ಸೋಮವಾರ, ಜುಲೈ 26, 2021
24 °C

ವಾಕ್ಚಾತುರ್ಯದ ಹಿಂದಿನ ಕಟು ಸತ್ಯ

ಶೇಖರ್‌ ಗುಪ್ತ Updated:

ಅಕ್ಷರ ಗಾತ್ರ : | |

ಇಂದಿರಾಗಾಂಧಿ ನಂತರ ನರೇಂದ್ರ ಮೋದಿ ನಮ್ಮ ರಾಷ್ಟ್ರದ ಅತ್ಯಂತ ಬಲಿಷ್ಠ ರಾಜಕೀಯ ನಾಯಕ ಎಂಬುದರಲ್ಲಿ ಸಂದೇಹವಿಲ್ಲ. ಆದರೆ, ನೀವು ನಿಮ್ಮ ಶೋಧನೆಯನ್ನು ಇನ್ನಷ್ಟು ಆಳಕ್ಕಿಳಿಸಿ ನೋಡಿದಲ್ಲಿ, ಅವರೊಬ್ಬ ನಮ್ಮ ಅತ್ಯಂತ ನಿರಂಕುಶ, ಸಹಜ ಪ್ರವೃತ್ತಿಯ ನಾಯಕ ಎಂದು ವಾದಿಸಬಹುದು. ಥ್ಯಾಚರ್ ಅವರ ಸಂದರ್ಭದಲ್ಲಿ ವಿವರಿಸಲಾದ ಸಹಜ ಪ್ರವೃತ್ತಿಯ ನಾಯಕತ್ವದ ವ್ಯಾಖ್ಯೆ ಹೀಗಿದೆ: ‘ನನ್ನ ಗಾಢ ನಂಬಿಕೆಗಳನ್ನು ನಾನು ಪಾಲಿಸುತ್ತೇನೆ. ಒಮ್ಮತದ ಅಭಿಪ್ರಾಯವನ್ನು ನಾನು ಗಣನೆಗೆ ತೆಗೆದುಕೊಳ್ಳುವುದಿಲ್ಲ’.ಮೇಲಾಗಿ, ಮೋದಿ ನಮ್ಮ ಅತ್ಯಂತ ಪ್ರಭಾವಿ ಸಾರ್ವಜನಿಕ ಭಾಷಣಕಾರ ಮತ್ತು ವಿಶಿಷ್ಟ ಶೈಲಿಯ ಸಂವಹನಕಾರ. ಸಂಸತ್ತಿನಲ್ಲಿ ಅವರು ಹೆಚ್ಚು ಮಾತನಾಡುವುದಿಲ್ಲ ಅಥವಾ ನೇರ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ ಎಂದು ನೀವು ಜರಿಯಬಹುದು. ಆದರೆ ತಮ್ಮ ಸಂಪೂರ್ಣ ನಿಯಂತ್ರಣದಲ್ಲಿರುವ ಪರಿಸರದಲ್ಲಿ ಮೋದಿ ಅತಿಶಯದ ಸಂವಹನಕಾರ. ಒಮ್ಮೆ ತಮ್ಮ ಶ್ರೋತೃಗಳನ್ನು ಸ್ಪಷ್ಟವಾಗಿ ಗುರುತಿಸಿಕೊಂಡು ಸನ್ನಿವೇಶವನ್ನು ತಮ್ಮ ಅಂಕೆಗೆ ತೆಗೆದುಕೊಂಡ ಬಳಿಕ ಮೋದಿ, ಭಾರತದಲ್ಲಿ ನಾವು ಹಿಂದೆಂದೂ ಕಂಡಿರಲಿಲ್ಲ ಎಂಬಂತೆ ಸಂವಹನದ ಮೇಲೆ ಸಂಪೂರ್ಣ ಹತೋಟಿ ಸಾಧಿಸುತ್ತಾರೆ. ವಾಜಪೇಯಿ ಮಹಾನ್ ವಾಗ್ಮಿಯಾಗಿದ್ದರೂ ಅವರ ವಾಕ್ಪಟುತ್ವ ಸಾಂದರ್ಭಿಕವಾಗಿತ್ತು.ತಮ್ಮ ಚಿಂತನೆಗಳು ಅಥವಾ ಸಿದ್ಧಾಂತಗಳನ್ನು ಜನಪ್ರಿಯಗೊಳಿಸಲು ಸಹ ವಾಜಪೇಯಿ ದೊಡ್ಡ ವೇದಿಕೆಗಳನ್ನು ಬಳಸಿಕೊಳ್ಳಲಿಲ್ಲ.

ಕಳೆದ ವಾರ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಮತ್ತು ದುಬೈನ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ ಸಂದರ್ಭದಲ್ಲಿ ಮೋದಿ ತಮ್ಮ ಸಂವಹನಕ್ರಿಯೆಯ ಈ ವಿಶಿಷ್ಟ ಗುಣಲಕ್ಷಣಗಳನ್ನು ಸಾಬೀತುಪಡಿಸಿದ್ದಾರೆ.ದೆಹಲಿಯ ಕೆಂಪುಕೋಟೆಯಿಂದ ಮೋದಿ ಅವರು ಮಾಡಿದ ಭಾಷಣವನ್ನು ಉದ್ದೇಶಪೂರ್ವಕವಾಗಿ ಕುಂದಿಸಲಾಗಿತ್ತು– ಸುದೀರ್ಘ ಪಯಣ ಹೊರಟ ನಾಯಕ ನಾವೆಯನ್ನು ಕ್ರಮೇಣ ತನ್ನ ಹತೋಟಿಗೆ ತೆಗೆದುಕೊಳ್ಳುವಂತೆ. ಕಳೆದ ವರ್ಷ ಜಾರಿಗೆ ತಂದ, ಅದರಲ್ಲೂ ಸ್ವಚ್ಛ ಭಾರತ, ಶೌಚಾಲಯ ನಿರ್ಮಾಣ, ಮೇಕ್ ಇನ್ ಇಂಡಿಯಾದಂಥ ಕಾರ್ಯಕ್ರಮಗಳು ಸಾಧಾರಣ ಪ್ರಗತಿಯನ್ನು ಸಾಧಿಸಿರುವ ಹಿನ್ನೆಲೆಯಲ್ಲಿ ಪ್ರಾಯಶಃ ಉದ್ದೇಶಪೂರ್ವಕವಾಗಿಯೇ ಈ ಬಾರಿ ಯಾವುದೇ ಹೊಸ ಯೋಜನೆಗಳ ಘೋಷಣೆ ಇರಲಿಲ್ಲ. ಆದರೆ ‘ಒಂದು ಶ್ರೇಣಿ ಒಂದು ಪಿಂಚಣಿ’ ಬೇಡಿಕೆಯ ಒತ್ತಡಕ್ಕೆ ಮಣಿದು ತತ್‌ಕ್ಷಣದ ಯಾವುದೇ ಘೋಷಣೆ ಮಾಡದಿರುವುದು ಮೋದಿ ಅವರ ತೀಕ್ಷ್ಣ ಬುದ್ಧಿಗೆ ನಿದರ್ಶನ.ಬಲಿಷ್ಠ ನಾಯಕರು ಯಾರೂ ರಾಷ್ಟ್ರದಲ್ಲಿ ಜರುಗುವ ವಿದ್ಯಮಾನಗಳಿಗೆ ಪ್ರತಿಯಾಗಿ ನೀತಿ ಬದಲಾವಣೆ ಘೋಷಣೆಯ ಪ್ರತಿಕ್ರಿಯೆಯನ್ನು ತೋರುವುದಿಲ್ಲ ಮತ್ತು ಸಹಜ ಪ್ರವೃತ್ತಿಯ ನಾಯಕರು ತಾವೇನು ಮಾಡಬೇಕೆಂದು ಎಲ್ಲರೂ ನಿರೀಕ್ಷಿಸುತ್ತಾರೋ ಅದನ್ನು ಮಾಡುವುದಿಲ್ಲ. ಬದಲಾಗಿ ಆಶ್ಚರ್ಯಕರವೆನಿಸುವ ತೀರ್ಮಾನಗಳನ್ನು ಅವರು ಕೈಗೊಳ್ಳುತ್ತಾರೆ. ‘ಒಂದು ಶ್ರೇಣಿ ಒಂದು ಪಿಂಚಣಿ’ ಬೇಡಿಕೆ ಕುರಿತು ಮೋದಿಯವರು ನೀಡಿದ ಸಾಮಾನ್ಯ ಹೇಳಿಕೆ ಬಹುಪಾಲು ಎಲ್ಲ ಮಾಧ್ಯಮದವರಿಗೆ– ಮುಖ್ಯವಾಗಿ ಜಂತರ್ ಮಂತರ್‌ನಲ್ಲಿ ಪ್ರತಿಭಟನಾನಿರತರಾಗಿದ್ದ ನಿವೃತ್ತ ಯೋಧರ ಬಳಿ ಬೀಡುಬಿಟ್ಟಿದ್ದ ಟಿ.ವಿ. ಚಾನೆಲ್‌ಗಳಿಗೆ ಅಚ್ಚರಿ ಮೂಡಿಸಿತು.ಬಲಿಷ್ಠ ಮತ್ತು ಸಹಜ ಪ್ರವೃತ್ತಿಯ ನಾಯಕರು ದೊಡ್ಡ ವೇದಿಕೆಗಳಲ್ಲಿ ಪ್ರಜ್ವಲಿಸುವ ತಮ್ಮ ಅವಕಾಶವನ್ನು ಮತ್ತೊಬ್ಬರು ಕಸಿಯಲು ಸಹ ಅವಕಾಶ ಮಾಡಿಕೊಡುವುದಿಲ್ಲ. ‘ಒಂದು ಶ್ರೇಣಿ ಒಂದು ಪಿಂಚಣಿ’ ಬೇಡಿಕೆ ಕುರಿತು ಮೋದಿ ನಿರ್ದಿಷ್ಟವಾದ ಹಠಾತ್‌ ಘೋಷಣೆಯನ್ನೇನಾದರೂ ಮಾಡಿದ್ದರೆ, ಅದು ನಿವೃತ್ತ ಯೋಧರನ್ನು ಸಂಪೂರ್ಣ ಸಂತುಷ್ಟರನ್ನಾಗಿ ಮಾಡಿರುತ್ತಿತ್ತು.ಆದರೂ ಸ್ವಾತಂತ್ರ್ಯ ದಿನಾಚರಣೆಯ ಅಂದಿನ ಕಾರ್ಯಕ್ರಮದ ಸಂಪೂರ್ಣ ಗಮನ ಮೋದಿ ಅವರಿಗಿಂತ ಹೆಚ್ಚಾಗಿ ನಿವೃತ್ತ ಯೋಧರೆಡೆಗೆ ಕೇಂದ್ರೀಕೃತವಾಗುತ್ತಿತ್ತು. ಅಂತಹದ್ದೊಂದು ದೊಡ್ಡ ವೇದಿಕೆಯನ್ನು ಕುಂದುಕೊರತೆ ನಿವಾರಣಾ ವೇದಿಕೆಯಾಗಿಸಲು ಅವರು ಯಾಕಾಗಿ ಅವಕಾಶ ಮಾಡಿಕೊಡುತ್ತಾರೆ?ಹಾಗೆಯೇ ತಮ್ಮ ದುಬೈ ಭೇಟಿಯ ಸಂದರ್ಭದಲ್ಲಿ ಕೂಡ, ಮುಸ್ಲಿಂ ರಾಷ್ಟ್ರವೊಂದಕ್ಕೆ ಇದು ತಮ್ಮ ಮೊದಲ ಭೇಟಿ ಎಂಬುದನ್ನೂ, ಭಾರತ-ದುಬೈ ಸಂಬಂಧ ತೇಪೆಯ ಸ್ವರೂಪದ್ದೆಂಬುದನ್ನೂ ಮೋದಿ ಚೆನ್ನಾಗಿ ಅರಿತಿದ್ದರು. ಭಾರತದ ತೆರಿಗೆ ವಂಚಕರಿಗೆ, ಕಳ್ಳಸಾಗಣೆದಾರರಿಗೆ ದುಬೈ ಪಾರಂಪರಿಕ ಸ್ವರ್ಗವಾಗಿದೆ. ಮೇಲಾಗಿ ದುಬೈ ದಾವೂದ್ ಇಬ್ರಾಹಿಂನ ಕರ್ಮಭೂಮಿ ಕೂಡ. ಹೀಗಾಗಿ ತಮ್ಮ ಸಂದೇಶವನ್ನು ಅವರು ಅಚಲ ಗಾಂಭೀರ್ಯದಿಂದ ನೀಡಿದರು.ಭಯೋತ್ಪಾದನೆಗೆ ಪಾಕಿಸ್ತಾನ ಕುಮ್ಮಕ್ಕು ನೀಡುತ್ತಿರುವುದರ ಬಗ್ಗೆಯಾಗಲಿ, ಅವರ ಆಶ್ರಯದಾತರಾದ ಯುಎಇ ಶೇಖ್‌ಗಳನ್ನಾಗಲಿ ದೂರದೆ, ತಮ್ಮ ದಾರಿ ಸರಿಪಡಿಸಿಕೊಳ್ಳುವಂತೆ ಅವರನ್ನು ಓಲೈಸದೇ ಅವರು ನೀಡಿದ ಸಂದೇಶ ಬಹಳ ಮಾರ್ಮಿಕವಾಗಿತ್ತು: ‘ಯುರೋಪ್ ಮಾದರಿಯಲ್ಲಿ ದಕ್ಷಿಣ ಏಷ್ಯಾ ಕೂಡ ಏಕೀಕರಣಗೊಳ್ಳುತ್ತಿದೆ. ಪೂರ್ವದಲ್ಲಿ ಎಲ್ಲರೂ ಒಟ್ಟಾಗುತ್ತಿದ್ದಾರೆ. ಪಶ್ಚಿಮದಲ್ಲಿ ಪಾಕಿಸ್ತಾನ ಅಡಚಣೆ ಉಂಟುಮಾಡುವುದನ್ನು ಮುಂದುವರಿಸಿದ್ದೇ ಆದಲ್ಲಿ, ಭಾರತ ಅದನ್ನು ಲಂಘಿಸಿ ಯುಎಇ ಕಡೆಗೆ ಕೈಚಾಚಿ ವೃತ್ತವನ್ನು ಪರಿಪೂರ್ಣಗೊಳಿಸುತ್ತದೆ. ಆದ್ದರಿಂದ ಕೈ ಜೋಡಿಸಿ ಇಲ್ಲವೇ ಏಕಾಂಗಿಯಾಗುವ ಅಪಾಯ ಎದುರಿಸಿ’.ಗಡಿಯಲ್ಲಿ ಗುಂಡುಗಳ ವಿನಿಮಯ ನಡೆದಿದ್ದರೂ ಮೋದಿ ಈ ಸಮಯದಲ್ಲಿ ಪಾಕಿಸ್ತಾನವನ್ನು ನಿಂದಿಸಲಿಲ್ಲ. ಅವರು ಹೊಸ

ಕಾರ್ಯಸೂಚಿ ಸಿದ್ಧಪಡಿಸುತ್ತಿರುವುದನ್ನು ನೀವು ಕಾಣಬಹುದು. ಪಾಕಿಸ್ತಾನದೊಂದಿಗೆ ಮಾತುಕತೆ ಪುನರಾರಂಭಿಸುವುದು ಮೋದಿಯವರ ಧ್ಯೇಯ. ಮಿತ್ರ ಅಥವಾ ರಾಜಕೀಯ ಶತ್ರು ಈ ಮಾತುಕತೆಯನ್ನು ಹಾಳುಗೆಡವಲು ಅವರು ಅವಕಾಶ ನೀಡುವುದಿಲ್ಲ.ದಿಟ್ಟ, ಬಲಿಷ್ಠ ನಾಯಕ ಮತ್ತು ಮಹಾನ್ ಸಂವಹನಕಾರ ಸಾರ್ವಜನಿಕ ರಂಗವನ್ನು ಬಳಸುವ ಪರಿಯನ್ನು ಗಮನಿಸಲು ನೀವು ಮತ್ತೊಮ್ಮೆ ಅವರ ದುಬೈ ಭಾಷಣದ ಟೇಪ್‌ಗಳನ್ನು ವೀಕ್ಷಿಸಿ. ದುಬೈನ ದೊರೆ ಬಗ್ಗೆ ಹೊಗಳುತ್ತ ಘೋಷಣೆಗಳನ್ನು ಕೂಗಲು ಸಭಿಕರನ್ನು ಮೋದಿ ಎಷ್ಟು ಬಾರಿ ಪ್ರೇರೇಪಿಸುತ್ತಾರೆ ಎಂಬುದನ್ನು ಗಮನಿಸಿ.ಭಾರತದ ಪ್ರಧಾನ ಮಂತ್ರಿಯೊಬ್ಬರು, ಪರದೇಶದಲ್ಲಿ ವಾಸಿಸುವ ಮತ್ತು ನೌಕರಿ ಮಾಡುವ ಭಾರತೀಯ ಸಮೂಹವನ್ನು ಆ ದೇಶದ ದೊರೆಯನ್ನು ಬಣ್ಣಿಸಿ ಘೋಷಣೆ ಕೂಗುವಂತೆ ಪ್ರೇರೇಪಿಸುವುದು ಸಾಮಾನ್ಯ ಸಂಗತಿಯೇ? ಹಿಂದೂಗಳಿಂದಲೇ ಹೆಚ್ಚಾಗಿ ಕೂಡಿದ್ದ ಸಭಿಕವರ್ಗ, ಮುಸ್ಲಿಂ ರಾಷ್ಟ್ರದ ದೊರೆಯನ್ನು ಹೊಗಳಿದ್ದು ಸಹ ಕಾಕತಾಳೀಯವೇನಲ್ಲ.ದೂರದರ್ಶನದ ಕ್ಯಾಮೆರಾಗಳು ಮತ್ತು ಮೋದಿ ಅವರ ವರ್ಚಸ್ಸು ನಿರ್ವಹಣೆಗಾರರು, ಪಾರಂಪರಿಕ ದಿರಿಸು ಧರಿಸಿದ್ದ ಬೊಹ್ರಾ ಮುಸ್ಲಿಮರನ್ನು ಪ್ರತ್ಯೇಕ ಸ್ಥಳದಲ್ಲಿ ಒಟ್ಟಾಗಿ ಕುಳ್ಳಿರಿಸಿ, ಅವರ ಮೇಲೆ ಕ್ಯಾಮೆರಾಗಳನ್ನು ಪದೇ ಪದೇ ತಿರುಗಿಸುತ್ತಿದ್ದುದನ್ನು ಒತ್ತಟ್ಟಿಗಿರಿಸಿ ನೋಡಿದರೂ ಇದು ಸಹಜ ಎನಿಸುವುದಿಲ್ಲ.ನನ್ನ ಸ್ಮರಣೆಯಲ್ಲಿ, ಇಂತಹುದೇ ಎರಡು ಸಂದರ್ಭಗಳಲ್ಲಿ ವಿದೇಶದ ಪ್ರಬಲ ನಾಯಕರನ್ನು ಹೊಗಳಲು ಭಾರತೀಯ ನಾಯಕರೊಬ್ಬರು ಭಾರತೀಯರನ್ನು ಬಳಸಿಕೊಂಡಿದ್ದರು. ಮೊದಲನೆಯ ಸಂದರ್ಭ, 1955ರಲ್ಲಿ ನೆಹರೂರವರು ಖ್ರುಶ್ಚೇವ್ ಮತ್ತು ಬುಲ್ಗ್ಯಾನಿನ್ ಅವರನ್ನು ರಾಮಲೀಲಾ ಮೈದಾನಕ್ಕೆ ಕರೆತಂದಾಗ. ಎರಡನೆಯದು, ಬಾಬ್ರಿ ಮಸೀದಿ ಧ್ವಂಸ ಮತ್ತು ಮತೀಯ ಗಲಭೆಗಳ ಗಾಯ ಇನ್ನೂ ಹಸಿಯಾಗಿದ್ದಾಗಲೇ ಅಂದಿನ ಪ್ರಧಾನಿ ನರಸಿಂಹರಾವ್ ಅವರು ರಫ್ಸಂಜಾನಿ ಅವರಿಗೆ ಲಖನೌದ ಇಮಾಂಬರಾದಲ್ಲಿ ವಿಶಾಲ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡುವ ಅವಕಾಶ ಒದಗಿಸಿದಾಗ.ಇಷ್ಟಾದರೂ ದುಬೈನ ಸಂದರ್ಭಕ್ಕೂ ಮೇಲ್ಕಂಡವುಗಳಿಗೂ ವ್ಯತ್ಯಾಸವಿದೆ. ಖ್ರುಶ್ಚೇವ್ ಭಾರತಕ್ಕೆ ಭೇಟಿ ನೀಡಿದ್ದು ನೆಹರೂರವರ ಸಮಾಜವಾದ ಮತ್ತು ಅಲಿಪ್ತನೀತಿ ಉತ್ತುಂಗದಲ್ಲಿದ್ದ ಕಾಲಘಟ್ಟದಲ್ಲಿ. ಹಾಗಾಗಿ ಆ ಸಮಯದಲ್ಲಿ ಎರಡು ರಾಷ್ಟ್ರಗಳ ನಡುವೆ ಸೈದ್ಧಾಂತಿಕ ಮೈತ್ರಿಯಿತ್ತು. ರಫ್ಸಂಜಾನಿ ಭಾಷಣಕ್ಕೆ ಜಯಕಾರ ಹಾಕುತ್ತಿದ್ದವರೆಲ್ಲರೂ ಮುಸ್ಲಿಮರಾಗಿದ್ದರು – ವಿಶೇಷವಾಗಿ, ಶಿಯಾ ಮುಸ್ಲಿಮರು.ಆದರೆ ಅಂದು ಅವರು ಆಡಿದ ಮಾತುಗಳು, ಭಾರತದ ಇತಿಹಾಸದಲ್ಲೇ ಅತ್ಯಂತ ಚಾಣಾಕ್ಷ ಮತ್ತು ಯಶಸ್ವಿ ರಾಜತಾಂತ್ರಿಕ ಪ್ರಯತ್ನ ಎಂಬುದು ನನ್ನ ಪುಸ್ತಕದಲ್ಲಿ ದಾಖಲಾಗಿದೆ. ಅವರು ಹೇಳಿದ್ದು: ಭಾರತೀಯ ಮುಸ್ಲಿಮರು ಭಾರತದ ಧರ್ಮನಿರಪೇಕ್ಷ ವ್ಯವಸ್ಥೆಯಲ್ಲಿ ಸುರಕ್ಷಿತವಾಗಿದ್ದಾರೆ. ಈ ಅಂಶವೊಂದೇ ಅಂತರರಾಷ್ಟ್ರೀಯ ನಿರ್ಬಂಧಗಳು, ಪಾಕಿಸ್ತಾನ ಮತ್ತು ಆಗಾಗ್ಗೆ ತಲೆದೋರುವ ಕಿರಿಕಿರಿಗಳ ಹೊರತಾಗಿಯೂ, ಭಾರತ- ಇರಾನ್ ನಡುವಣ ಸೌಹಾರ್ದ ಸಂಬಂಧಕ್ಕೆ ತಳಹದಿ.ಮೋದಿ ಯಾವುದೇ ಮುಸ್ಲಿಂ ರಾಷ್ಟ್ರಕ್ಕೆ ಭೇಟಿ ನೀಡಿಲ್ಲವೆಂಬ ಟೀಕೆಗೆ ಗುರಿಯಾಗಿದ್ದರು. ಅದು ಮುಸ್ಲಿಂ ಬಹುಸಂಖ್ಯಾತ ದೇಶಗಳು, ಬಾಂಗ್ಲಾದೇಶ, ಮಧ್ಯ ಏಷ್ಯಾದ ರಾಷ್ಟ್ರಗಳನ್ನು ಒಳಗೊಂಡಿತ್ತು. ಅಕ್ಷರಶಃ ಇಸ್ಲಾಂ ರಾಷ್ಟ್ರವನ್ನು ಒಳಗೊಂಡಿರಲಿಲ್ಲ. ಆದರೀಗ ದುಬೈ ಭೇಟಿಯಿಂದ ಈ ಅಪವಾದವನ್ನು ಮೋದಿ ನಿವಾರಿಸಿಕೊಂಡರು. ಪ್ರಪಂಚದ ನಕ್ಷೆಯ ಮೇಲೆ ತಾವು ಭೇಟಿ ನೀಡಿದ ದೇಶಗಳನ್ನು ಗುರುತು ಮಾಡುವುದರ ಮೂಲಕವಷ್ಟೇ ಮೋದಿ ಈ ಭೇಟಿಯನ್ನು ಕೊನೆಗೊಳಿಸಲಿಲ್ಲ.ಭಾರತದ ಕಟ್ಟಾ ಹಿಂದೂ ಪ್ರಧಾನ ಮಂತ್ರಿಯಾಗಿ, ಬಹುತೇಕ ಅವರ ಅಭಿಮಾನಿಗಳನ್ನೇ ಒಳಗೊಂಡಿದ್ದ 50 ಸಾವಿರ ಭಾರತೀಯರು ವಿದೇಶಿ ನೆಲದಲ್ಲಿ, ವಂಶಪಾರಂಪರ್ಯದ ಆಡಳಿತ ನಡೆಸುವ ಮುಸ್ಲಿಂ ದೊರೆಯನ್ನು ಹೊಗಳುವಂತೆ ಮಾಡಿದ ಈ ಸಾಧನೆ ಮೋದಿ ಅವರ ಪ್ರವೃತ್ತಿ, ಬಲ ಮತ್ತು ಕೌಶಲಕ್ಕೆ ಸಾಕ್ಷಿ.ಈ ಎಲ್ಲ ಅದ್ಭುತವಾದ ಗುಣಲಕ್ಷಣಗಳ ಹೊರತಾಗಿಯೂ ಮೋದಿ ಸರ್ಕಾರ ಆಡಳಿತದಲ್ಲಿ ಮುಗ್ಗರಿಸುತ್ತಿರುವಂತೆ ತೋರಲು ಕಾರಣಗಳೇನು? ಅವರ ಉನ್ನತ ಮತ್ತು ವಿವಾದಾತೀತ ಯೋಜನೆಗಳಾದ ಗಂಗಾ ನದಿ ಶುದ್ಧೀಕರಣ, ಸ್ವಚ್ಛ ಭಾರತ, ಮೇಕ್ ಇನ್ ಇಂಡಿಯಾ ಏಕೆ ದಿಕ್ಕು ತಪ್ಪುತ್ತಿವೆ? ಆರ್ಥಿಕ ಬೆಳವಣಿಗೆ ಚೇತರಿಸಿಕೊಳ್ಳದಿರಲು ಕಾರಣವೇನು? ಸಂಖ್ಯಾಶಾಸ್ತ್ರದ ಕಲ್ಪನಾಶೀಲತೆ ಮತ್ತು ಕೆಲವು ನಿಯಮಗಳನ್ನು ಬದಲಾಯಿಸುವುದರ ಮೂಲಕ ಪಡೆದ ಸಂಖ್ಯೆಗಳನ್ನು ಹೊರತುಪಡಿಸಿದಾಗ, ನಮ್ಮ ಪ್ರಸ್ತುತ ಆರ್ಥಿಕ ಪರಿಸ್ಥಿತಿಯ ನೈಜ ಚಿತ್ರಣ ದೊರೆಯುತ್ತದೆ. ಕೇವಲ ಎರಡು ಸ್ಕ್ವಾಡ್ರನ್ ರಫೆಲ್ ಯುದ್ಧ ವಿಮಾನಗಳನ್ನು ಕೊಳ್ಳುವ ಕುರಿತ ಮೇಲ್‌ಸ್ತರದ, ನಿರ್ದಿಷ್ಟ ತೀರ್ಮಾನ ಕೂಡ ಮಾತುಕತೆಗಳಲ್ಲಿ ಮತ್ತು ಶಿಷ್ಟಾಚಾರಗಳಲ್ಲಿ ಏಕೆ ಸಿಕ್ಕಿಹಾಕಿಕೊಂಡಿದೆ?ಗಿರಿರಾಜ್ ಸಿಂಗ್, ಸಾಕ್ಷಿ ಮಹಾರಾಜ್, ಗಜೇಂದ್ರ ಚೌಹಾಣ್‌ ಅಂತಹ ಐಲು ವ್ಯಕ್ತಿಗಳು ಹೆಚ್ಚು ಪ್ರಚಾರ ಪಡೆಯುವುದಕ್ಕೆ ಅವರು ಯಾಕೆ ಬಿಟ್ಟಿದ್ದಾರೆ? ಹಠಾತ್ತಾಗಿ ಹೊಸ ಭೂ ಸ್ವಾಧೀನ ಕಾಯ್ದೆಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತರುವ ವಿವೇಚನಾರಹಿತ ಕ್ರಮವನ್ನು ಮೋದಿ ಹೇಗೆ ತೆಗೆದುಕೊಂಡರು? ಅವರ ಸರ್ಕಾರ ಮಾಧ್ಯಮಗಳ ಮೇಲೇಕೆ ಸಮರ ಸಾರಿದೆ? ಯಾಕೂಬ್ ಮೆಮನ್ ಕುರಿತು ಸುದ್ದಿ ಪ್ರಸಾರ ಮಾಡಿದ್ದಕ್ಕಾಗಿ (ಅವುಗಳಲ್ಲಿ ಕೆಲವು ಅರ್ಥಹೀನವಾಗಿದ್ದರೂ) ಸುದ್ದಿ ವಾಹಿನಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಗೃಹ ಸಚಿವಾಲಯ ‘ರಾಷ್ಟ್ರೀಯ ಭದ್ರತೆ’ಯ ನೆಪವೊಡ್ಡಿ ಸನ್ ಸಮೂಹದ ಮಾಧ್ಯಮ ಸಂಸ್ಥೆಗಳ ಪರವಾನಗಿ ಹಿಂದೆಪಡೆದಿದೆ.ತೀಸ್ತಾ ಸೆಟಲ್ವಾಡ್‌ರನ್ನು ದಾವೂದ್ ಇಬ್ರಾಹಿಂನ ಸೋದರ ಸಂಬಂಧಿಯೇನೋ ಎಂಬಂತೆ ‘ರಾಷ್ಟ್ರೀಯ ಭದ್ರತೆಗೆ ಕುತ್ತು’ ಎನ್ನುವಂತೆ ಸಿಬಿಐ ಬಿಂಬಿಸುತ್ತಿರುವುದೇಕೆ? ತಾನು ಇಷ್ಟಪಡದವರನ್ನು ಜೈಲಿಗೆ ಕಳುಹಿಸುವುದರಲ್ಲಿ ಅಥವಾ ಯಾವುದೋ ಮಾಧ್ಯಮ ಸಂಸ್ಥೆ ತನ್ನ ಪ್ರಕಟಣೆಯನ್ನು ಕೆಲಕಾಲ ನಿಲ್ಲಿಸುವಂತೆ ಮಾಡುವಲ್ಲಿ ಸರ್ಕಾರ ಯಶಸ್ವಿಯಾದರೂ, ಈ ಎಲ್ಲ ವಿವಾದಗಳು ಸರ್ಕಾರಕ್ಕೆ ಒಳ್ಳೆಯದೇನನ್ನೂ ಮಾಡುವುದಿಲ್ಲ.ಸೂಕ್ಷ್ಮ ಬುದ್ಧಿಯ, ಸಹಜ ಪ್ರವೃತ್ತಿಯುಳ್ಳ, ಬಲಿಷ್ಠ ಮತ್ತು ದಿಟ್ಟತನದ ನಾಯಕರು ಉತ್ತಮ ಸಂವಹನಶೀಲರೂ ಆಗಿರುತ್ತಾರೆ. ಈ ಬಗೆಯ ಗುಣಗಳುಳ್ಳ ನಾಯಕರು ತಮ್ಮ ಶಕ್ತಿ ಮತ್ತು ವರ್ಚಸ್ಸನ್ನು ಇಂಥ ಕ್ಷುಲ್ಲಕ ವಿಚಾರಗಳ ಮೇಲೆ ವ್ಯಯಿಸುವುದಿಲ್ಲ.ಇನ್ನಿತರ ಮಹಾನ್ ನಾಯಕರಂತೆ ಮೋದಿಯವರಲ್ಲಿ ಕೂಡ ಉತ್ತಮ ಗುಣಲಕ್ಷಣಗಳೊಡನೆ ದೌರ್ಬಲ್ಯಗಳೂ ಇರಬಹುದೇ? ಪ್ರತಿಭೆಯಿಂದ ಕೂಡಿದ್ದರೂ ಮಹಾನ್ ನಾಯಕರು ರಾಜಕೀಯ ಅಥವಾ ಸೈದ್ಧಾಂತಿಕ ಚೌಕಟ್ಟುಗಳನ್ನು ಮೀರಿ, ಯಾವುದೇ ಸ್ಥಾನದಲ್ಲಿ ತಾವು ಗುರುತಿಸಿದ ಪ್ರತಿಭೆಗಳನ್ನು ತಮ್ಮತ್ತ ಸೆಳೆಯುವಲ್ಲಿ ವಿಫಲರಾಗುತ್ತಾರೆ ಅಥವಾ ತಮ್ಮ ಕಾರ್ಯವ್ಯವಸ್ಥೆಗೆ ದಕ್ಷ, ಪ್ರಾಮಾಣಿಕ, ಚತುರ ವ್ಯಕ್ತಿಗಳನ್ನು ಸೇರಿಸುವಲ್ಲಿ ಒಲವು ತೋರಿಸುವ ದೊಡ್ಡತನ ಪ್ರದರ್ಶಿಸುವುದಿಲ್ಲ. ಉದಾಹರಣೆಗೆ, ಆ ಸೂಟ್ ಅಂದವಾಗಿ ಕಂಡರೂ ಕೆಟ್ಟ ಪರಿಕಲ್ಪನೆಯಾಗಿತ್ತು ಎಂಬುದನ್ನು ಮೋದಿಯವರಿಗೆ ಯಾರಾದರೂ ಹೇಳಬಹುದಿತ್ತು.ಸಂಸತ್‌ನ ಮುಂಗಾರು ಅಧಿವೇಶನ ಕಿರಿಕಿರಿಯಾಗುತ್ತಿದ್ದಂತೆ, ವಿರೋಧ ಪಕ್ಷಗಳು ಕೈಗೆತ್ತಿಕೊಂಡಿದ್ದ ವಿವಾದಗಳ ಕುರಿತು ಪ್ರಧಾನಿ ಮತ್ತು ಲೋಕಸಭೆಯ ನಾಯಕರಾಗಿ ಮೋದಿ ಸ್ವಯಂಪ್ರೇರಿತ ಹೇಳಿಕೆಯೊಂದನ್ನಾದರೂ ನೀಡಬಹುದಿತ್ತು. ಅದರಿಂದ ವಿರೋಧ ಪಕ್ಷಗಳಿಗೆ ಸಮಾಧಾನವಾಗದಿರಬಹುದು.ಆದರೆ, ಪ್ರಧಾನ ಮಂತ್ರಿಯಾಗಿ ತಮ್ಮ ನೈತಿಕ ಅಧಿಕಾರ ಚಲಾಯಿಸುವ ಅವಕಾಶವೊಂದನ್ನು ಮೋದಿ ತಮಗೆ ತಾವೇ ನಿರಾಕರಿಸಿಕೊಂಡರು ಅಥವಾ ಅವರು ತಮ್ಮ ಗೃಹ ಮತ್ತು ಮಾಹಿತಿ ಸಚಿವಾಲಯಗಳಿಗೆ ಮಾಧ್ಯಮ ಸ್ವಾತಂತ್ರ್ಯದಂತಹ ಹೊಸ ವಿವಾದಗಳನ್ನು ಹುಟ್ಟುಹಾಕಬೇಡಿರೆಂದು ಸೂಚನೆ ನೀಡಬಹುದಿತ್ತು. ಸರಿಯೋ ತಪ್ಪೋ, ಮಾಧ್ಯಮ ಸ್ವಾತಂತ್ರ್ಯದ ವಿಚಾರದಲ್ಲಿ ಮೋದಿ ಸರ್ಕಾರ ಮತ್ತು ಪಕ್ಷಗಳೆರಡೂ ಸ್ವಾಭಾವಿಕವಾಗಿ ಅನುಮಾನ ಪಡುವ ಸ್ಥಾನದಲ್ಲಿವೆ.ಮ್ಯಾಗಿ ಕುರಿತಂತೆ ನೆಸ್ಲೆ ವಿರುದ್ಧ ಸಮುದಾಯ ಅಥವಾ ಗುಂಪಿನ ಪರವಾಗಿ ಮೊಕದ್ದಮೆ (ಕ್ಲಾಸ್ ಆ್ಯಕ್ಷನ್ ಸೂಟ್‌) ಹೂಡುವ ಬದಲು ರಾಂ ವಿಲಾಸ್ ಪಾಸ್ವಾನ್ ಅವರಿಗೆ ಶಾಂತಚಿತ್ತದಿಂತ ಇರುವಂತೆ ಯಾರಾದರೂ ಸಲಹೆ ನೀಡಬೇಕಿತ್ತು. ನಿಮ್ಮದೇ ಬಲಶಾಲಿ ಸಾರ್ವಭೌಮ ಸರ್ಕಾರ ಇದೆ. ನೆಸ್ಲೆ ಕಂಪೆನಿಯನ್ನು ಈ ಗಣರಾಜ್ಯದ ಆಹಾರ ಸುರಕ್ಷತೆ ಕಾಯ್ದೆ ಪ್ರಕಾರ ನಿಯಂತ್ರಿಸುತ್ತೀರಿ. ನಿಮ್ಮದೇ ಪ್ರಯೋಗಶಾಲೆಗಳಿವೆ. ಹಾಗಾಗಿ ಪ್ರತಿಯೊಂದನ್ನೂ ಪರೀಕ್ಷಿಸಿ. ತಪ್ಪಿದ್ದಲ್ಲಿ, ಅಪರಾಧ ಎಂದು ಕಂಡುಬಂದಲ್ಲಿ, ಕಾನೂನು ಕ್ರಮ ಕೈಗೊಳ್ಳಿ. ಆದರೆ ಕ್ಲಾಸ್ ಆ್ಯಕ್ಷನ್ ಮೊಕದ್ದಮೆಯು ಬಲದ ಪ್ರದರ್ಶನವಲ್ಲ, ಮೂರ್ಖತನದ ಪರಮಾವಧಿ.ಪ್ರಧಾನಿ ತಮ್ಮ ಕಾರ್ಯಗಳಲ್ಲಿ ತೀವ್ರ ಮಗ್ನರೆಂದೂ, ಇವುಗಳನ್ನು ಬಿಟ್ಟು ಅವರು ಇನ್ನೂ ಮಹತ್ತಾದ ವಿಷಯಗಳನ್ನು ಬಗೆಹರಿಸಬೇಕಿದೆಎಂದೂ ನೀವು ಹೇಳಬಹುದು. ಆದರೆ ಈ ವಿವಾದಗಳಿಂದ ಸರ್ಕಾರದ ಕಾಲು ಕಟ್ಟಿಹಾಕುವುದೇಕೆ? ಏಕವ್ಯಕ್ತಿಯ ಸೇನೆಯಾಗುವುದು ಬಹಳ ಕುತೂಹಲಕರವಾದ ಆಲೋಚನೆ. ಆದರೆ, ನಿಮ್ಮನ್ನು ಹಿಂಬಾಲಿಸುವ ನೈಜ ಸೈನ್ಯವನ್ನು ಕಟ್ಟದೆಯೇ ಸಮರದಲ್ಲಿ ವಿಜಯ ಅಸಾಧ್ಯ.

(ಲೇಖಕ ಮೀಡಿಯಾಸ್ಕೇಪ್ ಪ್ರೈ.ಲಿ. ಸಂಸ್ಥಾಪಕ ಸಂಪಾದಕ ಮತ್ತು ಅಧ್ಯಕ್ಷ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.