ಗುರುವಾರ , ಮೇ 6, 2021
22 °C

ವಿಮರ್ಶೆಯ ಬಲವಿಲ್ಲದ ರಾಜಕೀಯ ಮತ್ತು ಸಾಹಿತ್ಯ

ನಟರಾಜ್ ಹುಳಿಯಾರ್ Updated:

ಅಕ್ಷರ ಗಾತ್ರ : | |

ವಿಮರ್ಶೆಯ ಬಲವಿಲ್ಲದ ರಾಜಕೀಯ ಮತ್ತು ಸಾಹಿತ್ಯ

ಬೆಂಗಳೂರಿಗೆ ಬಂದಿದ್ದ ಉತ್ತರ ಭಾರತದ ವಿರೋಧ ಪಕ್ಷದ ನಾಯಕರೊಬ್ಬರನ್ನು ನೋಡಲು ಮೇಷ್ಟರೊಬ್ಬರು ಕುಮಾರಕೃಪಾ ಅತಿಥಿಗೃಹಕ್ಕೆ ಹೋಗಿದ್ದರು. ಕೆಲವೇ ಕ್ಷಣಗಳಲ್ಲಿ ಅಲ್ಲಿಗೆ ಮಾಜಿ ಮುಖ್ಯಮಂತ್ರಿಯೊಬ್ಬರು ಬರುವವರಿದ್ದರು.

ವಿರೋಧ ಪಕ್ಷದ ನಾಯಕರು ಮಾಜಿಯ ಬಗ್ಗೆ ಮೇಷ್ಟರನ್ನು ಕೇಳಿದರು: ‘ನಿಮ್ಮ ನಾಯಕ ಹೇಗಿದ್ದಾನೆ?’ ‘ಚೆನ್ನಾಗಿದ್ದಾರೆ’ ಎಂದರು ಮೇಷ್ಟರು. ತಕ್ಷಣ ವಿರೋಧ ಪಕ್ಷದ ನಾಯಕರು ‘ಏನು ಚೆನ್ನಾಗಿದ್ದಾನೆ! ಹರಾಮ್ ಕೋರ್! ಬರಲಿ, ಅವನಿಗೆ ಸರಿಯಾಗಿ ಝಾಡಿಸುತ್ತೇನೆ!’ ಎಂದರು. ಮೇಷ್ಟರು ನೋಡುತ್ತಿರುವಂತೆಯೇ ಮಾಜಿ ಮುಖ್ಯಮಂತ್ರಿಗಳು ಅಲ್ಲಿಗೆ ಬಂದರು. 

ಇನ್ನೇನು ಮಾರಾಮಾರಿಯಾಗಿ ಅನಾಹುತವಾಗಲಿದೆ ಎಂದು ಮೇಷ್ಟರು ಕಾಯುತ್ತಿರುವಂತೆಯೇ, ವಿರೋಧ ಪಕ್ಷದ ನಾಯಕರು ಮೇಲೆದ್ದರು; ‘ಬರಬೇಕು ಬರಬೇಕು! ದೇಶದ ಬಹುದೊಡ್ಡ ನಾಯಕರು’ ಎಂದು ಮಾಜಿಯನ್ನು ಅಪ್ಪಿಕೊಂಡರು. ಎರಡು ಗಂಟೆ ಕಳೆದರೂ ಅವರ ಮಾತು ಹೊಗಳಿಕೆಯ ಧಾಟಿ ಬಿಟ್ಟು ಬೇರೆಡೆಗೆ ಹೊರಳಲಿಲ್ಲ! ಒಬ್ಬ ನಾಯಕ ಇನ್ನೊಬ್ಬನಿಗೆ ಝಾಡಿಸಲೂ ಇಲ್ಲ. ಹೊರಡುವಾಗ ಇಬ್ಬರೂ ಮತ್ತೆ ಅಪ್ಪಿಕೊಂಡರು. 

ಬಹಳ ವರ್ಷಗಳ ಕೆಳಗೆ ನಡೆದ ಈ ಘಟನೆ ಮತ್ತೆ ನೆನಪಾದದ್ದು ಸಾಹಿತಿಯೊಬ್ಬರ ಇಂಥದೇ ವರಸೆಯನ್ನು ಹೊಸ ತಲೆಮಾರಿನ ಸಾಹಿತ್ಯ ಸಂಶೋಧಕರು ಜುಗುಪ್ಸೆಯಿಂದ ಬಣ್ಣಿಸತೊಡಗಿದಾಗ. ಈ ಸಾಹಿತಿ ಮಾರನೆಯ ದಿನ ಲೇಖಕನೊಬ್ಬನನ್ನು ಕುರಿತ ಸೆಮಿನಾರೊಂದನ್ನು ಉದ್ಘಾಟನೆ ಮಾಡಬೇಕಾಗಿತ್ತು. ಆ ಲೇಖಕನನ್ನಾಗಲೀ ಅವನ ಕೃತಿಗಳನ್ನಾಗಲೀ ಈ ಸಾಹಿತಿ ಇಷ್ಟಪಟ್ಟವರಲ್ಲ.

ಸೆಮಿನಾರಿನ ಹಿಂದಿನ ರಾತ್ರಿಯಿಡೀ ಆ ಲೇಖಕನ ದುರ್ಗುಣಗಳು ಹಾಗೂ ಅವನ ಪುಸ್ತಕಗಳ ದೋಷಗಳನ್ನು ಕುರಿತು ಅವರು ಹೊಸ ತಲೆಮಾರಿನ ಲೇಖಕ-ಸಂಶೋಧಕರ ಎದುರು ಬಯ್ಯುತ್ತಲೇ ಇದ್ದರು. ಮಾರನೆಯ ಬೆಳಗ್ಗೆ ಸೆಮಿನಾರಿನಲ್ಲಿ ಏನಾಗುತ್ತದೋ ಎಂದು ಈ ವಿದ್ಯಾರ್ಥಿ ಸಂಘಟಕರು ಕುತೂಹಲ, ಆತಂಕಗಳ ನಡುವೆ ಕಾಯುತ್ತಲೇ ಇದ್ದರು.

ವಿಚಿತ್ರವೆಂದರೆ, ಉದ್ಘಾಟಕರು ನಿನ್ನೆ ರಾತ್ರಿಯಿಡೀ ಬಯ್ದಿದ್ದ ಲೇಖಕನನ್ನೂ ಅವನ ಕೃತಿಗಳನ್ನೂ ವೇದಿಕೆಯ ಮೇಲೆ ಬಾಯ್ತುಂಬಾ ಹೊಗಳಿದರು; ಪತ್ರಿಕೆಗಳಿಗೆ ಬೇಕಾದ ‘ಉತ್ತಮ’ ವಾಕ್ಯಗಳನ್ನೂ, ಶೀರ್ಷಿಕೆಗಳಿಗೆ ತಕ್ಕ ‘ಹೊಸಯುಗದ ಹರಿಕಾರ’ ‘ಬಹುಮುಖಿ ಪ್ರತಿಭೆ’ ಮುಂತಾದ ಕ್ಲೀಷೆಗಳನ್ನೂ ಧಾರಾಳವಾಗಿ ಕೊಟ್ಟರು. ಹಿಂದಿನ ರಾತ್ರಿಯ ಕಟುಟೀಕೆಗಳ ಗುಂಗಿನಲ್ಲಿದ್ದ ಹೊಸ ತಲೆಮಾರಿನ ಸಂಶೋಧಕರು ನಿಜಕ್ಕೂ ಗೊಂದಲಕ್ಕೊಳಗಾದರು. 



ಆದರೆ ಹೊಸ ತಲೆಮಾರಿನ ಈ ಗೊಂದಲ ಕೂಡ ಪ್ರಾಮಾಣಿಕತೆಯ ಕೊರತೆಯಿಂದ, ಅಧೀರತೆಯಿಂದ ಹುಟ್ಟಿರಬಹುದು ಎನ್ನಿಸಿತು. ಯಾಕೆಂದರೆ, ಆ ಹಿರಿಯ ಸಾಹಿತಿಯ ‘ರಾತ್ರಿಯ ಬಯ್ಗುಳ; ಹಗಲಿನ ಭಜನೆ’ಗೆ ಉತ್ತರವಾಗಿ ಈ ತರುಣ ಸಂಶೋಧಕರು ತಮ್ಮ ವಿಮರ್ಶೆಯ ಸಲಕರಣೆಗಳ ಮೂಲಕ ಅವರ ‘ಹಗಲು’ ‘ರಾತ್ರಿ’ಗಳ ವಿಭಿನ್ನ ‘ವ್ಯಾಖ್ಯಾನ’ಗಳನ್ನು, ಬೂಟಾಟಿಕೆಯನ್ನು ತೀವ್ರ ವಿಶ್ಲೇಷಣೆಗೆ ಒಳಪಡಿಸಬಹುದಿತ್ತು.

ಆದರೆ ಕನ್ನಡ, ಇಂಗ್ಲಿಷ್ ಸಾಹಿತ್ಯಗಳಲ್ಲಿ ಎಂ.ಎ. ಮಾಡಿ, ಡಾಕ್ಟರೇಟ್ ಮಾಡುತ್ತಿರುವ ಈ ತರುಣರಿಗೆ ಸಾಹಿತ್ಯ ಕೃತಿಗಳನ್ನು ನೋಡುವ ವಿಮರ್ಶಾ ಮಾದರಿಗಳೇಪರಿಚಯವಿದ್ದಂತಿರಲಿಲ್ಲ. ಆದ್ದರಿಂದ ಅವರು ಯಾವುದೇ ಸಾಹಿತ್ಯ ಕೃತಿಗಳ ಬಗ್ಗೆ ಸ್ವತಂತ್ರ ಗ್ರಹಿಕೆಗಳನ್ನು ರೂಪಿಸಿಕೊಳ್ಳಲೆತ್ನಿಸಿದಂತಿರಲಿಲ್ಲ.

ಅಸಲಿಗೆ, ಅವರು ಪಶ್ಚಿಮದ ವಿಮರ್ಶೆಯನ್ನಾಗಲೀ, ಅಥವಾ ಕನ್ನಡದವರೇ ಆದ ಕುರ್ತಕೋಟಿ, ಡಿ.ಆರ್. ನಾಗರಾಜ್, ಜಿ.ರಾಜಶೇಖರ್ ಥರದವರ ವಿಮರ್ಶೆಯನ್ನಾಗಲೀ ಓದಿರಲಿಲ್ಲ. ‘ಇವರ ಪುಸ್ತಕಗಳೆಲ್ಲ ನಮ್ಮ ಸಿಲಬಸ್ಸಿನಲ್ಲಿಲ್ಲ’ ಎಂಬ ಸಲೀಸು ಉತ್ತರ ಅವರಿಂದ ಬರುತ್ತಿತ್ತು. 

ಹೀಗಿರುವಾಗ, ವಿಮರ್ಶೆಯ ಕೆಲವು ಮಾದರಿಗಳಾದರೂ ಗೊತ್ತಿರದ ಅವರು ಸಾಹಿತ್ಯ ಕೃತಿಗಳ ವಸ್ತುಗಳನ್ನು ಕುರಿತು ಹೇಗೆ ಸಂಶೋಧನೆ ಮಾಡುತ್ತಾರೆ ಎಂದು ನೋಡಿದರೆ ಅವರ ಸಂಶೋಧನೆಯ ‘ಮೆಥಡಾಲಜಿ’ಯಲ್ಲಿ ಸಾಹಿತ್ಯ ವಿಮರ್ಶೆಯ ತರಬೇತಿಯೇ ಇರಲಿಲ್ಲ…

ಸ್ವಲ್ಪ ಕೆದಕಿದರೆ ಅವರ ಮೇಷ್ಟರುಗಳು ಕೂಡ ಈಚೆಗೆ ಯಾವ ಪುಸ್ತಕಗಳ ಬಗೆಗೂ ವಿಮರ್ಶೆ, ವಿಶ್ಲೇಷಣೆ ಬರೆದಂತಿರಲಿಲ್ಲ! ಹಾಗೆ ಆ ಮೇಷ್ಟರುಗಳು ವಿಮರ್ಶೆ ಬರೆಯದಿರಲು ಕಾರಣವೇನೆಂದು ನೋಡಿದರೆ, ಯಾರ ಪುಸ್ತಕದ ಮೇಲೆ ಏನು ಬರೆದರೆ ಯಾವ ಪ್ರಶಸ್ತಿ ತಪ್ಪಿ ಹೋಗುವುದೋ ಎಂಬ ಗುಪ್ತ ಭಯವೂ ಅದಕ್ಕೆ ಕಾರಣವಾಗಿದ್ದಂತಿತ್ತು!

ಜೊತೆಗೆ ಒಬ್ಬ ಅಧ್ಯಾಪಕನ ಬಡ್ತಿಯ ಫೈಲು ಇನ್ನೊಂದು ವಿಶ್ವವಿದ್ಯಾಲಯದ ಪ್ರಾಧ್ಯಾಪಕನ ಬಳಿ ಹೋಗುತ್ತದೆ; ಆಗ ತನ್ನ ವಿಮರ್ಶೆಯಿಂದಾಗಿ ಬಡ್ತಿಗೆ ಭಂಗ ಬಂದರೇನು ಗತಿ ಎಂಬ ಸುಪ್ತ ಭಯವೂ ಅವರಲ್ಲಿ ಇದ್ದಂತಿತ್ತು! ಇಂಥ ನಿರ್ಲಜ್ಜೆಯ ‘ನೀನೆನಗಿದ್ದರೆ ನಾ ನಿನಗೆ’ ಎಂಬಂಥ ವಾತಾವರಣದಲ್ಲಿ ಯಾವುದೇ ಬಗೆಯ ಸ್ವತಂತ್ರ ಚಿಂತನೆಯಾಗಲೀ ವಿಮರ್ಶೆಯಾಗಲೀ ಅರಳುತ್ತದೆಂದು ನಿರೀಕ್ಷಿಸುವುದು ಕಷ್ಟ.

ಇಂಥ ಮನಸ್ಥಿತಿಯ ಅಧ್ಯಾಪಕ, ಅಧ್ಯಾಪಕಿಯರು ಸಾಹಿತ್ಯ ಕೃತಿಗಳನ್ನಾಗಲೀ, ಕೃತಿಗಳ ವಸ್ತುಗಳನ್ನಾಗಲೀ ನೋಡುವ ರೀತಿಗಳನ್ನು ವಿದ್ಯಾರ್ಥಿಗಳಿಗೆ ಹೇಳಿಕೊಡುವುದು ಇನ್ನೂ ಕಷ್ಟ.  ದಿನಪತ್ರಿಕೆಯೊಂದರ ಸಾಪ್ತಾಹಿಕದ ಸಂಪಾದಕರು ‘ಈಚೆಗೆ ಪುಸ್ತಕ ವಿಮರ್ಶೆ ಬರೆಯಲು ವಿಮರ್ಶಕರೇ ಸಿಗುತ್ತಿಲ್ಲ’ ಎಂದು ನಿರಾಶರಾಗಿದ್ದರ ಮೂಲ ಕಾರಣಗಳನ್ನು ವಿಶ್ವವಿದ್ಯಾಲಯಗಳ ಜಡತೆಯಲ್ಲೂ ಹುಡುಕಬೇಕು. 



ಈ ಜಡಸ್ಥಿತಿ ಸಾಹಿತ್ಯ ವಿಮರ್ಶೆಗಷ್ಟೇ ಸಂಬಂಧಿಸಿದ ಸಮಸ್ಯೆ ಎಂದು ಭಾವಿಸಲಾಗದು. ಕಾರಣ, ವಿಮರ್ಶೆ ಎನ್ನುವುದು ಸಮಾಜದ ಎಲ್ಲ ವಲಯಗಳನ್ನೂ ಒಳಗೊಳ್ಳುವ ವಿಸ್ತೃತ ಚಟುವಟಿಕೆ. ಪುಸ್ತಕಗಳನ್ನು ಸಮರ್ಥವಾಗಿ ವಿಶ್ಲೇಷಿಸಬಲ್ಲವರು ಸಂಸ್ಕೃತಿ, ರಾಜಕಾರಣಗಳನ್ನು ಆಳವಾಗಿ ವಿಮರ್ಶಿಸುವ ನೋಟಗಳನ್ನೂ ಹೊಂದಿರಬಲ್ಲರು.

ವಿಮರ್ಶಕ ಎಫ್.ಆರ್.ಲೀವಿಸ್ ‘ಸಮಾಜ ವಿಜ್ಞಾನಿಗಳು ಹಾಗೂ ರಾಜಕೀಯ ವಿಜ್ಞಾನಿಗಳಿಗಿಂತ ಸಾಹಿತ್ಯ ವಿಮರ್ಶಕರು ಮುಂದಿರುತ್ತಾರೆ; ಯಾಕೆಂದರೆ ಭಾಷೆಯ ಸೂಕ್ಷ್ಮ ಬಳಕೆಯ ಬಗ್ಗೆ ಅವರು ಹೆಚ್ಚು ಎಚ್ಚರ ವಹಿಸುತ್ತಿರಬೇಕಾಗುತ್ತದೆ’ ಎಂದಿದ್ದು ಈ ಹಿನ್ನೆಲೆಯಲ್ಲಿಯೇ. ಆದ್ದರಿಂದಲೇ ಕವಿ ಆಕ್ಟೋವಿಯಾ ಪಾಜ್‌ನ ‘ವಿಮರ್ಶೆ ಸೋತರೆ ಪ್ರಜಾಪ್ರಭುತ್ವವೂ ಸೋಲುವುದು’ ಎಂಬ ಮಾತಿನ ಅರ್ಥವನ್ನು ವಿಸ್ತರಿಸುತ್ತಲೇ ಇರಬೇಕು.

ನಮ್ಮ ರಾಜಕೀಯ ಪಕ್ಷಗಳಿಗೆ ಸೇರಿಕೊಳ್ಳುವಾಗ ನಿಜಕ್ಕೂ ಆದರ್ಶಗಳನ್ನು ಹೊತ್ತು ಬರುವ ತರುಣ, ತರುಣಿಯರಿಗೆ ರಾಜಕೀಯ ಬೆಳವಣಿಗೆಗಳನ್ನು ವಿಮರ್ಶಿಸುವುದನ್ನಾಗಲೀ, ಸಮಾಜದ ಸ್ಥಿತಿಗತಿಗಳನ್ನಾಗಲೀ ಹೇಳಿಕೊಡುವ ನಾಯಕರೇ ಇದ್ದಂತಿಲ್ಲ; ಬದಲಿಗೆ, ಅವರನ್ನು ತಮ್ಮ ಪಕ್ಷದ ಪರ ಕಿರುಚುವ ವಾಚಾಳಿಗಳನ್ನಾಗಿ ಮಾಡುವುದರಲ್ಲೇ ಬಹುತೇಕರು ತೊಡಗಿದಂತಿದೆ.

ಜೊತೆಗೆ, ಹಿರಿಯ ನಾಯಕರು ಕೂಡ ‘ಏನು ಹೇಳಿದರೆ ಏನು ಪ್ರಯೋಜನ?’ ಎಂದು ಸಿನಿಕರಾಗಿರುವಂತಿದೆ. ಈ ಸಿನಿಕತೆ ಕಾಲೇಜು, ವಿಶ್ವವಿದ್ಯಾಲಯಗಳ ಬೋಧಕ, ಬೋಧಕಿಯರನ್ನೂ ಆವರಿಸಿದ್ದರೆ ಅದು ಒಂದು ಸಮಾಜದ ಬೌದ್ಧಿಕ ದುರಂತದ ಮುನ್ಸೂಚನೆಯಷ್ಟೇ.

ನಮ್ಮ ಶಿಕ್ಷಣ ವಲಯಗಳಲ್ಲಿ ಸ್ವತಂತ್ರ ಚಿಂತನೆಯ ಸಾಧ್ಯತೆಗಳು ಮಾಯವಾದರೆ ಹೊಸ ತಲೆಮಾರುಗಳು ರಾಷ್ಟ್ರೀಯತೆ, ದೇಶಪ್ರೇಮದಂಥ ಪರಿಕಲ್ಪನೆಗಳ ವಿಶಾಲ ಅರ್ಥಗಳನ್ನು ಕುವೆಂಪು, ಟ್ಯಾಗೋರ್, ನೆಹರೂ ಥರದ ಚಿಂತಕರಿಂದ ಕಲಿಯದೆ ಝಂಡಾ ಹಿಡಿದ ಚೀರುಮಾರಿಗಳಿಂದ ಸಂಕುಚಿತ ಅರ್ಥಗಳನ್ನು ಕಲಿಯಬೇಕಾದ ದುಃಸ್ಥಿತಿ ಬರುತ್ತದೆ.

ಒಂದು ಬಜೆಟ್ಟಿನ ವಿಶ್ಲೇಷಣೆ ಮಾಡುವ ಕ್ರಮವನ್ನು ಅಮರ್ತ್ಯ ಸೇನ್ ಥರದವರಿಂದ ಕಲಿಯದೆ ಸಂತೆಯ ಹೊತ್ತಿಗೆ ಮೂರು ಮೊಳ ನೇಯುವ ಮಾತುಗಾರರಿಂದಲೋ, ಪಕ್ಷಗಳ ಅಪ್ರಾಮಾಣಿಕ ವಕ್ತಾರರಿಂದಲೋ ಕಲಿಯಬೇಕಾಗುತ್ತದೆ.

ವಿಶ್ವವಿದ್ಯಾಲಯಗಳು ಮಾತ್ರ ನಾಯಕರನ್ನು, ಸೂಕ್ಷ್ಮ ವಿಶ್ಲೇಷಕರನ್ನು ಸೃಷ್ಟಿಸುತ್ತವೆ ಎಂದು ನಾನು ವಾದಿಸುತ್ತಿಲ್ಲ. ನಾಯಕತ್ವವನ್ನು ಸೃಷ್ಟಿಸುವ ಅನೇಕ ವಲಯಗಳಿರುತ್ತವೆ, ನಿಜ.

ಆದರೆ ಸಮಾಜ, ಸಾಹಿತ್ಯ, ಸಂಸ್ಕೃತಿ, ಮಾನವ ವರ್ತನೆ, ರಾಜಕಾರಣ, ಆರ್ಥಿಕತೆ– ಇವೆಲ್ಲದರ ಕ್ರಮಬದ್ಧ ವಿಶ್ಲೇಷಣೆಗಳನ್ನು ಮಾಡಲೆಂದೇ ಪ್ರಬುದ್ಧ ಚಿಂತನಾಕ್ರಮಗಳು ನಮ್ಮ ಉನ್ನತ ಶಿಕ್ಷಣದ ಪಠ್ಯಗಳಲ್ಲಿರುತ್ತವೆ; ಅದಕ್ಕಾಗಿ ಜನರ ತೆರಿಗೆಯ ಹಣದಿಂದ ಕೋಟ್ಯಂತರ ರೂಪಾಯಿಗಳನ್ನು ಸುರಿಯಲಾಗುತ್ತದೆ ಎಂಬುದನ್ನು ಇಲ್ಲಿ ಭಾಗಿಯಾಗಿರುವವರು ಮರೆಯಬಾರದು.

ಇಂಥ ಕಡೆ ಉತ್ತಮ ನಾಯಕರು ಹುಟ್ಟದಿದ್ದರೆ, ಎಲ್ಲ ವಲಯಗಳನ್ನು ಉತ್ತಮವಾಗಿ ವಿಶ್ಲೇಷಿಸುವವರಾದರೂ ತಯಾರಾಗಬೇಕು.  ಯಾವುದೇ ಜ್ಞಾನವಿಲ್ಲದೆ ಕಿರುಚುವವರನ್ನು ಆಳವಾದ ಜ್ಞಾನವುಳ್ಳ ದಿಟ್ಟ ದನಿಗಳು ಮಾತ್ರ ಹಿಮ್ಮೆಟ್ಟಿಸಲು ಸಾಧ್ಯ. ಈ ಕೆಲಸವನ್ನು ನವಮಾಧ್ಯಮಗಳ ತಕ್ಷಣದ ಪ್ರತಿಕ್ರಿಯೆಯ ಮೂಲಕ ಮಾಡುತ್ತೇವೆ ಎಂದು ಹೊಸ ಪ್ರಗತಿಪರ ತಲೆಮಾರು ಭ್ರಮಿಸಬಾರದು.

ನಿರಂತರವಾದ ಹಾಗೂ ಪ್ರತಿದಿನದ ವ್ಯಾಪಕ ಅಧ್ಯಯನದ ಹಿನ್ನೆಲೆ ಹೊಸ ತಲೆಮಾರಿನ ಕಾಳಜಿ ಹಾಗೂ ಕ್ಷಿಪ್ರ ಪ್ರತಿಕ್ರಿಯೆಯ ತವಕದೊಂದಿಗೆ ಬೆರೆತಾಗ ಮಾತ್ರ ಅದರ ಪರಿಣಾಮ ಆರೋಗ್ಯಕರವಾಗಿರಬಲ್ಲದು. ‘ವಿಜ್ಞಾನ, ತಂತ್ರಜ್ಞಾನಗಳನ್ನು ಓದಿ ನವಮಾಧ್ಯಮಗಳನ್ನು ಬಳಸುತ್ತಿರುವ ಅನೇಕರು ಹತ್ತನೆಯ ತರಗತಿಯ ನಂತರ ಚರಿತ್ರೆ, ಸಮಾಜ ಕುರಿತು ಕ್ರಮಬದ್ಧವಾಗಿ ಏನನ್ನೂ ಓದಿಲ್ಲ’ ಎಂಬ ವಾಸ್ತವವನ್ನು ರವಿಕೃಷ್ಣಾರೆಡ್ಡಿ ಒಮ್ಮೆ ಗುರುತಿಸಿದ್ದರು.

ಇಂಥ ಸನ್ನಿವೇಶದಲ್ಲಿ, ತಮ್ಮ ಪಠ್ಯಕ್ರಮಗಳಲ್ಲಿ ಸಾಹಿತ್ಯ, ಸಮಾಜ, ರಾಜಕೀಯ ಇತ್ಯಾದಿಗಳನ್ನು ವ್ಯವಸ್ಥಿತವಾಗಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹೆಚ್ಚು ಸ್ವತಂತ್ರವಾಗಿ, ಅಧ್ಯಯನದ ಬಲದಿಂದ ಮಾತಾಡಬೇಕಾಗುತ್ತದೆ.

‘ಜ್ಞಾನದ ಬಲದಿಂದ ಅಜ್ಞಾನದ ಕೇಡ’ನ್ನು ತೋರಿಸಬೇಕಾಗುತ್ತದೆ. ರಾಜಕೀಯ ಪಕ್ಷಗಳ ಪ್ರಾಯೋಜಿತ ಗಿಳಿಪಾಠಗಳನ್ನು ತಿರಸ್ಕರಿಸಿ ವಸ್ತುಸ್ಥಿತಿಯನ್ನು ವಿಶ್ಲೇಷಿಸಬೇಕಾಗುತ್ತದೆ. ಮೊನ್ನೆ ದೇಶದ್ರೋಹದ ಬಗ್ಗೆ ಕೆಲವು ಫೇಸ್ ಬುಕ್ಕಿಗಳು ತಲೆಗೆ ಬಂದದ್ದು ಮಾತಾಡುತ್ತಿದ್ದಾಗ, ಕಾನೂನು ವಿಶ್ವವಿದ್ಯಾಲಯವೊಂದರ ವಿದ್ಯಾರ್ಥಿ ಆ ಕುರಿತ ಕಲಮುಗಳ ವಿವರಣೆಯನ್ನು ವೆಬ್ ಸೈಟಿನಲ್ಲಿ ಹಾಕಿ ವಾಚಾಳಿಗಳ ಬಾಯಿ ಮುಚ್ಚಿಸಿದ. ಇಂಥ ಬೌದ್ಧಿಕ ಬದ್ಧತೆಯ ಜೊತೆಗೆ ಚರಿತ್ರೆ ಹಾಗೂ ಸಮಕಾಲೀನ ಸಮಾಜಗಳ ಆಳವಾದ ಗ್ರಹಿಕೆಯೂ ಅಗತ್ಯ.

ಯುದ್ಧೋನ್ಮಾದದ ‘ಸ್ಟ್ರ್ಯಾಟಿಜಿಕ್’ ದಾಳಿಗಳಂತೆಯೇ ಚಿಂತನೆಗಳ ‘ಸ್ಟ್ರ್ಯಾಟಿಜಿಕ್’ ಚೆಲ್ಲಾಟಗಳಿಂದ ಕೂಡ ಉತ್ತಮವಾದ, ದೀರ್ಘಕಾಲದ ಪರಿಣಾಮ ಆಗಲಾರದು. ‘ನಮ್ಮ ಹೋರಾಟಗಳನ್ನು ಬಲಗೊಳಿಸಲು ವಿದ್ಯಾರ್ಥಿಯೊಬ್ಬನ ಸಾವು ನೆರವಾಯಿತು’ ಎಂಬ ವಿಕೃತ ಆನಂದ ಸೂಕ್ಷ್ಮಜೀವಿಗಳಲ್ಲಿ ಹಬ್ಬುವುದು ಅನಾರೋಗ್ಯಕರ.

ಅಂಥವರು ಅಧಿಕಾರಿಗಳ ಆತ್ಮಹತ್ಯೆಯನ್ನು ದುರ್ಬಳಕೆ ಮಾಡಿಕೊಳ್ಳುವ ರಾಜಕೀಯ ಪಕ್ಷಗಳನ್ನು ಟೀಕಿಸುವ ನೈತಿಕ ನಾಲಗೆಯನ್ನೇ ಕಳೆದುಕೊಳ್ಳುತ್ತಾರೆ.  ಗುಪ್ತ ಅಜೆಂಡಾಗಳಿಂದ ಆರೋಗ್ಯಕರ ಪರಿಣಾಮಗಳನ್ನು ಸಾಧಿಸಲಾಗದು; ಬದಲಿಗೆ ಮುಕ್ತ ಚರ್ಚೆ ಹಾಗೂ ಶಕ್ತಿಯುತ ಪ್ರಾಮಾಣಿಕ ವಾದಗಳು ಉತ್ತಮ ವಿಮರ್ಶಾತ್ಮಕ ವಾತಾವರಣವನ್ನು ಹುಟ್ಟು ಹಾಕಬಲ್ಲವು.

ಎರಡು ಗುಂಪುಗಳ ನಡುವಣ ಚರ್ಚೆಯನ್ನು ಯಾವ ಗುಂಪಿಗೂ ಸೇರದ ಕೆಲವರಾದರೂ ಮುಕ್ತವಾಗಿ ನೋಡುತ್ತಿರುತ್ತಾರೆ; ಅಲ್ಲಿ ಪ್ರಾಮಾಣಿಕರಾದ ಕೆಲವರಿಗಾದರೂ ‘ಸತ್ಯದ ಬಲದಿಂದ ಅಸತ್ಯದ ಕೇಡು’ ಕಾಣತೊಡಗುತ್ತದೆ. ಸಾಹಿತ್ಯಲೋಕದಂತೆ ರಾಜಕೀಯ ದಲ್ಲೂ ನಿಜವಾದ ವಿಮರ್ಶೆ ಕೆಲವು ಪ್ರಾಮಾಣಿಕ ಮನಸ್ಸುಗಳನ್ನಾದರೂ ಗೆಲ್ಲಬಲ್ಲದು, ಅಲ್ಲವೆ?

ಕೊನೆ ಟಿಪ್ಪಣಿ: ವಿಮರ್ಶೆ ಮತ್ತು ಅಭಿರುಚಿ 

‘ವಿಮರ್ಶೆ ಎನ್ನುವುದು ತಲೆಮಾರುಗಳ ಅಭಿರುಚಿಯ ನಿರ್ಮಾಣ ಎಂಬ ಪ್ರಜ್ಞೆ ಇಲ್ಲವಾಗುತ್ತಿರುವುದಕ್ಕೆ ಕೀಳರಿಮೆಯ ವಿಮರ್ಶಕರು ಕೂಡ ಕಾರಣವಿರಬಹುದು’ ಎಂದರು ಲೇಖಕ ಕೇಶವ ಮಳಗಿ.

‘ಪುಸ್ತಕ ಬಿಡುಗಡೆಯ ಕಾರ್ಯಕ್ರಮಗಳು, ಮುನ್ನುಡಿಗಳು ವಿಮರ್ಶಕರಿಗೆ ತಮ್ಮ ಐಡೆಂಟಿಟಿಯ ವೇದಿಕೆಗಳಾಗಿ, ಸಾಮಾನ್ಯ ಪುಸ್ತಕಗಳನ್ನೂ ಅಟ್ಟಕ್ಕೇರಿಸುವವರು ಸಾಹಿತ್ಯಸಂಸ್ಕೃತಿಯ ಆರೋಗ್ಯವನ್ನೇ ನಾಶ ಮಾಡುತ್ತಿರುತ್ತಾರೆ’ ಎಂದು ಅವರು ರೇಗಿದರು.

ಇದರ ಜೊತೆಗೆ, ವಿಮರ್ಶೆಯ ಮೂಲತತ್ವಗಳೇ ಗೊತ್ತಿರದ ‘ವಿಮರ್ಶಕರ’ ಹಾವಳಿಯೂ ಸೇರಿಕೊಂಡಿದೆ: ನಿರ್ದೇಶಕನೊಬ್ಬ ನಾಟಕವೊಂದನ್ನು ನಟ, ನಟಿಯರಿಗೆ ಬೋಧಿಸುತ್ತಾ ‘ಈ ನಾಟಕದಲ್ಲಿರುವ ಕಾಯಿಲೆಯ  ಕೇಂದ್ರ ಪಾತ್ರ  ಬೇರೆ ಯಾರೂ ಅಲ್ಲ ಕಣ್ರೀ, ಲೇಖಕನೇ’ ಎಂದ.

ಅವನ ಮಾತನ್ನು ಆಲಿಸಿದ  ಆ ಹೊಸ ನಟ, ನಟಿಯರು ಇನ್ನು ಮುಂದೆ ‘ತುಘಲಕ್’ ನಾಟಕದ ಹುಚ್ಚು ದೊರೆ ಕಾರ್ನಾಡ್ ಎಂದೂ, ‘ಶರಪಂಜರ’ ಕಾದಂಬರಿಯ ಅಸ್ವಸ್ಥ ನಾಯಕಿ ತ್ರಿವೇಣಿಯವರೇ ಎಂದೂ ಅರ್ಥ ಮಾಡಿಕೊಂಡರೆ ಗತಿಯೇನು? ವಿಮರ್ಶೆಯ ಹೆಸರಿನ ಬಾಯಿಬಡುಕತನ ತಲೆಮಾರುಗಳ ಸಂವೇದನೆಯನ್ನೇ ನಾಶ ಮಾಡಬಲ್ಲದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.