ಶನಿವಾರ, ಮೇ 8, 2021
17 °C

ಮೇಷ್ಟ್ರಾಗದ ಮೇಷ್ಟ್ರಿಗೊಂದು ಕೊನೆಯ ಸಲಾಮು

ಎಚ್.ಎಸ್.ಶಿವಪ್ರಕಾಶ್ Updated:

ಅಕ್ಷರ ಗಾತ್ರ : | |

ಮೇಷ್ಟ್ರಾಗದ ಮೇಷ್ಟ್ರಿಗೊಂದು ಕೊನೆಯ ಸಲಾಮು

ಯ ಪ್ರೊ.ಅನಂತಮೂರ್ತಿ ಅವರೇ, ತಮಗೆ ಕೆಲವು ಮಾಸಗಳ ಹಿಂದೆ ದೂರ ದೇಶದಿಂದ ನಾನು ಫೋನು ಮಾಡಿದ್ದೆ. ಆಗ ನೀವು ಹೇಳಿದ್ದಿರಿ; ‘ಬಾರಯ್ಯ, ನಿನ್ನನ್ನು ನೋಡಿ ತುಂಬಾ ದಿವಸ ಆಯಿತು. ನನಗೆ ಈಚೆಗೆ ಆರೋಗ್ಯ ತೀರಾ ಅಷ್ಟಕ್ಕಷ್ಟೆ. ಆದಷ್ಟು ಬೇಗ ಬಾ. ನನಗೂ ನಿನಗೂ ಮನಸ್ತಾಪ ಆಗಿದೆ. ಅದನ್ನು ಬೇಗ ಸರಿಪಡಿಸಿಕೋಬೇಕು’.ನಿಮ್ಮಿಂದ ಕೆಲವು ಬಾರಿ ಉಪಕೃತನಾಗಿದ್ದು, ನಿಮ್ಮ ಬಗ್ಗೆ ಸದಾ ಕೃತಜ್ಞತಾಭಾವದಲ್ಲಿ ನಾನಿದ್ದೆ. ಎಷ್ಟೋ ಬಾರಿ ನಿಮ್ಮೊಂದಿಗೆ ಗಂಟೆಗಟ್ಟಲೆ ಒಟ್ಟಿಗಿದ್ದು ಅವಿಸ್ಮರಣೀಯವಾದ ಮಾತುಕತೆ ನಡೆಸಿದ್ದೆ. ಸೂಕ್ಷ್ಮವಾದದ್ದನ್ನು ಹಠಾತ್ತನೆ ಗ್ರಹಿ­ಸುವ ನಿಮ್ಮ ಬುದ್ಧಿಕೌಶಲ, ಜಟಿಲ­ವಾದದ್ದನ್ನು ಮೋಹಕವಾಗಿ ಅಭಿವ್ಯಕ್ತ­ಪಡಿಸುವ  ಮಾತಿನ ಮೋಡಿ, ಜೀವಜಗತ್ತಿನ ಬಗ್ಗೆ ನಿಮಗಿದ್ದ ನಿರಂತರ ಕುತೂಹಲ ಇವುಗಳಿಂದ ಪ್ರಭಾವಿತನಾಗಿದ್ದೆ. ದೇಶದಾದ್ಯಂತ ನಿಮ್ಮ ಭಾಷಣಗಳನ್ನು ಹಲವು ಸಂದರ್ಭಗಳಲ್ಲಿ ಕೇಳಿದಾಗಲೆಲ್ಲ ತಲೆದೂಗಿದ್ದೆ. ಈ ಥರದ ನೇರ ಸಂಪರ್ಕ ಸಿಗದೆ ಹೋಗಿದ್ದರೂ ನಿಮ್ಮ ಶ್ರೇಷ್ಠ ಬರಹಗಳಾದ ಕೆಲವು ಕತೆಗಳು, ವಿಮರ್ಶಾ ಲೇಖನಗಳ  ಆಧಾರದ ಮೇಲೆ ನೀವು ಕನ್ನಡದ ವಿಲಕ್ಷಣ ಬರಹಗಾರರಲ್ಲಿ ಒಬ್ಬರೆಂದು ಸದಾ ಗೌರವಿಸುತ್ತಿದ್ದೆ.ಈ ಎಲ್ಲ ಕಾರಣಗಳಿಂದ ನಿಮ್ಮ ಜೊತೆಗಿನ ಮನ­­­­ಸ್ತಾಪವನ್ನು ಸರಿಪಡಿಸಿಕೊಳ್ಳುವುದು ನನಗೂ ಮುಖ್ಯ­ವಾಗಿತ್ತು. ನನ್ನ ಜೀವಿತಕಾಲದ ಅತ್ಯಂತ ಪ್ರತಿಭಾವಂತರೊಬ್ಬರ ಜೊತೆ ಮನ­ಸ್ತಾಪ ಮುಂದುವರಿಸುವ ಇಚ್ಛೆ ನನಗೂ ಇರ­ಲಿಲ್ಲ. ಆದರೆ ಬಯಕೆ ಕೈಗೂಡಲೇ ಇಲ್ಲ. ನಾನು ಬೆಂಗಳೂರಿಗೆ ಬಂದಾಗ ನೀವು ಪ್ರವಾಸ ಹೋಗಿ­ದ್ದಿರಿ, ನೀವು ಅಲ್ಲಿದ್ದಾಗ ನಾನು ಇನ್ನೆಲ್ಲಿಯೋ ಇದ್ದೆ. ಬಹುಶಃ ನನ್ನ ಮೆಚ್ಚಿನ ಕತೆಗಾರ ಸಿಂಗರ್ ಒಂದು ಕಡೆ ಹೇಳುವ ಹಾಗೆ, ಇಬ್ಬರು ಜೀವಿಗಳು ಎಷ್ಟು ನಿಕಟವಾಗಬಹುದು ಎಂಬುದರ ಬಗ್ಗೆ ಭಗ­ವಂತ ಅಗೋಚರ ಮಿತಿಗಳನ್ನು ನಿರ್ಮಿಸಿರು­ತ್ತಾನೆ.ಈಗ ನನಗುಳಿದಿರುವ ಮಾರ್ಗವೆಂದರೆ ಆ ಮನ­ಸ್ತಾಪವನ್ನು ಈ ಪತ್ರದ ಮುಖೇನ ಬಗೆ­ಹರಿ­ಸಿ­­ಕೊಳ್ಳುವುದು. ಈ ಪತ್ರ ನಿಮ್ಮನ್ನು ತಲುಪುತ್ತ­ದೆಂಬ ಸಂಪೂರ್ಣ ನಂಬಿಕೆ ನನಗಿಲ್ಲ. ಆದರೆ ಒಂದು ಸಣ್ಣ ಸಾಧ್ಯತೆ ಇದೆ. ಜೀವವೊಂದು ದೇಹ­ದಿಂದ ಬಿಡುಗಡೆ ಹೊಂದಿದ ನಂತರ ಹಲವು ದಿನಗಳವರೆಗೆ ತಾನು ಬದುಕಿದ್ದ ಜಾಗದ ಸುತ್ತಾ­ಮುತ್ತ ಅಡ್ಡಾಡಿಕೊಂಡು, ಏನನ್ನೂ ಮಾಡಲಾ­ಗದೆ ಎಲ್ಲವನ್ನೂ ನೋಡುತ್ತಿರುತ್ತದೆ ಎಂಬುದು ಮರಣೋತ್ತರ ಅನುಭವಗಳ ಬಗ್ಗೆ ಸಂಶೋಧನೆ ನಡೆಸಿರುವ ವಿದ್ವಾಂಸರ ಅನಿಸಿಕೆ. ಒಂದು ಪಕ್ಷ ಇದು ನಿಜವಾಗಿದ್ದರೆ ನನ್ನ ಮಾತುಗಳು ನಿಮಗೆ ಕೇಳಿಸುತ್ತಿರಬೇಕು.ಮನಸ್ತಾಪವನ್ನು ಬಗೆಹರಿಸಿಕೊಳ್ಳುವುದರ ಜೊತೆಗೆ ನಿಮಗೆ ಕೊನೆಯ ಸಲಾಮು ಹೇಳುವ ಸಮಯವೂ ಬಂದೊದಗಿದೆ. ಇದು ದುಃಖಕರ. ನಿಮ್ಮ ಆರೋಗ್ಯದ ತೊಂದರೆಗಳ ಬಗ್ಗೆ ಸದಾ ಮಾಹಿತಿ ಪಡೆದುಕೊಳ್ಳುತ್ತಿದ್ದ ನನಗೆ, ಇಷ್ಟು ಬೇಗ ನೀವು ಕಾಲವಾಗುತ್ತೀರಿ ಎಂಬುದನ್ನು ಊಹಿ­ಸಲು ಸಾಧ್ಯವಾಗಿರಲಿಲ್ಲ. ನಿಮ್ಮ ಸಂಕಲ್ಪ ಬಲದ ಸಹಾಯದಿಂದ ನೀವಿನ್ನೂ ಬಹುಕಾಲ ಜೀವಿಸುವಿರೆಂಬ ಭರವಸೆ ನನಗಿತ್ತು. ನಿಮ್ಮ ಜೊತೆ  ಮೊಖ್ತಾ ಎಲ್ಲವನ್ನೂ ಬಗೆಹರಿಸಿಕೊಳ್ಳ­ಬಹು­ದೆಂಬ ನಂಬಿಕೆಯೂ ಇತ್ತು. ಆದರೆ ಕರುಣಿ­ಯಲ್ಲದ ಕಾಲರಾಯ ಆ ಭರವಸೆಯನ್ನು  ಸುಳ್ಳು ಮಾಡಿದ್ದಾನೆ, ಜೊಳ್ಳು ಮಾಡಿದ್ದಾನೆ. ನಿಮಗೆ ಸಾರ್ವಜನಿಕವಾಗಿ ನಾನು ಬರೆಯುತ್ತಿರುವ ಈ ವಿಲಕ್ಷಣ ಪತ್ರದಲ್ಲಿ ನಿಮ್ಮನ್ನು ನಾನೇಕೆ ಗೌರವಿಸು­ತ್ತೇನೆ, ಹೀಗೆ ನಿಮ್ಮನ್ನು ಗೌರವಿಸಲು ಪ್ರೇರೇಪಿ­ಸುವ ನಿಮ್ಮ ಅನನ್ಯ ಗುಣಗಳು ಯಾವುವು ಎಂಬುದರ ಬಗ್ಗೆ ಬರೆಯೋಣ ಎನ್ನಿಸುತ್ತಿದೆ.ನೀವು ಕಣ್ಮರೆ ಆದಾಗಿನಿಂದ ನಾಡಿನ ಹಲವು ಗಣ್ಯರು, ಕಲಾವಿದರು, ರಾಜಕೀಯ ನೇತಾರರು ನಿಮ್ಮನ್ನು ಕೊಂಡಾಡಿ ಕಂಬನಿ ಮಿಡಿ­ದಿ­ದ್ದಾರೆ. ಅವರಲ್ಲಿ ಬಹುತೇಕರು ನಿಮ್ಮ ಹಾಗೂ ನಿಮ್ಮ ಕೃತಿಗಳ ಬಗ್ಗೆ ಆಳವಾದ ತಿಳಿವಳಿಕೆ ಉಳ್ಳ­ವರಲ್ಲ. ನಿಮ್ಮ ಕೃತಿಗಳನ್ನು ಆಳವಾಗಿ ಅರಿತವರು ನೀವಿಲ್ಲದ ಸಂದರ್ಭದಲ್ಲಿ ಅವುಗಳ ಮರು­ಮೌಲ್ಯೀಕರಣ­ವನ್ನು ವಿಶದವಾಗಿ ಮಾಡಲಿ­ದ್ದಾರೆ. ಅದಕ್ಕಾಗಿ ನಿಮ್ಮ ಹಲವು ಓದುಗರಂತೆ ನಾನೂ ಕಾಯುತ್ತೇನೆ.ನಿಮ್ಮ ಎಲ್ಲ ನಿಲುವುಗಳನ್ನೂ, ತೀರ್ಮಾನ­ಗಳನ್ನೂ ಒಪ್ಪದೆಯೂ ನನ್ನಂಥವನು ನಿಮ್ಮನ್ನು ಆದರಿಸುವುದಕ್ಕೆ ಕಾರಣವೇನು?

ನಿಮ್ಮನ್ನು ನನಗೆ ಮೊದಲ ಸಲ ಪರಿಚಯ ಮಾಡಿದವರು ನನ್ನ ಮೇಷ್ಟ್ರಾಗಿದ್ದ ಲಂಕೇಶರು. ಆಗ ತುರ್ತು ಪರಿಸ್ಥಿತಿ. ನೀವಾಗಲೇ ಆ ಬಗ್ಗೆ ವಿರೋ­ಧವನ್ನು ವ್ಯಕ್ತಪಡಿಸಿದ್ದಿರಿ. ಆ ಬಗ್ಗೆ ಮಾತ­ನಾಡಲು ಲಂಕೇಶರ ಬಳಿ ಬಂದಿದ್ದಿರಿ. ಆಗ ಲಂಕೇಶರು ನಿಮಗೆ ನನ್ನನ್ನು ಪರಿಚಯಿಸಿ, ಈತ ಇಂಥವರ ಮಗ, ಆದರೆ ಈತನಿಗೆ ಅವರ ಬಗ್ಗೆ ತುಂಬಾ ಸಿಟ್ಟು ಎಂದು ಹೇಳಿದರು. ಆಗ ನೀವು ಒಂದು ಅನಿರೀಕ್ಷಿತ ಪ್ರತಿಕ್ರಿಯೆ ನೀಡಿದಿರಿ: ‘ಅಲ್ಲ ಲಂಕೇಶ್, ಈ ತಲೆಮಾರಿನ ಹುಡುಗರು ಹಿಂದಿ­ನವರ ಬಗ್ಗೆ ಯಾಕೆ ಸಿನಿಕರಾಗಿರ್ತಾರೆ?’ ಲಂಕೇ­ಶರು ಮುಗುಳ್ನಕ್ಕರು. ನನಗೆ ನಿಮ್ಮ ಮೇಲೆ ಸಿಟ್ಟು ಬಂತು. ‘ಸಂಸ್ಕಾರ’ದಂಥ ಕೃತಿಯನ್ನು ರಚಿಸಿ --ಪಳೆ­ಯುಳಿಕೆಗಾರರನ್ನು ಎದುರು ಹಾಕಿಕೊಂಡಿದ್ದ ನಿಮ್ಮಂಥವರಿಂದ ಈ ಮಾತನ್ನು ನಾನು ನಿರೀಕ್ಷಿಸಿ­ರ­ಲಿಲ್ಲ. ಆ ಸಂಪ್ರದಾಯ ವಿರೋಧಿ  ಅನಂತ­ಮೂರ್ತಿ ಎಲ್ಲಿ? ಹೀಗೆ ಹಳೆಯದರ ಬಗ್ಗೆ ಸಹಾ­ನುಭೂತಿಯಿರುವ ಈ ಅನಂತಮೂರ್ತಿ ಎಲ್ಲಿ? ಇವರಿಬ್ಬರಿಗೂ ಎತ್ತಣಿಂದೆತ್ತಣ ಸಂಬಂಧ?ಈಗ ಹೊರಳಿನೋಡಿದರೆ ಈ ಸಂಬಂಧವೇ ನಿಮ್ಮ ಸರೀಕರ ನಡುವೆ ನಿಮ್ಮ ಅನನ್ಯತೆ ಎನಿಸು­ತ್ತದೆ. ನಿಮ್ಮ ಕೃತಿಗಳೆಲ್ಲದರಲ್ಲೂ ವ್ಯಕ್ತವಾಗುವ ಗುಣವೆಂದರೆ ಹಳೆಯದು ಮತ್ತು ಹೊಸದರ ಬಗ್ಗೆ ನಿಮಗಿದ್ದ ವಿಮರ್ಶಾತ್ಮಕ ನಿಲುವು. ಈ ನಿಲುವು ಎಂದೂ ಸಾರಾಸಗಟಾದ ತಿರಸ್ಕಾರ­ವಾ­ಗಿ­ರಲಿಲ್ಲ ಎಂಬುದು ಮುಖ್ಯ. ಲಂಕೇಶರಿ­ಗಾ­ಗಲೀ ತೇಜಸ್ವಿಯವರಿಗಾಗಲೀ ಗತ ಎಂಬುದು ಒಂದು ಕಾರಾ­ಗೃಹ. ಅಡಿಗರಂಥವರಿಗೆ ಗತ ಹೊಸ ಸಾಧ್ಯತೆಗಳ ಗಣಿ. ನಿಮಗೆ ಹಾಗಲ್ಲ. ಗತದ ಕುಸಿತವನ್ನು ನಿರ್ಮಮವಾಗಿ ವಿವರಿಸುವ ನೀವು ಆಧುನಿಕ ವಿಕಾರಗಳ ಬಗ್ಗೆಯೂ ತೆರೆದ ಕಣ್ಣ­ವ­ರಾಗಿದ್ದಿರಿ. ಪ್ರಾಣೇಶಾಚಾರ್ಯ ಮುಂತಾದ ನಿಮ್ಮ ಹೀರೊಗಳು ಗತಕ್ಕೆ ವಿದಾಯ ಹೇಳಿ ಅನಿರ್ದಿಷ್ಟವಾದ ಪ್ರಸ್ತುತವನ್ನು ಹೊಕ್ಕರೆ, ಬಿಸಿಲು­ಕುದುರೆಯ ಕಥಾನಾಯಕ ಎಲ್ಲೋ ಒಂದು ಕಡೆ ಹಿಂತಿರುಗುತ್ತಿರುತ್ತಾನೆ. ಹೀಗೆ ಹಿಂದು­ಮುಂದು­ಗಳ ಸಮಾನ ಸೆಳೆತದ ನಡುವೆ ನಿಮ್ಮ ಚಿಂತನೆ ಮತ್ತು ಪ್ರತಿಭೆಗಳು ಒಂದು ವಿಮ­ರ್ಶಾತ್ಮಕ ವರ್ತಮಾನ­ವನ್ನು ಕಲ್ಪಿಸಿ­ಕೊಟ್ಟವು. ಇದರ ಜೊತೆಗೇ ತಳಕು ಹಾಕಿಕೊಂಡಿತ್ತು ನಿಮ್ಮ ಪ್ರಜಾ­ಸತ್ತಾತ್ಮಕ ಬದ್ಧತೆ. ನಾವು ಪ್ರಜಾ­ಪ್ರಭುತ್ವ­ವನ್ನು ಗೌರವಿಸಿದರೆ ಎಲ್ಲ ದನಿಗಳನ್ನೂ ಕೇಳಿಸಿ­ಕೊಳ್ಳ­ಬೇಕು. ಹೊಸ ಕಾಲದ ದನಿಗಳಷ್ಟೇ ಹಳೆಯ ಕಾಲದ ದನಿಗಳೂ ಮುಖ್ಯ. ‘ಸಂತಃ ಪರೀಕ್ಷಾ­ನಂತರಂ ಭಜಂತೆ’ ಅಂತ ಕಾಳಿದಾಸ ಹೇಳಿದನಲ್ಲ, ಹಾಗೆ.ಪರ- ವಿರೋಧಗಳೆರಡಕ್ಕೂ ಕಿವಿಗೊಡುವ ನಿಮ್ಮ ಪ್ರಜಾಸತ್ತಾತ್ಮಕ ಬದ್ಧತೆಗೂ, ನಿರಂತರ ಭಿನ್ನಮತದಲ್ಲಿ ವಿಹರಿಸುವ ಲಂಕೇಶರ ಪ್ರಜಾಸ­ತ್ತಾತ್ಮಕ ಬದ್ಧತೆಗೂ ಇದ್ದ ಅಂತರ್ ವಿರೋಧ ನಮ್ಮ ಕಾಲದ ಒಂದು ಸಾಂಸ್ಕೃತಿಕ ವಿಶೇಷ. ಉದಾಹರಣೆಗೆ ಲಂಕೇಶರು ವ್ಯವಸ್ಥೆಯ ಜೊತೆ ಎಂದೂ ರಾಜಿ ಮಾಡಿ­ಕೊಳ್ಳದೆ ಅದರ ಹೊರಗೇ ಉಳಿದರು. ನಿಮ್ಮಂತೆ ಕುಲಪತಿ, ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಇತ್ಯಾದಿ ಆಗಲೇ ಇಲ್ಲ. ಆದ್ದರಿಂದ ಅಪ್ಪಟ ಭಿನ್ನಮತೀಯರಾಗಿ ತಮ್ಮ ವಾಣಿಗೆ ಎಲ್ಲರಿಗಿಂತ ಭಿನ್ನವಾದ ನಿಶಿತತೆಯನ್ನು ತಂದುಕೊಂಡರು. ನೀವು ಲಂಕೇಶರ ಹಾಗಿರ­ಬೇಕಾ­ಗಿತ್ತು ಅಂತ ನಾನು ಹೇಳುತ್ತಿಲ್ಲ. ನಿಮ್ಮ ಪ್ರಜಾಸತ್ತೆಯ ಮಾದರಿ ಬೇರೆಯ ಥರದ್ದೆಂದೂ, ಅದಕ್ಕೆ ತನ್ನದೇ ಆದ ತರ್ಕವಿದೆಯೆಂದೂ ಹೇಳು­ತ್ತಿ­ದ್ದೇನೆ. ಹೊಸ ಚಿಂತನೆಯ ನೀವು ಆಡಳಿತಾತ್ಮಕ ಸ್ಥಾನಗಳಿಗೆ ಬಂದಾಗ ಅತ್ಯುತ್ತಮವಾದ ಪ್ರಜಾ­ಸತ್ತಾತ್ಮಕ ಬದಲಾವಣೆಗಳನ್ನು ತಂದಿರಿ. ಕೇರಳದ ಮಹಾತ್ಮ ಗಾಂಧಿ ವಿಶ್ವವಿದ್ಯಾಲಯಕ್ಕೆ ಕುಲಪತಿ­ಗಳಾಗಿದ್ದಾಗ ಗೊಡ್ಡು ನಿಯಮಗಳನ್ನು ದೂಳೀ­ಪಟ ಮಾಡಿ ಪಿಎಚ್.ಡಿ ಇಲ್ಲದ ಪ್ರತಿಭಾವಂತ­ರಾದ ವಿನಯಚಂದ್ರನ್, ನರೇಂದ್ರ ಪ್ರಸಾದ್ ಮುಂತಾದವರಿಗೆ ಕೆಲಸ ಕೊಟ್ಟಿರಿ. ಸಾಹಿತ್ಯ ಅಕಾ­ಡೆಮಿಯ ಅಧ್ಯಕ್ಷರಾಗಿ ಈವರೆಗೆ ಸಂವಿಧಾನಾತ್ಮಕ ಮಾನ್ಯತೆ ಸಿಗದ ಬುಡಕಟ್ಟು ಭಾಷೆಗಳ ಸಾಹಿತ್ಯಿಕ ಕೊಡುಗೆಯನ್ನು ಗೌರವಿಸುವ ಪರಿಪಾಠವನ್ನು ಶುರು ಮಾಡಿದಿರಿ. ವ್ಯವಸ್ಥೆಯು ಸದ್ವಿಚಾರವುಳ್ಳ ವ್ಯಕ್ತಿಯ ಕೈಗೆ ಸಿಕ್ಕಾಗ ಎಂಥ ಇತ್ಯಾತ್ಮಕ ಸುಧಾ­ರಣೆಗಳನ್ನು ತರಬಹುದೆಂದು ಸಾಬೀತು ಪಡಿಸಿ­ದಿರಿ.ಹಲವು ಸಲ ನಿಮ್ಮ ಸರ್ವಗ್ರಹಿತ್ವವು ಪ್ರಜಾ­ಸತ್ತಾ­ತ್ಮಕ ಎಲ್ಲೆಗಳನ್ನು ಮೀರಿ ವಿಪರೀತ­ವಾದದ್ದಕ್ಕೂ ಉದಾಹರಣೆಗಳಿವೆ. ಹೀಗಾದಾಗ ನನ್ನನ್ನೂ ಸೇರಿದಂತೆ ಹಲವರನ್ನು ಬೆಚ್ಚಿಸಿದಿರಿ. ಜಾತಿ ವಿರೋಧದ ಮುಂಚೂಣಿಯಲ್ಲಿದ್ದ ನೀವು, ಎಂಬತ್ತರ ದಶಕದಲ್ಲಿ ಅಚಾನಕ್ಕಾಗಿ ಜಾತಿ ವ್ಯವಸ್ಥೆ ಸೃಜನಶೀಲವಾದುದೆಂದು ಘೋಷಿಸಿ­ಬಿಟ್ಟಿರಿ. ಇದೊಂದು ‘ಕಂತ್ರಿ ನಿಲುವು’ ಎಂದು ತತ್‌ಕ್ಷಣದ ಪ್ರತಿಕ್ರಿಯೆ ನೀಡಿದ ಡಿ.ಆರ್.­ನಾಗರಾಜ್‌ ಅವರೇ ಮುಂದೆ ಇದನ್ನು ಆ ದಶಕದ ಅತ್ಯಂತ ಸೃಜನಾತ್ಮಕ ಚಿಂತನೆಗಳ­ಲ್ಲೊಂದು ಎಂದು ಹೊಗಳತೊಡ­ಗಿದರು. ಇನ್ನೊಂದು ಸಲ ಬೆತ್ತಲೆ ಪೂಜೆಯನ್ನು ವಿಚಾರ­ವಾದಿಗಳು ವಿರೋಧಿಸುತ್ತಿದ್ದಾಗ ನೀವು ಬೆತ್ತಲೆ ಪೂಜೆಯನ್ನು ಸಮರ್ಥಿಸಿ ಹೇಳಿಕೆ ಕೊಟ್ಟಿರಿ. ಆ ಹೇಳಿಕೆಗೆ ಕಿ.ರಂ. ನಾಗರಾಜ  ಅವರ ಜೊತೆ ನಾನೂ ಸಹಿ ಹಾಕಿ ಚಂಪಾ ಅವರಿಂದ ಚೆನ್ನಾಗಿ ಉಗಿಸಿಕೊಂಡೆ. ಈಚೆಗೆ ಮೋದಿ ಸರ್ಕಾರ ಬಂದರೆ ದೇಶತ್ಯಾಗ ಮಾಡುವುದಾಗಿ ಘೋಷಿಸಿ ಕಟು ಟೀಕೆಗೊಳ­ಗಾದಿರಿ. ನೀವು ಕಾಲವಾದ ಕೂಡಲೇ ಪಟಾಕಿ ಹಾರಿಸಿ ಸಂಭ್ರಮಿಸಿದವರ ಅಸಭ್ಯತೆಯೇನೋ ಖಂಡನೀಯ. ಆದರೆ ತಮಗೆ ಬೇಕಾದ ನಾಯಕನನ್ನು ಜನ ಆರಿಸುವ ಬಗ್ಗೆ ನೀವು ತೋರಿದ ಅಸಹನೆ ಪ್ರಜಾಪ್ರಭುತ್ವ ಸಮ್ಮತ­ವಲ್ಲ. ಪ್ರಜಾಪ್ರಭುತ್ವ ಸಹನೆಯ ಸಂಸ್ಕೃತಿ. ಇಂದು ಆರಿಸಿ ಬಂದವರನ್ನು  ನಾಳೆ ತೆಗೆದು ಹಾಕುವ ಸ್ವಾತಂತ್ರ್ಯವೂ ಜನರಿಗಿರುವುದನ್ನು ನೆನಪಿಟ್ಟು­ಕೊಂಡರೆ ಆ ತೆರನಾದ ಅಸಹನೆಗೆ ಕಾರಣವಿಲ್ಲ.ಆದರೆ ಈ ಎಲ್ಲ ಅತಿರೇಕಗಳು ನಿಮ್ಮ ಪ್ರಜಾ­ಸತ್ತಾತ್ಮಕ ನಿಲುವಿಗೆ ಒಂದು ಮಾನವೀಯ ಆರ್ದ್ರತೆ­ಯನ್ನು ನೀಡಿದವೆಂದು ನನಗೀಗ ತೋರು­ತ್ತಿದೆ. ಯಾಕೆಂದರೆ ಪ್ರಜಾಪ್ರಭುತ್ವದ ಆದರ್ಶ ಫ್ಯಾಸಿಸ್ಟರ, ಯುಟೋಪಿಯನ್ನರ ಆದರ್ಶ­ದಂತೆ ಪರಿಶುದ್ಧವಾದುದಲ್ಲ. ಅದು ಮಾನವೀಯ ಸಾಧ್ಯಾಸಾಧ್ಯತೆಗಳ, ಶಕ್ತಿ  ದೌರ್ಬಲ್ಯ­ಗಳ ನಡುವೆಯೇ ಪ್ರತೀತವಾಗುವ ತಥ್ಯ. ಈ ತಥ್ಯವೇ ನಿಮ್ಮ ವಿರೋಧಾಭಾಸಗಳಲ್ಲಿ, ವೈಪರೀತ್ಯಗಳಲ್ಲಿ ವ್ಯಕ್ತವಾದದ್ದು.ಪರ- ವಿರೋಧಗಳ ನಡುವಿನ ಅನಿರ್ದಿಷ್ಟ ಅವ­ಕಾಶದಲ್ಲಿ ಉಸಿರಾಡಿದ ನಿಮ್ಮ ಬರಹಗಳು, ವಿಚಾರ -ಆಚಾರಗಳು ನಮ್ಮ ಕಾಲದ ಕನ್ನಡ ಜಗತ್ತಿನಲ್ಲಿ ನಡೆದ ದೊಡ್ಡ ಪ್ರಜಾಸತ್ತೆಯ ಪ್ರಯೋಗ. ಅದರ ಗೆಲುವು–-ಸೋಲುಗಳಿಂದ ನಾವೆಲ್ಲರೂ ಕಲಿಯುವುದಿದೆ. ಅಪರಿಪೂರ್ಣ­ವಾದ ಪ್ರಜಾಸತ್ತೆಯ ಮೌಲ್ಯಗಳ ನೆರವಿನಿಂದ ಮಾತ್ರ ಇಂದು ನಾವು ಪರಿಪೂರ್ಣತೆಯ ಕಡೆ ಧಾವಿಸಲು ಸಾಧ್ಯ. ಆದರೆ ಆ ಗುರಿಯನ್ನು ಎಂದೂ ತಲುಪಲಾರೆವು. ವಿಲಿಯಂ ಬ್ಲೇಕ್ ಅಂದ ಹಾಗೆ ಜೆರುಸಲೇಮ್‌ನ ಪರಿಪೂರ್ಣ ಸ್ಥಿತಿಯನ್ನು ಮೃಣ್ಮಯಿ ಶರೀರದಲ್ಲಿ ಎಂದೂ ಪಡೆಯಲಾರೆವೇನೋ.ವಿರೋಧಗಳ ನಡುವೆಯೂ ಸ್ನೇಹವನ್ನು ಉಳಿಸಿ­ಕೊಳ್ಳುತ್ತಿದ್ದ ನಿಮ್ಮ ಸ್ವಭಾವ ಅನುಕರ­ಣೀಯ. ಒಮ್ಮೆ ನನಗೆ ಹೇಳಿದ್ದಿರಿ: ‘ಈ ಇಂಟರ್‌­ವ್ಯೂನಲ್ಲಿ ನಾನು ನಿನ್ನ ತುಂಬಾ ವಿರೋಧಿಸಿ­ದೆನಯ್ಯ. ನಿನ್ನ ಮೇಲೆ ತುಂಬಾ ಸಿಟ್ಟು ಬಂದಿತ್ತು. ನೀನು ತೀರಾ ಲಘುವಾಗಿ ನನ್ನ ಬಗ್ಗೆ ಮಾತಾ­ಡುತ್ತಿರೋದು ಗೊತ್ತಾಯಿತು. ನನ್ನ ಇಚ್ಛೆಗೆ ವಿರುದ್ಧವಾಗಿ ನೀನು ಈ ಹುದ್ದೆಗೆ ಆಯ್ಕೆಯಾಗಿ­ದ್ದೀಯ’. ನಾನು ಸಾಹಿತ್ಯ ಅಕಾಡೆಮಿಯಲ್ಲಿ ಸಂಪಾದಕ ಹುದ್ದೆ ಪಡೆದಾಗ ನೀವು ಹೀಗೆಂದಿರಿ. ಮುಂದೆ ಆ ಸಿಟ್ಟನ್ನು ಮುಂದುವರಿಸಲಿಲ್ಲ. ನನಗೆ ಎಷ್ಟರಮಟ್ಟಿಗೆ ಸ್ವಾತಂತ್ರ್ಯ ಕೊಟ್ಟಿರೆಂದರೆ, ಅಲ್ಲಿನ ಪತ್ರಿಕೆಯಲ್ಲಿ ನಿಮ್ಮ ವಿರುದ್ಧ ಇದ್ದ ಬರಹ­ವೊಂದನ್ನು ಪ್ರಕಟಿಸಿದಾಗ, ನಿಮ್ಮ ಕಟ್ಟಾ ವಿರೋಧಿ­ಗಳಾದ ಭೈರಪ್ಪನವರ ಸಂದರ್ಶನವನ್ನು ಪ್ರಕಟಿಸಿ­ದಾಗ ನೀವು ನನ್ನನ್ನು ತೀರಾ ಬೈಯಲಿಲ್ಲ.ಕಳೆದ ಎರಡು-ಮೂರು ವರ್ಷಗಳಿಂದ ನೀವು ನನ್ನ ಮೇಲೆ ತೀರಾ ಸಿಟ್ಟಾಗಿದ್ದಿರಿ. ನಾನು ನೀಡಿದ ಸಮಜಾಯಿಷಿ ನಿಮ್ಮನ್ನು ಶಾಂತಗೊಳಿಸದ ಕಾರಣ ನಾನೂ ದೂರವಾಗಿದ್ದೆ. ನೀವು ಹೇಳಿದ ಹಾಗೆ ನಿಮ್ಮ ಕೊನೆಯ ದಿನಗಳಲ್ಲಿ ನಿಮ್ಮನ್ನು ಭೆಟ್ಟಿಯಾಗುವ ಅವಕಾಶ ದೊರಕಿದ್ದರೆ ನಮ್ಮ ಮನಸ್ತಾಪವನ್ನು ಇತ್ಯರ್ಥ ಮಾಡಿಕೊಳ್ಳ­ಬಹು­ದಿತ್ತು. ಹಾಗಾಗಲಿಲ್ಲ. ನನಗೆ ಮೇಷ್ಟ್ರಾಗದೆಯೂ ಹಲವು ಪಾಠ­ಗಳನ್ನು ನಿಮ್ಮ ಸಾಹಿತ್ಯದ ಮೂಲಕ ಕಲಿಸಿದ ನಿಮಗೆ ಕೃತಜ್ಞತೆಯ ಕಣ್ಣೀರು.ನಿಮ್ಮ ಅನಿಸಿಕೆ ತಿಳಿಸಿ:editpagefeedback@prajavani.co.in

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.