ಶನಿವಾರ, ಮಾರ್ಚ್ 6, 2021
18 °C
ಮಂದಿರ ಕಟ್ಟುವ ಭರದಲ್ಲಿ ನೀವು ಕೆಡವಲು ಹೊರಟದ್ದೇನನ್ನು ಕಾವಿಧಾರಿಗಳೇ?

ಯಾವ ಜನ? ಯಾಕೀ ಆಗ್ರಹ?

ನಾರಾಯಣ ಎ. Updated:

ಅಕ್ಷರ ಗಾತ್ರ : | |

Deccan Herald

ಈ ಕಾಲಕ್ಕೆ ತೀರಾ ಅಗತ್ಯವಿರುವ ಸಂಯಮ ಮತ್ತು ಸ್ಥಿತಪ್ರಜ್ಞತೆಯನ್ನು ಜನಮನದಲ್ಲಿ ನೆಲೆಗೊಳಿಸಲು ನೆರವಾಗಬೇಕಿದ್ದ ಕಾವಿಧಾರಿ ವ್ಯಕ್ತಿಗಳೆಲ್ಲಾ ಬೀದಿಗಿಳಿದು ಅಯೋಧ್ಯೆಯ ರಾಮಮಂದಿರದ ವಿಷಯದಲ್ಲಿ ಪ್ರಚೋದನಕಾರಿ ಮಾತುಗಳನ್ನು ಆಡುತ್ತಿದ್ದಾರೆ. ಇದನ್ನವರು ಹಿಂದೆಯೂ ಮಾಡಿದ್ದಾರೆ.

ಈ ಸಲ ಅವರಲ್ಲಿ ಕೆಲವರು ಒಂದು ಹೆಜ್ಜೆ ಮುಂದುವರಿದು ದೇಶದ ಸಂವಿಧಾನಕ್ಕೆ ಮತ್ತು ನ್ಯಾಯಾಂಗಕ್ಕೆ ಸವಾಲು ಹಾಕುತ್ತಿದ್ದಾರೆ. ಹೀಗೆಲ್ಲಾ ಮಾಡಲು ಈ ಹಿಂದೆ ತೋರಿಕೆಗಾದರೂ ಕಂಡುಬರುತ್ತಿದ್ದ ಅಂಜಿಕೆ ಮಾಯವಾಗಿದೆ.

ಒಬ್ಬರಂತೂ 2019ರಲ್ಲಿ ಮಂದಿರ ಕಟ್ಟುವ ಕೆಲಸ ಪ್ರಾರಂಭಿಸಿಯೇ ಸಿದ್ಧ ಎಂದಿದ್ದಾರೆ. ವಿವಾದ ಸುಪ್ರೀಂ ಕೋರ್ಟ್‌ನಲ್ಲಿದೆ ಎನ್ನುವುದು ಅವರಿಗೆ ತಿಳಿದಿದೆ. ಸುಪ್ರೀಂ ಕೋರ್ಟ್ ‘ನಮಗೆ ನಗಣ್ಯ’ ಅಂತ ಪರೋಕ್ಷವಾಗಿ ಹೇಳುವ ವಿಧಾನ ಅದು. ಸಂವಿಧಾನವೇ ಸರಿ ಇಲ್ಲ ಎನ್ನುವ ಅರ್ಥದ ಮಾತುಗಳನ್ನು ಇವರು ಆಗಾಗ ಆಡುತ್ತಲೇ ಇದ್ದಾರೆ. ಅಥವಾ ಇಂತಹ ಮಾತುಗಳನ್ನು ಆಡಲು ರಾಜಕೀಯದಲ್ಲಿರುವ ತಮ್ಮ ಶಿಷ್ಯರನ್ನು ಪ್ರೇರೇಪಿಸುತ್ತಿದ್ದಾರೆ.

ಈ ತನಕ ಅಮಾಯಕ ಮನಸ್ಸುಗಳನ್ನು ಇನ್ನೊಂದು ಧರ್ಮದ ವಿರುದ್ಧ ಎತ್ತಿ ಕಟ್ಟುತ್ತಿದ್ದ ಖಾದಿ-ಕಾವಿ ಕೂಟ ಈ ಬಾರಿ, ದೇಶದ ಸಂವಿಧಾನ ಮತ್ತು ನ್ಯಾಯಾಂಗ ತಮ್ಮ ಧರ್ಮದ ವಿರೋಧಿಯಾಗಿವೆ ಎನ್ನುವ ಅಭಿಪ್ರಾಯ ಮೂಡುವಂತೆ ಜನಮನವನ್ನು ಹದಗೊಳಿಸುತ್ತಿದೆ. ಬಾಬರಿ ಮಸೀದಿಯನ್ನು ಒಡೆದುರುಳಿಸಿ ಆಗಿದೆ. ಇದೀಗ ಹೊಸ ಸನ್ನಾಹ. ಈ ದೇಶ ಎಲ್ಲಾ ರೀತಿಯ ಸವಾಲುಗಳನ್ನೂ ಎದುರಿಸಿ ಉಳಿಸಿಕೊಂಡು ಬಂದ ಸಾಂವಿಧಾನಿಕ ವ್ಯವಸ್ಥೆ ಮತ್ತು ಅದರ ಆತ್ಮಸಾಕ್ಷಿಯಂತಿರುವ ನ್ಯಾಯಾಂಗ ವ್ಯವಸ್ಥೆಯನ್ನೂ ಬುಡಮೇಲು ಮಾಡುವ ಸನ್ನಾಹ ಇದು. ಇಡೀ ಪ್ರಹಸನ ಅಪಾಯಕಾರಿ ಅಂತ ಅನ್ನಿಸುವುದು ಈ ಕಾರಣಕ್ಕೆ. ಇದೊಂದು ವಿನಾಶಕಾರಿ ವಿಕೃತೋದ್ಯಮ. ಇದು ರಾಮಪ್ರಜ್ಞೆ ಇರುವ ಮಂದಿ ಮಾಡುವ ಕೆಲಸವಲ್ಲ.

ರಾಮಾಯಣ ಮತ್ತು ಸಂವಿಧಾನದಲ್ಲಿರುವ ಧರ್ಮಮತ್ತು ಅಧ್ಯಾತ್ಮ ಕಿಂಚಿತ್ತಾದರೂ ಅರ್ಥವಾಗಿದ್ದರೆ ಚುನಾವಣಾ ಅಸ್ತ್ರವಾಗಿರುವ ರಾಮ ಮಂದಿರದ ಧರ್ಮ- ರಾಜಕಾರಣದಿಂದ ಕಾವಿಧಾರಿಗಳೆಲ್ಲಾ ಅಂತರ ಕಾಯ್ದುಕೊಳ್ಳಬೇಕಿತ್ತು. ಇವರ ಬೇಡಿಕೆಯನ್ನು ಅಧಿಕಾರದಲ್ಲಿರುವ ತಮ್ಮ ಶಿಷ್ಯವರ್ಗದವರಿಗೆ ನೇರವಾಗಿ ಹೇಳುವ ಬದಲು ಜನ ಸೇರಿಸಿ ‘ಜನಾಗ್ರಹ’ ನಡೆಸುವುದು ಯಾರ ವಿರುದ್ಧ? ಗೋಹತ್ಯೆಯ ವಿಚಾರದಲ್ಲಿ ಇವರು ಕೆರಳಿಸಿದ ಮಂದಿ ಈಗಾಗಲೇ ರಕ್ತದ ಓಕುಳಿಯ ಆಟ ಆಡುತ್ತಿದ್ದಾರೆ. ಇನ್ನು ಮಂದಿರದ ವಿಚಾರದಲ್ಲಿ ಜನರನ್ನು ಕೆರಳಿಸಿದರೆ ಏನೇನಾಗಬಹುದು ಎಂಬ ಕನಿಷ್ಠ ಕಾಳಜಿಯಾದರೂ ಕಾವಿ ಧರಿಸಿದವರಿಗೆ ಇರಬೇಡವೇ?

ಚರಿತ್ರೆಯ ಏಳುಬೀಳುಗಳ ಸುಳಿಯಲ್ಲಿ ಕಗ್ಗಂಟಾಗಿ ರುವ ವಿವಾದವೊಂದಕ್ಕೆ ಕೇಂದ್ರವಾಗಿರುವ ಸ್ಥಳದಲ್ಲೇ ರಾಮ ಮಂದಿರ ಕಟ್ಟದೆ ಹೋದರೆ ಧರ್ಮದ ಅಸ್ತಿತ್ವಕ್ಕೆ ಅಪಾಯ ಎಂದು ಜನರನ್ನು ನಂಬಿಸಲು ಹೊರಟಿರುವ ಈ ಮಂದಿ ತಿಳಿದುಕೊಳ್ಳಬೇಕಾಗಿರುವ ಮೂಲಭೂತ ಸತ್ಯವೊಂದು ಇದೆ. ಅದು ಏನು ಎಂದರೆ ಧರ್ಮದ ಅಸ್ತಿತ್ವಕ್ಕೆ ಅಪಾಯ ಇರುವುದು ಯಾವುದೋ ಮಂದಿರ ಕಟ್ಟಿಲ್ಲ ಎನ್ನುವ ಕಾರಣಕ್ಕೆ ಅಲ್ಲ. ಅಥವಾ ಇತಿಹಾಸದಲ್ಲಿ ನಡೆದಿದೆ ಎನ್ನಲಾದ ಅನ್ಯಾಯಕ್ಕೆ ಸೇಡು ತೀರಿಸದೆ ಇರುವ ಕಾರಣಕ್ಕಲ್ಲ.

ಇವರು ಯಾವ ಧರ್ಮವನ್ನು ರಕ್ಷಿಸಲು ಹೊರಟಿದ್ದಾರೋ ಆ ಧರ್ಮದ ಹೆಚ್ಚುಗಾರಿಕೆ ಇರುವುದೇ ಅದು ಗುಡಿಗುಂಡಾರಗಳನ್ನೆಲ್ಲಾ  ಪ್ರತಿಪಾದಿಸಿಲ್ಲ ಎನ್ನುವಲ್ಲಿ. ವಾಸ್ತವದಲ್ಲಿ ಆ ಧರ್ಮದ ಅಸ್ತಿತ್ವಕ್ಕೆ ಅಪಾಯ ಅಂತ ಇದ್ದರೆ ಅದು ಇರುವುದು ಕಾವಿ ತೊಟ್ಟು ರಾಜಕಾರಣ ಮಾಡುವ ಈ ಮಂದಿಯಿಂದ. ಇವರೆಲ್ಲಾ ಜಾತಿಗೊಂದು, ಉಪಜಾತಿಗೊಂದು ಮಠ ಕಟ್ಟಿಕೊಂಡು ಜಾತಿ- ಉಪಜಾತಿಗಳನ್ನು ಶಾಶ್ವತವಾಗಿ ಉಳಿಸಿಕೊಳ್ಳಲು ದೀಕ್ಷಾಬದ್ಧರಾಗಿರುವುದರಿಂದ. ಚುನಾವಣೆಯಲ್ಲಿ ‘ನಮ್ಮವರಿಗೆ’ ವೋಟುಹಾಕಿ ಎಂದು ಮೊಬೈಲ್ ಸಂದೇಶ ಕಳುಹಿಸುವವರೆಗೆ ಇರುವ ಇವರ ಧರ್ಮ-ವಿರೋಧಿ, ಪ್ರಜಾತಂತ್ರ ವಿರೋಧಿ ಜಾತಿ ಪ್ರೇಮದಿಂದ. ತಮ್ಮವರಾದರೆ ಜೈಲಲ್ಲಿ ಇದ್ದರೂ ಹೋಗಿ ಹರಸುವ ಇವರ ವೈರಾಗ್ಯರಾಹಿತ್ಯದಿಂದ. ವಿವೇಕಾನಂದರಾದಿಯಾಗಿ ಧರ್ಮಸುಧಾರಕರೆಲ್ಲರೂ ಎತ್ತಿತೋರಿಸಿದ್ದು
ಈ ಅಪಾಯವನ್ನೇ. ಗೀತೆಯ ಆರಂಭದ ಶ್ಲೋಕದಲ್ಲೇ ಧೃತರಾಷ್ಟ್ರ ‘ನಮ್ಮವರು ಮತ್ತು ಪಾಂಡವರು’ ಎಂಬುದಾಗಿ ತನ್ನ ತಮ್ಮನ ಮಕ್ಕಳನ್ನೇ ‘ಇತರರು’ ಎಂದು ಬಗೆದ ಹಾಗೆಯೇ ‘ನಮ್ಮವರು’ ಮತ್ತು ‘ಇತರರು’ ಎಂದೇ ಸದಾ ಚಿಂತಿಸಬೇಕಾಗಿರುವುದು ಬಹುತೇಕ ಕಾವಿಧಾರಿಗಳಿಗೆ ಅನಿವಾರ್ಯ. ಧರ್ಮಕ್ಕೆ ಅಪಾಯವಿರುವುದು ಈ ಇತರೀಕರಣದ (othering) ಪ್ರಕ್ರಿಯೆಯಿಂದ.

ಕೆಲವರ ದೃಷ್ಟಿಯಲ್ಲಿ ರಾಮ ದೇವರು. ಹಾಗೆಂದು ಈ ಕಾವಿಮಂದಿ ಹೇಳುವಂತೆ ರಾಮ ಈ ದೇಶದ ಏಕಮೇವಾ ದ್ವಿತೀಯ ದೇವರು ಅಂತ ಯಾರೂ ಭಾವಿಸಿಲ್ಲ. ನಂಬುವವರಿಗೆ ರಾಮನೂ ದೇವರು, ಬೊಬ್ಬರ್ಯನೂ ದೇವರು, ಅಣ್ಣಮ್ಮ ದೇವಿಯೂ ದೇವರು. ದೇವರನ್ನು ನಂಬುವವರೆಲ್ಲಾ ರಾಮನನ್ನು ದೇವರೆಂದು ನಂಬಬೇಕಿಲ್ಲ. ದೇವರನ್ನು ನಂಬದವರು ರಾಮನ ಪಾತ್ರದ ಉದಾತ್ತ ಮೌಲ್ಯಗ
ಳನ್ನು ಕಡೆಗಣಿಸುವುದಿಲ್ಲ. ದೇವರನ್ನು ನಂಬುವವರೆಲ್ಲಾ ರಾಮನ ಪಾತ್ರ ಪ್ರತಿಪಾದಿಸುವ ಎಲ್ಲಾ ಮೌಲ್ಯಗಳನ್ನು ಒಪ್ಪಿಕೊಳ್ಳುವುದಿಲ್ಲ. ಅಪ್ಪಟ ಹಿಂದೂ ಆಗಿದ್ದ ಗಾಂಧೀಜಿಯ ರಾಮ, ‘ನೂರು ದೇವರುಗಳ ನೂಕಾಚೆ ದೂರ’ ಎಂದ ಕುವೆಂಪು ಅವರ ‘ಶ್ರೀ ರಾಮಾಯಣ ದರ್ಶನಂ’ನ ರಾಮ, ವಾಲಿಯ ಪಾತ್ರ ವಹಿಸಿ ರಾಮನ ವ್ಯಕ್ತಿತ್ವದ ಸೌಧ ವನ್ನು ಮಾತಿನಲ್ಲೇ ಕೆಡಹುವ ಯಕ್ಷಗಾನ ಕಲಾವಿದರ ದೃಷ್ಟಿಯ ರಾಮ, ಕಬೀರದಾಸನ ರಾಮ, ಹೀಗೆ ರಾಮನಜತೆ ಭಾರತೀಯರಿಗಿರುವ ಸಾಂಸ್ಕೃತಿಕ ನಂಟು ಬಹುಬಗೆಯದ್ದು ಮತ್ತು ಸಹಜವಾದದ್ದು. ಅಯೋಧ್ಯೆಯಲ್ಲಿ ಮಂದಿರ ಕಟ್ಟಬೇಕೆಂಬ ಭಾವನೆ ಸಹಜವಾದದ್ದಲ್ಲ. ಅದು ಕೃತಕ, ಅದು ರಾಜಕೀಯ ಸೃಷ್ಟಿ. ಅದನ್ನು ಸಮಸ್ತ ಹಿಂದೂಗಳ ಭಾವನೆ ಎಂದು ಪ್ರತಿಪಾದಿಸಲು ಕೆಲ ಮಠಗಳ ಮಾಲೀಕರಿಗೆ ಯಾರೂ ಅಧಿಕಾರ ನೀಡಿಲ್ಲ.

ಕನಿಷ್ಠ ಧೈರ್ಯ ಮತ್ತು ಮಾನವೀಯತೆ ಉಳಿಸಿಕೊಂಡಿರುವ ರಾಜಕೀಯ ನಾಯಕರು ಯಾರಾದರೂ ಇದ್ದರೆ ಅವರು ಈ ಸನ್ನಿವೇಶದಲ್ಲಿ ಮಾಡಬಹುದಾದ ಒಂದು ಕೆಲಸವಿದೆ. ಅದು, ಅಯೋಧ್ಯೆಯ ವಿವಾದಿತ ಸ್ಥಳ ಈಗ ಹೇಗಿದೆಯೋ ಹಾಗೆಯೇ ಕಾಯ್ದುಕೊಳ್ಳುವಂಥ ಒಂದು ಕಾನೂನು ಜಾರಿಗೊಳಿಸಿ ಪುಣ್ಯಕಟ್ಟಿಕೊಳ್ಳುವುದು. ಮಂದಿರ, ಮಸೀದಿ, ಅಥವಾ ಇನ್ನು ಕೆಲವರು ಆಗ್ರಹಿಸುತ್ತಿರುವಂತೆ ಉದ್ಯಾನವನ, ಆಸ್ಪತ್ರೆ ಏನೂ ಬೇಡ. ಎಲ್ಲವೂ ಈಗ ಇದ್ದ ಹಾಗೆಯೇ ಇರಲಿ. ರಾಮನ ಹೆಸರಿನಲ್ಲಿ ಸ್ವತಂತ್ರ ಭಾರತದ ಜನ ಮಾಡಿದ್ದು ಇದನ್ನು ಅಂತ ಬಿದ್ದ ಮಸೀದಿಯನ್ನು ಮತ್ತು ಎಬ್ಬಿಸಿ ನಿಲ್ಲಿಸಿದ ರಾಮಲಲ್ಲಾನ ಮೂರ್ತಿಯನ್ನು ನೋಡಿ ಮುಂದಿನ ಜನಾಂಗ ಅದರದ್ದೇ ಆದ ಅಭಿಪ್ರಾಯಕ್ಕೆ ಬರಲಿ.

1991ರಲ್ಲಿ ನರಸಿಂಹ ರಾವ್ ನೇತೃತ್ವದ ಸರ್ಕಾರ The Places of Worship (Special Provisions) Act ಎಂಬ ಕಾನೂನು ಜಾರಿಗೆ ತಂದಿದೆ. ಅದರ ಪ್ರಕಾರ ಎಲ್ಲಾ ಪೂಜಾ ಸ್ಥಳಗಳನ್ನು ಅವುಗಳು 1947ರ ಆಗಸ್ಟ್ 15ರಂದು ಯಾವ ಸ್ಥಿತಿಯಲ್ಲಿದ್ದವೋ ಅದೇ ಸ್ಥಿತಿಯಲ್ಲಿ ಕಾಯ್ದುಕೊಳ್ಳಬೇಕಾಗುತ್ತದೆ. ಇಂತಹ ಸ್ಥಳಗಳ ಧಾರ್ಮಿಕ ಚಹರೆಯಲ್ಲಿ ಬದಲಾವಣೆ ಮಾಡುವುದು ಅಪರಾಧವಾಗುತ್ತದೆ. ದುರದೃಷ್ಟವಶಾತ್ ಈ ಕಾಯ್ದೆಯ ಸೆಕ್ಷನ್ 5ರ ಪ್ರಕಾರ ‘ರಾಮ ಜನ್ಮಭೂಮಿ-ಬಾಬ್ರಿ ಮಸೀದಿ’ ವಿವಾದಕ್ಕೆ ಕಾಯ್ದೆ ಅನ್ವಯವಾಗುವುದಿಲ್ಲ. ಈಗ ಮಾಡಬೇಕಾದುದು ಇಷ್ಟೇ. ಈ ಕಾಯ್ದೆಯನ್ನು ಅಯೋಧ್ಯೆಯ ವಿವಾದಿತ ಸ್ಥಳಕ್ಕೂ ಅನ್ವಯವಾಗುವಂತೆ ಮಾಡುವುದು. ಇಷ್ಟು ಮಾಡದೆ ಹೋದರೆ ಸ್ವತಃ ಶ್ರೀರಾಮನೇ ಬಂದು ಸಂಧಾನ ನಡೆಸಿದರೂ ಈ ವಿವಾದ ಪರಿಹಾರವಾಗುವುದಿಲ್ಲ.

ಈ ವಿವಾದ ಪರಿಹಾರವಾಗುವ ತನಕ ಧರ್ಮದ/ದೇವರ ಹೆಸರಿನಲ್ಲಿ ಜನರನ್ನು ಹಾದಿತಪ್ಪಿಸುವ ರಾಜಕೀಯವೂ ನಿಲ್ಲುವುದಿಲ್ಲ. ಆದುದರಿಂದ ಇಂತಹ ಒಂದು ಕಾನೂನಿನ ಜಾರಿಗಾಗಿ ಮತ್ತು ಆ ಮೂಲಕ ರಾಮನನ್ನು ರಾಜಕೀಯ ಪ್ರೇರಿತ ಕಾವಿಧಾರಿಗಳಿಂದ ಮತ್ತು ಅವರ ಅಭಯಾಶ್ರಯದಲ್ಲಿ ಪ್ರವರ್ತಿಸುವ ಸಂಘಟನೆಗಳಿಂದ ಬಿಡುಗಡೆಗೊಳಿಸಲು ಒಂದು ಚಳವಳಿಯ ಅಗತ್ಯವಿದೆ. ಅದು
ಪರೋಕ್ಷವಾಗಿ ಈ ದೇಶದ ಸಂವಿಧಾನ ಮತ್ತು ನ್ಯಾಯಾಂಗದ ರಕ್ಷಣೆಗಾಗಿ ನಡೆಯುವ ಚಳವಳಿಯೂ ಆಗುತ್ತದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು