ಸೋಮವಾರ, ಜನವರಿ 27, 2020
27 °C

ರಾಷ್ಟ್ರ ರಾಜಕಾರಣದ ಪ್ರಶ್ನೆಗೆ ಉತ್ತರಪ್ರದೇಶದಲ್ಲಿ ಉತ್ತರ

ದಿನೇಶ್ ಅಮೀನ್ ಮಟ್ಟು Updated:

ಅಕ್ಷರ ಗಾತ್ರ : | |

`ಉತ್ತರ ಪ್ರದೇಶದ ರಾಜಕೀಯ ಅರ್ಥವಾಗದೆ ಇದ್ದರೆ ನಿನಗೆ ದೇಶದ ರಾಜಕೀಯ ಅರ್ಥ ಆಗುವುದಿಲ್ಲ~ ಎಂದು ನಾನು ದೆಹಲಿಗೆ ಹೋದ ಹೊಸದರಲ್ಲಿ ಹಿರಿಯ ಪತ್ರಕರ್ತರೊಬ್ಬರು ನನಗೆ ಹೇಳಿದ್ದರು.

 

ಎರಡು ಬಾರಿ ವಿಧಾನಸಭೆಗೆ ಇನ್ನೆರಡು ಬಾರಿ ಲೋಕಸಭೆಗೆ ನಡೆದ ಚುನಾವಣೆಯ ಕಾಲದಲ್ಲಿ ಆ ರಾಜ್ಯದ ಉದ್ದಗಲಕ್ಕೆ, ಮೀರತ್‌ನಿಂದ ಮಿರ್ಜಾಪುರದ ವರೆಗೆ, ಇಟಾವದಿಂದ ಗೋರಖ್‌ಪುರದ ವರೆಗೆ ನಾನು ಅಲೆದಾಡಿದ್ದೇನೆ.ಆದರೆ ಆ ರಾಜ್ಯದ ರಾಜಕೀಯವನ್ನು ಇನ್ನೂ ನನಗೆ ಅರ್ಥ ಮಾಡಿಕೊಳ್ಳಲಿಕ್ಕೆ ಆಗಿಲ್ಲ. ಇದರಿಂದಾಗಿಯೋ ಏನೋ, ದೇಶದ ರಾಜಕೀಯ ಕೂಡಾ ನನಗಿನ್ನೂ ಅರ್ಥವಾಗಿಲ್ಲ.

 

ಈಗ ಉತ್ತರಪ್ರದೇಶದ ವಿಧಾನಸಭಾ ಚುನಾವಣೆ ಘೋಷಣೆಯಾದ ದಿನದಿಂದಲೇ `ಯುಪಿಎ ಕಾ ಭವಿಷ್ಯ್ ಯುಪಿ ಕೆ ಊಪರ್~ (ಯುಪಿಎ ಭವಿಷ್ಯ ಉತ್ತರ ಪ್ರದೇಶದ ಮೇಲಿದೆ) ಎನ್ನುವ ಮಾತು ಕೇಳಿಬರುತ್ತಿದೆ.

 

ಹೊಸ ವರ್ಷದಲ್ಲಿ ದೇಶದ ರಾಜಕೀಯ ಯಾವ ದಾರಿ ಹಿಡಿಯಲಿದೆ ಎನ್ನುವ ದಿಕ್ಸೂಚಿ ಮುಂದಿನ ತಿಂಗಳು ಆ ರಾಜ್ಯದಲ್ಲಿ ನಡೆಯಲಿರುವ ಚುನಾವಣೆಯ ಫಲಿತಾಂಶ ನೀಡಲಿದೆ ಎನ್ನುವ ನಿರೀಕ್ಷೆ ಎಲ್ಲರದ್ದು. ಆ ಫಲಿತಾಂಶ ಏನಿರಬಹುದೆನ್ನುವುದನ್ನು ಈಗಲೂ ಊಹಿಸುವುದು ಕಷ್ಟ.ಉತ್ತರಪ್ರದೇಶವನ್ನು ಪಕ್ಕಕ್ಕೆ ಇಟ್ಟು ದೇಶದ ರಾಜಕೀಯ ಚಿತ್ರ ಬಿಡಿಸುವುದು ಸಾಧ್ಯವೇ ಇಲ್ಲ. ದೇಶಕ್ಕೆ ಅತಿಹೆಚ್ಚಿನ ಪ್ರಧಾನಿಗಳನ್ನು ನೀಡಿದ ಮತ್ತು ಲೋಕಸಭೆಯಲ್ಲಿ ಅತಿ ಹೆಚ್ಚು ಸಂಖ್ಯೆಯ ಸದಸ್ಯರನ್ನು (ಮೊದಲು 83 ಈಗ 80) ಹೊಂದಿರುವ ಉತ್ತರಪ್ರದೇಶದ ರಾಜಕೀಯ ಮಹತ್ವ ಈ ಸಂಖ್ಯೆಯ ಆಟವನ್ನು ಮೀರಿದ್ದು.ರಾಯಬರೇಲಿಯಲ್ಲಿ ಇಂದಿರಾಗಾಂಧಿಯ ಸೋಲು ಇರಬಹುದು ಇಲ್ಲವೇ ಬಾಬರಿ ಮಸೀದಿಯ ಧ್ವಂಸ ಇರಬಹುದು, ರಾಷ್ಟ್ರಮಟ್ಟದಲ್ಲಿ ನಡೆದ ಅನೇಕ ರಾಜಕೀಯ ಸ್ಥಿತ್ಯಂತರಗಳಿಗೆ ಕಾರಣವಾದ ಘಟನೆಗಳು ನಡೆದದ್ದು ಉತ್ತರಪ್ರದೇಶದಲ್ಲಿ.

 

ಬಹುಕಾಲ ದೇಶವನ್ನು ಆಳಿದ ನೆಹರೂ ಕುಟುಂಬದ ತವರು ಕೂಡಾ  ಆ ರಾಜ್ಯ ಆಗಿರುವುದು ಅದಕ್ಕೆ ಇರುವ ರಾಜಕೀಯ ಮಹತ್ವಕ್ಕೆ ಕಾರಣ ಇರಬಹುದು.

 

ಉತ್ತರಪ್ರದೇಶದ ಮೇಲಿನ ರಾಜಕೀಯ ನಿಯಂತ್ರಣ ಕಳೆದುಕೊಂಡ ನಂತರವೇ ಕಾಂಗ್ರೆಸ್ ಏಕಚಕ್ರಾಧಿಪತ್ಯವನ್ನು ಕಳೆದುಕೊಂಡು ಮಿತ್ರಕೂಟದ ಔದಾರ‌್ಯದ ಉರುಳಲ್ಲಿ ಸಿಕ್ಕಿಹಾಕಿಕೊಂಡಿದ್ದು ಎನ್ನುವುದು ಕೂಡಾ ನಿಜ.ರಾಜಕೀಯ ಎನ್ನುವುದು `ಸಾಧ್ಯತೆಗಳ ಕಲೆ~ ಎನ್ನುವ ಮಾತು ಉತ್ತರಪ್ರದೇಶದ ಮಟ್ಟಿಗೆ ನೂರಕ್ಕೆ ನೂರರಷ್ಟು ನಿಜ. ಉಳಿದ ರಾಜ್ಯಗಳಲ್ಲಿ ರಾಜಕೀಯ ಲೆಕ್ಕಾಚಾರಕ್ಕೆ ಬಳಸುವ ಸೂತ್ರ, ಸಾಧನ ಇಲ್ಲವೇ ಅನುಭವ ಅಲ್ಲಿ ಕೆಲಸಕ್ಕೆ ಬರುವುದಿಲ್ಲ.

 

ಕಾಂಗ್ರೆಸ್ ಸುಮಾರು ನಾಲ್ಕುದಶಕಗಳ ಕಾಲ ಆ ರಾಜ್ಯವನ್ನು ಆಳಿಕೊಂಡು ಬಂದದ್ದು ಬ್ರಾಹ್ಮಣ, ಮುಸ್ಲಿಮ್ ಮತ್ತು ದಲಿತರನ್ನೊಳಗೊಂಡ ವಿಲಕ್ಷಣ ಜಾತಿ ಸೂತ್ರದಿಂದ. ಮುಸ್ಲಿಮರು ಪ್ರಾರಂಭದಿಂದಲೂ ಕಾಂಗ್ರೆಸ್ ಜತೆ ಗುರುತಿಸಿಕೊಂಡೇ ಬಂದವರು. ಆದರೆ ಉಳಿದ ರಾಜ್ಯಗಳಲ್ಲಿ ಬ್ರಾಹ್ಮಣರಿಗೆ ಕಾಂಗ್ರೆಸ್ ಬಗೆಗಿನ ಒಲವು ಅಷ್ಟಕ್ಕಷ್ಟೆ.

 

ನೆಹರೂ ಕುಟುಂಬ ತಮ್ಮ ಜಾತಿಗೆ ಸೇರಿರುವ ಕಾರಣಕ್ಕೆ ಬ್ರಾಹ್ಮಣರು ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಬೆಂಬಲಿಸಿರಬಹುದೆನ್ನುವ ವಾದವನ್ನು ಕೂಡಾ ಆ ಕುಟುಂಬದಲ್ಲಿ ನಡೆಯುತ್ತಾ ಬಂದ ವರ್ಣಸಂಕರದ ಹಿನ್ನೆಲೆಯಲ್ಲಿ ಒಪ್ಪುವುದು ಕಷ್ಟ.ಕರ್ನಾಟಕವೂ ಸೇರಿದಂತೆ ಬಹಳಷ್ಟು ರಾಜ್ಯಗಳಲ್ಲಿ ಹಿಂದುಳಿದ ಜಾತಿಗಳು (ಒಬಿಸಿ) ಕಾಂಗ್ರೆಸ್ ಜತೆ ಗುರುತಿಸಿಕೊಂಡದ್ದೇ ಹೆಚ್ಚು. ಆದರೆ ಉತ್ತರಪ್ರದೇಶ ಮತ್ತು ಬಿಹಾರ ರಾಜ್ಯಗಳಲ್ಲಿ ಒಬಿಸಿಗಳು ಎಂದೂ ಕಾಂಗ್ರೆಸ್ ಪಕ್ಷದ ಮತಬ್ಯಾಂಕ್ ಆಗಿರಲಿಲ್ಲ.ಇದಕ್ಕೆ ವಿ.ಪಿ.ಸಿಂಗ್ ಅನುಷ್ಠಾನಕ್ಕೆ ತಂದ ಮಂಡಲ ವರದಿಯೊಂದೇ ಕಾರಣವಲ್ಲ; ಡಾ.ರಾಮಮನೋಹರ ಲೋಹಿಯಾ ಅವರ ನೇತೃತ್ವದ ಸಮಾಜವಾದಿ ಚಳವಳಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಕ್ರಿಯರಾಗಿದ್ದವರು ಈ ಎರಡು ರಾಜ್ಯಗಳ ಒಬಿಸಿಗಳು. ಆದ್ದರಿಂದ ಅಲ್ಲಿನ ಒಬಿಸಿಗಳು ಸ್ವಭಾವತಃ ಕಾಂಗ್ರೆಸ್ ವಿರೋಧಿಗಳು.ಇದರಿಂದಾಗಿಯೇ ಉತ್ತರಪ್ರದೇಶ ಮತ್ತು ಬಿಹಾರದಲ್ಲಿ ಮುಲಾಯಂ ಸಿಂಗ್ ಯಾದವ್ ಮತ್ತು ಲಾಲು ಪ್ರಸಾದ್ ಅವರಂತಹ ನಾಯಕರು ಬೆಳೆಯಲು ಸಾಧ್ಯವಾಗಿದ್ದು.ದಲಿತರಿಗೆ ಬ್ರಾಹ್ಮಣರು ನಾಯಕತ್ವ ನೀಡಿದ್ದ ಉದಾಹರಣೆಗಳು ದೇಶದ ಸಾಮಾಜಿಕ ಇತಿಹಾಸದಲ್ಲಿ ಬಹಳಷ್ಟಿವೆ. ಆದರೆ ದಲಿತ ನಾಯಕ ಇಲ್ಲವೇ ನಾಯಕಿಯನ್ನು ಬ್ರಾಹ್ಮಣರು ಒಪ್ಪಿಕೊಂಡ ಉದಾಹರಣೆಗಳು ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ.

 

ಆದರೆ ಉತ್ತರಪ್ರದೇಶದಲ್ಲಿ ಬ್ರಾಹ್ಮಣರಿಗೆ ಮಾಯಾವತಿಯವರೇ ನಾಯಕಿ. ಬೇರೆ ರಾಜ್ಯಗಳಂತೆ ಅಲ್ಲಿ ಬ್ರಾಹ್ಮಣರು ಅಲ್ಪಸಂಖ್ಯಾತರೂ ಅಲ್ಲ, ಅಷ್ಟೊಂದು ಅಸಹಾಯಕರೂ ಅಲ್ಲ. ಆ ರಾಜ್ಯದಲ್ಲಿ ಬ್ರಾಹ್ಮಣರು ಶೇಕಡಾ ಹತ್ತರಷ್ಟಿದ್ದಾರೆ.

 

ಹೀಗಿದ್ದರೂ `ಮೇಲ್ಜಾತಿ ಜನರಿಗೆ ಚಪ್ಪಲಿಯಲ್ಲಿ ಹೊಡೆಯಬೇಕು~ ಎಂದು ಹೇಳುತ್ತಾ ರಾಜಕೀಯ ಪ್ರಾರಂಭಿಸಿದ್ದ ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ ಕಳೆದೆರಡು ವಿಧಾನಸಭಾ ಚುನಾವಣೆಗಳಲ್ಲಿ ಬ್ರಾಹ್ಮಣರ ಕಣ್ಮಣಿ.ಬಿಜೆಪಿ ಎಂದರೆ `ಬಿಪಿ~ (ಬ್ರಾಹ್ಮಣ-ಬನಿಯಾ) ಪಕ್ಷ ಎಂದು ಗೇಲಿ ಮಾಡುತ್ತಿದ್ದ ಬಿಎಸ್‌ಪಿ ಹದಿನೈದು ವರ್ಷಗಳ ಹಿಂದೆ ಅದೇ ಪಕ್ಷದ ಜತೆ ಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿದಾಗ ಅಚ್ಚರಿ ಪಟ್ಟವರೇ ಹೆಚ್ಚು.

 

ಅಲ್ಲಿಗೆ ಬಿಎಸ್‌ಪಿ ಕತೆ ಮುಗಿಯಿತು ಎಂದೇ ಎಲ್ಲರೂ ವಿಶ್ಲೇಷಿಸತೊಡಗಿದ್ದರು. ಆದರೆ ಮಾಯಾವತಿ ಒಂದಲ್ಲ, ಮೂರು ಬಾರಿ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡು ಮೂರು ಬಾರಿ ಅದನ್ನು ಮುರಿದು ದಕ್ಕಿಸಿಕೊಂಡರು.ದಲಿತ ಸಮುದಾಯದ ಅಖಂಡ ಬೆಂಬಲವೇ ಮಾಯಾವತಿಯವರ ರಾಜಕೀಯ ಶಕ್ತಿ. ಈ ರೀತಿಯ ಜಾತಿ ಆಧಾರಿತ  ರಾಜಕೀಯ ಮಾಡುವವರು ಬೇರೆ ರಾಜ್ಯಗಳಲ್ಲಿ, ಇಲ್ಲವೇ ಬೇರೆ ಜಾತಿಗಳಲ್ಲಿ ಬಹಳ ಕಾಲ ರಾಜಕೀಯ ಯಶಸ್ಸನ್ನು ಉಳಿಸಿಕೊಳ್ಳಲು ಆಗಿಲ್ಲ. ಬಿಹಾರದಲ್ಲಿ ಲಾಲುಪ್ರಸಾದ್ ಮಾಡಿದ್ದ ಇದೇ ರಾಜಕೀಯ ಹದಿನಾರು ವರ್ಷಗಳಲ್ಲಿ ಕೊನೆಗೊಂಡಿತ್ತು.ಉತ್ತರಪ್ರದೇಶದಲ್ಲಿಯೇ ಮುಲಾಯಂ ಸಿಂಗ್ ಏದುಸಿರು ಬಿಡತೊಡಗಿದ್ದಾರೆ. ಆದರೆ ಬಿಎಸ್‌ಪಿ ಸ್ಥಾಪನೆಯಾದ ದಿನದಿಂದ ಇಲ್ಲಿಯ ವರೆಗಿನ ಸುಮಾರು ಇಪ್ಪತ್ತೈದು ವರ್ಷಗಳ ಅವಧಿಯಲ್ಲಿ ನಡೆದ ಪ್ರತಿ ಚುನಾವಣೆಯಲ್ಲಿಯೂ ಬಿಎಸ್‌ಪಿಯ ದಲಿತರ ಬೆಂಬಲ ಹೆಚ್ಚಾಗಿದೆಯೇ ಹೊರತು ಕಡಿಮೆಯಾಗಿಲ್ಲ. ಇದು ಬರೀ ಬೆಂಬಲ ಅಲ್ಲ, ಒಂದು ರೀತಿಯಲ್ಲಿ ಕುರುಡು ಬೆಂಬಲ.

 

ಸಾಮಾಜಿಕವಾಗಿ ತಮ್ಮ ಶತ್ರುಗಳು ಎಂದು ತಿಳಿದುಕೊಂಡ ಮೇಲ್ಜಾತಿಗಳಿಗೆ ಸೇರಿದ ಅಭ್ಯರ್ಥಿಗಳನ್ನು ತಮ್ಮ ಪಕ್ಷದಿಂದ ಕಣಕ್ಕಿಳಿಸಿದರೂ ಕಣ್ಣುಮುಚ್ಚಿ ಅವರಿಗೆ ಮತ ಹಾಕುವಷ್ಟು ಉತ್ತರಪ್ರದೇಶದ ದಲಿತರಿಗೆ ಮಾಯಾವತಿಯವರ ಮೇಲೆ ಅಂಧಾಭಿಮಾನ ಇದೆ ಎನ್ನುವುದು ಚುನಾವಣೆಗಳಲ್ಲಿ ಸಾಬೀತಾಗಿದೆ.ಮಾಯಾವತಿ ಅವರ ನಾಯಕತ್ವದಿಂದ ದಲಿತರಿಗೇನಾದರೂ ಲಾಭ ಆಗಿದೆಯೇ? ಮಾಯಾವತಿ ಉತ್ತರಪ್ರದೇಶ ಪ್ರವೇಶಿಸಿದಾಗ ದಲಿತರು ಯಾವ ಸ್ಥಿತಿಯಲ್ಲಿದ್ದರೋ ಹೆಚ್ಚು ಕಡಿಮೆ ಈಗಲೂ ಹಾಗೆಯೇ ಇದ್ದಾರೆ.

 

ಅವರು ಸಮಾಜದಲ್ಲಿ ಭಯಮುಕ್ತರಾಗಿ  ಆತ್ಮಗೌರವದಿಂದ ಬದುಕುವ ವಾತಾವರಣವನ್ನಷ್ಟೇ ಮಾಯಾವತಿ ಕಲ್ಪಿಸಿದ್ದಾರೆ.  ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಉಳಿದ ರಾಜ್ಯಗಳ ದಲಿತರಷ್ಟೇ ಹಿಂದುಳಿದಿದ್ದಾರೆ. ಭೂ ಹಂಚಿಕೆಯಲ್ಲಿ ಆಗಿರುವ ಅನ್ಯಾಯ ಈಗಲೂ ಮುಂದುವರಿದಿದೆ.

 

ಹೀಗಿದ್ದರೂ ಮಾಯಾವತಿ ಅವರ ಬಗೆಗಿನ ದಲಿತರ ಅಭಿಮಾನ ಕಡಿಮೆಯಾದಂತೆ ಕಾಣುತ್ತಿಲ್ಲ. ಅವರಿಗೆ ಇದಿರಾಗಿ ಇನ್ನೊಬ್ಬ ದಲಿತ ನಾಯಕ ಅಲ್ಲಿ ಬೆಳೆಯುವುದು ಕೂಡಾ ಇಲ್ಲಿಯ ವರೆಗೆ ಸಾಧ್ಯವಾಗಿಲ್ಲ.ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಮತ್ತೆ ಗತವೈಭವದ ಸ್ಥಿತಿಗೆ ಮರಳಲು ಸಾಧ್ಯವೇ ಇಲ್ಲವೆಂದು ವಿರೋಧಪಕ್ಷಗಳು ಮಾತ್ರವಲ್ಲ, ಕಾಂಗ್ರೆಸ್ ಪಕ್ಷದ ನಾಯಕರು ಕೂಡಾ ಮೂರು ವರ್ಷಗಳ ಹಿಂದೆ ಖಾಸಗಿ ಮಾತುಕತೆಯಲ್ಲಿ ಹೇಳುತ್ತಿದ್ದರು. ಕಾಗದದ ಮೇಲಿನ ಲೆಕ್ಕಾಚಾರ ಕೂಡಾ ಅದನ್ನೇ ಹೇಳುತ್ತಿತ್ತು.ಬ್ರಾಹ್ಮಣರು ಮೊದಲು ಬಿಜೆಪಿಗೆ, ನಂತರ ಬಿಎಸ್‌ಪಿಗೆ, ದಲಿತರು ಬಿಎಸ್‌ಪಿಗೆ, ಮತ್ತು ಬಾಬರಿ ಮಸೀದಿ ಧ್ವಂಸದ ನಂತರ ಮುಸ್ಲಿಮರು ಮುಲಾಯಂಸಿಂಗ್ ಅವರ ಸಮಾಜವಾದಿ ಪಕ್ಷಕ್ಕೆ ವಲಸೆ ಹೋಗಿದ್ದ ಕಾರಣ ಕಾಂಗ್ರೆಸ್ ಪಕ್ಷದ ಸಾಂಪ್ರದಾಯಿಕ ಬೆಂಬಲದ ಮತಬುಟ್ಟಿ ಖಾಲಿಯಾಗಿತ್ತು.ಯಾವುದೇ ನಿರ್ದಿಷ್ಟ ಜಾತಿ ಇಲ್ಲವೇ ಧರ್ಮದ ಜತೆ ಗುರುತಿಸಿಕೊಳ್ಳುವ ಸ್ಥಿತಿಯಲ್ಲಿ ಕಾಂಗ್ರೆಸ್ ಇರಲಿಲ್ಲ. ಮಂಡಲೋತ್ತರ ದಿನಗಳಲ್ಲಿ ಉತ್ತರಪ್ರದೇಶದಲ್ಲಿ ನಡೆಯುತ್ತಾ ಬಂದ ಬಿರುಸಾದ ಜಾತಿ ಸಂಘರ್ಷದ ರಾಜಕೀಯ ಕಾಂಗ್ರೆಸ್ ಪಕ್ಷವನ್ನು ಮೂಲೆಗುಂಪು ಮಾಡಿತ್ತು.

 

2007ರ ಚುನಾವಣೆಯಲ್ಲಿ ಮಾಯಾವತಿ ಅರ್ಧಕ್ಕಿಂತಲೂ ಹೆಚ್ಚು ವಿಧಾನಸಭಾ ಸ್ಥಾನಗಳನ್ನು ಗಳಿಸಿದಾಗ ಉಳಿದೆಲ್ಲ ಪಕ್ಷಗಳ ಕತೆ ಮುಗಿಯಿತೆಂದೇ ಎಲ್ಲರೂ ತಿಳಿದಿದ್ದರು. ಬಿಎಸ್‌ಪಿಯ 208 ಸದಸ್ಯಬಲದ ಎದುರು ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳ 21 ಸದಸ್ಯರು ಲೆಕ್ಕಕ್ಕಿಲ್ಲದಷ್ಟು ನಗಣ್ಯರಾಗಿದ್ದರು.ಇಷ್ಟೊಂದು ಭದ್ರವಾಗಿದ್ದ ಮಾಯಾವತಿಯವರ ರಾಜಕೀಯ ನೆಲೆ ಎರಡೇ ವರ್ಷಗಳ ಅವಧಿಯಲ್ಲಿ ಕುಸಿದು ಹೋಯಿತೇನೋ ಎಂಬ ಅನುಮಾನ ಕಳೆದ ಲೋಕಸಭಾ ಚುನಾವಣೆಯ ಫಲಿತಾಂಶ ಹುಟ್ಟಿಸಿತ್ತು.ಆ ಚುನಾವಣೆಯಲ್ಲಿ ಎಲ್ಲರ ನಿರೀಕ್ಷೆಯನ್ನು ಹುಸಿಗೊಳಿಸಿ ಕಾಂಗ್ರೆಸ್ ಪಕ್ಷ ಚೇತರಿಸಿಕೊಂಡಿತ್ತು. 1984ರಲ್ಲಿ ಎಲ್ಲ 83 ಲೋಕಸಭಾ ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್ ಪಕ್ಷದ ಸದಸ್ಯ ಬಲ ಪ್ರತಿಚುನಾವಣೆಯಲ್ಲಿ ಕುಸಿಯುತ್ತಾ ಬಂದು 2004ರಲ್ಲಿ ಕೇವಲ ಒಂಬತ್ತಕ್ಕೆ ಇಳಿದಿತ್ತು.

 

ಆದರೆ 2009ರ ಲೋಕಸಭಾ ಚುನಾವಣೆಯಲ್ಲಿ ಅದು ಇದ್ದಕ್ಕಿದ್ದಂತೆ 21ಕ್ಕೆ ಏರಿತ್ತು, ಬಿಎಸ್‌ಪಿ ಬಲ 19ಕ್ಕೆ ಇಳಿದಿತ್ತು. ಇದು ಕಾಂಗ್ರೆಸ್ ಪಕ್ಷಕ್ಕೆ ಮಾತ್ರವಲ್ಲ, ಬಹಳಷ್ಟು ಕಾಲದಿಂದ ರಾಜಕೀಯ ಯಶಸ್ಸಿಗಾಗಿ ಕಾಯುತ್ತಿದ್ದ ರಾಹುಲ್‌ಗಾಂಧಿಯವರಿಗೂ ರಾಜಕೀಯವಾಗಿ ಜೀವದಾನ ಮಾಡಿದ ಫಲಿತಾಂಶ.ಈ ಚುನಾವಣಾ ಗೆಲುವಿನ ಗುಟ್ಟೇನು? ಉತ್ತರಪ್ರದೇಶದ ಮತದಾರರ ಮನೋಭಾವದಲ್ಲಿ ದಿಢೀರನೆ ಆಗಿರುವ ಈ ಬದಲಾವಣೆಗೆ ಕಾರಣಗಳೇನು? ಎಂಬುದು ಈಗಲೂ ಯಾರಿಗೂ ಸ್ಪಷ್ಟ ಇಲ್ಲ.

 

ಬಹಳಷ್ಟು ಮಂದಿ ಇದಕ್ಕೆ ರಾಹುಲ್ ಗಾಂಧಿಯವರ ವರ್ಚಸ್ಸು ಕಾರಣ ಎನ್ನುತ್ತಾರೆ. ಜಾತಿ-ಧರ್ಮವನ್ನು ಲೆಕ್ಕಿಸದೆ ಟಿಕೆಟ್ ನೀಡಿದ ಕಾರ‌್ಯತಂತ್ರ ಫಲ ನೀಡಿತು ಎನ್ನುವವರೂ ಇದ್ದಾರೆ.

 

ವಿಧಾನಸಭಾ ಚುನಾವಣೆಯಲ್ಲಿನ ಗೆಲುವಿನ ನಂತರ ಮಾಯಾವತಿಯವರಲ್ಲಿ ಹುಟ್ಟಿಕೊಂಡ ರಾಷ್ಟ್ರ ರಾಜಕಾರಣದ ಆಕಾಂಕ್ಷೆಯಿಂದಾಗಿ ರಾಜ್ಯ ರಾಜಕಾರಣವನ್ನು ನಿರ್ಲಕ್ಷಿಸಿದ್ದು ಇದಕ್ಕೆ ಕಾರಣ ಎನ್ನುವವರೂ ಇದ್ದಾರೆ.ದಶಕಗಳ ಕಾಲದ ಪ್ರಾದೇಶಿಕ ಪಕ್ಷಗಳ ರಾಜಕಾರಣದಿಂದ ಬೇಸತ್ತು ಹೋಗಿರುವ ಉತ್ತರಪ್ರದೇಶದ ಮತದಾರರು ಮರಳಿ ರಾಷ್ಟ್ರೀಯ ಪಕ್ಷವನ್ನು ಬೆಂಬಲಿಸಲು ನಿರ್ಧರಿಸಿರಬಹುದೆಂಬ ವ್ಯಾಖ್ಯಾನ ಕೂಡಾ ಕೇಳಿಬಂದಿತ್ತು. ಈ ಎಲ್ಲ ಕಾರಣಗಳಿಂದಾಗಿಯೇ ಮುಂದಿನ ತಿಂಗಳು ನಡೆಯಲಿರುವ ಉತ್ತರಪ್ರದೇಶದ ವಿಧಾನಸಭಾ ಚುನಾವಣೆಯ ಬಗ್ಗೆ ದೇಶದ ಜನರಲ್ಲಿ ಕುತೂಹಲ ಇದೆ. ಒಂದೊಮ್ಮೆ ಮಾಯಾವತಿ ಮತ್ತೆ ಹಿಂದಿನ ವಿಧಾನಸಭಾ ಚುನಾವಣೆಯ ಗೆಲುವನ್ನು ಪುನರಾವರ್ತಿಸಿದರೆ ರಾಹುಲ್‌ಗಾಂಧಿಯವರ ರಾಜಕೀಯ ಭವಿಷ್ಯಕ್ಕೆ ಮಂಕು ಕವಿಯಲಿದೆ.

 

ಅಷ್ಟು ಮಾತ್ರವಲ್ಲ, ಅಂತಹ ಸಂದರ್ಭದಲ್ಲಿ ಮಾಯಾವತಿ ರಾಷ್ಟ್ರ ರಾಜಕಾರಣದಲ್ಲಿ ನಿರ್ಣಾಯಕ ಪಾತ್ರ ವಹಿಸುವುದನ್ನು ಯಾರೂ ತಡೆಯಲಾರರು.  ಕಳೆದ ಲೋಕಸಭಾ ಚುನಾವಣೆಯ ಫಲಿತಾಂಶ ಪುನರಾವರ್ತನೆಯಾದರೆ ಕಾಂಗ್ರೆಸ್ ಪಕ್ಷ, ವರ್ಷಗಳಿಂದ ಕಾಯುತ್ತಿರುವ ಭವಿಷ್ಯದ ನಾಯಕತ್ವ ರಾಹುಲ್‌ಗಾಂಧಿಯ ರೂಪದಲ್ಲಿ ಅದಕ್ಕೆ ಸಿಗಬಹುದು.

 

ಮಾಯಾವತಿಯವರ ರಾಜಕೀಯ ಸದ್ಯಕ್ಕೆ ಉತ್ತರಪ್ರದೇಶಕ್ಕಷ್ಟೇ ಸೀಮಿತವಾಗಬಹುದು. ಉತ್ತರಪ್ರದೇಶದ ಮತದಾರರ ಮನಸ್ಸಿನಲ್ಲಿ ಏನಿದೆ ಎನ್ನುವುದು ಸುಲಭದಲ್ಲಿ ಅರ್ಥವಾಗುವಂತಹದ್ದಲ್ಲ. (ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.i)

ಪ್ರತಿಕ್ರಿಯಿಸಿ (+)