ಬುಧವಾರ, ಜುಲೈ 15, 2020
22 °C

ರಮ್ಯಾ ಏಕೆ ಅಳಬೇಕು?

ಗಂಗಾಧರ ಮೊದಲಿಯಾರ್ Updated:

ಅಕ್ಷರ ಗಾತ್ರ : | |

ರಮ್ಯಾ ಏಕೆ ಅಳಬೇಕು?

ಈಗ ಸಹನೆಯ ಕಟ್ಟೆ ಒಡೆದಿದೆ. ಚಿತ್ರರಂಗದಲ್ಲಿ ಸ್ತ್ರೀ ಶೋಷಣೆಯ ಪರಮಾವಧಿ ವಿರುದ್ಧ ಎದ್ದಿರುವ ಸ್ಫೋಟ ನಟಿ ರಮ್ಯಾ ಅವರ ಬಂಡಾಯ.ಪುರುಷ ಪ್ರಧಾನ ಚಿತ್ರರಂಗದ ಧೋರಣೆಗೆ ರಮ್ಯಾ ಪ್ರತಿಭಟನಾತ್ಮಕ ಕಲ್ಲೊಂದನ್ನು ಎಸೆದಿದ್ದಾರೆ.ಶೋಷಣೆ ಸಹಿಸದೆ ಪತ್ರಿಕಾಗೋಷ್ಠಿಯಲ್ಲಿ ಕಣ್ಣೀರಿಟ್ಟ ರಮ್ಯಾ ಅವರ ಕಣ್ಣೀರು ಇಡೀ ಚಿತ್ರರಂಗದ ಕಲಾವಿದೆಯರ ಕರುಣಾಜನಕ ಕಥೆಯನ್ನು ಹೇಳುತ್ತದೆ. ವಾಕ್ಚಿತ್ರ ಆರಂಭವಾದ ದಿನದಿಂದ ಇಂದಿನವರೆಗೆ ಚಿತ್ರರಂಗದಲ್ಲಿ ನಟಿಯರು ಮೌನವಾಗಿ ಕಣ್ಣೀರು ಹಾಕುತ್ತಲೇ ಬಂದಿದ್ದಾರೆ.ನೋವನ್ನು ನುಂಗಿ ಬದುಕಿದ್ದಾರೆ. ನೋವನ್ನು ಒಡಲಲ್ಲಿಟ್ಟುಕೊಂಡೇ ಬದುಕು ಮುಗಿಸಿದವರೂ ಇದ್ದಾರೆ. ಮಹಿಳೆಯರ ಕಣ್ಣೀರನ್ನೇ ಬಾಕ್ಸಾಫೀಸ್ ಸೂತ್ರವನ್ನಾಗಿ ಮಾಡಿಕೊಂಡು, ಪುರುಷ ಪ್ರಧಾನ ಚಿತ್ರಗಳನ್ನೇ ನಿರ್ಮಿಸುತ್ತಾ ಬಂದಿರುವ ಚಿತ್ರರಂಗ, ಅದೇ ಕ್ಷೇತ್ರದಲ್ಲಿ ದುಡಿಯುವ ನಟಿಯರನ್ನು ಹೀನಾಯವಾಗಿ ನೋಡುತ್ತದೆ. ಕಲಾವಿದೆಯರು ಎಂದರೆ ಸ್ವಬಳಕೆಯ, ಪ್ರಚಾರದ ವಸ್ತು ಎಂಬ ದೃಷ್ಟಿಯಿಂದ ನೋಡುವ ಚಿತ್ರರಂಗದ ಪಾಳೆಯಗಾರರು ಈಗಲೂ ಚಿತ್ರರಂಗದಲ್ಲಿ ಮೆರೆಯುತ್ತಿರುವುದರಿಂದ ನಟಿಯರು ಇಲ್ಲಿ ಸ್ವಾಭಿಮಾನ ಕಳೆದುಕೊಂಡು ಬದುಕಬೇಕಿದೆ. ಚಿತ್ರರಂಗದಲ್ಲಿ ನಿತ್ಯ ಮಹಿಳೆಯರ ಕಗ್ಗೊಲೆ ನಡೆಯುತ್ತಿದೆ.ನಟಿಯರ ಬಗ್ಗೆ ಹೀನಾಯವಾಗಿ ಮಾತನಾಡಿದ ನಿರ್ದೇಶಕರೊಬ್ಬರಿಗೆ ಆದ ಗತಿ ಗೊತ್ತಿದೆಯಲ್ಲ. ಇಡೀ ತಮಿಳು ಚಿತ್ರರಂಗದ ನಟಿಯರು ಸೇರಿ ನಿರ್ದೇಶಕರೊಬ್ಬರಿಗೆ ಹೇಗೆ ಬುದ್ಧಿ ಕಲಿಸಿದರು ನಿಮಗೆ ಗೊತ್ತಿಲ್ಲವೇ? 2005ರಲ್ಲಿ ತಂಗರಬಚನ್ ಎನ್ನುವ ನಿರ್ದೇಶಕರೊಬ್ಬರು ಸಮಾರಂಭವೊಂದರಲ್ಲಿ ಮಾತನಾಡುತ್ತಾ, ‘ನಟಿಯರಾರೂ ಕನ್ಯೆಯರಲ್ಲ, ಅವರು ವೇಶ್ಯೆಯರಿದ್ದಂತೆ’ ಎಂದು ಹೇಳಿಬಿಟ್ಟರು.ಇದು ಇಡೀ ಚಿತ್ರರಂಗದಲ್ಲಿ ಕಲಾವಿದೆಯರನ್ನು ಕೆರಳಿಸಿತು. ದಂಗೆ ಎದ್ದ ತಮಿಳು ಕಲಾವಿದೆಯರ ಚಳವಳಿಯ ನೇತೃತ್ವವನ್ನು ಅಂದು ಪ್ರಖ್ಯಾತರಾಗಿದ್ದ ಖುಷ್ಬೂ ವಹಿಸಿಕೊಂಡರು. ಹಿರಿಯ ನಟಿ ಮನೋರಮಾ ಕೂಡಾ ಸೇರಿಕೊಂಡರು.ಚಿತ್ರ ಚಟುವಟಿಕೆ ನಿಲ್ಲಿಸಿದರು. ಪೊರಕೆ ಹಿಡಿದು ನಿರ್ದೇಶಕನ ಮನೆಯತ್ತ ತೆರಳಿ ಪ್ರತಿಭಟಿಸಿ ಹೂಂಕರಿಸಿದರು. ನಿರ್ದೇಶಕ ಹಿರಿಯ ನಟಿಯ ಕಾಲಿಗೆ ಬಿದ್ದು ಕ್ಷಮೆಯಾಚಿಸಲೇಬೇಕಾಯಿತು. ಕಲಾವಿದರಿಗೆ ಅವಮಾನ ಮಾಡಿದ ನಿರ್ದೇಶಕನನ್ನೇ ಅಲ್ಲಿನ ನಟಿಯರು ಬಿಡಲಿಲ್ಲ. ಕನ್ನಡದ ನಂಬರ್ ಒನ್ ನಟಿ ಇಡೀ ದೇಶ ನೋಡುವಂತೆ ಗಳಗಳನೆ ಅತ್ತು, ಚೀರಾಡಿ ಕಣ್ಣೀರಿಟ್ಟರೂ ಇತರೆ ನಟಿಯರು ಒಂದು ಸಣ್ಣ ಪ್ರತಿಭಟನೆಯನ್ನೂ ಮಾಡಲಿಲ್ಲ.ಒಂದಾದರೂ ಮಹಿಳಾ ಸಂಘಟನೆಗಳು ರಮ್ಯಾ ಪರ ಚಳವಳಿ ಮಾಡುವುದಿರಲಿ, ಬೆಂಬಲಿಸಿ ಹೇಳಿಕೆಗಳನ್ನೂ ಕೊಡಲಿಲ್ಲ. ರಮ್ಯಾ ಏಕಾಂಗಿಯಾಗಿ ಹೋರಾಡುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಗೂಂಡಾಗಿರಿ, ದಬ್ಬಾಳಿಕೆ, ಪುರುಷಪ್ರಧಾನ ತಾರತಮ್ಯದ ವಿರುದ್ಧ ಸಿಡಿದೆದ್ದ ಮೊದಲ ನಟಿ ಎನ್ನುವ ದಾಖಲೆ ರಮ್ಯಾ ಪಾಲಿಗಿರುತ್ತದೆ.ಕಳೆದ ವರ್ಷದ ಮತ್ತೊಂದು ಘಟನೆ ನೆನಪಿಸಿಕೊಳ್ಳಿ. ಹಿರಿಯ ನಟಿ ಬಿ. ಸರೋಜಾದೇವಿ, ಪುರುಷ ಪ್ರಧಾನ ಚಿತ್ರರಂಗದ ವಿರುದ್ಧ ಸಿಡಿದೆದ್ದರು. ‘ಕನ್ನಡ ಚಿತ್ರರಂಗ ‘ಪುರುಷ ಪ್ರಧಾನ’ವಾಗಿದೆ. ಎಲ್ಲ ಪ್ರಶಸ್ತಿಗಳನ್ನೂ ನಾಯಕರೇ ಬಾಚಿಕೊಳ್ಳುತ್ತಾರೆ. ಚಿತ್ರಗಳ ಯಶಸ್ಸಿಗೆ ಪ್ರಮುಖ ಪಾತ್ರವಾದ ನಾಯಕಿಯನ್ನೇ ಕಡೆಗಣಿಸಲಾಗುತ್ತಿದೆ’ ಎಂದು ದೂರಿ, ಅವರು ಒಂದು ಲಕ್ಷ ರೂಪಾಯಿ ಮೊತ್ತದ ಪ್ರಶಸ್ತಿಯೊಂದನ್ನು ಸ್ಥಾಪಿಸಿ ಚಿತ್ರರಂಗದಲ್ಲಿ ದುಡಿದ ನಟಿಯೊಬ್ಬರಿಗೆ ಜೀವಮಾನದ ಸಾಧನೆಗಾಗಿ ‘ಸರೋಜಾದೇವಿ’ ಪ್ರಶಸ್ತಿಯನ್ನು ಕೊಡುವ ವ್ಯವಸ್ಥೆ ಮಾಡಿದರು. 19 ವರ್ಷ ಕನ್ನಡ ಚಿತ್ರರಂಗದಲ್ಲಿ ವೈವಿಧ್ಯಮಯ ಪಾತ್ರಗಳಲ್ಲಿ ಅಭಿನಯಿಸಿ, ಶೋಷಣೆಯಿಂದ ನಲುಗಿ ಚಿತ್ರರಂಗದಿಂದಲೇ ದೂರ ಉಳಿದ ಹಿರಿಯ ತಾರೆ ಹರಿಣಿಯವರಿಗೆ ಈ ಪ್ರಶಸ್ತಿ ಸಂದದ್ದು ಕೂಡ ಅರ್ಥಪೂರ್ಣವಾಗಿತ್ತು. ಹಿರಿಯ ತಾರೆ ಬಿ. ಸರೋಜಾದೇವಿ ಚಿತ್ರರಂಗದ ‘ಪುರುಷ ಪ್ರಧಾನ’ ಹಿಡಿತದ ವಿರುದ್ಧ ತಮ್ಮ ಸಾತ್ವಿಕ ಆಕ್ರೋಶವನ್ನು ವ್ಯಕ್ತಪಡಿಸಿದ್ದು ಹೀಗೆ.ಚಿತ್ರನಟಿಯರು ಏಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎನ್ನುವುದಕ್ಕೂ ಕಾರಣವೇ ಬೇಕಿಲ್ಲ. ಮೀನಾಕುಮಾರಿ ಸುರಾಪಾನದ ಮೊರೆ ಹೋಗಿ ತಮ್ಮ ಕತೆ ಕೊನೆಗಾಣಿಸಿಕೊಳ್ಳುತ್ತಾರೆ. ಪರ್ವಿನ್‌ಬಾಬಿಗೆ ಮಾನಸಿಕ ಸ್ಥಿಮಿತವೇ ಕಳೆದು ಹೋಗುತ್ತದೆ. ಶ್ರೀದೇವಿ ಅನಿವಾರ್ಯವಾಗಿ ನಿರ್ಮಾಪಕನನ್ನೇ ಮದುವೆಯಾಗಬೇಕಾಗುತ್ತದೆ. ಕಲ್ಪನಾ, ಸಿಲ್ಕ್‌ಸ್ಮಿತಾ, ಮಂಜುಳಾ, ನಲುಗಿ ದಾರಿಗಾಣದೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ವಿಜಯಲಕ್ಷ್ಮಿ ನಿದ್ರೆಗುಳಿಗೆ ಸೇವಿಸಿ ದೊಡ್ಡ ಸುದ್ದಿಯಾಗುತ್ತಾರೆ. ಲೀಲಾವತಿ ಕಣ್ಣುಗಳಲ್ಲೇ ಕತೆ ಹೇಳುತ್ತಾ ಮೌನವಾಗಿ ನೋವು ನುಂಗಿ ದಿನ ದೂಡುತ್ತಿದ್ದಾರೆ.ಇಂದಿಗೂ ಅವರು ‘ದುಷ್ಟ’ರಿಂದ ಕಿರುಕುಳ ಅನುಭವಿಸುತ್ತಿದ್ದಾರೆ. ಎಷ್ಟೋ ನಟಿಯರು ತಮ್ಮ ದುಡಿಮೆಯನ್ನೆಲ್ಲಾ ಕೆಲ ನಿರ್ಮಾಪಕರ ಬಳಿ ಬಡ್ಡಿ ಆಮಿಷಕ್ಕೆ ನೀಡಿ, ಅಸಲೂ ಇಲ್ಲದೆ, ಬಡ್ಡಿಯೂ ದೊರಕದೆ ಕೊನೆಗೆ ಅವನು ಹೇಳಿದಂತೆ ಕೇಳುತ್ತಾ, ಇಂದಿರಾನಗರದಲ್ಲೋ, ಜೆಪಿ ನಗರದಲ್ಲೋ, ಆರ್.ಟಿ. ನಗರದಲ್ಲೋ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಜಯಮಾಲಾ ಕೂಡ ಈಗ ನನ್ನನ್ನು ಶೋಷಿಸಲಾಗಿದೆ ಎಂದು ದೂರಿದ್ದಾರೆ.ಚಿತ್ರರಂಗಕ್ಕೆ ಕಲಾಸೇವೆಗೆಂದು ಬಂದ ಮಹಿಳೆಯರನ್ನು ಗೌರವದಿಂದ ಕಾಣುವುದೇ ಇಲ್ಲ. ಅವರನ್ನು ಎಲ್ಲ ವಿಧದಲ್ಲೂ ಶೋಷಣೆಗೆ ಒಳಪಡಿಸಲಾಗುತ್ತದೆ. ನಾಯಕ ಪ್ರಧಾನ ಚಿತ್ರಗಳೇ ನಮ್ಮಲ್ಲಿ ಪರಮ ಸೂತ್ರವಾಗಿರುವುದರಿಂದ ನಾಯಕಿಯರಿಗೆ ಏನಿದ್ದರೂ ಎರಡನೇ ಸ್ಥಾನ. ನಾಯಕ ಹೇಳಿದಂತೆ ಚಲನಚಿತ್ರ ತಯಾರಾಗುತ್ತದೆಯೇ ಹೊರತು ನಟಿಯರಿಗನುಗುಣವಾಗಿ ಅಲ್ಲ. ಹೀಗಾಗಿ ನಾಯಕಿ ಎಂದೂ ಚಿತ್ರದ ‘ಹೀರೋ’ ಆಗಲು ಸಾಧ್ಯವಿಲ್ಲ. ಆದರೂ ಕೆಲವು ನಟಿಯರು ‘ಸೂಪರ್ ಹೀರೋ’ ಅನ್ನಿಸಿಕೊಳ್ಳುತ್ತಾರೆ. ಮಾಲಾಶ್ರೀ ಅಂತಹ ಒಂದು ಉದಾಹರಣೆ. ಮಾಲಾಶ್ರೀ ಚಿತ್ರಗಳಲ್ಲಿ ನಾಯಕನಿಗೆ ಎರಡನೇ ಸ್ಥಾನ.

 

ಮಾಲಾಶ್ರೀ ಇದ್ದರೆ ಸಾಕು ಸಿನಿಮಾ ಹಿಟ್- ಇದು ಕನ್ನಡ ಚಿತ್ರರಂಗ ಒಂದು ಕಾಲದಲ್ಲಿ ಕಂಡುಕೊಂಡ ಸತ್ಯ. ಐದು ವರ್ಷ ಮಾಲಾಶ್ರೀ ಚಿತ್ರರಂಗವನ್ನು ಆಳಿದರು. ಇದನ್ನು ಚಿತ್ರರಂಗದ ಮಂದಿ ಸಹಿಸಿಕೊಳ್ಳಲಿಲ್ಲ. ‘ನನ್ನ ಮುಂದೆ ಒಂದು ಕೋತಿ ಅಭಿನಯಿಸಿದರೂ ಚಿತ್ರ ಹಿಟ್ ಆಗುತ್ತೆ’ ಎಂದು ಮಾಲಾಶ್ರೀ ಹೇಳಿದರು ಎನ್ನುವ ಸುದ್ದಿ ಹಬ್ಬಿ ಮಾಲಾಶ್ರೀ ಭಾರೀ ವಿವಾದದಲ್ಲಿ ಸಿಲುಕಿಕೊಂಡರು. ಆಗಲೂ ಅಂಬರೀಷ್ ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಮಾಲಾಶ್ರೀಯೇ ಅಲ್ಲದೆ ಜಯಂತಿ, ಕಲ್ಪನಾ, ಮಂಜುಳಾ, ಭಾರತಿ ಹೀಗೆ ಅಪ್ಪಟ ಕನ್ನಡ ನಟಿಯರನ್ನೆಲ್ಲಾ ಕನ್ನಡ ಚಿತ್ರರಂಗದ ನಿರ್ಮಾಪಕರು ತೀವ್ರ ಶೋಷಣೆಗೆ ಒಳಪಡಿಸಿದ್ದಾರೆ. ಪರಭಾಷಾ ನಟಿಯರ ಎದುರು ಕೈಕಟ್ಟಿಕೊಂಡು, ಡೊಗ್ಗುಸಲಾಮು ಹಾಕುತ್ತಾ ಅವರ ಸೆರಗು ಹಿಡಿದುಕೊಂಡು ಓಡಾಡುವ ಕನ್ನಡನಿರ್ಮಾಪಕರಿಗೆ, ನಮ್ಮ ಕನ್ನಡ ನಟಿಯರು ಇಂಗ್ಲೀಷಿನಲ್ಲಿ ಮಾತನಾಡಿದರೆ ಅಲರ್ಜಿ, ಅವರು ಸೆಟ್‌ನಲ್ಲಿ ಆಂಗ್ಲ ಪುಸ್ತಕ ಓದಿದರೆ ಕಿರಿಕಿರಿ.ಕಾರಿನಲ್ಲಿ ಕೂತು ಮೊಬೈಲ್‌ನಲ್ಲಿ ಮಾತನಾಡುತ್ತಿದ್ದರೆ ಹೊಟ್ಟೆ ಉರಿ. ಈ ಧೋರಣೆಯಿಂದಾಗಿಯೇ ಕನ್ನಡ ಚಿತ್ರರಂಗದಲ್ಲಿ ನಿರ್ದೇಶನ, ಕ್ಯಾಮರಾ, ಎಡಿಟಿಂಗ್, ಚಿತ್ರಕತೆ, ಸಹಾಯಕ ನಿರ್ದೇಶಕರು ಹೀಗೆ ಯಾವ ವಿಭಾಗದಲ್ಲೂ ಮಹಿಳೆಯರು ಕಂಡು ಬರುತ್ತಿಲ್ಲ. ಮಾಲಾಶ್ರೀಯಂತೆಯೇ ತನ್ನದೇ ವರ್ಚಸ್ಸಿನಿಂದ ಬೆಳೆದ ರಮ್ಯಾಗೆ ಅವರದೇ ಅಭಿಮಾನಿಗಳಿದ್ದಾರೆ. ರಮ್ಯಾನಿಂದಲೇ ಸಿನಿಮಾ ಯಶಸ್ವಿಯಾಗಿ ಪ್ರದರ್ಶನಗೊಂಡ ದಾಖಲೆ ಇದೆ. ಇಲ್ಲದಿದ್ದರೆ ನಿರ್ಮಾಪಕರೇಕೆ ಅವರ ಕಾಲ್‌ಶೀಟ್‌ಗೆ ಎಡತಾಕುತ್ತಾರೆ. ಯಾರನ್ನೂ ಬೆಳೆಯಗೊಡದ ನಿರ್ಮಾಪಕರು ರಮ್ಯಾ ಅವರನ್ನು ಬಿಟ್ಟಾರೆಯೇ? ಅವರ ತೇಜೋವಧೆಗೂ ಒಂದು ಸಂಚು ರೂಪಿತವಾಗಿದೆ.‘ದಂಡಂ ದಶಗುಣಂ’ ಚಲನಚಿತ್ರದ ಪ್ರಚಾರ ಕಾರ್ಯಕ್ಕೆ ರಮ್ಯಾ ಬರಲಿಲ್ಲ ಎನ್ನುವುದು ಆ ಚಿತ್ರದ ನಿರ್ಮಾಪಕರ ಆರೋಪ. ಕಡ್ಡಾಯವಾಗಿ ಪ್ರಚಾರ ಕಾರ್ಯದಲ್ಲಿ ಪಾಲ್ಗೊಳ್ಳಬೇಕು ಎನ್ನುವುದು ನಿರ್ಮಾಪಕರ ಸಂಘದ, ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿಯ ಫರ್ಮಾನು. ಪ್ರಚಾರ ಕಾರ್ಯದಲ್ಲಿ ನಟ, ನಟಿಯರು ಭಾಗವಹಿಸಲೇಬೇಕೆನ್ನುವ ಕಡ್ಡಾಯ ನಿಯಮ ಚಿತ್ರರಂಗದಲ್ಲಿ ಇಲ್ಲ. ಕಲಾವಿದರ ಕಾಲ್‌ಶೀಟ್ ಪಡೆಯುವಾಗಲೇ ಪ್ರಚಾರ ಕಾರ್ಯಕ್ಕೆ ಬರಲೇಬೇಕೆಂಬ ಅಗ್ರಿಮೆಂಟ್ ಮಾಡಿಕೊಳ್ಳಬೇಕು. ಆ ರೀತಿಯ ಒಪ್ಪಂದ ರಮ್ಯಾ ವಿಷಯದಲ್ಲಿ ಆಗಿಲ್ಲ ಅದಕ್ಕಾಗಿ ನಿರ್ಮಾಪಕರು ನಟ, ನಟಿಯರಿಗೆ ಸೂಕ್ತ ಪ್ರತ್ಯೇಕ ಸಂಭಾವನೆಯನ್ನು ಕೊಡುತ್ತಿಲ್ಲ. ಹೀಗಾಗಿ, ಪ್ರಚಾರಕಾರ್ಯಕ್ಕೆ ಬರಲೇಬೇಕೆಂಬ ಒತ್ತಾಯ ಹೇರುವುದೂ ಕೂಡ ತಪ್ಪಾಗುತ್ತದೆ. ಒಂದು ಚಿತ್ರ ಗಟ್ಟಿ ಕತೆಯಿಂದ, ಅದನ್ನು ಸಮರ್ಪಕವಾಗಿ ನಿರೂಪಿಸಿರುವ ಸಾಮರ್ಥ್ಯದಿಂದ ಯಶಸ್ಸಾಗುತ್ತದೆಯೇ ಹೊರತು, ನಟಿಯರು ಬಂದು ಪ್ರಚಾರ ನಡೆಸುವುದರಿಂದ ಅಲ್ಲ ಎನ್ನುವುದನ್ನು ನಿರ್ಮಾಪಕರು ತಿಳಿದುಕೊಳ್ಳುವುದು ಒಳಿತು.ನಿರ್ಮಾಪಕರ ಸಂಘ ಮತ್ತು ಚಲನಚಿತ್ರ ವಾಣಿಜ್ಯ ಮಂಡಳಿ ಈಗ ಕಲಾವಿದರ ಸಂಘದ ಮೇಲೆ ಜಿದ್ದಿಗೆ ಬಿದ್ದಂತೆ ವರ್ತಿಸುತ್ತಿದೆ. ಎಲ್ಲ ವಲಯಗಳನ್ನೂ ಸಮಚಿತ್ತದಿಂದ ಒಂದಾಗಿ ತೆಗೆದುಕೊಂಡು ಹೋಗಬೇಕಾದ ಚಲನಚಿತ್ರ ವಾಣಿಜ್ಯ ಮಂಡಳಿ, ನಿರ್ಮಾಪಕರ ಸಂಘದ ವಕ್ತಾರನಂತೆ ವರ್ತಿಸುತ್ತಿರುವುದು ಸೂಕ್ತವಲ್ಲ. ಕನ್ನಡ ಚಿತ್ರರಂಗಕ್ಕೆ ವಿದಾಯ ಹೇಳಿದ್ದೇನೆ ಎಂದು ಜಗತ್ತಿಗೇ ಸಾರಿ ಹೇಳಿ ರಮ್ಯಾ ಹೊರಟು ನಿಂತಿರುವಾಗ, ‘ಒಂದು ವರ್ಷ ಅವರನ್ನು ಚಿತ್ರರಂಗದಿಂದ ನಿಷೇಧಿಸಿದ್ದೇವೆ ನಮ್ಮ ನಿರ್ಧಾರ ಅಂತಿಮ’ ಎಂಬ ತೀರ್ಪು ನೀಡಿ ಚಲನಚಿತ್ರ ವಾಣಿಜ್ಯ ಮಂಡಳಿ ನಗೆಪಾಟಲಿಗೆ ಈಡಾಗಿದೆ. ಕಳೆದ ವರ್ಷ ನಟ ದುನಿಯಾ ವಿಜಯ್ ಅವರನ್ನು ಒಂದು ವರ್ಷಕಾಲ ಚಿತ್ರರಂಗದಿಂದ ನಿಷೇಧಿಸುವ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ನಿರ್ದೇಶಕ ದಿನೇಶ್‌ಬಾಬು ಅವರನ್ನು ನಿಷೇಧಿಸಲಾಗಿತ್ತು. ಈ ತೀರ್ಪುಗಳಿಗೆಲ್ಲಾ ಏನು ಬೆಲೆ ಸಿಕ್ಕಿದೆ?ರಮ್ಯಾ ಚಿತ್ರರಂಗದಲ್ಲಿ ನಡೆದು ಬಂದ ದಾರಿಯನ್ನು ಅವಲೋಕಿಸಿದರೆ ವಿವಾದವೆನ್ನುವುದು ಅವರಜೊತೆಜೊತೆಯಲ್ಲೇ ನಡೆದುಬಂದಿದೆ. ‘ತನನಂ ತನನಂ’ ಚಿತ್ರದಲ್ಲಿ ಅಭಿನಯಿಸುವಾಗ ರಮ್ಯಾ - ರಕ್ಷಿತಾ ನಡುವೆ ಮಾತಿಲ್ಲ, ಇಬ್ಬರಿಗೂ ಪೈಪೋಟಿ ಎನ್ನುವ ಗುಸುಗುಸು ಕೇಳಿಬಂದಿತ್ತು.‘ಜೊತೆಗಾರ’ ಚಿತ್ರತಂಡದ ಊಟದ ಪತ್ರಿಕಾಗೋಷ್ಠಿಗೆ ರಮ್ಯ ಏಕೆ ತಡವಾಗಿ ಬಂದರು? ಎಂದು ಪತ್ರಕರ್ತರೊಬ್ಬರು ಒಮ್ಮೆ ಅನವಶ್ಯಕವಾಗಿ ರಂಪ ಎಬ್ಬಿಸಿ ರಮ್ಯಾಳನ್ನು ಕೆರಳಿಸಿ ಟಿ. ವಿ. ಚಾನಲ್‌ಗಳಿಗೆ ಆಹಾರ ಒದಗಿಸಿದ್ದರು. ಮತ್ತಷ್ಟು ನಿರ್ಮಾಪಕರಂತೂ ರಮ್ಯಾ ಶೂಟಿಂಗ್‌ಗೆ ತಡವಾಗಿ ಬರುತ್ತಾರೆ ಎನ್ನುವುದನ್ನೇ ಸುಪ್ರಭಾತ ಮಾಡಿಕೊಂಡರು. ಅವರು ಚಿತ್ರಗಳಿಗೆ ಡಬ್ ಮಾಡುವುದಿಲ್ಲ ಎನ್ನುವ ಕಾರಣ ಮುಂದೊಡ್ಡಿ ಕಳೆದ ವರ್ಷ ರಾಜ್ಯ ಪ್ರಶಸ್ತಿ (ಮುಸ್ಸಂಜೆ ಮಾತು) ಯನ್ನು ಅವರಿಗೆ ತಪ್ಪಿಸಲಾಯಿತು. ಎಲ್ಲ ಘಟನೆಗಳನ್ನು ನೋಡಿದರೆ ಅವರನ್ನು ಚಿತ್ರರಂಗದಿಂದಲೇ ಓಡಿಸಬೇಕೆಂಬ ಸಂಚು ನಡೆಯುತ್ತಿದೆಯೇನೋ ಎಂಬ ಅನುಮಾನವೂ ಬರುವಂತಿದೆ. ‘ಮತ್ತಷ್ಟು ಮಂದಿ, ರಮ್ಯಾಗೆ ವಿಪರೀತ ಸೊಕ್ಕು, ಅವರು ನಿರ್ಮಾಪಕರ ಕಷ್ಟ ಅರಿಯುವುದಿಲ್ಲ’ ಎಂದು ದೂರು ಹೇಳಲಾರಂಭಿಸಿದ್ದಾರೆ. ತೆರೆಯ ಮೇಲೆ ಸೌಮ್ಯ ರಮ್ಯ ದೃಶ್ಯಗಳನ್ನು ಕಂಡಾಗ ಅಭಿಮಾನಿಗಳಿಗೆ ಹಾಗೆ ಅನ್ನಿಸುವುದಿಲ್ಲ. ಅದಿರಲಿ, ಸುಂದರವಾದ ನಟಿಗೆ ಸ್ವಲ್ಪ ಕೊಬ್ಬು ಇದ್ದರೆ ತಪ್ಪೇನು ಸ್ವಾಮಿ?

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.