ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾರಾಯಣ ಗುರು: ಕರುಣೆ ಪ್ರಜ್ಞೆಗಳ ತೀರ್ಥ

ಇಂದು ಜಯಂತಿ
Last Updated 9 ಸೆಪ್ಟೆಂಬರ್ 2022, 19:31 IST
ಅಕ್ಷರ ಗಾತ್ರ

ಆಧ್ಯಾತ್ಮಿಕತೆಗೆ ಸಮಾಜಸುಧಾರಣೆಯ ಹೃದಯ ಅಥವಾ ಸಮಾಜಸುಧಾರಣೆಗೆ ಆಧ್ಯಾತ್ಮಿಕತೆಯ ಪ್ರಜ್ಞೆ ಸೇರಿಕೊಂಡು ಮೂಡಿದ ವಿಗ್ರಹರೂಪವೇ ನಾರಾಯಣಗುರು(1854–1928). ಅವರು ಅದ್ವೈತದರ್ಶನದ ಹಿನ್ನೆಲೆಯಲ್ಲಿ ಸಮಾಜಸುಧಾರಣೆಯನ್ನು ಮಾಡಿದ ನಮ್ಮ ಕಾಲದ ಮಹಾದಾರ್ಶನಿಕ.

ನಾರಾಯಣ ಗುರುಗಳ ಪ್ರಸಿದ್ಧ ರಚನೆಗಳಲ್ಲೊಂದು ‘ದರ್ಶನಮಾಲಾ’. ಅಲ್ಲಿಯ ಪದ್ಯವೊಂದು ಹೀಗಿದೆ:

ದಗ್ಧ್ವಾ ಜ್ಞಾನಾಗ್ನಿನಾ ಸರ್ವಮುದ್ದಿಶ್ಯ ಜಗತಾಂ ಹಿತಮ್‌

ಕರೋತಿ ವಿಧಿವತ್‌ ಕರ್ಮ ಬ್ರಹ್ಮವಿದ್‌ ಬ್ರಹ್ಮಣಿ ಸ್ಥಿತಃ

ಇದು ಬ್ರಹ್ಮಜ್ಞಾನಿಯ ಲಕ್ಷಣವನ್ನು ವಿವರಿಸುತ್ತಿದೆ.

‘ಅರಿವು ಎಂಬ ಬೆಂಕಿಯಲ್ಲಿ ಎಲ್ಲ ಕರ್ಮಗಳನ್ನೂ ಸುಟ್ಟುಹಾಕಿದವನು. ಹೀಗಿದ್ದರೂ ಅವನು ವಿಧಿಬದ್ಧವಾದ ಕರ್ಮಗಳನ್ನು ಮಾಡುತ್ತಿರುತ್ತಾನೆ; ಹೀಗೆ ಅವನು ಮಾಡುವುದಾದರೂ ಜಗತ್ತಿನ ಹಿತಕ್ಕಾಗಿ. ಇಂಥವನು ಬ್ರಹ್ಮಜ್ಞಾನಿ.’

ಬ್ರಹ್ಮಜ್ಞಾನಿಯ ಈ ಲಕ್ಷಣದಂತೆಯೇ ಇದ್ದವರು ನಾರಾಯಣ ಗುರುಗಳು.

ಸಮಾಜದಲ್ಲಿ ಬೇರೂರಿದ್ದ ಅಸ್ಪೃಶ್ಯತೆಯ ರೋಗವನ್ನು ಪರಿಹರಿಸಲು ನಾರಾಯಣ ಗುರುಗಳು ಆರಿಸಿಕೊಂಡ ಮಾರ್ಗ– ಧರ್ಮ ಮತ್ತು ಅಧ್ಯಾತ್ಮ.ಇರುವುದು ಒಂದೇ ಸತ್ಯ; ಅದನ್ನು ಯಾವ ಹೆಸರಿನಿಂದಲಾದರೂ ಕರೆಯಿರಿ: ಆತ್ಮ, ಬ್ರಹ್ಮ, ಪರಮಾತ್ಮ, ಚೈತನ್ಯ – ಹೀಗೆ ಯಾವುದೂ ಆಗಬಹುದು. ಏಕೆಂದರೆ ಆ ‘ತತ್ತ್ವ’ ನಾಮ–ರೂಪಗಳಿಗೆ ಅತೀತವಾದದ್ದು. ಆದರೆ ಎಲ್ಲರಲ್ಲೂ ಎಲ್ಲೆಲ್ಲೂ ಎಲ್ಲ ಕಾಲದಲ್ಲೂ ಇರುವಂಥ ಶಾಶ್ವತಸತ್ಯವೇ ಅದು –ಎನ್ನುವುದು ಅದ್ವೈತದ ಸಾರ.

ಉಪನಿಷತ್ತುಗಳು ಪ್ರತಿಪಾದಿಸಿದ ಬ್ರಹ್ಮತತ್ತ್ವವನ್ನು ಎತ್ತಿಹಿಡಿದವರು ಶಂಕರಾಚಾರ್ಯರು. ಅವರು ಪ್ರತಿಪಾದಿಸಿದ ಸಿದ್ಧಾಂತವೇ ‘ಅದ್ವೈತ’ ಎಂಬ ಹೆಸರನ್ನು ಪಡೆಯಿತು. ಈ ಅದ್ವೈತದ ಬೆಳಕಿನಲ್ಲಿಯೇ ನಾರಾಯಣ ಗುರುಗಳು ಕೂಡ ತಮ್ಮ ದಾರ್ಶನಿಕತೆಯನ್ನು ಪ್ರತಿಪಾದಿಸಿದರು.

ಇರುವುದು ಒಂದೇ ತತ್ತ್ವ; ಅದು ಶುದ್ದತತ್ತ್ವ. ಹೀಗಾಗಿ ಅದರಲ್ಲಿ ಭೇದಭಾವಕ್ಕೆ ಅವಕಾಶವೇ ಇಲ್ಲ; ಜಾತಿ–ಮತಗಳ ಗೊಡವೆ ಅದಕ್ಕೆ ಇಲ್ಲ. ಎಲ್ಲರಲ್ಲೂ ಒಂದೇ ಪರಮಾತ್ಮವಸ್ತು ಇರುವಾಗ ಮನುಷ್ಯರಲ್ಲಿ ಒಬ್ಬರು ಮೇಲು, ಇನ್ನೊಬ್ಬರು ಕೀಳು ಎಂಬ ವಿಂಗಡಣೆಗೆ ಅವಕಾಶವಾದರೂ ಎಲ್ಲಿ? ಹೀಗಾಗಿ ಇಡಿಯ ಮನುಕುಲ ಆ ಚೈತನ್ಯದ ಸ್ವರೂಪವೇ ಹೌದು. ಸಮಾಜದಲ್ಲಿ ಜಾತಿಯ ಕಾರಣದಿಂದ ಶ್ರೇಷ್ಠ–ಕನಿಷ್ಠ ಎಂಬ ಗೋಡೆಗಳನ್ನು ಎಬ್ಬಿಸುವುದು ಅಧಾರ್ಮಿಕವೂ, ಆಧ್ಯಾತ್ಮಿಕತೆಗೆ ವಿರೋಧವೂ ಹೌದು ಎಂದು ಘೋಷಿಸಿ, ಸಮಾಜಸುಧಾರಣೆಗೆ ಅಧ್ಯಾತ್ಮಸ್ಪರ್ಶದ ಅಪೂರ್ವ ಕಾಂತಿಯನ್ನು ಒದಗಿಸಿದವರು ನಾರಾಯಣ ಗುರುಗಳು.

ಆಧುನಿಕ ಜಗತ್ತಿನ ಎಲ್ಲ ಸಮಸ್ಯೆಗಳ ಮೂಲ ಇಂದಿನ ಜನಾಂಗ ಧಾರ್ಮಿಕತೆಯಿಂದ ವಿಮುಖರಾಗುತ್ತಿರುವುದೇ ಹೌದು ಎಂದಿದ್ದಾರೆ ಒಂದೆಡೆ, ಖ್ಯಾತ ಇತಿಹಾಸತಜ್ಞ ವಿಲ್‌ ಡ್ಯುರೆಂಟ್‌. ಆದರೆ ಸಮಾಜವನ್ನು ನಾವು ನೋಡಿದಾಗ ಎಲ್ಲೆಲ್ಲೂ ಧಾರ್ಮಿಕತೆಯ ಹಿರಿಮೆಯೇ ಇದ್ದಂತೆ ಭಾಸವಾಗುತ್ತಿರುತ್ತದೆಯೆನ್ನಿ! ವಾಸ್ತವದಲ್ಲಿ ನಾವು ಇಂದು ನೋಡುತ್ತಿರುವ ಧಾರ್ಮಿಕತೆಯ ಬಹುಪಾಲು ಕಲಾಪಗಳು ಸೋಗಿನ, ತೋರಿಕೆಯ ಸಂಗತಿಗಳೇ ಹೌದು ಎಂಬುದು ನಮೆಲ್ಲರಿಗೂ ಅನುಭವಕ್ಕೆ ಬಂದಿರುತ್ತದೆ ಕೂಡ. ಈ ಅವಾಂತರಗಳ ನಡುವೆ ದಿಟವಾದ ಧಾರ್ಮಿಕತೆಯ ಬೆಳಕನ್ನು ಕಾಣಿಸಬಲ್ಲ ಗುರು ಎಲ್ಲ ಕಾಲಕ್ಕೂ ಬೇಕಾಗುತ್ತದೆ. ನಮ್ಮ ಕಾಲದಲ್ಲಿ ಹೀಗೆ ಕಾಣಿಸಿಕೊಂಡ ಗುರುಗಳಲ್ಲಿ ಒಬ್ಬರು ನಾರಾಯಣ ಗುರುಗಳು. ಸಮಾಜದ ಹಲವು ಅನಿಷ್ಟಗಳಿಗೆ ಧರ್ಮವೇ ಕಾರಣವಾಗಿರುವಾಗ, ಅದೇ ಧರ್ಮ ಅವುಗಳಿಗೆ ಪರಿಹಾರವನ್ನೂ ನೀಡಬಲ್ಲದು – ಎಂಬ ಅಪೂರ್ವ ಕಾಣ್ಕೆಯಿಂದ ಸಮಾಜದ ಕೊಳೆಯನ್ನು ಕಳೆಯಲು ತೊಡಗಿದ ಮಹಾಪುರುಷ ಅವರು. ಬುದ್ಧ ಭಗವಂತರು ಪ್ರತಿಪಾದಿಸಿದ ಕಾರುಣ್ಯಪಥ ಮತ್ತು ಶಂಕರಾಚಾರ್ಯರು ಪ್ರತಿಪಾದಿಸಿದ ಜ್ಞಾನಮಾರ್ಗ – ಈ ಎರಡು ಮಹಾಪ್ರಸ್ಥಾನಗಳ ಸಂಗಮವನ್ನು ಅವರಲ್ಲಿ ನಾವು ಕಾಣುತ್ತೇವೆ.

ನಾರಾಯಣ ಗುರುಗಳು ಕಟ್ಟಿಸುತ್ತಿದ್ದ ದೇವಸ್ಥಾನದ ಬಗ್ಗೆ ಕೆಲವರು ‘ಕೆಳಜಾತಿಯವರು ಶಿವ ದೇವಸ್ಥಾನವನ್ನು ಕಟ್ಟಿ ಶಿವನಿಗೆ ಮೈಲಿಗೆ ಉಂಟುಮಾಡಿದರು‘ ಎಂದು ಆಡಿಕೊಂಡರಂತೆ. ಆಗ ನಾರಾಯಣ ಗುರುಗಳು ‘ಮನುಷ್ಯನ ಕೈಗೆ ಸಿಕ್ಕಿ ಪಾಪ ದೇವರಿಗೂ ಮಡಿ–ಮೈಲಿಗೆಗಳು ಅಂಟಿಕೊಂಡವು! ಇರಲಿ, ನಾವು ಮೈಲಿಗೆಯ ಶಿವನನ್ನೇ ಪೂಜಿಸೋಣ; ಅವರು ಮಡಿ ಶಿವನನ್ನು ಪೂಜಿಸಿಕೊಳ್ಳಲಿ’ ಎಂದರಂತೆ. ಗುರುಗಳು ಶಿವನ ಪೂಜೆಯನ್ನು ತೊರೆಯಲಿಲ್ಲ ಎಂಬುದು ಗಮನಾರ್ಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT