ಗುರುವಾರ , ಫೆಬ್ರವರಿ 25, 2021
18 °C

‘ನೆಹರೂ ಪ್ರಣೀತ ಸಿದ್ಧಾಂತಕ್ಕೆ ಸಹಮತ’ ಎಂಬ ಮಿಥ್ಯೆ

ರಾಮಚಂದ್ರ ಗುಹಾ Updated:

ಅಕ್ಷರ ಗಾತ್ರ : | |

‘ನೆಹರೂ ಪ್ರಣೀತ ಸಿದ್ಧಾಂತಕ್ಕೆ ಸಹಮತ’ ಎಂಬ ಮಿಥ್ಯೆ

ನೆಹರೂ ಪಣೀತ ಸಿದ್ಧಾಂತಗಳಿಗೆ ಸಹಮತ ಪರಿಕಲ್ಪನೆಗೆ ಒದಗಿರುವ ಸವಾಲು ಕುರಿತು ಇತ್ತೀಚಿನ ವಾರಗಳಲ್ಲಿ ವ್ಯಾಪಕವಾಗಿ ಚರ್ಚೆ ನಡೆಯುತ್ತಿದೆ, ಪ್ರಶ್ನೆಗಳು ಏಳುತ್ತಿವೆ. ಈ ಚರ್ಚೆಗಳಿಂದ ಪ್ರೇರಿತರಾಗಿ ಇಬ್ಬರು ಪತ್ರಕರ್ತರು; ಒಬ್ಬ ಭಾರತೀಯ, ಮತ್ತೊಬ್ಬ ಪಾಶ್ಚಾತ್ಯ ದೇಶದವರು ನನ್ನನ್ನು ಒಂದು ಪ್ರಶ್ನೆ ಕೇಳಿದರು. ಅದೇನೆಂದರೆ, ನರೇಂದ್ರ ಮೋದಿ ಪ್ರಧಾನಿ ಆದದ್ದರಿಂದ ಈ ‘ಸಹ­ಮತ’ ಪೂರ್ತಿ ನಾಶವಾದಂತೆಯೇ ಹೌದೇ? ಸಂಕ್ಷಿಪ್ತವಾದ ಉತ್ತರ ಕೊಡುವ ವಿಷಯ ಇದಲ್ಲ­ವಾದದ್ದರಿಂದ ನಾನು ಪ್ರತಿಕ್ರಿಯಿ­ಸಲು ನಿರಾಕರಿ­ಸಿದೆ. ಹಾಗೆ ನೋಡಿದರೆ, ಈ ಪ್ರಶ್ನೆಯನ್ನೇ ಗಂಭೀರ­ವಾಗಿ ವಿವೇಚಿಸಬೇಕು. ನೆಹರೂ ಪ್ರಣೀತ ಸಿದ್ಧಾಂತ­ಗಳಿಗೆ ಸಹಮತ ಇದ್ದಿದ್ದು ಹೌದಾದರೆ, ಬಹಳ ಹಿಂದೆಯೇ ಅದು ಮುರಿದುಬಿದ್ದಿತ್ತು ಎಂದೇ ಹೇಳಬೇಕು.ಭಾರತದ ವಿಷಯದಲ್ಲಿ ನೆಹರೂರ ದೂರ­ದೃಷ್ಟಿ ಅವಲಂಬಿಸಿದ್ದುದು ನಾಲ್ಕು ಸ್ತಂಭಗಳನ್ನು. ಒಂದು,  ವೆಸ್ಟ್‌ಮಿನ್‌ಸ್ಟರ್ ಮಾದರಿಯ ಬಹು ಪಕ್ಷಗಳ ಪ್ರಜಾಪ್ರಭುತ್ವ; ಎರಡು, ಲಿಂಗ, ವರ್ಗ ಹಾಗೂ ಧರ್ಮ ಭೇದವಿಲ್ಲದೆ ಎಲ್ಲ ನಾಗರಿ­ಕರಿಗೂ ಸಮಾನತೆಯ ಖಾತರಿ ಕೊಡುವ ರಾಷ್ಟ್ರಾ­ಡಳಿತ; ಮೂರು, ಕೈಗಾರಿಕಾ ಅಭಿವೃದ್ಧಿಗೆ ಉತ್ತೇಜನ ನೀಡುವಂಥ ಪ್ರಭಾವಶಾಲಿ ಮಿಶ್ರ ಅರ್ಥ ವ್ಯವಸ್ಥೆ; ನಾಲ್ಕು, ಏಷ್ಯಾ ಪ್ರಣೀತವಾದ, ಅಮೆರಿಕ ಹಾಗೂ ಸೋವಿಯತ್ ಒಕ್ಕೂಟದಂಥ ಸೂಪರ್‌ ಪವರ್‌ಗಳಿಂದ ಸಮಾನ ಅಂತರ ಕಾಯ್ದು­ಕೊಳ್ಳುವಂತಹ ವಿದೇಶಾಂಗ ನೀತಿ. ಬರವಣಿಗೆ, ಮಾತುಗಾರಿಕೆ ಎರಡರಲ್ಲೂ ಸಹಜ ಪ್ರತಿಭೆಯಾಗಿದ್ದ ಜವಾಹರಲಾಲ್‌ ನೆಹರೂ, ತಮ್ಮ ಆಲೋಚನೆಗಳಿಗೆ ಅಸಾಮಾನ್ಯ ವಾಗ್ಝರಿ­ಯಿಂದ ಸಾಣೆ ಹಿಡಿದರು. ಆದ್ದರಿಂದಲೇ ಅವರು ಸತತವಾಗಿ ಹದಿನೇಳು ವರ್ಷ ಪ್ರಧಾನಿಯಾಗಿ ಕಾರ್ಯ ನಿರ್ವಹಿಸಿದ್ದು ಹಾಗೂ ತಮ್ಮ ದೂರದೃಷ್ಟಿಯ ಬಹುಪಾಲನ್ನು ಅನುಷ್ಠಾನಕ್ಕೆ ತರಲು ಸಾಧ್ಯವಾದದ್ದು.೧೯೫೦ ಹಾಗೂ ೧೯೬೦ರ ದಶಕಗಳಲ್ಲಿ ನೆಹರೂ ಹಾಗೂ ನೆಹರೂ ವಾದಿಗಳು ಭಾರತೀಯ ರಾಜಕಾರಣದ ವಾಗ್ವಾದಗಳಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರ ವಾದಗಳು ಅಷ್ಟು ಪ್ರಭಾವಶಾಲಿ­ಯಾಗಿದ್ದೂ ವಿರೋಧ ಎದುರಿಸಬೇಕಾ­ಯಿತು. ಹಿಂದುತ್ವವು ಭಾರತ ದೇಶದ ಶಕ್ತಿಯನ್ನು ನಿರ್ಧರಿಸುವುದಾ­ದ್ದರಿಂದ ಹಿಂದೂ ನಂಬಿಕೆಗಳು, ಭಾವನೆಗಳೇ ಸರ್ಕಾರದ ಕಾರ್ಯಕ್ರಮ, ಯೋಜ­ನೆ­ಗಳನ್ನು ರೂಪಿಸುವ ಅಂಶಗಳಾಗಬೇಕು ಎಂದು ವಾದಿ­ಸಿದ ಬಲಪಂಥೀಯ ವಿಚಾರಧಾರೆಯ ಜನಸಂಘವು ನೆಹರೂ ಅವರನ್ನು ವಿರೋಧಿಸಿತು. ಖಾಸಗಿ ಸ್ವತ್ತಿನ ರಾಷ್ಟ್ರೀಕರಣ, ಸೋವಿಯತ್ ಒಕ್ಕೂಟದ ಜೊತೆಗಿನ ಆಪ್ತ ಸಂಬಂಧ ಹಾಗೂ ಎಲ್ಲೆಡೆ ಅಮೆರಿಕದ ಯೋಜನೆಗಳಿಗೆ ವಿರೋಧವನ್ನು ಪ್ರತಿಪಾದಿಸಿದ ಎಡಪಂಥೀಯ ಕಮ್ಯುನಿಸ್ಟರು ನೆಹರೂ ಹಾಗೂ ಅವರ ಕಾಂಗ್ರೆಸ್ ಪಕ್ಷವನ್ನು ಪ್ರಶ್ನಿಸಿದರು.ಹಿಂದೂ ಬಲಪಂಥೀಯರು ಹಾಗೂ ಕಮ್ಯು­ನಿಸ್ಟ್ ಎಡಪಂಥೀಯರು ಕಾಂಗ್ರೆಸ್ ನೇತೃತ್ವದ ರಾಷ್ಟ್ರೀಯ ಚಳವಳಿಯಿಂದ ಕೂಡ ದೂರ ಉಳಿದರು. ಆಸಕ್ತಿಕರ ಸಂಗತಿ ಎಂದರೆ, ನೆಹರೂ ಅವರ ಪರಿಣಾಮಕಾರಿ ಟೀಕಾಕಾರರಲ್ಲಿ ಕಾಂಗ್ರೆಸ್ ಪಕ್ಷದ ಮಾಜಿ ಸದಸ್ಯರೂ ಇದ್ದದ್ದು. ಅವರೆಲ್ಲಾ ನೆಹರೂ ಜೊತೆಗೆ ಹಿಂದೆ ಇದ್ದ ಸಂಬಂಧ ಕಡಿದುಕೊಂಡವರು. ೧೯೫೯ರಲ್ಲಿ, ತಮ್ಮ ಎಂಬತ್ತನೇ ವಯಸ್ಸಿನಲ್ಲಿ ಹೊಸ ಪಕ್ಷ ಕಟ್ಟಿದ ಸಿ. ರಾಜಗೋಪಾಲಾಚಾರಿ ಅಂಥವರಲ್ಲಿ ಒಬ್ಬರು.ಮುಕ್ತ ಮಾರುಕಟ್ಟೆ ಆರ್ಥಿಕತೆ ಹಾಗೂ ಅಮೆರಿಕದ ಜೊತೆಗಿನ ಸಂಬಂಧ ಸುಧಾರಣೆಗೆ ಉತ್ತೇಜನ ನೀಡಿದ ಅವರು ಕಟ್ಟಿದ ಪಕ್ಷದ ಹೆಸರು ‘ಸ್ವತಂತ್ರ’. ನೆಹರೂ ಪ್ರತಿಪಾದಿಸಿದ ರಾಜಕೀಯ ವಿಕೇಂದ್ರೀಕರಣ ಹಾಗೂ ಗ್ರಾಮ ಆರ್ಥಿಕತೆಯ ಪುನರುಜ್ಜೀವನದ ಮಾದರಿ­ಯನ್ನು ಜಯಪ್ರಕಾಶ್ ನಾರಾಯಣ್ (ಜೆ.ಪಿ.) ವಿರೋಧಿಸಿದರು. ಇಂಗ್ಲಿಷ್ ಮಾತನಾಡುವ, ಮೇಲ್ಜಾತಿ ಸಂವೇದನೆಯ, ಪರಕೀಯ ಪ್ರತಿನಿಧಿ­ಯಂತೆ ಇರುವ ನೆಹರೂ ಅವರು ಸಾಮಾನ್ಯ ಜನರ ಸಂಪರ್ಕದಿಂದ ದೂರ ಉಳಿದಿದ್ದಾರೆ ಎಂದು ರಾಮಮನೋಹರ ಲೋಹಿಯಾ ವಾದಿ­ಸು­ತ್ತಿದ್ದರು. ಕೆಳಜಾತಿಗಳು, ಬುಡಕಟ್ಟು ಜನಾಂಗ­ದವರು ಮತ್ತಿತರ ದಮನಿತ ವರ್ಗಗಳು ತಂತಾನೆ ಪರಿಣಾಮಕಾರಿ ರಾಜಕೀಯ ಶಕ್ತಿ ಪಡೆದಾಗ ಮಾತ್ರ ನಿಜಕ್ಕೂ ಭಾರತೀಯ ಪ್ರಜಾಪ್ರಭುತ್ವ ಜಾರಿಗೆ ಬಂದಂತೆ ಎಂದು ಲೋಹಿಯಾ ನಂಬಿದ್ದರು.ನೆಹರೂ ಅವರ ಈ ವಿರೋಧಿಗಳು ಬುದ್ಧಿಜೀವಿಗಳ ಮೇಲೆ ವಿಶಾಲ ಪರಿಣಾಮ ಬೀರಿದ್ದರು. ಭಾರತದ ಕೆಲವು ಶ್ರೇಷ್ಠ ಇತಿಹಾಸಕಾರರು (ಡಿ.ಡಿ. ಕೋಸಾಂಬಿ ಹಾಗೂ ಇರ್ಫಾನ್ ಹಬೀಬ್ ಅವರಂಥವರು) ಮಾರ್ಕ್ಸಿ­ಸ್ಟ್‌­ಗಳಾಗಿದ್ದರು. ಭಾರತದ ಕೆಲವು ಶ್ರೇಷ್ಠ ಲೇಖಕರು (ಆರ್.ಕೆ. ನಾರಾಯಣ್ ಹಾಗೂ ಮಾಸ್ತಿ ವೆಂಕಟೇಶ ಅಯ್ಯಂಗಾರ್ ತರಹದ­ವರು) ರಾಜಗೋಪಾಲಾಚಾರಿ ಅವರನ್ನು ಪೂಜ್ಯ ಭಾವನೆಯಿಂದ ನೋಡುತ್ತಿದ್ದರು.ಜೆ.ಪಿ. ಅವರ ಗ್ರಾಮ ಸ್ವ-ಆಡಳಿತದ ಪರಿಕಲ್ಪನೆಯು ಕೆಲವು ಉತ್ತಮ ರಾಜಕೀಯ ವಿಜ್ಞಾನಿಗಳು ಹಾಗೂ ಸಮಾಜ ವಿಜ್ಞಾನಿಗಳ ಗಮನ ಸೆಳೆಯಿತು. ತಮ್ಮ ಮೊನಚಾದ, ಚರ್ಚೆಗೆ ಎಳೆಯುವ ಸ್ವರೂಪದ ಮಾತಿನ ಶೈಲಿಯಿಂದಾಗಿ ಲೋಹಿಯಾ ಅವರು ಉತ್ತರ, ದಕ್ಷಿಣ ಹಾಗೂ ಪಶ್ಚಿಮ ಭಾರತದ ಬುದ್ಧಿಜೀವಿಗಳಿಗೆ ಅಚ್ಚಮೆಚ್ಚಿನವರಾಗಿದ್ದರು ತಮ್ಮನ್ನು ತಾವು ಲೋಹಿಯಾ­ವಾದಿಗಳು ಎಂದು ಕರೆದುಕೊಳ್ಳಲು ಸಂತೋಷ­ಪಡುತ್ತಿದ್ದ ಅನೇಕ ಲೇಖಕರು–ವಿದ್ವಾಂಸರು ಆ ಕಾಲಘಟ್ಟದಲ್ಲಿ ಇದ್ದರು.ನೆಹರೂ ಆಲೋಚನೆಗಳ ದಾಸ್ಯದಲ್ಲಿಯೇ ಉಳಿದದ್ದು ವಿದ್ವತ್ ಬೇಡುವ ಆರ್ಥಿಕ ಕ್ಷೇತ್ರ ಮಾತ್ರ. ಎರಡನೇ ಪಂಚವಾರ್ಷಿಕ ಯೋಜನೆಯ ಕರಡನ್ನು ಇಪ್ಪತ್ತನಾಲ್ಕು ಆರ್ಥಿಕ ತಜ್ಞರ ತಂಡಕ್ಕೆ ಕಳುಹಿಸಿಕೊಟ್ಟಾಗ, ಇಪ್ಪತ್ಮೂರು ತಜ್ಞರು ಅದನ್ನು ಅನುಮೋದಿಸಿದರು (ಅಹಮದಾ­ಬಾದ್ ಮೂಲದ ಆರ್ಥಿಕ ತಜ್ಞ ಬಿ.ಆರ್. ಶೆಣೈ ಅದನ್ನು ವಿರೋಧಿಸಿದವರಲ್ಲಿ ಒಬ್ಬರು).ಆರ್ಥಿಕ ತಜ್ಞರನ್ನು ಹೊರತುಪಡಿಸಿದರೆ ನೆಹರೂ ಆಲೋಚನೆಗಳನ್ನು ಬುದ್ಧಿಜೀವಿಗಳ ವಿವಿಧ ವರ್ಗಗಳು ಅಷ್ಟು ದೊಡ್ಡ ಮಟ್ಟದಲ್ಲಿ ಒಪ್ಪಿಕೊಳ್ಳಲಿಲ್ಲ. ರಾಜಕೀಯ ವಲಯದಲ್ಲೂ ವಿರೋಧಗಳು ವ್ಯಕ್ತವಾದವು. ಕಮ್ಯುನಿ­ಸ್ಟರು, ಸಮಾಜವಾದಿಗಳು, ಜನಸಂಘ ಹಾಗೂ ಸ್ವತಂತ್ರ ಪಕ್ಷಗಳು ವಿರೋಧಿಸಿದವು. ನೆಹರೂ ಪ್ರಧಾನಿ­ಯಾಗಿದ್ದಾಗ ಕೇಂದ್ರ ಹಾಗೂ ಬಹುತೇಕ ರಾಜ್ಯ ಸರ್ಕಾರಗಳನ್ನು ಕಾಂಗ್ರೆಸ್ ನಿಯಂತ್ರಿಸುತ್ತಿ­ತ್ತು. ಆದರೂ ನೆಹರೂ ಸಿದ್ಧಾಂತಗಳಿಗೆ ಸಹಮತ ಎನ್ನುವುದು ಇರಲಿಲ್ಲ.ನಾನು ೧೯೫೦ ಹಾಗೂ ೧೯೬೦ರ ದಶಕದ ಕುರಿತು ಒಬ್ಬ ಇತಿಹಾಸಕಾರನಾಗಿ ಬರೆಯಬಲ್ಲೆ. ಸ್ವಂತ ಅನುಭವ ಆಧರಿಸಿ ೧೯೭೦ ಹಾಗೂ ೧೯೮೦ರ ದಶಕಗಳ ಬೆಳವಣಿಗೆಗಳ ಬಗೆಗೂ ಬರೆಯಬಲ್ಲೆ. ಈ ದಶಕಗಳಲ್ಲಿ ರಾಜಕೀಯ, ಶೈಕ್ಷಣಿಕ ವಲಯಗಳಲ್ಲಿ ನೆಹರೂ ಸಿದ್ಧಾಂತ ಹಾಗೂ ಅವರ ಸಾಮ್ರಾಜ್ಯದ ಕುರಿತು ಸವಾಲು­ಗಳು ತೀವ್ರಗೊಂಡವು. ೧೯೭೭ರಲ್ಲಿ ಜನತಾ ಪಕ್ಷ ಅಧಿಕಾರಕ್ಕೆ ಬಂದಿತು.ಜನತಾ ಪಕ್ಷವನ್ನು ನೆಹರೂ ವಿರೋಧಿಗಳ ಸಂಯುಕ್ತ ಒಕ್ಕೂಟ ಎನ್ನಬಹುದು. ಲೋಹಿಯಾವಾದಿಗಳು, ಸ್ವತಂತ್ರ ಪಕ್ಷ ಬೆಂಬಲಿಸಿದವರು, ಜನಸಂಘದವರು ಈ ಬಣದಲ್ಲಿ ಇದ್ದರು. ಅದೇ ವರ್ಷ ಕೇರಳ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳ ಚುನಾವಣೆಗಳಲ್ಲಿ ಕಮ್ಯುನಿಸ್ಟರು ಗೆಲುವು ಸಾಧಿಸಿದರು. ರಾಜ­ಕೀಯ ಹಾಗೂ ಬೌದ್ಧಿಕ ವಾತಾವರಣವು ಕ್ರಮೇಣ ‘ನೆಹರೂವಾದ’ದಿಂದ ದೂರಸರಿಯ­ತೊಡಗಿತ್ತು. ಮುಕ್ತ ವ್ಯಾಪಾರ ಪ್ರತಿಪಾದಕರಾದ ಜಗದೀಶ್ ಭಗವತಿ ಹಾಗೂ ಟಿ.ಎನ್. ಶ್ರೀನಿವಾಸನ್ ತರಹದವರಿಂದ ಆರ್ಥಿಕ ತಜ್ಞರು ಬದಲಾಗಿದ್ದರು. ಈ  ತಜ್ಞರು ಈಚಿನ ದಿನಗಳಲ್ಲಿ ಭಾರಿ ಗೌರವ ಪಡೆದುಕೊಂಡಿದ್ದಾರೆ.೧೯೮೦ರಲ್ಲಿ ನಾನು ಕೋಲ್ಕತ್ತದಲ್ಲಿ ಪಿಎಚ್.ಡಿಗೆ ಕಾರ್ಯ ನಿರ್ವಹಿಸಲು ಆರಂಭಿ­ಸಿದೆ. ಆಗ ಆ ನಗರದ ಸಂಸ್ಕೃತಿಯಲ್ಲಿ ನೆಹರೂ ವಿರೋಧಿ ಭಾವನೆ ತೀವ್ರವಾಗಿತ್ತು. ಅಲ್ಲಿ ಬೌದ್ಧಿಕ ಕೇಂದ್ರ ಎನಿಸಿದ್ದ ‘ಸೆಂಟರ್ ಫಾರ್ ದಿ ಸ್ಟಡೀಸ್ ಆಫ್ ಸೋಷಿಯಲ್ ಸೈನ್ಸಸ್‌’ನಲ್ಲಿ ನನಗೆ ಮೊದಲ ಕೆಲಸ ಸಿಕ್ಕಿತು. ಸೆಂಟರ್‌ನ ಉದಯೋನ್ಮುಖ ಪ್ರತಿಭಾವಂತ ರಾಜಕೀಯ ವಿಜ್ಞಾನಿ ಪಾರ್ಥ ಚಟರ್ಜಿ ಆಗಿನ್ನೂ ಒಂದು ಪುಸ್ತಕ ಬರೆದಿದ್ದರು. ಅದರಲ್ಲಿ ನೆಹರೂ ಅವರನ್ನು ಒಬ್ಬ ಬಲಹೀನ ಸುಧಾರಕ ಎಂದು ಉಗ್ರವಾಗಿ ಟೀಕಿಸಿದ್ದ ಅವರು, ನೆಹರೂ ಮಾಡಿದ್ದು ಬರೀ ‘ನಿಷ್ಕ್ರಿಯ ಕ್ರಾಂತಿ’ ಎಂದಿದ್ದರು.ಆ ದಶಕದ ಕೊನೆಯಲ್ಲಿ ನಾನು ದೆಹಲಿಗೆ ಹೋದೆ. ಅಲ್ಲಿನ ‘ಸೆಂಟರ್ ಫಾರ್ ದಿ ಸ್ಟಡಿ ಆಫ್ ಡೆವಲಪಿಂಗ್ ಸೊಸೈಟೀಸ್’ (ಸಿ.ಎಸ್.ಡಿ.ಎಸ್.) ಮಾನವ ವಿಷಯಗಳ ಪಾಂಡಿತ್ಯದ ಮುಖ್ಯ ತಾಣವಾಗಿತ್ತು. ಅದರ ಕೇಂದ್ರ ಬಿಂದುವಾಗಿದ್ದವರು ರಜನಿ ಕೊಠಾರಿ. ಜೆ.ಪಿ. ಅಭಿಮಾನಿಯಾಗಿದ್ದ ಅವರು ಜನತಾ ಪ್ರಯೋಗದಲ್ಲಿ ಆಸಕ್ತಿ ಇಟ್ಟುಕೊಂಡಿದ್ದರು. ನಾಗರಿಕ ಸಮಾಜವನ್ನು ಉಪೇಕ್ಷಿಸಿದ್ದಕ್ಕೆ, ಆರ್ಥಿಕ ಶಕ್ತಿಯನ್ನು ಕೇಂದ್ರೀಕರಣಗೊಳಿಸಿದ್ದಕ್ಕೆ, ಸೋವಿ­ಯತ್ ಒಕ್ಕೂಟಕ್ಕೆ ತೀರಾ ಹತ್ತಿರವಾದದ್ದಕ್ಕೆ ನೆಹರೂರನ್ನು ರಜನಿ ಕೊಠಾರಿ ಟೀಕಿಸುತ್ತಿದ್ದರು.ಅದೇ ಸಿ.ಎಸ್.ಡಿ.ಎಸ್‌ನಲ್ಲಿ ಸಮಾಜಶಾ­ಸ್ತ್ರಜ್ಞ ಆಶಿಷ್‌ ನಂದಿ ಕೂಡ ಇದ್ದರು. ನೆಹರೂ ಕುರಿತ ಅವರ ಟೀಕೆ ಇನ್ನೂ ಮೂಲವಿಷಯ­ಗಳನ್ನು ಆಧರಿಸಿರುತ್ತಿತ್ತು. ಅವರ ಪ್ರಕಾರ ನೆಹರೂ ಕೆಲವೇ ಜನರ ಪ್ರಭುತ್ವ ಬೆಂಬಲಿಸಿದ ಸೊಕ್ಕಿನ ಪ್ರಧಾನಿ ಆಗಿದ್ದರು ಹಾಗೂ ಆಮ್ ಆದ್ಮಿ ಅರ್ಥಾತ್ ಸಾಮಾನ್ಯ ಜನರ ಸಂಸ್ಕೃತಿ, ಸಂಪ್ರ­ದಾಯದ ಕುರಿತು ಅವರಿಗೆ ಕಿಂಚಿತ್ತೂ ಕಾಳಜಿ ಇರಲಿಲ್ಲ. ಸುಸ್ಥಿರ ಕೃಷಿ ಪದ್ಧತಿ, ದೇಸಿ ಔಷಧ­ಗಳು, ಕರಕುಶಲ ಕಲೆಯ ಸಂಪ್ರದಾಯ ಇವೆಲ್ಲವುಗ­ಳನ್ನು ಒಳಗೊಂಡ ಸ್ಥಳೀಯ ಜ್ಞಾನ­ಶಾಖೆ­­ಗಳನ್ನು ಉಪೇಕ್ಷಿಸಿದಂತಹ ನೆಹರೂ ಅವರ ‘ಸೈಂಟಿಫಿಕ್ ಟೆಂಪರ್’ ಸಿದ್ಧಾಂತದ ಉಗ್ರ ಟೀಕಾಕಾರರಾಗಿದ್ದರು ನಂದಿ. ಮಾನವ­ಶಾಸ್ತ್ರಜ್ಞ ಟಿ.ಎನ್. ಮದನ್, ನೆಹರೂ ಮಾದ­ರಿಗೆ ಹೊರತಾದ ಗಾಂಧಿ ಪ್ರತಿಪಾದಿಸಿದ್ದ ಜಾತ್ಯ­ತೀತತೆಯ ಪರವಾಗಿದ್ದರು. ಜನಪ­ದ­ದಲ್ಲಿ ಇರುವ ನಂಬಿಕೆಗಳು, ಪರಸ್ಪರ ಅರ್ಥ ಮಾಡಿ­ಕೊ­ಳ್ಳಲು ನೆರವಾಗುವ ಶ್ರದ್ಧೆ-–ನಂಬಿಕೆಗಳನ್ನು ನೆಹರೂ ವಿರೋಧಿಸಿದ್ದು ಸರಿಯಲ್ಲ ಎಂದು ಅಭಿ­ಪ್ರಾಯಪಟ್ಟಿದ್ದ ಅವರು, ಅಂಥ ನಂಬಿಕೆ­ಗಳನ್ನು ಗೌರವಿಸಬೇಕು ಎಂದು ಕಿವಿಮಾತು ಹೇಳಿದ್ದರು.ನಾನು ೧೯೮೦ ಹಾಗೂ ೧೯೯೦ರ ದಶಕಗ­ಳಲ್ಲಿ ಕಂಡ (ಕೆಲವರ ಜೊತೆ ಕೆಲಸ ಕೂಡ ಮಾಡಿದೆ) ಸಮಾಜ ವಿಜ್ಞಾನಿಗಳು, ಇತಿಹಾಸಕಾ­ರರು, ಸಾಹಿತಿಗಳು, ರಾಜಕೀಯ ವಿಜ್ಞಾನಿ­­­ಗಳು ನೆಹರೂ ವಿಷಯದಲ್ಲಿ ತಣ್ಣನೆಯ ಭಾವನೆ ತಳೆದಿದ್ದರು. ಪಾರ್ಥ ಚಟರ್ಜಿ ಹಾಗೂ ಆಶಿಷ್‌ ನಂದಿಯವರಷ್ಟು ಪ್ರಭಾವಶಾಲಿಯಾದ ‘ನೆಹರೂ­ವಿ­ಯನ್ ಸ್ಕಾಲರ್’ (ನೆಹ­ರೂ­ವಾದದ ವಿದ್ವಾಂಸ) ಎಂದು ಯಾರನ್ನೂ ಬಣ್ಣಿಸಲು ಸಾಧ್ಯವಿರಲಿಲ್ಲ.ನೆಹರೂವಾದಿಗಳ ಹಿನ್ನಡೆಯನ್ನು ತೀವ್ರಗೊ­ಳಿಸಿದ ಇನ್ನೂ ಎರಡು ಗುಂಪುಗಳು ಈಗ ಮಹತ್ವ ಪಡೆದುಕೊಂಡಿವೆ. ಒಂದು, ಅಂಬೇಡ್ಕರ್ ವಾದಿ­ಗಳ ಗುಂಪು. ಇನ್ನೊಂದು, ಪರಿಸರವಾ­ದಿಗಳ ಗುಂಪು. ಗಾಂಧಿ ಅವರಂತೆ ನೆಹರೂ ಜಾತಿ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಬದಲಿಗೆ ಅವರು ಆರ್ಥಿಕ ಪ್ರಗತಿಯಿಂದಲೇ ಜಾತಿಗಳು ಗೌಣವಾಗುತ್ತವೆ ಎಂದು ಭಾವಿಸಿ­ದ್ದರು. ಹೊಸ ದಲಿತ ಚಿಂತಕರಿಗೆ ಇದು ಕುರುಡು ಧೋರಣೆಯಂತೆ ಕಂಡಿತು.ಅಂಬೇಡ್ಕರ್ ರಾಜೀ­ನಾಮೆ ಕೊಟ್ಟು, ನೆಹರೂ ಸಚಿವ ಸಂಪುಟದಿಂದ ಹೊರಬಂದದ್ದನ್ನೂ ಅವರು ನೆನಪಿಸಿಕೊಳ್ಳು­ತ್ತಾರೆ. ಇನ್ನೊಂದು ಕಡೆ, ಪರಿಸರವಾದಿಗಳಿಗೆ ನೆಹರೂ ಅವರನ್ನು ವಿರೋಧಿಸಲು ಕಾರಣಗಳಿ­ದ್ದವು. ಮೇಧಾ ಪಾಟ್ಕರ್ ತರಹದ ಚಳವಳಿಕಾರರು, ಮಾಧವ್ ಗಾಡ್ಗೀಳ್ ಅವರಂಥ ವಿಜ್ಞಾನಿಗಳು ನೆಹರೂ ಮಾದರಿಯ ಬಂಡವಾಳ ತೀವ್ರತೆ, ಶಕ್ತಿ ತೀವ್ರತೆಯ ಆರ್ಥಿಕ ಅಭಿವೃದ್ಧಿಯನ್ನು ವಿರೋಧಿ­ಸಿ­ದರು. ಇಂಥ ಅಭಿವೃದ್ಧಿಯಿಂದ ಕೃಷಿಕರು, ಬುಡಕಟ್ಟು ಜನರು ನೆಲ ಕಳೆದುಕೊಳ್ಳುತ್ತಾರೆ, ಅಪಾರ ಜೀವ ವೈವಿಧ್ಯ ನೆಲೆ ಕಳೆದುಕೊಳ್ಳುತ್ತದೆ ಎಂದು ಪ್ರತಿಪಾದಿಸಿ­ದರು. ನೆಹರೂ ಅವರು ದೇವಾಲಯಗಳು ಎಂದೇ ಕರೆದ ದೊಡ್ಡ ಅಣೆಕಟ್ಟುಗಳ ನಿರ್ಮಾಣವನ್ನು ಅವರೆಲ್ಲ ಖಂಡಿಸಿದರು.ಈ ಎಲ್ಲಾ ಕಾರಣಗಳಿಂದಾಗಿ ‘ನೆಹರೂ ಪ್ರಣೀತ ಸಿದ್ಧಾಂತಗಳಿಗೆ ಸಹಮತ’ ಎಂಬುದು ಕುಸಿದು ಬೀಳುತ್ತಿದೆ ಎಂದು ಈಗ ಮಾತ­ನಾ­ಡುತ್ತಿದ್ದಾರಲ್ಲ, ಅದು ಹಲವು ವರ್ಷಗಳ ಹಿಂದೆಯೇ ಮುಗಿದುಹೋದ ಅಧ್ಯಾಯ. ರಾಜ­ಕೀಯ ಸ್ತರದಲ್ಲಿ ತುರ್ತು ಪರಿ­ಸ್ಥಿತಿ, ಅಯೋಧ್ಯಾ ವಿವಾದ ಹಾಗೂ ಮುಕ್ತ ಮಾರುಕಟ್ಟೆ ನೀತಿ ಈಗಾಗಲೇ ನೆಹರೂವಾದದ ಮೂರು ಸ್ತಂಭಗಳನ್ನು– ಸಾಂವಿಧಾನಿಕ ಪ್ರಜಾಪ್ರಭುತ್ವ, ಧಾರ್ಮಿಕ ಸೌಹಾರ್ದ ಹಾಗೂ ರಾಷ್ಟ್ರೀಯ ಸ್ವಯಂಪೂರ್ಣತೆಯನ್ನು ಕುಗ್ಗಿಸಿವೆ. ಸೈದ್ಧಾಂತಿಕ ಸ್ತರದಲ್ಲಿ ನೆಹರೂ ಬಹಳ ಹಿಂದೆ, ೧೯೫೦ರ ದಶಕದಿಂದಲೂ ಪ್ರಶ್ನೆಗಳನ್ನು ಎದುರಿಸಿದರು. ನೆಹರೂ ಹಾಗೂ ಅವರ ಸಿದ್ಧಾಂತಗಳನ್ನು ವಿರೋಧಿಸಿದ ಬೌದ್ಧಿಕ ಪ್ರವೃತ್ತಿಗಳು ಸಕ್ರಿಯ­ವಾಗಿಯೇ ಇದ್ದವು. 1980ರ ದಶಕ­ದ ನಂತರ ವಿರೋಧದ ದನಿ ತೀವ್ರಗೊಂಡಿತು ಎನ್ನಬೇಕು.ಹೀಗಿದ್ದೂ ‘ನೆಹರೂ ಪ್ರಣೀತ ಸಿದ್ಧಾಂತಗಳಿಗೆ ಸಹಮತ’ದ ಕುರಿತು ಚರ್ಚೆ ಈಗ ಯಾಕೆ ನಡೆ­ಯುತ್ತಿದೆ? ನಮ್ಮ ಜನಪ್ರಿಯ ಸಂಸ್ಕೃತಿಯಲ್ಲಿ ಇತಿ­ಹಾಸದ ಕುರಿತು ಇರುವ ವ್ಯಾಪಕವಾದ ಅಜ್ಞಾನ ಇದಕ್ಕೆ ಒಂದು ಕಾರಣ. ಇನ್ನೊಂದು ಕಾರಣ, ಹಿಂದುತ್ವ ಸಿದ್ಧಾಂತ ಪ್ರತಿಪಾದಿಸುವವರ ಸ್ವ ಹಿತಾಸಕ್ತಿ. ಅವರ ಚಿಂತನೆಗಳು ಕಪ್ಪು–ಬಿಳುಪಿನಷ್ಟು ಸರಳವಾದುದು. ಅವುಗಳ ಹಿಂದಿನ ಸಂಕೀರ್ಣತೆಯನ್ನು ವಿವೇಚಿಸುವುದಿಲ್ಲ. ಬೌದ್ಧಿಕ ಸಹಮತದ ವಿಚಾರ­ದಲ್ಲಿ ತಮ್ಮನ್ನು ಯಾರ್‍್ಯಾರು ವಿರೋಧಿಸು­ವರೋ, ಅವರೆಲ್ಲರನ್ನು ನೆಹರೂ ಪ್ರಣೀತ ಸಿದ್ಧಾಂತಗಳಿಗೆ ಸಹಮತ ವ್ಯಕ್ತಪಡಿಸು­ವವರು ಎಂದು ಸಾಮಾನ್ಯೀಕರಿಸಿಬಿಡುತ್ತಾರೆ. ಈಗ ಹಿಂದುತ್ವವಾದಿಗಳಿಗೆ ರಾಜಕೀಯ ಅಧಿಕಾರ ಸಿಕ್ಕಿದೆ. ಅವರು ತಮ್ಮ ಈ ನಿಲುವನ್ನೇ ಇಟ್ಟು­ಕೊಂಡು ಸಾಂಸ್ಕೃತಿಕ, ಶೈಕ್ಷಣಿಕ ಕ್ಷೇತ್ರಗಳ ಮೇಲೆ ನಿಯಂತ್ರಣ ಸಾಧಿಸಬಹುದು.ನೆಹರೂ ಸಿದ್ಧಾಂತಗಳಿಗೆ ಸಹಮತದ ಬಗೆಗೆ ಮಾತನಾಡುತ್ತಿರುವ ಕೆಲವರು ಅಜ್ಞಾನಿಗಳು. ಇನ್ನು ಕೆಲವರು ಈ ವಿಷಯವನ್ನೇ ಒಂದು ದಾಳ­ವನ್ನಾಗಿಸಿ, ಕೆಡುಕು ಉಂಟುಮಾಡುವ ಮನ­ಸ್ಥಿತಿ­ಯವರು. ಆದ್ದರಿಂದ ‘ನೆಹರೂ  ಪ್ರಣೀತ ಸಿದ್ಧಾಂತ­­ಗಳಿಗೆ  ಸಹಮತ’ ಎನ್ನುವ ಬಳಕೆ ತಪ್ಪುದಾ­ರಿಗೆ ಎಳೆಯುತ್ತದೆ.ಲೋಹಿಯಾ, ಅಂಬೇಡ್ಕರ್‌, ರಾಜಾಜಿ, ಕೋಸಾಂಬಿ, ಜೆ.ಪಿ. ಮೊದಲಾದವರು ತಮ್ಮ ಸ್ವಂತ ಹಾಗೂ ನೆಹರೂ ಸಿದ್ಧಾಂತಗಳಿಗೆ ಭಿನ್ನವಾದ ಶ್ರೇಷ್ಠ ಚಿಂತನೆಗಳನ್ನು ಕೊಟ್ಟವರು. ಅವರೀಗ ನಮ್ಮ ನಡುವೆ ಇಲ್ಲ.  ಆಶಿಷ್‌ ನಂದಿ, ಪಾರ್ಥ ಚಟರ್ಜಿ, ಮಾಧವ ಗಾಡ್ಗೀಳ್‌ ಕೂಡ ತಮ್ಮದೇ ಚಿಂತನೆಗಳಿಂದ ಪ್ರಭಾವಿಸಿ­ದವರು. ಅವರೆಲ್ಲಾ ನಮ್ಮ ನಡುವೆ ಇದ್ದಾರೆ. ‘ನೆಹರೂ ಪ್ರಣೀತ ಸಿದ್ಧಾಂತಗಳಿಗೆ ಸಹಮತ’ ಎನ್ನುವ ನುಡಿಗಟ್ಟು ಅಂಥ ಮಹನೀಯರ ಸೃಜನ­ಶೀಲ ಕೆಲಸ, ಚಿಂತನೆಗಳನ್ನು ನಿರ್ಲಕ್ಷಿಸುತ್ತದೆ.ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.