ಬುಧವಾರ, ಮೇ 18, 2022
23 °C
ಆಗಸ್ಟ್ 14ರ ಸ್ವಾತಂತ್ರ್ಯ, ಆಗಸ್ಟ್ 15ರ ಸ್ವಾತಂತ್ರ್ಯ, ಶನಿಕಾಟ, ಗಿಣಿಶಕುನ ಇತ್ಯಾದಿ

ಅಶೋಕ ಚಕ್ರ ಹಿಮ್ಮುಖ ಚಲಿಸುತ್ತಿದೆ ನೋಡಾ!

ನಾರಾಯಣ ಎ Updated:

ಅಕ್ಷರ ಗಾತ್ರ : | |

Deccan Herald

1947ರಲ್ಲಿ ಭಾರತ ಸ್ವಾತಂತ್ರ್ಯ ಪಡೆದ ಚಾರಿತ್ರಿಕ ಕ್ಷಣಕ್ಕೆ ದೇಶದ ಜ್ಯೋತಿಷಿಗಳು ಮುಹೂರ್ತ ನಿರ್ಣಯಿಸಿದ ಕತೆ ಚರಿತ್ರೆಯ ಭಾಗ. ಆದರೆ ಅದು ಬಹಳ ಮಂದಿಗೆ ತಿಳಿದಿರಲಾರದು.

ಭಾರತ ಸ್ವಾತಂತ್ರ್ಯ ಪಡೆಯುವ ದಿನಾಂಕ ಆಗಸ್ಟ್ 15 ಆಗಿರಬೇಕು ಎಂದು ನಿರ್ಧರಿಸಿದ್ದು ವೈಸರಾಯ್ ಮೌಂಟ್‌ಬ್ಯಾಟನ್. ಒಂದು ಪತ್ರಿಕಾಗೋಷ್ಠಿಯಲ್ಲಿ ಕುಳಿತು ಕ್ಷಣಾರ್ಧದಲ್ಲಿ ಅವರು ದಿನ ನಿಶ್ಚಯ ಮಾಡಿದ್ದರು. 1948ರ ಜೂನ್‌ ಒಳಗೆ ಭಾರತೀಯರಿಗೆ ಅಧಿಕಾರ ಹಸ್ತಾಂತರ ಮಾಡುವ ಬ್ರಿಟಿಷ್ ಸರ್ಕಾರದ ನಿರ್ಧಾರವನ್ನು ತಿಳಿಸುವುದಕ್ಕಾಗಿ ಅವರು ಪತ್ರಿಕಾಗೋಷ್ಠಿ ಕರೆದಿದ್ದರು. ಪತ್ರಿಕಾಗೋಷ್ಠಿಗೆ ಬರುವಾಗ ಮೌಂಟ್‌ಬ್ಯಾಟನ್, ಅಧಿಕಾರ ಹಸ್ತಾಂತರದ ದಿನ ನಿರ್ಧರಿಸಿಕೊಂಡು ಬಂದಿರಲಿಲ್ಲ. ಇನ್ನೇನು ಪತ್ರಿಕಾಗೋಷ್ಠಿ ಮುಗಿಯಿತು ಎನ್ನುವ ವೇಳೆಗೆ ಪ್ರಶ್ನೆಯೊಂದು ತೂರಿಬಂತು. ‘ಅಧಿಕಾರ ಹಸ್ತಾಂತರ ನಿರ್ಣಯವಾಗಿದೆ ಎಂದಮೇಲೆ ಯಾವ ದಿನಾಂಕದಂದು ನಡೆಯಬೇಕು ಎಂದೂ ನಿರ್ಧರಿಸಿರಬೇಕಲ್ಲ? ಅದು ಯಾವತ್ತು ಅಂತ ತಿಳಿಸಬಹುದೇ?’

ಪ್ರಶ್ನೆ ಕೇಳಿದಷ್ಟೇ ಶೀಘ್ರವಾಗಿ ಮೌಂಟ್‌ಬ್ಯಾಟನ್ ಅವರ ಉತ್ತರವೂ ಬಂತು. ‘ಖಂಡಿತಾ ತಿಳಿಸಬಹುದು’. ಅಲ್ಲಿ ಸೇರಿದ್ದ ಅಷ್ಟೂ ಮಂದಿ ದೇಶ-ವಿದೇಶಗಳ ಪತ್ರಿಕಾ ಪ್ರತಿನಿಧಿಗಳ ಕಿವಿ ನೆಟ್ಟಗಾಯಿತು. ಎಲ್ಲರೂ ಬಿಟ್ಟ ಕಣ್ಣುಗಳಿಂದ ವೈಸರಾಯ್
ಅವರ ಬಾಯಿಂದ ಬರಲಿದ್ದ ಮುಂದಿನ ಶಬ್ದಕ್ಕಾಗಿ ಕಾಯತೊಡಗಿದರು. ಆದರೆ ಆ ಶಬ್ದ ಅರ್ಥಾತ್ ಭಾರತಕ್ಕೆ ಸ್ವಾತಂತ್ರ್ಯ ನೀಡುವ ದಿನಾಂಕ ಸ್ವತಃ ಮೌಂಟ್‌ಬ್ಯಾಟನ್ ಅವರಿಗೂ ಗೊತ್ತಿರಲಿಲ್ಲ. ವೈಸರಾಯ್ ಅವರ ತಲೆ ಶರವೇಗದಲ್ಲಿ ಯೋಚಿಸತೊಡಗಿತು. ಹಲವಾರು ದಿನಾಂಕಗಳು ಅವರ ಮನಃಪಟಲದಲ್ಲಿ ಹಾದುಹೋದವು. ಅವುಗಳಲ್ಲಿ ಒಂದು ದಿನಾಂಕವನ್ನು ಆಯ್ದು ಕ್ಷಣಾರ್ಧದಲ್ಲಿ ಅವರು ಘೋಷಿಸಿಯೇಬಿಟ್ಟರು. ಆಗಸ್ಟ್ 15.

ಹೌದು. ಆಗಸ್ಟ್ 15 ಯಾಕಾಗಬೇಕಿತ್ತು? ಹೇಳಿ ಕೇಳಿ ಆ ತನಕ ಸ್ವಾತಂತ್ರ್ಯ ಚಳವಳಿಗಾರರು ಸಾಂಕೇತಿಕವಾಗಿ ಸ್ವಾತಂತ್ರ್ಯೋತ್ಸವ ಆಚರಿಸುತ್ತಿದ್ದದ್ದು ಜನವರಿ 26ರಂದು. 1930ರಿಂದಲೂ ಇದು ನಡೆದುಬಂದಿತ್ತು. ಮತ್ಯಾಕೆ ಆಗಸ್ಟ್ 15? ‘ಆ ಕ್ಷಣಕ್ಕೆ ನನ್ನ ಇಚ್ಛೆಯ ಪ್ರಕಾರವೇ ಎಲ್ಲವೂ ನಡೆಯಬೇಕು ಎಂದುಕೊಂಡು ಡಿಢೀರ್ ಆಗಿ ದಿನಾಂಕ ಪ್ರಕಟಿಸಿದೆ’ ಅಂತ ನಂತರ ಮೌಂಟ್‌ಬ್ಯಾಟನ್ ಹೇಳಿಕೊಂಡಿದ್ದಾರೆ.

ಅವರೇ ನಿರ್ಧರಿಸಿದ್ದೇನೋ ಸರಿ. ಅವರು ಆ ದಿನಾಂಕವನ್ನೇ ಯಾಕೆ ಆಯ್ದುಕೊಳ್ಳಬೇಕಿತ್ತು? ಅದಕ್ಕೂ ಒಂದು ಹಿನ್ನೆಲೆ ಇದೆ. ಎರಡು ವರ್ಷಗಳ ಹಿಂದೆ ಅದೇ ದಿನ ಅಂದರೆ 1945ರ ಆಗಸ್ಟ್ 15ರಂದು ಅವರು ಲಂಡನ್‌ನಲ್ಲಿ ಮಾಜಿ ಪ್ರಧಾನಿ ವಿನ್‌ಸ್ಟನ್ ಚರ್ಚಿಲ್ ಅವರ ಕಚೇರಿಯಲ್ಲಿ ಕುಳಿತಿದ್ದಾಗ ರೇಡಿಯೊದಲ್ಲಿ ಸುದ್ದಿಯೊಂದು ತೇಲಿಬಂದಿತ್ತು. ಅದು ಎರಡನೆಯ ಜಾಗತಿಕ ಮಾಹಾಯುದ್ಧದ ಕಾಲ. ಮೌಂಟ್‌ಬ್ಯಾಟನ್, ಆಗ್ನೇಯ ಏಷ್ಯಾಪ್ರದೇಶಕ್ಕೆ ಬ್ರಿಟಿಷ್ ಸೇನೆಯ ಮಹಾದಂಡನಾಯಕರಾಗಿದ್ದರು. ಅಂದು ರೇಡಿಯೊ ಬಿತ್ತರಿಸಿದ್ದು ಯುದ್ಧದಲ್ಲಿ ಜಪಾನ್ ಸೋತು ಶರಣಾದ ಸುದ್ದಿಯನ್ನು. ಅದು ಮೌಂಟ್‌ ಬ್ಯಾಟನ್ ಅವರ ದಂಡನಾಯಕತ್ವಕ್ಕೆ ಸಂದ ಜಯವೂ ಆಗಿತ್ತು. ಅದಕ್ಕಿಂತಲೂ ಹೆಚ್ಚಾಗಿ ಜಪಾನ್‌ನಲ್ಲಿ ಅರಸೊ
ತ್ತಿಗೆ ಅಂತ್ಯಗೊಂಡು ಪ್ರಜಾತಂತ್ರ ಹುಟ್ಟಿಕೊಳ್ಳಲು ಅನುವಾಗುವ ಸುದ್ದಿ ಅದು. ಒಬ್ಬ ಸೇನಾ ನಾಯಕನಾಗಿ ತನ್ನ ಜೀವನದ ವಿಶೇಷ ಸಾಧನೆಯ ಅದೇ ದಿನಾಂಕವನ್ನೇ ತನ್ನ ನೇತೃತ್ವದಲ್ಲಿ ಭಾರತಕ್ಕೆ ಸ್ವಾತಂತ್ರ್ಯ ನೀಡುವ ಕೆಲಸಕ್ಕೂ ಮೌಂಟ್‌ಬ್ಯಾಟನ್ ಆಯ್ದುಕೊಂಡರು. ರೇಡಿಯೊದಲ್ಲಿ ಭಾರತದ ಸ್ವಾತಂತ್ರ್ಯ ದಿನಾಂಕ ಜಗತ್ತಿಗೆ ಬಿತ್ತರವಾಯಿತು.

ದೇಶದ ಜನ ಸಂಭ್ರಮಪಟ್ಟರು. ಆದರೆ ದೇಶದ ಜ್ಯೋತಿಷಿಗಳು ಆತಂಕಕ್ಕೊಳಗಾಗಿದ್ದರು. ಎಷ್ಟು ಕವಡೆ ಎಸೆದು, ಎಷ್ಟು ರಾಶಿ ಹಾಕಿ ಏನೇನು ಗ್ರಹಗತಿ ಲೆಕ್ಕಾಚಾರ ಹಾಕಿದರೂ ಅವರ ಆತಂಕ, ದಿಗಿಲು ಕಡಿಮೆಯಾಗಲಿಲ್ಲ. ಜ್ಯೋತಿಷದ ಪ್ರಕಾರ ಆ ವರ್ಷದ ಆಗಸ್ಟ್ 15, ಶುಕ್ರವಾರವು ಪರಮ ಅಶುಭ ದಿನವಾಗಿತ್ತು. ಮಕರ ರಾಶಿಯಲ್ಲಿ ಶನಿ ಪ್ರಭಾವ ದೇಶದ ಮೇಲೆ ದಟ್ಟವಾಗಿತ್ತು. ಆ ದಿನ ಅಧಿಕಾರ ಹಸ್ತಾಂತರ ಆದರೆ ದೇಶ ಘನಘೋರ ಭವಿಷ್ಯ ಎದುರಿಸಬೇಕಾಗುತ್ತದೆ ಅಂತ ಅವರೆಲ್ಲಾ ಎಚ್ಚರಿಸಿದರು. ಇಷ್ಟು ವರ್ಷ ಕಾದಿದ್ದಾಯಿತು. ಇನ್ನೊಂದು ದಿನ ಕಾಯಬಾರದೇ? ಜ್ಯೋತಿಷಿಗಳು ಕಂಡಕಂಡವರಲ್ಲಿ ವಿಷಯ ತಿಳಿಸಿದರು. ಕಲ್ಕತ್ತಾದಿಂದ ಸ್ವಾಮಿ ಮದನಾನಂದ ನೇರವಾಗಿ ವೈಸರಾಯ್ ಅವರಿಗೆ ಪತ್ರ ಬರೆದರು: ‘ದೇವರ ಪ್ರೀತಿ
ಯಾಗಿ ಹೇಳುತ್ತೇನೆ. ದಯಮಾಡಿ ಆಗಸ್ಟ್ 15ರಂದು ದೇಶಕ್ಕೆಸ್ವಾತಂತ್ರ್ಯನೀಡಬೇಡಿ. ನಿಮ್ಮ ಈ ಒಂದು ನಿರ್ಧಾರದಿಂದ ದೇಶ ಮುಂದೆ ಕ್ಷಾಮ, ಡಾಮರ, ನೆರೆ, ಮಾರಣಹೋಮ ಇತ್ಯಾದಿಗಳನ್ನು ಯಥೇಚ್ಛವಾಗಿ ಕಾಣಬೇಕಾದೀತು’.

ದಿನಾಂಕ ಬದಲಿಸಲು ವೈಸರಾಯ್ ಒಪ್ಪಲಿಲ್ಲ. ಜ್ಯೋತಿಷಿಗಳು ತಮ್ಮ ಹಟ ಬಿಡಲಿಲ್ಲ. ಕೊನೆಗೂ ಒಂದು ನಿರ್ಧಾರಕ್ಕೆ ಬರಲಾಯಿತು. ಬ್ರಿಟಿಷರಿಗೆ ದಿನ ಪ್ರಾರಂಭವಾಗುವುದು ರಾತ್ರಿ 12ಕ್ಕೆ. ಭಾರತದಲ್ಲಿ ದಿನ ಪ್ರಾರಂಭವಾ
ಗುವುದು ಸೂರ್ಯೋದಯಕ್ಕೆ. ಆಗಸ್ಟ್ 14ರ ಮಧ್ಯರಾತ್ರಿಯ ವೇಳೆಗೆ ಎಲ್ಲವೂ ನಡೆದುಹೋದರೆ ಎರಡೂ ಕಡೆಯವರಿಗೂ ಸಮಾಧಾನ ಆಗುತ್ತದೆ. ಆ ಕಾರಣಕ್ಕೆ ಆಗಸ್ಟ್ 15ರಂದು ಹಗಲು ನಡೆಯಬೇಕಾಗಿದ್ದ ಧ್ವಜಾರೋಹಣವು ಕೆಂಪುಕೋಟೆಯಲ್ಲಿ ಆಗಸ್ಟ್ 14ರ ಮಧ್ಯರಾತ್ರಿ ನಡೆದುಹೋಯಿತು. ಜ್ಯೋತಿಷಿಗಳು ನಿಟ್ಟುಸಿರಿಟ್ಟರು. ಎಲ್ಲವೂ ಕಳೆದ ಬಳಿಕ ಮೌಂಟ್‌ಬ್ಯಾಟನ್ (ಅವರು ಸ್ವಾತಂತ್ರ್ಯಾನಂತರ ಗವರ್ನರ್ ಜನರಲ್ ಆಗಿ ಒಂದು ವರ್ಷ ಮುಂದುವರಿಯುತ್ತಾರೆ) ತಮ್ಮ ಕಾರ್ಯದರ್ಶಿ ಅಲೆನ್ ಕ್ಯಾಂಪ್‌ಬೆಲ್- ಜಾನ್ಸನ್ ಅವರನ್ನು ಕರೆದು ಹೀಗೆ ಹೇಳುತ್ತಾರೆ: ‘ಯಾವುದಕ್ಕಾದರೂ ಇರಲಿ, ನಮ್ಮ ಉನ್ನತ ಮಟ್ಟದ ಸಲಹೆಗಾರರ ಬಳಗದಲ್ಲಿ ಒಬ್ಬ ಜ್ಯೋತಿಷಿಯನ್ನು ಕೂಡಾ ಸೇರಿಸಿಕೊಂಡಿರಿ’!

ಸ್ವಾತಂತ್ರ್ಯದ ಮುಹೂರ್ತ ನಿರ್ಣಯದ ವಿಷಯದಲ್ಲಿ ಈ ದೇಶದ ಜ್ಯೋತಿಷ ಶಕ್ತಿಯನ್ನು ಯಾರಿಗೂ ನಿಲ್ಲಿಸಲಾಗಲಿಲ್ಲ. ಎಲ್ಲವೂ ಶುಭಮುಹೂರ್ತದಲ್ಲಿ ನಡೆಯಿತು ಎನ್ನುವ ಕಾರಣಕ್ಕೆ ದೇಶ ಕ್ಷಾಮ, ಡಾಮರ, ನೆರೆ, ಬರ, ಮಾರಣಹೋಮಗಳಿಂದ ಮುಕ್ತವಾಗಲಿಲ್ಲ ಎಂದು ಜ್ಯೋತಿಷ ನಂಬದವರು ನಗಬಹುದು. ಜ್ಯೋತಿಷ ನಂಬುವವರು ಮೌಂಟ್‌ಬ್ಯಾಟನ್ ನಿರ್ಧರಿಸಿದ್ದ ಅದೇ ಅಶುಭ ಮುಹೂರ್ತದಲ್ಲೇ ಎಲ್ಲವೂ ನಡೆದುಹೋಗಿದ್ದರೆ ಈ ಎಲ್ಲಾ ಸಂಕಷ್ಟಗಳೂ ಇನ್ನೂ ಹೆಚ್ಚಿಗೆ ನಡೆದು ದೇಶ ವಿನಾಶವಾಗುತ್ತಿತ್ತು ಅಂತ ವಾದಿಸುತ್ತಾ ಇರಬಹುದು. ಈ ಒಂದು ದ್ವಂದ್ವದಿಂದ ಈ ದೇಶಕ್ಕೆ ಇನ್ನೂ ಸ್ವಾತಂತ್ರ್ಯ ಬಂದಿಲ್ಲ. ಮುಂದೊಂದು ದಿನ ಬರಬಹುದೇ? ಕುತೂಹಲ ಇದ್ದವರು ಮತ್ತೆ ಜ್ಯೋತಿಷಿಗಳ ಮೊರೆಹೋಗಿಯೇ ಉತ್ತರ ಪಡೆದುಕೊಳ್ಳಬಹುದು.

ಆಗಸ್ಟ್ 14ರ ಮಧ್ಯರಾತ್ರಿ ಬ್ರಿಟಿಷ್ ಧ್ವಜ ಕೆಳಗಿಳಿಯುತ್ತಲೇ ಕೆಂಪುಕೋಟೆಯಲ್ಲಿ ಮೇಲೇರಿದ್ದು ಭಾರತದ ತ್ರಿವರ್ಣ ಧ್ವಜ. ಈ ಧ್ವಜ ಸ್ವಾತಂತ್ರ್ಯಕ್ಕೆ ಮುನ್ನ ಭಾರತೀಯ ರಾಷ್ಟ್ರೀಯ ಚಳವಳಿಯ ಅರ್ಥಾತ್ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಧ್ವಜದ ಪರಿಷ್ಕೃತ ರೂಪ. ಮೂಲ ಧ್ವಜದಲ್ಲಿ ಆದ ಬಹುಮುಖ್ಯ ಪರಿಷ್ಕರಣೆ ಅಂತ ಅಂದರೆ ಅದರ ಮಧ್ಯಭಾಗದಲ್ಲಿ ಅಶೋಕ ಚಕ್ರವನ್ನು ಸೇರಿಸಿದ್ದು. ಮೂಲ ಧ್ವಜದಲ್ಲಿ ಇದ್ದದ್ದು ಚರಕದ ಚಿತ್ರ. ಮಹಾತ್ಮ ಗಾಂಧಿ ಇಡೀ ರಾಷ್ಟ್ರೀಯ ಚಳವಳಿಯಲ್ಲಿ ಬಳಸಿದ ಬಹುಮುಖ್ಯ ದೇಶೀಯ ಸಂಕೇತವಾಗಿದ್ದ ಚರಕವನ್ನು ರಾಷ್ಟ್ರಧ್ವಜದಲ್ಲಿ ಮುಂದುವರಿಸುವುದಕ್ಕೆ ಸಂವಿಧಾನ ಸಭೆಯಲ್ಲಿ ಹಲವಾರು ಸದಸ್ಯರು ಆಕ್ಷೇಪ ವ್ಯಕ್ತಪಡಿಸುತ್ತಾರೆ. ಅದಕ್ಕೆ ಒಂದು ಕಾರಣ– ರಾಜಕೀಯ ಪಕ್ಷದ ಧ್ವಜವನ್ನು ಇದ್ದಕ್ಕಿದ್ದ ಹಾಗೆ ರಾಷ್ಟ್ರಧ್ವಜವನ್ನಾಗಿ ಒಪ್ಪಿಕೊಳ್ಳುವುದು ಸರಿಯಲ್ಲ ಎನ್ನುವುದು. ಅದಕ್ಕಿಂತಲೂ ಮುಖ್ಯವಾಗಿ, ಅಂದಿನ ಕಾಂಗ್ರೆಸ್ಸಿಗರೂ ಸೇರಿದಂತೆ ಹಲವರಿಗೆ ಚರಕ ಪ್ರಾಚೀನತೆಯ, ಅವೈಜ್ಞಾನಿಕತೆಯ, ಸ್ತ್ರೀಯರ ಕೆಲಸದ ಸಂಕೇತವಾಗಿ ಕಂಡಿತ್ತಂತೆ. ಸ್ವಾತಂತ್ರ್ಯಕ್ಕೆ ಮುಹೂರ್ತ ನಿರ್ಣಯದ ವೇಳೆ ಕಾಣಿಸದ ವೈಜ್ಞಾನಿಕತೆಯ ಪ್ರಶ್ನೆ ಚರಕದ ವಿಷಯದಲ್ಲಿ ಮೂಡುತ್ತದೆ ಎನ್ನುವುದು ಕುತೂಹಲದ ವಿಷಯ.

ಕೊನೆಗೆ ಸಾರಾನಾಥದಲ್ಲಿದ್ದ ಅಶೋಕ ಸ್ತಂಭದಲ್ಲಿ ಕೆತ್ತಲಾದ ಚಕ್ರವರ್ತಿ ಅಶೋಕನ ಧರ್ಮಚಕ್ರವನ್ನೇ ಧ್ವಜದಲ್ಲಿ ಸೇರಿಸುವುದು ಎಂದು ಸಂವಿಧಾನ ಸಭೆ 1947ರ ಜುಲೈ 22ರಂದು ನಿರ್ಣಯಿಸುತ್ತದೆ. ಈ ವಿಷಯ ಗಾಂಧೀಜಿ ಗಮನಕ್ಕೆ ಬರುತ್ತಲೇ ಅವರ ಮುಖ ಬಾಡುತ್ತದೆ. ‘ಚರಕವಿಲ್ಲದ ಧ್ವಜಕ್ಕೆ ನಾನು ವಂದಿಸಲಾರೆ’ ಎನ್ನುತ್ತಾರೆ. ಚರಕ ಅವರ ಪಾಲಿಗೆ ಬರೀ ನೂಲುವ ಸಾಧನವಾಗಿರಲಿಲ್ಲ. ಅವರ ಕಲ್ಪನೆಯ ಭಾರತದ ಅಸದೃಶ ಸಂಕೇತವಾಗಿತ್ತು. ಗಾಂಧೀಜಿಯನ್ನು ಸಮಾಧಾನಪಡಿಸಲು ನೆಹರೂ ಯತ್ನಿಸುತ್ತಾರೆ. ಚರಕದ ಚಕ್ರವೂ ಚಕ್ರ, ಅಶೋಕ ಚಕ್ರವೂ ಚಕ್ರ. ಈ ಚಕ್ರವನ್ನೂ ಚರಕದ ಚಕ್ರ ಅಂತಲೇ ತಾವು ಭಾವಿಸಬೇಕು ಅಂತ ಗಾಂಧಿಯವರಲ್ಲಿ ಕೇಳಿಕೊಳ್ಳುತ್ತಾರೆ. ಒಲ್ಲದ ಮನಸ್ಸಿನಿಂದ ಗಾಂಧೀಜಿ ಒಪ್ಪಿಕೊಳ್ಳುತ್ತಾರೆ. ಧ್ವಜದ ವಿಷಯದಲ್ಲಿ ವಾದಿಸುವ ಸಮಯ ಅದಾಗಿರಲಿಲ್ಲ. ವಿಭಜನೆಯ ಕಾರ್ಮೋಡ ದೇಶವನ್ನು ಮತ್ತು ಅವರ ಮನಸ್ಸನ್ನು ಆವರಿಸಿತ್ತು. ಎಲ್ಲೆಡೆ ರಕ್ತ ಹರಿಯುತ್ತಿತ್ತು.

ಮುಂದಿನ ದಿನಗಳಲ್ಲಿ ಧ್ವಜ ವಿನ್ಯಾಸದ ಕುರಿತಾದ ತನ್ನ ಬಿಗಿ ನಿಲುವನ್ನು ಗಾಂಧೀಜಿ ಸಡಿಲಿಸುತ್ತಾರೆ. 1947ರ ಆಗಸ್ಟ್ 3ರಂದು ‘ಹರಿಜನ ಬಂಧು’ ಪತ್ರಿಕೆಯಲ್ಲಿ ಬರೆದ ಲೇಖನದಲ್ಲಿ ಗಾಂಧೀಜಿ ಧ್ವಜದ ಕುರಿತು ಹೀಗೆ ಬರೆಯುತ್ತಾರೆ: ‘... ಧ್ವಜದ ನಡುವಣ ಆ ಚಕ್ರವನ್ನು ನೋಡಿ ಕೆಲವರಾದರೂ ಅಶೋಕ ಚಕ್ರವರ್ತಿ ಅಧಿಕಾರ ತ್ಯಜಿಸಿ ಶಾಂತಿ ದೂತನಾದದ್ದನ್ನು ನೆನಪಿಸಿಕೊಳ್ಳಬಹುದು. ಕೆಲವರಾದರೂ ಅಶೋಕನ ದಯಾಮಯ ಹೃದಯವನ್ನು ನೆನಪಿಸಿಕೊಳ್ಳಬಹುದು. ಆ ಚಕ್ರದಲ್ಲಿ ಚರಕವನ್ನು ಕಾಣುತ್ತಿದ್ದರೆ ಚರಕದ ಮಹಿಮೆ ಇನ್ನೂ ಒಂದು ತೂಕ ಹೆಚ್ಚಿದೆ ಅಂತ ನಾನು ಭಾವಿಸುತ್ತೇನೆ’.

ಆದರೆ ಧ್ವಜಕ್ಕೆ ವಂದಿಸುವ ವಿಷಯದಲ್ಲಿ ಗಾಂಧೀಜಿ ಬಯಸಿದಂತೆಯೇ ಆಯಿತು. ಕೆಂಪುಕೋಟೆಯಲ್ಲಿ ಮೇಲೇರಿದ ತ್ರಿವರ್ಣ ಪತಾಕೆಗೆ ಧ್ವಜವಂದನೆ ಮಾಡುವ ಪ್ರಮೇಯ ಅವರಿಗೆ ಬರಲಿಲ್ಲ. ಆ ರಾತ್ರಿ ಅವರು ಕಲ್ಕತ್ತದಲ್ಲಿದ್ದರು. ‘ಇಡೀ ಜಗತ್ತು ಮಲಗಿ ನಿದ್ರಿಸುತ್ತಿರುವ ಈ ಹೊತ್ತು ಭಾರತದ ಜೀವ-ಸ್ವಾತಂತ್ರ್ಯ ಎಚ್ಚೆತ್ತುಕೊಳ್ಳುತ್ತಿದೆ’ ಎಂದು ಧ್ವಜ ಹಾರಿಸಿ ಮಾಡಿದ ಐತಿಹಾಸಿಕ ಭಾಷಣದಲ್ಲಿ ನೆಹರೂ ಭಾವಾವೇಶದಿಂದ ಹೇಳುತ್ತಾರೆ. ಆದರೆ ಅಷ್ಟೊತ್ತಿಗೆ ಜಗತ್ತು ಮಲಗಿರುವುದಿಲ್ಲ. ಆಗ ಇಂಗ್ಲೆಂಡ್‌ನಲ್ಲಿ ಸಂಜೆ ಏಳೂವರೆ ಗಂಟೆಯ ಸಮಯವಾದರೆ, ಅಮೆರಿಕದಲ್ಲಿ ಮಧ್ಯಾಹ್ನ ಎರಡು ಗಂಟೆಯಾಗಿತ್ತು, ಆಸ್ಟ್ರೇಲಿಯಾದಲ್ಲಿ ಬೆಳಗು ಹರಿದಿತ್ತು. ನಿಜಕ್ಕೂ ಆ ಹೊತ್ತಿಗೆ ಮಲಗಿ ನಿದ್ರಿಸುತ್ತಿದ್ದದ್ದು ಭಾರತ. ಸ್ವಾತಂತ್ರ್ಯಕ್ಕಾಗಿ ಹೋರಾಡಿ ದಣಿದ ದೇಶಬಾಂಧವರು ಲಕ್ಷ ಲಕ್ಷ ಹಳ್ಳಿಗಳಲ್ಲಿ ಗಾಢ ನಿದ್ದೆಯಲ್ಲಿದ್ದಾಗ ನಾಯಕರ ಗಣ ದೆಹಲಿಯಲ್ಲಿ ಸ್ವಾತಂತ್ರ್ಯ ಆಚರಿಸಿತು. ದೇಶದ ಜನರೊಂದಿಗೆ ಗಾಂಧೀಜಿ ಕೂಡಾ ಮಲಗಿ
ನಿದ್ರಿಸುತ್ತಿದ್ದರು.

ಆ ಚಾರಿತ್ರಿಕ ರಾತ್ರಿ ಗಾಂಧೀಜಿ ಮಾಮೂಲಿಗಿಂತ ಒಂದು ತಾಸು ಮುಂಚಿತವಾಗಿ ಅಂದರೆ ರಾತ್ರಿ ಸುಮಾರು ಎರಡು ಗಂಟೆಗೆ ಎದ್ದೇಳುತ್ತಾರೆ. ಅದೇನು ಕಾಕತಾಳೀಯವೋ! ಸ್ವಾತಂತ್ರ್ಯದ ಅದೇ ದಿನ, ಗಾಂಧೀಜಿ ಪಾಲಿಗೆ ತನ್ನ ಪರಮಾಪ್ತರೊಬ್ಬರನ್ನು ಕಳೆದುಕೊಂಡ ದಿನವೂ ಆಗಿತ್ತು. ಬಹುಕಾಲ ಗಾಂಧಿಯವರ ಕಾರ್ಯದರ್ಶಿ ಮತ್ತು ಹತ್ತಿರದ ಬೌದ್ಧಿಕ ಒಡನಾಡಿಯಾಗಿದ್ದ ಮಹಾದೇವ ದೇಸಾಯಿ ಅವರು ಅಂದಿಗೆ ಸರಿಯಾಗಿ ಐದು ವರ್ಷಗಳ ಹಿಂದೆ ತೀರಿಕೊಂಡಿದ್ದರು. ಆ ರಾತ್ರಿ ಎದ್ದು ಗಾಂಧಿಯವರು, ಅಗಲಿದ ಆಪ್ತ ಜೀವಕ್ಕಾಗಿ ಪ್ರಾರ್ಥಿಸುತ್ತಾರೆ. ಎಂದಿನಂತೆ ಚರಕದಿಂದ ನೂಲುತ್ತಾರೆ. ಗೀತೆ ಪಠಿಸುತ್ತಾರೆ. ಆದರೆ ಬೆಳಗಾತ ಯಾವ ಧ್ವಜಾರೋಹಣ ಕಾರ್ಯಕ್ರಮದಲ್ಲೂ ಭಾಗವಹಿಸುವುದಿಲ್ಲ.

ಅಂತೂ ಅಶೋಕ ಚಕ್ರ ಧ್ವಜಮಧ್ಯೆಯೇ ಉಳಿದಿದೆ. ಅಶೋಕ ಚಕ್ರವರ್ತಿಯ ಪಾಲಿಗೆ ಅದು ಹಿಂಸೆಯಿಂದ ಅಹಿಂಸೆಯ ಕಡೆಗೆ ತಿರುಗಿದ ಚಕ್ರ. ಭಾರತದ ಪಾಲಿಗೆ ಆ ಚಕ್ರ ಅಹಿಂಸೆಯಿಂದ ಹಿಂಸೆಯತ್ತ ಚಲಿಸುತ್ತಿದೆ ಅಂತ ಅನ್ನಿಸುತ್ತಿದೆ. ಹಾಗೆ ಯಾರಿಗೆ ಅನ್ನಿಸುತ್ತಿಲ್ಲವೋ ಅವರೆಲ್ಲಾ ಇಂದು ದೇಶಭಕ್ತರಾಗುತ್ತಿದ್ದಾರೆ.

ಆಧಾರ: ಲಾರಿ ಕಾಲಿನ್ಸ್ ಮತ್ತು ಡಾಮಿನಿಕ್ ಲ್ಯಾಪಿಯೆರ್ ಬರೆದ ‘ಫ್ರೀಡಂ ಅಟ್ ಮಿಡ್‌ನೈಟ್’ ಪುಸ್ತಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.