ಶುಕ್ರವಾರ, ಫೆಬ್ರವರಿ 26, 2021
18 °C

ಶಿಲಪ್ಪದಿಗಾರಂ ಎಂಬ ಸಾಂಸ್ಕೃತಿಕ ಮಾತೃಕೆ

ಎಚ್.ಎಸ್.ಶಿವಪ್ರಕಾಶ್ Updated:

ಅಕ್ಷರ ಗಾತ್ರ : | |

ಶಿಲಪ್ಪದಿಗಾರಂ ಎಂಬ ಸಾಂಸ್ಕೃತಿಕ ಮಾತೃಕೆ

ಕ್ರಿ.ಶ. ಮೂರನೆ ಶತಮಾನದ ಸುಮಾರಿಗೆ ಚೇರನಾಡಿನ ರಾಜಕುಮಾರನಾದ ಇಳಂಗೋ ಅಡಿಗಳ್ ತಮಿಳಿನಲ್ಲಿ ರಚಿಸಿದ ಶಿಲಪ್ಪದಿಗಾರಂ ದಕ್ಷಿಣ ಭಾರತದ ಮೊಟ್ಟಮೊದಲ ಮಹಾಕಾವ್ಯ. ಗಾತ್ರದಲ್ಲಿ ರಾಮಾಯಣ, ಮಹಾಭಾರತಗಳಷ್ಟು ದೀರ್ಘವಲ್ಲದಿದ್ದರೂ ಗುಣದಲ್ಲಿ ಅವೆರಡಕ್ಕೂ ಸರಿಸಾಟಿಯಾಗಿ ನಿಲ್ಲಬಲ್ಲ ಕೃತಿ.ಹೇಗೆ ರಾಮಾಯಣ, ಮಹಾಭಾರತಗಳು ಕೇವಲ ಸಾಹಿತ್ಯ ಕೃತಿಗಳಾಗದೆ ಮುಂದಿನ ಶತಮಾನಗಳಲ್ಲಿ ಭಾರತ, ಪ್ರಾಚ್ಯ ಏಷಿಯಾಗಳಲ್ಲಿ ಸಾಂಸ್ಕೃತಿಕ ನಿರ್ಮಿತಿಗಳ ಅಡಿಪಾಯಗಳಾದವೋ ಹಾಗೆಯೇ ಶಿಲಪ್ಪದಿಗಾರಂ ಇಡೀ ತಮಿಳಗಂ ಮತ್ತು ಶ್ರಿಲಂಕಾಗಳಲ್ಲಿ ಹಲತೆರನ ಸಾಂಸ್ಕೃತಿಕ ನಿರ್ಮಿತಿಗಳ ದ್ರವ್ಯವಾಗಿ ಕೆಲಸಮಾಡಿತು.ಅದರಿಂದಲೂ ಹಲವು ಕತೆಗಳು, ಕಲೆಗಳು, ವಿಧಿ-ಆಚರಣೆಗಳು, ಕಥನಗಳು, ಕವಿತೆಗಳು, ನೃತ್ಯಗಳು, ನಾಟಕಗಳು, ಚಿಂತನಗಳು, ಸಿನಿಮಾಗಳು ಇವತ್ತಿನವರೆಗೂ ಹೊರಡುತ್ತಿವೆ. ಸದಾ ಬದಲಾಗುತ್ತಿರುವ ಕಾಲದೇಶಗಳು ತಮ್ಮ ತಮ್ಮ ಬದಲಾದ ಚಹರೆಗಳನ್ನು ಶಿಲಪ್ಪದಿಗಾರಂ ಎಂಬ ಕನ್ನಡಿಯಲ್ಲಿ ನೋಡುತ್ತಾಹೋದಂತೆ ಆ ಕನ್ನಡಿಯೂ ತಾನು ಕನ್ನಡಿಸುವ ಚಹರೆಯೊಂದಿಗೆ ಬದಲಾಗುತ್ತಾಹೋಗುತ್ತದೆ. ಶಿಲಪ್ಪದಿಗಾರಂ ಇತರ ಪ್ರಾಚೀನ ಮಹಾಕಾವ್ಯಗಳ ಜೊತೆಗೆ ಹೋಲಿಕೆಯನ್ನು ಬೇಡುತ್ತದಾದರೂ ತನ್ನದೇ ಆದ ವೈಶಿಷ್ಟ್ಯಗಳನ್ನು ಹೊಂದಿದೆ. ಅದರಲ್ಲಿ ಮುಖ್ಯವಾದದ್ದೆಂದರೆ ಈ ಕಾವ್ಯದ ಕೇಂದ್ರಪಾತ್ರ ಒಬ್ಬ ಹೆಂಗಸು.ಪ್ರಾಚೀನ ಯುಗದ  ಮಹಾಕಾವ್ಯಗಳು ಬಹುಮಟ್ಟಿಗೆ ಪುರುಷಪಾತ್ರ ಕೇಂದ್ರಿತ. ಹೋಮರನ ಗ್ರೀಕ್ ಮಹಾಕಾವ್ಯಗಳು, ವರ್ಜಿಲನ ಏನಿಡ್, ಸನಾತನ ಬ್ಯಾಬಿಲೋನಿಯಾದ ಗಿಲ್ಗೆಮಿಶ್, ಆಂಗ್ಲೋ ಸ್ಯಾಕ್ಸನ್ನ  ಬೇವೂಲ್ಫ್, ನಾರ್ಡಿಕ್ ದೇಶಗಳ ಎಡ್ಡಾಈ ಎಲ್ಲವೂ ಪುರುಷನಾಯಕರ ಸುತ್ತ ಹಣೆದ ಕತೆಗಳು.ಕ್ರಮವಾಗಿ ಸೀತೆ ಮತ್ತು ದ್ರೌಪದಿಯರನ್ನು ನಾಯಕಿಯರನ್ನಾಗಿ ರಾಮಾಯಣ ಮಹಾಭಾರತಗಳು ಹೊಂದಿದ್ದರೂ ಅಲ್ಲೂ ಪುರುಷಪಾತ್ರಗಳದೇ ಮೇಲುಗೈ. ಇದಕ್ಕೆ ಕೆಲವು ಜಾನಪದ ರಾಮಾಯಣ ಮಹಾಭಾರತಗಳು ಹೊರತು. ಉದಾಹರಣೆಗೆ ಗುಜರಾತಿನ ಭಿಲಿ ಆದಿವಾಸಿ ಜನಾಂಗದ ರಾಮಾಯಣ ಮಹಾಭಾರತಗಳಲ್ಲಿ ಸ್ತ್ರೀಪಾತ್ರಗಳಿಗೇ ಸಿಂಹಪಾಲು.ಮಹಾಕಾವ್ಯಗಳೂ ಒಂದು ಅರ್ಥದಲ್ಲಿ  ಅಪೌರುಷೇಯ. ಮಹಾಕಾವ್ಯಗಳ ಕರ್ತೃಗಳೆನ್ನಲಾದ ವ್ಯಾಸ, ವಾಲ್ಮೀಕಿ, ಹೋಮರ್, ಇಳಂಗೋ ಅಡಿಗಳ್ ಇತ್ಯಾದಿಗಳು ತಮ್ಮ ಕಾವ್ಯಗಳಿಗೆ ಆಧಾರವಾದ ಜನಪ್ರಿಯ ಕತೆಗಳ ಹಲವು ರೂಪಗಳನ್ನು ಒಂದುಗೂಡಿಸಿ ತಮ್ಮ ಕಾವ್ಯಗಳನ್ನು ಕಟ್ಟುತ್ತಾರೆ. ಆದರೆ ಅವುಗಳ ಪುನಾ ರಚನೆ ಅಲ್ಲಿಗೇ ಮುಗಿಯುವುದಿಲ್ಲ.ಆ ಕತೆಗಳು ಮನೋಹರವಾಗಿರುವುದರಿಂದ ಜನಮಾನಸವನ್ನು ಕಾಡುತ್ತಲೇ ಇರುತ್ತವೆ. ಅಲ್ಲದೆ ಒಳ್ಳೆಯ ಕತೆಗಳು ಲೋಕಸಂಚಾರಿಗಳು ಕೂಡಾ. ಅವು ಒಂದು ಸಂಸ್ಕೃತಿಯಿಂದ ಇನ್ನೊಂದು ಸಂಸ್ಕೃತಿಯನ್ನು ಪ್ರವೇಶಿಸಿದಾಗ ತಮ್ಮ ಒಳ-ಹೊರಗುಗಳನ್ನು ಬದಲಾಯಿಸಿಕೊಳ್ಳುತ್ತಿರುತ್ತವೆ. ರಾಮಾಯಣವು ಪ್ರಾಚ್ಯ ಏಷಿಯಾದಲ್ಲಿ ಪಡೆದುಕೊಂಡಿರುವ ಹಲವು ರೂಪಗಳಲ್ಲಿ  ಹಲವು ಪಲ್ಲಟಗಳನ್ನು ಪಡೆದುಕೊಂಡಿದೆ.ಕತೆಯ ಸ್ಥೂಲರೂಪವನ್ನು ಉಳಿಸಿಕೊಳ್ಳುತ್ತಲೇ ಬೇರೆ ಬೇರೆ ಜನಾಂಗಗಳು, ಮನಸ್ಸುಗಳು ತಮ್ಮ ಇಂಗಿತಗಳನ್ನು, ಅರ್ಥಗಳನ್ನು ಅವುಗಳಲ್ಲಿ ತುಂಬುತ್ತಾ ಹೋಗುತ್ತವೆ.  ಶಿಲಪ್ಪದಿಗಾರಂ ನ ವಿಷಯದಲ್ಲೂ ಇದು ನಿಜ.ತನ್ನ ಕಾಲಕ್ಕಾಗಲೇ ತಮಿಳುಸೀಮೆಯಲ್ಲಿ (ಅಂದರೆ ಇಂದಿನ ತಮಿಳುನಾಡು ಮತ್ತು ಕೇರಳಗಳಲ್ಲಿ) ಆವೊತ್ತಿಗಾಗಲೇ ಜನಜನಿತವಾಗಿದ್ದ ಕತೆಯನ್ನು ಇಳಂಗೋ ತನ್ನ ಕಾವ್ಯಕ್ಕೆ ಆಯ್ಕೆಮಾಡಿಕೊಂಡ. ಇಳಂಗೋ ಕಾವ್ಯಕ್ಕೆ ಪೂರ್ವಭಾವಿಯಾಗಿದ್ದ  ಕೋವಲನ್ ಕತೆಯಲ್ಲಿ   ಶಿಲಪ್ಪದಿಗಾರಂ ನ ಎಲ್ಲ ಮುಖ್ಯ ಎಳೆಗಳೂ ಇದ್ದವು.ಅದಕ್ಕೂ ಪೂರ್ವದ ಜನಪದ ಕತೆಗಳು ಇಂದಿಗೂ ಕನ್ನಗಿ ದೇವಸ್ಥಾನದ ಕೇಂದ್ರವಾದ ಕೇರಳದ ಕೊಡಂಗಲ್ಲೂರಿನ ಆಸುಪಾಸಿನಲ್ಲಿ ಮೌಖಿಕಪರಂಪರೆಗಳಲ್ಲಿ  ಇನ್ನೂ ಜೀವಂತವಾಗಿವೆ.ಈ ಪ್ರಸಿದ್ಧಕತೆಗೆ ಜೈನಮುನಿಯಾಗಿದ್ದ ಇಳಂಗೋ ಹೊಸ ತಿರುವುಗಳನ್ನು ನೀಡಿದ. ಶಿಲಪ್ಪು  ಅಂದರೆ ಕಾಲಂದುಗೆ.  ಅದಿಗಾರಂ  ಅಂದರೆ ಕತೆ. ಒಥೆಲೋ ನಾಟಕದಲ್ಲಿ  ಡೆಸ್ಡಮೋನಾಳ ಕರವಸ್ತ್ರ ಹೇಗೆ ಪ್ರಧಾನ ಪಾತ್ರವಹಿಸುತ್ತದೆಯೋ ಹಾಗೆಯೇ  ಶಿಲಪ್ಪದಿಗಾರಂ ನಲ್ಲಿ ಕಾಲಂದುಗೆಗೆ ಬಹುಮುಖ್ಯ ಜಾಗವಿದೆ.ಈ ಕತೆಯ ಎಲ್ಲ ರೂಪಗಳಲ್ಲೂ ಮೂರು ಪ್ರಧಾನ ಪಾತ್ರಗಳಿವೆ: ಕನ್ನಗಿ, ಕೋವಲನ್, ಮಾಧವಿ-ಹೆಂಡತಿ, ಗಂಡ, ಇನ್ನೊಬ್ಬಳು. ಈ ತೆರನ ತ್ರಿಕೋನಗಳು ಜಾನಪದ ಕತೆಗಳಿಂದ ಹಿಡಿದು ಇಂದಿನ ಬಾಲಿವುಡ್ ಸಿನಿಮಾಗಳವರೆಗೆ (ಪತಿ, ಪತ್ನಿ ಔರ್ ವೋ) ಜನಪ್ರಿಯವಾಗಿವೆ. ಶೂದ್ರಕನ ಸಂಸ್ಕೃತ ನಾಟಕ ಮೃಚ್ಛಕಟಿಕ, ಜಪಾನಿನ ಪ್ರಸಿದ್ಧ ಕಬೂಕಿ ನಾಟಕವಾದ  ಪ್ರೇಮಿಗಳ ಆತ್ಮಹತ್ಯೆ ಗಳಿಗೂ ಇಂಥ ಲೈಂಗಿಕತ್ರಿಕೋನಗಳು ಬುನಾದಿ.ಪ್ರಚಲಿತ ಕಾಲಂದುಗೆ ಕಥಾರೂಪಗಳ ಸಂಯೋಜನೆಯಿಂದ ಇಳಂಗೋ ನಿರ್ಮಿಸಿದ  ಶಿಲಪ್ಪದಿಗಾರಂನಲ್ಲಿ ಮೂರುನಗರಗಳ ಹೆಸರುತಳೆದ ಮೂರು ಕಾಂಡಗಳಿವೆ: ಪುಹಾರ್ ಕಾಂಡ, ಮದುರೆಕಾಂಡ, ಚೇರಕಾಂಡ. ಮೊದಲ ಭಾಗ ನಡೆಯುವುದು ಮುಂದೊಮ್ಮೆ ಜಲಪ್ರಳಯದಲ್ಲಿ  ಅಳಿದುಹೋಯಿತೆನ್ನಲಾದ ಸನಾತನ ತಮಿಳಹಂನ ಹೆಸರಾಂತ ವಾಣಿಜ್ಯಕೇಂದ್ರವಾದ ಪೂಹಾರಿನಲ್ಲಿ.ಕೊನೆಯ ಕಾಂಡ ನಡೆಯುವುದು ಇಂದಿನ ಕೇರಳದ ಕೊಡುಂಗಲ್ಲೂರಿನ ಬಳಿಯ ವಾಂಜಿನಗರದಲಿ.. ಆದರೆ ಇಡೀ ಕತೆಯ ಹುರುಳಿರುವುದು ನಡುವಿನ ಮದುರೆ ಕಾಂಡದಲ್ಲಿ. ಅದರ ಭಿತ್ತಿ ಇಂದು ತಮಿಳುನಾಡಿನ ಎರಡನೆ ಮುರ್ಕ ಮದುರೆಯಲ್ಲಿ.ಕೋವಲನ್ ಮತ್ತು ಕನ್ನಗಿ ಪೂಹಾರಿನ ಅತ್ಯಂತ ಶ್ರೀಮಂತ ವರ್ತಕರಿಬ್ಬರ ಮಕ್ಕಳು. ಅವರಿಬ್ಬರ ಮದುವೆಯಿಂದ ಕತೆ ಶುರುವು. ಮದುವೆಯಾದ ಕೆಲವೇ ದಿನಗಳಲ್ಲಿ  ಕೋವಲ ಪೂಹಾರಿನ ಅತ್ಯಂತ ಸುಂದರ ನರ್ತಕಿಯೂ ಅಭಿಸಾರಿಕೆಯೂ ಆದ ಮಾಧವಿಯ ಗೀಳಿಗೆ ಸಿಕ್ಕಿಕೊಳ್ಳುತ್ತಾನೆ. ತನ್ನ ವ್ಯಾಪಾರವನ್ನೂ ಮನೆಮಾರನ್ನೂ ಮರೆತು ಮಾಧವಿಯ ಜೊತೆ ಅನುರಕ್ತನಾಗುತ್ತಾನೆ.ಕಡಲಕರೆಯಲ್ಲಿ ಅವಳೊಂದಿಗೆ ವಿಹರಿಸುತ್ತಿರುವಾಗ ಅವಳ ಜೊತೆಗೆ ಶುರುವಾದ ಸಣ್ಣ ಜಗಳವೊಂದು ಅವರಿಬ್ಬರ ಅಗಲಿಕೆಗೆ ಕಾರಣವಾಗುತ್ತದೆ. ಮಡದಿ ಮತ್ತು ಮನೆಮಾರುಗಳ ನೆನಪಾಗಿ ಮನೆಗೆ ವಾಪಸು ಬಂದಾಗ ಅವನ ಐಶ್ವರ್ಯವೆಲ್ಲಾ ಕರಗಿಹೋಗಿರುತ್ತದೆ. ನೆಂಟರಿಷ್ಟರ ನಡುವೆ ಅವಮಾನದ ಬದುಕು ಬಾಳುವುದರ ಬದಲು ಗಂಡ-ಹೆಂಡತಿಯರಿಬ್ಬರೂ ಹೊಸದೊಂದು ಊರಿಗೆ ಹೋಗಿ ಹೊಸಬದುಕನ್ನು ಪ್ರಾರಂಭಿಸಬೇಕೆಂದು ನಿರ್ಧರಿಸುತ್ತಾರೆ.

 

ಇಲ್ಲಿಗೆ ಮುಗಿಯುತ್ತದೆ ಪೂಹಾರ್ ಕಾಂಡ.ಕಾವೇರಿ ನದಿಯ ದಂಡೆಯಗುಂಟ ಗಂಡ-ಹೆಂಡತಿಯರಿಬ್ಬರೂ ಕಾಲುನಡಿಗೆಯಲ್ಲಿ  ಮದುರೆ ಮಹಾನಗರದ ಕಡೆಗೆ ಪಯಣಿಸತೊಡಗುತ್ತಾರೆ. ಹಾದಿಯುದ್ದಕ್ಕೂ ಪ್ರಕೃತಿಯ ಹಲತೆರನ ರೂಪುರಂಗುಗಳನ್ನು, ಜನಜೀವನದ ದಿಗ್ಭ್ರಮೆಗೊಳಿಸುವ ವೈವಿಧ್ಯಗಳನ್ನು ಗಮನಿಸುತ್ತಾ ಪಯಣಿಸುತ್ತಿರುವಾಗ ಮದುರೆಯ ಕಡೆಗೆ ಹೊರಟಿರುವ ಕುವುಂದಿ ಅಡಿಗಳೆಂಬ ಜೈನ ಸನ್ಯಾಸಿನಿ ದಂಪತಿಗಳ ಜೊತೆಯಾಗುತ್ತಾರೆ.ಮೂವರೂ ಮದುರೆ ಸೇರಿದಾಗ ಕುವುಂದಿ ಅಡಿಗಳು ಮದುರೆಯ ಹೊರವಲಯದಲ್ಲಿ  ವಾಸಮಾಡಿಕೊಂಡಿರುವ ಗೋವಳಿಗರ ಆಶ್ರಯಕ್ಕೆ ಅವರಿಬ್ಬರನ್ನೂ ಒಪ್ಪಿಸಿ ತಾವು ತಮ್ಮ ಅನುಷ್ಠಾನಕ್ಕೆ ತೆರಳುತ್ತಾರೆ. ದಂಪತಿಯನ್ನು ಪ್ರೇಮದಿಂದ ಬರಮಾಡಿಕೊಂಡ ಗೋವಳಿಗರು ಅವರಿಬ್ಬರನ್ನೂ ಅತೀವ ಅಕ್ಕರೆಯಿಂದ ನೋಡಿಕೊಳ್ಳುತ್ತಾರೆ.

 

ಆದರೆ ಅವರಿಬ್ಬರೂ ಈಗ ಬರಿಗೈ. ಕನ್ನಗಿಯ ಕಾಲಂದುಗೆಗಳನ್ನು ಬಿಟ್ಟರೆ ಅವರ ಬಳಿ ಯಾವ ಸಂಪತ್ತೂ ಇಲ್ಲ. ಅವಳ ಕಾಲಂದುಗೆಗಳಲ್ಲಿ  ಒಂದನ್ನು ನಗರದಲ್ಲಿ ಮಾರಿ ಹೊಸ ವ್ಯಾಪಾರ ಶುರು ಮಾಡುವ ಆಸೆಯಿಂದ ಮದುರೆಯ ಅಕ್ಕಸಾಲಿಗರ ಬೀದಿಗೆ ಬಂದು ಅಂಡಿಯೊಂದನ್ನು ಹೊಗುತ್ತಾನೆ.ಇದು ಅವನ ಜೀವನದ ಇನ್ನೊಂದು ದುರಂತದ ಮೊದಲು. ಥೇಟು ಆ ಕಾಲಂದುಗೆಯಂತೆಯೇ ಇರುವ ರಾಣಿಯ ಕಾಲಂದುಗೆ ಕಳುವಾಗಿರುತ್ತದೆ. ಅದರ ಕಳ್ಳ ಆ ಅಕ್ಕಸಾಲಿಗನೇ. ರಾಜಭಟರು ಈಗಾಗಲೇ ಕಳ್ಳನ ತಲಾಷಿನಲ್ಲಿರುವುದರಿಂದ ತಾನೆಲ್ಲಿ ಸಿಕ್ಕಿಬೀಳುತ್ತೇನೋ ಎಂಬ ದಿಗಿಲಿನಲ್ಲಿರುತ್ತಾನೆ.ಕೋವಲ ತಂದ ಕಾಲಂದುಗೆಯನ್ನು ಕಂಡೊಡನೆ ಅವನಿಗೆ ಬಚಾವಾಗುವ ಉಪಾಯ ತೋರುತ್ತದೆ-ಈ ಕಾಲಂದಿಗೆ ರಾಣಿಯ ಕಾಲಂದುಗೆಯನ್ನು ಹೋಲುವುದರಿಂದ ಕೋವಲನೇ ಕಳ್ಳನೆಂದು ಸಾಬೀತು ಮಾಡಿಬಿಟ್ಟರೆ? ತಾನೂ ಬಚಾವಾದಹಾಗಾಯಿತು, ಕಳ್ಳನನ್ನು ಮಾಲುಸಹಿತ ಹಿಡಿದುಕೊಟ್ಟದ್ದಕ್ಕೆ ರಾಜನಿಂದ ಬಹುಮಾನವೂ ತನಗೆ ಸಿಕ್ಕಹಾಗಾಯಿತು.ಇಲ್ಲೇ ಕೂತಿರು, ಈ ಅಮೂಲ್ಯ ಕಾಲಂದುಗೆಯ ಬೆಲೆಯನ್ನು ನಿಗದಿ ಮಾಡಿಕೊಂಡು ಬರುತ್ತೇನೆಂದು ಕೋವಲನಿಗೆ ಹೇಳಿ ಸೀದಾ ರಾಜಾಸ್ಥಾನಕ್ಕೆ ಹೋಗಿ ಕಾಲಂದುಗೆ ತೋರಿಸಿದಾಗ ಕ್ಷುಧ್ರನಾದ ರಾಜ ಕಳ್ಳನನ್ನು ವಧಿಸುವಂತೆ ಆದೇಶ ನೀಡಿ ಭರನ್ನು ಕಳಿಸುತ್ತಾನೆ. ಅವರು ರಾಜಾಜ್ಞೆಯ ಮೇರೆಗೆ ಕೋವಲನನ್ನು ವಧಿಸುತ್ತಾರೆ. ಸುದ್ದಿ ಕಾಳ್ಗಿಚ್ಚಿನಂತೆ ಹರಡಿ ಹೊರವಲಯದ ಗೊಲ್ಲರ ಹಟ್ಟಿಯಲ್ಲಿರುವ ಕನ್ನಗಿಯ ಕಿವಿಯನ್ನೂ ಮುಟ್ಟುತ್ತದೆ.ಕೆರಳಿದ ಕನ್ನಗಿ ಕೆಂಡಾಮಂಡಲವಾಗಿ ರಾಜಸ್ಥಾನಕ್ಕೆ ಬಂದು ರಾಜನಿಗೆ ಸವಾಲು ಹಾಕುತ್ತಾಳೆ. ಯಾವ ತಪ್ಪಿಗಾಗಿ ನಿರಪರಾಧಿಯಾದ ಕೋವಲನನ್ನು ವಧಿಸಲಾಯಿತೆಂದು ಕೇಳುತ್ತಾಳೆ. ಕಾಲಂದುಗೆಯ ಕಳುವಿನ ಕಾರಣ ನೀಡಿದಾಗ ರಾಣಿಯ ಕಾಲಂದುಗೆಯ ಹಾಗೇ ಇರುವ ತನ್ನ ಇನ್ನೊಂದು ಅಂದುಗೆಯನ್ನು ತೋರಿಸುತ್ತಾಳೆ.

 

ರಾಣಿಯ ಅಂದುಗೆಯೊಳಗೆ ಏನನ್ನು ತುಂಬಲಾಗಿತ್ತೆಂದು ಕೇಳಿದಾಗ ಅದರಲ್ಲಿ ಪಚ್ಚೆಕಲ್ಲುಗಳಿದ್ದವೆಂದು ರಾಜ ಹೇಳುತ್ತಾನೆ. ಆದರೆ ತನ್ನ ಅಂದುಗೆಯಲ್ಲಿ ಮುತ್ತು ತುಂಬಿರುವುದನ್ನು ಸಾಬೀತು ಮಾಡಲು ಅದನ್ನು ನೆಲಕ್ಕೆಸೆದು ಒಡೆದಾಗ ಮುತ್ತು ಚೆಲ್ಲಿದ್ದನ್ನು ಕಂಡು ರಾಜ ಅದುರಿಹೋಗುತ್ತಾನೆ.ತಾನ ರಾಜಧರ್ಮಕ್ಕೆ ಚ್ಯುತಿ ತಂದೆನೆಂಬ ಅಳುಕಿನಿಂದ ಅವನೂ ಅವನ ರಾಣಿಯೂ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಕನ್ನಗಿಯ ಕೋಪ ಅಷ್ಟಕ್ಕೇ ಶಾಂತವಾಗಲೊಲ್ಲದು. ತನ್ನ ಗಂಡನ ಶವವನ್ನು ಕಂಡು ವಿಹ್ವಲಳಾದ ಆಕೆ ಕೋಪದಿಂದ ತನ್ನೊಂದು ಮೊಲೆಯನ್ನು ತರಿದು ನೆಲಕ್ಕೆಸೆದಾಗ ಬೆಂಕಿ ಹೊತ್ತಿ ಇಡೀ ಮದುರೆಯನ್ನು ಸುಡತೊಡಗುತ್ತದೆ.ಬ್ರಾಹ್ಮಣರು, ಗೋವುಗಳು ಮತ್ತು ಮಕ್ಕಳನ್ನು ಬಿಟ್ಟು ಉಳಿದೆಲ್ಲರನ್ನು ಸುಟ್ಟುಹಾಕೆಂದು ಅಗ್ನಿಗೆ ತನ್ನ ಪಾತಿವ್ರತ್ಯದ ಶಕ್ತಿಯಿಂದ ಅದೇಶಿಸುತ್ತಾಳೆ. ಮೂರು ದಿವಸ ಮೂರು ರಾತ್ರಿ ಉರಿದ ಮದುರೆ ಸರ್ವನಾಶವಾಗುತ್ತದೆ. ಕೊನೆಗೆ ಅವಳ ಪುಣ್ಯಫಲವಾಗಿ ದೇವತೆಗಳು ವಿಮಾನವೊಂದನ್ನು ಕಳಿಸುತ್ತಾರೆ. ತನ್ನ ಗಂಡನ ಶವದೊಂದಿಗೆ ದೇವಲೋಕಕ್ಕೆ ತೆರಳುತ್ತಾಳೆ. ಇಲ್ಲಿಗೆ ಮದುರೆಕಾಂಡದ ಮುಕ್ತಾಯ.ಮೂರನೆ ಭಾಗವಾದ ಚೇರಕಾಂಡದಲ್ಲಿ  ಕನ್ನಗಿ ಚೇರ ಅರಸರ ರಣದೇವತೆಯಾಗಿ ಬದಲಾದದ್ದನ್ನು ಚಿತ್ರಿಸುತ್ತದೆ. ಇದು ನಡೆಯುವುದು ವಾಂಜಿಯಲ್ಲಿ. ಈ ಜಾಗ ಇಂದಿನ ಕೊಡಂಗಲ್ಲೂರಿನ ಸಮೀಪ ಎಂದು ವಿದ್ವಾಂಸರ ಊಹೆ.ಒಟ್ಟಿನಲ್ಲಿ  ಮೊದಲ ಮತ್ತು ಮೂರನೆಯ ಭಾಗಗಳು ಪ್ರಸ್ತಾವನೆ, ಉಪಸಂಹಾರಗಳಂತಿವೆ. ಎಲ್ಲ ನಾಟಕೀಯ ಘಟನೆಗಳು ಇಡಿಕಿರುವುದು ಮಧ್ಯದ ಮದುರೆಕಾಂಡದಲ್ಲೇ. ಪೂಹಾರಿನಿಂದ ದಂಪತಿಗಳು ಕ್ರಮಿಸಿದ ಹಾದಿಯ ದೀರ್ಘ ವರ್ಣನೆಯಲ್ಲಿ ಇಳಂಗೋ ಅ ಕಾಲದ ತಮಿಳಹಂನ ನಿಸರ್ಗದ ಎಲ್ಲ ವೈವಿಧ್ಯಗಳನ್ನು, ಜನಜೀವನದ ಎಲ್ಲ ಪ್ರಕಾರಗಳನ್ನು ನಮಗೆ ಪರಿಚುಸುತ್ತಾನೆ.ಮಹಾಕಾವ್ಯಗಳ ಹಿರಿಮೆಯಿರುವುದು ಅವುಗಳ ವಿವರಗಳ ಸಮಗ್ರತೆಯಲ್ಲಿ. ಆ ಕಾಲದ ಆಚಾರ ವಿಚಾರಗಳ ಬಗ್ಗೆ, ಕಲೆ-ಸಂಸ್ಕೃತಿಗಳ ಬಗ್ಗೆ, ಧಾರ್ಮಿಕ ಪಂಥಗಳ ಬಗ್ಗೆ, ಜನರ ನೋವು-ನಲಿವುಗಳ ಬಗ್ಗೆ ಲೆಕ್ಕವಿರದಷ್ಟು ಅಮೂಲ್ಯಮಾಹಿತಿಗಳನ್ನು  `ಶಿಲಪ್ಪದಿಗಾರಂ~ ನೀಡುತ್ತದೆ.ಪ್ರಾಚೀನ ಭಾರತೀಯ ಸಮಾಜದಲ್ಲಿ  ಅದರಲ್ಲೂ ತಮಿಳಹಂನಲ್ಲಿ-ಹಾಸುಹೊಕ್ಕಾಗಿದ್ದ ಸ್ತ್ರೀ ಪಾವಿತ್ರ್ಯ `ಶಿಲಪ್ಪದಿಗಾರಂ~ನ ಸಾರ. ಪುರಾತನ ದ್ರಾವಿಡ ಸಮಾಜದಲ್ಲಿ ಪಾವಿತ್ರ್ಯವನ್ನು  ಕಾರ್ಪು , ಅಣಂಗು  ಎಂಬ ಎರಡು ಶಬ್ದಗಳಲ್ಲಿ  ನಿರ್ದೇಶಿಸುತ್ತಿದ್ದರು. ಅದನ್ನು ಅವರು ಕಂಡುಕೊಂಡಿದ್ದು ರಾಜತ್ವ ಮತ್ತು ಸ್ತ್ರೀತ್ವಗಳಲ್ಲಿ.. ಇದಕ್ಕನುಗುಣವಾಗಿ ತಮಿಳು ಸಂಗಂ ಕಾಲದ ಸಂಸ್ಕೃತಿಯಲ್ಲಿ `ಪುರಂ~  (ಹೊರಗು) ಮತ್ತು  `ಅಹಂ~  (ಒಳಗು)ಎಂಬೆರೆಡು ಕಾವ್ಯಪ್ರಕಾರಗಳು ಮೂಡಿದವು.ಪೌರುಷಪ್ರಧಾನವಾದ ಆ ಸಮಾಜದಲ್ಲಿ ಗಂಡಿನ ಸಾರ್ಥಕತೆ ಸಮರ: ಹೆಣ್ಣಿನ ಸಾರ್ಥಕತೆ ಕೌಮಾರ‌್ಯ ಮತ್ತು ಪಾತಿವ್ರತ್ಯ. ಇಡೀ ಸಂಸ್ಕೃತಿಗೆ ಆರಾಧ್ಯವಾಗಿದ್ದ ಪಾತಿವ್ರತ್ಯದ ಸ್ಥಾನ ವಿರೋಧಾಭಾಸಭರಿತವಾಗಿತ್ತು. ಹೆಣ್ಣು ತನ್ನ ಗಂಡನ ಬಗೆಗಿನ ನಿಷ್ಟೆಯಿಂದ ಅಪಾರ ಶಕ್ತಿವಂತಳಾಗುತ್ತಾಳೆ; ಅವಳು ಮುನಿದರೆ ಅವಳ ಶಕ್ತಿ ಲೋಕವಿನಾಶಕ. ಆದರೆ ಈ ಶಕ್ತಿಯನ್ನು ಗಳಿಸಿಕೊಳ್ಳಲು ಅವಳು ತನ್ನೆಲ್ಲವನ್ನೂ ನೀಗಬೇಕು.ಕನ್ನಗಿ ಈ ತೆರನ ಪಾತ್ರ. ಮದುವೆಯಾದೊಡನೆ ಗಂಡ ಇನ್ನೊಬ್ಬ ಹೆಂಗಸಿನ ಬಳಿಗೆ ಹೋಗುತ್ತಾನೆ. ಕನ್ನಗಿ ಉಸಿರು ಹೊಯ್ಯುವುದಿಲ್ಲ. ವನು ಮದುರೆಗೆ ಹೊರಟಾಗ ನೆರಳಾಗಿ ಅವನನ್ನನುಸರಿಸುತ್ತಾಳೆ. ಅವಳು ಪ್ರತಿಭಟಿಸುವುದಿಲ್ಲ. ಆದರೆ ಗಂಡನಿಗೆ ಅನ್ಯಾಯವಾದಾಗ ಸಿಡಿಲಚೆಂಡಾಗುತ್ತಾಳೆ. ಹೀಗಾಗಿ ಅವಳ ಸೌಮ್ಯ ಮತ್ತು ರೌದ್ರರೂಪಗಳೆರಡೂ ಪತಿಯ ಸೇವೆಗೆ ಮೀಸಲು. ಮುಂದೆ ಚೇರರು ಅವಳನ್ನು ರಣದೇವತೆಯಾಗಿ ಆರಾಧಿಸುವ ಮೂಲಕ ಅವಳ ಅಪಾರ ಸ್ತ್ರೀಶಕ್ತಿಯನ್ನು ಪುರುಷಮೌಲ್ಯಗಳ ಸಂವಧರ್ನೆಗಾಗಿ ಬಳಸುತ್ತಾರೆ.ಜೈನ ಧರ್ಮೀಯನಾದರೂ ಇಳಂಗೋ ತನ್ನ ಕಾವ್ಯವನ್ನು ಜೈನಮತಪರವಾಗಿ ಮಾಡಿಲ್ಲ. ಸರ್ವಧರ್ಮಸಮಾನತೆಯ ದೃಷ್ಟಿಕೋನದ ಆತ ತನ್ನ ಯುಗದ ಎಲ್ಲ ವಿವರಗಳನ್ನು ಹೃದ್ಯವಾಗಿ ತರುತ್ತಾನೆ. ಆದರೆ ಕತೆಯ ಮುಖ್ಯ ಘಟ್ಟದಲ್ಲಿ  ಜೈನರ ಲೋಕದೃಷ್ಟಿ ಕೆಲಸ ಮಾಡಿದೆ. ಇಹದ ಬದುಕಿನ ಎಲ್ಲ ಸಾಧ್ಯತೆಗಳನ್ನು ಹಿಡಿದಿಟ್ಟೂ ಕೊನೆಗೆ ಅದರ ನಶ್ವರತೆಗೇ ಒತ್ತು ಕೊಡುತ್ತಾನೆ. ಪೂರ್ವಜನ್ಮದ ಪಾಪಗಳ ಫಲವಾಗಿ ಕೋವಲನಿಗೆ ಹೀಗಾಯಿತೆಂದು ಕುವುಂದಿಅಡಿಗಳು ಹೇಳುತ್ತಾರೆ.ಭಾರತೀಯ ಸಂಸ್ಕೃತಿಯಲ್ಲಿ ದುರಂತಕಥನಗಳ ಅಭಾವವಿದೆಯೆನ್ನುವರಿಗೆ  ಶಿಲಪ್ಪದಿಗಾರಂ  ಒಂದು ಅಪವಾದ. ಕೋವಲನ್-ಕನ್ನಗಿಯರ ವ್ಯಕ್ತಿಗತ ದುರಂತದ ಜೊತೆಗೆ ಇಳಂಗೊ ಒಂದು ಸಂಸ್ಕೃತಿಯ ಪತನವನ್ನು ಚಿತ್ರಿಸುತ್ತಿದ್ದಾನೆ. ಕೋವಲನನ್ನು ವಂಚಿಸುವ ಅಕ್ಕಸಾಲಿಗ, ಅವನಿಗೆ ಸಾವನ್ನು ವಿಧಿಸುವ ಪಾಂಡ್ಯರಾಜ ನ್ಯಾಯ-ಧರ್ಮಗಳ ಅವನತಿಯ ನಿದರ್ಶನಗಳು.ಹೋಮರನ  `ಇಲಿಯಡ್~  ಟ್ರೋಜನ್ನರ ಪತನವನ್ನು ಹೇಳುವಂತೆ ಇಳಂಗೋನ ಕಾವ್ಯ ರಕ್ತಸಿಕ್ತವಾದ ಹಿಂಸಾಮೂಲವಾದ ಪುರಾತನ ಸಂಸ್ಕೃತಿಯ ಪತನವನ್ನು ಚಿತ್ರಿಸಿ ಅದರ ಮುಂದಿನ ಮಾರ್ಪಾಟಿನತ್ತ ಬೆರಳುಮಾಡುತ್ತದೆ. ತಮಿಳಹಂನ ಪ್ರಾಚೀನ ವೀರಯುಗ ಮತ್ತು ಆ ನಂತರ ತಮಿಳುನಾಡಿನಲ್ಲಿ  ಉದಿಸಿ ಭಾರತವ್ಯಾಪಿಯಾಗಿ ಹರಡಿದ ಭಕ್ತಿಯುಗಗಳ ನಡುವಿನ ಹೊರಳುದಾರಿಯನ್ನು ಸಂಕೀರ್ಣವಾಗಿ, ಸಮಗ್ರವಾಗಿ ಹಿಡಿದಿಡುವುದರ ಕಾರಣ  `ಶಿಲಪ್ಪದಿಗಾರಂ~  ಕೇವಲ ಸಾಹಿತ್ಯಿಕ ಕೃತಿಯಾಗುಳಿಯದೆ ಒಂದು ಸಾಂಸ್ಕೃತಿಕ ಮಾತೃಕೆಯೂ ಆಗಿದೆ.ಆದರೆ ಮುಂದಿನ ಪೀಳಿಗೆಯವರು ಅದನ್ನು ಅದೆಷ್ಟು ಸ್ಥೂಲವಾಗಿ ಗ್ರಹಿಸುತ್ತಾರೆಂಬುದಕ್ಕೆ ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ  ಒಂದು ಉದಾಹರಣೆ ನೀಡಬಹುದು. ಮು.ಕರುಣಾನಿಧಿ ಅವರು ಮುಖ್ಯಮಂತ್ರಿಯಾದಾಗ ದ್ರಾವಿಡ ಸಂಸ್ಕೃತಿಯ ಸಂಕೇತವೆನ್ನಲಾದ ಕನ್ನಗಿಯ ಶಿಲೆಯನ್ನು ಚೆನ್ನೈನ ಮರೀನಾ ಬೀಚಿನಲ್ಲಿ ಸ್ಥಾಪಿಸಿದರು.ಆಮೇಲೆ ಅಧಿಕಾರಕ್ಕೆ ಬಂದ ಕುಮಾರಿ ಜಯಲಲಿತಾ ಅವರಿಗೆ ಜೋಯಿಸರೊಬ್ಬರು ಆ ಶಿಲೆ ಚೆನ್ನೈನ ವಾಸ್ತುವಿಗೆ ಭಂಗ ತರುವುದರಿಂದ ಅದಿರುವವರೆಗೆ ಜಯಲಲಿತಾ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಕುಮಾರಿ ಜಯಲಲಿತಾ ಕನ್ನಗಿಯ ಶಿಲೆಯನ್ನು ತೆಗಿಸಿಬಿಟ್ಟರು. ಕರುಣಾನಿಧಿ ಮತ್ತೆ ಅಧಿಕಾರಕ್ಕೆ ಬಂದಾಗ ಆ ಶಿಲೆಯನ್ನು ಮರುಸ್ಥಾಪಿಸಿದರು.(ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in)

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.