ಗುರುವಾರ , ಮಾರ್ಚ್ 4, 2021
29 °C

ಷೇರುಪೇಟೆಯಲ್ಲಿ ಕ್ಷಿಪ್ರಗತಿಯ ಏರಿಳಿತ

ಕೆ. ಜಿ. ಕೃಪಾಲ್ Updated:

ಅಕ್ಷರ ಗಾತ್ರ : | |

ಷೇರುಪೇಟೆಯಲ್ಲಿ ಕ್ಷಿಪ್ರಗತಿಯ ಏರಿಳಿತ

ಷೇರುಪೇಟೆ ವಹಿವಾಟು ಕ್ಷಿಪ್ರಗತಿಯಲ್ಲಿ ಏರಿಳಿತಗಳನ್ನು ಪ್ರದರ್ಶಿಸುತ್ತಿದೆ.  ಒಂದೇ ವಾರದಲ್ಲಿ ಪೇಟೆಯ ಬಂಡವಾಳ ಮೌಲ್ಯ ನವೆಂಬರ್ 29 ರಂದು ₹ 147 ಲಕ್ಷ ಕೋಟಿ ಇತ್ತು. ಡಿಸೆಂಬರ್‌ 6 ರಂದು  ₹143 ಲಕ್ಷ ಕೋಟಿಗೆ ಇಳಿಕೆ ಕಂಡಿತು. ಅಲ್ಲಿಂದ ಕೇವಲ ಎರಡೇ ದಿನಗಳಲ್ಲಿ, ಅಂದರೆ ಡಿ.8 ರಂದು ಶುಕ್ರವಾರ  ₹ 146 ಲಕ್ಷ ಕೋಟಿಗೆ ಪುಟಿದೆದ್ದಿತು. ಇಷ್ಟು ತ್ವರಿತ ಗತಿಯ ಇಳಿಕೆ ಮತ್ತು ಅದಕ್ಕಿಂತ ತೀವ್ರಗತಿಯ ಏರಿಕೆ ದಾಖಲಾಗುತ್ತಿದೆ.

ಸಂವೇದಿ ಸೂಚ್ಯಂಕ ನವೆಂಬರ್ 15 ರ ಸಮಯದಲ್ಲಿ 32,760 ರ ಸಮೀಪವಿದ್ದರೆ ನವೆಂಬರ್ 27 ರಂದು 33,725 ಕ್ಕೆ ಏರಿಕೆ ಕಂಡಿತ್ತು. ಡಿಸೆಂಬರ್ 6 ರಂದು 32,220 ಕ್ಕೆ ಕುಸಿದು ಡಿಸೆಂಬರ್ 8 ರಂದು ದಿನದ ಮಧ್ಯಂತರದಲ್ಲಿ 33,285 ಕ್ಕೆ ಪುಟಿದೆದ್ದಿರುವುದು ದೀರ್ಘಕಾಲಿನ ಹೂಡಿಕೆ ಎಂಬುದಕ್ಕೆ ಅಪವಾದವಾಗಿದೆ. ಈ ವಾರದ ಆರಂಭಿಕ ದಿನಗಳಲ್ಲಿ ತೀವ್ರತರ ಕುಸಿತ ಪ್ರದರ್ಶಿಸಿ  ನಂತರ ದಿಢೀರ್ ಏರಿಕೆಯನ್ನು (ಸುಮಾರು 652 ಅಂಶ) ಪ್ರದರ್ಶಿಸಿರುವುದು ಪೇಟೆಯ ಚಲನೆಯ ವೇಗಕ್ಕೆ ಹಿಡಿದ ಕನ್ನಡಿಯಾಗಿದೆ.

ಇಂತಹ ರಭಸದ ಏರಿಳಿತಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ ಕಂಪನಿಗಳಲ್ಲಿ ಅಗ್ರಮಾನ್ಯ ವಲಯದ ಕಂಪನಿಗಳು ಹೆಚ್ಚು  ಪ್ರಭಾವಿಯಾಗಿದ್ದವು. ಇವುಗಳಲ್ಲಿ ಗೇಲ್ ಇಂಡಿಯಾ ಪ್ರಮುಖವಾಗಿದೆ. ಈ ಕಂಪನಿಯ ಷೇರಿನ ಬೆಲೆಯು ₹ 451 ರಿಂದ ₹500 ಕ್ಕೆ ಏರಿಕೆ ಕಂಡು ಅಲ್ಲಿಂದ ₹ 480 ರ ಸಮೀಪಕ್ಕೆ ಕುಸಿದಿದೆ. ನವೆಂಬರ್ 17 ರ ಸಮಯದಲ್ಲಿ ₹441 ರ ಸಮೀಪದಲ್ಲಿದ್ದು ಅಲ್ಲಿಂದ ₹472 ರ ಸಮೀಪಕ್ಕೆ 24 ರಂದು ಜಿಗಿದು ಮತ್ತೆ ಒಂದೇ ವಾರದಲ್ಲಿ ₹455 ಕ್ಕೆ ಇಳಿಕೆ ಕಂಡಿತು. ಇಂತಹ ಭಾರಿ ಪ್ರಮಾಣದ ಏರಿಳಿತಗಳು ತ್ವರಿತವಾಗಿ ಹಣಮಾಡುವ ಪ್ರಯತ್ನವಾಗಿದೆ.

ವಿಸ್ಮಯಕಾರಿ ರೀತಿಯ ಏರಿಕೆಯನ್ನು ಪ್ರದರ್ಶಿಸಿದ ದಿಗ್ಗಜ ಕಂಪನಿ ಎಂದರೆ ಮಾರುತಿ ಸುಜುಕಿಯಾಗಿದೆ. ಈ ಕಂಪನಿಯ ಷೇರಿನ ಬೆಲೆಯು ಒಂದೇ ತಿಂಗಳಲ್ಲಿ ₹8,083 ರ ಸಮೀಪದಿಂದ ₹9, 119 ರವರೆಗೂ ಏರಿಕೆ ಪ್ರದರ್ಶಿಸಿದೆ. ಈ ವಾರದಲ್ಲಿ ₹8,455 ರಿಂದ ₹9,119 ರವರೆಗೂ ಜಿಗಿತ ಕಂಡು ಸಂವೇದಿ ಸೂಚ್ಯಂಕದ ಜಿಗಿತದಲ್ಲಿ ಪ್ರಮುಖ ಪಾತ್ರವಹಿಸಿದೆ.

ಷೇರು ಮರುಖರೀದಿ ಯೋಜನೆಯ ಕಾರಣ ಇನ್ಫೊಸಿಸ್‌  ಷೇರಿನ ಬೆಲೆ ₹969  ರ ಸಮೀಪದಿಂದ ₹1,006 ರವರೆಗೂ ಏರಿಕೆ ಕಂಡಿದೆ. ಬಯೋಕಾನ್‌ ಕಂಪನಿಯ ಔಷಧಿಗೆ ಅಮೆರಿಕದ ಎಫ್‌ಡಿಎ ಸಮ್ಮತಿಸಿದೆ ಎಂಬ ಕಾರಣಕ್ಕಾಗಿ ಷೇರಿನ ಬೆಲೆ ₹483 ರ ಸಮೀಪದಿಂದ ₹525 ರವರೆಗೂ ಏರಿಕೆ ಕಂಡಿದೆ.  ಪ್ರತಿ ಷೇರಿಗೆ ಒಂದರಂತೆ ಬೋನಸ್ ಷೇರು ವಿತರಿಸಲಿರುವ ಕಂಪನಿ ಬಾಲಕೃಷ್ಣ ಇಂಡಸ್ಟ್ರೀಸ್ ₹2,098  ರಿಂದ ₹2,415 ರವರೆಗೂ ಏರಿಕೆ ಕಂಡಿದೆ. ಅದೇ ಕಾರಣಕ್ಕಾಗಿ ವಕ್ರಾಂಗಿ ಷೇರು ಸಹ ₹713 ರ ಸಮೀಪದಿಂದ ₹758 ರವರೆಗೂ ಒಂದೇ ವಾರದಲ್ಲಿ ಏರಿಕೆ ಕಂಡಿದೆ.

ಬಹಳ ದಿನಗಳಿಂದ ನಿರ್ಲಕ್ಷಕ್ಕೆ ಒಳಗಾಗಿದ್ದ ಗೃಹ ಬಳಕೆ ವಲಯದ ಐಟಿಸಿ ಷೇರಿಗೆ ವಾರದ ಕೊನೆ ದಿನ ಹೆಚ್ಚಿನ ಬೇಡಿಕೆ ಉಂಟಾಗಿ ₹253 ರ ಸಮೀಪದಿಂದ ₹262 ರವರೆಗೂ ಏರಿಕೆ ಕಂಡಿತು. ಶುಕ್ರವಾರ ಸರ್ಕಾರಿ ವಲಯದ ತೈಲ ಮಾರಾಟದ ಕಂಪನಿಗಳಾದ ಭಾರತ್ ಪೆಟ್ರೋಲಿಯಂ, ಹಿಂದುಸ್ಥಾನ್ ಪೆಟ್ರೋಲಿಯಂ, ಇಂಡಿಯನ್ ಆಯಿಲ್ ಕಾರ್ಪೊರೇಷನ್‌ಗಳು ಚುರುಕಾದ ಗಮನಾರ್ಹ ಏರಿಕೆ ಪ್ರದರ್ಶಿಸಿದವು. ಇಂತಹ ರಭಸದ ಚೇತರಿಕೆ ಹಿಂದೆ ಅಡಕವಾಗಿರುವ ಎಂದರೆ ವ್ಯಾಲ್ಯೂ ಪಿಕ್. ಅಗ್ರಮಾನ್ಯ ಕಂಪೆನಿಗಳಾದಿಯಾಗಿ ಷೇರಿನ ಬೆಲೆಗಳು ಅತಿಯಾದ ಕುಸಿತ ಕಂಡ ಕಾರಣ ಬೇಡಿಕೆ ಹೆಚ್ಚಾಗಿ ಚೇತರಿಕೆ ಕಂಡಿದೆ. ಇದು ಇದೇ ರೀತಿ ಮುಂದುವರೆಯುತ್ತದೆಂಬ ಭ್ರಮೆ ಬೇಡ. ಮುಂದಿನ ದಿನಗಳಲ್ಲಿ ಅಮೆರಿಕದ ಫೆಡ್ ನಿಂದ ಬಡ್ಡಿದರ ಪರಿಶೀಲನೆ, ಗುಜರಾತ್ ನ ಎರಡನೇ ಹಂತದ ಮತದಾನ  ಮುಂತಾದವುಗಳು ತಮ್ಮ ಪ್ರಭಾವ ಬೀರುವುವು.

ಎಲ್ಲಕ್ಕೂ ಹೆಚ್ಚಾಗಿ ಸ್ಥಳೀಯರ ಹಣ ಹೂಡಿಕೆ ಮಾಡಲು ಪರ್ಯಾಯವಾದ ಯೋಜನೆಗಳು ಲಾಭದಾಯಿಕವಾಗಿರದೆ ಇರುವುದರೊಂದಿಗೆ ಪೇಟೆಗೆ ಪಾರ್ಟಿಸಿಪೇಟರಿ ನೋಟ್ ಮೂಲಕ ಹರಿದುಬರುತ್ತಿರುವ ಹಣ ಅಕ್ಟೋಬರ್ ಅಂತ್ಯದಲ್ಲಿ  ₹1.31 ಲಕ್ಷ ಕೋಟಿಗೆ ಏರಿಕೆಯಾಗಿದ್ದು, ಈ ಹಣವು ಪೇಟೆಯಲ್ಲಿ ವ್ಯಾಲ್ಯೂ ಪಿಕ್ ಅವಕಾಶಕ್ಕೆ ಕಾದಿದ್ದು ಇಂತಹ ಅವಕಾಶದ ಸದುಪಯೋಗ ಪಡಿಸಿಕೊಂಡಿದೆ.

ಪ್ರಮುಖ ಅಂಶಗಳಾದ ಜಿಡಿಪಿ, ಹಣದುಬ್ಬರ, ಆರ್‌ಬಿಐ ನಿಯಮಗಳಲ್ಲದೆ ಕಂಪನಿಗಳು ಪ್ರಕಟಿಸುವ ತಮ್ಮ ಸಾಧನೆಯ ಅಂಶಗಳು ಸಹ ತಾತ್ಕಾಲಿಕ ಪ್ರಭಾವಿಯಾಗಿರುವುದು ಹೆಚ್ಚಿನ ಏರಿಳಿತಗಳಿಗೆ ಕಾರಣವಾಗಿದೆ.

ಮತ್ತೊಂದು ಅಚ್ಚರಿಯ ಸಂಗತಿ ಎಂದರೆ ವಾರದ ಆರಂಭದ ದಿನ ವಹಿವಾಟಿನ ಗಾತ್ರವು ₹4.04 ಲಕ್ಷ ಕೋಟಿಯಾಗಿದ್ದರೆ, ಮಂಗಳವಾರ ₹5.41 ಲಕ್ಷ ಕೋಟಿಗೆ ಏರಿದೆ.  ಬುಧವಾರ ಸಂವೇದಿ ಸೂಚ್ಯಂಕ 205 ಅಂಶಗಳ ಕುಸಿತ ಕಂಡಿದ್ದು ಅಂದು ವಹಿವಾಟಿನ ಗಾತ್ರ ₹7.10 ಲಕ್ಷ ಕೋಟಿಯಾಗಿದೆ.  ಗುರುವಾರ ಸೂಚ್ಯಂಕ 352 ಅಂಶಗಳ ಏರಿಕೆ ಕಂಡ ದಿನ ಅಂದು ವಹಿವಾಟಿನ ಗಾತ್ರ ಗಣನೀಯವಾದ ಏರಿಕೆ ಕಂಡಿದೆ. ₹11.94 ಲಕ್ಷ ಕೋಟಿಗೆ ತಲುಪಿದೆ. ಆದರೆ ಶುಕ್ರವಾರ 301 ಅಂಶಗಳ ಏರಿಕೆ ಕಂಡರೂ ಪೇಟೆಯು ಏರಿಕೆ ದಿಸೆಯಲ್ಲಿ ಇದ್ದ ಕಾರಣಕ್ಕೆ ₹4.06 ಲಕ್ಷ ಕೋಟಿ ಮಾತ್ರ ವಹಿವಾಟಾಗಿದೆ. ಇದು ಅಚ್ಚರಿಗೆ ಎಡೆಮಾಡಿಕೊಡುತ್ತದೆ.

ಹೊಸ ಷೇರು:  ಅಸ್ಟ್ರಾನ್ ಪೇಪರ್ ಆ್ಯಂಡ್ ಬೋರ್ಡ್ ಮಿಲ್ಸ್ ಲಿಮಿಟೆಡ್ ಕಂಪನಿ ಡಿಸೆಂಬರ್ 15 ರಿಂದ 20 ರವರೆಗೂ 1.40 ಕೋಟಿ ಷೇರುಗಳನ್ನು ಆರಂಭಿಕ ಷೇರು ವಿತರಣೆ ಮೂಲಕ ಪೇಟೆ ಪ್ರವೇಶಿಸಲಿದೆ. ವಿತರಣೆ ಬೆಲೆ ಮತ್ತು ಅರ್ಜಿ ಸಲ್ಲಿಸಬೇಕಾದ ಷೇರುಗಳ ಗಾತ್ರವನ್ನು 5 ದಿನ ಮುಂಚಿತವಾಗಿ ಪ್ರಕಟಿಸಲಿದೆ.

ಬೋನಸ್ ಷೇರು:  ಕ್ಯಾಸ್ಟ್ರಾಲ್ ಇಂಡಿಯಾ ವಿತರಿಸಲಿರುವ 1:1 ರ ಅನುಪಾತದ ಬೋನಸ್ ಷೇರಿಗೆ ಈ ತಿಂಗಳ 23 ನಿಗದಿತ ದಿನ.

ವಾರದ ವಿಶೇಷ

ಷೇರುಪೇಟೆಯ ಸೂಚ್ಯಂಕಗಳು ದಿಗಂತಕ್ಕೆ ತಲುಪಿರುವ  ಸಂದರ್ಭದ ಉಪಯೋಗಪಡಿಸಿಕೊಳ್ಳಲು ಕಾರ್ಪೊರೇಟ್ ದಿಗ್ಗಜರು ಆರಂಭಿಕ ಷೇರು ವಿತರಣೆ  ಪ್ರಯತ್ನಿಸುತ್ತಿದ್ದಾರೆ.  ಈ ರೀತಿಯ ಬಂಡವಾಳ ಹಂಚಿಕೆಯು ಸ್ವಾಗತಾರ್ಹವಾದರೂ, ಅದಕ್ಕೆ ಲಗತ್ತಿಸುವ ಹೆಚ್ಚುವರಿ ಪ್ರೀಮಿಯಂ ಮಾತ್ರ ಅಸಹಜಮಯವಾಗಿದೆ.  ಇತ್ತೀಚಿಗೆ ಐಪಿಒ ಮೂಲಕ ಪೇಟೆ ಪ್ರವೇಶಿಸಿದ ಅನೇಕ ಕಂಪನಿಗಳು ತಮ್ಮ ವಿತರಣೆ ಬೆಲೆಗಿಂತ ಭಾರಿ ಕಡಿಮೆ ಬೆಲೆಯಲ್ಲಿ ವಹಿವಾಟಾಗುತ್ತಿರುವುದು ಗಮನಾರ್ಹ. ಈ ಪರಿಸ್ಥಿತಿಯ ಲಾಭ ಪಡಿಯಲು ಖಾಸಗಿ ಕಂಪನಿಗಳ ಜೊತೆಗೆ ಸರ್ಕಾರಿ ವಲಯದ ಕಂಪನಿಗಳು ಸಹ ಪ್ರಯತ್ನಿಸುತ್ತಿವೆ. ಹಿಂದಿನಂತೆ ಎಲ್ಲಾ ಐಪಿಒ ಗಳು ಉತ್ತಮ, ಷೇರು ಅಲಾಟ್ ಆದರೆ ಉತ್ತಮ ಲಾಭ ಬರುತ್ತದೆ ಎಂಬ ಪರಿಸ್ಥಿತಿ ಈಗ ಇಲ್ಲ.   ಕಂಪನಿಗಳಾದ ಇಂಡಿಯನ್ ಎನರ್ಜಿ ಎಕ್ಸ್ ಚೇಂಜ್, ಜನರಲ್ ಇನ್ಶುರೆನ್ಸ್‌ ಕಾರ್ಪೊರೇಷನ್,  ನ್ಯೂ ಇಂಡಿಯಾ ಅಶುರೆನ್ಸ್ ಕಂಪನಿ,  ಖಾದಿಮ್ ಇಂಡಿಯಾ, ಮ್ಯಾಟ್ರಿಮೋನಿ ಡಾಟ್ ಕಾಮ್ ಮುಂತಾದ ಕಂಪನಿಗಳು  ಹೂಡಿಕೆದಾರರಿಗೆ ಲಾಭಗಳಿಸಿ ಕೊಡಲು ವಿಫಲವಾಗಿವೆ. ಇದಕ್ಕೆ ಕಾರಣ ಅವುಗಳು ವಿತರಿಸಿದ ಅತಿ ಹೆಚ್ಚಿನ ಪ್ರೀಮಿಯಂಗಳೇ ಕಾರಣವಾಗಿದೆ.   ಅಪೆಕ್ಸ್ ಫ್ರೋಝನ್ ಫುಡ್,  ಮಾಸ್ ಫೈನಾನ್ಷಿಯಲ್ ಸರ್ವಿಸಸ್,  ಗಾಡ್ರೇಜ್ ಅಗ್ರೋವೆಟ್, ಎಚ್ ಡಿ ಎಫ್ ಸಿ ಲೈಫ್ ನಂತಹ ಕಂಪನಿಗಳು   ವಿತರಿಸಿದ ಬೆಲೆಗಿಂತ ಹೆಚ್ಚು ಬೆಲೆಯಲ್ಲಿ ವಹಿವಾಟಾಗಿ ಹೂಡಿಕೆದಾರರ ಅಭಿಮಾನಕ್ಕೆ ಪಾತ್ರವಾಗಿವೆ.

ಎಲ್ಲವನ್ನು ವಾಣಿಜ್ಯದ ದೃಷ್ಟಿಯಿಂದ ಕಾಣುವ ಈಗಿನ ದಿನಗಳಲ್ಲಿ ಸಣ್ಣ ಹೂಡಿಕೆದಾರರು ಸಹ ಹೂಡಿಕೆ ಮಾಡುವಾಗ ಉತ್ತಮ ಅಗ್ರಮಾನ್ಯ ಕಂಪನಿಗಳನ್ನು ಆಯ್ಕೆ ಮಾಡಿಕೊಂಡು ನಂತರ ಯಾವುದೇ ಭಾವನಾತ್ಮಕ ನಂಟು ಹೊಂದದೆ, ಕೇವಲ ಅವು ಗಳಿಸಿಕೊಡುವ ಲಾಭದತ್ತ ಮಾತ್ರ ತಮ್ಮ ಗಮನ ಕೇಂದ್ರೀಕರಿಸಿದ್ದಲ್ಲಿ ಫಲಿತಾಂಶ ಅತ್ಯುತ್ತಮವಾಗಲು ಸಾಧ್ಯ. ಯಾವ ವಿಶ್ಲೇಷಣೆಗಳೂ ಶಾಶ್ವತವಲ್ಲ, ಅವು ಅಂದಿನ, ಆ ಕ್ಷಣಕ್ಕೆ ಮಾತ್ರ ಸೀಮಿತ, ಕಾರಣ ಬದಲಾವಣೆಯ ವೇಗ ಹೆಚ್ಚು.

(98863 13380, ಸಂಜೆ 4.30 ರನಂತರ)

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.