ಗುರುವಾರ , ಜೂನ್ 17, 2021
21 °C

ಮಾತಿನ ಕಲೆ

ಗುರುರಾಜ ಕರ್ಜಗಿ Updated:

ಅಕ್ಷರ ಗಾತ್ರ : | |

ವಿಶ್ವನಾಥ ಧಾರ್ಮಿಕ ವ್ಯಕ್ತಿ. ಅವನಿಗೆ ಕಾಶಿಯ ವಿಶ್ವೇಶ್ವರನ ದರ್ಶನವನ್ನು ಮಾಡುವ ಹೆಬ್ಬಯಕೆ. ಅವನಿಗೂ ವಯಸ್ಸಾಗುತ್ತ ಬಂತು.  ಎರಡು ವರ್ಷ­ಗಳ ಹಿಂದೆ ಅವನ ಹೆಂಡತಿ ತೀರಿ­ಹೋದಳು. ವಿಶ್ವನಾಥನಿಗೆ ಬದುಕಿನಲ್ಲಿ ಆಸಕ್ತಿಯೇ ಕಳೆದುಹೋಯಿತು. ಅವನಿಗೆ ಇಬ್ಬರು ಗಂಡುಮಕ್ಕಳಿದ್ದರು.  ಅವರಿ­ಬ್ಬರೂ ಇನ್ನೂ ಶಾಲೆ ಕಲಿಯುವವರು. ಅವರನ್ನು ಬೆಳೆಸಿ ದಾರಿಗೆ ಹಚ್ಚುವುದು ಅವನ ಜವಾಬ್ದಾರಿ.ಆ ಕಡೆಗೆ ಕಾಶಿಯ ವಿಶ್ವೇಶ್ವರ ಸೆಳೆತ, ಈ ಕಡೆಗೆ ಜವಾ­ಬ್ದಾರಿಯ ಎಳೆತ. ಹಾಗೂ ಹೀಗೂ ಒಂದು ವರ್ಷ ಕಳೆಯಿತು. ಒಂದು ದಿನ ಕಾಶಿಗೆ ಹೊರಡುವುದೆಂದು ತೀರ್ಮಾನ ಮಾಡಿದ. ಊರಿನಲ್ಲಿ ಬಾಬಾಸಾಹೇಬ ದೊಡ್ಡ ಮನುಷ್ಯ. ವಿಶ್ವನಾಥ ಅವನ ಮನೆಗೆ ತನ್ನ ಮಕ್ಕಳನ್ನು ಹಾಗೂ ಕೆಲವು ಸ್ನೇಹಿತರನ್ನು ಕರೆದುಕೊಂಡು ಹೋದ. ಬಾಬಾಸಾಹೇಬನಿಗೆ ನಮಸ್ಕಾರ ಮಾಡಿ ಹೇಳಿದ, ‘ಬಾಬಾಸಾಹೇಬ, ನಿಮ್ಮಿಂದ ನನಗೊಂದು ಉಪಕಾರವಾಗಬೇಕು. ನಾನೀಗ ಕಾಶಿಗೆ ಹೋಗಲು ನಿರ್ಧಾರ ಮಾಡಿದ್ದೇನೆ.  ಆದರೆ, ನನ್ನ ಮಕ್ಕಳನ್ನು ಏನು ಮಾಡಲಿ? ಅದಕ್ಕೇ ನಿಮ್ಮ ಬಳಿ ಬಂದಿದ್ದೇನೆ. ನನ್ನ ಹತ್ತಿರ ಸಾವಿರ ಬಂಗಾರದ ನಾಣ್ಯಗಳಿವೆ. ಅವುಗಳನ್ನು ನಿಮಗೆ ಒಪ್ಪಿಸುತ್ತೇನೆ. ನಾನು ಕಾಶಿ­ಯಿಂದ ಸುರಕ್ಷಿತವಾಗಿ ಮರಳಿ ಬಂದರೆ, ನಿಮ್ಮ ಬಳಿ ಬಂದು ಮಕ್ಕಳನ್ನು ಕರೆದುಕೊಂಡು ಹೋಗುತ್ತೇನೆ ಹಾಗೂ ನನ್ನ ಹಣದಲ್ಲಿ ನೂರು ನಾಣ್ಯಗಳನ್ನು ನಿಮಗೇ ಬಿಟ್ಟು ಹೋಗುತ್ತೇನೆ.ಒಂದು ವೇಳೆ ನಾನು ಯಾತ್ರೆಯಲ್ಲಿ ಸತ್ತು ಹೋದರೆ ನನ್ನ ಮಕ್ಕಳನ್ನು ನೀವೇ ನೋಡಿಕೊಳ್ಳಿ. ಅವರು ಪ್ರಾಪ್ತ  ವಯಸ್ಕರಾದ ಮೇಲೆ ಈ  ನಾಣ್ಯಗಳಲ್ಲಿ ನಿಮಗೆಷ್ಟು ಬೇಕೋ ಅಷ್ಟನ್ನು ಅವರಿಗೆ ಕೊಟ್ಟರೆ ಸಾಕು’. ಸಾವಿರ ಬಂಗಾರದ ನಾಣ್ಯಗಳನ್ನು ನೋಡಿದ ಬಾಬಾ­ಸಾಹೇಬನ ಬಾಯಿಯಲ್ಲಿ ನೀರೂರಿತು. ತನ್ನ ಸುತ್ತಮುತ್ತಲೂ ಇದ್ದವರನ್ನು ನೋಡಿ, ಅವರ ಅನುಮೋದನೆ ಪಡೆದ­ವನಂತೆ ಮಾಡಿ ಒಪ್ಪಿಕೊಂಡು ಸಾವಿರ ನಾಣ್ಯಗಳನ್ನು ಪಡೆದ.  ವಿಶ್ವನಾಥ ಕಾಶಿಗೆ ನಡೆದ. ಒಂದು ತಿಂಗಳಲ್ಲೇ ವಿಶ್ವನಾಥ ದಾರಿ­ಯಲ್ಲಿ ಅಪಘಾತದಲ್ಲಿ ಮಡಿದ ಸುದ್ದಿ ಬಂದಿತು. ಅವನ ಮಕ್ಕಳು ಬಾಬಾ­­ಸಾಹೇಬನ ಮನೆಯಲ್ಲಿಯೇ ಉಳಿ­ದರು. ಸಾವಿರ ಬಂಗಾರದ ನಾಣ್ಯ­ಗಳನ್ನು ಪಡೆದ ಬಾಬಾ­ಸಾಹೇಬರು ಬಹಳ ಸಂತೋಷದಲ್ಲಿದ್ದ. ವಿಶ್ವನಾಥನ ಮಕ್ಕಳು ಪ್ರಾಪ್ತ ವಯಸ್ಸಿಗೆ ಬಂದ ಮೇಲೆ ಹಿರಿಯರು, ಸ್ನೇಹಿತರು ಬಾಬಾ­ಸಾಹೇಬನ ಮನೆಗೆ ಬಂದು ಮಕ್ಕಳು ತಮ್ಮ ಬದುಕಿನ ದಾರಿ ಕಂಡುಕೊಳ್ಳಲು ಆದಷ್ಟು ಬಂಗಾರದ ನಾಣ್ಯಗಳನ್ನು ಕೊಡಲು ಕೇಳಿದರು.ಆಸೆಬುರುಕನಾಗದ್ದ ಬಾಬಾಸಾಹೇಬ ಒಳಗೆ ಹೋಗಿ ಹತ್ತು ನಾಣ್ಯಗಳನ್ನು ತಂದುಕೊಟ್ಟ. ಬಂದಿದ್ದವರೆಲ್ಲ ಗಾಬರಿ­ಯಾದರು. ‘ಇದು ಅನ್ಯಾಯವಲ್ಲವೇ? ಹುಡುಗರ ಆರೈಕೆಗೆ ಅಷ್ಟು ಖರ್ಚಾ­ಯಿತೇ? ವಿಶ್ವನಾಥ ನಿಮ್ಮನ್ನು ನಂಬಿ ತನ್ನ ಹಣವನ್ನೆಲ್ಲ ನಾಣ್ಯದ ರೂಪದಲ್ಲಿ ಕೊಟ್ಟಿದ್ದಾನಲ್ಲ?’ ಎಂದು ಕೇಳಿದರು. ಆಗ ಬಾಬಾಸಾಹೇಬ ಹೇಳಿದ, ‘ನೀವೆಲ್ಲ ಸಾಕ್ಷಿಯಾಗಿದ್ದಿರಿ. ವಿಶ್ವನಾಥ ನನಗೇನು ಹೇಳಿದ್ದ ಗೊತ್ತೇ? ಹುಡುಗರು ಪ್ರಾಪ್ತ ವಯಸ್ಕರಾದ ಮೇಲೆ ನಿನಗೆಷ್ಟು ಬೇಕೋ ಅಷ್ಟೇ ಅವರಿಗೆ ಕೊಟ್ಟರೆ ಸಾಕು ಎಂದಿದ್ದ.  ಅದಕ್ಕೇ ಹತ್ತು ನಾಣ್ಯ ಮಾತ್ರ ಕೊಡುತ್ತೇನೆ’.ವಿಶ್ವನಾಥ ಹೇಳಿದ್ದು ಹಾಗೆಯೇ ಇದ್ದುದರಿಂದ ಇವರಿಗೆ ಏನು ಹೇಳಲೂ  ತೋಚದೆ ದುಃಖಿಸುತ್ತ ಮನೆಗೆ ಬರುತ್ತಿರುವಾಗ ಎದುರಿಗೆ ಗುಂಡಣ್ಣ ಬಂದ, ವಿಷಯವನ್ನೆಲ್ಲ ತಿಳಿದು­ಕೊಂಡು ಅವರನ್ನೆಲ್ಲ ಮತ್ತೆ ಕರೆದು­ಕೊಂಡು ಬಾಬಾಸಾಹೇಬನ ಮನೆಗೆ ಬಂದ. ಅವನನ್ನು ಕೇಳಿದ, ‘ಸ್ವಾಮಿ, ಈ ಮಕ್ಕಳಿಗೆ ಹತ್ತು ನಾಣ್ಯ ಕೊಟ್ಟುಬಿಟ್ಟರೆ ನಿಮ್ಮ ಕಡೆಗೆ ಎಷ್ಟು ಉಳಿಯುತ್ತವೆ?’ ಅನಾಸಕ್ತಿಯಿಂದ ಬಾಬಾಸಾಹೇಬ ಹೇಳಿದ, ‘ಒಂಬೈನೂರಾ ತೊಂಬತ್ತು’. ‘ಅವನ್ನೇನು ಮಾಡುತ್ತೀರಿ?’ ಕೇಳಿದ ಗುಂಡಣ್ಣ. ‘ಏನು ಮಾಡುತ್ತೀರಿ ಎಂದ­ರೇನಯ್ಯ? ಅವು ನನಗೆ ಬೇಕು’ ಎಂದು ರೇಗಿದ ಬಾಬಾಸಾಹೇಬ. ಥಟ್ಟೆಂದು ಕೈತಟ್ಟಿ ಗುಂಡಣ್ಣ, ‘ಹಾಗಾದರೆ ಒಂಬೈನೂರಾ ತೊಂಬತ್ತು ನಾಣ್ಯಗಳನ್ನು ಮಕ್ಕಳಿಗೆ ನೀವು ಕೊಡಬೇಕು. ಯಾಕೆಂದರೆ ವಿಶ್ವನಾಥ ನಿಮಗೆ ಹೇಳಿದ್ದು ನಿಮ್ಮ ಮನಸ್ಸಿಗೆ ಬಂದಷ್ಟು ಕೊಡಿ ಎಂದಲ್ಲ, ನಿಮಗೆ ಎಷ್ಟು ಬೇಕೋ ಅಷ್ಟನ್ನು ಕೊಡಿ ಎಂದು.ಈಗ ನೀವೇ ಹೇಳಿದಿರಿ ನಿಮಗೆ ಒಂಬೈನೂರ ತೊಂಬತ್ತು ನಾಣ್ಯಗಳು ಬೇಕು ಎಂದು? ನಿಮಗೆ ಬೇಕಾದಷ್ಟಾದ ಈ ನಾಣ್ಯಗಳನ್ನು ಮಕ್ಕಳಿಗೆ ಕೊಡಿ’ ಎಂದು ಪಟ್ಟು ಹಿಡಿದ. ಎಲ್ಲರೂ ಮೆಚ್ಚಿದರು. ಬಾಬಾಸಾಹೇಬ ಗೊಣಗುತ್ತ ಒಂಬೈನೂರಾ ತೊಂಬತ್ತು ನಾಣ್ಯಗಳನ್ನು ಮಕ್ಕಳಿಗೆ ಕೊಟ್ಟ. ಮಾತ­ನಾಡುವುದು ಒಂದು ಕಲೆ, ಮಾತು­ಗಳನ್ನು ಸರಿಯಾಗಿ ಅರ್ಥಮಾ­ಡಿಕೊಳ್ಳುವುದೂ ಒಂದು ಕಲೆ. ಯಾವ ಮಾತನ್ನು, ಯಾವಾಗ, ಎಲ್ಲಿ, ಹೇಗೆ, ಯಾರಿಗೆ, ಯಾವ ಪ್ರಮಾಣದಲ್ಲಿ ಹೇಳಬೇಕೆಂಬುದನ್ನು ತಿಳಿದವರಿಗೆ ಎಂಥ ಸಮಸ್ಯೆಯೂ ಹಗುರವಾಗುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.