ಬುಧವಾರ, ಮೇ 12, 2021
18 °C

ರಸ್ತೆಗೆ ವಿಮೆ ಮಾಡಿಸಿದರೆ ನಿರ್ವಹಣೆ ಸುಲಭ

ಎಂ ನಾಗರಾಜ್ Updated:

ಅಕ್ಷರ ಗಾತ್ರ : | |

ರಸ್ತೆಗೆ ವಿಮೆ ಮಾಡಿಸಿದರೆ ನಿರ್ವಹಣೆ ಸುಲಭ

ನಮ್ಮ ರಸ್ತೆಗಳನ್ನು ಸುಧಾರಿಸದೇ, ವಿದೇಶದ ರಸ್ತೆಗಳನ್ನು ಹೊಗಳಿಕೊಂಡು ತಿರು­ಗಾಡುವುದು ಸೋಗಲಾಡಿತನವಾಗುತ್ತದೆ.ಮೊನ್ನೆ ಮೊನ್ನೆಯಷ್ಟೇ ಚೀನಾ ಪ್ರವಾಸ ಮುಗಿಸಿಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅಲ್ಲಿನ ರಸ್ತೆಗಳನ್ನು ಕೊಂಡಾಡಿದ್ದಾರೆ. ಅನೇಕ ವರ್ಷಗಳ ಕಾಲ ಮಂತ್ರಿ, ಉಪಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿ, ಹತ್ತಾರು ದೇಶಗಳನ್ನು ಸುತ್ತಿ ಬಂದಿರುವ ಸಿದ್ದರಾಮಯ್ಯ ಚೀನಾ ರಸ್ತೆಗಳ ಬಗ್ಗೆ ರೋಮಾಂಚನಗೊಳ್ಳುವ ಬದಲಿಗೆ ‘ಇಂತಹ ರಸ್ತೆ ನಿರ್ಮಾಣ ನಮ್ಮಲ್ಲಿ ಏಕೆ ಸಾಧ್ಯವಾಗಿಲ್ಲ? ನಾವು ಎಲ್ಲಿ ಎಡವಿದ್ದೇವೆ’ ಎಂದು ಆತ್ಮವಿಮರ್ಶೆ ಮಾಡಿಕೊಳ್ಳಬೇಕಿತ್ತು. ರಾಜಕಾರಣಿಗಳಲ್ಲಿ ಅಂತಹ ಒಂದು ಗುಣವನ್ನು ಕಾಣುವುದು ವಿರಳ. ಆದರೆ ಅದರ ಅಗತ್ಯ ಬಹಳ ಇದೆ.ವಿದೇಶಗಳಲ್ಲಿನ ರಸ್ತೆಗಳನ್ನು ವರ್ಣಿಸುವವರು, ಶ್ಲಾಘಿಸುವವರು ಮನಸ್ಸು ಮಾಡಿದರೆ ಇಲ್ಲಿನ ರಸ್ತೆಗಳನ್ನೂ ಅದೇ ಸ್ಥಿತಿಯಲ್ಲಿ ಇಡಬಹುದು. ಆದರೆ ಆ ಮನಸ್ಸು ಬೇಕಲ್ಲ? ನಮ್ಮಲ್ಲಿ ರಾಜಕಾರಣಿಗಳು– ಅಧಿಕಾರಿಗಳು– ಗುತ್ತಿಗೆ ದಾರರ ಕೂಟ ಬಲಿಷ್ಠವಾಗಿರುವುದರಿಂದ ಯಾವ ಸಾರ್ವಜನಿಕ ಕಾಮಗಾರಿಯೂ ನೆಟ್ಟ ಗಾಗಿರುವುದಿಲ್ಲ. ಲೋಪಗಳೇ ಹೆಚ್ಚಾಗಿರುತ್ತವೆ. ರಸ್ತೆಗೆ ಡಾಂಬರು ಬಿದ್ದ ಬೆನ್ನಲ್ಲೇ ಗುಂಡಿ ಬಿದ್ದಿರುತ್ತದೆ. ಶಾಲಾ ಕಟ್ಟಡ ಅಥವಾ ಸರ್ಕಾರಿ ಕಚೇರಿ ಕಟ್ಟಡಗಳು ಒಂದೇ ಮಳೆಗೆ ಸೋರಲು ಆರಂಭಿಸುತ್ತವೆ, ಎಷ್ಟೊ ಕಟ್ಟಡಗಳು ನಿರ್ಮಾಣ ಹಂತದಲ್ಲೇ ಉರುಳುತ್ತವೆ. ಇನ್ನೂ ಮುಂದುವರಿದು ಹೇಳಬೇಕೆಂದರೆ, ‘ರಸ್ತೆ ಮಾಡದೇ ಬಿಲ್ಲು ಪಾವತಿಗೆ ರಾಜಕಾರಣಿಗಳು ಪಟ್ಟು ಹಿಡಿಯುವುದು; ಅವರಿಗೆ ಹೆದರಿ ಅಧಿಕಾರಿ ಹಣ ಬಿಡುಗಡೆ ಮಾಡುವುದು; ಗುತ್ತಿಗೆದಾರ ಮರಳಿ ರಾಜಕಾರಣಿಗೆ ಕಪ್ಪ ಒಪ್ಪಿಸುವುದು’ ಎಲ್ಲವೂ ಸ್ಫಟಿಕದಷ್ಟೇ ಸತ್ಯ.ಹಾಗಾಗಿಯೇ ನಮ್ಮ ರಸ್ತೆಗಳ ಸ್ಥಿತಿ ಈ ಮಟ್ಟದಲ್ಲಿದೆ. ಆದರೂ ರಾಜಕಾರಣಿಗಳು ಮಾತ್ರ ಗುಣಮಟ್ಟಕ್ಕೆ ಒತ್ತು ನೀಡುವ ಮಾತು ಆಡುವುದನ್ನು ಬಿಡುವುದಿಲ್ಲ. ಅವರೆಲ್ಲರೂ ನುಡಿದಂತೆ ನಡೆದಿದ್ದರೆ ನಮ್ಮ ರಸ್ತೆಗಳೇಕೆ ಈ ರೀತಿ  ಇರುತ್ತಿದ್ದವು?ಪ್ರತಿ  ವರ್ಷ ಸಹಸ್ರಾರು ಕೋಟಿ ರೂಪಾಯಿಯನ್ನು ರಸ್ತೆ ನಿರ್ಮಾಣ ಮತ್ತು ದುರಸ್ತಿಗಾಗಿಯೇ  ವಿನಿಯೋಗಿಸಲಾಗುತ್ತಿದೆ. ಇಷ್ಟೊಂದು ಬೃಹತ್‌ ಸಂಖ್ಯೆಯ ವಾಹನಗಳು ಅದರಲ್ಲೂ ಭಾರಿ ಪ್ರಮಾಣದಲ್ಲಿ ಸರಕು ಸಾಗಿಸುವ ವಾಹನಗಳು ಸಂಚರಿಸುವ ಇಂದಿನ ದಿನಗಳಲ್ಲಿ ಅದು ಅಗತ್ಯ ಕೂಡ.  ಆದರೆ ಜವಾಬ್ದಾರಿಯುತ ಸರ್ಕಾರ ಅದು ಸದ್ವಿನಿಯೋಗವಾಗುವಂತೆ ಮಾಡಬೇಕು. ಆದರೆ ಆ ಕೆಲಸವಾಗುತ್ತಿಲ್ಲ. ಅಂತಹ ಒಂದು ಕೆಲಸವನ್ನು ಹುಬ್ಬಳ್ಳಿಯಲ್ಲಿ ವೈದ್ಯರೊಬ್ಬರು ಮಾಡಿ ತೋರಿಸಿದ್ದಾರೆ.ಹುಬ್ಬಳ್ಳಿ ನಗರದ ಹೃದಯ ಭಾಗದಲ್ಲಿ ವಿದ್ಯಾನಗರ ಬಡಾವಣೆ ಇದೆ. ಇಲ್ಲಿನ ತಿಮ್ಮಸಾಗರ ಗುಡಿ ಮುಖ್ಯ ರಸ್ತೆಯಲ್ಲಿ ಅನೇಕ ಮನೆಗಳು ನಿರ್ಮಾಣವಾಗಿ ಜನರು ವಾಸ ಶುರು ಮಾಡಿದ ಮೇಲೂ ರಸ್ತೆಯನ್ನು ಅಭಿವೃದ್ಧಿಪಡಿಸುವತ್ತ ಹುಬ್ಬಳ್ಳಿ– ಧಾರವಾಡ ಮಹಾನಗರಪಾಲಿಕೆ ಗಮನಹರಿಸಿರಲಿಲ್ಲ. ಅದೇ ರಸ್ತೆಯಲ್ಲಿ ನರ್ಸಿಂಗ್‌ ಹೋಂ ಹೊಂದಿರುವ ಡಾ. ಎಂ.ಸಿ. ಸಿಂಧೂರ ಅವರ ಸತತ ಪ್ರಯತ್ನದ ಫಲವಾಗಿ 2007ರಲ್ಲಿ ಈ ರಸ್ತೆಯನ್ನು ಅಭಿವೃದ್ಧಿಪಡಿಸಲು ಪಾಲಿಕೆ ಅನುಮೋದನೆ ನೀಡಿತು. ಅನುಮೋದನೆ ಪಡೆಯಲು ಪಟ್ಟ ಕಷ್ಟದಿಂದ ‘ಈ ರಸ್ತೆ ಶಾಶ್ವತವಾಗಿ ಉಳಿಯಬೇಕು; ಮತ್ತೆ ಮತ್ತೆ ಪಾಲಿಕೆ ಮುಂದೆ ಹೋಗಿ ಅಂಗಲಾಚುವ ಪರಿಸ್ಥಿತಿ ಬರಬಾರದು’ ಎಂದು ಡಾ. ಸಿಂಧೂರ, ಪಾಲಿಕೆಯಿಂದ ನಿರಾಕ್ಷೇಪಣಾ ಪತ್ರ ಪಡೆದು ರಸ್ತೆಯನ್ನು ವಿಮೆ ವ್ಯಾಪ್ತಿಗೆ ಒಳಪಡಿಸಿದರು. ವಿಮೆ ಕಂತಿನ ಹಣವನ್ನು ಅವರೇ ತುಂಬಿದರು. ಆ ಮೂಲಕ ಇದು ರಾಷ್ಟ್ರದ ಪ್ರಥಮ ವಿಮಾ ರಸ್ತೆ ಎಂದು ಗುರುತಿಸಿಕೊಂಡಿತು. ಲಿಮ್ಕಾ ದಾಖಲೆ, ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌ಸಗೂ ಸೇರಿತು.ಅನಾರೋಗ್ಯಪೀಡಿತ ಮನುಷ್ಯನಿಗೆ ಚಿಕಿತ್ಸೆ ನೀಡಿ ಆತನ ಆರೋಗ್ಯ ಸರಿಪಡಿಸುವ ವೃತ್ತಿ ಆರಿಸಿಕೊಂಡ ಡಾ. ಸಿಂಧೂರ, ಸಮಾಜದ ಆರೋಗ್ಯ ಸುಧಾರಣೆಗೂ ಈ ಮೂಲಕ ಮಹತ್ತರವಾದ ಕಾಣಿಕೆ ನೀಡಿದ್ದಾರೆ. ತಮ್ಮ ಮನೆ ಅಥವಾ ಆಸ್ಪತ್ರೆ ಇರುವ ರಸ್ತೆ ಸುಸ್ಥಿತಿಯಲ್ಲಿ ಇರಬೇಕು ಎಂಬ ಮುಂದಾಲೋಚನೆ ಅವರಲ್ಲಿತ್ತು. ಹಾಗಾಗಿಯೇ ಈ ರಸ್ತೆ ಇಂದು ಭಾರತದಲ್ಲಿ ಗುರುತಿಸಿಕೊಳ್ಳುವಂತೆ ಆಯಿತು. ಕಚೇರಿಗೆ ಹೋಗಲು ನಾನೂ ಈ ರಸ್ತೆಯನ್ನು ಬಳಸುತ್ತೇನೆ. ಸುಮಾರು ಎರಡೂವರೆ ವರ್ಷದಿಂದಲೂ ಈ ರಸ್ತೆ ಬಳಸುತ್ತಿರುವ ನನಗೆ ಇಲ್ಲಿ ಹಳ್ಳ ಬಿದ್ದ ನೆನಪಿಲ್ಲ. ರಸ್ತೆ ಅಗೆದು ಹಾಳುಗೆಡುವಿ, ರಸ್ತೆ ಮುಚ್ಚಿದ್ದನ್ನು ಕಂಡಿಲ್ಲ. ಆದರೆ ಹಳ್ಳ–ಕೊಳ್ಳ, ಅಗೆತ ಯಾವ ತೊಂದರೆಯೂ ಇಲ್ಲದೆ ಆರಾಮವಾಗಿ ಓಡಾಡಬಹುದಾದ ಈ ರಸ್ತೆಯಲ್ಲಿ ಓಡಾಡಿರುವ ಅನೇಕ ಶಾಸಕರು–ಸಚಿವರು ಮಾತ್ರ ಇತರೆಡೆಗೆ ವಿಮಾ ಸೌಲಭ್ಯವನ್ನು ವಿಸ್ತರಿಸುವ ಮನಸ್ಸು ಮಾಡಿಲ್ಲ. ಇದು ಡಾ. ಸಿಂಧೂರ ಅವರ ಸಣ್ಣ ಪ್ರಯತ್ನ. ಆದರೆ ಅವರಿಗೆ ಸಮಾಜದ ಮತ್ತು ಸಾರ್ವಜನಿಕರ ಹಣದ ಮೇಲೆ ಇರುವ ಕಾಳಜಿ ಅಪಾರ. ಇದು

ಚುನಾಯಿತ ಪ್ರತಿನಿಧಿಗಳಲ್ಲಿ ಕಾಣುತ್ತಿಲ್ಲ.ಆರು ವರ್ಷದಿಂದ ವಿಮೆ ವ್ಯಾಪ್ತಿಗೆ ಒಳಪಟ್ಟಿದ್ದರೂ ಒಮ್ಮೆಯೂ ದುರಸ್ತಿಗೆ ಓರಿಯಂಟಲ್‌ ವಿಮಾ ಸಂಸ್ಥೆಯಿಂದ ಹಣ ಪಡೆದಿಲ್ಲ. ಅಂದರೆ ರಸ್ತೆಯ ಗುಣಮಟ್ಟ ಎಷ್ಟರ ಮಟ್ಟಿಗೆ ಇದೆ ಎಂಬುದು ಅರ್ಥವಾಗುತ್ತದೆ. ಹಾಗೆಂದು ಹೇಳಿ, ರಸ್ತೆಯಲ್ಲಿ ಹಳ್ಳವೇ ಬಿದ್ದಿಲ್ಲವೇ ಎಂಬ ಪ್ರಶ್ನೆ ಮೂಡಬಹುದು. ಆಗೊಮ್ಮೆ–ಈಗೊಮ್ಮೆ ಸಣ್ಣ ಪುಟ್ಟ ದುರಸ್ತಿಯಾಗಿದೆ. ಈ ವೆಚ್ಚ ₨ 10,000 ಮೀರದ ಕಾರಣ ವಿಮಾ ಸಂಸ್ಥೆಯಿಂದ ಹಣ ಪಡೆಯಲಾಗಿಲ್ಲ (ಈ ರಸ್ತೆಗೆ ವಿಮೆ ಹಣ ಪಡೆಯಲು ಹಾನಿ ಪ್ರಮಾಣ ಕನಿಷ್ಠ ₨ 10,000 ಇರಬೇಕು). ಹುಬ್ಬಳ್ಳಿ ಮಟ್ಟಿಗೆ ಈಗ ಇದೊಂದು ಪ್ರತಿಷ್ಠಿತ ರಸ್ತೆ. ಹಾಗಾಗಿ ಪಾಲಿಕೆ ಕೂಡ ರಸ್ತೆಯನ್ನು ಜತನದಿಂದ ನೋಡಿಕೊಳ್ಳುತ್ತಿದೆ. ದುರಸ್ತಿಯಲ್ಲಿ ಕೊಂಚವೂ ಲೋಪವಾಗದಂತೆ ಎಚ್ಚರ ವಹಿಸುತ್ತದೆ. ಇನ್ನು ಕುಡಿಯುವ ನೀರು, ಒಳಚರಂಡಿ ಸಂಪರ್ಕ ಪಡೆಯಲು ರಸ್ತೆಯನ್ನು ಅಗೆಯಬೇಕಾದ ಸಂದರ್ಭ ಬಂದರೂ ರಸ್ತೆಯ ನಿವಾಸಿಗಳು ಒಂದು ಸಾರಿ ಆಲೋಚಿಸುತ್ತಾರೆ. ಅಲ್ಲದೇ ಪಾಲಿಕೆ ಕೂಡ ಸಮರ್ಪಕವಾಗಿ ರಸ್ತೆ ದುರಸ್ತಿಗೆ ಅಗತ್ಯವಿರುವಷ್ಟು ಹಣವನ್ನು ಕಟ್ಟಿಸಿಕೊಳ್ಳುವುದರಿಂದ ನಿವಾಸಿಗಳು ಪರ್ಯಾಯ ಮಾರ್ಗ ಅನುಸರಿಸಿ ಸಂಪರ್ಕ ಪಡೆದುಕೊಳ್ಳುತ್ತಾರೆ. ಅವರಲ್ಲೂ ಅಷ್ಟರಮಟ್ಟಿಗೆ ಜಾಗೃತಿ ಇದೆ. ಇಂಥದೇ ಜಾಗೃತಿಯನ್ನು ನಮ್ಮನ್ನು ಆಳುವ ನೀತಿ–ನಿರೂಪಕರಲ್ಲಿ ಕಾಣಲು ಸಾಧ್ಯವೇ?ರಸ್ತೆ ನಿರ್ಮಾಣ, ದುರಸ್ತಿಗೆ ಸರ್ಕಾರ ವಿನಿಯೋಗಿಸುವ ಹಣದ ಮೊತ್ತವನ್ನು ಗಮನಿಸಿದರೆ, ವಿಮಾ ಕಂತು  ಭಾರಿ ಏನಲ್ಲ. ತಿಮ್ಮಸಾಗರ ಗುಡಿ ರಸ್ತೆ ನಿರ್ಮಾಣಕ್ಕೆ ತಗುಲಿದ ವೆಚ್ಚ ₨ 10.50ಲಕ್ಷ.  ಆರು ಲಕ್ಷಕ್ಕೆ ಮಾಡಿಸಿರುವ ವಿಮೆಗೆ  ₨ 900 ಕಂತು ಕಟ್ಟಬೇಕು ಅಷ್ಟೇ. ಈ ರಸ್ತೆಯ ಮನೆಗಳ ಮಕ್ಕಳೂ ತಮ್ಮ ಪಿಗ್ಗಿ ಬ್ಯಾಂಕ್‌ ಹಣವನ್ನು ವಿಮೆ ಕಂತಿಗೆ ಕೊಟ್ಟಿದ್ದಾರೆ. ಈ ಮೂಲಕ ಡಾ. ಸಿಂಧೂರ ಜನರಲ್ಲಿ ಅರಿವು ಮೂಡಿಸಲು ಯತ್ನಿಸಿದ್ದಾರೆ. ಕಣ್ಣ ಮುಂದೆಯೇ ಉತ್ತಮ ಸ್ಥಿತಿಯಲ್ಲಿರುವ ರಸ್ತೆ ಇದ್ದರೂ, ಆರು ವರ್ಷಗಳ ನಂತರವೂ ಹುಬ್ಬಳ್ಳಿಯ ಇನ್ನೊಂದು ರಸ್ತೆಯನ್ನು ವಿಮೆ ವ್ಯಾಪ್ತಿಗೆ ಒಳಪಡಿಸಲು ಯಾರೂ ಮುಂದಾಗಿಲ್ಲ. ಅದೂ ರಸ್ತೆಗಳು ತಗ್ಗು ಬಿದ್ದು ಓಡಾಡಲು ಆಗದಿರುವ ಸನ್ನಿವೇಶದಲ್ಲೂ ಸಾರ್ವಜನಿಕರೂ ಇತ್ತ ಆಲೋಚಿಸದಿರುವುದು ವಿಪಯಾರ್ಸವೇ ಸರಿ.ಇತ್ತೀಚೆಗಷ್ಟೇ ಲೋಕೋಪಯೋಗಿ ಸಚಿವ ಡಾ. ಎಚ್‌.ಸಿ.ಮಹದೇವಪ್ಪ ಅವರು ರಾಜ್ಯದಾದ್ಯಂತ ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚಲು ₨ 1,200 ಕೋಟಿ ಬೇಕಾಗುತ್ತದೆ ಎಂದು ಹೇಳಿದ್ದಾರೆ. ರಸ್ತೆ  ನಿರ್ಮಾಣದ ಸಂದರ್ಭ ದಲ್ಲಿಯೇ ಒಟ್ಟು ವೆಚ್ಚದಲ್ಲಿ  ಶೇ 0.001 ರಷ್ಟು ಹಣವನ್ನು ಪಾವತಿಸಿ, ಎಲ್ಲ ರಸ್ತೆಗಳನ್ನು ವಿಮೆಗೆ ಒಳಪಡಿಸಬಹುದು. ಹಾಳಾದ ರಸ್ತೆಗೆ (ಷರತ್ತಿಗೆ ಅನುಗುಣವಾಗಿ) ಪರಿಹಾರ ಪಡೆದು ಸುಸ್ಥಿತಿಯಲ್ಲಿಡಬಹುದು. ವಿಮಾ ವ್ಯಾಪ್ತಿಗೆ ಒಳಪಡಿಸಿದರೆ ರಸ್ತೆಗಳ ಗುಣಮಟ್ಟ ಖಂಡಿತ ವಾಗಿಯೂ ಉತ್ತಮವಾಗುತ್ತದೆ. ಏಕೆಂದರೆ ಯಾವುದೇ ವಿಮಾ ಸಂಸ್ಥೆ ಹಣ ಕಳೆದುಕೊಳ್ಳಲು ಇಷ್ಟ ಪಡುವುದಿಲ್ಲ. ಕಾಮಗಾರಿ ಯನ್ನು ಕಡ್ಡಾಯವಾಗಿ  ಪರಿಶೀಲಿಸುವುದರಿಂದ ಯಾರ ಆಟವೂ ನಡೆಯದು. ಸಾರ್ವಜನಿಕರ ಹಣ ಪೋಲಾಗುವುದನ್ನು ತಪ್ಪಿಸಬಹುದು. ಈ ಸಂಗತಿ ರಾಜಕಾರಣಿಗಳು ಮತ್ತು ಅಧಿಕಾರಿಗಳಿಗೆ ಹೊಳೆಯದೇ ಏನೂ ಇಲ್ಲ. ಅವರದು ಜಾಣಮೌನ. ರಸ್ತೆಗಳು ಸದಾ ದುರಸ್ತಿ ಯಾಗುತ್ತಿರಬೇಕು ಎಂದು ಬಯಸುವವರೇ ಹೆಚ್ಚು. ಹಾಗಾಗಿಯೇ ನಮ್ಮ– ಅವುಗಳ ಸ್ಥಿತಿ  ಶೋಚನೀಯವಾಗಿರುವುದು.ಈ ಮೊದಲು ಈ ಕುರಿತು ಎಲ್ಲೂ ಚರ್ಚೆಯಾಗಿರಲಿಲ್ಲ. ರಸ್ತೆಗೆ ವಿಮೆ ಮಾಡಿಸಲು ಅವಕಾಶವಿದೆಯೇ ಎಂಬುದನ್ನೂ ಯಾರೂ ಪರಿಶೀಲಿಸಿರಲಿಲ್ಲ. ಈಗ ನಮ್ಮ ಮುಂದೆ ತಿಮ್ಮಸಾಗರ ಗುಡಿ ರಸ್ತೆ ಇದೆ. ಈ ರಸ್ತೆಯ ಸ್ಥಿತಿ ಕಂಡ ಮೇಲಾದರೂ ರಾಜ್ಯ ಸರ್ಕಾರ ಯೋಚನೆ ಮಾಡಬಹುದಿತ್ತು. ಗುಣಮಟ್ಟ ಕಾಯ್ದು ಕೊಳ್ಳಬೇಕು ಎಂಬ ತವಕ ಅಧಿಕಾರಿಗಳಿಗಾಗಲಿ ಅಥವಾ ರಾಜಕಾರಣಿಗಳಿಗಾಗಲಿ ಇರಬೇಕಲ್ಲ! ಇನ್ನು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬಳಕೆದಾರರಿಂದ ಸುಂಕ ವಸೂಲು ಮಾಡಲಾಗುತ್ತಿದೆ. ರಾಜ್ಯ ಹೆದ್ದಾರಿಗಳಿಗೂ ಇದನ್ನು ವಿಸ್ತರಿಸುವ ಮಾತನ್ನು ರಾಜ್ಯ ಸರ್ಕಾರ ಆಡುತ್ತಿದೆ. ಆದರೆ ಸಂಸತ್ತಿನ ಸಾರಿಗೆ, ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸ್ಥಾಯಿ ಸಮಿತಿಯು ‘ರಸ್ತೆ ಸುಂಕ ವಸೂಲಿಯನ್ನು ತಕ್ಷಣದಿಂದಲೇ ಸ್ಥಗಿತಗೊಳಿಸಬೇಕು’ ಎಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.‘ವಾಹನ ತೆರಿಗೆಯನ್ನು ಕಟ್ಟಿಸಿಕೊಂಡು, ಪೆಟ್ರೋಲಿಯಂ ಉತ್ಪನ್ನಗಳ ಮೇಲೂ ಸುಂಕ ವಿಧಿಸಿ, ಬಳಸುವ ರಸ್ತೆಯಿಂದಲೂ ಸುಂಕ ವಸೂಲು ಮಾಡುವುದು ಸರಿಯಲ್ಲ’ ಎಂದು ಹೇಳಿದೆ. ಒಂದು ವೇಳೆ ರಸ್ತೆ ಸುಂಕ ಸಂಗ್ರಹ ಸ್ಥಗಿತವಾದರೆ ನಿರ್ವಹಣೆಗೆ ಹಣದ ಕೊರತೆಯಾಗಬಹುದು. ಆಗ ರಾಷ್ಟ್ರೀಯ ಹೆದ್ದಾರಿಗಳೂ ಊರಿನ ರಸ್ತೆಗಳಂತಾಗಬಹುದು. ಇದನ್ನು ತಪ್ಪಿಸಲು ಸರ್ಕಾರ ವಿಮೆ ಸೌಲಭ್ಯ ಬಳಸಿಕೊಳ್ಳಬಹುದು. ಸದ್ಯಕ್ಕೆ  ಸುಂಕ ಸಂಗ್ರಹಿಸುವ ರಸ್ತೆಗಳನ್ನಾದರೂ ಸರ್ಕಾರ ವಿಮೆ ವ್ಯಾಪ್ತಿಗೆ ತರಬೇಕು. ಸಂಗ್ರಹಿಸುವ ಸುಂಕದ ಶೇ 0.01 ರಷ್ಟು ಹಣವನ್ನು ವಿಮಾ ಕಂತಾಗಿ ಪಾವತಿಸಿದರೂ ಸಾಕು, ಹಾಳಾದ ರಸ್ತೆಗಳ ನಿರ್ವಹಣೆ ಸುಲಭವಾಗುತ್ತದೆ (ದೇಶದಲ್ಲಿ ವರ್ಷಕ್ಕೆ ಸುಮಾರು  ₨ 7,900 ಕೋಟಿ ರಸ್ತೆ ಸುಂಕದ ರೂಪದಲ್ಲಿ ಸಂಗ್ರಹವಾಗುತ್ತಿದೆ).ಅಲ್ಲದೇ, ಸರ್ಕಾರ ಗುತ್ತಿಗೆದಾರರಿಗೆ ರಸ್ತೆ ಅಭಿವೃದ್ಧಿ ಗುತ್ತಿಗೆ ವಹಿಸುವ ಸಂದರ್ಭದಲ್ಲಿಯೇ ಹೆಚ್ಚು ಷರತ್ತುಗಳನ್ನು ವಿಧಿಸಬೇಕು. ನಿರ್ವಹಣೆ ಅವಧಿಯನ್ನು ಹೆಚ್ಚಿಸಬೇಕು. ಆಗ ಗುಣಮಟ್ಟ ಕಾಯ್ದುಕೊಳ್ಳಲು  ಸಾಧ್ಯವಾಗುತ್ತದೆ. ಈಗಂತೂ ರಸ್ತೆ ನಿರ್ಮಾಣ ತಂತ್ರಜ್ಞಾನ ಅತ್ಯುನ್ನತ ಮಟ್ಟದ್ದಾಗಿದೆ. ವಿದೇಶಗಳಲ್ಲಿ ಈ ತಂತ್ರಜ್ಞಾನ ಬಳಸಿಕೊಂಡೇ ಉತ್ತಮ ರಸ್ತೆ ನಿರ್ಮಿಸುತ್ತಿದ್ದಾರೆ. ನಮ್ಮಲ್ಲೂ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಜತೆಗೆ ರಾಜಕಾರಣಿಗಳು ತಮ್ಮವರಿಗೇ ಗುತ್ತಿಗೆ ದೊರಕಿಸಿಕೊಡಬೇಕು ಎಂಬ ಚಾಳಿಯನ್ನು ಬಿಡಬೇಕು. ‘ಯಾರಾದರೂ ಗುತ್ತಿಗೆ ಹಿಡಿಯಲಿ, ಗುಣಮಟ್ಟ ಉತ್ತಮವಾಗಿರಲಿ’ ಎಂಬ ಭಾವನೆಯನ್ನು ಬೆಳೆಸಿಕೊಳ್ಳಬೇಕು. ಇಲ್ಲವಾದಲ್ಲಿ ಎಲ್ಲ ರಸ್ತೆಗಳನ್ನೂ ವಿಮೆ ವ್ಯಾಪ್ತಿಗೆ ತಂದು ಕಡ್ಡಾಯವಾಗಿ ಬಾಹ್ಯ ಸಂಸ್ಥೆಯಿಂದ ಪರಿಶೀಲನೆಗೆ ಒಳಪಡಿಸುವ ವ್ಯವಸ್ಥೆ ಅಳವಡಿಸಲು ಮುಂದಾಗಬೇಕು. ಆಗಷ್ಟೇ ಸಾರ್ವಜನಿಕರು ಪಾವತಿಸುವ ತೆರಿಗೆ ಹಣ ಸದ್ವಿನಿಯೋಗ ವಾಗುತ್ತದೆ. ಇಲ್ಲದಿದ್ದರೆ ಎಲ್ಲವೂ ನುಂಗಣ್ಣರ ಪಾಲಾಗುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.