ಮಂಗಳವಾರ, ಜೂನ್ 15, 2021
23 °C

ಸೈಬರ್ ಲೋಕದ ಪ್ರಭಾವಿ ಅಭ್ಯರ್ಥಿಗಳು

ಎನ್.ಎ.ಎಂ. ಇಸ್ಮಾಯಿಲ್ Updated:

ಅಕ್ಷರ ಗಾತ್ರ : | |

ಕಳೆದ ಒಂದು ತಿಂಗಳಿಂದ ಬೆಂಗಳೂರಿನಲ್ಲಿ ಕುಳಿತು ಯಾವ ಅಂತರ್ಜಾಲ ತಾಣಕ್ಕೆ ಹೋದರೂ ಎರಡು ಜಾಹೀರಾತುಗಳು ಕಾಣಿಸಿ­ಕೊಳ್ಳುತ್ತವೆ. ಒಂದು, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ವಿಶಿಷ್ಟ ಗುರುತು ಪ್ರಾಧಿಕಾರ (ಆಧಾರ್) ಮುಖ್ಯಸ್ಥರಾಗಿದ್ದ ನಂದನ್ ನಿಲೇಕಣಿ ಅವರದ್ದು. ಮತ್ತೊಂದು ಬಿಜೆಪಿ ಸಂಸದ ಅನಂತಕುಮಾರ್ ಅವರದ್ದು. ಚುನಾವಣಾ ನೀತಿ ಸಂಹಿತೆ ಜಾರಿ­ಯಾದ ಮೇಲೆ ಇವುಗಳ ಪುನರಾ­ವರ್ತನೆಯ ಪ್ರಮಾಣ ಕಡಿಮೆಯಾಗಿದೆ.ಒಂದೊಂದು ರಿಫ್ರೆಶ್‌ನಲ್ಲಿಯೂ ಎಲ್ಲಾ ವೆಬ್‌ಸೈಟ್‌ಗಳ, ವೆಬ್‌ಪುಟಗಳ ಓದುಗನ ಕಣ್ಣು ಬೀಳಲೇಬೇಕಾದ ಸ್ಥಳದಲ್ಲಿ ಕಾಣಿಸಿಕೊಳ್ಳುತ್ತಿದ್ದ ಈ ಜಾಹೀರಾತುಗಳು ಎರಡು ವಿಷಯಗಳನ್ನು ಹೇಳುತ್ತಿದ್ದವು. ಮೊದಲನೆಯದ್ದು 2014ರದ್ದು ನಿಜವಾದ ವೆಬ್ 2.0 ಚುನಾವಣೆ. ಎರಡನೆ­ಯದ್ದು ನಂದನ್ ನಿಲೇಕಣಿ ಮತ್ತು ಅನಂತ­ಕುಮಾರ್ ಇಬ್ಬರೂ ಗುರಿಯಿಟ್ಟ ಮತದಾರರ ವರ್ಗ ಒಂದೇ.ಭಾರತದ ರಾಜಕೀಯ ಸಂವಹನಕ್ಕೆ ಅದ­ರಲ್ಲೂ ಮುಖ್ಯವಾಗಿ ಚುನಾವಣಾ ಪ್ರಚಾರಕ್ಕೆ ಇಂಟರ್‌ನೆಟ್ ಪ್ರವೇಶಿಸಿದ್ದು 2004ರಲ್ಲಿ. ಅದಕ್ಕೂ ಮೊದಲು ಕೆಲವು ಪಕ್ಷಗಳಿಗೆ ವೆಬ್‌­ಸೈಟ್‌ಗಳು ಇದ್ದವಾ­ದರೂ ಮತದಾರರನ್ನು ಸೆಳೆ­ಯುವುದಕ್ಕೆ ಇದನ್ನೊಂದು ಮಾರ್ಗ ಅಂತ ಯಾರೂ ಪರಿಗಣಿಸಿದಂತಿರಲಿಲ್ಲ. 2004ರಲ್ಲಿ ಬಿಜೆಪಿ ತನ್ನ ‘ಭಾರತ ಪ್ರಕಾಶಿಸುತ್ತಿದೆ’ ಪ್ರಚಾ­ರಾಂದೋಲನವನ್ನು ಇಂಟರ್‌­ನೆಟ್‌ಗೂ ವಿಸ್ತರಿ­ಸಿತು. ಆಗಲೂ ಇದು ಗಮನಸೆಳೆಯುವಂಥ ಪ್ರಮಾಣದಲ್ಲಿರಲಿಲ್ಲ.ಅದಕ್ಕೆ ನಮ್ಮ ಇಂಟರ್‌ನೆಟ್ ಬಳಕೆದಾರರ ಸಂಖ್ಯೆ ಕಡಿಮೆ ಇದ್ದದ್ದೂ ಒಂದು ಕಾರಣ­ವಾಗಿರಬಹುದು. 2009ರ ಲೋಕಸಭಾ ಚುನಾ­ವಣೆಗೆ ವೆಬ್ 2.0 ತಂತ್ರಜ್ಞಾನ ಬ್ಲಾಗ್ ಮತ್ತು ವೆಬ್‌ಸೈಟ್‌ಗಳ ಬಳಕೆ ಹೆಚ್ಚುವುದರಲ್ಲಿ ಕಾಣಿಸಿ­ಕೊಂಡಿತು. ಆಗ ಭಾವಿ ಪ್ರಧಾನಿ ಎಂದು ಬಿಂಬಿತ­ವಾಗಿದ್ದ ಎಲ್.ಕೆ.ಅಡ್ವಾಣಿ ಬ್ಲಾಗಿಂಗ್ ಮೂಲಕ ತಮ್ಮ ವಿಚಾರಗಳನ್ನು ಹಂಚಿಕೊಳ್ಳಲು ಪ್ರಯತ್ನಿಸಿ­ದರು. ಬಹುಶಃ ಈಗಲೂ ನಿಯಮಿತವಾಗಿ ಬ್ಲಾಗ್ ಮಾಡುವ ಕೆಲವೇ ರಾಜಕಾರಣಿಗಳಲ್ಲಿ ಅವರೂ ಒಬ್ಬರು.

ಸಾಮಾಜಿಕ ಜಾಲ ತಾಣಗಳ ಕಟಕಿ ಪ್ರಯೋಗಕ್ಕೆ ಬಲಿಪಶುವಾದ ಮೊದಲ ರಾಜಕಾರಣಿಯೂ ಬಹುಶಃ ಅಡ್ವಾಣಿಯವರೇ ಇರಬಹುದೇನೋ. 2009ರಲ್ಲಿ ಎನ್‌ಡಿಎ ಸೋಲುಂಡ ಮೇಲೆ ಅವರನ್ನು Former future Prime Minister of India ಎಂದು ಕೆಲ ಬ್ಲಾಗಿಗರು ಸಂಬೋಧಿಸುತ್ತಿದ್ದರು. ಈಗ ಸಾಮಾಜಿಕ ಜಾಲ ತಾಣಗಳಲ್ಲಿ ಈ ಕಟಕಿಯ ಖ್ಯಾತಿಯನ್ನು ಮೋದಿ, ರಾಹುಲ್ ಮತ್ತು ಕೇಜ್ರಿವಾಲ್ ಕ್ರಮ­ವಾಗಿ ‘ಪೇಕು’, ‘ಪಪ್ಪು’ ಮತ್ತು ‘ಕ್ರೇಜಿವಾಲ್’ ಎಂಬ ಅಡ್ಡಹೆಸರುಗಳಲ್ಲಿ ಹಂಚಿಕೊಂಡಿದ್ದಾರೆ.ಕಳೆದ ಹತ್ತು ವರ್ಷಗಳಲ್ಲಿ ಭಾರತದಲ್ಲಿ ಇಂಟರ್‌ನೆಟ್ ಬಳಕೆ­ದಾರರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚಿತು. 2004ರಲ್ಲಿ ಕೇವಲ ನಾಲ್ಕು ಕೋಟಿ ಇದ್ದ ಇಂಟರ್‌ನೆಟ್ ಬಳಕೆದಾ­ರರ ಸಂಖ್ಯೆ ಈಗ 20.5 ಕೋಟಿಗೆ ಏರಿದೆ ಎಂದು ಇಂಟರ್‌ನೆಟ್ ಅಂಡ್ ಮೊಬೈಲ್ ಅಸೋಸಿ­ಯೇಷನ್ ಆಫ್ ಇಂಡಿಯಾ ಹೇಳುತ್ತಿದೆ. ಹಾಗೆಯೇ ಈ ವರ್ಷದ ಮಾರ್ಚ್ ಅಂತ್ಯದ ಹೊತ್ತಿಗೆ ಮೊಬೈಲ್‌ನಲ್ಲಿ ಇಂಟರ್ ನೆಟ್ ಬಳಸುವವರ ಸಂಖ್ಯೆಯೇ 15.5 ಕೋಟಿಯ­ಷ್ಟಿರುತ್ತದೆ ಎಂದು ಊಹಿಸಲಾಗುತ್ತಿದೆ.

ಕಳೆದ ವರ್ಷದ ಅಂತ್ಯದ ವೇಳೆಗೆ ಇದು 10.5 ಕೋಟಿಯಷ್ಟಿತ್ತು. ಇದರಲ್ಲಿ 8.5ಕೋಟಿ ಬಳಕೆ­ದಾರರು ನಗರ ಪ್ರದೇಶಗಳಲ್ಲಿದ್ದರು. ಬಹುಶಃ ಈ ಅಂಕಿ–ಅಂಶಗಳೇ ಈ ಬಾರಿಯ ಚುನಾ­ವ­ಣೆ­ಯಲ್ಲಿ ವೆಬ್ 2.0 ತಂತ್ರಜ್ಞಾನ ಭಾರೀ ಪ್ರಮಾ­ಣದಲ್ಲಿ ರಾಜಕೀಯ ಸಂವಹನಕ್ಕೆ ಬಳಕೆಯಾಗು­ತ್ತಿರುವುದರ ಕಾರಣವನ್ನೂ ಹೇಳುತ್ತಿದೆ.ಕಳೆದ ಐದು ವರ್ಷಗಳ ಅವಧಿಯಲ್ಲಿ ಇಂಟರ್‌ನೆಟ್ ಒಂದು ರಾಜಕೀಯ ಸಂವಹನದ ಮಾಧ್ಯಮವಾಗಿ ಬದಲಾದುದಕ್ಕೆ ಹಲವು ಉದಾಹರಣೆಗಳಿವೆ. ಅಣ್ಣಾ ಹಜಾರೆ ನೇತೃತ್ವದ ‘ಭ್ರಷ್ಟಾಚಾರದ ವಿರುದ್ಧ ಭಾರತ’ ಆಂದೋಲನ, ‘ನರೇಂದ್ರ ಮೋದಿ ಸಾಧಿತ ಗುಜರಾತ್ ಅಭಿವೃದ್ಧಿ ಕಥನ’ಗಳು ಸಾಮಾಜಿಕ ಜಾಲತಾಣ­ಗಳಿಂದಾಗಿಯೇ ಹೆಚ್ಚು ಪ್ರಚಾರಕ್ಕೆ ಬಂದವು. ಹಾಗೆಯೇ ರಾಡಿಯಾ ಟೇಪ್ ಹಗರಣ ಹೊರಬರಲು ಕಾರಣವಾದದ್ದೂ ಇದೆ ಸಾಮಾ­ಜಿಕ ಜಾಲತಾಣಗಳು.

ಇವು ಎಷ್ಟರ ಮಟ್ಟಿಗೆ ಶಕ್ತವಾಗಿದ್ದವೆಂದರೆ ಈಗ ‘ಪಾರಂಪರಿಕ ಮಾಧ್ಯಮ’ಗಳಾಗಿಬಿಟ್ಟಿರುವ ಮುದ್ರಣ ಮತ್ತು ದೃಶ್ಯ ಮಾಧ್ಯಮಗಳ ಸುದ್ದಿಗಾರಿಕೆಯ ವಿಧಾನದ ಮೇಲೂ ಪರಿಣಾಮ ಬೀರುತ್ತಿವೆ. ಈ ಎಲ್ಲಾ ಬದಲಾವಣೆಗಳಿಗೆ ಕಾರಣವಾಗಿರುವ ವರ್ಗ ಈಗ ಒಂದು ದೊಡ್ಡ ವೋಟ್ ಬ್ಯಾಂಕ್ ಕೂಡಾ ಹೌದು. ಅತ್ಯಂತ ಹೆಚ್ಚು ಇಂಟರ್‌ನೆಟ್ ಬಳಕೆದಾರ ನಗರವಾಗಿರುವ ಬೆಂಗಳೂರಿನಲ್ಲಿ ಚುನಾವಣೆಗೆ ಸ್ಪರ್ಧಿಸುವ ಯಾರೇ ಆದರೂ ಈ ವರ್ಗವನ್ನು ಆಕರ್ಷಿಸಲು ಪ್ರಯತ್ನಿಸುವುದು ಸಹಜ ಎಂದು ಭಾವಿಸಬಹುದೇ?ಈಗ ನಮ್ಮ ಕಣ್ಣ ಮುಂದಿರುವ ವಾತಾವರಣ­ವನ್ನು ನೋಡಿದರೆ ಈ ಪ್ರಶ್ನೆಗೆ ನೇತ್ಯಾತ್ಮಕವಾ­ಗಿಯಷ್ಟೇ ಉತ್ತರಿಸಲು ಸಾಧ್ಯ. ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಬರುವ ಉಳಿದೆರಡು ಕ್ಷೇತ್ರ­ಗಳಲ್ಲಾಗಲೀ ಹಾಗೆಯೇ  ಇಂಟರ್‌ನೆಟ್ ಬಳ­ಕೆಯ ಮಟ್ಟಿಗೆ ಬೆಂಗಳೂರು ದಕ್ಷಿಣದಂಥದ್ದೇ ವಾತಾವರಣ­ವನ್ನು ಹೊಂದಿರುವ ಮೈಸೂರು ಮತ್ತು ಮಂಗಳೂರುಗಳಲ್ಲಿ ಇಂಥದ್ದೊಂದು ವೆಬ್ ಪ್ರಚಾರದ ಹುಮ್ಮಸ್ಸು ಕಾಣಿಸುತ್ತಿಲ್ಲ. ಇದಕ್ಕೆ ಟಿಕೆಟ್ ಹಂಚಿಕೆಯೂ ಒಂದು ಕಾರಣ­ವಿರಬಹುದು. ಆದರೆ ಅದಕ್ಕಿಂತ ಮುಖ್ಯವಾದ ಸಾಮಾಜಿಕ–ರಾಜಕೀಯ ಕಾರಣಗಳಿವೆ.

ಭಾರತದ ಮಟ್ಟಿಗೆ ನವ ಮಾಧ್ಯಮ ಒಂದು ರೀತಿಯಲ್ಲಿ  ಸಂಕುಚಿತ ಬಲಪಂಥೀಯ ರಾಷ್ಟ್ರೀ­ಯ­ತೆಯ ಬಹುಮುಖ್ಯ ವಾಹಕ.

ಈ ಮಾಧ್ಯ­ಮದ ಸಹಜ ಬೆಳವಣಿಗೆಯ ಹಾದಿಯಲ್ಲಿಯೇ ಇಂಥದ್ದೊಂದು ರಾಜಕೀಯ ಚಿಂತನೆ ಅದರೊ­ಳಕ್ಕೆ ಸೇರಿಕೊಂಡುಬಿಟ್ಟಿದೆ. ಇದಕ್ಕೆ ಮುಖ್ಯಕಾರಣ ಈ ಮಾಧ್ಯಮ ಮೊದಲು ಬಳಕೆಗೆ ಬಂದ ಚಾರಿತ್ರಿಕ ಕಾಲಘಟ್ಟ. ಈ ಮಾಧ್ಯಮದ ಆರಂಭಿಕ ಬಳಕೆದಾರರೆಲ್ಲಾ ಆರ್ಥಿಕ ಉದಾರೀಕ­ರಣದ ಫಲಾನುಭವಿಗಳು. ದೇಶಬಿಟ್ಟು ಹೊರ­ಗಿದ್ದು ಒಂದು ಬಗೆಯ ಅನ್ಯತೆಯನ್ನು ಎದುರಿ­ಸುತ್ತಿದ್ದ ಅನಿವಾಸಿ ಭಾರತೀಯರು. ಈ ವರ್ಗ­ದಲ್ಲಿ ಜಾತಿ ಶ್ರೇಣಿಯ ಉನ್ನತ ಹಂತದಿಂದ ಬಂದ­ವರೇ ಹೆಚ್ಚಿದ್ದರು.ಕಾಂಗ್ರೆಸ್‌ನ ‘ಸಾಮಾಜಿಕ ನ್ಯಾಯ’ದ ರಾಜಕಾರಣದಲ್ಲಿ ತಾವು ಕಳೆದು­ಕೊಂಡಿದ್ದೇವೆ ಅದನ್ನು ‘ಅರ್ಹರಲ್ಲದ’ ಜಾತಿ ಮತ್ತು ಧರ್ಮಗಳಿಗೆ ಸೇರಿದವರು ಪಡೆದು­ಕೊಂಡಿದ್ದಾರೆ ಎಂಬ ಮನೋಭಾವ ಇವರಿಗಿತ್ತು. ಆರ್ಥಿಕ ಉದಾರೀಕರಣದ ಮೂಲಕ ಸಮಾಜ­ವಾದಿ ಆರ್ಥಿಕತೆ ಇಲ್ಲವಾದುದರಿಂದಲೇ ತಮ­ಗೊಂದು ಉಜ್ವಲ ಭವಿಷ್ಯ ತೆರೆದುಕೊಂಡಿತು ಎಂದು ಈ ವರ್ಗ ಭಾವಿಸಿತ್ತು. ಸಹಜವಾಗಿಯೇ ಇವರ ಅಭದ್ರತೆಗಳು ಮತ್ತು ಮನೋಭಾವಗಳೇ ಅವರ ಕೈಗೆ ದೊರೆತ ಮಾಧ್ಯಮದಲ್ಲಿಯೂ ಪ್ರತಿಬಿಂಬಿಸಿತು. ಇದನ್ನೇ ತಮ್ಮ ರಾಜಕೀಯ ವಿಚಾರಧಾರೆಯಾಗಿ ಪ್ರತಿಪಾದಿಸುತ್ತಿದ್ದ ರಾಜಕೀಯ ಪಕ್ಷ ಮತ್ತು ಸಂಘಟನೆಗಳಿಗೆ ಈ ಮಾಧ್ಯಮ ಬಹುದೊಡ್ಡ ಪ್ರಚಾರದ ಸಾಧನವಾಯಿತು.ಕಳೆದ ಹತ್ತು ವರ್ಷಗಳಲ್ಲಿ ಪರಿಸ್ಥಿತಿ ಮತ್ತಷ್ಟು ಬದಲಾಗಿದೆ. ಮೊದಲಿಗೆ ಇಲ್ಲಿ ಸಂಕುಚಿತ ಬಲಪಂಥೀಯ ರಾಷ್ಟ್ರೀಯತೆಯ ಪ್ರತಿಪಾದನೆ­ಯೊಂದೇ ಸಾಕಾಗಿತ್ತು. ಅದನ್ನು ಪ್ರತಿಪಾದಿಸಿ ಅಧಿಕಾರಕ್ಕೆ ಬಂದವರು ಕ್ರಮೇಣ ‘ಉಳಿದ ಭ್ರಷ್ಟರ’ ಹಾದಿಯನ್ನೇ ತುಳಿದಾಗ ನವ ಮಾಧ್ಯಮ ಬೆಂಬಲಿಗರಲ್ಲೂ  ಭ್ರಮನಿರಸನ ಉಂಟಾಯಿತು. ಉಗ್ರ ರಾಷ್ಟ್ರೀಯತೆಯ ಮಾತು­ಗ­ಳೆಲ್ಲವೂ ಅಧಿಕಾರ ಸಿಕ್ಕಾಗ ಕರಗಿ ಹೋಗುತ್ತವೆ ಎಂದು ತಿಳಿದಾಗ ಸಹಜವಾಗಿಯೇ ಪರ್ಯಾ­ಯಗಳ ಹುಡುಕಾಟ ಆರಂಭವಾಗುತ್ತದೆ. ಇದೇ ಹೊತ್ತಿಗೆ ಸರಿಯಾಗಿ ನವ ಮಾಧ್ಯಮವನ್ನು ಬಳಸುವವರ ಪ್ರಮಾಣ ಹೆಚ್ಚಿತು. ಭಿನ್ನ ಚಿಂತನಾ ವಿಧಾನಗಳೂ ಸ್ವಲ್ಪ ಮಟ್ಟಿಗೆ ಇದರೊಳಕ್ಕೆ ಪ್ರವೇಶ ಪಡೆದವು.ಈ ಪ್ರಕ್ರಿಯೆಯಲ್ಲಿ ಅದರೊಳಗಿದ್ದ ಪ್ರಭಾವೀ ರಾಜಕೀಯ ಚಿಂತನಾ ವಿಧಾನವೂ ಸ್ವಲ್ಪ ಮಟ್ಟಿಗೆ ಬಿರುಕುಬಿಟ್ಟಿತು. ಈ ಪ್ರಕ್ರಿಯೆಯ ಲಾಭವನ್ನು ಪಡೆದುಕೊಂಡದ್ದು ‘ಭ್ರಷ್ಟಾಚಾರದ ವಿರುದ್ಧ ಭಾರತ’ ಆಂದೋಲನ. ಅದರ ಮುಂದುವರಿದ ಭಾಗವಾಗಿ ಆಮ್ ಆದ್ಮಿ ಪಾರ್ಟಿ. ಸುಮಾರಾಗಿ ಇದೇ ಹೊತ್ತಿಗೆ ‘ನಮೋ ಅಭಿವೃದ್ಧಿ ಕಥನ’ದ ಪ್ರಚಾರವೂ ಆರಂಭವಾ­ಯಿತು. ಅದೂ ಕೂಡಾ ನವ ಮಾಧ್ಯಮದಲ್ಲಿ ಬಹಳ ಪ್ರಬಲ. ‘ನಮೋ’ ಪ್ರಯೋಗದಲ್ಲಿ ಸಂಕುಚಿತ ಬಲಪಂಥೀಯ ರಾಷ್ಟ್ರೀಯತೆಗೆ ‘ಪ್ರಬಲ ನಾಯಕ’ನನ್ನು ಕಸಿ ಮಾಡಲಾಗಿದೆ.

ಆದರೆ ಇಲ್ಲಿ ಒಂದು ರಾಜಕೀಯ ಚಿಂತನಾ ವಿಧಾನಕ್ಕಿಂತ ಹೆಚ್ಚಾಗಿ ವ್ಯಕ್ತಿಯೇ ಮುಖ್ಯವಾ­ಗುವ ಚೋದ್ಯವಿದೆ. ನರೇಂದ್ರ ಮೋದಿ ಬೆಂಬಲಿಗರೆಲ್ಲಾ ಬಿಜೆಪಿಯನ್ನು ಬೆಂಬಲಿಸಬೇ­ಕಾಗಿಲ್ಲ ಎಂಬುದು ಅನೇಕ ನರೇಂದ್ರ ಮೋದಿ ಅಭಿಮಾನಿಗಳ ಫೇಸ್‌ಬುಕ್ ಸ್ಟೇಟಸ್‌ಗಳು ಸೂಚಿಸುತ್ತಲೇ ಇರುತ್ತವೆ. ಇಲ್ಲಿ ‘ಬಲಿಷ್ಠ ಭಾರತಕ್ಕಾಗಿ ಮೋದಿ’ಯೇ ಹೊರತು ‘ಬಲಿಷ್ಠ ಭಾರತಕ್ಕಾಗಿ ಬಿಜೆಪಿ’ ಅಥವಾ ‘ಎನ್‌ಡಿಎ’ ಅಲ್ಲ.

ಬಿಜೆಪಿಯ ಆನ್‌ಲೈನ್ ಪ್ರಚಾರ ತಂತ್ರಗಳಲ್ಲಿ ಕಾಣಿಸುವ ವೃತ್ತಿಪರತೆ ಕಾಂಗ್ರೆಸ್‌ ಅಥವಾ ಇತರ ಯಾವುದೇ ಪಕ್ಷಗಳ ಪ್ರಚಾರದಲ್ಲಿ ಕಾಣಿಸುವು­ದಿಲ್ಲ.

ಕಾಂಗ್ರೆಸ್‌ನಲ್ಲಿ ಇಂಥದ್ದೊಂದು ವೃತ್ತಿಪರತೆ ಕಾಣಿಸಿಕೊಂಡದ್ದು ನಂದನ್‌ ನಿಲೇಕಣಿಯವರ ವೆಬ್ ಪ್ರಚಾರದಲ್ಲಿ ಕಾಂಗ್ರೆಸ್‌ನಲ್ಲಿದ್ದಾರೆ ಎಂಬು­ದನ್ನು ಹೊರತು ಪಡಿಸಿದರೆ ನವ ಮಾಧ್ಯಮ ವರ್ಗವನ್ನು ಆಕರ್ಷಿಸಲು ಬೇಕಿರುವ ಎಲ್ಲಾ ಅರ್ಹತೆಗಳೂ ನಂದನ್ ನಿಲೇಕಣಿಯ­ವರಿಗಿದೆ. ಇದನ್ನೇ ತಮ್ಮ ಬಲವನ್ನಾಗಿಸಿಕೊಂಡು ತಮ್ಮ ನವ ಮಾಧ್ಯಮ ಪ್ರಚಾರಾಂದೋ­ಲನವನ್ನು ಆರಂಭಿಸಿದಂತೆ ಕಾಣಿಸುತ್ತದೆ.ಐ.ಟಿ. ಉದ್ಯಮಿಯಾಗಿ ಗಳಿಸಿದ ಯಶಸ್ಸು, ಬೆಂಗಳೂರು ಅಜೆಂಡಾ ಟಾಸ್ಕ್ ಫೋರ್ಸ್‌ಗಾಗಿ ಮಾಡಿದ ಕೆಲಸ, ಆಧಾರ್ ಮುಖ್ಯಸ್ಥನಾಗಿ ಮಾಡಿದ ಕೆಲಸಗಳನ್ನೆಲ್ಲಾ  ನಂದನ್ ನಿಲೇಕಣಿ ತಮ್ಮ ಸಾಧನೆಗಳೆಂದು ಹೇಳುತ್ತಿದ್ದಾರೆ. ಇವೆ­ಲ್ಲವೂ ನವ ಮಾಧ್ಯಮದ ಮೂಲಕ ಪ್ರಭಾವಿ­ಸಲು ಸಾಧ್ಯವಿರುವ ವರ್ಗಕ್ಕೆ ಇಷ್ಟವಾಗುವ ‘ಸಾಧನೆ’ಗಳೇ. ಬಹುಶಃ ಕರ್ನಾಟಕದ ಬೇರೆಲ್ಲೂ ಕಾಣದ ಬಿರುಸಿನ ವೆಬ್ ಪ್ರಚಾರ ತಂತ್ರ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಕಾಣಿಸುವುದಕ್ಕೂ ಇದೇ ಕಾರಣ.ಉಳಿದೆಡೆ  ನವ ಮಾಧ್ಯಮ ನೀಡುವುದು ‘ಬಲಿಷ್ಠ ಭಾರತ’, ‘ಭಾರತ ನಿರ್ಮಾಣ’ ಮತ್ತು ‘ಭ್ರಷ್ಟಾಚಾರ ಮುಕ್ತ ಭಾರತ’ಗಳ ಆಯ್ಕೆಯನ್ನು ಮಾತ್ರ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.