ಭಾನುವಾರ, ಆಗಸ್ಟ್ 9, 2020
21 °C

ಸಮಕಾಲೀನ ರಾಜಕಾರಣ ಮತ್ತು ಜಾತಿ ಸಮೀಕರಣ

ಆರ್. ಇಂದಿರಾ Updated:

ಅಕ್ಷರ ಗಾತ್ರ : | |

ಸಮಕಾಲೀನ ರಾಜಕಾರಣ ಮತ್ತು ಜಾತಿ ಸಮೀಕರಣ

ಕರ್ನಾಟಕದ ಸಮಕಾಲೀನ ರಾಜಕಾರಣ ತೆಗೆದುಕೊಳ್ಳುತ್ತಿರುವ ತಿರುವುಗಳು ಹಾಗೂ ಅವು ಕಳುಹಿಸುತ್ತಿರುವ ಸಂದೇಶಗಳು, ತೀರಾ ತಡ ಎನಿಸಿದರೂ ಈಗಲಾದರೂ ಜನತೆಯ ತಾಳ್ಮೆಯನ್ನು ಅಲುಗಾಡಿಸುತ್ತಿರುವಂತಿದೆ. ಅಧಿಕಾರದ ಲಾಲಸೆ ಪರಾಕಾಷ್ಟೆಯನ್ನು ತಲುಪಿದ್ದು ರಾಜ್ಯದ ಹಿತಾಸಕ್ತಿಗಳು ನೇಪಥ್ಯಕ್ಕೆ ಸರಿದಿವೆ.

 

ಬಹುತೇಕ ಜನನಾಯಕರು ತಮ್ಮ ಸಾರ್ವಜನಿಕ ಬದ್ಧತೆಯನ್ನು ಸಂಪೂರ್ಣವಾಗಿ ಮರೆತಂತಿದೆ.ರಾಜ್ಯ ಎದುರಿಸುತ್ತಿರುವ ಪ್ರಾಕೃತಿಕ, ಸಾಮಾಜಿಕ ಮತ್ತು ಆರ್ಥಿಕ ಸಂಕಷ್ಟಗಳನ್ನು ಅಲಕ್ಷಿಸಿ ಪರಸ್ಪರ ದೋಷಾರೋಪಣೆಗಳಲ್ಲಿ ತೊಡಗಿರುವ ರಾಜಕೀಯ ಬಣಗಳ ಬಗ್ಗೆ ಜನರ ಆಕ್ರೋಶ ವ್ಯಕ್ತವಾಗುತ್ತಿದೆ, ನಿಜ.ಆದರೆ ಈ ಇಡೀ ಪ್ರಕರಣ ಮತ್ತೊಂದು ಅಪಾಯಕಾರಿ ಬೆಳವಣಿಗೆಗೆ ನೇರ ಪ್ರಚೋದನೆಯನ್ನು ನೀಡುತ್ತಿದೆ. ಅದೇನೆಂದರೆ ಜಾತಿಯ ನಿಸ್ಸಂಕೋಚ ಬಳಕೆ. ಮುಂಬರುವ ದಿನಗಳಲ್ಲಿ ಕರ್ನಾಟಕ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಮೂಲ ತತ್ವಕ್ಕೆ ಸವಾಲನ್ನು ಎಸೆಯುವಂಥ ಜಾತಿ ಸಮೀಕರಣಕ್ಕೆ ಸಾಕ್ಷಿಯಾಗುವುದರಲ್ಲಿ ಸಂದೇಹವಿಲ್ಲ.ಸಮೀಕರಣ ಎಲ್ಲ ಸಮಾಜಗಳಲ್ಲೂ ರಾಜಕೀಯ ಜೀವನದ ಒಂದು ಅವಿಭಾಜ್ಯ ಅಂಗ. ವ್ಯಕ್ತಿಗಳು ತಮ್ಮ ಬದುಕಿನಲ್ಲಿ ತೆಗೆದುಕೊಳ್ಳುವ ನಿರ್ಧಾರಗಳನ್ನು ಅವರು ತಮ್ಮನ್ನು ಗುರುತಿಸಿಕೊಳ್ಳುವ ಗುಂಪುಗಳು ಪ್ರಭಾವಿಸುವಂಥ ಸ್ಥಿತಿಯನ್ನು ಸಮೀಕರಣ  ಎಂದು ಸಮಾಜಶಾಸ್ತ್ರಜ್ಞರು ಗುರುತಿಸಿದ್ದಾರೆ.ವಿಶೇಷವಾಗಿ ಚುನಾವಣಾ ರಾಜಕೀಯದಲ್ಲಿ  ಸಮೀಕರಣವನ್ನು ನಾವು ಬಹುಕಾಲದಿಂದ ಕಾಣುತ್ತಲೇ ಬಂದಿದ್ದೇವೆ. ರಾಜಕೀಯ ಸಮೀಕರಣದ ಮುಖ್ಯ ಲಕ್ಷಣವೆಂದರೆ ಒಂದು ಗುಂಪಿನೊಡನೆ ಐಕ್ಯತೆಯ ಭಾವನೆಯನ್ನು ಬೆಳೆಸಿಕೊಂಡು, ಮತ್ತಿತರ ಗುಂಪುಗಳಿಂದ ದೂರ ಸರಿಯುವುದು. ವಿರೋಧಿ ಗುಂಪನ್ನು ಟೀಕಿಸುವುದು, ಹಾಗೂ ಎಲ್ಲ ಸಮಸ್ಯೆಗಳಿಗೂ ಅವರೇ ಕಾರಣರೆಂಬಂತೆ ಬಿಂಬಿಸುವುದು ಕೂಡ ಸಮೀಕರಣದ ಒಂದು ಮುಖ.ಸಮಾಜದಲ್ಲಿ  ಅಧಿಕಾರಕ್ಕಾಗಿ ಸಂಘರ್ಷಗಳು ಹೆಚ್ಚುತ್ತಾ ಹೋದ ಹಾಗೆಲ್ಲಾ ಗುಂಪು ಸಮೀಕರಣವೂ ಗಟ್ಟಿಯಾಗುತ್ತಾ ಹೋಗುತ್ತದೆ. ಒಂದು ಕಾಲಘಟ್ಟದಲ್ಲಿ ರಾಜಕೀಯ ಕ್ಷೇತ್ರದಲ್ಲಿ  ವಿಷಯಾಧಾರಿತ ಅಥವಾ ತತ್ವಾಧಾರಿತ ಸಮೀಕರಣವನ್ನು ಕಾಣಲು ಸಾಧ್ಯವಿತ್ತಾದರೂ ಇತ್ತೀಚೆಗೆ ಸಮೀಕರಣ ಮುಖ್ಯವಾಗಿ ಅನುಕೂಲ ರಾಜಕಾರಣದ ಒಂದು ತಂತ್ರವಾಗಿ ರೂಪುಗೊಳ್ಳುತ್ತಿದೆ.ಭಾರತೀಯ ಸಮಾಜದ ಸಂದರ್ಭದಲ್ಲಿ  ಜಾತಿ  ರಾಜಕೀಯ ಸಮೀಕರಣದ ಒಂದು ಪ್ರಬಲ ಆಧಾರವಾಗಿ ಹೊರ ಹೊಮ್ಮಿದ್ದು ಏಕಕಾಲದಲ್ಲಿ  ಒಗ್ಗೂಡಿಸುವಿಕೆ  ಮತ್ತು  ಬೇರ್ಪಡಿಸುವಿಕೆಗಳೆರಡು ಪ್ರಕ್ರಿಯೆಗಳನ್ನೂ ಪ್ರಭಾವಿಸುತ್ತಿದೆ.ಬರಬರುತ್ತಾ ಜಾತಿಯ ಹೆಸರಿನಲ್ಲಿ ಅಧಿಕಾರವನ್ನು ಅರಸುವವರು ಹಾಗೂ ಜಾತಿಯನ್ನು ಮುಂದಿಟ್ಟುಕೊಂಡು ಸ್ವಜಾತಿ ನಾಯಕರಿಗೆ ಬೆಂಬಲವನ್ನು ನೀಡುವವರು-ಈ ಎರಡು ಗುಂಪುಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ.ಬಹುಕಾಲ ಒಳಗೊಳಗೇ ನಡೆಯುತ್ತಿದ್ದ ಜಾತಿಕೇಂದ್ರಿತ ಸಂಧಾನಗಳು ಇಂದು ಸಾರ್ವಜನಿಕ ವಲಯವನ್ನು ತಲುಪಿ, ಅವುಗಳಲ್ಲಿ ಭಾಗಿಯಾಗಲು ಅನೇಕರಿಗೆ ಯಾವುದೇ ಮುಜುಗರಗಳು ಇದ್ದಂತೆ ಕಾಣುತ್ತಿಲ್ಲ. ತಮ್ಮನ್ನು ಯಾವುದೋ ಒಂದು ಜಾತಿಯ ಪ್ರತಿನಿಧಿಯಂತೆ ಗುರುತಿಸಿಕೊಳ್ಳುವ ಮಾತಿರಲಿ, ಮತದಾರರಿಗೂ ಜಾತಿಯ ಅಂಕಿತವನ್ನು ನೀಡಿ, ನೇರವಾಗಿಯೇ ಜಾತಿಯ ಆಚರಣೆಗೆ ಪ್ರಚೋದನೆಯನ್ನು ನೀಡುತ್ತಿದ್ದಾರೆ ನಮ್ಮ ಜನನಾಯಕರನೇಕರು.ಇಂಥ ಪ್ರವೃತ್ತಿಗಳನ್ನು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಬೆಂಬಲಿಸುತ್ತಿರುವ ಮಠಮಾನ್ಯಗಳು, ಜಾತಿ ಸಂಘಟನೆಗಳು ಹಾಗೂ ಇತರ ಒತ್ತಡ ಗುಂಪುಗಳು ಈ ಸಮಾಜದಲ್ಲಿ ಜಾತಿಯ ಬೇರುಗಳನ್ನು ಮತ್ತಷ್ಟು ಹರಡುತ್ತಿವೆ.ಜಾತಿ ಮತ್ತು ರಾಜಕೀಯ ವ್ಯವಸ್ಥೆಗಳ ನಡುವಣ ಸಂಬಂಧ ಇಂದು-ನಿನ್ನೆಯದಲ್ಲ. ಒಂದು ಸಾಂಪ್ರದಾಯಿಕ ಅರ್ಥದಲ್ಲಿ ಭಾರತೀಯ ಸಮಾಜದಲ್ಲಿ ಜಾತಿಯ ಹಿಡಿತ ಕಡಿಮೆಯಾಗುತ್ತಿರುವಂತೆ ಕಂಡು ಬಂದರೂ ಸಾರ್ವತ್ರಿಕ ಚುನಾವಣೆಗಳು, ಅನೇಕ ಜಾತಿಗಳು ತಮ್ಮ ಪ್ರಾಬಲ್ಯವನ್ನು ಬೆಳೆಸಿಕೊಳ್ಳಲು ಹೊಸ ಹೊಸ ಅವಕಾಶಗಳನ್ನು ಕಲ್ಪಿಸಿವೆ.ಒಂದೆಡೆ ಪಾಶ್ಚಿಮಾತ್ಯೀಕರಣ ವ್ಯಕ್ತಿಗಳನ್ನು ಜಾತಿ ಅನನ್ಯತೆಯಿಂದ ದೂರ ತೆಗೆದುಕೊಂಡು ಹೋಗುತ್ತಿದ್ದರೆ, ಮತ್ತೊಂದೆಡೆ ರಾಜಕೀಯದಲ್ಲಿ ಜಾತಿಯ ಪ್ರವೇಶ ಜನರನ್ನು ಜಾತಿಯತ್ತ ಸೆಳೆದು ಅದನ್ನು ಮತ್ತಷ್ಟು ಬಲ ಪಡಿಸುತ್ತಿದೆ ಎಂಬ ಸಮಾಜಶಾಸ್ತ್ರಜ್ಞ `ಆಂದ್ರೆ ಬೆತೆ~ಯವರ ಮಾತುಗಳು ಹಿಂದೆಂದಿಗಿಂತ ಈ ಹೊತ್ತು ಹೆಚ್ಚು ಪ್ರಸ್ತುತವೆನಿಸುತ್ತಿದೆ.ಒಂದು ಸೈದ್ಧಾಂತಿಕ ನೆಲೆಯಲ್ಲಿ ಪ್ರಜಾಪ್ರಭುತ್ವ ದೇಶದ ಎಲ್ಲ ಪ್ರಜೆಗಳಿಗೂ ರಾಜಕೀಯ ಅಧಿಕಾರವನ್ನು ಪಡೆಯಲು ಸಮಾನ ಅವಕಾಶಗಳನ್ನು ನೀಡಿದ್ದರೂ ವಾಸ್ತವದಲ್ಲಿ  ಅನೇಕ ರಾಜ್ಯಗಳಲ್ಲಿ, ರಾಜಕೀಯ ಅಧಿಕಾರ ಕೇಂದ್ರೀಕೃತವಾಗಿರುವುದು ಪ್ರಬಲ ಜಾತಿಗಳ ಕೈಯಲ್ಲಿ.

 

ಭೂ ಒಡೆತನ, ಆರ್ಥಿಕ ಪ್ರಾಬಲ್ಯ ಮತ್ತು ಸಂಖ್ಯಾಬಲ ಪ್ರಬಲ ಜಾತಿಗಳ ಸೊತ್ತಾಗಿರುವುದರಿಂದ ಅವರಿಗೆ ಅಧಿಕಾರವನ್ನು ಪಡೆಯಲು ಹಾಗೂ ಅದನ್ನು ಉಳಿಸಿಕೊಳ್ಳಲು ಜಾತಿ ಒಂದು ಪ್ರಬಲ ಅಸ್ತ್ರವಾಗಿ ಕೆಲಸ ಮಾಡುತ್ತದೆ.ದೇಶದ ಅನೇಕ ರಾಜ್ಯಗಳಲ್ಲಿ  ರಾಜಕೀಯ ಅಧಿಕಾರ ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಹಸ್ತಾಂತರವಾದರೂ ಅದು ಪ್ರಬಲ ಜಾತಿ ಬಣಗಳ ಕೈ ಸೇರುವ ಸಾಧ್ಯತೆಗಳೇ ಹೆಚ್ಚು. ಬಹುತೇಕ ಸಂದರ್ಭಗಳಲ್ಲಿ  ಪಕ್ಷ  ಅಥವಾ  ವ್ಯಕ್ತಿ  ಬದಲಾದರೂ ಜಾತಿ ಮಾತ್ರ ಬದಲಾಗುವುದಿಲ್ಲ.ಜಾತಿಯ ಭೂತ ಎನ್ನೋಣವೋ, ಭಯ ಎನ್ನೋಣವೋ ಈ ಹೊತ್ತು ಅದು ಯಾವ ಪ್ರಮಾಣಕ್ಕೆ ಹೋಗುತ್ತಿದೆ ಎಂದರೆ ಸಾರ್ವಜನಿಕ ಸಂಸ್ಥೆಗಳಲ್ಲೂ ಯಾವುದೋ ಒಂದು ಜಾತಿಯ ವ್ಯಕ್ತಿಯನ್ನು ತೆಗೆದು, ಆ ಜಾಗಕ್ಕೆ ಮತ್ತೊಬ್ಬರನ್ನು ತರಬೇಕಾದಂಥ ಸ್ಥಿತಿ ಬಂದಾಗ ಜಾತಿಯೊಂದೇ ಲೆಕ್ಕಕ್ಕೆ ಬಂದು ಅರ್ಹತೆ, ಆಸಕ್ತಿ ಅಥವಾ ಅನುಭವಗಳಂಥ ಸಕಾರಾತ್ಮಕ ಮಾನದಂಡಗಳು ಗೌಣವಾಗುತ್ತವೆ. ರಾಜಕೀಯವೂ ಸೇರಿದಂತೆ ಅನೇಕ ಅಧಿಕಾರ ಸ್ಥಾನಗಳ ಕಥೆ ಇಂದು ಹೀಗಾಗಿದೆ.ಹೆಚ್ಚುತ್ತಿರುವ ಶಿಕ್ಷಣಾವಕಾಶಗಳು, ವಿಸ್ತೃತವಾಗುತ್ತಿರುವ ಉದ್ಯೋಗ ಮಾರುಕಟ್ಟೆ, ಸಡಿಲವಾಗುತ್ತಿರುವ ಭೌತಿಕ ಮತ್ತು ಸಾಮಾಜಿಕ ದೂರಗಳು ಎಲ್ಲ ಜಾತಿಗಳಿಗೂ ಈ ಹೊತ್ತು ಮೇಲ್ಮುಖ ಸಾಮಾಜಿಕ ಚಲನೆಗೆ ವಿಪುಲ ಅವಕಾಶಗಳನ್ನು ತೆರೆದಿಟ್ಟಿವೆ. ಇದರ ನಡುವೆ ಸ್ವಜಾತಿ ಪ್ರೇಮ ಹಾಗೂ ಪಕ್ಷಪಾತಗಳೂ ಮೆರೆಯುತ್ತಿವೆ. ಇದಕ್ಕೆ ಕರ್ನಾಟಕವೇನೂ ಹೊರತಲ್ಲ.ದೇಶದ ಮಾಹಿತಿ ತಂತ್ರಜ್ಞಾನ ರಾಜಧಾನಿ, ಅತ್ಯಾಧುನಿಕ ತಾಂತ್ರಿಕ ಪ್ರಗತಿಯನ್ನು ಸಾಧಿಸಿ, ವಿಜ್ಞಾನ ಹಾಗೂ ವಾಣಿಜ್ಯೋದ್ಯಮ ಕ್ಷೇತ್ರಗಳಲ್ಲಿ ಇಡೀ ದೇಶದಲ್ಲಿಯೇ ಮುಂಚೂಣಿಯಲ್ಲಿರುವ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ. ಆದರೆ ವಿಪರ್ಯಾಸವೆಂದರೆ ಈ ಹೊತ್ತು ರಾಜ್ಯದಲ್ಲಿ ರಾಜಕೀಯ ಲೆಕ್ಕಾಚಾರಗಳು ನಡೆಯುತ್ತಿರುವುದು ಪ್ರಗತಿ ವಿರೋಧಿ ಪ್ರವೃತ್ತಿಯಾದ ಜಾತಿಯತೆಯ ನೆರಳಿನಲ್ಲಿ.ರಾಜಕೀಯ ನಾಯಕರನ್ನು ಯಾವುದೋ ಒಂದು ಜಾತಿಯ ಪ್ರತಿನಿಧಿಗಳಂತೆ ಬಿಂಬಿಸುತ್ತಿರುವುದು, ಆಯಾ ಜಾತಿಯ ಬೆಂಬಲಿಗರನ್ನು ಜಾತಿಯ ಆಧಾರದ ಮೇಲೆ ಸಮೀಕರಿಸುತ್ತಿರುವುದು ಹಾಗೂ ಮತದಾರರನ್ನು ಜಾತಿಯ ಹೆಸರಿನಲ್ಲಿ ಓಲೈಸುತ್ತಿರುವುದು ಇಲ್ಲವೇ ಒಡೆಯುತ್ತಿರುವುದು ಸಮಕಾಲೀನ ಇತಿಹಾಸದ ದುರಂತ ಅಧ್ಯಾಯಗಳಲ್ಲಿ ಒಂದು.ಒಂದು ಶ್ರೇಣೀಕೃತ ವ್ಯವಸ್ಥೆಯಾಗಿ ಜಾತಿಯ ಹಿಡಿತ ಸಡಿಲವಾಗುತ್ತಿದೆ ಎನಿಸಿದರೂ ಅದು ಸಾರ್ವಜನಿಕ ಜೀವನದ ಎಲ್ಲ ಕ್ಷೇತ್ರಗಳನ್ನು, ಎಲ್ಲ ಮಜಲುಗಳಲ್ಲಿ ಪ್ರವೇಶಿಸಿರುವುದು, ವಿಶೇಷವಾಗಿ ಚುನಾವಣಾ ರಾಜಕಾರಣ ಜಾತಿಯ ಚೌಕಟ್ಟಿನಲ್ಲೇ ನಡೆಯುತ್ತಿರುವುದು ಭಾರತದಲ್ಲಿ  ಜಾತಿ ವ್ಯವಸ್ಥೆ ನಶಿಸಿ ಹೋದರೂ ಜಾತಿಗಳು ಮಾತ್ರ ಮುಂದುವರೆಯುತ್ತವೆ  ಎಂದು ಜಾನ್ ಹ್ಯಾರಿಸ್ ಅವರು ತಮಿಳುನಾಡಿನಲ್ಲಿ ಕೈಗೊಂಡ ಒಂದು ಅಧ್ಯಯನದ ಸಂದರ್ಭದಲ್ಲಿ ಹೇಳಿದ ಮಾತುಗಳನ್ನು ನೆನಪಿಗೆ ತರುತ್ತಿವೆ.ರಾಜಕೀಯ ಅಧಿಕಾರವನ್ನು ಗಳಿಸಲು ಎಲ್ಲ ಪ್ರಜಾಪ್ರಭುತ್ವಗಳಲ್ಲೂ ಸ್ಪರ್ಧೆಗಳು ನಡೆಯುವುದು ಸಹಜವೇ. ಚುನಾವಣೆಗಳು ವಿಷಯಾಧಾರಿತವಾಗಿದ್ದು ಸಮರ್ಥರೂ ಜನಪರ ಕಾಳಜಿಗಳನ್ನು ಉಳ್ಳವರೂ ಸಾಮಾಜಿಕ ನ್ಯಾಯದ ಮೌಲ್ಯಾಚರಣೆಗಳಿಗೆ ಬದ್ಧರಾದವರೂ ಜನ ಪ್ರತಿನಿಧಿಗಳಾಗಿ ಆಯ್ಕೆಯಾಗಲು ಈ ಸ್ಪರ್ಧೆಗೆ ಇಳಿಯುವುದು ಕೂಡ ಪ್ರಜಾಸತ್ತೆಯ ತತ್ವಗಳಿಗೆ ಗೌರವವನ್ನು ತರುವಂಥ ಬೆಳವಣಿಗೆಯೇ.ಆದರೆ ಈ ಹೊತ್ತು ರಾಜಕೀಯ ಸ್ಪರ್ಧೆ ನಡೆಯುತ್ತಿರುವುದು ಆರೋಗ್ಯಕರವಾದ ವಿಧಾನಗಳ ಬಳಕೆಯಿಂದಲ್ಲ. ಬಹುತೇಕ ಕ್ಷೇತ್ರಗಳಲ್ಲಿ  ರಾಜಕೀಯ ಅಧಿಕಾರಕ್ಕಾಗಿ ನಡೆಯುವ ಸ್ಪರ್ಧೆಗಳು ಜಾತಿ ಕೇಂದ್ರಿತವಾಗಿದ್ದು ಎಲ್ಲ ಪಕ್ಷಗಳೂ ಒಂದೇ ಜಾತಿಯ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿರುವುದು ಸಮೀಕೃತವಾಗಿರುವ ಗುಂಪುಗಳಲ್ಲಿ ಉಪಗುಂಪುಗಳನ್ನು ಸೃಷ್ಟಿಸುತ್ತಿದೆ.ಪಕ್ಷ ನಿಷ್ಠೆ ಹಾಗೂ ಜಾತಿ ನಿಷ್ಠೆಗಳ ನಡುವೆ ಸಿಲುಕಿ ಹಾಕಿ ಕೊಂಡಿರುವ ನಾಯಕರನೇಕರು ಸ್ವಜಾತಿ ಬಾಂಧವರೊಡನೆ ಸಂದರ್ಭೋಚಿತವಾದ ಹೊಂದಾಣಿಕೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಸ್ವಪಕ್ಷದವರಿಂದ ಮತ್ತು ವಿರೋಧ ಪಕ್ಷದವರಿಂದ ಟೀಕೆಗಳಿಗೂ ಒಳಗಾಗುತ್ತಿದ್ದಾರೆ.ಸಮಕಾಲೀನ ರಾಜಕಾರಣ ಎಷ್ಟು ಜಾತಿ ಆವೃತ್ತವಾಗಿದೆಯೆಂದರೆ ಜನ ಪ್ರತಿನಿಧಿಗಳ ಪ್ರತಿ ನಡೆಯನ್ನೂ ಸ್ವಜಾತಿ ಪಕ್ಷಪಾತ ಅಥವಾ ಅನ್ಯಜಾತಿ ವಿರೋಧಿ ಚಟವಟಿಕೆಯೆಂಬಂತೆ ಬಿಂಬಿಸಲಾಗುತ್ತಿರುವಂಥ ಹಂತವನ್ನು ಈ ಸಮಾಜ ತಲುಪಿದೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಅನೇಕ ಜನನಾಯಕರು ಹಾಗೂ ಅವರ ಬೆಂಬಲಿಗರು ಸಾರ್ವಜನಿಕ ವೇದಿಕೆಗಳಿಂದಲೇ ತಮ್ಮನ್ನು ಜಾತಿಯೊಂದರ ಜೊತೆ ಗುರುತಿಸಿಕೊಂಡು, ತಮ್ಮನ್ನು ಅಲುಗಾಡಿಸ ಹೊರಟವರು ತಮ್ಮ  ಜಾತಿ ಸಮಾಜದ  ಆಕ್ರೋಶಕ್ಕೆ ತುತ್ತಾಗಬೇಕಾಗುತ್ತದೆ ಎಂಬ ಬೆದರಿಕೆಯನ್ನು ಬೇರೆ ಒಡ್ಡುತ್ತಾರೆ.

 

ಇದಕ್ಕೆ ಪ್ರತ್ಯುತ್ತರವಾಗಿ ಮತ್ತೊಂದು ಜಾತಿಯವರು ತಮ್ಮ ಬಲಾಬಲ ಪ್ರದರ್ಶನಕ್ಕೆ ಇಳಿಯುತ್ತಾರೆ. ಒಂದೊಂದು ಜಾತಿಯೂ ಒಂದೊಂದು ಸಮಾಜವಾಗಿಬಿಟ್ಟರೆ ಸಮಾಜ ಎಂಬ ಪದದ ಅರ್ಥವನ್ನೇ ಸಮಾಜಶಾಸ್ತ್ರಜ್ಞರು ಬದಲಾಯಿಸಬೇಕಾದ ಸ್ಥಿತಿ ಬರಬಹುದೇನೋ?ಈ ಹೊತ್ತು ಅನೇಕ ರಾಜಕೀಯ ಮುಖಂಡರು ತಮ್ಮ ಸ್ವಜಾತಿಯವರು ಚಲಾಯಿಸುವ ಮತಗಳೇ ತಮಗೆ ರಕ್ಷಾಕವಚವೆಂಬಂತೆ ಮಾತನಾಡುತ್ತಾರೆ. ಎತ್ತ ಸಾಗುತ್ತಿದೆ ನಮ್ಮ ಪ್ರಜಾಪ್ರಭುತ್ವ? ಜಾತ್ಯಾತೀತ ಭಾರತದ ಕನಸನ್ನು ಸಾಕಾರ ಮಾಡಲು ಸರ್ವಜನರ ಸಹಬಾಳ್ವೆಯ ತತ್ವವನ್ನು ಪ್ರತಿಪಾದಿಸಿದ ದೇಶದ ಸಂವಿಧಾನದ ಆಶೋತ್ತರಗಳೆಲ್ಲಿ? ಇಡೀ ಸಮಾಜವನ್ನೇ ಜಾತಿಯ ಹೆಸರಿನಲ್ಲಿ ಹೋಳು ಹೋಳು ಮಾಡಿ ಸದಾಕಾಲ ಪ್ರಜೆಗಳು ಪರಸ್ಪರ ದ್ವೇಷ-ಅನುಮಾನಗಳ ನೆರಳಿನಲ್ಲಿ ಬದುಕುವಂಥ ಪರಿಸ್ಥಿತಿಯನ್ನು ಸೃಷ್ಟಿಸುತ್ತಿರುವ ಸಮಕಾಲೀನ ರಾಜಕಾರಣವೆಲ್ಲಿ?ಇಷ್ಟೊಂದು ಮಂದಿ ಪ್ರಜ್ಞಾವಂತರಿರುವ ಈ ಸಮಾಜದಲ್ಲಿ ಈ ರೀತಿ ನಿರ್ಭಯವಾಗಿ ಜಾತಿ ರಾಜಕೀಯ ನಡೆಯುತ್ತಿರುವುದಕ್ಕೆ ಒಂದು ಪ್ರಮುಖ ಕಾರಣವೆಂದರೆ ಸಾರ್ವಜನಿಕ ಪ್ರಶ್ನೆ, ಪ್ರತಿಕ್ರಿಯೆ ಮತ್ತು ಪ್ರತಿಭಟನೆಗಳು ಹೆಚ್ಚು ಕಡಿಮೆ ಸತ್ತು ಹೋದಂತಿರುವುದು.ಪದೇ ಪದೇ ಪ್ರಜೆಗಳ ಸ್ವಾಭಿಮಾನವನ್ನು ಒತ್ತೆಯಿಟ್ಟು, ತಮ್ಮ ನುಡಿ-ನಡೆಗಳ ಮೂಲಕ ಜಾತೀಯತೆಯನ್ನು ನೇರವಾಗಿಯೇ ಪ್ರತಿಪಾದಿಸುತ್ತಿರುವ ಜನ ಪ್ರತಿನಿಧಿಗಳನ್ನು ಮತದಾರರು ಎದುರಿಸಿರುವಂಥ ಎಷ್ಟು ನಿದರ್ಶನಗಳು ನಮ್ಮ ಮುಂದಿವೆ? ಎಲ್ಲೋ ಅಲ್ಲೊಮ್ಮೆ ಇಲ್ಲೊಮ್ಮೆ ಕೆಲ ಧ್ವನಿಗಳು ಪ್ರಜಾಪ್ರಭುತ್ವಕ್ಕೆ ಆಗುತ್ತಿರುವ ಈ ಅವಮಾನವನ್ನು ಪ್ರಶ್ನಿಸಿರಬಹುದು.

 

ಆದರೆ ಎಲ್ಲಿಯವರೆಗೆ ಬಹು ಮಂದಿ ಇಂಥ ಪ್ರಸಂಗಗಳನ್ನು ನೋಡಿಯೂ ನೋಡದಂತೆ, ಕೇಳಿಯೂ ಕೇಳದಂತಿರುತ್ತಾರೋ ಅಲ್ಲಿಯವರೆಗೆ ಪರಿಸ್ಥಿತಿಯಲ್ಲಿ ಹೆಚ್ಚೆನೂ ಬದಲಾವಣೆ ಕಂಡು ಬರುವುದಿಲ್ಲ.ಈ ಹೊತ್ತು ನಮ್ಮ ಸಮಾಜದಲ್ಲಿ ಜಾತಿ ಸಮೀಕರಣ ಮತ್ತೊಂದು ಭಯ ಹುಟ್ಟಿಸುವಂಥ ಪರಿಸ್ಥಿತಿಯನ್ನು ಸೃಷ್ಟಿಸುತ್ತಿದೆ. ಅದೇನೆಂದರೆ ಇದುವರೆಗೂ ಒಂದು ವ್ಯವಸ್ಥಿತ ಮಟ್ಟದಲ್ಲಿ ಸಮೀಕರಣಗೊಳ್ಳಲು ಪ್ರಯತ್ನಿಸಿದ ಅನೇಕ ಜಾತಿ ಗುಂಪುಗಳು ಕೂಡ ಈಗ  ನಮ್ಮವರು   ಹೊರಗಿನವರು  ಎಂಬ ಭಾವನೆಗಳನ್ನು ಬಿತ್ತಲು ಆರಂಭಿಸಿವೆ.

 

ಸಮಾಜದ ಸ್ವಾಸ್ಥ್ಯದ ಬಗ್ಗೆ ಕಾಳಜಿಯಿರುವವರು ಎಚ್ಚೆತ್ತು ಇಂಥ ಪ್ರವೃತ್ತಿಗಳಿಗೆ ಈಗಾಲಾದರೂ ತಡೆಯೊಡ್ಡದಿದ್ದರೆ ಒಂದು ದಿನ ನಮ್ಮ ಸಮಾಜ ಒಡೆದ ಹೋಳುಗಳಾಗಿ ಅರ್ಥಪೂರ್ಣವಾದ ಬದುಕನ್ನು ನಡೆಸಲು ಅಸಾಧ್ಯವಾಗುವಂಥ ಸ್ಥಿತಿ ಸೃಷ್ಟಿಯಾಗುತ್ತದೆ.(ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.