ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುರಣನ | ಆತ್ಮಘಾತಕ ಆತ್ಮವಂಚನೆಯ ಅಧಿಕೃತ ಪ್ರಕರಣ

ಜಾಹೀರಾತುಗಳಿಂದ ನಾಯಕರಾದವರಿಗೆ ಅರ್ಥವಾಗದು ಜಾಹೀರಾತಿನ ಹಂಗಿಲ್ಲದ ನೆಹರೂ ನಾಯಕತ್ವ
Last Updated 17 ಆಗಸ್ಟ್ 2022, 21:49 IST
ಅಕ್ಷರ ಗಾತ್ರ

ಆತ್ಮವಂಚನೆ ಎನ್ನುವುದು ಭಾರತದ ರಾಜಕೀಯ ಸಂಸ್ಕೃತಿಯ ಭಾಗ. ಆದರೆ ಆತ್ಮಘಾತಕವಾದ ಆತ್ಮವಂಚನೆಯ ಕೆಲಸಗಳನ್ನು ರಾಜಕಾರಣದಲ್ಲಿಇರುವವರೂ ಮಾಡುವುದಿಲ್ಲ. ಕರ್ನಾಟಕದ ರಾಜಕಾರಣ ಇದಕ್ಕೂ ಒಂದು ಅಪವಾದವಾಗಿಬಿಟ್ಟಿದೆ.ಈ ದೇಶದ ಮೊದಲ ಪ್ರಧಾನಿ ಮತ್ತು ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಜವಾಹರಲಾಲ್‌ ನೆಹರೂ ಅವರ ವಿಚಾರದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಕರ್ನಾಟಕ ಸರ್ಕಾರ ತೋರಿದ ಅವಗಣನೆ ಮತ್ತು ಅದನ್ನು ಸಮರ್ಥಿಸಿದ ರೀತಿಯು ಆತ್ಮವಂಚನೆಯ ವಿಚಾರ ಮಾತ್ರವಲ್ಲ, ಆತ್ಮಘಾತಕವೂ ಹೌದು.

ದೇಶಕ್ಕೆ ದೇಶವೇ ಸ್ವಾತಂತ್ರ್ಯ ದಿನಾಚರಣೆಯ ಪುಳಕದಲ್ಲಿದ್ದಾಗ, ಕರ್ನಾಟಕ ಸರ್ಕಾರವು ನೆಹರೂ ಅವರ ವಿಚಾರದಲ್ಲಿ ತೋರಿದ ಅಗಾಧ ಅಲ್ಪತನ ಇಡೀ ಸಂಭ್ರಮದ ಕಳೆ ಕೆಡುವಂತೆ ಮಾಡಿತು. ದೇಶದಲ್ಲಿ ಮನುಷ್ಯತ್ವ ಉಳಿಸಿಕೊಂಡ ಜನರಿಗಾದ ನೋವಿನ ವಿಚಾರ ಹಾಗಿರಲಿ, ಹೀಗೆಲ್ಲಾ ಮಾಡಿದರೆ ಅದು ಸರ್ಕಾರ ತನಗೆ ತಾನೇ ಎಸಗುವ ಅಪಚಾರ ಅಥವಾ ಆತ್ಮಘಾತಕತನವಾಗುತ್ತದೆ ಅಂತ ತಿಳಿಹೇಳುವಷ್ಟು ವಿವೇಚನೆ, ವಿವೇಕ, ಪ್ರಬುದ್ಧತೆ ಇರುವ ಯಾವ ವ್ಯಕ್ತಿಯೂ ಇವರ ಮಧ್ಯೆ ಇಲ್ಲವಾಗಿದ್ದಾದರೂ ಹೇಗೆ?

ಹಾಗಾದರೆ ಇದು ಆತ್ಮಘಾತಕ ನಡೆ ಹೇಗಾಗುತ್ತದೆ? ಮುಂದೆ ಓದಿ.

ಸ್ವಾತಂತ್ರ್ಯದ ಸಂದರ್ಭದಲ್ಲಿ ನೀಡಲಾದ ಜಾಹೀರಾತಿನಲ್ಲಿ ನೆಹರೂ ಅವರ ಭಾವಚಿತ್ರವನ್ನು ಬಳಸಿ ಕೊಳ್ಳದ್ದಕ್ಕೆ ರಾಜ್ಯದ ಮುಖ್ಯಮಂತ್ರಿ ನೀಡಿದ ಸಮರ್ಥನೆಯಲ್ಲಿ ನೆಹರೂ ಅವರನ್ನು ‘ಅವರ ನಾಯಕರು’ ಅಂತ ಹೇಳಿದ್ದಾರೆ. ಅಂದರೆ ಕಾಂಗ್ರೆಸ್ಸಿನವರ ನಾಯಕರು ಎನ್ನುವ ಅರ್ಥದಲ್ಲಿ ಅವರು ಹಾಗೆ ಹೇಳಿದ್ದಾರೆ. ಸರ್ಕಾರವು ನೆಹರೂ ಅವರನ್ನು ಕಡೆಗಣಿಸಿದ್ದರಿಂದ ಕೋಪಗೊಂಡದ್ದು ಕಾಂಗ್ರೆಸ್ಸಿಗರು ಮಾತ್ರವಲ್ಲ, ಸಂವಿಧಾನದ ಬಗ್ಗೆ ಮತ್ತು ಪ್ರಜಾತಾಂತ್ರಿಕ ಮೌಲ್ಯಗಳ ಬಗ್ಗೆ ಗೌರವ ಇರುವ ಎಲ್ಲರಿಗೂ ಸರ್ಕಾರದ ನಡೆ ಬೇಸರ ತರಿಸಿದೆ. ಸರ್ಕಾರದ ಅಲ್ಪತನದ ಬಗ್ಗೆ ನಾಚಿಕೆಯಾಗಿದೆ. ಯಾಕೆಂದರೆ, ಯಾವ ಅರ್ಥದಲ್ಲಿ ನೋಡಿದರೂ ನೆಹರೂ ಈ ದೇಶದ ನಾಯಕ, ದೇಶದ ಮೊದಲ ಪ್ರಧಾನಮಂತ್ರಿ. ಅವರನ್ನು ಕಾಂಗ್ರೆಸ್ ನಾಯಕ ಅಂತ ಪರಿಗಣಿಸುವ ಮುಖ್ಯಮಂತ್ರಿಯವರ ತರ್ಕವನ್ನು ಮುಂದುವರಿಸಿದರೆ ಇದೇ ಮುಖ್ಯಮಂತ್ರಿಯವರನ್ನುಬಿಜೆಪಿಯ ಮುಖ್ಯಮಂತ್ರಿ ಅಂತಲೋ ಸಂಘ ಪರಿವಾರದವರ ಮುಖ್ಯಮಂತ್ರಿ ಅಂತಲೋ ಸೀಮಿತಗೊಳಿಸಬೇಕಾಗುತ್ತದೆ. ಪ್ರಧಾನಮಂತ್ರಿಯವರನ್ನೂ ಬಿಜೆಪಿಯ ಪ್ರಧಾನಮಂತ್ರಿ ಅಂತ ಕರೆಯಬೇಕಾಗುತ್ತದೆ. ‘ಬೇಕಾದರೆ ಹಾಗೆ ಕರೆದುಕೊಳ್ಳಿರಿ, ಅಭ್ಯಂತರ ಇಲ್ಲ’ ಅಂತ ಅವರು ಹೇಳಿದರೂ ಹೇಳಬಹುದು. ಯಾರೇನೇ ಹೇಳಲಿ, ಇವೆಲ್ಲಾ ಬಹಳ ಅಪಾಯಕಾರಿಯಾದ ನಿಲುವುಗಳು ಮತ್ತು ಸಂದೇಶಗಳು.

ಈ ದೇಶದಲ್ಲಿ ಪ್ರಜಾತಂತ್ರ ಉಳಿದಿರುವುದು, ಚುನಾವಣೆಯಲ್ಲಿ ಯಾರೇ ಗೆದ್ದರೂ ಅವರನ್ನು ಮುಖ್ಯಮಂತ್ರಿ ಎಂದೋ ಪ್ರಧಾನಮಂತ್ರಿ ಎಂದೋ ಈ ದೇಶದ ಜನರು ಪಕ್ಷಾತೀತವಾಗಿ, ಜಾತ್ಯತೀತವಾಗಿ, ಧರ್ಮಾತೀತವಾಗಿ ಸ್ವೀಕರಿಸುವ ಕಾರಣಕ್ಕೆ. ಗೆದ್ದವರೆಲ್ಲಾ ನಾವು ಇಂತಹ ಪಕ್ಷದ ಪ್ರಧಾನಮಂತ್ರಿ ಎಂದೋ ಮುಖ್ಯಮಂತ್ರಿ ಎಂದೋ ಬಿಂಬಿಸಿಕೊಳ್ಳತೊಡಗಿದರೆ, ಜನರು ಕೂಡಾ ಮುಂದೆ ‘ನೀವು ಆ ಪಕ್ಷದ ಮುಖ್ಯಮಂತ್ರಿ ಆಗಿರುವುದರಿಂದ, ನೀವು ನಮ್ಮ ಮುಖ್ಯಮಂತ್ರಿ ಅಲ್ಲ’ ಅಂತ ಹೇಳತೊಡಗಿದರೆ, ‘ನೀವು ಆ ಜಾತಿಗೆ–ಧರ್ಮಕ್ಕೆ ಸೇರಿದವರಾದ ಕಾರಣ, ನೀವು ನಮ್ಮ ಮುಖ್ಯಮಂತ್ರಿ ಅಲ್ಲ’ ಎನ್ನತೊಡಗಿದರೆ, ಆಗ ಚುನಾವಣೆ ಆಧಾರಿತ ಇಡೀ ಪ್ರಜಾತಂತ್ರ ವ್ಯವಸ್ಥೆಯೇ ಕುಸಿಯತೊಡಗುತ್ತದೆ.

ಎಷ್ಟೋ ದೇಶಗಳಲ್ಲಿ ಹೀಗಾಗಿಯೇ ಪ್ರಜಾತಂತ್ರ ನಾಶವಾಗಿ ಹೋಗಿರುವುದು. ಆದುದರಿಂದ ನೆಹರೂ ಅವರು ಕಾಂಗ್ರೆಸ್ಸಿನವರ ನಾಯಕ ಅಂತ ಯಾರನ್ನೋ ಮೆಚ್ಚಿಸಲು ಹೇಳಿ ಬಿಡುವುದು ಸುಲಭ. ಹಾಗೆ ಹೇಳುವುದರ ಪರಿಣಾಮ ಹೇಳಿದವರ ಬುಡವನ್ನೇ ಅಲುಗಾಡಿಸಬಹುದು.

ನೆಹರೂ ಜನನಾಯಕರಾಗಿ ಬೆಳೆದದ್ದು ಜಾಹೀರಾತುಗಳ ಮೂಲಕವಲ್ಲ. ಆದಕಾರಣ ಜಾಹೀ ರಾತುಗಳನ್ನೇ ನೆಚ್ಚಿ ನಾಯಕರಾಗುವವರಿಗೆಲ್ಲಾ ನೆಹರೂ ಅರ್ಥವಾಗಲಾರರು. ಯಾವುದೋ ಜಾಹೀರಾತಿನಲ್ಲಿ ಅವರ ಭಾವಚಿತ್ರ ಇರುವುದರಿಂದ ಅಥವಾ ಇಲ್ಲದೇ ಇರುವುದರಿಂದ ನೆಹರೂ ಅವರಿಗೆ ಏನೂ ಆಗಬೇಕಿಲ್ಲ. ನೆಹರೂ ಬಗ್ಗೆ ಬರಬೇಕಾದ ನಿರ್ಧಾರಕ್ಕೆ ಬರಲು ಮಹಾಕವಿ ಕುವೆಂಪು ಬರೆದದ್ದು ಸಾಕು. ಇನ್ನೂ ಬೇಕು ಎನ್ನುವವರಿಗೆ ಬಿಜೆಪಿಯ ಎ.ಬಿ. ವಾಜಪೇಯಿ ಅವರು ನೆಹರೂ ಕುರಿತಾಗಿ ತಮ್ಮ ಅಂತರಂಗದ ಆಳದಿಂದ ಆಡಿದ ಶ್ರದ್ಧಾಂಜಲಿ ನುಡಿಗಳಲ್ಲಿ ವಿವರಗಳು ಸಿಗುತ್ತವೆ.

ನೆಹರೂ ಅವರು ಸಂವಿಧಾನ ರಚನೆಯಲ್ಲಿ ಅಂಬೇಡ್ಕರ್ ಅವರಿಗೆ ಹೆಗಲೆಣೆಯಾಗಿ ದುಡಿದವರು. ಸಂವಿಧಾನದ ಸಾರ ಎನ್ನಬಹುದಾದ ಧರ್ಮನಿರಪೇಕ್ಷತೆ (ಅಂದರೆ ಹೆಮ್ಮೆಯ ಸಾಂವಿಧಾನಿಕ ಮೌಲ್ಯವಾದ ಸೆಕ್ಯುಲರಿಸಂ), ವೈಜ್ಞಾನಿಕ ಮನೋಭಾವ, ಸಮಾನತೆ, ಸಹೋದರತೆ ಇತ್ಯಾದಿಗಳನ್ನು ತಮ್ಮ ಉಸಿರಿನ ಉಸಿರಾಗಿಸಿಕೊಂಡು ಅಧಿಕಾರ ಚಲಾಯಿಸಿದವರು. ಆದಕಾರಣ ಸಂವಿಧಾನದ ಬಗ್ಗೆ ತಿರಸ್ಕಾರಭಾವ ಹೊಂದಿರುವವರಿಗೆ ನೆಹರೂ ಕುರಿತು ವಿನಾಕಾರಣ ದ್ವೇಷ ಇದೆ. ಅದನ್ನು ನೇರವಾಗಿ ತೋರ್ಪಡಿಸುವ ಧೈರ್ಯವಿಲ್ಲದ ಕಾರಣ ನೆಹರೂ ದೇಶ ವಿಭಜನೆಗೆ ಕಾರಣರು ಅಂತ ಸುಳ್ಳು ಹರಡುವ ಪ್ರಯತ್ನ ಬಹಳ ಕಾಲದಿಂದ ನಡೆಯುತ್ತಿದೆ. ಈ ತನಕ ಅದನ್ನು ಮಾಡುತ್ತಿದ್ದದ್ದು ಯಾವುದೋ ಪಕ್ಷದ ಐ.ಟಿ. ಸೆಲ್‌ನಲ್ಲಿ ಕೂಲಿಗಾಗಿ ದುಡಿಯುವ ಟ್ರೋ ಲ್‌ಗಳು. ಈಗ ಈ ಕೆಲಸಕ್ಕೆ ಚುನಾಯಿತ ಸರ್ಕಾರಗಳೇ ಇನ್ನೊಂದು ರೀತಿಯಲ್ಲಿ ಮುಂದಾಗುತ್ತಿರು ವುದು 75 ವರ್ಷಗಳಲ್ಲಿ ದೇಶ ಕಂಡ ರಾಜಕೀಯ ಪತನಕ್ಕೆ ಸಾಕ್ಷಿ. ಇದು, ಚಾರಿತ್ರಿಕ ಸಂದರ್ಭವೊಂದರಲ್ಲಿ ಪ್ರದರ್ಶನಗೊಂಡ ಚಾರಿತ್ರಿಕ ಅಲ್ಪತೆ; ಅಪಾಯಕಾರಿ ಅಪ್ರಬುದ್ಧತೆ.

ಕರ್ನಾಟಕ ಸರ್ಕಾರವುಇತ್ತೀಚೆಗೆ ತಾನು ಎಲ್ಲರ ಸರ್ಕಾರವಲ್ಲ, ತಾನು ಯಾವುದೋ ಒಂದು ವರ್ಗದ, ಒಂದು ಪಕ್ಷದ, ಕೆಲವೇ ಜಾತಿಗಳ ಸರ್ಕಾರ ಎಂಬಂತಹ ಅಪಾಯಕಾರಿ ಸಂದೇಶಗಳನ್ನು ಬೇರೆ ಬೇರೆ ರೀತಿಯಲ್ಲಿ ನೀಡುತ್ತಲೇ ಇದೆ. ಕೊಲೆಗಳಾದಾಗ ಕೊಲ್ಲಲ್ಪಟ್ಟವರು ಯಾವ ಸಮುದಾಯಕ್ಕೆ ಸೇರಿದವರು ಎನ್ನುವ ಆಧಾರದ ಮೇಲೆ ಕಾನೂನು ಕ್ರಮ ಜರುಗಿಸುವುದು, ಸತ್ತವರು ಯಾವ ಸಮುದಾಯಕ್ಕೆ ಸೇರಿದವರು ಎನ್ನುವ ಆಧಾರದಲ್ಲಿ ಅನುಕಂಪ ತೋರುವುದು ಮತ್ತು ಪರಿಹಾರ ನೀಡುವುದು, ತಮಗೆ ಬೇಕಾದ ಸಮುದಾಯದಲ್ಲಿ ಯಾರದೋ ಒಬ್ಬರ ಕೊಲೆಯಾದರೆ ಅವರ ಹಿನ್ನೆಲೆ ಸರಿಯಿಲ್ಲದಿದ್ದರೂ ದೇಶಭಕ್ತರೊಬ್ಬರ ಕೊಲೆಯಾಯಿತು ಎಂಬಂತೆ ಬಿಂಬಿಸುವುದು, ಇನ್ನೊಂದು ಸಮುದಾಯದಲ್ಲಿ ಅಮಾಯಕನೊಬ್ಬನ ಕೊಲೆಯಾದರೂ ಕೊಲೆಯಾದವನೇ ಅಪರಾಧಿ ಎನ್ನುವ ಅರ್ಥದಲ್ಲಿ ನಡೆದುಕೊಳ್ಳುವುದು... ಇವೆಲ್ಲ ಅಂತಹ ಸಂದೇಶ ನೀಡುವ ನಡೆ. ಸರ್ಕಾರದ ಆಯಕಟ್ಟಿನ ಸ್ಥಾನಗಳಲ್ಲಿ ಇರುವವರು ತೋರುವ ಇಂತಹ ಪ್ರತಿಯೊಂದು ಪಕ್ಷಪಾತಿ ನಡವಳಿಕೆಯೂ ಈ ಸರ್ಕಾರ ಎಲ್ಲರಿಗೂ ಸೇರಿದ್ದಲ್ಲ ಎನ್ನುವ ಸಂದೇಶವನ್ನು ನೀಡುತ್ತಿದೆ. ಜನ ಇದನ್ನು ಗಂಭೀರವಾಗಿ ಪರಿಗಣಿಸಿ ‘ಹೌದು, ಇದು ನಮ್ಮ ಸರ್ಕಾರವಲ್ಲ, ಯಾರದ್ದೋ ಸರ್ಕಾರ’ ಎಂಬಂತೆ ಬೀದಿಗಿಳಿದು ಅಸಹಕಾರ ತೋರತೊಡಗಿದರೆ ಏನಾದೀತು? ಸೂರ್ಯ ಮುಳುಗದ ಬ್ರಿಟಿಷ್ ಸಾಮ್ರಾಜ್ಯಕ್ಕೇನೇ ಜನರ ಅಸಹಕಾರವನ್ನು ತಾಳಲಾಗಲಿಲ್ಲ. ಇನ್ನು, ಅರ್ಧ ಚುನಾಯಿತ- ಇನ್ನರ್ಧ ‘ಖರೀದಿಸಿದ’ ಬಹುಮತದಿಂದ ಅಧಿಕಾರಕ್ಕೆ ಬಂದವರಿಗೆ ಇಂತಹದ್ದೊಂದು ಜನಾಕ್ರೋಶ ಸೃಷ್ಟಿಯಾಗಿಬಿಟ್ಟರೆ ಅದನ್ನು ಎದುರಿಸಲು ಸಾಧ್ಯವೇ?

ಅದಕ್ಕೇ ಹೇಳಿದ್ದು, ಕರ್ನಾಟಕದಲ್ಲಿ ಸರ್ಕಾರ ನಡೆಸುವವರು ಆತ್ಮವಂಚನೆಯ ಜತೆಗೆ ಆತ್ಮಘಾತಕ ಹಾದಿ ಹಿಡಿದಿದ್ದಾರೆ ಅಂತ. ಜನರು ಸತ್ಯ ಎಂದು ಸ್ವೀಕರಿಸಲಿ ಅಂತ ರಾಜಕಾರಣದಲ್ಲಿರುವವರು ಸುಳ್ಳುಗಳನ್ನು ಹೇಳುವುದಿದೆ. ಆದರೆ ಈಗೀಗ ಕೆಲ ನಾಯಕರು ತಾವು ಹೇಳುವುದು ಸುಳ್ಳು ಅಂತ ಜನರಿಗೆ ಗೊತ್ತಿದೆ ಅಂತ ಗೊತ್ತಿದ್ದೂ ಸುಳ್ಳುಗಳನ್ನೇ ಹೇಳುತ್ತಾರೆ. ಮಿಥ್ಯೆಗಳನ್ನು ಹರಡುವುದು ಸರ್ಕಾರದ ಅಧಿಕೃತ ಕರ್ತವ್ಯ ಎನ್ನುವಂತೆ ವರ್ತಿಸುತ್ತಿದ್ದಾರೆ. ಒಂದಲ್ಲ ಒಂದು ದಿನ ಇವೆಲ್ಲಾ ತಮಗೆ ಮುಳುವಾಗಬಲ್ಲವು ಎಂಬ ಪರಿವೆಯೇ ಇಲ್ಲದ ಸ್ಥಿತಿಯೊಂದನ್ನು ಅವರು ತಲುಪಿದ ಹಾಗೆ ಕಾಣಿಸುತ್ತದೆ. ಈ ಮನೋವಿಕಾರವನ್ನು ಏನಂತ ಕರೆಯುವುದು? ಇದರ ಅರ್ಥವನ್ನು ಹಿಡಿದಿಡುವ ಒಂದು ಪದವು ಪ್ರಪಂಚದ ಯಾವುದೇ ಭಾಷೆಯಲ್ಲಿ ಸೃಷ್ಟಿಯಾದಂತಿಲ್ಲ. ಅಂದರೆ, ಕೇವಲ ಏಳೂವರೆ ದಶಕಗಳ ಅವಧಿಯಲ್ಲಲ್ಲ, ನಾಗರಿಕತೆ ಹುಟ್ಟಿದ ಕಾಲದಿಂದಲೂ ಕಂಡುಬಾರದ ವಿಕಾರಗಳೆಲ್ಲಾ ನಮ್ಮ ಮುಂದೆ ಸಂಭವಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT