ಮಂಗಳವಾರ, ಏಪ್ರಿಲ್ 20, 2021
27 °C

ಸಂವಿಧಾನದ 370ನೇ ಕಲಂ ಪ್ರಸ್ತುತತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನರೇಂದ್ರ ಮೋದಿ ಸರ್ಕಾರ ಒಂದು ವಾರ ಪೂರೈಸಿದೆ. ಆರಂಭವೇನೊ ಚೆನ್ನಾಗಿಯೇ ಆಗಿದೆ. ಕೇಂದ್ರದಲ್ಲಿ ಮತ್ತೊಮ್ಮೆ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬರಬಹುದೆನ್ನುವ ನಿರೀಕ್ಷೆ­ಗಳನ್ನು ಹುಸಿಗೊಳಿಸಿ ಬಿಜೆಪಿ ಸ್ಪಷ್ಟ ಬಹುಮತ ಪಡೆದಿದೆ. ಇದು ಮೋದಿ ಪರಿಶ್ರಮದ ಫಲ. ಈ ಕಾರಣಕ್ಕೆ ಅವರೀಗ ಪಕ್ಷದ ಪರಮೋಚ್ಚ ನಾಯಕ. ಚುನಾವಣೆಗೆ ಮೊದಲೇ ಮೋದಿ ಪ್ರಭಾವಿ ನಾಯಕರಾಗಿದ್ದರು. ಪಕ್ಷ ಅವರ ಹಿಂದೆ ಮೌನವಾಗಿ ಹೆಜ್ಜೆ ಹಾಕಿತ್ತು. ಇನ್ನು ಚುನಾವಣೆ ಗೆಲ್ಲಿಸಿಕೊಟ್ಟ ಮೇಲಂತೂ ಅವರ ಪ್ರಭಾವ ಇನ್ನು ಹೆಚ್ಚಿದೆ. ಈಗ ಅವರೊಬ್ಬ ವಿರೋಧಿಗಳೇ ಇಲ್ಲದ ಪ್ರಶ್ನಾತೀತ ನಾಯಕ.ಬಿಜೆಪಿಯೊಳಗೆ ಪ್ರಧಾನಿ ಇಷ್ಟದಂತೆ ಎಲ್ಲವೂ ನಡೆಯುತ್ತಿದೆ. ಸಂಪುಟದಲ್ಲಿ ಯಾರಿರಬೇಕು? ಯಾರಿಗೆ ಯಾವ ಖಾತೆ ಕೊಡಬೇಕು? ಸರ್ಕಾರ ಹೇಗಿರಬೇಕು? ಈ  ಎಲ್ಲ ವಿಷಯದಲ್ಲೂ ಅವ­ರದೇ ತೀರ್ಮಾನ. ಅವರು ಹೇಳದೆ ಹುಲ್ಲು­ಕಡ್ಡಿಯೂ ಅಲುಗಾಡುವುದಿಲ್ಲ. ಪಕ್ಷದ  ಹಿರಿಯ ನಾಯಕರಾದ ಎಲ್‌.ಕೆ. ಅಡ್ವಾಣಿ ಮತ್ತು ಮುರಳಿ ಮನೋಹರ ಜೋಷಿ ಅವರಿಗೆ ಬಂದಿರುವ ಸ್ಥಿತಿಯೇ ಈ ಮಾತಿಗೆ ಸಾಕ್ಷಿ.

ಹಿಂದಿನ ಯುಪಿಎ ಸರ್ಕಾರದ ಅವಾಂತರ ಕಂಡು ರೋಸಿದವರಿಗೆ ‘ಮೋದಿ ಸ್ಟೈಲ್‌’ ಹಿಡಿಸ­ಬಹುದು. ಕೆಲವರಿಗೆ ಅದರಲ್ಲಿ ಸರ್ವಾಧಿಕಾರಿ ನೆರಳೂ ಕಾಣಬಹುದು. ಇಲ್ಲಿ ಒಂದು ಮಾತು ಹೇಳಲೇಬೇಕು. ಮೋದಿ ತಾವೊಬ್ಬ ಸಮರ್ಥ ನಾಯಕರೆಂದು ನಿರೂಪಿಸಲು ಹೊರಟಿದ್ದಾರೆ. ತಮ್ಮ ಸಂಪುಟದ ಸಹೋದ್ಯೋಗಿಗಳ ಬಾಯಿ ಬಂದ್ ಮಾಡಿದ್ದಾರೆ. ಪಕ್ಷದ ಮುಖಂಡರೂ ಇದಕ್ಕೆ ಹೊರತಲ್ಲ.ಬಿಜೆಪಿ ವಕ್ತಾರರೂ ಮಾಧ್ಯಮಗಳ ಮುಂದೆ ವರಿಷ್ಠರು ಹೇಳಿಕೊಟ್ಟ ಬಾಯಿ ಪಾಠ ಒಪ್ಪಿಸಬೇಕು. ಅದನ್ನು ಮೀರಿ ಹೋಗುವಂತಿಲ್ಲ.

ಇಷ್ಟಾದರೂ ಪ್ರಧಾನಿ ಕಚೇರಿ ಸಚಿವ ಜಿತೇಂದರ್‌ ಸಿಂಗ್‌ ಸಂವಿಧಾನದ 370ನೇ ಕಲಂ ಪ್ರಸ್ತುತತೆ ಕುರಿತು ಚರ್ಚೆ ಆಗಬೇಕೆಂದು ಹೇಳಿದ್ದಾರೆ. ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಎರಡೇ ದಿನದಲ್ಲಿ ಜಮ್ಮು– ಕಾಶ್ಮೀರದ ವಿಶೇಷ ಸ್ಥಾನಮಾನದ ವಿಷಯ ಪ್ರಸ್ತಾಪವಾಗಿದೆ. ಇದು ಆಕಸ್ಮಿಕವಲ್ಲ. ಸಹಜವಾಗಿ ಮಾಡಿರುವ ಪ್ರಸ್ತಾಪ. ಬಿಜೆಪಿ ಚುನಾವಣಾ ಪ್ರಣಾಳಿಕೆಯೇ ಅಯೋಧ್ಯೆ ರಾಮಮಂದಿರ ವಿವಾದ; 370ನೇ ಕಲಂ, ಸಮಾನ ನಾಗರಿಕ ನೀತಿ ಸಂಹಿತೆ ಮುಂತಾದ ವಿವಾದಾತ್ಮಕ ಸಂಗತಿಗಳನ್ನು ಉಲ್ಲೇಖಿಸಿದೆ. ಸದ್ಯಕಲ್ಲದಿದ್ದರೂ ಮುಂದೆ ಇವು ಗದ್ದಲಕ್ಕೆ ಕಾರಣವಾಗಲಿವೆ.ಬಾಬ್ರಿ ಮಸೀದಿ-ರಾಮಮಂದಿರ ವಿವಾದ ನ್ಯಾಯಾಲಯದ ಮುಂದಿದೆ. ಈ ಹಿನ್ನೆಲೆಯಲ್ಲಿ ಸಮಸ್ಯೆಗೆ ಸಂವಿಧಾನದ ಚೌಕಟ್ಟಿನೊಳಗೆ ಪರಿ­ಹಾರ ಕಂಡುಕೊಳ್ಳುವುದಾಗಿ ಬಿಜೆಪಿ ಹೇಳಿದೆ. 370ನೇ ಕಲಂ ಕುರಿತು ಚರ್ಚೆ ಆರಂಭ­ವಾ­ಗಿ­ರುವುದು ಇದೇ ಮೊದಲಲ್ಲ. ಆ ರಾಜ್ಯ ಭಾರ­ತದ ಜತೆ ವಿಲೀನವಾದ ಕಾಲದಿಂದ ನಡೆ­ಯು­ತ್ತಿದೆ. ಜಮ್ಮು, ಕಾಶ್ಮೀರದಲ್ಲಿ ಡಿಸೆಂಬರ್‌ ತಿಂಗ­ಳಲ್ಲಿ ಮೋದಿ ಪ್ರಚಾರ ಭಾಷಣ ಮಾಡಿ­ದಾಗ ‘ಸಂವಿ­ಧಾನದ ಕಲಂ 370ರಿಂದ ಜನರಿಗೆ ಎಷ್ಟು ಲಾಭ­ವಾಗಿದೆ ಎಂಬ ಬಗ್ಗೆ ಚರ್ಚೆ ಆಗಲಿ’ ಎಂದಿದ್ದರು.ಜಮ್ಮು, ಕಾಶ್ಮೀರ ಭಾರತದ ಒಕ್ಕೂಟದಲ್ಲಿ ವಿಲೀನವಾಗಿದ್ದರ ಹಿಂದೆ ಇತಿಹಾಸವಿದೆ. ಕಣಿವೆ ರಾಜ್ಯದ ಮೇಲೆ 1947ರಲ್ಲಿ ಪಾಕಿಸ್ತಾನ ಪ್ರಚೋ­ದಿತ ದಾಳಿ ನಡೆಯುತ್ತದೆ. ದಾಳಿಗೆ ಹೆದರಿದ ಕೊನೆಯ ರಾಜ ಹರಿಸಿಂಗ್‌ ಓಡಿಬಂದು ಭಾರತದ ಬೆಂಬಲ ಕೇಳುತ್ತಾರೆ. ನೆರವು ಕೊಡಲು ಸರ್ಕಾರ ಷರತ್ತು ಹಾಕುತ್ತದೆ. ಅದೇ ವಿಲೀನದ ಷರತ್ತು. ಈ ಹಿನ್ನೆಲೆಯಲ್ಲಿ ಸಂವಿ­ಧಾನದ 370ನೇ ಕಲಂ ಹುಟ್ಟು ಪಡೆಯುತ್ತದೆ. ಅದರಂತೆ ಕಾಶ್ಮೀರದ ರಕ್ಷಣೆ, ವಿದೇಶಾಂಗ ವ್ಯವಹಾರ, ಸಂಪರ್ಕ ಕ್ಷೇತ್ರಗಳು ಕೇಂದ್ರ ಸರ್ಕಾ­ರದ ಅಧೀನಕ್ಕೆ ಒಳಪಡುತ್ತದೆ. ಉಳಿದೆಲ್ಲ ಅಧಿ­ಕಾರ ರಾಜ್ಯದಲ್ಲಿ ಉಳಿಯುತ್ತದೆ. ಉಭಯ ಪಕ್ಷಗಳು ನಿಯಮ ಮೀರಿ ಆಚೀಚೆ ಸರಿಯು­ವಂತಿಲ್ಲ. ಇದರಲ್ಲಿ ಏನೇ ಬದಲಾವಣೆ ಆಗ­ಬೇ­ಕಾದರೂ ಸಂವಿಧಾನ ಸಮಿತಿಯಲ್ಲಿ ಚರ್ಚೆ ಆಗ­ಬೇಕು. ಈಗ ಸಂವಿಧಾನ ಸಮಿತಿ ಇಲ್ಲದಿರು­ವು­ದ­ರಿಂದ ಸಂಸತ್ತು, ರಾಜ್ಯ ವಿಧಾನಸಭೆಯದೇ ಪರ­ಮಾಧಿಕಾರ. ಬಹುತೇಕರಿಗೆ ಇದು ತಿಳಿದಂತಿಲ್ಲ.ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದರೆ 370ನೇ ಕಲಂ ಕೆದಕಬಹುದೆಂಬ ಸತ್ಯ ಎಲ್ಲರಿಗೂ ಗೊತ್ತಿತ್ತು. ಇಷ್ಟು ಬೇಗ ಅದು ಪ್ರಸ್ತಾಪವಾಗಬಹುದೆಂದು ಯಾರೂ ಭಾವಿಸಿ­ರಲಿಲ್ಲ. ಅದಕ್ಕೆ ಕಾರಣ ಜಮ್ಮು– ಕಾಶ್ಮೀರದ ವಿಶೇಷ ಸ್ಥಾನಮಾನಕ್ಕಿಂತಲೂ ದೊಡ್ಡದಾದ ಸವಾಲುಗಳು ಮೋದಿ ಅವರ ಮುಂದಿವೆ. ಹಳಿ ತಪ್ಪಿರುವ ಹಣಕಾಸು ವ್ಯವಸ್ಥೆಯನ್ನು ಸರಿದಾರಿಗೆ ತರಬೇಕಿದೆ. ಹಣದುಬ್ಬರ– ಬೆಲೆ ಏರಿಕೆಯನ್ನು ಹದ್ದುಬಸ್ತಿನಲ್ಲಿ ಇಡಬೇಕಿದೆ. ಏರಿರುವ ಅಗತ್ಯ ವಸ್ತುಗಳ ಬೆಲೆಯನ್ನು ಇಳಿಸಲಾಗದಿದ್ದರೂ ನಿಯಂತ್ರಣದಲ್ಲಿ ಇಡಬಹುದೆಂಬ ಭರವಸೆ ಬಹುತೇಕರಿಗಿದೆ.‘ದೆಹಲಿ ಗದ್ದುಗೆ’ ಹಿಡಿಯಲು ಮೋದಿ ಜನರ ಮುಂದೆ ಪಠಿಸಿದ ‘ಅಭಿವೃದ್ಧಿ ಮಂತ್ರ’ವನ್ನು ಕಾರ್ಯರೂಪಕ್ಕೆ ಇಳಿಸಬೇಕಿದೆ. ಸಾಂಪ್ರದಾ­ಯಿಕ ಎದುರಾಳಿ ಪಾಕಿಸ್ತಾನವೂ ಸೇರಿದಂತೆ ಎಲ್ಲ ನೆರೆಯ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧ ಹೊಂದಲು ಮುಂದಾಗಬೇಕಿದೆ. ಇದೇ ಆಶೋತ್ತರಗಳನ್ನು ಹೊತ್ತು ‘ಸಾರ್ಕ್’ ರಾಷ್ಟ್ರಗಳ ಮುಖಂಡರು ಮೋದಿ ಅವರ ಪ್ರಮಾಣ ವಚನ ಸಮಾರಂಭಕ್ಕೆ ಬಂದಿದ್ದು. ಅಷ್ಟೇ ಅಲ್ಲ, ಬಿಜೆಪಿ ಗೆಲುವಿಗೆ ಹೆಗಲು ಕೊಟ್ಟ ಯುವ ಪೀಳಿಗೆಯ ನಿರೀಕ್ಷೆಗಳಿಗೂ ಸ್ಪಂದಿಸಬೇಕಿದೆ. ಮೋದಿ ಅವರಿಗೆ ತಮ್ಮ ಜವಾಬ್ದಾರಿ ಅರಿವಿದೆ. ಇದರಿಂದಾಗಿ ಸದ್ಯಕ್ಕೆ ಅವರು ಈ ವಿಷಯಗಳ ಬಗ್ಗೆ ತಲೆ ಕೆಡಿಸಿಕೊಳ್ಳುವಂತೆ ಕಾಣುವುದಿಲ್ಲ.ಮೋದಿ ಅವರಿಗೆ ಇಷ್ಟವಿದೆಯೋ ಇಲ್ಲವೋ ಸಂವಿಧಾನದ 370ನೇ ಕಲಂ ಕುರಿತು ಪರ– ವಿರುದ್ಧದ ಚರ್ಚೆ ಆರಂಭವಾಗಿದೆ. ಜಿತೇಂದರ್‌ ಸಿಂಗ್‌ ಮಾಡಿದ ಪ್ರಸ್ತಾಪಕ್ಕೆ ಜಮ್ಮು– ಕಾಶ್ಮೀ-ರದ ಮುಖ್ಯಮಂತ್ರಿ ಒಮರ್‌ ಕಟುವಾಗಿ ಪ್ರತಿಕ್ರಿಯಿಸಿ­ದ್ದಾರೆ.ಸಂಘ ಪರಿವಾರ ಜಿತೇಂದರ್‌ ಬೆನ್ನಿಗೆ ನಿಂತಿದೆ. ಪಂಜಾಬ್‌ ಮುಖ್ಯ­ಮಂತ್ರಿ ಪ್ರಕಾಶ್‌ ಸಿಂಗ್ ಬಾದಲ್‌ ‘ಕಣಿವೆ ರಾಜ್ಯಕ್ಕೆ ನೀಡಿ­ರುವ ವಿಶೇಷ ಸ್ವಾಯತ್ತತೆ ಕುರಿತು ದುಡುಕಿನ ನಿರ್ಧಾರ ಬೇಡ’ ಎಂದು ಮಿತ್ರ ಪಕ್ಷಕ್ಕೆ ಕಿವಿ­ಮಾತು ಹೇಳಿ­ದ್ದಾರೆ. ಎಲ್ಲರಿಗಿಂತ ಕಾಶ್ಮೀರದ ಮಹಾ­ರಾಜ ಹರಿಸಿಂಗ್ ಅವರ ಪುತ್ರ ಡಾ. ಕರಣ್‌ ಸಿಂಗ್‌ ಸಮಯೋಚಿತವಾಗಿ ಮಾತನಾಡಿದ್ದಾರೆ.‘ಜಮ್ಮು– ಕಾಶ್ಮೀರ ವಿವಾದವನ್ನು ಸಮಗ್ರತೆ, ಸಂವಿಧಾನದ ಚೌಕಟ್ಟು, ಕಾನೂನು, ರಾಜ­ಕೀಯ ನೆಲೆಯಲ್ಲಿ ನೋಡಬೇಕಾಗಿದೆ. ಇದಕ್ಕೆ ಅಂತರ­ರಾಷ್ಟ್ರೀಯ ಆಯಾಮ ಇದೆ. ಹೊಸ ಸರ್ಕಾರ ದುಡು­ಕದೆ ತಾಳ್ಮೆ ವಹಿಸಬೇಕು. ಸಂಘರ್ಷದ ಹಾದಿ ತುಳಿಯದೆ ಸಹಕಾರದಿಂದ 370ನೇ ಕಲಂ ಬಗ್ಗೆ ಚಿಂತಿಸಬೇಕಿದೆ’ ಎಂದು ಸಲಹೆ ನೀಡಿದ್ದಾರೆ.ಕರಣ್‌ಸಿಂಗ್‌ ಒಳ್ಳೆಯ ಸಲಹೆ ನೀಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚರ್ಚೆಗೆ ಮಹತ್ವ­ವಿದೆ. ಯಾವುದೇ ವಿಷಯದ ಮೇಲಾದರೂ ಚರ್ಚೆಗಳು ನಡೆಯಬೇಕು. ಅದಕ್ಕೆ ಜಮ್ಮು– ಕಾಶ್ಮೀರದ ವಿಶೇಷ ಸ್ಥಾನಮಾನ ಹೊರತಾಗ­ಬಾರದು. ಸಂವಿಧಾನದ 370ನೇ ಕಲಂ ಅಸ್ತಿತ್ವಕ್ಕೆ ಬಂದು 6 ದಶಕಗಳು ಕಳೆದಿವೆ. ಈ ಅವಧಿಯಲ್ಲಿ ಜಾಗತಿಕವಾಗಿ ಎಷ್ಟೊಂದು ಬದಲಾವಣೆ ಆಗಿದೆ. ನಾವು ಹೊರ ಜಗತ್ತಿಗೆ ತೆರೆದುಕೊಳ್ಳುವುದಿಲ್ಲ ಎನ್ನುವುದು ಸರಿಯಾದ ವಾದವಾಗಲಾರದು. ಬದಲಾವಣೆಗಳನ್ನು ಒಪ್ಪಿಕೊಳ್ಳಬೇಕು. ಆದರೆ, ಈ ಬದಲಾವಣೆ ಬಿರುಗಾಳಿಗೆ ಸಿಕ್ಕಿ ಅಲ್ಲಿನ ಜನರ ಬದುಕು– ಸಂಸ್ಕೃತಿ ಅಸ್ತಿತ್ವ ಕಳೆದುಕೊಳ್ಳದಂತೆ ಎಚ್ಚರಿಕೆ ವಹಿಸಬೇಕು.ಸಂವಿಧಾನದ 370ನೇ ಕಲಂ ಕುರಿತು ಚರ್ಚೆ ಆಗಲಿ ಎನ್ನುವ ಪ್ರಸ್ತಾಪ ಜಮ್ಮು– ಕಾಶ್ಮೀರದ ಜನರಿಂದಲೇ ಬರಬೇಕು. ನಮ್ಮ ಬದುಕು ಬದಲಾಗಬೇಕು. ನಮ್ಮ ರಾಜ್ಯ ಅಭಿವೃದ್ಧಿ ಹೊಂದಬೇಕು ಎಂಬ ಒತ್ತಡವನ್ನು ಸಂಬಂಧಪಟ್ಟ ಜನ ಸಮುದಾಯವೇ ಹಾಕಬೇಕು. ಪ್ರತಿಯೊ­ಬ್ಬರಿಗೂ ತಮ್ಮ ಬದುಕು, ಭವಿಷ್ಯ ರೂಪಿಸಿ­ಕೊಳ್ಳುವ ಹಕ್ಕಿದೆ. ಅದನ್ನು ಮೋದಿ ಅವರ ಸರ್ಕಾರವೂ ಅರಿಯಬೇಕು. 370ನೇ ಕಲಂ ಚರ್ಚೆ ಪ್ರಸ್ತಾಪವನ್ನು ಯಾವ ಕಾರಣಕ್ಕೂ ಜನರ ಮೇಲೆ ಹೇರಬಾರದು. ಹಾಗೆ ಮಾಡುವುದು ಪ್ರಜಾಪ್ರಭುತ್ವದ ವಿರೋಧಿ ಕ್ರಮ.

ಜಮ್ಮು– ಕಾಶ್ಮೀರ 370ನೇ ಕಲಂ ಅಸ್ತಿತ್ವದಲ್ಲಿ ಇರುವುದರಿಂದ ಅಭಿವೃದ್ಧಿ ಕಂಡಿಲ್ಲ. ಹೊರಗಿನ­ವರು ಆ ರಾಜ್ಯದಲ್ಲಿ ಆಸ್ತಿ ಖರೀದಿ­ಸಲು ಅವಕಾಶವಿಲ್ಲ. ಹೀಗಾಗಿ ಯಾರೂ ಬಂಡವಾಳ ಹೂಡಲು ಬರುತ್ತಿಲ್ಲ. ಇಡೀ ಕಣಿವೆ ಪ್ರವಾಸೋದ್ಯಮವನ್ನೇ ಅವಲಂಬಿಸಿದೆ. ಬೇರೆ ಯಾವುದೇ ಉದ್ಯಮಗಳೂ ಇಲ್ಲ. ಇದರಿಂದ ಯುವಕರಿಗೆ ಉದ್ಯೋಗ ಸಿಗುತ್ತಿಲ್ಲ. ಕೆಲವರು ದಾರಿ ತಪ್ಪಲು ಇದೂ ಕಾರಣ. ಈ ಹಿನ್ನೆಲೆಯಲ್ಲಿ ಸಂವಿಧಾನದ 370ನೇ ಕಲಂ ರದ್ದುಪಡಿಸಬೇಕು ಎಂದು ಅನೇಕರು ಪ್ರತಿಪಾದಿಸುತ್ತಿದ್ದಾರೆ.ಕಾಶ್ಮೀರದ ಜನರಲ್ಲಿ ವಿಶ್ವಾಸ ಮೂಡಿಸ­ಬೇಕಾದ ಕೇಂದ್ರ ಸರ್ಕಾರ ಕಣ್ಣು ಮುಚ್ಚಿಕೊಂಡು ಕುಳಿತಿದೆ. ರಾಜ್ಯದಲ್ಲಿ ಆರ್ಥಿಕ ಚಟುವಟಿಕೆಗೆ ಒತ್ತು ಕೊಡುವ ಯಾವುದೇ ಯೋಜನೆಗಳನ್ನು ರೂಪಿಸಿಲ್ಲ. ಖಾಸಗಿ ಸ್ವಾಮ್ಯದ ಉದ್ದಿಮೆಗಳಿಗೆ ಕಾದು ಕೂರುವ ಬದಲು ಸರ್ಕಾರಿ ಸ್ವಾಮ್ಯದ ಉದ್ದಿ­ಮೆಗಳನ್ನು ತೆರೆಯಬ­ಹು­ದಿತ್ತು. ದಿಕ್ಕು  ತಪ್ಪಿರುವ ಯುವಕರನ್ನು ಕಿವಿ ಹಿಂಡಿ ಸರಿದಾರಿಗೆ ತರಬಹುದಿತ್ತು. ಹಿಂದಿನ ಯುಪಿಎ ಸರ್ಕಾರ ಕೆಲವು ವಿದ್ಯುತ್‌ ಉತ್ಪಾ­ದನಾ ಘಟಕಗಳ ಸ್ಥಾಪನೆಗೆ ಪ್ರಯತ್ನ ಆರಂಭಿ­ಸಿತ್ತು. ಈ ರೀತಿಯ ಪ್ರಯತ್ನಗಳು ಮುಂದುವರಿ­ಯಬೇಕು ಎಂದು ಹೇಳುವವರೂ ಇದ್ದಾರೆ.ಕಾಶ್ಮೀರದ ಎಲ್ಲರೂ ಪಾಕ್‌ ಪರವಾಗಿದ್ದಾ­ರೆಂದು ಅನುಮಾನದಿಂದ ನೋಡಬೇಕಾಗಿಲ್ಲ. ಅಲ್ಲಿನ ಎಲ್ಲರೂ ಪಾಕಿಸ್ತಾನದ ಪರವಾಗಿಲ್ಲ. ನೆರೆಯ ದೇಶದ ಪರ ವಕಾಲತ್ತು ವಹಿಸುವವರ ಪ್ರಭಾವ ಕಡಿಮೆ ಆಗುತ್ತಿದೆ. ಪ್ರತಿಯೊಬ್ಬರಿಗೂ ಭವಿಷ್ಯ ಮುಖ್ಯವಾಗುತ್ತಿದೆ. ಸಂವಿಧಾನದ 370ನೇ ಕಲಂ; ವಿಶೇಷ ಸ್ವಾಯತ್ತತೆಯಂಥ ವಿವಾದಾತ್ಮಕ  ಸಂಗತಿಗಳನ್ನು ಬದುಕು ಮೀರಿ ನಿಲ್ಲುತ್ತದೆ.ಬಿಜೆಪಿ, ಸಂಘ ಪರಿವಾರದ ನಾಯಕರು ಸಂವಿಧಾನದ 370ನೇ ಕಲಂ ಪ್ರಸ್ತುತತೆ ಕುರಿತು ಚರ್ಚೆ ಆಗಬೇಕು ಎಂದು ಹೇಳುತ್ತಿರುವುದರ ಹಿಂದೆ ಪ್ರಾಮಾಣಿಕ ಕಾಳಜಿ ಇದೆಯೇ ಅಥವಾ ರಾಜಕೀಯ ವಾಸನೆ ಇದೆಯೇ ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ಲೋಕಸಭೆ ಚುನಾವಣೆಯಲ್ಲಿ ಜಮ್ಮು ಪ್ರಾಂತ್ಯದಲ್ಲಿ ಮೂರು ಸ್ಥಾನಗಳನ್ನು ಬಿಜೆಪಿ ಗೆದ್ದಿದೆ. 2008ರ ವಿಧಾನಸಭೆ ಚುನಾ­ವಣೆಯಲ್ಲಿ 11 ಕ್ಷೇತ್ರಗಳಲ್ಲಿ ಜಯಗಳಿಸಿದೆ.ಮುಂದಿನ ವರ್ಷದ ಆರಂಭದಲ್ಲಿ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ 44 ಸ್ಥಾನಗಳನ್ನು ಗೆಲ್ಲಲು ಬಿಜೆಪಿ ತಂತ್ರ ರೂಪಿಸುತ್ತಿದೆ. ಈ ರಾಜ್ಯದಲ್ಲಿರುವ ವಿಧಾನಸಭೆ ಕ್ಷೇತ್ರಗಳು 87. ಈ ಕಾರಣಕ್ಕೆ ಜಿತೇಂದರ್‌ ಸಿಂಗ್‌ ಸಂವಿಧಾನದ 370 ನೇ ಕಲಂ ವಿವಾದ ಕೆದಕಿದ್ದಾರೆ. ಚುನಾವಣೆ ಹತ್ತಿರವಾ­ದಂತೆ ಜಿತೇಂದರ್‌ ಅವರ ಜತೆ ಇನ್ನಷ್ಟು ಮುಖಂಡರು ಸೇರಿಕೊಳ್ಳಬಹುದು.ನರೇಂದ್ರ ಮೋದಿ ಸದ್ಯಕ್ಕೆ ರಾಮಮಂದಿರ, 370ನೇ ಕಲಂ ಹಾಗೂ ಸಮಾನ ನಾಗರಿಕ ಸಂಹಿತೆ ಕುರಿತು ತಲೆಕೆಡಿಸಿಕೊಳ್ಳದೆ ಇರಬ­ಹುದು. ಆದರೆ, ಸರ್ಕಾರದ ಅವಧಿ ಮುಗಿ­ಯುವ ಹಂತದಲ್ಲಿ ಈ ವಿಷಯ ಕುರಿತು ಕ್ಯಾತೆ ತೆಗೆಯಬಹುದು. ಮೋದಿ ಅವರ ತಕ್ಷಣದ ಆದ್ಯತೆ ಅರ್ಥ ವ್ಯವಸ್ಥೆಯಲ್ಲಿ ಶಿಸ್ತು ತರುವುದು; ಹಣದುಬ್ಬರ, ಬೆಲೆ ಏರಿಕೆ ನಿಯಂತ್ರಣ; ಆಮೇಲೆ ಅಭಿವೃದ್ಧಿ... ಇವು ಜನರಿಗೆ ಕೊಟ್ಟ ಭರವಸೆಗಳು.ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.