ಮಂಗಳವಾರ, ಮೇ 24, 2022
21 °C

ಸಂತೃಪ್ತಿಯ ನೆಲೆ

ಗುರುರಾಜ ಕರ್ಜಗಿ Updated:

ಅಕ್ಷರ ಗಾತ್ರ : | |

ಭಗವಂತ ಜೀವರಾಶಿಗಳನ್ನು ಮಾಡುತ್ತ ನಡೆದ. ಸಣ್ಣಸಣ್ಣ ಜೀವಿಗಳಿಂದ ಹಿಡಿದು ಬೃಹತ್ ಪ್ರಾಣಿಗಳನ್ನು ಮಾಡಿದ. ಯಾವುದೂ ಪರಿಪೂರ್ಣ ಸೃಷ್ಟಿ ಎನ್ನಿಸಲಿಲ್ಲ. ಕೊನೆಗೆ ತುಂಬ ಯೋಚನೆ ಮಾಡಿ ಮನುಷ್ಯನನ್ನು ಮಾಡಿದನಂತೆ. ಅತ್ಯಂತ ಸುಂದರವಾದ, ಸಮತೋಲನವನ್ನು ಹೊಂದಿದ ದೇಹವನ್ನು ಮಾಡಿ ಅದರಲ್ಲಿ ತೀಕ್ಷ್ಣವಾದ ಬುದ್ಧಿಶಕ್ತಿಯನ್ನು ತುಂಬಿದ. ದೇಹ ಮತ್ತು ಬುದ್ಧಿಗಳನ್ನು ಹೊಂದಿದ ಮನುಷ್ಯ ದೇವರ ಅತ್ಯಂತ ಶ್ರೇಷ್ಠ ಸೃಷ್ಟಿ ಎನ್ನಿಸಿತು. ಭಗವಂತನಿಗೂ ತೃಪ್ತಿಯಾಯಿತು. ಅದಕ್ಕೆ ಆತ ವಿಶೇಷ ಸೃಷ್ಟಿಯಾದ ಮನುಷ್ಯನಿಗೆ ತನ್ನ ಮತ್ತೊಂದು ಅತ್ಯಂತ ಪ್ರೀತಿಯ ಕೊಡುಗೆಯಾದ ಸಂತೃಪ್ತಿಯನ್ನು ಕಾಣಿಕೆಯಾಗಿ ನೀಡಿದ.

ಶತಮಾನಗಳು ಕಳೆದಂತೆ ಮನುಷ್ಯ ತನ್ನ ಬುದ್ಧಿಯನ್ನು ಹೆಚ್ಚು ಹೆಚ್ಚು ಬಳಸಿ ಪರಿಸರವನ್ನು ದುರುಪಯೋಗಪಡಿಸಿಕೊಳ್ಳತೊಡಗಿದ. ದೇಹವನ್ನು ದುರುಪಯೋಗಿಸಿದ. ಇಡೀ ಸೃಷ್ಟಿ ತನಗಾಗಿಯೇ ನಿರ್ಮಾಣವಾಗಿದೆ ಎನ್ನುವಂತೆ ಅಹಂಕಾರದಿಂದ ಎಲ್ಲ ವಸ್ತುಗಳ ಮೇಲೆ, ಪ್ರಾಣಿಗಳ ಮೇಲೆ ದರ್ಪ ಚಲಾಯಿಸತೊಡಗಿದ.

ಅವನ ಈ ವರ್ತನೆ ಭಗವಂತನಿಗೆ ಸರಿ ಬರಲಿಲ್ಲ. ಅತ ಇತರ ದೇವತೆಗಳ ಸಭೆ ಕರೆದು ಈ ವಿಷಯ ಚರ್ಚಿಸಿದ. ಸಂತೃಪ್ತಿಯಂತಹ ವಿಶೇಷವಾದ ಕಾಣಿಕೆಯನ್ನು ಕೊಟ್ಟಿದ್ದರೂ ಮನುಷ್ಯನೇಕೆ ಇಷ್ಟು ದುರಹಂಕಾರಿಯಾದ, ಮತ್ತು ಇದಕ್ಕೆ ಏನು ಪರಿಹಾರ ಎಂದು ಎಲ್ಲರೂ ಚಿಂತಿಸಿದರು. ಆಗ ಒಬ್ಬ ದೇವತೆ ಹೇಳಿದ,  ಭಗವಂತ, ನಿನ್ನ ಸೃಷ್ಟಿಯಲ್ಲಿಯೇ ಅಪೂರ್ವವಾದ ಮನುಷ್ಯನಿಗೆ ನೀನು ನೀಡಿದ ಸಂತೃಪ್ತಿಯ ಬೆಲೆ ಅರ್ಥವಾಗಿಲ್ಲ. ಆದ್ದರಿಂದ ಅದನ್ನು ಕಿತ್ತುಕೊಂಡು ಬಿಡು. ಈ ದುರಹಂಕಾರಿಗೆ ಸಂತೃಪ್ತಿ ಯಾಕೆ ಬೇಕು? ಹೇಗಿದ್ದರೂ ಅದು ನೀನು ನೀಡಿದ ಕಾಣಿಕೆಯೇ ತಾನೇ? 

ಸಾಧ್ಯವಿಲ್ಲ, ನಾನಾಗಿಯೇ ಕೊಟ್ಟ ಕಾಣಿಕೆಯನ್ನು ಕಿತ್ತುಕೊಳ್ಳುವುದು ಸರಿಯಲ್ಲ  ಎಂದ ಭಗವಂತ.

ಹಾಗಾದರೆ ಅದನ್ನು ಎಲ್ಲಿಯಾದರೂ ಮುಚ್ಚಿ ಇಟ್ಟು ಬಿಡು. ಅವನಿಗೆ ಅದರ ಬೆಲೆ ಅರ್ಥವಾದಾಗ ತಾನೇ ಕಷ್ಟಪಟ್ಟು ಹುಡುಕಿಕೊಳ್ಳಲಿ  ಎಂದು ಮತ್ತೊಬ್ಬ ದೇವತೆ ಹೇಳಿದ.

ಹೌದು, ಹೌದು, ಮನುಷ್ಯನಿಗೆ ಸಂತೃಪ್ತಿಯ ಬೆಲೆ ಅರ್ಥವಾಗಲಿ. ಆಗ ಅವನೇ ಅದರ ಬೆನ್ನತ್ತಿ ಬರುತ್ತಾನೆ, ಹುಡುಕಿಕೊಳ್ಳುತ್ತಾನೆ. ಆದರೆ ಪರಿಶ್ರಮಪಡದೇ ಅದು ದೊರಕಬಾರದು. ಹಾಗೆ ಅವನಿಗೆ ಸುಲಭವಾಗಿ ಸಿಗದಂತೆ ಬಚ್ಚಿಡಬೇಕು  ಇನ್ನೊಬ್ಬ ದೇವತೆ ನುಡಿದ. 

ಸಮುದ್ರದ ತಳದಲ್ಲಿ ಅದನ್ನು ಬಚ್ಚಿಡಬೇಕು  ಒಂದು ಸಲಹೆ ಬಂತು. 

ಇಲ್ಲ, ಮನುಷ್ಯ ತನ್ನ ಬುದ್ಧಿಯಿಂದ ಯಂತ್ರ ಮಾಡಿ ಸಮುದ್ರದ ತಳಕ್ಕೆ ಸುಲಭವಾಗಿ ಹೋಗಬಲ್ಲ  ಎಂದ ಭಗವಂತ.

 ಹಾಗಾದರೆ ಭೂಮಿಯ ಮಧ್ಯದಲ್ಲಿ ಸೇರಿಸಿಬಿಡೋಣ  ಮತ್ತೊಂದು ದೇವತೆಯ ಅಭಿಪ್ರಾಯ.  ಬೇಡ ಮನುಷ್ಯ ಭೂಮಿ ಕೊರೆಯುವ ಯಂತ್ರದಿಂದ ಭೂಗರ್ಭವನ್ನೇ ಭೇದಿಸಬಲ್ಲ  ಎಂದ ದೇವರು. ಯಾವ ಅಭಿಪ್ರಾಯವೂ ಸರಿ ಎನ್ನಿಸಲಿಲ್ಲ.

ಕ್ಷಣಕಾಲದ ನಂತರ ಭಗವಂತನ ಮುಖದ ಮೇಲೆ ನಗು ಮೂಡಿತು. ಆತ ಹೇಳಿದ,  ಈ ಸಂತೃಪ್ತಿಯನ್ನು ಬೇರೆಲ್ಲಿಯೂ ಮುಚ್ಚಿಡುವುದು ಬೇಡ. ಅದನ್ನು ಅವನ ಹೃದಯದಲ್ಲೇ ಇಟ್ಟುಬಿಡುತ್ತೇನೆ. ಪ್ರಪಂಚವನ್ನು ಗೆಲ್ಲುವ ಅಹಂಕಾರದಿಂದ ಹೊರಟ ಮನುಷ್ಯ ಎಲ್ಲೆಡೆಯೂ ಶೋಧಮಾಡುತ್ತಾನೆ. ಆದರೆ ತನ್ನ ಹೃದಯವನ್ನೇ ಹೊಕ್ಕು ನೋಡುವುದಿಲ್ಲ. ಯಾವಾಗ ಮನುಷ್ಯ ಪ್ರಯತ್ನಪಟ್ಟು ತನ್ನ ಹೃದಯವನ್ನೇ ಪರೀಕ್ಷಿಕೊಳ್ಳುತ್ತಾನೋ ಆಗ ಮಾತ್ರ ಆತ ಸಂತೃಪ್ತಿಯನ್ನು ಪಡೆಯುತ್ತಾನೆ .

ಅಂದಿನಿಂದ ಸಂತೃಪ್ತಿ ನಮ್ಮ ಹೃದಯದಲ್ಲೇ ಉಳಿದಿದೆ. ಅದು ಅಲ್ಲಿದೆ ಎಂಬುದು ಬಹಳ ಜನರಿಗೆ ಗೊತ್ತಿಲ್ಲ. ಅದಕ್ಕೇ ನಮ್ಮ ಭಾರತೀಯ ಸಂಸ್ಕೃತಿ ಒತ್ತಿ ಒತ್ತಿ ಹೇಳುತ್ತದೆ, ನಮ್ಮ ಸಂತೃಪ್ತಿಯ, ಸಂತೋಷದ ಮೂಲ ನಮ್ಮಲ್ಲಿಯೇ ಇದೆ, ಹೊರಗಿಲ್ಲ. ಆದರೆ ಸಂತೋಷವನ್ನು ನಮ್ಮ ಹೊರಗಡೆಯೇ, ನಮ್ಮ ಬಂಗಲೆಗಳಲ್ಲಿ, ಕಾರುಗಳಲ್ಲಿ, ಬಂಗಾರದ ಆಭರಣಗಳಲ್ಲಿ, ದೈಹಿಕವಾದ ಭೋಗಗಳಲ್ಲಿ  ಹುಡುಕುತ್ತ ಹುಡುಕುತ್ತ, ನಮ್ಮ ಹೃದಯದಲ್ಲೇ ಅವಿತುಕುಳಿತಿರುವ ಸಂತೃಪ್ತಿಗೆ ಪರಕೀಯರಾಗಿ ಕೊರಗುತ್ತೇವೆ. ನಾವು ಎಂದು ಅಂತರ್ಮುಖಿಯಾಗಿ ಹೃದಯವನ್ನು ಹೊಕ್ಕು ನೋಡಿ ಇಡೀ ಪ್ರಪಂಚಕ್ಕೆ ಅವಶ್ಯವಾದ ಸಂತೃಪ್ತಿಯನ್ನು ಪಡೆಯುವುದು?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.