ಶುಕ್ರವಾರ, ಜೂನ್ 18, 2021
21 °C

ವಿನಾಶದ ದಾರಿ

ಗುರುರಾಜ ಕರ್ಜಗಿ Updated:

ಅಕ್ಷರ ಗಾತ್ರ : | |

ಒಬ್ಬ ರಾಜನ ಆಸ್ಥಾನದಲ್ಲಿ ಒಬ್ಬ ರಾಜಪುರೋಹಿತನಿದ್ದ. ಅವನಿಗೆ ಶಾಸ್ತ್ರ ಜ್ಞಾನದ ಜೊತೆಗೆ ಜ್ಯೋತಿಷ್ಯ, ಆಯುರ್ವೇದಗಳ ಪರಿಚಯವೂ ಚೆನ್ನಾಗಿತ್ತು. ಅವನು ರಾಜನಿಗೆ ಸದಾಕಾಲ ಒಳ್ಳೆಯ ಬೋಧನೆಯನ್ನು ಮಾಡುತ್ತ ಸಾತ್ವಿಕ ಜೀವನ ನಡೆಸುತ್ತಿದ್ದ.ಒಂದು ದಿನ ಆತ ನದಿಯಲ್ಲಿ ಸ್ನಾನ ಮಾಡಿ ಶುಭ್ರವಾದ ಬಟ್ಟೆಗಳನ್ನುಟ್ಟು­ಕೊಂಡು, ಮಂತ್ರಗಳನ್ನು ಹೇಳುತ್ತ ಮನೆಯ ಕಡೆಗೆ ನಡೆದಿದ್ದ. ಅವನು ಹೋಗುವ ದಾರಿಯಲ್ಲಿ ಒಂದು ಮರದ ಮೇಲೆ ಕುಳಿತಿದ್ದ ಕಾಗೆ ಅವನನ್ನು ನೋಡಿತು. ಅವನು ಉಟ್ಟಿದ್ದ ಶುಭ್ರ ವಸ್ತ್ರ, ಹಚ್ಚಿಕೊಂಡ ಸುಗಂಧದ್ರವ್ಯಗಳನ್ನು ಕಂಡು ತನ್ನ ಸ್ನೇಹಿತನಿಗೆ ಹೇಳಿತು, ಈತ ಇಷ್ಟು ಸುಂದರವಾಗಿ, ಸ್ವಚ್ಛವಾಗಿ ಹೋಗುತ್ತಿರು­ವು­ದನ್ನು ಕಂಡು ನನಗೆ ಅಸೂಯೆಯಾಗುತ್ತಿದೆ.ಈಗ ಅವನ ತಲೆ, ಮೈಮೇಲೆ ಹೊಲಸು ಮಾಡಿಬಿಡುತ್ತೇನೆ, ಅದರ ಗೆಳೆಯ ಎಷ್ಟು ಬೇಡ­ಬೇಡ­ವೆಂದರೂ ಕೇಳದೇ ಈ ಕೆಟ್ಟ ಕಾಗೆ ಪುರೋಹಿತ ಮರದ ಕೆಳಗೆ ಬರುತ್ತಿದ್ದಂತೆ ಅವನ ತಲೆಯ ಮೇಲೆ, ಬಟ್ಟೆಯ ಮೇಲೆ ಹೊಲಸು ಮಾಡಿತು. ಪುರೋಹಿತ ತಲೆ ಎತ್ತಿ ಕಾಗೆ­ಯನ್ನು ನೋಡಿದ. ಅದು ಸೊಕ್ಕಿನಿಂದ ನಕ್ಕಂತೆ ಕಂಡಿತು. ಆತ ಕೋಪದಿಂದ ಮತ್ತೊಮ್ಮೆ ಸ್ನಾನಕ್ಕೆ ನಡೆದ.ಈ ದಿನಗಳಲ್ಲಿ ಒಂದು ದಿನ ಅರಮನೆಯ ದಾಸಿ ಕಾಳುಗಳನ್ನೆಲ್ಲ ಬಿಸಿಲಿನಲ್ಲಿ ಒಣಗಿಸಲು ಹಾಕಿ ಕಾಯುತ್ತ ಕುಳಿತಿದ್ದಳು. ಆಗ ಒಂದು ಕುರಿ ಬಂದು ಕಾಳು­ಗಳನ್ನು ತಿನ್ನತೊಡಗಿತು. ದಾಸಿ ಕೋಲಿನಿಂದ ಹೊಡೆದು ಓಡಿಸಿದರೂ ಮರಳಿ ಮರಳಿ ಬಂದು ಬಾಯಿ ಹಾಕುತ್ತಿತ್ತು.  ದಾಸಿಗೆ ಸಿಟ್ಟು ಬಂದು ಹತ್ತಿರದಲ್ಲೇ ಇದ್ದ ಉರಿಯುವ ಕೊಳ್ಳಿಯಿಂದ ಅದಕ್ಕೆ ಹೊಡೆದಳು.ಅದರ ಮೈಗೆ ಬೆಂಕಿ ಹತ್ತಿ­ಕೊಂಡಿತು. ಗಾಬರಿಯಿಂದ ಓಡಿದ ಕುರಿ ಆನೆ ಲಾಯದ ಪಕ್ಕದಲ್ಲಿದ್ದ ಹುಲ್ಲಿನ ಮೆದೆಗೆ ಮೈ ಉಜ್ಜಿತು. ಮೆದೆಗೂ ಬೆಂಕಿ ತಗುಲಿ ಧಗಧಗನೇ ಉರಿಯತೊಡ­ಗಿತು. ಈ ಉರಿ ಗಜಶಾಲೆಯನ್ನು ಮುಟ್ಟಿತು. ಆನೆಗಳು ಬೆಂಕಿಗೆ ಸಿಕ್ಕಿ ಹೌಹಾರಿ ಸರಪಳಿ ಕಿತ್ತಿಕೊಂಡು ರಸ್ತೆಯಲ್ಲಿ ಓಡಾಡಿ ಅನಾಹುತ ಮಾಡಿದವು. ರಾಜನ ಪಟ್ಟದಾನೆಗೆ ಸುಟ್ಟ ಗಾಯಗಳಾದವು.ರಾಜನು ಪುರೋಹಿತನನ್ನು ಕರೆದು ತನ್ನ ಪ್ರೀತಿಯ ಆನೆಯ ಸುಟ್ಟಗಾಯಕ್ಕೆ ಏನಾದರೂ ಔಷಧವುಂಟೇ ಎಂದು ಕೇಳಿದ. ಕ್ಷಣಕಾಲ ಯೋಚಿಸಿ ಪುರೋಹಿತ ಹೇಳಿದ, ಪ್ರಭು, ಒಂದೇ ಔಷಧಿ ಇದೆ.  ತಾವು ನನಗೆ ಸಾಕಷ್ಟು ಗಾತ್ರದ ಕಾಗೆಯ ಕೊಬ್ಬನ್ನು ತರಿಸಿಕೊಟ್ಟರೆ ಅದರಲ್ಲಿ ವಿಶೇಷ ಔಷಧಿಯನ್ನು ಮಾಡಿ ಆನೆಗೆ ಹಚ್ಚಿಸುತ್ತೇನೆ. ಖಂಡಿತವಾಗಿಯೂ ಗುಣವಾಗುತ್ತದೆ.ರಾಜ ತಕ್ಷಣ ಸೈನಿಕರಿಗೆ ಹೇಳಿದ, ನನ್ನ ರಾಜ್ಯದ ಎಲ್ಲ ಕಾಗೆಗಳನ್ನು ಹೊಡೆದು ತಂದು ಅವುಗಳ ಮಾಂಸವನ್ನು ಪುರೋಹಿತರಿಗೆ ಕೊಡಿ, ಮರುದಿನ ಒಂದು ಕಾಗೆಯೂ ರಾಜ್ಯದಲ್ಲಿ ಉಳಿಯಲಿಲ್ಲ.  ಆನೆಯ ಸುಟ್ಟ ಗಾಯಕ್ಕೆ ಪುರೋಹಿತನ ಔಷಧಿಯೇ ಸಾಕಿತ್ತು, ಕಾಗೆಯ ಮಾಂಸದ ಅಗತ್ಯವಿರಲಿಲ್ಲ. ಪುರೋಹಿತನಿಗೆ ಒಂದು ಕಾಗೆಯ ಮೇಲಿದ್ದ ಕೋಪ ಈ ರೀತಿ ಇಡೀ ಕಾಗೆಯ ಸಮುದಾಯವನ್ನೇ ಬಲಿಹಾಕಿತು.ನಾವು ಕೋಪದಲ್ಲಿ, ಆತುರದಲ್ಲಿ, ದ್ವೇಷದಲ್ಲಿ ಮಾಡುವ ಕಾರ್ಯ ಕೇವಲ ನಮಗೆ ಮಾತ್ರವಲ್ಲ, ನಮ್ಮೊಂದಿಗಿದ್ದ ಎಲ್ಲರಿಗೂ ತೊಂದರೆಯನ್ನುಂಟು ಮಾಡುತ್ತದೆ, ವಿನಾಶಕ್ಕೆ ಕಾರಣವಾಗುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.