ಶನಿವಾರ, ಜೂನ್ 19, 2021
21 °C

ಸ್ನೇಹದ ಫಲ

ಗುರುರಾಜ ಕರ್ಜಗಿ Updated:

ಅಕ್ಷರ ಗಾತ್ರ : | |

ವಾರಾಣಸಿಯ ಗಂಗಾನದಿಯ ತೀರ­ದಲ್ಲಿ ನೂರಾರು ಉಡಗಳು ವಾಸವಾ­ಗಿದ್ದವು. ಈ ಉಡಗಳು ತಮ್ಮ ಬಿಗಿ­ಯಾದ ಹಿಡಿತಕ್ಕೆ ಪ್ರಸಿದ್ಧವಾದವು. ಮರ­, ಕಟ್ಟಡ ಏರುವಾಗ ಅವು ಬಿಗಿಯಾಗಿ ಹಿಡಿದರೆ ಅದನ್ನು ಬಿಡಿಸುವುದು ಬಲು ಕಷ್ಟ. ನದಿ ತೀರದಲ್ಲಿ ಆ ಮಿದುವಾದ ಮಣ್ಣಿನಲ್ಲಿ ನೂರಾರು ಬಿಲಗಳನ್ನು ಮಾಡಿ­ಕೊಂಡು ಉಡಗಳು ಸುಖ­ವಾಗಿದ್ದವು.ಅವುಗಳಿಗೊಬ್ಬ ರಾಜ. ರಾಜನಿಗೊಬ್ಬ ಮಗ. ಅದರ ಮೇಲೆ ರಾಜನಿಗೆ ಅಪಾರವಾದ ಪ್ರೀತಿ. ಪ್ರೀತಿ ಹೆಚ್ಚಾದಷ್ಟು ಮಗನ ಹಟದ ಸ್ವಭಾವ ಬಲಿಯುತ್ತಿತ್ತು. ಏನಾದರೂ ಮಾಡ­ಬೇಡವೆಂದು ಹೇಳಿದರೆ ಹಟದಿಂದ ಅದನ್ನೇ ಮಾಡುತ್ತಿತ್ತು. ಅದು ಹೇಗೋ ಈ ಉಡದ ರಾಜನ ಮಗನಿಗೆ ಒಂದು ಗೋಸುಂಬೆಯ ಸ್ನೇಹವಾಯಿತು, ಗೋಸುಂಬೆ ಬಲು ಚಾಣಾಕ್ಷ ಪ್ರಾಣಿ. ಪ್ರಸಂಗ ಬಂದಂತೆ ಬಣ್ಣ ಬದಲಿಸುವುದು ಅದಕ್ಕೆ ಅತ್ಯಂತ ಸುಲಭವಾಗಿತ್ತು.  ಅದು ಒಂದು ರೀತಿಯಲ್ಲಿ ಉಡದ ಜಾತಿಗೆ ಸೇರಿದ ಪ್ರಾಣಿಯಾದರೂ ಅದಕ್ಕೆ ಉಡದ ಹಿಡಿತದ ಬಿಗಿ ಇಲ್ಲ.ಅದಲ್ಲದೇ ಅದು ಬಹಳ ಅಂಜುಬುರುಕ ಪ್ರಾಣಿ. ಅದು ಓಡಿ ಬಂದು ಉಡದ ರಾಜ­ಕುಮಾ­ರನನ್ನು ಅಪ್ಪಿಕೊಳ್ಳುವುದು. ಆಗ ರಾಜಕುಮಾರ ಅದನ್ನು ಬಿಗಿಯಾಗಿ ಹಿಡಿದಾಗ ಅದಕ್ಕೆ ಒಂದು ತರಹದ ಸಂತೋಷವಾಯಿತು. ಆ ಅಪ್ಪುಗೆಗೆ ಅದು ಮೇಲಿಂದ ಮೇಲೆ ಉಡದ ಬಿಲದ ಹತ್ತಿರ ಬಂದು ಕಾಯುತ್ತಿತ್ತು. ಒಂದು ಹಿರಿಯ ಉಡ ಗೋಸುಂಬೆಯ ಸ್ನೇಹದ ವಿಷಯವನ್ನು ರಾಜನಿಗೆ ತಿಳಿಸಿತು. ರಾಜ ತುಂಬ ಚಿಂತಿಸಿತು.ಮಗನಿಗೆ ಹೇಳಿತು ‘ಮಗೂ, ನೀನು ಗೋಸುಂಬೆಯೊಂದಿಗೆ ಸ್ನೇಹ ಮಾಡುತ್ತಿದ್ದೀಯಂತೆ ಅದು ಸರಿಯಲ್ಲ. ಯಾವಾಗಲೂ ನಮ್ಮ ಸ್ವಭಾವದ ಜನರೊಂದಿಗೇ ಸ್ನೇಹ ಬೆಳೆಸಬೇಕು. ಗೋಸುಂಬೆಯ ಗುಣವೇ ಸರಿಯಿಲ್ಲ. ಅದು ತನ್ನ ಅನುಕೂಲಕ್ಕೆ ಯಾರಿಗೆ ಬೇಕಾ­ದರೂ ಅನ್ಯಾಯ ಮಾಡಲು ಹೇಸುವುದಿಲ್ಲ, ಎಚ್ಚರ­ವಾಗಿರು’. ರಾಜಕುಮಾರ, ‘ಅಪ್ಪಾ, ಅದು ತುಂಬ ಪುಟ್ಟ ಪ್ರಾಣಿ. ಅದಕ್ಕೆ ನಮ್ಮ ಶಕ್ತಿ ಇಲ್ಲ. ಅದೇನಾದರೂ ನಮ್ಮ ವಿರುದ್ಧ ತಿರುಗಿ ಬಿದ್ದರೆ ಒಂದೇ ಏಟಿನಲ್ಲಿ ಅದನ್ನು ಮುಗಿಸಿ ಬಿಡುತ್ತೇನೆ.  ಆದರೆ ಅದು ನಮಗೆ ಅಪಾಯ ಮಾಡ­ಬಹುದು ಎನ್ನಿಸುವವರೆಗೆ ಅದರ ಸ್ನೇಹ­ವನ್ನು ಇಟ್ಟುಕೊಳ್ಳುತ್ತೇನೆ. ಕಾಳಜಿ ಬೇಡ’ ಎಂದಿತು.ಬರುಬರುತ್ತ ರಾಜಕುಮಾರ ಉಡ ತುಂಬ ದಪ್ಪ­ವಾಯಿತು. ಅದು ಗೋಸುಂಬೆ­­ಯನ್ನು ಅಪ್ಪಿಕೊಂಡಾಗ ಅದಕ್ಕೆ ಉಸಿರು ಕಟ್ಟು­ವಂತಾಗುತ್ತಿತ್ತು. ಆ ದಿನಗಳಲ್ಲಿ ಸ್ವಲ್ಪ ಮಳೆಯಾದಾಗ ರೆಕ್ಕೆಯ ಹುಳುಗಳು ಹಾರಾಡುತ್ತ ಬಂದು ಬಿಲದ ಸುತ್ತ­ಮುತ್ತ ಕುಳಿತು­ಕೊಳ್ಳುತ್ತ್ತಿದ್ದವು. ಅವು­ಗಳನ್ನು ತಿನ್ನಲು ಉಡಗಳು ಬಿಲದಿಂದ ಹೊರ ಬರು­ತ್ತಿದ್ದವು. ಉಡಗಳ ಸ್ವಭಾವದ ಪರಿಚ­ಯವಿದ್ದ ಒಬ್ಬ ಬೇಟೆ­ಗಾರ ಹೊಂಚು­ಹಾಕುತ್ತಿದ್ದ. ಗೋಸುಂಬೆ ಅವನ ಹತ್ತಿರ ಹೋಗಿ ಹೇಳಿತು, ‘ನಿನಗೆ ನೂರಾರು ಉಡಗಳನ್ನು ಹಿಡಿದು­ಕೊಡುತ್ತೇನೆ. ಆಗ ನನಗೆ ಈ ಇಡೀ ಬಿಲವನ್ನು ಹಾಳುಮಾಡದೆ ನಮಗೇ ಕೊಡಬೇಕು’.ಆತ ಒಪ್ಪಿದಾಗ ಅವನನ್ನು ಕರೆದು­ಕೊಂಡು ಉಡದ ರಾಜನ ಮನೆಯ ಸುತ್ತವಿದ್ದ ಬಿಲಗಳ ಬಳಿಗೆ ಕರೆತಂದಿತು. ಆತ ಬಿಲಗಳ ಬಾಯಿಗೆ ಹುಲ್ಲು ತುಂಬಿ ಬೆಂಕಿ ಹಚ್ಚಿದಾಗ ಬಿಲದ ಒಳಗೆ ಹೊಗೆ, ಬೆಂಕಿಯ ಕಾವು ತಾಗಿ ಅವು ಹೊರಗಡೆಗೆ ಓಡಿ ಬಂದವು. ಬೇಟೆಗಾರ ಅವುಗಳನ್ನು ಹೊಡೆದು ಕೊಂದ. ಅವನಿಂದ ಪಾರಾದ ಉಡ­ಗಳನ್ನು ಅವನ ಜೊತೆಗೆ ಬಂದಿದ್ದ ನಾಯಿ­ಗಳು ಹಿಡಿದವು. ಅಂತೂ ಉಡಗಳ ಇಡೀ ಪರಿವಾರ ನಾಶವಾಗಿ ಹೋಯಿತು. ಸ್ನೇಹ ಮಾಡುವಾಗ ತುಂಬ ಎಚ್ಚರವಾಗಿರಬೇಕು. ಆ ಸ್ನೇಹ ನಮ್ಮ ಬದುಕನ್ನು ಎತ್ತರಕ್ಕೆ ಕೊಂಡೊ­ಯ್ಯಬೇಕು. ಸ್ನೇಹಿತರಾಗುವವರು ಸಮಾನ ಮನಸ್ಕ­ರಾಗಿರಬೇಕು. ನಮ್ಮಿಂದ ಕೇವಲ ಲಾಭವನ್ನು ಬಯ­ಸುವವ­ರಾಗಿರಬಾರದು. ಹಾಗಿದ್ದಾಗ ಸ್ನೇಹ ಬದುಕನ್ನು ಹಗುರಗೊಳಿಸುತ್ತದೆ. ಅಸಮಾನರಲ್ಲಿ, ವಿರೋಧ ಚಿಂತನೆ­ಗಳನ್ನು ಹೊಂದಿರುವವರಲ್ಲಿ ಸ್ನೇಹ, ಜೀವನವನ್ನು ನರಕಮಾಡುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.