ಶುಕ್ರವಾರ, ಮಾರ್ಚ್ 5, 2021
25 °C

ಮುಳ್ಳಿನ ಹಾದಿಯಲ್ಲಿ ಆರ್ಥಿಕ ತಜ್ಞನ ಆಡಳಿತದ ಪರಿ

ಕುಲದೀಪ ನಯ್ಯರ್ Updated:

ಅಕ್ಷರ ಗಾತ್ರ : | |

ಮುಳ್ಳಿನ ಹಾದಿಯಲ್ಲಿ ಆರ್ಥಿಕ ತಜ್ಞನ ಆಡಳಿತದ ಪರಿ

ಆರ್ಥಿಕ ಸಮಸ್ಯೆಯ ಸುಳಿಗಳ ಒಳಗೆ ಸಿಲುಕಿಕೊಂಡಿರುವ ಭಾರತವನ್ನು ಅದರೊಳಗಿಂದ ಪಾರು ಮಾಡಲು ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಸಾಮರ್ಥ್ಯವಿದೆ ಎಂಬುದಾಗಿ ಇವತ್ತಿಗೂ ನಂಬಿಕೆ ಇರಿಸಿಕೊಂಡಿರುವ ಕೆಲವರಲ್ಲಿ ನಾನೂ ಒಬ್ಬ. ಆದರೆ ಅವರ `ವಿಶ್ವಬ್ಯಾಂಕ್ ನಿರ್ದೇಶಿತ ನೀತಿ~ ಅಥವಾ `ಆರ್ಥಿಕ ಮಾದರಿ~ಯನ್ನು ನಾನು ಒಪ್ಪುವುದಿಲ್ಲ. ಇವುಗಳೆಲ್ಲದರ ನಡುವೆಯೂ ಅವರು ಈ ದೇಶದ ಅಭಿವೃದ್ಧಿ ದರವನ್ನು ದಶಕವೊಂದರಲ್ಲೇ ಶೇಕಡ 8ರಿಂದ 9ಕ್ಕೆ ಏರಿಸಿದವರು ಎಂಬುದನ್ನೂ ಮರೆಯುವಂತಿಲ್ಲ.ನೆಹರು ಅವರ ಸಮಾಜವಾದಿ ಚಿಂತನೆ, ಆರ್ಥಿಕ ಮಾದರಿಯಿಂದ ಪ್ರಭಾವಿತರಾಗಿ ತಾವೇ ಸಿದ್ಧಪಡಿಸಿದ್ದ ಯೋಜನಾ ವರದಿ, ಮಾದರಿಗಳೆಲ್ಲದರಿಂದಲೂ ಮನಮೋಹನ್ ಸಿಂಗ್ ಅವರು ಬಲು ದೂರ ಬಂದು ಬಿಟ್ಟಿದ್ದಾರೆ. ಅಭಿವೃದ್ಧಿಶೀಲ ದೇಶಗಳ ನಡುವಣ ಬಾಂಧವ್ಯ ಮತ್ತು ಪರಸ್ಪರ ಸಹಕಾರವನ್ನು ಅಂದು ನೆಹರು ಪ್ರತಿಪಾದಿಸಿದ್ದರು. ಜತೆಗೆ ಅತ್ತ  ಎಡಪಂಥೀಯ ಚಿಂತನೆಯ ಆರ್ಥಿಕತೆಯೂ ಅಲ್ಲ, ಇತ್ತ ಸಂಪೂರ್ಣವಾಗಿ ಬಂಡವಾಳಗಾರರ ಪರವಾದ ಅರ್ಥವ್ಯವಸ್ಥೆಯೂ ಅಲ್ಲದ, ಮಿಶ್ರ ಆರ್ಥಿಕ ಚಿಂತನೆ ನೆಹರು ಅವರದಾಗಿತ್ತು. ಆದರೆ ಮನಮೋಹನ್ ಸಿಂಗ್ ಅವರು ನೆಹರು ಚಿಂತನೆಯ ದಾರಿ ಬಿಟ್ಟಿರುವುದು ಸ್ಪಷ್ಟ. ಆದರೆ ಸಿಂಗ್ ಈ ನಾಡಿನ ಅಭಿವೃದ್ಧಿಗೆ ತಾವು ತಂದ ಆರ್ಥಿಕ ಸುಧಾರಣೆಗಳೇ ಹೊಂದುವಂತಹದ್ದೆಂದು ಪ್ರತಿಪಾದಿಸುತ್ತಲೇ ಬಂದಿದ್ದಾರೆ.ಆದರೆ ಇದು ಅಂತಿಮದಲ್ಲಿ ಶ್ರೀಮಂತರು ಮತ್ತು ಬಡವರ ನಡುವಿನ ಅಂತರವನ್ನು ದೊಡ್ಡ ಮಟ್ಟದಲ್ಲಿಯೇ ಹೆಚ್ಚು ಮಾಡಿದೆ. ಇದಲ್ಲದೆ, ಪ್ರಧಾನಿಯವರು ತಮ್ಮ ಚಿಂತನೆಯನ್ನು ಪಶ್ಚಿಮದ ತಮ್ಮ ಅಭಿಮಾನಿಗಳಿಗೂ ಮನದಟ್ಟು ಮಾಡಿದ್ದಾರೆ. ಹೀಗಾಗಿ ಈ ವಿಚಾರದಲ್ಲಿ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ಅವರಿಗೂ ಇವರೇ `ಗುರು~ಗಳು !ಅದೇನೇ ಇರಲಿ, ಭಾರತದ ಅರ್ಥವ್ಯವಸ್ಥೆಗೆ ಮನಮೋಹನ್ ಸಿಂಗ್ ನೀಡಿದ ಹೊಸ ಆಯಾಮ ಯಶಸ್ಸು ಕಂಡಿದೆಯೋ ಇಲ್ಲವೋ ಎಂಬ ಬಗ್ಗೆ ಮುಂದಿನ ದಿನಗಳಲ್ಲಿ ನೋಡಬೇಕಿದೆ. ಅವರ ಹಾದಿಯಲ್ಲೂ ನೂರಾರು ಅಡ್ಡಿ ಆತಂಕಗಳಿವೆ. ಇವರನ್ನು ಈ ನಾಡಿನ ಅರ್ಥ ವ್ಯವಸ್ಥೆಯ ಸುಧಾರಣೆಯ ಮಟ್ಟಿಗೆ ಅತ್ಯುನ್ನತ ಸ್ಥಾನದಲ್ಲಿಟ್ಟು ನೋಡಲಾಗಿದೆ. ದೇವರಂತೆ ಕಾಣಲಾಗಿದೆ. ಆದರೆ `ದೇವರು~ ಸೋತಿದ್ದಾನೆ. ಈ `ದೇವರ~ ಬಗ್ಗೆ ಜನರ ನಂಬಿಕೆ ಕುಸಿಯತೊಡಗಿದೆ. ದೇಶದ ಹೊರಗಿನ ಮತ್ತು ಒಳಗಿನ ಹೂಡಿಕೆದಾರರು ತಮಗೆ ಬೇಕೆನಿಸಿದ್ದನ್ನೆಲ್ಲಾ ಕೊಡಿ ಎಂದು ಕೇಳತೊಡಗಿದ್ದಾರೆ. ಹಣದುಬ್ಬರ ಏರುತ್ತಿದೆ. ಬಜೆಟ್‌ನಲ್ಲಿ ಆದಾಯ ವೆಚ್ಚಗಳ ಅಂತರ ಅತಿಯಾಗತೊಡಗಿದೆ. ಜನಸಾಮಾನ್ಯರಂತೂ ರಿಯಾಯಿತಿಗಳಿಗೆ ಹೊಂದಿಕೊಂಡು ಬಿಟ್ಟಿದ್ದಾರೆ. ಯಾವುದೇ ತೆರನಾದ ಕಡಿತಗಳನ್ನು ಅವರು ಸಹಿಸಿಕೊಳ್ಳುತ್ತಿಲ್ಲ. ಈ ತೆರನಾದ ಹತ್ತು ಹಲವು ಪರಿಸ್ಥಿತಿ ಎದ್ದು ಕಾಣತೊಡಗಿವೆ.ಪ್ರಧಾನಿಯವರು ಇನ್ನು ಏನೇನು ಸುಧಾರಣೆ ತರಬೇಕೆಂದಿದ್ದಾರೋ ಏನೋ. ಆದರೆ ಪ್ರಧಾನಿಯವರ ಪ್ರತಿ ನಡೆಯನ್ನೂ ಅವರ ಬೆನ್ನ ಹಿಂದೆ ನಿಂತಿರುವ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಇಣುಕಿ ನೋಡುತ್ತಿದ್ದಾರೆ. ಸೋನಿಯಾ ಅವರ ಮೂಗಿನ ನೇರಕ್ಕೆ ಹಲವು ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಪ್ರಧಾನಿ ಅವರದಾಗಿದೆ. ಅದೊಂದು ಕಾಲವಿತ್ತು, ಮನಮೋಹನ್ ಸಿಂಗ್ ಅವರನ್ನು ಶುದ್ಧಹಸ್ತ, ಅತ್ಯಂತ ಪ್ರಾಮಾಣಿಕ, ಸರಳಜೀವಿ ಎಂದೆಲ್ಲಾ ಹಾಡಿ ಹೊಗಳಲಾಗುತಿತ್ತು. ಆದರೆ ಈಗ ಕಾಲ ಬದಲಾಗಿದೆ. ಪ್ರಧಾನಿ ಅವರಿಗೆ ಆ ಹಿಂದಿನ `ಇಮೇಜ್~ ಈಗ ಇಲ್ಲ. ಈಗಾಗಲೇ ಕೇಂದ್ರ ಸರ್ಕಾರದ ಹಲವರು ಬೇರೆ ಬೇರೆ ಭ್ರಷ್ಟಾಚಾರದ ಹಗರಣ, ವಿವಾದಗಳಲ್ಲಿ ಸಿಲುಕಿದ್ದಾರೆ. ಇವೆಲ್ಲವೂ ಪ್ರಧಾನಿಯವರಿಗೆ ಮೊದಲೇ ಗೊತ್ತಿದ್ದಿರಬಹುದು ಎಂಬ ನಂಬಿಕೆ ಇದೀಗ ಜನಸಾಮಾನ್ಯರಲ್ಲಿಯೂ ಕೇಳಿ ಬರತೊಡಗಿದೆ. 2ಜಿ ತರಂಗಾಂತರ ಹಂಚಿಕೆಯು ಪ್ರಧಾನಿಯವರಿಗೆ ಗೊತ್ತಿಲ್ಲದೆ ನಡೆಯಲು ಸಾಧ್ಯವೇ ಇಲ್ಲ ಎಂಬ ಮಾತುಗಳೂ ಕೇಳಿ ಬರತೊಡಗಿವೆ. ಆದರೆ ಪ್ರಧಾನಿಯವರು ಏಕೆ ಅದನ್ನು ಆರಂಭದ ದಿನಗಳಲ್ಲಿಯೇ ತಡೆಯಲಿಲ್ಲ ಎಂಬ ಪ್ರಶ್ನೆಗಳೂ ಏಳತೊಡಗಿವೆ. 2ಜಿ ತರಂಗಾಂತರ ಹಂಚಿಕೆ ಹಗರಣದ ಬಗ್ಗೆ ಸಮಗ್ರ ವರದಿಗಾಗಿ ರಚಿಸಲಾಗಿದ್ದ ಹಿರಿಯ ಸಚಿವರ ಸಮಿತಿಯ ಮುಖ್ಯಸ್ಥನ ಸ್ಥಾನದಿಂದ ಕೃಷಿ ಸಚಿವ ಶರದ್ ಪವಾರ್ ಹಿಂದಡಿ ಇಟ್ಟಿದ್ದು ಉತ್ತಮ ತೀರ್ಮಾನವೇ ಹೌದು. ಇಂತಹವರಿಂದ ಅದೆಂತಹ ನಿಷ್ಪಕ್ಷಪಾತ ವರದಿ ಬರಲು ಸಾಧ್ಯ.ಅಂತಹ ರಾಜೀನಾಮೆಗಳಿಂದ ಯಾವುದೇ ತೊಂದರೆ ಇಲ್ಲ ಬಿಡಿ. ಹಣಕಾಸು ಸಚಿವರಾಗಿ ಪ್ರಣವ್ ಮುಖರ್ಜಿ ಅಂತಹದ್ದೇನೂ ಮಹತ್ತರ ಸಾಧನೆಯನ್ನಂತೂ ಮಾಡಿಲ್ಲ. ಹೀಗಾಗಿ ಅವರು ಪ್ರಸಕ್ತ ಸಂಪುಟದಿಂದ ನಿರ್ಗಮಿಸಿರುವುದೂ ಸರ್ಕಾರಕ್ಕೆ ದೊಡ್ಡ ನಷ್ಟವಂತೂ ಆಗುವುದಿಲ್ಲ. ಉತ್ತಮ ಕೆಲಸ ಮಾಡಲು ಪ್ರಧಾನಿಯವರಿಗೆ ಹಾದಿ ಸುಗಮವಾಯಿತು ಎಂದೇ ಹೇಳಬಹುದು. ಇಂತಹ ಸಂದಿಗ್ಧತೆಯಲ್ಲಿ ಮನಮೋಹನ್ ಸಿಂಗ್ ಅವರು ಆರ್ಥಿಕ ಚೇತರಿಕೆಗೆ ತಮ್ಮ ಶಕ್ತಿ ಮೀರಿ ಕಾರ್ಯ ನಿರ್ವಹಿಸಬೇಕಿದೆ.ಇದೀಗ ದೇಶದ ಹಲವೆಡೆ ಮುಂಗಾರು ದುರ್ಬಲವಾಗಿರುವುದಂತೂ ಆರ್ಥಿಕ ಸ್ಥಿತಿಯನ್ನು ಮತ್ತಷ್ಟು ದುರ್ಬಲಗೊಳಿಸಲಿದೆ. ಇಂತಹ ಎಡರುತೊಡರುಗಳ ನಡುವೆಯೇ ಆರ್ಥಿಕ ಸ್ಥಿತಿಯನ್ನು ಮೇಲೆತ್ತಬೇಕಿದೆ.ಹತ್ತು ಹಲವು ಸಮಸ್ಯೆಗಳ ನಡುವೆ ಗುದ್ದಾಡುತ್ತಿರುವುದರ ಜತೆಗೇ ಅವರು ತಮ್ಮ ಪಕ್ಷದವರ ಮತ್ತು ಯುಪಿಎ ಮಿತ್ರ ಪಕ್ಷದ ಸದಸ್ಯರ ಬೆಂಬಲಕ್ಕಾಗಿ ಹೆಣಗಾಡುತ್ತಿರುವುದು ಗೊತ್ತಿರುವ ಸಂಗತಿಯೇ. ಕೆಲವು ಅಂಶಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದವರಲ್ಲಿಯೇ ವಿಭಿನ್ನ ಅಭಿಪ್ರಾಯ ಇರುವುದು ಎದ್ದು ಕಂಡಿದೆ.ಮನಮೋಹನ್ ಸಿಂಗ್ ಅವರು ಮಿತ್ರಪಕ್ಷವಾದ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‌ನಿಂದ ಇನ್ನಿಲ್ಲದ ಕಿರಿಕಿರಿ ಅನುಭವಿಸುತ್ತಿದ್ದಾರೆ. ರಾಷ್ಟ್ರಪತಿ ಸ್ಥಾನಕ್ಕೆ ಮನಮೋಹನ್ ಸಿಂಗ್ ಅವರ ಹೆಸರನ್ನು ಪ್ರಸ್ತಾಪಿಸುವ ಮೂಲಕ ಮಮತಾ ಅವರು ಅನಗತ್ಯ ಗೊಂದಲ ಹುಟ್ಟು ಹಾಕಿದ್ದರು. ಅದಕ್ಕೆ ಒಂದು ಹಂತದಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಕೂಡಾ ಧ್ವನಿಗೂಡಿಸಿದ್ದರು. ಕೊನೆಗೆ ಸೋನಿಯಾ ಅವರೇ ಪತ್ರಿಕಾ ಹೇಳಿಕೆ ನೀಡಿ ಮನಮೋಹನ್ ಸಿಂಗ್ ಅವರನ್ನು ಪ್ರಧಾನಿ ಪಟ್ಟದಿಂದ ಬದಲಿಸುವ ಸಾಧ್ಯತೆಯೇ ಇಲ್ಲವೆಂದು ಸ್ಪಷ್ಟಪಡಿಸಬೇಕಾಯಿತು.ಸೋನಿಯಾ ಗಾಂಧಿ ಅವರ ಪುತ್ರ ರಾಹುಲ್ ಗಾಂಧಿಯವರಿಗಾಗಿ ನಾನು ಯಾವುದೇ ಕ್ಷಣದಲ್ಲಿಯೂ ಪ್ರಧಾನಿ ಗಾದಿಯನ್ನು ಬಿಟ್ಟುಕೊಡಲು ಸಿದ್ಧ ಎಂದು ಮನಮೋಹನ್ ಸಿಂಗ್ ಅವರು ಪದೇ ಪದೇ ಹೇಳುತ್ತಿದ್ದಾರೆ. ಅವರು ಏಕೆ ಹೀಗೆ ಮಾತನಾಡುತ್ತಿದ್ದಾರೋ ನನಗಂತೂ ಅರ್ಥವಾಗುತ್ತಿಲ್ಲ. ಮನಮೋಹನ್ ಸಿಂಗ್ ಸುಮಾರು ಎರಡೂವರೆ ದಶಕಗಳಿಂದ ಕಾಂಗ್ರೆಸ್ ಜತೆಗೆ ಒಡನಾಟ ಇರಿಸಿಕೊಂಡಿದ್ದಾರೆ. ಸೋನಿಯಾ ಗಾಂಧಿ ಅವರು ತಮ್ಮ ಮಗನನ್ನು ಪ್ರಧಾನಿ ಮಾಡಬೇಕೆಂದು ಬಯಸಿದರೆ, ಅವರು ಮನಮೋಹನ್ ಸಿಂಗ್ ಅವರನ್ನು ಒಂದು ಮಾತನ್ನೂ ಕೇಳದೆಯೇ ರಾಹುಲ್ ಹೆಸರನ್ನು ಪ್ರಕಟಿಸಿ ಬಿಡಬಹುದು. ಇದು ವಾಸ್ತವ.ಪರಿಸ್ಥಿತಿ ಈ ರೀತಿ ಇರುವಾಗ ಪ್ರಧಾನಿಯವರು `ರಾಹುಲ್‌ಗಾಗಿ ನಾನು ಸ್ಥಾನ ತ್ಯಾಗ ಮಾಡಲು ಸಿದ್ಧ~ ಎಂಬ ಸವಕಲು ಮಾತುಗಳನ್ನು ಹೇಳುವುದನ್ನು ಇನ್ನಾದರೂ ನಿಲ್ಲಿಸುವುದು ಒಳಿತು. ಪ್ರಸಕ್ತ ಉತ್ತರ ಪ್ರದೇಶ, ಬಿಹಾರಗಳಲ್ಲಿ ಕಾಂಗ್ರೆಸ್ ಕಂಡಿರುವ ಹೀನಾಯ ಸೋಲಿನಿಂದಾಗಿ ರಾಹುಲ್ ಗಾಂಧಿಯವರ `ಇಮೇಜ್~ ಕಡಿಮೆಯಾಗಿರುವುದಂತೂ ನಿಜ. ಹೀಗಾಗಿ ರಾಹುಲ್ ಅವರೇ ಇದೀಗ ಚೇತರಿಸಿಕೊಳ್ಳಬೇಕಾದ ಸ್ಥಿತಿಯಲ್ಲಿದ್ದಾರೆ.  ದೇಶದ ಆರ್ಥಿಕತೆಗೆ ಸಂಬಂಧಿಸಿದಂತೆ  ನೀತಿ ನಿಯಮಾವಳಿ ರೂಪಿಸುವುದು ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದಂತೆ ಮನಮೋಹನ್ ಸಿಂಗ್ ತಮ್ಮನ್ನು ಬಹಳಷ್ಟು ತೊಡಗಿಸಿಕೊಂಡಿದ್ದಾರೆ ನಿಜ. ಆದರೆ ಅವರು ಆಡಳಿತದ ಮೇಲೆ ತಮ್ಮ ಹಿಡಿತ ಬಿಗಿಯಾಗಿದೆ ಎಂಬುದನ್ನು ಸಾಬೀತು ಪಡಿಸುತ್ತಿರಬೇಕಿದೆ.

`ನಕ್ಸಲೀಯರು~ ಎಂಬ ಹಣೆಪಟ್ಟಿ ಹಚ್ಚಿದ ಭದ್ರತಾ ಪಡೆ ಸಿಬ್ಬಂದಿ ಈಚೆಗೆ ಕೆಲವರನ್ನು ಕೊಂದು ಹಾಕಿತ್ತು. ಈ ಬಗ್ಗೆ ಮಾನವ ಹಕ್ಕು ಹೋರಾಟಗಾರರು ಪ್ರತಿಭಟನೆ ನಡೆಸಿ ದೇಶದ ಗಮನ ಸೆಳೆದರು.  ಸತ್ತವರೆಲ್ಲರೂ ಮುಗ್ಧ ಗ್ರಾಮಸ್ಥರು ಎಂದು ಅವರು ವಾದಿಸಿದ್ದು ಎಲ್ಲರ ಗಮನ ಸೆಳೆದಿತ್ತು. ಇಂತಹ ವಿಚಾರಗಳಿಗೆ ಸಂಬಂಧಿಸಿದಂತೆ ಪ್ರಧಾನಿಯವರು ಸಮರ್ಪಕ ತನಿಖಾ ವರದಿಗಾಗಿ ಪಟ್ಟು ಹಿಡಿಯಬೇಕಿತ್ತು. ಈ ಪ್ರಕರಣವನ್ನು ತಕ್ಷಣವೇ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕಿತ್ತು. ಏಕೆಂದರೆ ಸಂಬಂಧ ಪಟ್ಟ ಪ್ರದೇಶದಲ್ಲಿ ಭದ್ರತಾ ಸಿಬ್ಬಂದಿಗೆ ಬಂದೂಕನ್ನು ಬೇಕಾಬಿಟ್ಟಿಯಾಗಿ ಬಳಸುವ `ರೋಗ~ವಿದೆಯಲ್ಲಾ... ! ಇಂತಹ ವಿಷಯಗಳಲ್ಲಿ ತತ್‌ಕ್ಷಣದ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಗೃಹ ಸಚಿವ ಪಿ.ಚಿದಂಬರಂ ಯಾವತ್ತೂ ಹಿಂದೆಯೇ.ಭಾರತ ಮತ್ತು ಪಾಕಿಸ್ತಾನದಲ್ಲಿರುವ ಕೈದಿಗಳಿಗೆ ಸಂಬಂಧಿಸಿದಂತೆ ಪ್ರಸಕ್ತ ಎದ್ದಿರುವ ವಿವಾದವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಈ ಬಗ್ಗೆ ಮನಮೋಹನ್ ಸಿಂಗ್ ಅವರೇ ಖುದ್ದು ಗಮನ ಹರಿಸಬೇಕಾಗಿತ್ತು ಎನಿಸುತ್ತದೆ. ಪಾಕಿಸ್ತಾನದವರು ಮೊದಲು ಪ್ರಕಟಿಸಿದ್ದಂತೆ ಸರಬ್‌ಜಿತ್ ಸಿಂಗ್‌ನನ್ನು ಬಿಡುಗಡೆ ಮಾಡಬೇಕಿತ್ತು. ಆದರೆ ಅದರ ಬದಲಿಗೆ ಸುರ್ಜಿತ್ ಸಿಂಗ್ ಎಂಬುವವರನ್ನು ಬಿಡುಗಡೆ ಮಾಡಿತು. ಪಾಕಿಸ್ತಾನದ ಬಹಳಷ್ಟು ಸುದ್ದಿವಾಹಿನಿಗಳು ಸರಬ್‌ಜಿತ್ ಸಿಂಗ್ ಅವರ ಬಿಡುಗಡೆಯ ಬಗ್ಗೆಯೇ ಸುದ್ದಿ ಪ್ರಸಾರ ಮಾಡಿದ್ದಲ್ಲದೆ, ಅದಕ್ಕೆ ಸಂಬಂಧಿಸಿದಂತೆ ನನ್ನ ಅಭಿಪ್ರಾಯವನ್ನೂ ಪಡೆದು ಪ್ರಸಾರ ಮಾಡಿದ್ದವು.ಆದರೆ ಅದೇನಾಯಿತೋ ಏನೋ. ಇಸ್ಲಾಮಾಬಾದ್‌ನ ಆಡಳಿತಗಾರರು ತಮ್ಮ ನಿಲುವು ಬದಲಿಸಿಬಿಟ್ಟರು. ಇದು `ತಪ್ಪಾಗಿ ಗುರುತಿಸುವಿಕೆಯಿಂದಾದ ಪ್ರಮಾದ~ ಎಂಬ ಸಬೂಬು ನೀಡಿದ ಪಾಕ್, ಸರಬ್‌ಜಿತ್ ಸಿಂಗ್ ಅವರಿಗೆ ಸೆರೆಮನೆಯ ಬಾಗಿಲು ತೆರೆಯಲೇ ಇಲ್ಲ. ಇದು ಸಾಮಾನ್ಯ ಸಂಗತಿ ಏನಲ್ಲ. ಇಂತಹ `ತಪ್ಪಾಗಿ ಗುರುತಿಸುವಿಕೆ~ಯು ಎರಡು ದೇಶಗಳ ಸಂಬಂಧ ಹದಗೆಡುವಂತೆ ಮಾಡುವಂತಹದ್ದು ಕೂಡಾ. ಹೀಗಾಗಿ ಮನಮೋಹನ್‌ಸಿಂಗ್ ಅವರು ಇಂತಹ ಸಂದಿಗ್ಧತೆಯ ಆಗುಹೋಗುಗಳ ಬಗ್ಗೆ ಖುದ್ದಾಗಿ ಗಮನ ಹರಿಸಬೇಕಿತ್ತು.ಇತ್ತೀಚೆಗಿನ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಸೆರೆಮನೆಗಳಲ್ಲಿ ಇರುವವರ ಬಿಡುಗಡೆಯ `ತೀರ್ಮಾನ~ಗಳನ್ನು ಚೆಸ್ ಆಟದ `ಪಾನ್~ಗಳಂತೆ ಅಧಿಕಾರಸ್ಥರು ಬಳಸುತ್ತಿದ್ದಾರೇನೋ ಎಂಬ ಅನುಮಾನ ಬರದಿರದು. ಇಂತಹ ಆಟ ಒಂದೇ ಕಡೆ ನಡೆಯುತ್ತಿಲ್ಲ. ಎರಡೂ ಕಡೆ ನಡೆಯುತ್ತಿದೆ. ಅವಕಾಶವಾದಿಗಳ ಈ `ಆಟ~ದಿಂದಾಗಿ ಬಂಧನದಲ್ಲಿರುವವರು ತಮ್ಮ ನಿಗದಿತ ಶಿಕ್ಷಾವಧಿಯನ್ನೂ ಮೀರಿ ಬಂಧನದಲ್ಲಿರುವುದು ಎದ್ದು ಕಾಣುತ್ತಿದೆ. ಈಚೆಗೆ ಪಾಕ್ ಜೈಲಿನಿಂದ ಬಿಡುಗಡೆಯಾದ ಸುರ್ಜಿತ್ ಸಿಂಗ್ ತಮ್ಮ ನಿರ್ದಿಷ್ಟ ಶಿಕ್ಷಾವಧಿಗಿಂತ ಹತ್ತು ವರ್ಷ ಹೆಚ್ಚು ಕಾಲ ಜೈಲಿನಲ್ಲಿದ್ದುದು ಈಗ ಗೊತ್ತಾಗಿದೆ. ಇಂತಹ ಅಮಾನವೀಯತೆ ಬಗ್ಗೆ, ಮನುಷ್ಯನೊಬ್ಬನ ಅರಣ್ಯ ರೋಧನದ ಕುರಿತು  ಯಾರೂ ಮಾತನಾಡುತ್ತಿಲ್ಲ. ಇಂತಹ ತಪ್ಪಿಗೆ ಯಾರನ್ನೂ ಜವಾಬ್ದಾರನನ್ನಾಗಿಸುತ್ತಿಲ್ಲ, ಜತೆಗೆ ಇಂತಹ ತಪ್ಪು ಮಾಡಿದ್ದಾದರೂ ಏಕೆಂದು ಯಾರೂ ಯಾರನ್ನೂ ಪ್ರಶ್ನಿಸುತ್ತಿಲ್ಲ. ಇಂತಹ ಕ್ರೌರ್ಯಕ್ಕೆ ಏನನ್ನುವುದು?ತಮ್ಮ ಶಿಕ್ಷೆಯ ಅವಧಿ ಪೂರ್ಣಗೊಂಡಿದ್ದರೂ ಸೆರೆಮನೆಯಿಂದ ಹೊರಬರಲಾಗದೆ ಇರುವವರ ಸಂಖ್ಯೆ ಭಾರತದಲ್ಲಿಯೂ ಬಹಳಷ್ಟಿದೆ. ಸಿಖ್ ಸಮುದಾಯದ ಹಲವು ಮಂದಿ 1984ರಿಂದಲೂ ಸೆರೆಮನೆಯಲ್ಲಿದ್ದು, ಬಿಡುಗಡೆಯ ಬೆಳಕಿನ ಕನಸು ಹೊತ್ತು ಕತ್ತಲಲ್ಲಿ ಕುಳಿತ್ತಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ಚುರುಕು ಧೋರಣೆ ತಳೆದಿದ್ದರೆ, ಅದೆಷ್ಟೋ ಮಂದಿ ಈಗಾಗಲೆ ತಮ್ಮೂರು ಸೇರಿರುತ್ತಿದ್ದರು.ಆರ್ಥಿಕ ಸುಧಾರಣೆಗಳು ಬಹಳ ಮುಖ್ಯ ನಿಜ. ಆದರೆ ಸರ್ಕಾರ ತಮ್ಮ ಯೋಗಕ್ಷೇಮದ ಬಗ್ಗೆ, ತಮ್ಮ ಒಳಿತಿನ ಬಗ್ಗೆ ಚಿಂತಿಸುತ್ತಿದೆ ಎಂಬ ಭಾವನೆ ಜನಸಾಮಾನ್ಯರಲ್ಲಿ ಸದಾ ಇರಬೇಕಾದ ಅಗತ್ಯವಿದೆ. ಮನಮೋಹನ್ ಸಿಂಗ್ ಅವರು ಈ ಆಲೋಚನೆಗಳೊಂದಿಗೆ ಹೊಸ ಹೆಜ್ಜೆಗಳನ್ನು ಇಡುವಂತಾಗಲಿ.(ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in) 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.