ಭಾನುವಾರ, ಮೇ 9, 2021
18 °C

ಮೌನದಲ್ಲಿ ಅಡಗಿಹೋದ ಅದಮ್ಯ ದನಿ

ಎಚ್.ಎಸ್.ಶಿವಪ್ರಕಾಶ್ Updated:

ಅಕ್ಷರ ಗಾತ್ರ : | |

ಮೌನದಲ್ಲಿ ಅಡಗಿಹೋದ ಅದಮ್ಯ ದನಿ

ಗೆಳೆಯ ವಿನಯಚಂದ್ರನ ಸಾವಿನ ಸುದ್ದಿ ಹಠಾತ್ತಾಗಿ ನನ್ನ ಮೇಲೆರೆಗಿತು. ಸಾವು ಸಹಜ. ಯಾರಿಗೂ ತಪ್ಪಿದ್ದಲ್ಲ. ಯೋಗಿಗಳಾಗಲಿ ಭೋಗಿಗಳಾಗಲಿ ಋಷಿಗಳಾಗಲಿ ಮುನಿಗಳಾಗಲಿ ಸತ್ಯರೆಂಬುದು ಹುಸಿ, ನಿತ್ಯರೆಂಬುದು ಹುಸಿ, ಸತ್ತರೆಂಬುದು ದಿಟ ಗೊಗ್ಗೇಶ್ವರ ಅನ್ನುತ್ತಾನೆ ಅಲ್ಲಮ.ಕಲಾವಿದರಿಗೂ ಇದು ಅನ್ವಯ. ಈ ಲೋಕಸತ್ಯ ಗೊತ್ತಿದ್ದರೂ ಸಾವು ಸದಾ ನಮ್ಮ ಎಡಬಲಗಳಲ್ಲಿ ಸುಳಿದಾಡುತ್ತಿದೆಯೆಂಬುದನ್ನು ನಾವು ಮರೆತಿರುತ್ತೇವೆ. ಅದು ಒಳ್ಳೆಯದೇ. ಅದು ಸದಾ ನೆನಪಿರುತ್ತಿದ್ದರೆ ಕ್ಷಣಭಂಗುರವಾದ ಬದುಕಿನ ಸಿಹಿಕಹಿಗಳಲ್ಲಿ ನಾವು ತಲ್ಲೆನರಾಗಲು ಶಕ್ಯವಿರುತ್ತಿರಲಿಲ್ಲ. ನಾವು ಸದಾ ಇರುತ್ತೇವೆಂಬ ಭ್ರಮೆಯಲ್ಲಿ ಸುಖಗಳನ್ನು ಸವಿಯುತ್ತಿರುತ್ತೇವೆ ದುಃಖಗಳನ್ನು ನುಂಗುತ್ತಿರುತ್ತೇವೆ.ಅರ್ಧ ಮನುಷ್ಯ ಮತ್ತು ಅರ್ಧ ಕುದುರೆಯಾಗಿದ್ದ ಗ್ರೀಕರ ದೇವತೆ ಸೆಂಟಾರನಿಗೆ ದೇವರಾಜ ಜಯಸ್‌ನಿಂದ ಅಮರತ್ವದ ವರ ಸಿಕ್ಕಿತ್ತಂತೆ. ಆದರೆ ಎಷ್ಟೋ ಸಮಯ ಗತಿಸಿದ ಮೇಲೆ ಎಲ್ಲವೂ ನೀರಸವಾಗಿ ತೋರತೊಡಗಿತು. ಕೊನೆಗವನು ಹಿಂದೊಮ್ಮೆ ಅಮರತ್ವಕ್ಕಾಗಿ ಹೇಗೆ ಹಪಹಪಿಸುತ್ತಿದ್ದನೋ ಹಾಗೇ ಸಾವಿಗಾಗಿ ಬೇಡತೊಡಗಿದ. ಹೀಗಾಗಿ ಸಾವು ಅನಿವಾರ್ಯ ಮಾತ್ರವಲ್ಲ ಅಪೇಕ್ಷಣೀಯವೂ ಹೌದು.ಅಮರತ್ವದಂತೆ ಸಾವೂ ಒಂದು ವರ. ಮೃತ್ಯುಂಜಯತ್ವದ ಅರ್ಥವೂ ಇದೇ ಇರಬೇಕು. ಮಾರ್ಕಂಡೇಯ ಅಮರತ್ವವನ್ನು ಪಡೆದುಕೊಂಡಿದ್ದರೆ ಇನ್ನೂ ಎಲ್ಲೋ ಜೀವಿಸಿರಬೇಕಾಗಿತ್ತು. ಹಾಗಿದ್ದರೆ ಅವನು ಮೃತ್ಯುಂಜಯತ್ವವನ್ನು ಪಡೆದದ್ದು ಸುಳ್ಳೇ? ಅಥವಾ ಅದರ ಅರ್ಥ ಶರಣರ ಪರಿಭಾಷೆಯಲ್ಲಿ ಲೇಸೆನಿಸಿಕೊಂಡು ಬದುಕಿದನೆಂದೆ?ನನ್ನ ಪರಿಚಿತರಾದ ಒಬ್ಬ ಅವಧೂತರ ಬಳಿ ಒಬ್ಬ ವ್ಯಕ್ತಿ ಬಂದ. ಕೇಳಿದ: `ಗುರುಗಳೆ, ನನಗೆ ನಲವತ್ತಕ್ಕೆ ಸಾವೆಂದು ಎಲ್ಲ ಜೋಯಿಸರೂ ಹೇಳುತ್ತಿದ್ದಾರೆ. ಎಷ್ಟು ದಿನ ಬದುಕುತ್ತೇನೆ ನೋಡಿ ಹೇಳಿ.' ಅವಧೂತರೆಂದರು: `ನೋಡಪ್ಪ, ನನಗೆ ಜ್ಯೋತಿಷ್ಯ ಗೊತ್ತಿಲ್ಲ. ಆದರೆ ಒಂದು ಭವಿಷ್ಯವಾಣಿ ಖಚಿತವೆಂದು ಗೊತ್ತು. ಬ್ರಹ್ಮನೂ ಅದನ್ನು ತಪ್ಪಿಸಲಾರ. ಬೇಕೆಂದರೆ ಹೇಳುತ್ತೇನೆ' ಅಂದರು. ಆ ವ್ಯಕ್ತಿ ಕೇಳಲು ಒಪ್ಪಿದಾಗ ಅವರೆಂದರು: `ಆ ಭವಿಷ್ಯವಾಣಿ ಇಷ್ಟೆ: ಒಂದು ದಿನ ನೀನು ಖಂಡಿತಾ ಸತ್ತುಹೋಗುತ್ತೀಯ. ಆದ್ದರಿಂದ ಯಾವುದು ಸಾಯುವುದಿಲ್ಲವೋ ಅದನ್ನು ಹುಡುಕಿಕೋ'ತನ್ನ ರಸವಿದ್ಯೆಯ ಬಲದಿಂದ ಎರಡುನೂರು ವರ್ಷ ಜೀವಿಸಿದ್ದನೆಂದು ಹೇಳಲಾದ ನಾಗಾರ್ಜುನನಿಗೂ ಒಂದು ದಿನ ಎಲ್ಲವೂ ಬೇಡವಾಗಿ ತನ್ನೆಲ್ಲ ಶಕ್ತಿಗಳನ್ನೂ ತನ್ನ ಶಿಷ್ಯ ಆರ್ಯದೇವನಿಗೆ ಧಾರೆಯೆರೆದು ಅಸುನೀಗಿದನೆಂದು ದಂತಕತೆ.ಕವಿ,ಕಲಾಕಾರರು ಸತ್ತರೂ ಕಲೆ,ಕಾವ್ಯ ಸಾಯದೆಂದು ಕವಿ,ಕಲಾಕಾರರು ಘೋಷಿಸುತ್ತಾರೆ. ತಮ್ಮನ್ನು, ತಮ್ಮ ಪ್ರೀತಿಯ ವ್ಯಕ್ತಿಗಳನ್ನು ವಸ್ತುಗಳನ್ನು ಅಜರಾಮರಗೊಳಿಸಲೆಂದು ಕವಿತೆ ಕಟ್ಟುತ್ತಾರೆ, ಶಿಲೆ ಕೆತ್ತುತ್ತಾರೆ, ಭವನಗಳನ್ನು ನಿಲ್ಲಿಸುತ್ತಾರೆ. ಆದರೆ ಅವೆಲ್ಲವೂ ಕಾಲನ ಬಾಯ ತುತ್ತುಗಳೇ. ತಮಗೆ ಪ್ರಿಯವಾದವುಗಳನ್ನು ತಮ್ಮ ಕಲೆಯನ್ನು ಚಂದ್ರ-ಸೂರ್ಯ-ನಕ್ಷತ್ರಗಳಿಗೆ ಹೋಲಿಸುತ್ತಾರೆ. ಆದರೆ ಆ ಕ್ಷಣದಲ್ಲಿ ಅವೆಲ್ಲವೂ ಮರ್ತ್ಯವೆಂಬುದನ್ನು ಮರೆತಿರುತ್ತಾರೆ.ಇಂಗ್ಲಿಷ್ ಕವಿ ವಿಲ್ಯಂ ಕೌಪರ್‌ಗೆ ಅವನ ಸತ್ತ ತಾಯಿಯ ಭಾವಚಿತ್ರವೊಂದನ್ನು ಗೆಳೆಯರೊಬ್ಬರು ನೀಡಿದಾಗ ಅವನು ಹಾಡಿದ: ಬ್ಲೆಸ್ಡ್ ಬಿ ದಿ ಆರ್ಟ್ ದಟ್ ವಿನ್ಸ್  ಟೈಮ್ಸ ಟಿರನಿಕ್ ಕ್ಲೈಂಬ್. ಅಂದರೆ: ಸಾವಿನ ಸರ್ವಾಧಿಕಾರಿ ಏರುವಿಕೆಯನ್ನು ನಿಯಂತ್ರಿಸುವ ಕಲೆಗೆ ಜಯವಾಗಲಿ. ಆದರೆ ಇದೊಂದು ಹಳಹಳಿಕೆಯೇ ಹೊರತು ನಿಜ ಸಂಗತಿಯಲ್ಲ. ಯಾಕೆಂದರೆ ಎಷ್ಟೋ ಕಾವ್ಯರತ್ನಗಳು, ಚಿತ್ರಪಟಗಳು, ಶಿಲಾಮೂರ್ತಿಗಳು, ಭವ್ಯಭವನಗಳು, ಮಹಾನ್ ನಗರಾವಳಿಗಳು ಆಕಸ್ಮಿಕಗಳಲ್ಲಿ, ಆಕ್ರಮಣಗಳಲ್ಲಿ, ಬೆಂಕಿ-ನೀರುಗಳ ಹಾವಳಿಯಲ್ಲಿ ಬೂದಿಯಾಗಿವೆ, ಕೊಚ್ಚಿಕೊಂಡುಹೋಗಿವೆ, ನಶಿಸಿಹೋಗಿವೆ.ಆದ್ದರಿಂದ ಸಾವನ್ನು ಗೆಲ್ಲುವುದು ಹಾಗಲ್ಲ. ಪ್ರತಿ ಕ್ಷಣವೂ ಅನಂತವೆಂಬಂತೆ ಬಾಳುವುದು. ಈ ಲೋಕದಲ್ಲೇ ಅನಂತಲೋಕಗಳನ್ನು ಕಾಣುವಂತೆ ಈ ಕಾಲದಲ್ಲೇ ಎಲ್ಲ ಕಾಲಗಳನ್ನು ಅನುಭವಿಸುವುದು.ಹೀಗೆ ಬಾಳಿದವನು ವಿನಯಚಂದ್ರ. ಸತ್ತರೂ ಸಾರ್ಥಕವಾಗಿ ಬಾಳಿದವನು.ಅವನೊಬ್ಬ ವಿಲಕ್ಷಣ ಕವಿ. ನಾವೇನೂ ಮತ್ತೆ ಮತ್ತೆ ಭೆಟ್ಟಿಯಾಗುತ್ತಿದ್ದ ಗೆಳೆಯರಲ್ಲ. ಇಡೀ ಜೀವಮಾನದಲ್ಲಿ ನಾನವನನ್ನು ಸಂಧಿಸಿದ್ದು ಐದಾರು ಸಲವಿರಬಹುದು. ಆದರೂ ನನ್ನ ಉಸಿರಿನಷ್ಟೇ ನನಗವನು ಹತ್ತಿರವಾಗಿದ್ದ. ಅವನನ್ನು ಕಡೆಯಸಲ ನಾನು ಕಂಡದ್ದು ಏಳೆಂಟು ವರ್ಷಗಳ ಹಿಂದೆ, ತಿರುವನಂತಪುರದಲ್ಲಿ ನಾಕು ದಿವಸ ನಾವಿಬ್ರೂ ಒಟ್ಟಿಗೆ ಕಳೆದಿದ್ದೆವು.ನಾಕೈದು ವರ್ಷಗಳ ನಂತರ ನಾನು ಒಂದು ರಾತ್ರಿ ಅವನಿಗೆ ಫೋನು ಮಾಡಿದಾಗ ಒಂದೇ ಸಮನೆ ಅಳತೊಡಗಿದ. ಅವನ ಬದುಕಿನಲ್ಲಿ ಹಲವು ವ್ಯಸನಗಳಿದ್ದವು. ಅವುಗಳಲ್ಲಿ ನಾವಿಬ್ಬರೂ ಪರಸ್ಪರ ಭೆಟ್ಟಿಯಾಗಲಿಲ್ಲವಲ್ಲಾ ಎಂಬುದೂ ಒಂದೆಂದು ನನಗಾಗ ಗೊತ್ತಾಯಿತು. ಅದು ನನ್ನ ದುಃಖವೂ ಆಗಿತ್ತು. ಆದರೆ ನನಗೆ ದುಃಖವಾದಾಗ ಅಳುವೂ ಬರುವುದಿಲ್ಲ. ಅವನು ಭಾವುಕನಾದಾಗ ಯಥೇಚ್ಛವಾಗಿ ಅಳುತ್ತಿದ್ದ.ಆತ ವಿಲಕ್ಷಣನೆನ್ನುವುದು ಅವನನ್ನು ಮೊದಲು ಕಂಡಾಗಲೇ ನನಗೆ ಹೊಳೆಯಿತು. ನಮ್ಮ ಮೊದಲ ಭೆಟ್ಟಿಯಾದದ್ದು ಭೂಪಾಲಿನಲ್ಲಿ. 1988ರ ಆಸುಪಾಸಿನಲ್ಲಿ ನಡೆದ ಬರಹಗಾರರ ಮೇಳದಲ್ಲಿ. ಭದ್ರಾವತಿ ಚಿನ್ನದಂಥ ಮೈ ಬಣ್ಣದ, ಆಗಾಗಲೇ ರವಷ್ಟು ತಲೆಗೂದಲು ಉದುರಿರುವ, ತೆಳು ದೇಹದ, ಗಟ್ಟಿದನಿಯ, ಭಾವುಕ ಕಣ್ಣುಗಳ ಆತ ವ್ಯಕ್ತಿಯಾಗಿ ನನ್ನ ಗಮನ ಸೆಳೆದಿದ್ದ. ತನ್ನ ವಿಲಕ್ಷಣ ಕವಿತೆಗಳಿಂದ ಅವನ್ನು ತಾನು ಹಾಡುತ್ತಿದ್ದ, ಉಗ್ಗಡಿಸುತ್ತಿದ್ದ ವಿಶಿಷ್ಟ ಬಗೆಯಿಂದ ಕವಿಯಾಗಿಯೂ ನನ್ನ ಮನ ಸೆಳೆದಿದ್ದ. ಇತರ ಕವಿಗಳು ನಾಚಿನಾಚಿಕೊಂಡು, ಅಕ್ಕಪಕ್ಕದವರು ಏನೆನ್ನುತ್ತಾರೋ ಅಂತ ಸುತ್ತಮುತ್ತ ನೋಡುತ್ತಾ ಕವಿತೆಗಳನ್ನು ಓದುತ್ತಿದ್ದರು.ಆದರೆ ಅವನು ಯಾರ ಪರಿವೆಯೂ ಇಲ್ಲದಂತೆ ನಿಜಾನಂದದಲ್ಲಿ ಮುಳುಗಿರುವಂತೆ `ಏಲೇಲೋರೇರೇರೋ..ಎಲ್ಲಾರ್ಕುಂ ಮಂಗಳಮುಂಡೊ' ಎಂದು ಗಟ್ಟಿದನಿಯಲ್ಲಿ ಹಾಡಿ ಎಲ್ಲರನ್ನೂ ಆಕರ್ಷಿಸಿದ.  ಮರುಕ್ಷಣವೇ ಅತ್ಯಾಧುನಿಕವಾದ ಸರ್ರಿಯಲಿಸ್ಟ್ ಕವಿತೆಯೊಂದನ್ನು ಓದಿದ. ಕೊನೆಗೆ ತನ್ನ ಪ್ರಸಿದ್ಧವಾದ ಗಣಪತಿಸ್ತುತಿಯನ್ನು ಸುಶ್ರಾವ್ಯವಾಗಿ ಹಾಡಿದ. ಅದೊಂದು ವಾಗ್ವಿಲಾಸದ ಕವಿತೆ. ಆದರೂ ಅರ್ಥಗರ್ಭಿತ. ಅದರ ಮಲೆಯಾಳಂ ಮೂಲ ನನಗೆ ನೆನಪಿಲ್ಲ.  ನಾನೆ ಮುಂದೊಮ್ಮೆ ಅದರ ಮೊದಲ ಪದ್ಯವನ್ನು ಹೀಗೆ  ಕನ್ನಡಿಸಿದ್ದೆ:ಲೋಕತ್ರಯಗಳನಾವರ್ತಿಸಲು

ಮುಕ್ಕಣ್ಣನು ತಾನಾಣತಿಯಿಕ್ಕಲು

ವಾಮೇಶ್ವರಿ ಶಿವೆಯೊಡೆಯನೆ ಶಿವನೆ

ವಾಗರ್ಥದ ಹುರುಳೆಂದಾಲೋಚಿಸಿ

ಪ್ರದಕ್ಷಿಣೆ ಮಾಡಿ ಪ್ರಸಾದವ ಕೊಂಬ

ತುಂಬುರುಳಿನ ಗಣಪನ ಸೊಂಡಿಲಿನೊಡೆಯನ

ಪಥ ನನ್ನ ಪಥಹೀಗೆ ಪ್ರಾರಂಭವಾಗುವ ಕವಿತೆ ತನ್ನ ಅತ್ಯದ್ಭುತ ವಾಗ್ವಿಲಾಸದ ಮೂಲಕ ಚಿದ್ವಿಲಾಸದ ಲೋಕವನ್ನೇ ಕಟ್ಟುತ್ತದೆ. ಅಂದರೆ ತನ್ನ ಕಾಲದ ಎಲ್ಲ ಸೂಕ್ಷ್ಮಗಳನ್ನರಿತಿದ್ದರೂ ಅವನು ತನ್ನ ಕಾಲದ ಮಿತಿಗೆ ಕಟ್ಟು ಬೀಳದೆ ಆರ್ಷೇಯ ಕವಿಯಂತೆ, ಜನಪದ ಕವಿಯಂತೆ ಕೂಡ ಬರೆಯ ಬಲ್ಲವನಾಗಿದ್ದ. ಇತರ ಕವಿಗಳು ಒಂದೊಂದು ಶೈಲಿಯಲ್ಲೇ ತಮ್ಮ ಸರ್ಕಸ್ಸು ಮಾಡುತ್ತಿರುವ ಸಂದರ್ಭದಲ್ಲಿ ವಿನಯಚಂದ್ರನ್ ಹಲವು ಕಾಲದ ಹಲವು ಶೈಲಿಗಳನ್ನು ಏಕಕಾಲದಲ್ಲಿ ಬಳಸುವಂಥ  ಕೌಶಲ ಪಡೆದುಕೊಂಡಿದ್ದ.ಮುಂದೊಮ್ಮೆ ಅವನು ಬೆಂಗಳೂರಿಗೆ ಬಂದು ಈ ಕವಿತೆಯನ್ನು ಓದಿದಾಗ ಹಲವರಿಗೆ ಅವನ ಪ್ರಗತಿಶೀಲ ಗುಣದ ಬಗ್ಗೆ ಅಪನಂಬಿಕೆ ಬಂತು. ಆತ್ಮೀಯರಾದ ಕ.ವೆಂ. ರಾಜಗೋಪಾಲ್ ಅವರು ಕೇಳಿದರು: `ಒಬ್ಬ ಆಧುನಿಕ ಕವಿ ಹೀಗೆ ದೇವರ ಸ್ತುತಿಯನ್ನು ಬರೆಯಲು ಹೇಗೆ ಸಾಧ್ಯ?' ಅದಕ್ಕೆ ಅವನ ಉತ್ತರ: `ಪ್ರಾಚೀನನಾಗಿರಲಿ ನವೀನನಾಗಿರಲಿ ಮೊದಲು ಕವಿ ಕವಿಯಾಗಿರಬೇಕು.ವ್ಯಾಸ ವಾಲ್ಮೀಕಿಗಳು ಪ್ರಾಚೀನರಾಗಿಯೂ ನವೀನರು ಹೇಗೋ ಹಾಗೇ  ನವೀನರೂ ಪ್ರಾಚೀನರಾಗಿರಬೇಕು.'

ಅವನು ಬರೆದು ಪ್ರಕಟಿಸುವುದಕ್ಕಿಂತಾ ರಚಿಸಿ ಹಾಡುತ್ತಿದ್ದುದು ಹೆಚ್ಚು; ಕವಿಸಮ್ಮೇಳನದಲ್ಲಿ ಓದುವುದಕ್ಕಿಂತಾ ಎಲ್ಲಿ ಜನ ನೆರೆದಿರುತ್ತಾರೋ ಅಲ್ಲಿ ನಿರ್ಭಿಡೆಯಿಂದ ಮೈದುಂಬಿ ಹಾಡುವುದು ಅವನಿಗೆ ಮೆಚ್ಚು. ಮದುವೆ-ಮಕ್ಕಳ ದಂದುಗಕ್ಕೆ ಬೀಳದ ಆತ ಅವಧೂತನ ಹಾಗೆ ಕೇರಳದ ಇಂಚಿಂಚುಗಳಲ್ಲಿ ಅಲೆಯುತ್ತಿದ್ದ. ಮೂಲತಃ ಅವನೊಬ್ಬ ಶಿಶುನಾಳ ಷರೀಫರಂತೆ, ಅಥವಾ ಇಂದಿನ ಯುಗಧರ್ಮದ ರಾಮಣ್ಣ, ಗದ್ದರ್, ಗೋರಟಿ ವೆಂಕಣ್ಣ ಇತ್ಯಾದಿಗಳಂತೆ ಪ್ರಜಾಕವಿ.ಕೇರಳದ ಹೊರಗೆ ಅವನ ಹೆಸರು ಅಷ್ಟು ಬೆಳಗಲಿಲ್ಲ, ನಿಜ.ಯಾಕೆಂದರೆ ಅವನ ಕವಿತೆಗಳು ಸಾಕಷ್ಟು ಅನುವಾದವಾಗಲಿಲ್ಲ. ಬೇಂದ್ರೆ, ಕಂಬಾರರ ಕವಿತೆಗಳಂತೆ ಜನಪದ ನುಡಿಯ ಒನಪು-ವಯ್ಯೊರಗಳೊಂದಿಗೆ ಮೈತಾಳಿ ಕಿವಿ-ಮನಗಳನ್ನು ತುಂಬುತ್ತಿದ್ದ ಅವನ ಬರಹಗಳನ್ನು ಅದರಲ್ಲೂ ಇಂಗ್ಲಿಷ್‌ಗೆ ಅನುವಾದಿಸುವುದು ಕಠಿಣಸಾಧ್ಯ. ಹೀಗಾಗಿ ಅವನೊಬ್ಬ ಪ್ರಾದೇಶಿಕ ವ್ಯಕ್ತಿಯಾಗೇ ಉಳಿದ.ಆದರೆ ದೇಶನೋಡುವುದರಲ್ಲಿಯೂ ಆತ ನಿಸ್ಸೀಮ. ಬಗಲಚೀಲದಲ್ಲಿ ಒಂದು ಜೊತೆ ಬಟ್ಟೆ ಇಟ್ಟುಕೊಂಡು ಎಲ್ಲಿಗೆ ಬೇಕಾದರೂ ಹೊರಡುತ್ತಿದ್ದ. ಬಸ್ ಸ್ಟ್ಯಾಂಡ್  ರೈಲ್ವೇ ಸ್ಟೇಷನ್ನುಗಳಲ್ಲಿ ಮಲಗುವುದು ಅವನಿಗೆ ಪ್ರಿಯ. ತನಗೆ ಬೇಕಾದ ಕಡೆ ಹೋಗಲು ಯಾವುದೇ ಪ್ರವಾಸ ಅನುದಾನಕ್ಕೆ ಕಾಯದೆ ಸ್ವಂತ ಖರ್ಚಿನಲ್ಲಿ ಮನಬಂದಂತೆ ತಿರುಗುತ್ತಿದ್ದ. ಹಿಮಾಲಯದಲ್ಲಿ ಬಹಳ ಸುತ್ತಾಡಿದ್ದ. ಅತ್ಯಂತ ಎತ್ತರದ ಪರ್ವತವಾದ `ಮದ್ ಮಾಹೇಶ್ವರ್' ನಲ್ಲಿ ಇದ್ದು ಬಂದಿದ್ದ.ಕೈಲಾಸಪರ್ವತಕ್ಕೂ ಹೋಗಿ ಬಂದು ಅದರ ಮೇಲೊಂದು ಅವಿಸ್ಮರಣೀಯ ಕವಿತೆ ಬರೆದಿದ್ದ. ಅಮೆರಿಕಾಕ್ಕೆ ಕೇರಳದ ಆಗಿನ ಮುಖ್ಯಮಂತ್ರಿ ನಾಯನಾರ್ ಜೊತೆ ಹೋಗಿದ್ದ. ಆದರೆ ಅಲ್ಲೊಂದು ಅಪಾಯಕಾರಿ ಸಾಹಸ ಕೈಗೊಂಡ. ಪೋಲಿಸರ ಸಲಹೆಗೆ ವಿರುದ್ಧವಾಗಿ ಅಮೆರಿಕನ್ ಇಂಡಿಯನ್ನರ ಕಾಲೊನಿಗಳನ್ನು ಹೊಕ್ಕು, ಅವರೊಡನೆ ಆತ್ಮೀಯ ಸಂಬಂಧ ಬೆಳೆಸಿಕೊಂಡು, ಅವರು ತಮ್ಮ ಬುಡಕಟ್ಟಿನ ಭಾಷೆಯಲ್ಲಿ ತಾನು ಮಲಯಾಳಂನಲ್ಲಿ ಜೊತೆಜೊತೆಯಾಗಿ ಹಾಡಿ ದೂರವಿದ್ದವರು ಅತ್ಯಂತ ಹತ್ತಿರದವರೂ ಆಗಿರುತ್ತಾರೆಂದು ಕಂಡುಕೊಂಡಿದ್ದ. ಅವನು ಸ್ಥಳಿಕನೂ ಆಗಿದ್ದ, ಅಲೆಮಾರಿಯೂ ಆಗಿದ್ದ. ಗಣಪನೂ ಆಗಿದ್ದ, ಸುಬ್ರಹ್ಮಣ್ಯನೂ ಆಗಿದ್ದ.ಕೇರಳದ ಸಂಸ್ಕೃತಿಯ ಬಗ್ಗೆ ಆತನೊಂದು ಮಾಹಿತಿಗಳ ಜೀವಂತ ಖಜಾನೆಯಾಗಿದ್ದ. ಒಮ್ಮೆ ಕೊಚ್ಚಿಯ ಒಂದು ಸೆಮಿನಾರಿನಲ್ಲಿ ಎರಡು ಗಂಟೆ ಕೇರಳದ ಆಟಗಳ ಬಗ್ಗೆ ಮಾತಾಡುತ್ತಾ `ಶಿಲಪ್ಪದಿಗಾರಂ' ನಿಂದ ಶುರುವಾಗಿ ಕೇರಳದ ನೂರಾರು ಆಟಗಳ ಬಗ್ಗೆ ಅತ್ಯಂತ ಮಾಹಿತಿಪೂರ್ಣವಾದ ವಾಗ್ ಝರಿಯನ್ನು ಹರಿಯಬಿಟ್ಟಿದ್ದ.ಅವನ ಕವಿತೆಗಳ ಲೋಕ ವಿಸ್ಮಯಕಾರಿ. ಸಂಸ್ಕೃತದ ಅಕ್ಷರ ಛಂದಸ್ಸಿನಿಂದ ಹಿಡಿದು ಕೇರಳದ ದೇಸೀ ಜನಪದ ಛಂದಸ್ಸಿನವರೆಗೆ ಎಲ್ಲ ಪ್ರಕಾರಗಳನ್ನೂ ಜಾಲಾಡಬಲ್ಲವನಾಗಿದ್ದ. ಅವನ ಓದಿನ ದಾಹ ಅಗಾಧವಾದದ್ದು. ಅತ್ಯಂತ ಈಚೆಗಿನ ಪಶ್ಚಿಮದ ಪುಸ್ತಕರಾಶಿಯಲ್ಲೂ ಮುಳುಗಿ ಎದ್ದಿದ್ದ. ಆದರೂ ಏನೂ ಅರಿಯದ ಮಗುವಿನ ಹಾಗೆ ಮುಗುದನಾಗಿರುತ್ತಿದ್ದ. ಇಂದಿನ ಭಾರತೀಯ ಕಾವ್ಯಲೋಕದಲ್ಲಿ ಅವನಿಗೆ ಹೋಲಿಕೆಯೇ ಇಲ್ಲ.ಕೊಟ್ಟಾಯಂನ ವಿಶ್ವವಿದ್ಯಾಲಯದಿಂದ ನಿವೃತ್ತನಾದ ಮೇಲೆ ಅವನ ಪಿಂಚಣಿ ಬಹಳ ವರ್ಷಗಳವರೆಗೆ ಸಿಕ್ಕಿರಲಿಲ್ಲ. ಹೀಗಾಗಿ ಹಣಕಾಸಿನ ತೊಂದರೆಯಲ್ಲಿದ್ದರೂ ಅವನ ಓದುಗ ಅಭಿಮಾನಿಗಳು ಅವನನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಶುದ್ಧ ಸಸ್ಯಾಹಾರಿಯಾಗಿದ್ದರು ದಿನವೂ ಕುಡಿಯುತ್ತಿದ್ದ ಆತನಿಗೆ ಈಚೆಗೆ ಸಕ್ಕರೆ ಕಾಯಿಲೆ ತಗುಲಿತ್ತಂತೆ. ಇಂಗ್ಲಿಷ್ ಔಷಧದ ವೈರಿಯಾದ ಆತನಿಗೆ ಒಬ್ಬ ಉತ್ತಮ ವೈದ್ಯ ಸಿಕ್ಕಿದ್ದನಂತೆ. ಅವನು ಔಷಧಿ ಕೊಡುವ ಮೊದಲು ಒಂದು ನಿಯಮ ವಿಧಿಸಿದ್ದ. ಅದೇನೆಂದರೆ ಗುಂಡನ್ನು ಸಂಪೂರ್ಣವಾಗಿ ಬಿಡಬೇಕು.ವಿನಯಚಂದ್ರ ಒಪ್ಪಿದ್ದ. ಕೆಲವು ವರ್ಷಗಳಿಂದ ತನ್ನ ಏಕಮಾತ್ರ ಪತ್ನಿಯಾದ `ಗುಂಡಿಗೆ' ವಿಚ್ಛೇದನ ನೀಡಿದ್ದ ಆದರೆ ಒಂದು ದಿನ ಕೆಲವು ವಾರಗಳ ಹಿಂದೆ ಆ ನಿಯಮವನ್ನು ಮುರಿದು ಮತ್ತೆಕುಡಿದುಬಿಟ್ಟ.ಅಲ್ಲಿಗೆ ಮುಗಿಯಿತು ಅವನ ಕತೆ. ಹೃದಯ ಮತ್ತು ಮೂತ್ರಪಿಂಡಗಳು ನಿಂತುಹೋದವು.ಕೇರಳದ ಇಂದಿನ ಕವಿಗಳ ನಡುವೆ ಅತ್ಯಂತ ವಿಶಿಷ್ಟನಾಗಿದ್ದ ವಿನಯಚಂದ್ರನ ಅದಮ್ಯ ದನಿ ಮೌನದಲ್ಲಿ ಅಡಗಿಹೋಗಿದೆ. ಆದರೆ ಅವನ ಕಾವ್ಯದ ನಾದಶಕ್ತಿ ಅವನ ಓದುಗ ಕೇಳುಗರ ನೆನಪಿನಲ್ಲಿ ಅನುರಣಿಸುತ್ತಿರುತ್ತದೆ.  ಆತನಿಗೆ ಒಂದು ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಸಿಕ್ಕಿರಲಿಲ್ಲ. ಮರಣೋತ್ತರವಾಗಿಯಾದರೂ ಸಿಕ್ಕರೆ ಅದು ಅಕಾಡೆಮಿಗೇ ಗೌರವ.ಅವನ ವಿಪುಲ ಕವಿತೆಗಳಲ್ಲಿ ಕೆಲವನ್ನು ಮಾತ್ರ ಅನುವಾದಿಸಿದ್ದೇನೆ. ಜಾಗತಿಕ ಮಟ್ಟದಲ್ಲಿ ಶ್ರೇಷ್ಠವಾಗಿ ನಿಲ್ಲಬಲ್ಲ ಅವನ ಬರಹಗಳು ಕನ್ನಡಕ್ಕೆ ಅನುವಾದವಾಗಿ ಅದೇ ಸುಳಿಯಲ್ಲಿ ಗಿರಕಿ ಹೊಡೆಯುತ್ತಿರುವ ಕನ್ನಡಕಾವ್ಯಕ್ಕೆ ಹೊಸ ಪ್ರೇರಣೆಗಳು ಸಿಗಲಿ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.