ಶನಿವಾರ, ಮೇ 21, 2022
27 °C

ಸ್ಪಿನ್ ಮಾಂತ್ರಿಕ ಬಿಷನ್ ಸಿಂಗ್ ಬೇಡಿ

ರಾಮಚಂದ್ರ ಗುಹಾ Updated:

ಅಕ್ಷರ ಗಾತ್ರ : | |

ಆಗಸ್ಟ್ ಮೂರನೇ ವಾರದಲ್ಲಿ ದೆಹಲಿಯಿಂದ ನನಗೊಂದು ದೂರವಾಣಿ ಕರೆ ಬಂತು. ಅದು  ಮಹಾನ್ ಸ್ಲೋ ಬೌಲರ್ ಬಿಷನ್ ಸಿಂಗ್ ಬೇಡಿಯದಾಗಿತ್ತು. `ನನ್ನ ಸುತ್ತ ಇರುವವರೆಲ್ಲಾ ಅಣ್ಣಾ ಹಜಾರೆ! ಅಣ್ಣಾ ಹಜಾರೆ ! ಎಂದು ಅರಚುತ್ತಿದ್ದಾರೆ. ಕೆಲವು ತಿಂಗಳುಗಳ ಹಿಂದೆ ಇದೇ ಮಂದಿ ಐಪಿಎಲ್! ಐಪಿಎಲ್ ! ಎಂದು ಕಿರುಚುತ್ತಿದ್ದರು. ನನಗನಿಸುತ್ತೆ, ಜನ ಲೋಕಪಾಲ್ ಮಸೂದೆಗೆ ಬದಲಾಗಿ  ಸಂಸತ್ತು ನಿಜಕ್ಕೂ ಮಂಡಿಸಬೇಕಾದ ಮಸೂದೆ ಎಂದರೆ ಇಂಥ ಸಮೂಹಸನ್ನಿ ವಿರೋಧಿ ಮಸೂದೆ~ ಎಂದಿದ್ದರು ಬೇಡಿ.

ರಾಮಲೀಲಾ ಮೈದಾನದ ಇಡೀ ತಮಾಷೆಯ ಬಗ್ಗೆ ನಾನು ಓದಿದ ಅಥವಾ ಕೇಳಿದ ಸಂಗತಿಗಳಲ್ಲಿ ಅತ್ಯಂತ ಹೆಚ್ಚಿನ ಒಳನೋಟಗಳುಳ್ಳ ಮಾತು ಇದು. ಖಂಡಿತವಾಗಿಯೂ ಇದು ಚಮತ್ಕಾರೋಕ್ತಿ. ಜೊತೆಗೆ ಎಂದಿನಂತೆ ಅದು ಬೇಡಿಯವರ ಸ್ವಭಾವಕ್ಕೆ ಅನುಗುಣವಾದದ್ದೇ ಆಗಿತ್ತು. ಆಟಗಾರ ಹಾಗೂ ಕ್ಯಾಪ್ಟನ್ ಆಗಿ, ಕೋಚ್ ಹಾಗೂ ವೀಕ್ಷಕ ವಿವರಣೆಕಾರ ಆಗಿ, ಕಟ್ಟಕಡೆಗೆ ಭಾರತದ ಶ್ರೀಸಾಮಾನ್ಯ ಪ್ರಜೆಯಾಗಿ ಬಿಷನ್ ಬೇಡಿ ಅವರು ತಮ್ಮ ದಿಟ್ಟ ಸ್ವತಂತ್ರ ಮನಸ್ಸಿಗೆ ಹಿಂದಿನಿಂದಲೂ ಹೆಸರಾದವರು. ಕೆಲವೊಮ್ಮೆ ಅವರ ಅಭಿಪ್ರಾಯಗಳು ಮೂರ್ಖತನದ್ದಾಗಿರಬಹುದು. ಅನೇಕ ಸಲ ಅವು ದೂರದೃಷ್ಟಿಯದಾಗಿರುತ್ತವೆ. ಆದರೆ ಎಲ್ಲಾ ಸಂದರ್ಭಗಳಲ್ಲೂ ಅವರದ್ದೇ ಛಾಪು ಇರುತ್ತದೆ.

ನಾನು ಬಿಷನ್ ಬೇಡಿಯನ್ನು ಮೊದಲು ಭೇಟಿಯಾದದ್ದು 1974ರಲ್ಲಿ. ಆಗಷ್ಟೇ ನನ್ನ ಶಾಲೆಯ ದಿನಗಳು ಮುಗಿದಿದ್ದವು. ಅವರು ಆಗ ತಮ್ಮ  ಕ್ರಿಕೆಟ್ ದಿನಗಳ ಕೀರ್ತಿಯ ಉತ್ತುಂಗದಲ್ಲಿದ್ದರು. ಬೆಂಗಳೂರಿನಲ್ಲಿರುವ ನನ್ನ ಬಂಧುವೊಬ್ಬರ ಮನೆಗೆ ಔತಣಕೂಟಕ್ಕೆ ಅವರು ಆಗಮಿಸಿದ್ದರು. ಅಲ್ಲಿ ಅವರು ಒಂದು ಬಾಟಲ್ ವಿಸ್ಕಿ ಮುಗಿಸಿದ್ದರು. ಮರುದಿನ, ಪ್ರಬಲ ಕರ್ನಾಟಕದ ತಂಡದ ವಿರುದ್ಧ ಆಡಿದ್ದರು. ಆ ವರ್ಷದ ಕಡೆಯಲ್ಲಿ ನಾನು ದೆಹಲಿಯ ಸೇಂಟ್ ಸ್ಟೀಫನ್ ಕಾಲೇಜು ಸೇರಿದೆ. ಅತ್ಯಂತ ಪ್ರಮುಖ ವ್ಯಕ್ತಿಗಳಿಂದ ತುಂಬಿದ್ದ (ಆ ಕಾಲದಲ್ಲೂ) ದೆಹಲಿಯಲ್ಲಿ ಬೇಡಿಯವರ ಉಪಸ್ಥಿತಿ ಎದ್ದು ಕಾಣಿಸುವಂತಹದ್ದೇ ಆಗಿತ್ತು. ಅವರು ದೆಹಲಿ ರಣಜಿ ಟ್ರೋಫಿ ತಂಡದ ಕ್ಯಾಪ್ಟನ್ ಆಗಿದ್ದರು. ಮುಂದೆ ಶೀಘ್ರದಲ್ಲೇ ಭಾರತದ ಕ್ಯಾಪ್ಟನ್ ಆಗುವವರಿದ್ದರು. ವರ್ಣರಂಜಿತ ವೇಷಭೂಷಣ ಅವರದು. ಸುಂದರವಾಗಿ ಬೌಲ್ ಮಾಡುತ್ತಿದ್ದರು. ಆ ಮೂಲಕ  ತಮ್ಮನ್ನು ತಾವು ಅನಾವರಣಗೊಳಿಸಿಕೊಳ್ಳುತ್ತಿದ್ದರು ಅವರು. ಆಗಿನ ಆ ಉದಾರೀಕರಣ ಪೂರ್ವ ದಿನಗಳ್ಲ್ಲಲೇ, ರಾಜಧಾನಿಯಲ್ಲಿ ಫೋಕ್ಸ್‌ವೇಗನ್ ಬೀಟಲ್ ಓಡಿಸುತ್ತಿದ್ದ ಇಬ್ಬರು ಭಾರತೀಯರಲ್ಲಿ (ಮತ್ತೊಬ್ಬರು ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್‌ನ ಪ್ರೊಫೆಸರ್ ಮೃಣಾಲ್ ದತ್ತ ಚೌಧರಿ) ಅವರೂ ಒಬ್ಬರು ಎಂಬ ಅಂಶದಿಂದ ಅವರ  ವರ್ಚಸ್ಸು ಮತ್ತಷ್ಟು ಹೆಚ್ಚಿತ್ತು ಎಂಬುದೂ ನಿಜ.

ದೆಹಲಿಯಲ್ಲಿ ನಾನು ವಿದ್ಯಾರ್ಥಿಯಾಗಿದ್ದ ದಿನಗಳಲ್ಲಿ, ವೈಯಕ್ತಿಕವಾಗಿ ಬೇಡಿಯವರನ್ನು ಸಂಪರ್ಕಿಸಲು ನನಗೆ ಸಂಕೋಚ ಅಡ್ಡಿಯಾಗಿತ್ತು. ಆದರೆ ಅವರ ಆಟ ನೋಡಲು ಫಿರೋಜ್ ಷಾ ಕೋಟ್ಲಾಗೆ ಆಗಾಗ್ಗೆ ಹೋಗುತ್ತಿದ್ದೆ. ದೆಹಲಿ ರಣಜಿ ಟ್ರೋಫಿ ತಂಡಕ್ಕೆ ಅವರ ನಾಯಕತ್ವದಲ್ಲಿ ಆಡುತ್ತಿದ್ದ ನನ್ನ ಕಾಲೇಜಿನ ಸಹಪಾಠಿಗಳು ಹೇಳುವ ಕಥೆಗಳಲ್ಲಿ ಮುಳುಗಿಹೋಗುತ್ತಿದ್ದೆ. ತನ್ನ ಮಾಂಸಖಂಡಗಳ ಶಕ್ತಿಯ ಬಗ್ಗೆ ಬಹಳ ಕೊಚ್ಚಿಕೊಳ್ಳುತ್ತಿದ್ದ ಎತ್ತರದ ಬಲಿಷ್ಠ ವೇಗದ ಬೌಲರ್ ಒಬ್ಬನ ಕಥೆ ಅವುಗಳಲ್ಲೊಂದು. ಈ ಬಡಾಯಿ ಕೊಚ್ಚಿಕೊಳ್ಳುವ ವ್ಯಕ್ತಿ ಒಮ್ಮೆ ಅಭ್ಯಾಸದ ಸಂದರ್ಭದಲ್ಲಿ ಸುಲಭದ ಕ್ಯಾಚ್ ಅನ್ನು ಕೈಬಿಟ್ಟ. ಆಗ ಎರಡೂ ಕೈಗಳಲ್ಲಿ ಇಟ್ಟಿಗೆಗಳನ್ನು ಹಿಡಿದು ತಲೆಯ ಮೇಲಕ್ಕೆ ಕೈಗಳನ್ನೆತ್ತಿ ಮೈದಾನದ ಸುತ್ತ ಓಡಬೇಕೆಂದು ಬೇಡಿ ಅವನಿಗೆ ಹೇಳಿದ್ದರು. ಆದರೆ ಅರ್ಧ ಓಡುವಷ್ಟರಲ್ಲಿ ಆ ದೈತ್ಯ ವ್ಯಕ್ತಿ ಕಿರುಚುತ್ತಾ ನೆಲಕ್ಕೆ ಬಿದ್ದಿದ್ದ (ಇಷ್ಟೇ ಹೊರೆಯೊಂದಿಗೆ ಹತ್ತು ಗಜ ನೀವು ಓಡಿದಲ್ಲಿ ಯಾಕೆ ಹಾಗಾಗುತ್ತದೆ ಎಂಬುದು ನಿಮಗೆ ತಿಳಿಯುತ್ತದೆ). ನಂತರ, ತನ್ನ ಮೊದಲ ದರ್ಜೆಯ ಪ್ರಥಮ ಶತಕವನ್ನರಸುತ್ತಿದ್ದ ಯುವ ಬ್ಯಾಟ್ಸ್‌ಮನ್‌ನ ಕಥೆ. ರಣಜಿ ಪಂದ್ಯದ ಮೊದಲ ದಿನದ ಆಟದ ಅಂತ್ಯಕ್ಕೆ, ಅವರು ಔಟಾಗದೆ 50ಕ್ಕೆ ತಲುಪಿದ್ದರು. ಮರು ದಿನ ವಿರಾಮದ ವೇಳೆಗೆ ಅವರು 75ಕ್ಕೆ ತಲುಪಿದ್ದರು. ರನ್ ಗತಿ ಹೆಚ್ಚಿಸಿಕೊಳ್ಳಲು ಬೇಡಿ ಸಂದೇಶ ಕಳಿಸಿದರು. ಅರ್ಧ ಗಂಟೆ ನಂತರ ಮತ್ತೊಂದು ಸಂದೇಶ ಕಳಿಸಿದರು. ಆ ಯುವಕ ತಂಡಕ್ಕಾಗಿ ಆಡದೆ ತನಗಾಗಿ ನಿಧಾನಕ್ಕೆ ಆಡುತ್ತಿದ್ದ. ಊಟದ ವೇಳೆಗೆ ಆತ ಔಟಾಗದೆ 99 ತಲುಪಿದ್ದ. ಆಗ ಬೇಡಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡರು.

ಬಿಷನ್ ಬೇಡಿಯ ವ್ಯಕ್ತಿತ್ವ ಹಾಗೂ ಕ್ರಿಕೆಟಿಂಗ್ ಪ್ರತಿಭೆಯನ್ನು ಬೆಂಗಳೂರಿನ ಬರಹಗಾರ  ಸುರೇಶ್ ಮೆನನ್ ಅವರು ತಮ್ಮ ಬೇಡಿ ಜೀವನ ಚರಿತ್ರೆಯ ಹೊಸ ಪುಸ್ತಕದಲ್ಲಿ ಚೆನ್ನಾಗಿ ಚಿತ್ರಿಸಿದ್ದಾರೆ. `ಬಿಷನ್: ಪೋರ್ಟ್ರೇಟ್ ಆಫ್ ಎ ಕ್ರಿಕೆಟರ್~ ಚೆಂದದ ಪುಸ್ತಕ. ಸಮೃದ್ಧ, ವಿವರಣಾತ್ಮಕ ಮಾಹಿತಿಗಳುಳ್ಳ ಆಪ್ತ ಚಿತ್ರಣ ಇಲ್ಲಿದೆ. ಜೊತೆಗೇ ವಿಮರ್ಶಾ ಪ್ರಜ್ಞೆಯೂ ಇದೆ. ಯುವ ಕ್ರಿಕೆಟಿಗರಿಗೆ ಬೇಡಿಯ ಉದಾರತೆ ಕುರಿತಂತೆ ಮನ ಕಲಕುವಂತೆ ಬರೆಯುತ್ತಾರೆ ಮೆನನ್. ಈ ಮಾಜಿ ಭಾರತೀಯ ಕ್ಯಾಪ್ಟನ್ ನಿಯಮಿತವಾಗಿ ಇಂಗ್ಲೆಂಡ್‌ಗೆ ಯುವಜನರನ್ನು ಶೈಕ್ಷಣಿಕ ಪ್ರವಾಸಕ್ಕಾಗಿ ಕರೆದೊಯ್ಯುತ್ತಾರೆ. ನಿಧಿಯನ್ನು ಸಂಗ್ರಹಿಸುತ್ತಾ ಅವರಿಗಾಗಿ ಪಂದ್ಯಗಳನ್ನು ಏರ್ಪಡಿಸಲೂ ನೆರವಾಗುತ್ತಿರುತ್ತಾರೆ. ಪ್ರತಿ ಬಾರಿ ಬೇಡಿ ಮನೆಗೆ ಹೋದಾಗಲೆಲ್ಲಾ, ಬೇಡಿ ಮನೆಯಲ್ಲಿ ತಂಗಿರುತ್ತಿದ್ದ ವಿವಿಧ ಪ್ರದೇಶಗಳ ಕ್ರಿಕೆಟಿಗರನ್ನು ಮೆನನ್ ಭೇಟಿಯಾಗಿದ್ದಾರೆ.

ಈ ಉದಾತ್ತ ಗುಣ ಬೇಡಿಯವರ ಬಾಲ್ಯದಲ್ಲೇ ವ್ಯಕ್ತವಾಗಿತ್ತು. ಶಾಲಾ ಬಾಲಕನಾಗಿದ್ದಾಗ, ಅಂಗವಿಕಲ ಸಹಪಾಠಿಯೊಬ್ಬನಿಗೆ ನೆರವಾಗುತ್ತಿದ್ದುದನ್ನು ಆಗಾಗ ತಾವು ಕಾಣುತ್ತಿದ್ದುದಾಗಿ ಬೇಡಿಯವರ ಹಳೆಯ ಅಧ್ಯಾಪಕರೊಬ್ಬರು ಮೆನನ್‌ಗೆ ತಿಳಿಸಿದ್ದಾರೆ. `ಕ್ರೀಡೆಗೆ ಮರಳಿ ಕೊಡಬೇಕು~ ಎಂಬುದನ್ನು ಬರೀ ಸವಕಲು ಮಾತುಗಳನ್ನಾಗಿಸ್ದ್ದಿದರು ಮಾಜಿ ಆಟಗಾರರು. ಆದರೆ ಈ ಮಾತುಗಳ ಮೂಲತತ್ವವನ್ನು ಬೇಡಿ ಆಚರಣೆಗೆ ತಂದಿದ್ದಾರೆ ಎಂದು ಬರೆಯುತ್ತಾರೆ ಮೆನನ್.

ಹಿಂದಿನ ಕ್ರಿಕೆಟಿಗರಿಗೆ ಹೋಲಿಸಿದಲ್ಲಿ ಇಂದಿನ ಕ್ರಿಕೆಟಿಗರಿಗೆ ಎಷ್ಟೊಂದು ಸೌಲಭ್ಯಗಳಿವೆ ಎಂಬುದು ಪುಸ್ತಕದಲ್ಲಿರುವ ಒಂದು ಕಥೆಯಿಂದ ನಿರೂಪಿತವಾಗುತ್ತದೆ. 1975-76ರ ಚಳಿಗಾಲದಲ್ಲಿ ನಾಗಪುರದಲ್ಲಿ ಶ್ರೀಲಂಕಾ ವಿರುದ್ಧ ಭಾರತ ಪರ ಟೆಸ್ಟ್‌ನಲ್ಲಿ ಬೇಡಿ ಆಡಿದ್ದರು.  ನಂತರ ಅವರು ದುಲೀಪ್ ಟ್ರೋಫಿ ಪಂದ್ಯ ಆಡಲು ಚಂಡೀಗಡಕ್ಕೆ ಹೋಗಬೇಕಿತ್ತು. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಅವರ ಟಿಕೆಟ್ ಕಾದಿರಿಸಲು ಮರೆತು ಬಿಟ್ಟಿತ್ತು. ಹೀಗಾಗಿ ಬೇಡಿ ಮೂರನೇ ದರ್ಜೆ ಬೋಗಿಯಲ್ಲಿ ಲಗ್ಗೇಜ್ ರ‌್ಯಾಕ್‌ನಲ್ಲಿ  ಕುಳಿತು ಪಯಣಿಸಬೇಕಾಯಿತು. ಆಗಿನ ಕ್ರಿಕೆಟ್ ಆಡಳಿತಗಾರರು ಎಷ್ಟೊಂದು ಜಿಪುಣರೆಂದರೆ ಅವರಾಗ ಕ್ರಿಕೆಟಿಗರಿಗೆ ಟೆಸ್ಟ್ ಪಂದ್ಯವೊಂದಕ್ಕೆ ನೀಡುತ್ತಿದ್ದ ಹಣ ಕೇವಲ ರೂ 250. ಬೇಡಿ ಮತ್ತು ಸಹಚರರು ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ನಾಲ್ಕು ದಿನಗಳ ಒಳಗೇ ಗೆದ್ದಾಗ ಮಂಡಳಿ ಅವರಿಗೆ ಅದರಲ್ಲಿಯೂ ಐವತ್ತು ರೂಪಾಯಿ ಕಡಿಮೆ ನೀಡಿತ್ತು.

ಈಗ ಭಾರತೀಯ ಕ್ರಿಕೆಟಿಗರಿಗೆ ಒಳ್ಳೆಯ ಸಂಭಾವನೆ ಇದೆ ಎಂದರೆ ಅದಕ್ಕೆ ಬಿಷನ್ ಬೇಡಿಯಂತಹವರ ಹೋರಾಟಗಳು ಕಾರಣ. ಇನ್ನೂ ಕ್ರಿಯಾಶೀಲರಾಗಿರುವ ಕ್ರಿಕೆಟಿಗರು ಹಾಗೂ ನಿವೃತ್ತರಿಗೆ ನ್ಯಾಯಬದ್ಧ ಪರಿಹಾರಗಳಿಗಾಗಿ ಒತ್ತಡ ತಂದು ಯಶಸ್ವಿಯಾದಂತಹ `ಆಟಗಾರರ ಸಂಘ~ವನ್ನು ಕಟ್ಟುವಲ್ಲಿ ಬೇಡಿ ಅವರ ಪಾತ್ರವನ್ನು ಮೆನನ್ ದಾಖಲಿಸುತ್ತಾರೆ. ಅವರ ವ್ಯಕ್ತಿತ್ವದ ತೂಕ ಹಾಗೂ ನಿಜಕ್ಕೂ ಕ್ರೀಡೆಯ ಮಹಾನ್ ವ್ಯಕ್ತಿಗಳಲ್ಲಿ ಒಬ್ಬರು ಎಂಬಂತಹ ಕಾರಣಗಳಿಂದಾಗಿ ಬೇಡಿಯವರಿಗೆ ಇದನ್ನು ಮಾಡಲು ಸಾಧ್ಯವಾಯಿತು. ನ್ಯೂಜಿಲೆಂಡ್ (ಡುನೆಡಿನ್ 1968) ವಿರುದ್ಧ, ವೆಸ್ಟ್ ಇಂಡೀಸ್ (ಪೋರ್ಟ್ ಆಫ್ ಸ್ಪೇನ್, 1971) ವಿರುದ್ಧ , ಇಂಗ್ಲೆಂಡ್ ( ದಿ ಓವಲ್, 1971) ವಿರುದ್ಧ ಹಾಗೂ ಆಸ್ಟ್ರೇಲಿಯಾ (ಮೆಲ್‌ಬರ್ನ್, 1978)  ವಿರುದ್ಧ ಮೊದಲ ಟೆಸ್ಟ್ ವಿಜಯಗಳಲ್ಲಿ ಆಡಿರುವ ಏಕೈಕ ಕ್ರಿಕೆಟಿಗ ಬೇಡಿ ಎಂಬುದು ಈ ಪುಸ್ತಕ ಓದುವವರೆಗೆ ನನ್ನ ಗಮನಕ್ಕೆ ಬಂದಿರಲಿಲ್ಲ.

ಸುರೇಶ್ ಮೆನನ್ ಅವರು ಈ ವಾಕ್ಯದೊಂದಿಗೆ ಪುಸ್ತಕ ಆರಂಭಿಸುತ್ತಾರೆ: `ಬಿಷನ್ ಬೇಡಿಯವರ ಬಗ್ಗೆ ಪುಸ್ತಕ ಬರೆಯುತ್ತಿದ್ದೀರೆಂದು ಕೇಳಿದೆ. ನಿಮಗೆ ಗೊತ್ತಾ ಆ ಸಮಯದಲ್ಲಿ...~ ಎಂದು  ಮಾತನಾಡಲಾರಂಭಿಸುತ್ತಿದ್ದ ವ್ಯಕ್ತಿ ಕಥೆ ಹೇಳುತ್ತಾ ನೈಜತೆಯಿಂದಾಚೆಗೆ ನಂಬಲು ಅಸಾಧ್ಯವಾದಂತಹ ವಲಯಗಳಿಗೆ ಜಾರಿ ಬಿಡುತ್ತಿದ್ದರು~. ನಾನು ಈ ಅಂಕಣವನ್ನು ಎರಡು ನೈಜ ಕಥೆಗಳೊಂದಿಗೆ ಮುಕ್ತಾಯ ಮಾಡುತ್ತೇನೆ. ಏಕೆಂದರೆ ಅವುಗಳಿಗೆ ನಾನೇ ಸಾಕ್ಷಿಯಾಗಿದ್ದೆ.

ಕೆಲವು ವರ್ಷಗಳ ಹಿಂದೆ ಬ್ರಿಟಿಷ್ ಪ್ರಧಾನಿ ಜಾನ್ ಮೇಜರ್ ಅವರು ನವದೆಹಲಿಗೆ ಖಾಸಗಿ ಭೇಟಿ ನೀಡಿದ್ದರು. ಅವರ ಆತಿಥೇಯರು ಔತಣಕೂಟವೊಂದನ್ನು ಏರ್ಪಡಿಸಿದ್ದರು. ಈ ಔತಣಕೂಟಕ್ಕೆ ಅತಿಥಿಗಳನ್ನು ಬಹಳ ಕಾಳಜಿಯಿಂದ ಆಯ್ಕೆ ಮಾಡಲಾಗಿತ್ತು. ಮೇಜರ್ ಅವರ ರಾಜಕೀಯ ಖ್ಯಾತಿಗೆ ಮನ್ನಣೆ ನೀಡಿ ಹಿರಿಯ ಕೇಂದ್ರ ಮಂತ್ರಿಯೊಬ್ಬರು ಹಾಗೂ ಆಗಿನ ಮುಖ್ಯ ಚುನಾವಣಾ ಕಮಿಷನರ್ ಅನ್ನು ಆಹ್ವಾನಿಸಲಾಗಿತ್ತು. ಜೊತೆಗೆ ಅವರ ಕ್ರಿಕೆಟ್ ಪ್ರೀತಿ ತಣಿಸಲು ಇಬ್ಬರು ಮಾಜಿ ಟೆಸ್ಟ್ ಕ್ರಿಕೆಟ್ ಆಟಗಾರರಿಗೂ ಕರೆ ಇತ್ತು. ಅಂದಿನ ಆ ದೀರ್ಘ ಸಂಜೆಯಲ್ಲಿ ಮೇಜರ್ ಇಡಿಯಾಗಿ ಇನ್ನಿತರ ಅತಿಥಿಗಳನ್ನು ಮರೆತೇ ಬಿಟ್ಟರು. ಬಿಷನ್ ಬೇಡಿಗೇ ಅಂಟಿಕೊಂಡ ಅವರು ಹಲವು ಕ್ರಿಕೆಟ್ ಕಥೆಗಳನ್ನು ಹಂಚಿಕೊಂಡರು. ಫ್ರೆಡ್ ಟ್ರೂಮನ್ ಕುರಿತಂತೆ  ಜಾನ್ ಮೇಜರ್‌ಗೆ ಆರಾಧನಾ ಭಾವನೆ. ಅವರ ವಿರುದ್ಧ ಬೇಡಿ ಆಟವಾಡಿದ್ದರು. ಅಂದು ಸಂಜೆ ಕಡೆಗೆ ಮುಖ್ಯ ಅತಿಥಿಗೆ ನಾನು ಹೇಳಿದ ಮಾತುಗಳಿವು: `ಎಫ್ ಎಸ್ ಟಿ~ (ಫ್ರೆಡರಿಕ್ ಸೆವಾರ್ಡ್ಸ್ ಟ್ರೂಮನ್) ಕುರಿತ ಕಥೆಗಳನ್ನು ಅಭಿಮಾನಿಯೊಬ್ಬ ಬರೆದ ಪುಸ್ತಕವಾಗಿ ಬರೆದು ನೀವು ಪ್ರಕಟಿಸುತ್ತೀರಿ ಎಂದುಕೊಳ್ಳುತ್ತೇನೆ~. ಆಗ ಸರ್ ಜಾನ್ ಉತ್ತರಿಸಿದ್ದು: `ಬರಿ ಎಫ್.ಎಸ್.ಟಿ ಮಾತ್ರ ಯಾಕೆ?  ಬಿ.ಎಸ್.ಬಿ (ಬಿಷನ್‌ಸಿಂಗ್ ಬೇಡಿ) ಬಗ್ಗೆಯೂ ನಾನು ಕಥೆಗಳನ್ನು ಹೇಳಬಲ್ಲೆ~.

ಮತ್ತೊಂದು ಕಥೆ ಈಗಲೂ ಮಹತ್ವದ್ದು. ನಾನಾಗ ಕಾಬೂಲ್‌ಗೆ ಹೋಗಿದ್ದೆ. ಅಲ್ಲಿನ ನಮ್ಮ ರಾಯಭಾರ ಕಚೇರಿ ಅಧಿಕಾರಿಗಳು, ಯುವ ಆಫ್ಘನ್ನರಿಗೆ ಸ್ಫೂರ್ತಿ ತುಂಬಲು ಹಾಗೂ ತರಬೇತಿ ನೀಡಲು ಪ್ರಸಿದ್ಧ ಕ್ರಿಕೆಟಿಗರೊಬ್ಬರನ್ನು ಆಹ್ವಾನಿಸಲು ಆಸಕ್ತಿ ತೋರಿದರು. ಭಯೋತ್ಪಾದನಾ ದಾಳಿಗಳು ಆಗಾಗ ನಡೆಯುತ್ತಿರುವ ರಾಷ್ಟ್ರಕ್ಕೆ ಬರಲು, ಈಗಲೂ ಸಕ್ರಿಯರಾಗಿರುವ ಕ್ರಿಕೆಟಿಗರು ಇಷ್ಟಪಡದೇ ಹೋಗುವ ಸಾಧ್ಯತೆಗಳಿರುವುದರಿಂದ ನಿವೃತ್ತ ಆಟಗಾರರೊಬ್ಬರನ್ನು ಕರೆಸಬಹುದು ಎಂಬಂತಹ ಸಲಹೆಯನ್ನು ನಾನು ನೀಡಿದ್ದೆ. ಆಗ ಅನೇಕ ಹೆಸರುಗಳು ಪ್ರಸ್ತಾಪವಾಗಿ ಚರ್ಚೆಯಾದವು. ಅವುಗಳಲ್ಲಿ ಬಿಷನ್ ಬೇಡಿಯ ಹೆಸರೂ ಒಂದು. ನಾನು ಭಾರತಕ್ಕೆ ವಾಪಸಾದ ನಂತರ, ನನ್ನ ಹೀರೋ ಹಾಗೂ ಈಗ ಗೆಳೆಯರಾಗಿರುವ ಬೇಡಿಗೆ  ಫೋನ್ ಮಾಡಿ `( ಆಫ್ಘಾನಿಸ್ತಾನದಿಂದ) ಆಹ್ವಾನವೇನಾದರೂ ಬಂದಿತ್ತೇ? ಹೋಗಲು ಅಭ್ಯಂತರವಿಲ್ಲವೇ? ಎಂದು ವಿಚಾರಿಸಿದೆ. `ಯಾಕಾಗಬಾರದು~ ಎಂಬುದು ಸ್ಪಿನ್ ಮಾಂತ್ರಿಕನ ತಕ್ಷಣದ ಉತ್ತರವಾಗಿತ್ತು. `ಕ್ರಿಕೆಟ್‌ಗೆ ಎಂದರೆ ಎಲ್ಲಿಗೆ ಬೇಕಾದರೂ ಹೋಗಲು ಸಿದ್ಧ~ ಎಂದರು ಅವರು.  ಕ್ರಿಕೆಟ್‌ಗಾಗಿ `ಎಲ್ಲಿಗೆ ಬೇಕಾದರೂ~ ಎಂಬುದೀಗ ಹಣಕ್ಕಾಗಿ ಎಲ್ಲಿಗೆ ಬೇಕಾದರೂ (ಏನು ಬೇಕಾದರೂ) ಸಿದ್ಧ ಎಂಬುವುದು ಅವರ ತಂಡದ ಕೆಲವು ಮಾಜಿ ಸಹಚರರ (ಹೇಳಿಕೊಳ್ಳಲಾಗದ) ಧ್ಯೇಯ.

ನಿಮ್ಮ ಅನಿಸಿಕೆಗಳನ್ನು ತಿಳಿಸಿ: editpagefeedback@prajavani.co.in

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.