇರಿಗೆ ಬಂದರು. ಅದರಲ್ಲಿ ಒಬ್ಬಾತ ಹಿಂದೂ ಧರ್ಮದ ಬಗ್ಗೆ ಒಂದಿಷ್ಟು ಪುಸ್ತಕಗಳನ್ನು ಓದಿ ಪ್ರಭಾವಿತನಾದವನು. ಅವರೆಲ್ಲ ಮಹಾಸ್ವಾಮಿಗಳನ್ನು ನೋಡಲು ಮಠಕ್ಕೆ ನಡೆದರು.ಮಹಾಸ್ವಾಮಿಗಳು ದರ್ಶನವನ್ನಿತ್ತು ಹರಸಿದರು. ಈ ತರುಣ ಸ್ವಲ್ಪ ಹಿಂದೆ ಉಳಿದು ತನ್ನ ಸಂಗಡಿಗರು ಹೊರಗೆ ಹೋದ ಮೇಲೆ ತಾನೊಬ್ಬನೇ ಶ್ರೀಗಳವರನ್ನು ಬೆಟ್ಟಿಯಾಗಿ ಮಾತನಾಡಿದ,  `ಮಹಾಸ್ವಾಮಿ, ನಾನು ಹಿಂದೂ ಧರ್ಮದ ಬಗ್ಗೆ ಕೊಂಚ ಓದಿಕೊಂಡಿದ್ದೇನೆ. ಅದು ಬಹು ವಿಶಾಲವಾದದ್ದು ಎಂಬ ನಂಬಿಕೆ ಬಂದಿದೆ. ಆದ್ದರಿಂದ ನಾನು ಈ ಧರ್ಮವನ್ನು ಸ್ವೀಕರಿಸಬೇಕು ಎಂದು ತೀರ್ಮಾನ ಮಾಡಿದ್ದೇನೆ. ತಾವು ದಯವಿಟ್ಟು ಅನುಮತಿ ನೀಡಬೇಕು~ ಎಂದು ಕೇಳಿಕೊಂಡ.ಅವನ ಮಾತನ್ನು ಸಮಾಧಾನದಿಂದ ಕೇಳಿಸಿಕೊಂಡ ಚಂದ್ರಶೇಖರ ಭಾರತೀ ಸ್ವಾಮಿಗಳು, `ಈಗ ನೀವು ಇರುವುದು ಯಾವ ಧರ್ಮದಲ್ಲಿ?~ ಎಂದು ಕೇಳಿದರು.

 `ಕ್ರೈಸ್ತ ಧರ್ಮ~ ಎಂದನಾತ. `ನಿಮ್ಮ ತಂದೆ-ತಾಯಿಯರ ಧರ್ಮ ಯಾವುದು?~ ಮತ್ತೆ ಕೇಳಿದರು ಸ್ವಾಮೀಜಿ.

 `ಅವರೂ ಕ್ರೈಸ್ತ ಧರ್ಮದ ಅನುಯಾಯಿಗಳೇ~ ಎಂದ ತರುಣ.

 `ನೀವು ಕ್ರೈಸ್ತ ಧರ್ಮವನ್ನು ಚೆನ್ನಾಗಿ ಅಧ್ಯಯನ ಮಾಡಿದ್ದೀರಾ?~ ಕೇಳಿದರು ಸ್ವಾಮಿಗಳು. `ಇಲ್ಲ, ನನಗೆ ಹೆಚ್ಚು ಗೊತ್ತಿಲ್ಲ. ಚರ್ಚಿಗೆ ಹೋದಾಗ ಕೇಳಿದ್ದೆಷ್ಟೋ ಅಷ್ಟೇ. ಅದೂ ಅಲ್ಲದೇ ನನಗೆ ಅದನ್ನು ಅಧ್ಯಯನ ಮಾಡಲು ಆಸಕ್ತಿಯೇ ಬರಲಿಲ್ಲ.~

 `ನೋಡಿ, ನಿಮಗೆ ಈಗಾಗಲೇ ಇಪ್ಪತ್ತಾರು-ಇಪ್ಪತ್ತೆಂಟು ವರ್ಷವಿರಬೇಕು. ನಿಮಗೆ ಅರಿವಿಲ್ಲದಂತೆ ಕ್ರೈಸ್ತಧರ್ಮದ ಕೆಲವು ರೀತಿ ರಿವಾಜುಗಳು, ಕೆಲವು ಸಂಸ್ಕಾರಗಳು ಬಂದುಬಿಟ್ಟಿರುತ್ತವೆ. ಅವುಗಳನ್ನೇ ಮುಂದುವರೆಸುವುದು ಸುಲಭ.ಯಾವ ಧರ್ಮವೂ ಕೆಟ್ಟದ್ದಲ್ಲ, ಯಾವುದೂ ಶ್ರೇಷ್ಠವಲ್ಲ. ಯಾವುದನ್ನೇ ನೀವು ಶ್ರದ್ಧೆಯಿಂದ ನಂಬಿ ಮುಂದುವರೆದರೆ ಅದೇ ಶ್ರೇಯಸ್ಸನ್ನು ಉಂಟುಮಾಡುತ್ತದೆ. ಅದ್ದರಿಂದ ನೀವು ಪರಧರ್ಮ ಸ್ವೀಕಾರ ಮಾಡುವುದು ಬೇಡ. ಮತಾಂತರದ ಅವಶ್ಯಕತೆ ಇಲ್ಲ~ ಎಂದು ಆಶೀರ್ವದಿಸಿ ಕಳುಹಿಸಿದರು.ಇದು ಒಬ್ಬ ಶ್ರೇಷ್ಠ ದಾರ್ಶನಿಕರ ಮಾತು. ಮತಾಂತರವೆನ್ನುವುದು ಇಂದು ಕೇವಲ ಕೆಲ ಸೌಲಭ್ಯಗಳನ್ನು ಪಡೆಯುವುದಕ್ಕೆ ಮಾಡುವ ತೋರಿಕೆ ಎಂದು ಕಾಣುವ ದಿನಗಳಲ್ಲಿ, ಒಂದು ಧರ್ಮದ ಗುರು, ಮತಾಂತರಕ್ಕಿಂತ ಧರ್ಮದ ನಿಜವಾದ ಅರ್ಥವನ್ನು ತಿಳಿಯುವುದು ಮುಖ್ಯ, ಶ್ರದ್ಧೆಯಿಂದ ನಡೆಯುವುದು ಶ್ರೇಷ್ಠ ಎಂದು ತಿಳಿಹೇಳಿದ್ದು ಎಷ್ಟು ಸಮಂಜಸ ಅಲ್ಲವೇ?ಪ್ರತಿಯೊಂದು ಶ್ರೇಷ್ಠ ಧರ್ಮ ಸಾರುವುದು ಅವೇ ತತ್ವಗಳನ್ನು. ಅಹಿಂಸೆ, ಪ್ರೀತಿ, ಕರುಣೆ, ಕ್ಷಮೆ, ಸಂಯಮ, ಶಾಂತಿ. ಹೀಗಾಗಿ ಯಾವುದನ್ನು ಪ್ರತಿಯೊಂದು ಧರ್ಮದಲ್ಲೇ ಸಾಧಿಸುವುದು ಸಾಧ್ಯವಿದ್ದಾಗ ಮತ್ತೊಂದಕ್ಕೆ ಹಾರುವುದರಲ್ಲಿ ಯಾವ ಸಾರ್ಥಕ್ಯವೂ ಇಲ್ಲ, ಸಾಧುವೂ ಅಲ್ಲ ಎಂಬುದನ್ನು ನಿರೂಪಿಸುತ್ತದೆ ಮೇಲಿನ ಪ್ರಸಂಗ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.