ಮಂಗಳವಾರ, ಜನವರಿ 28, 2020
29 °C

ರಾಪೂ ಎಚ್ 8060 ಹೆಡ್‌ಸೆಟ್: ಭಿನ್ನ ನಿಸ್ತಂತು ಹೆಡ್‌ಫೋನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಿಸ್ತಂತು ಉತ್ಪನ್ನಗಳ ಜನಪ್ರಿಯತೆ ಹೆಚ್ಚುತ್ತಲೇ ಇದೆ. ಇದನ್ನು ಗಮನದಲ್ಲಿಟ್ಟುಕೊಂಡೇ ರಾಪೂ ಕಂಪೆನಿ ಹೊಸಬಗೆಯ ನಿಸ್ತಂತು ಹೆಡ್‌ಫೋನ್ ಒಂದನ್ನು ಮಾರುಕಟ್ಟೆಗೆ ತಂದಿದೆ. ಇದರ ಗುಣಾವಗುಣಗಳ ಮೇಲೊಂದು ಪಕ್ಷಿನೋಟ.ರಾಪೂ ಕಂಪೆನಿ ಹಲವು ನಿಸ್ತಂತು ಉತ್ಪನ್ನಗಳನ್ನು ತಯಾರಿಸುತ್ತಿದೆ. ಅವುಗಳಲ್ಲಿ ಹೆಡ್‌ಫೋನ್, ಕೀಬೋರ್ಡ್, ಮೌಸ್, ಸ್ಪೀಕರ್, ಇತ್ಯಾದಿಗಳು ಒಳಗೊಂಡಿವೆ. ರಾಪೂ ಕಂಪೆನಿಯ ಕೆಲವು ಉತ್ಪನ್ನಗಳನ್ನು ಇದೇ ಅಂಕಣದಲ್ಲಿ ವಿಮರ್ಶಿಸಲಾಗಿತ್ತು. ಗುಣಮಟ್ಟದಲ್ಲಿ ಮಾರುಕಟ್ಟೆಯಲ್ಲಿರುವ ಇತರೆ ಕಂಪೆನಿಗಳ ಉತ್ಪನ್ನಗಳ ಜೊತೆ ಹೋಲಿಸುವುದಾದರೆ ರಾಪೂ ಕಂಪೆನಿಯ ಉತ್ಪನ್ನಗಳು ಅತ್ಯುತ್ತಮ ಎನ್ನುವಂತಿಲ್ಲ. ನಿಸ್ತಂತು (ವಯರ್‌ ಲೆಸ್) ಉತ್ಪನ್ನಗಳ ಕ್ಷೇತ್ರದಲ್ಲಿ ರಾಪೂ ಕೆಲವು ವಿಶಿಷ್ಟ ಉತ್ಪನ್ನಗಳನ್ನು ತಯಾರಿಸಿದೆ. ಉದಾಹರಣೆಗೆ ರಾಪೂ ಎಚ್ ೩೦೭೦ ಬಗ್ಗೆ ಇದೇ ಅಂಕಣದಲ್ಲಿ ಬರೆಯಲಾಗಿತ್ತು. ಈ ಸಲ ಅದೇ ಮಾದರಿಯ, ಆದರೆ ಸ್ವಲ್ಪ ಭಿನ್ನವಾದ ಇನ್ನೊಂದು ನಿಸ್ತಂತು ಹೆಡ್‌ಫೋನ್ ಕಡೆ ನಮ್ಮ ನೋಟ. ಅದುವೇ ರಾಪೂ ಎಚ್೮೦೬೦ ಹೆಡ್‌ಫೋನ್ (Rapoo H8060 Stereo Headphone).

ಇದರಲ್ಲಿ ಎರಡು ಭಾಗಗಳಿವೆ. ಒಂದು ಪ್ರೇಷಕ (transmitter) ಮತ್ತು ಇನ್ನೊಂದು ನಿಸ್ತಂತು ಹೆಡ್‌ಫೋನ್. ಪ್ರೇಷಕಕ್ಕೆ ವಿದ್ಯುತ್ ಸಂಪರ್ಕ ನೀಡಬೇಕು. ಅಂದರೆ ಅದರಲ್ಲೇ ಅಡಕವಾದ ಯಾವುದೇ ಬ್ಯಾಟರಿ ಇಲ್ಲ. ಇದೊಂದು ಪ್ರಮುಖ ಕೊರತೆ ಎನ್ನಬಹುದು. ಹೊರಗಿನಿಂದ ವಿದ್ಯುತ್ ಸಂಪರ್ಕ ನೀಡಲು ಅಗತ್ಯವಾದ ಅಡಾಪ್ಟರ್ ಅನ್ನು ಅವರೇ ನೀಡಿದ್ದಾರೆ. ಈ ಅಡಾಪ್ಟರಿನಿಂದ ಪ್ರೇಷಕಕ್ಕೆ ವಿದ್ಯುತ್ ಸಂಪರ್ಕ ನೀಡುವ ಕೇಬಲ್ ಮಿನಿ ಯುಎಸ್‌ಬಿ ಮೂಲಕ ಜೋಡಣೆಯಾಗುತ್ತದೆ. ಈ ಕೇಬಲ್‌ನಲ್ಲಿ ಇನ್ನೂ ಒಂದು ಮಿನಿ ಯುಎಸ್‌ಬಿ ಇದೆ. ಅದು ಹೆಡ್‌ಫೋನನ್ನು ಚಾರ್ಜ್ ಮಾಡಲು ಬಳಕೆಯಾಗುತ್ತದೆ.ಈ ಪ್ರೇಷಕವನ್ನು ಧ್ವನಿಯ ಆಕರಕ್ಕೆ ಎರಡು ರೀತಿಯಲ್ಲಿ ಜೋಡಿಸಬಹುದು. ಮೊದಲನೆಯದು ಮಾಮೂಲು ೩.೫ ಮಿ.ಮೀ. ಇಯರ್‌ಫೋನ್ ಕಿಂಡಿ ಮೂಲಕ. ಇದನ್ನು ಬಳಸಿ ಈ ಪ್ರೇಷಕವನ್ನು ಲ್ಯಾಪ್‌ಟಾಪ್, ಮೊಬೈಲ್, ಎಂಪಿ೩ ಪ್ಲೇಯರ್, ಇತ್ಯಾದಿ ಸಂಗೀತ ಉಪಕರಣಗಳಿಗೆ ಜೋಡಿಸಬಹುದು.ಮೇಲ್ದರ್ಜೆಯ ಆಂಪ್ಲಿಫೈಯರ್‌ಗಳಲ್ಲಿ ಇನ್ನೂ ಒಂದು ನಮೂನೆಯ ಸಂಪರ್ಕ ಇರುತ್ತದೆ. ಅದು ಆರ್‌ಸಿಎ. ಈ ಪ್ರೇಷಕದಲ್ಲಿ ಆರ್‌ಸಿಎ ಜೋಡಣೆ ಕೂಡ ಇದೆ. ಇದು ಒಂದು ಉತ್ತಮ ಸೌಲಭ್ಯ. ಇದರ ಮೂಲಕ ನಿಮ್ಮ ಮನೆಯ ಹೈಫೈ ಆಂಪ್ಲಿಫೈಯರ್‌ಗೆ ಕೂಡ ಇದನ್ನು ಜೋಡಿಸಬಹುದು.ಇನ್ನು ಹೆಡ್‌ಫೋನ್ ಕಡೆಗೆ ಗಮನ ನೀಡೋಣ. ಇದು ಪ್ರೇಷಕಕ್ಕೆ ನಿಸ್ತಂತು ವಿಧಾನದಲ್ಲಿ ಸಂಪರ್ಕವಾಗುತ್ತದೆ. ಸುಮಾರು ಹತ್ತು ಮೀಟರ್ ದೂರದ ತನಕ ಇದು ಕೆಲಸ ಮಾಡುತ್ತದೆ. ಆದರೆ ಪ್ರೇಷಕ ಮತ್ತು ಹೆಡ್‌ಫೋನ್ ಮಧ್ಯೆ ಗೋಡೆ ಅಡ್ಡ ಬಂದರೆ ಇದು ಅಷ್ಟು ಚೆನ್ನಾಗಿ ಕೆಲಸ ಮಾಡುವುದಿಲ್ಲ. ಹೆಡ್‌ಫೋನ್ ಹಾಕಿಕೊಂಡು ಕೋಣೆಯಿಂದ ಕೋಣೆಗೆ ಹೋದರೆ ಮಧ್ಯೆ ಮಧ್ಯೆ ತಡೆತಡೆದು ಕೆಲಸ ಮಾಡುತ್ತದೆ. ಇದು ರಿಚಾರ್ಜೆಬಲ್ ಬ್ಯಾಟರಿಯನ್ನು ಬಳಸುತ್ತದೆ.ಪೂರ್ತಿ ಚಾರ್ಜ್ ಮಾಡಲು ಎರಡು ಗಂಟೆ ಬೇಕು. ಒಮ್ಮೆ ಪೂರ್ತಿ ಚಾರ್ಜ್ ಆದರೆ ಸುಮಾರು ಎಂಟು ಗಂಟೆ ಕೆಲಸ ಮಾಡುತ್ತದೆ. ಹೆಡ್‌ಫೋನ್‌ನಲ್ಲಿ ಆನ್/ಆಫ್ ಬಟನ್ ಇದೆ. ಚಾರ್ಜ್ ಮಾಡಲು ಮಿನಿ ಯುಎಸ್‌ಬಿ ಕಿಂಡಿ ಇದೆ. ವಾಲ್ಯೂಮ್ ಹೆಚ್ಚು ಕಡಿಮೆ ಮಾಡಲು ಸ್ಪರ್ಶಸಂವೇದಿ ಬಟನ್ ಇದೆ. ಪ್ರಮುಖ ಕೊರತೆಯೆಂದರೆ ಹಿಂದಿನ ಹಾಡು, ಮುಂದಿನ ಹಾಡುಗಳಿಗೆ ಹೋಗಲು ಬಟನ್ ಇಲ್ಲದಿರುವುದು. ಇನ್ನೂ ಒಂದು ಪ್ರಮುಖ ಕೊರತೆಯೆಂದರೆ ಹಾಡನ್ನು ತಾತ್ಕಾಲಿಕವಾಗಿ ನಿಲ್ಲಿಸಿ ಪ್ರಾರಂಭಿಸಲು ಬಟನ್ (play/pause) ಇಲ್ಲದಿರುವುದು. ಈ ಹೆಡ್‌ಫೋನ್ ಬ್ಲೂಟೂತ್ ಅಲ್ಲ. ಇದರ ಜೊತೆ ನೀಡಿರುವ ಪ್ರೇಷಕಕ್ಕೆ ಮಾತ್ರ ಇದು ಸಂಪರ್ಕಗೊಳ್ಳುತ್ತದೆ. ಅಂದರೆ ಇದನ್ನು ನೀವು ಮೊಬೈಲ್ ಫೋನ್, ಐಪಾಡ್, ಇತ್ಯಾದಿಗಳ ಜೊತೆ ಬಳಸುವಂತಿಲ್ಲ.ಈ ಹೆಡ್‌ಫೋನ್‌ನ ಗಾತ್ರ ೩೦ ಮಿ.ಮೀ. ಇದು ಕಿವಿಯ ಹೊರಗೆ ಕುಳಿತುಕೊಳ್ಳುವ ಮಾದರಿಯದು. ತಲೆಯ ಮೇಲೆ ಬರುವ ಪಟ್ಟಿಯಲ್ಲಿ ಮೆತ್ತನೆಯ ಕುಶನ್ ಇದೆ. ಪಟ್ಟಿಯನ್ನು ನಿಮ್ಮ ತಲೆಯ ಗಾತ್ರಕ್ಕೆ ತಕ್ಕಂತೆ ಎಳೆದು ದೊಡ್ಡದು ಅಥವಾ ಚಿಕ್ಕದು ಮಾಡಬಹುದು. ಇದು ಸಾಮಾನ್ಯವಾಗಿ ಎಲ್ಲ ಹೆಡ್‌ಫೋನ್‌ಗಳಲ್ಲಿ ಇರುವ ಒಂದು ಗುಣ ವೈಶಿಷ್ಟ್ಯ. ಇದು ಕಿವಿಯ ಹೊರಗೆ ಕುಳಿತುಕೊಳ್ಳುತ್ತದೆ ಮಾತ್ರ. ಕಿವಿಯನ್ನು ಪೂರ್ತಿಯಾಗಿ ಮುಚ್ಚುವುದಿಲ್ಲ. ಆದುದರಿಂದ ಅತಿಯಾದ ವಾಲ್ಯೂಮ್ ನೀಡಿದರೆ ಪಕ್ಕದಲ್ಲಿರುವವರಿಗೆ ಕಿರಿಕಿರಿಯಾಗುವ ಸಾಧ್ಯತೆ ಇದೆ. ಆದರೆ ಇದರಿಂದ ಸಾಧಕವೂ ಇದೆ. ಎಷ್ಟು ಹೊತ್ತು ಬೇಕಾದರೂ ಹೆಡ್‌ಫೋನ್ ಬಳಸಿ ಸಂಗೀತ ಆಲಿಸಿದರೆ ಕಿವಿಗೆ ಶ್ರಮವಾಗುವುದಿಲ್ಲ.ಈಗ ಬಹಳ ಮುಖ್ಯ ವಿಷಯದ ಕಡೆಗೆ ಬರೋಣ. ಅದುವೇ ಇದರ ಗುಣಮಟ್ಟ. ಇದರ ಕಂಪನಾಂಕ ಶ್ರೇಣಿಯ (frequency response range) ಬಗ್ಗೆ ಅವರ ಜಾಲತಾಣದಲ್ಲಿ ಏನೂ ಮಾಹಿತಿ ನೀಡಿಲ್ಲ. ನಾನು ಬಳಸಿ ನೋಡಿದ ಪ್ರಕಾರ ಧ್ವನಿಯ ಸ್ಪಷ್ಟತೆ ಚೆನ್ನಾಗಿದೆ. ಯಾವುದೇ ಕಿರಿಕಿರಿ ಇಇಲ್ಲ. ಅಧಿಕ ಕಂಪನಾಂಕದ ಧ್ವನಿಯ (treble) ಪುನರುತ್ಪತ್ತಿ ಚೆನ್ನಾಗಿದೆ. ಆದರೆ ಅತಿ ಕಡಿಮೆ ಕಂಪನಾಂಕದ ಧ್ವನಿ (bass) ಸಾಲದು. ಡ್ರಂ, ಮೃದಂಗ ಇತ್ಯಾದಿಗಳ ಧ್ವನಿ ಅಷ್ಟೇನೂ ಸಹಜವಾಗಿ ಕೇಳಿಬರುವುದಿಲ್ಲ. ಇಕ್ವಲೈಸರ್ ಬಳಸಿ ಕಡಿಮೆ ಕಂಪನಾಂಕದ ಧ್ವನಿಯನ್ನು ಸ್ವಲ್ಪ ಹೆಚ್ಚಿಸಿದರೂ ವಿಶೇಷ ಪ್ರಯೋಜನವಾಗಲಿಲ್ಲ.ಇದರ ಮಾರುಕಟ್ಟೆ ಬೆಲೆ ಸುಮಾರು ೩,೬೦೦. ಇದರ ಗುಣಮಟ್ಟಕ್ಕೆ ಹೋಲಿಸಿದರೆ ಈ ಬೆಲೆ ಸ್ವಲ್ಪ ಅಧಿಕವೇ. ಮೂರು ವಾರಗಳ ಹಿಂದೆ ಇದೇ ಅಂಕಣದಲ್ಲಿ ವಿಮರ್ಶೆ ಮಾಡಿದ ರಾಪೂ ಎಚ್೩೦೭೦ ನಿಸ್ತಂತು ಹೆಡ್‌ಸೆಟ್‌ಗಿಂತ ಇದರ ಧ್ವನಿಯ ಪುನರುತ್ಪತ್ತಿಯ ಗುಣಮಟ್ಟ ಚೆನ್ನಾಗಿದೆ ಎನ್ನಬಹುದು.ಗ್ಯಾಜೆಟ್ ಸಲಹೆ

ಇ. ಸಾಗರ್ ಅವರ ಪ್ರಶ್ನೆ: ನಾನು ನನ್ನ ನಿಕಾನ್ ಡಿ೫೧೦೦ ಡಿಎಸ್ಎಲ್ಆರ್ ಕ್ಯಾಮೆರಾಗೆ ಟಾಮ್ರೋನ್ ೭೦–-೩೦೦ ಮಿ.ಮೀ. ಲೆನ್ಸ್ ಕೊಳ್ಳೋಣ ಎಂದುಕೊಂಡಿದ್ದೇನೆ. ನಿಮ್ಮ ಅಭಿಪ್ರಾಯವೇನು?ಉ: ಸಾಧಕಗಳು: ಕಡಿಮೆ ಬೆಲೆ. ಉತ್ತಮ ಮ್ಯಾಕ್ರೊ. ಆಟೊಫೋಕಸ್ ಇದೆ. ಬಾಧಕಗಳು: ಇಮೇಜ್ ಸ್ಟೆಬಿಲೈಸೇಶನ್ ಇಲ್ಲ. ತುಂಬ ನಿಧಾನವಾಗಿ ಕೆಲಸ ಮಾಡುತ್ತದೆ. ಫೋಕಸ್ ವ್ಯಾಪ್ತಿಯ ಒಂದು ತುದಿಯಲ್ಲಿ (೩೦೦ ಮಿ.ಮೀ.) ಫ್ರೇಮ್‌ನ ಮೂಲೆಗಳಲ್ಲಿ ಸ್ವಲ್ಪ ಕಪ್ಪಾಗಿ ಕಾಣುತ್ತದೆ.

ಪ್ರತಿಕ್ರಿಯಿಸಿ (+)