ಗುರುವಾರ , ಫೆಬ್ರವರಿ 25, 2021
17 °C

ಸಿದ್ದರಾಮಯ್ಯ ಯಾರಿಗೆ ಹೆದರುತ್ತಿದ್ದಾರೆ?...

ಪದ್ಮರಾಜ ದಂಡಾವತಿ Updated:

ಅಕ್ಷರ ಗಾತ್ರ : | |

ಸಿದ್ದರಾಮಯ್ಯ ಯಾರಿಗೆ ಹೆದರುತ್ತಿದ್ದಾರೆ?...

ಅಧಿಕಾರವೇ ಹಾಗೆ. ಅದು ಒಂದು ವಿಸ್ಮಯ, ಒಂದು ಅಚ್ಚರಿ. ಅದು ಕೈಗೆ ಸಿಗುವವರೆಗೆ ಒಂದು; ಸಿಕ್ಕ ಮೇಲೆ ಇನ್ನೊಂದು. ಸಿಕ್ಕರೆ ಏನೆಲ್ಲ ಮಾಡಬೇಕು ಎಂದು ಅಂದುಕೊಂಡುದನ್ನು ಮಾಡಲು ಆಗದಿರುವುದೇ ಅಧಿಕಾರ! ಸಿಗುವವರೆಗೆ ಅಧಿಕಾರ ಎಂದರೆ ಬದಲಾವಣೆಯ ಒಂದು ಸಾಧನ ಎಂದು ಅಂದುಕೊಂಡವರಿಗೆ ಸಿಕ್ಕ ಕೂಡಲೇ ಅದು ಒಂದು ರಾಜಿ ವಿಧಾನ ಎಂದು ಅನಿಸತೊಡಗುತ್ತದೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನೋಡಿದರೆ ಈ ಮಾತು ಎಷ್ಟು ನಿಜವಲ್ಲವೇ ಎಂದು ಅನಿಸುತ್ತದೆ. ಅವರಿಗೆ ಮುಖ್ಯಮಂತ್ರಿ ಆಗಲು ಎಲ್ಲ ಅಧಿಕಾರ ಇದೆ. ಬಹುಶಃ ಕಾಂಗ್ರೆಸ್‌ನ ಈಗಿನ ಎಲ್ಲ ಶಾಸಕರಲ್ಲಿ ಮುಖ್ಯಮಂತ್ರಿ ಆಗಿರಲು ಅವರೇ ಹೆಚ್ಚು ಅರ್ಹ ವ್ಯಕ್ತಿ.    ಅವರು ಎಷ್ಟೆಲ್ಲ ಮುಖ್ಯಮಂತ್ರಿಗಳನ್ನು ಕಂಡಿಲ್ಲ? ಎಷ್ಟೆಲ್ಲ ಮುಖ್ಯಮಂತ್ರಿಗಳ ಜತೆಗೆ ಕೆಲಸ ಮಾಡಿಲ್ಲ? ಆಗೆಲ್ಲ ತಾನು ಮುಖ್ಯಮಂತ್ರಿ ಆಗಿದ್ದರೆ ಏನೆಲ್ಲ ಮಾಡಬಹುದಿತ್ತು ಎಂದು ಅಂದುಕೊಂಡಿರಲಿಲ್ಲ? ಈಗ ಅವರೇ ಮುಖ್ಯಮಂತ್ರಿ ಆಗಿದ್ದಾರೆ. ಆದರೆ, ಅವರು ತಾವು ಏನು ಅಂದುಕೊಂಡಿದ್ದರೋ ಅದನ್ನು ಮಾಡಲು ಸಾಧ್ಯವಾಗುತ್ತಿದೆಯೇ? ಕನಿಷ್ಠ ಆ ದಿಸೆಯಲ್ಲಿ ಅವರು ಮತ್ತು ಅವರ  ಸರ್ಕಾರ ಹೆಜ್ಜೆಯನ್ನಾದರೂ ಇಡುತ್ತಿದೆಯೇ?ಈಗಿನ ರಾಜ್ಯ ಸರ್ಕಾರದ ಕಾರ್ಯವೈಖರಿ ನೋಡಿದರೆ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಆಗಬೇಕಿರಲಿಲ್ಲ ಎಂದು ಅನಿಸುತ್ತದೆ. ಸಿದ್ದರಾಮಯ್ಯ ಖಡಕ್‌ ಮನುಷ್ಯ. ಯಾರಿಗೂ ಸೊಪ್ಪು ಹಾಕುವವರು ಅಲ್ಲ. ತಾವು ಪೂರ್ಣ ಪ್ರಾಮಾಣಿಕ ಅಲ್ಲ ಎಂದು ಅವರೇ ಹೇಳಿಕೊಂಡಿರುವುದರಿಂದ ಆ ಪ್ರಮಾಣ ಪತ್ರವನ್ನು ನಾನು ಅವರಿಗೆ ಕೊಡಲು ಹೋಗುವುದಿಲ್ಲ. ಪ್ರಾಮಾಣಿಕತೆ ಎಂಬುದು ಒಂದು ಸಾಪೇಕ್ಷ ಶಬ್ದ. ಅದಕ್ಕೆ ಯಾವಾಗಲೂ ಮಿತಿಗಳು ಇರುತ್ತವೆ.ಅವರು ಒಬ್ಬ ಒಳ್ಳೆಯ ಆಡಳಿತಗಾರ ಎಂದೂ ಹೆಸರು ಮಾಡಿದ್ದವರು. ಕರ್ನಾಟಕಕ್ಕೆ ಒಳ್ಳೆಯ ಆಡಳಿತ ಬೇಕಾಗಿದೆ ಎಂದೇ ಹೈಕಮಾಂಡ್‌ ಅವರನ್ನು ಮುಖ್ಯಮಂತ್ರಿ ಹುದ್ದೆಯಲ್ಲಿ ಕೂಡ್ರಿಸಿದೆ. ಇನ್ನೇನು ಹೊಸ್ತಿಲಲ್ಲಿಯೇ ಇರುವ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಹೆಚ್ಚು ಸೀಟುಗಳನ್ನು ಗೆಲ್ಲಲು ಸಿದ್ದರಾಮಯ್ಯ ಸಹಕಾರಿ ಎಂದೂ ಹೈಕಮಾಂಡ್‌ ಭಾವಿಸಿದ್ದರೆ ಅದು ಸಹಜವಾಗಿಯೇ ಇದೆ. ಅಂದರೆ ಸಿದ್ದರಾಮಯ್ಯ ಅವರ ಆಡಳಿತದಲ್ಲಿ ಹೈಕಮಾಂಡ್‌ ಮೂಗು ತೂರಿಸಿ ಅವರನ್ನು ನಿಯಂತ್ರಣ ಮಾಡುತ್ತದೆ ಎಂದು ಅಂದುಕೊಳ್ಳುವುದಕ್ಕೆ ಯಾವ ನಿದರ್ಶನಗಳೂ, ಆಧಾರಗಳೂ ಇಲ್ಲ. ಹಾಗಿದ್ದರೆ ಸಿದ್ದರಾಮಯ್ಯ ಸರ್ಕಾರಕ್ಕೆ ಏನು ಸಮಸ್ಯೆ?ಅವರ ಸರ್ಕಾರ ಅಧಿಕಾರಕ್ಕೆ ಬಂದು ಎಂಟು ತಿಂಗಳೂ ಕಳೆದಿಲ್ಲ. ಮುಖ್ಯಮಂತ್ರಿಗಳ ಮಾತಿನಲ್ಲಿ ಹತಾಶೆ ಕಾಣುತ್ತಿದೆ. ಅವರು ಹೋಗಿಬಂದಲ್ಲೆಲ್ಲ ಅಧಿಕಾರಿಗಳನ್ನು ದೂರುತ್ತಿದ್ದಾರೆ. ಒಳ್ಳೆಯ ಆಡಳಿತಕ್ಕೆ ನೇತೃತ್ವ, ಮಾರ್ಗದರ್ಶನ ಕೊಡಬೇಕಾದವರು ಯಾರು? ಮುಖ್ಯಮಂತ್ರಿಗಳು ಮತ್ತು ಅವರ ಸಂಪುಟದ ಸದಸ್ಯರೇ ಅಲ್ಲವೇ? ಆದರೆ, ಸಂಪುಟದ ಒಬ್ಬಿಬ್ಬರು ಸಚಿವರನ್ನು ಬಿಟ್ಟರೆ ಉಳಿದವರಲ್ಲಿ ಅಂಥ ಉತ್ಸಾಹ, ಸಮರ್ಪಣೆ ಮನೋಭಾವ ಕಾಣುತ್ತಿದೆಯೇ? ಅಧಿಕಾರಕ್ಕೆ ಬರುವುದಕ್ಕಿಂತ ಮುಂಚೆ ಹಾಗೆ ಮಾಡುತ್ತೇವೆ,  ಹೀಗೆ ಮಾಡುತ್ತೇವೆ ಎಂದು ಹೇಳುತ್ತಿದ್ದವರು ಈಗೇಕೆ ಹೀಗೆ ಇದ್ದಾರೆ? ಹಿಂದೆ ಯಡಿಯೂರಪ್ಪ ಸರ್ಕಾರದಲ್ಲಿ ಇದ್ದ ಸಮಸ್ಯೆಯೇ ಈಗಲೂ ಕಾಣುತ್ತಿದೆ. ಆಗಲೂ ಅವರ ಸಂಪುಟ ಒಂದು ತಂಡವಾಗಿ ಕೆಲಸ ಮಾಡುತ್ತಿದೆ ಎಂದು ಅನಿಸುತ್ತಿರಲಿಲ್ಲ. ಈಗಲೂ ಸಿದ್ದರಾಮಯ್ಯ ಸಂಪುಟ ಒಂದು ತಂಡವಾಗಿ ಕೆಲಸ ಮಾಡುತ್ತಿದೆ ಎಂದು ಅನಿಸುವುದಿಲ್ಲ.ಆಡಳಿತ ಎಂದರೆ ಅದಕ್ಕೆ ಒಂದು ವೇಗ ಇರಬೇಕು; ಕ್ರಿಯಾಶೀಲತೆ ಇರಬೇಕು. ಆಗಲೇ ಅದು ಜನರ ‘ಅನಿಸಿಕೆ’ಗೆ ಬರುತ್ತದೆ. ಸಿದ್ದರಾಮಯ್ಯ ಅವರ ಆಡಳಿತಕ್ಕೆ ಒಂದು ವೇಗ, ಒಂದು ಬಲ ಇದೆ ಎಂದು ಅನಿಸುವುದೇ ಇಲ್ಲ. ಕಾಂಗ್ರೆಸ್‌ ಪಕ್ಷದ ವೃದ್ಧಾಪ್ಯ ಅವರ ಸರ್ಕಾರಕ್ಕೂ ಅಂಟಿದಂತೆ ಕಾಣುತ್ತದೆ. ಒಳ್ಳೆಯ ಸರ್ಕಾರ ಎಂದರೆ ಹೀಗೆ ಸುಮ್ಮನೆ ಕಾಲ ಕಳೆದು ಹೋಗಿ ಬಿಡುವುದು ಎಂದು ಅಲ್ಲ. ಅದನ್ನು ಯಾರು ಬೇಕಾದರೂ ಮಾಡುತ್ತಾರೆ.  ಸಿದ್ದರಾಮಯ್ಯ ಧೈರ್ಯಸ್ಥ. ಅವರು ಯಾರಿಗೂ ಅಂಜುವವರು ಅಲ್ಲ. ಆದರೆ, ಅವರ ಇದುವರೆಗಿನ ಆಡಳಿತ ನೋಡಿದರೆ ಅವರು ಧೈರ್ಯಸ್ಥನ ಹಾಗೆ ನಡೆದುಕೊಂಡಂತೆ ಕಾಣುವುದಿಲ್ಲ. ಸಣ್ಣಪುಟ್ಟ ನಿರ್ಧಾರ ತೆಗೆದುಕೊಳ್ಳಲೂ ಅವರು ಬಹಳ ಲೆಕ್ಕ ಹಾಕುವಂತೆ ಕಾಣುತ್ತದೆ. ಅಥವಾ ಲೆಕ್ಕ ಹಾಕುವಂತೆ ಅವರ ಸುತ್ತಮುತ್ತ ಇರುವ ಶಕ್ತಿಗಳು ಮಾಡುತ್ತಿರುವಂತಿದೆ.ಕರ್ನಾಟಕ ಲೋಕಸೇವಾ ಆಯೋಗದ ವಿಚಾರದಲ್ಲಿ ಅವರು ತಮ್ಮ ವರ್ಚಸ್ಸಿಗೆ ತಕ್ಕಂತೆ ನಡೆದುಕೊಂಡಿಲ್ಲ. ಆ ನೇಮಕದಲ್ಲಿ ಅಕ್ರಮ ಆಗಿದೆ  ಎನ್ನಲು ಇನ್ನೂ ಏನು ಪುರಾವೆ ಬೇಕು?ಕಠಿಣ ನಿರ್ಧಾರ ತೆಗೆದುಕೊಳ್ಳಲು ಅವರಿಗೆ ಯಾರು ಅಡ್ಡಿ ಎಂದು ಊಹಿಸುವುದು ಕಷ್ಟವೇನೂ ಅಲ್ಲ. ಅದು ಒಂದು ರೀತಿಯಲ್ಲಿ ನಕಾರಾತ್ಮಕ ನಿರ್ಧಾರ ಎಂದು ಅಂದುಕೊಳ್ಳೋಣ. ಈ ಸರ್ಕಾರ ಅಧಿಕಾರಕ್ಕೆ ಬರಲು ಕಾರ್ಯಕರ್ತರು ಎಷ್ಟೆಲ್ಲ ದುಡಿದಿಲ್ಲ? ಅವರಿಗೆ ಒಂದಿಷ್ಟು ಸ್ಥಾನ ಮಾನ ಕೊಡಲು, ಕೊಡಿಸಲು ಸಿದ್ದರಾಮಯ್ಯ ಅವರಿಗೆ ಇನ್ನೂ ಎಷ್ಟು ದಿನ ಬೇಕು? ಎಲ್ಲ ನಿರ್ಧಾರಗಳೂ ವಿವಾದಾತ್ಮ ಕವಾಗಿಯೇ ಇರುತ್ತವೆ. ವಿವಾದಕ್ಕೆ ಅಂಜುವವರು ನಾಯಕ ಆಗಬಾರದು.ಒಬ್ಬರಿಗೆ ಸ್ಥಾನಮಾನ ಕೊಟ್ಟರೆ ಇನ್ನೊಬ್ಬರಿಗೆ ಅಸಮಾಧಾನ ಆಗಿಯೇ ಆಗುತ್ತದೆ. ಕಾಂಗ್ರೆಸ್‌ ಪಕ್ಷದಿಂದ ಆಯ್ಕೆಯಾಗಿರುವ ಎಲ್ಲ 122 ಮಂದಿ ಶಾಸಕರು ಮಂತ್ರಿ ಆಗಲು ಸಾಧ್ಯವಿಲ್ಲ. 32 ಮಂದಿ ಮಾತ್ರ ಮಂತ್ರಿ ಆಗಲು ಸಾಧ್ಯ. ಹಾಗೆಂದು ಮಂತ್ರಿಮಂಡಲ ವನ್ನೇ ರಚಿಸದೇ ಇರಲು ಆಗುತ್ತದೆಯೇ? ಎಷ್ಟೆಲ್ಲ ನಿಗಮಗಳಿವೆ, ಮಂಡಳಿಗಳು ಇವೆ; ಅವುಗಳಿಗೆಲ್ಲ ನೇಮಕ ಆಗುವುದು ಇನ್ನೂ ಯಾವಾಗ? ಸಚಿವರಿಗೆ, ಶಾಸಕರಿಗೆ ಒಂದಲ್ಲ ಒಂದು ಅಧಿಕಾರ  ಇದ್ದೇ ಇರುತ್ತದೆ. ಕಾರ್ಯಕರ್ತರಿಗೆ ಏನು ಅಧಿಕಾರ?  ರಾಜಕೀಯ ನೇಮಕಗಳಿಗೆ ನೂರೆಂಟು ಲೆಕ್ಕಾಚಾರ ಇರುತ್ತವೆ ಎಂದುಕೊಳ್ಳೋಣ. ಅಕಾಡೆಮಿಗಳು ಖಾಲಿ ಇದ್ದು  ವರ್ಷಗಳೇ ಆಯಿತಲ್ಲ! ಅದೂ ಸಮಸ್ಯೆಯೇ? ಸಿದ್ದರಾಮಯ್ಯ ಯಾರಿಗೆ ಹೆದರುತ್ತಿದ್ದಾರೆ? ನಿರ್ಧಾರದ ಮೇಜಿನ ಮೇಲೆ ಕುಳಿತುಕೊಳ್ಳಬೇಕು. ಹಾಗೋ ಹೀಗೋ ಒಂದು ತೀರ್ಮಾನ ತೆಗೆದುಕೊಳ್ಳಬೇಕು. ತೀರ್ಮಾನ ತೆಗೆದುಕೊಳ್ಳುವಾಗ ತಾನು ಪ್ರಾಮಾಣಿ ಕನಾಗಿದ್ದೆ ಎಂದು ಅನಿಸಿದರೆ ಸಾಕು. ಪರಿಣಾಮಗಳ ಕಡೆಗೆ ಯೋಚಿಸುತ್ತ ಕುಳಿತರೆ ಯಾವ ತೀರ್ಮಾನವನ್ನೂ ತೆಗೆದುಕೊಳ್ಳಲು ಆಗುವುದಿಲ್ಲ. ಸಿದ್ದರಾಮಯ್ಯನವರು ತಾವು ತೆಗೆದುಕೊಳ್ಳಬೇಕಾದ ತೀರ್ಮಾನಗಳ ವಿಳಂಬಕ್ಕೆ ಯಾರನ್ನು ದೂರುತ್ತಾರೆ? ಅದಕ್ಕೂ ಅಧಿಕಾರಿಗಳೇ ಕಾರಣವೇ?ಸರ್ಕಾರದ ಆರಂಭದ ವರ್ಷದಲ್ಲಿಯೇ ಯಾವ ಮುಖ್ಯಮಂತ್ರಿಯೂ ಅಧಿಕಾರಿಗಳನ್ನು ದೂರಬಾರದು. ಅವರು ಅಧಿಕಾರಕ್ಕೆ ಬಂದು ಈಗಿನ್ನೂ ಎಂಟು ತಿಂಗಳಷ್ಟೇ ಆಗಿವೆ. ಸಿದ್ದರಾಮಯ್ಯನವರು ತಾವು ಅಂದುಕೊಂಡ ಹಾಗೆ ಇನ್ನೂ ನಾಲ್ಕು ವರ್ಷ ನಾಲ್ಕು ತಿಂಗಳು ಅಧಿಕಾರ ಮಾಡಬೇಕು! ಒಬ್ಬ ಒಳ್ಳೆಯ ಆಡಳಿತಗಾರ ಎಂದು ಅನಿಸಿದ್ದ ಅವರು ಅಧಿಕಾರಿಗಳಿಗೆ ಏನು ಅಡಚಣೆಗಳು ಇವೆ ಎಂದು ಅರ್ಥ ಮಾಡಿಕೊಳ್ಳಬೇಕಿತ್ತು. ಅವುಗಳನ್ನು ಪರಿಹರಿಸಲು ಕ್ರಮಗಳನ್ನೂ ತೆಗೆದುಕೊಳ್ಳಬೇಕಿತ್ತು. ಆಡಳಿತ ಸುಧಾರಣೆ ಎಂದರೆ ಬರೀ ಸಭೆ ಕರೆದು ಅಧಿಕಾರಿಗಳನ್ನು ಬೈಯ್ಯುವುದು ಎಂದು ಅರ್ಥವಲ್ಲ. ಅದು ಮಾಧ್ಯಮಗಳ ಉಪಭೋಗಕ್ಕೆ ಮಾತ್ರ ಇರಬೇಕು. ಹೊರಗಡೆ ಬೈದಂತೆ ಮಾಡಬೇಕು. ಒಳಗಡೆ ಕರೆದು ಬೆನ್ನು ತಟ್ಟಬೇಕು. ಒದ್ದು ಕೆಲಸ ಮಾಡಿಸುತ್ತೇನೆ ಎಂದರೆ ಅಧಿಕಾರಿಗಳು ನಿಯಮಗಳ ಪುಸ್ತಕವನ್ನು ಮುಂದೆ ಇಡುತ್ತಾರೆ. ಕಡತ ವಿಲೇವಾರಿ ಹೇಗೆ ತಡಮಾಡಬೇಕು ಎಂಬುದನ್ನು ಅಧಿಕಾರಿಗಳಿಗೆ ಯಾರೂ ಹೇಳಿಕೊಡಬೇಕಿಲ್ಲ. ಮೂಲತಃ ನೌಕರಶಾಹಿ ಎಂಬುದು ಇಂದು ನಕಾರಾತ್ಮಕ ಶಕ್ತಿ. ರಾಜಕೀಯ ಅಧಿಕಾರಕ್ಕೆ ಇರುವ ‘ತೀರಿಸಬೇಕಾದ ಋಣ’ ನೌಕರಶಾಹಿಗೆ  ಇರುವುದಿಲ್ಲ. ಅಂಥ ‘ಋಣ ಪ್ರಜ್ಞೆ’ ಇರುವ ಅಧಿಕಾರಿಗಳು ಬೆರಳೆಣಿಕೆಯಷ್ಟು ಇರುತ್ತಾರೆ.ಒಂದು ರಾಜಕೀಯ ಪಕ್ಷ ಅಧಿಕಾರಕ್ಕೆ ಬಂದ ಕೂಡಲೇ  ತನ್ನ ಅಭಿವೃದ್ಧಿಯ, ಅಡಳಿತದ ನೋಟ ಏನು ಎಂದು ತನ್ನ ಅಧಿಕಾರಿಗಳಿಗೆ ತಿಳಿಸಿಕೊಡಬೇಕು. ಅದಕ್ಕೆ ತಕ್ಕಂತೆ ಸೂಕ್ತ ಅಧಿಕಾರಿಗಳನ್ನು ಹುಡುಕಿ ಅವರನ್ನು ಆಯಾ ಹುದ್ದೆಗಳಲ್ಲಿ ನೇಮಿಸಬೇಕು. ಈಗಿನ ಸರ್ಕಾರದಿಂದ ಅಂಥ ಒಂದು ಅಭಿವೃದ್ಧಿಯ, ಆಡಳಿತದ ನೋಟದ ಪ್ರದರ್ಶನ ಆಗಿದೆಯೇ? ಆಗಿಲ್ಲವಾದರೆ ಅದಕ್ಕೆ ಯಾರು ಹೊಣೆ? ಈ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಆಯಕಟ್ಟಿನ ಸ್ಥಳದಲ್ಲಿ ಕುಳಿತಿದ್ದ ಭ್ರಷ್ಟ ಅಧಿಕಾರಿಗಳನ್ನು ಅಮುಖ್ಯ ಸ್ಥಳಗಳಿಗೆ ಕಳಿಸಿಕೊಡುವ ಕೆಲಸ ಆಯಿತೇ? ನಾನು ಮೈಸೂರಿನಷ್ಟು ದೂರ ಹೋಗುವುದಿಲ್ಲ. ಬೆಂಗಳೂರಿನಲ್ಲಿಯೇ ಎಷ್ಟೆಲ್ಲ ಆಯಕಟ್ಟಿನ ಜಾಗಗಳಲ್ಲಿ ಪರಮ ಭ್ರಷ್ಟರು ಇನ್ನೂ ಅಧಿಕಾರ ಮಾಡುತ್ತಿಲ್ಲ? ಹಾಗಾದರೆ ಮುಖ್ಯಮಂತ್ರಿಗಳು ಯಾರನ್ನು ದೂರುತ್ತಾರೆ? ಅವರಿಗೆ ಯಾರು ಭ್ರಷ್ಟರು ಎಂದು ಗೊತ್ತಿಲ್ಲವೇ? ಆಡಳಿತದಲ್ಲಿ ಕ್ರಿಯೆಗಳು ಎಷ್ಟು ಮುಖ್ಯವೋ ಸಂದೇಶಗಳೂ ಅಷ್ಟೇ ಮುಖ್ಯ. ಹಿಂದಿನ ಸರ್ಕಾರಕ್ಕೂ ಈಗಿನ ಸರ್ಕಾರಕ್ಕೂ ಏನೂ ವ್ಯತ್ಯಾಸವೇ ಇಲ್ಲ ಎಂದು ಅನಿಸಿದರೆ ಅಧಿಕಾರಿಗಳು ಮೈಮೇಲೆ ಎಳೆದುಕೊಂಡು ಏಕೆ ಕೆಲಸ ಮಾಡುತ್ತಾರೆ?ಮೊದಲು ಸಚಿವರಿಗೆ ಇದು ನನ್ನ ಸರ್ಕಾರ ಎಂದು ಅನಿಸಬೇಕು. ಅವರಿಗೆ ಜತೆಗೂಡಿ ನಿಲ್ಲುವಂಥ ಅಧಿಕಾರಿಗಳು ಇರಬೇಕು. ಸಚಿವರ ಮುಂದೆ ಸಾಧಿಸಬೇಕಾದ ಒಂದು ಗುರಿ ಎಂದು ಇರಬೇಕು. ಆ ಗುರಿಯನ್ನು ಸಾಧಿಸಲು ಅಧಿಕಾರಿಗಳು ಹೆಗಲು ಕೊಡಬೇಕು. ಸಿದ್ದರಾಮಯ್ಯನವರ ಸಂಪುಟದಲ್ಲಿನ ಎಷ್ಟು ಮಂದಿ ಸಚಿವರ ಮುಂದೆ ಇಂಥ ಒಂದು ಗುರಿ ಇದೆ? ಇಲ್ಲದಿದ್ದರೆ ಏಕೆ ಇಲ್ಲ? ಈ ಸರ್ಕಾರಕ್ಕೆ ಒಳ್ಳೆಯ ಹೆಸರು ಬರುವುದು ಕೆಲವು ಸಚಿವರಿಗೆ ಬೇಡವಾಗಿದೆಯೇ? ಹಾಗೆ ಯೋಚಿಸುವವರು ಇಲ್ಲ ಎಂದು ಸಿದ್ದರಾಮಯ್ಯ ಎದೆ ಮುಟ್ಟಿ ಹೇಳಬಲ್ಲರೇ? ಈ ಸರ್ಕಾರಕ್ಕೆ ಒಳ್ಳೆಯ ಹೆಸರು ಬರುವುದನ್ನು ಸಹಿಸದವರು ಪಕ್ಷದಲ್ಲಿಯೂ ಇದ್ದಾರೆ. ಈಚಿನ ವರ್ಷಗಳಲ್ಲಿ ಇಂಥ ವಿಪರ್ಯಾಸವನ್ನು ಎದುರಿಸಿದ ಮೊದಲ ಸರ್ಕಾರ ಇದು ಎಂದು ಅನಿಸುತ್ತದೆ. ಅದಕ್ಕೆ ಸಿದ್ದರಾಮಯ್ಯನವರೂ ಕಾರಣರಾಗಿರಬಹುದು.ಅವರು ಅಧಿಕಾರ ಹಂಚಿಕೆ ಮಾಡುವಾಗ ತಪ್ಪು ಮಾಡಿದ್ದಾರೆ. ತಮಗೆ ಬೇಕಾದವರಿಗೆ ಹೆಚ್ಚು ಅಧಿಕಾರ ಕೊಟ್ಟಿದ್ದಾರೆ ಮತ್ತು ಮುಂಗೈ ಜೋರು ಮಾಡುವವರಿಗೆ ಹೆಚ್ಚು ಅಧಿಕಾರ ಕೊಟ್ಟಿದ್ದಾರೆ. ರೋಷನ್ ಬೇಗ್‌ ಅವರಿಗೆ ವಾರ್ತಾ ಖಾತೆ ಸಾಕೇ?

ಎಚ್‌.ಸಿ.ಮಹದೇವಪ್ಪನವರಿಗಿಂತ ಬೇಗ್‌ ಯಾವುದರಲ್ಲಿ ಕಡಿಮೆ? ಹೋಗಲಿ ಆಂಜನೇಯ ಅವರಿಗಿಂತ ಯಾವುದರಲ್ಲಿ ಕಡಿಮೆ? ಮಹದೇವಪ್ಪ ಕರ್ನಾಟಕದಲ್ಲಿನ ಎಲ್ಲ ರಸ್ತೆಗಳನ್ನು ದುರಸ್ತಿ ಮಾಡಿ ಬಿಟ್ಟಿದ್ದಾರೆಯೇ? ಮೈಸೂರು ಜಿಲ್ಲೆಯಲ್ಲಿಯೇ ಎಲ್ಲ ಪ್ರಮುಖ ಖಾತೆಗಳು ಇರಬೇಕೇ? ಅವರೆಲ್ಲ ಸಮರ್ಥವಾಗಿ ಕೆಲಸ ಮಾಡದೇ ಇದ್ದರೆ ಯಾರಿಗೆ ಕೆಟ್ಟ ಹೆಸರು ಬರುತ್ತದೆ?ನಾಯಕನಾದವನು ಉದಾರವಾಗಿ ಇರಬೇಕು. ಎಲ್ಲರ ಜತೆಗೆ ಸಾಧ್ಯವಾದಷ್ಟು ಸಮಾನವಾಗಿ ನಡೆದುಕೊಳ್ಳಬೇಕು. ನೆರವು ಕೇಳಲು ಬಂದ ಶಾಸಕರಿಗೆ ನಿಯಮ ಹೇಳಿ ಕಳಿಸಲು ಸಿದ್ದರಾಮಯ್ಯನವರೇ ಏಕೆ ಮುಖ್ಯಮಂತ್ರಿ ಆಗಿರಬೇಕಿತ್ತು? ಸಹಾಯ ಮಾಡಬೇಕು ಎಂದರೆ ಅನೇಕ ಸಾರಿ ನಿಯಮಗಳನ್ನು ಉಲ್ಲಂಘಿಸ ಬೇಕಾಗುತ್ತದೆ. ಈಗಲೇನು ಈ ಸರ್ಕಾರ ನಿಯಮದ ಪುಸ್ತಕವನ್ನು ಇಟ್ಟುಕೊಂಡೇ ಕೆಲಸ ಮಾಡಿದೆಯೇ? ಯಾರಾದರೂ ಹಾಗೆ ಮಾಡಲು ಸಾಧ್ಯವೇ? ಇದು ಸಿದ್ದರಾಮಯ್ಯ ಅವರಿಗೆ ಎಷ್ಟು ಬೇಗ ಅರ್ಥವಾಗುತ್ತದೋ ಅಷ್ಟು ಬೇಗ ಅವರಿಗೆ ಮತ್ತು ಅವರ ಸರ್ಕಾರಕ್ಕೆ ಒಳ್ಳೆಯದು. ಅಧಿಕಾರದಲ್ಲಿ ನಾವು ಎಷ್ಟು ದಿನ ಇರುತ್ತೇವೆ ಎಂಬುದು ಮುಖ್ಯವಲ್ಲ. ಅಲ್ಲಿ ಇದ್ದು ಏನು ಮಾಡಿದೆವು ಎಂಬುದು ಮುಖ್ಯ. ಎಚ್‌.ಎಸ್.ದೊರೆಸ್ವಾಮಿಯವರು, ‘ಈ ಸರ್ಕಾರಕ್ಕೆ ಮುಪ್ಪು ಅಡರಿದೆ’ ಎಂದಿದ್ದಾರೆ; ಯು.ಆರ್‌.ಅನಂತಮೂರ್ತಿಯವರು, ‘ಈ ಸರ್ಕಾರದ ವರ್ಚಸ್ಸು ಮಸಳಿಸುತ್ತಿದೆ’ ಎಂದಿದ್ದಾರೆ. ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಇರುವ ಈ ದಿನಗಳಲ್ಲಿ ಇವು ಒಳ್ಳೆಯ ಮಾತುಗಳೇನೂ ಅಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.