ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯರ ಮೇಲೆ ಹಲ್ಲೆ ಎಂಬ ರೋಗಲಕ್ಷಣ

ಇಂದು ವೈದ್ಯರ ಮೇಲಾಗುವ ಆಕ್ರಮಣ, ನಾಳೆ ಇನ್ನಿತರ ವೃತ್ತಿಪರರ ಮೇಲೂ ಆದೀತಲ್ಲವೇ?
Last Updated 16 ಜೂನ್ 2019, 19:45 IST
ಅಕ್ಷರ ಗಾತ್ರ

ವೈದ್ಯಕೀಯ ವೃತ್ತಿ ಬಗೆಗಿನ ಸಾರ್ವಜನಿಕ ನಂಬಿಕೆ, ವಿಶ್ವಾಸಗಳು ನೆಲಕಚ್ಚಿವೆ. ಹಿಂಸೆಯ ಬಗ್ಗೆ ಒಂದು ಸಮಾಜಕ್ಕೆ ಇರಬೇಕಾದ ಕನಿಷ್ಠ ಸಂಯಮವು ಭಾರತೀಯ ಮನಸ್ಸುಗಳಿಂದ ಎಗ್ಗಿಲ್ಲದೆ ಮರೆಯಾಗುತ್ತಿದೆ. ಈ ಎರಡರ ಸಂಯುಕ್ತ ಫಲಶ್ರುತಿಯಾಗಿ ವೈದ್ಯರ ಮೇಲೆ ಹಲ್ಲೆಗಳು ನಡೆಯುತ್ತಿರುವುದನ್ನು ಕಾಣುತ್ತಿದ್ದೇವೆ. ಹೋದ ವಾರ ಪಶ್ಚಿಮ ಬಂಗಾಳದ ಸರ್ಕಾರಿ ಆಸ್ಪತ್ರೆಯೊಂದರ ವೈದ್ಯರ ಮೇಲೆ ರೋಗಿಯೊಬ್ಬರ ಕಡೆಯವರು ಹಲ್ಲೆ ನಡೆಸಿದರು. ಅದರ ವಿರುದ್ಧ ಹುಟ್ಟಿಕೊಂಡಿರುವ ವೈದ್ಯರ ಪ್ರತಿಭಟನೆ ಇದೀಗ ದೇಶವ್ಯಾಪಿ ಸ್ವರೂಪ ತಳೆದಿದೆ. ಪ್ರತಿಭಟನೆಯಲ್ಲಿ ಸಹಜವಾಗಿಯೇ ರಾಜಕೀಯ ಪ್ರವೇಶ ಪಡೆದಿದೆ. ಇದು, ಒಂದು ಹಲ್ಲೆಯ ವಿಷಯ ಮಾತ್ರವಲ್ಲ. ಇದು, ಒಂದು ಪ್ರತಿಭಟನೆಯ ವಿಚಾರ ಮಾತ್ರವಲ್ಲ. ಇಲ್ಲಿ ರಾಜಕೀಯ ಪ್ರವೇಶ ಪಡೆದಿದೆ ಎನ್ನುವುದು ದೊಡ್ಡದಲ್ಲ. ಇಲ್ಲಿ ಜಟಿಲ ಪ್ರಶ್ನೆಗಳಿವೆ.ಈ ಪ್ರಶ್ನೆಗಳನ್ನು ಒಂದು ಸಮಸ್ಯೆ ಎನ್ನುವುದಕ್ಕಿಂತ, ಒಂದು ದೊಡ್ಡ ಬಿಕ್ಕಟ್ಟಿನ ಮೇಲ್ಮೈ ಲಕ್ಷಣಗಳು ಎಂದು ಭಾವಿಸಬೇಕಾಗುತ್ತದೆ.

ವೃತ್ತಿ ಬದುಕಿನಲ್ಲಿ ರಕ್ಷಣೆ ಬೇಕು ಎಂದು ವೈದ್ಯರು ಕೇಳುತ್ತಿದ್ದಾರೆ. ಅದು ಸಮಂಜಸವಾದದ್ದೇ. ತಮ್ಮ ಬೇಡಿಕೆಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸ್ಪಂದಿಸಿಲ್ಲ ಎಂದು ವೈದ್ಯರು ಕೋಪಾವಿಷ್ಟರಾಗಿದ್ದಾರೆ. ಅದನ್ನೂ ಅರ್ಥಮಾಡಿಕೊಳ್ಳಬಹುದು. ಪಶ್ಚಿಮ ಬಂಗಾಳವನ್ನು ಶತಾಯಗತಾಯ ಕೈವಶ ಮಾಡಿಯೇ ಸಿದ್ಧ ಎಂದು ಹಟ ತೊಟ್ಟಿರುವ ಬಿಜೆಪಿಯು ಕದಡಿದ ನೀರಿನಲ್ಲಿ ರಾಜಕೀಯ ಗಾಳ ಹಾಕುತ್ತಿದ್ದರೆ, ಅದು ಕೂಡಾ ನಿರೀಕ್ಷಿತವೇ. ಆದರೆ ಇಲ್ಲಿ ವೈದ್ಯರಿಗೆ ವೃತ್ತಿಯಲ್ಲಿ ರಕ್ಷಣೆ ನೀಡುವುದು ಎಂದರೆ ಏನು ಮತ್ತು ಹೇಗೆ? ಹೊಸ ಕಾನೂನು ತಂದರೆ ರಕ್ಷಣೆ ಸಿಗುತ್ತದೆಯೇ?

ಕರ್ನಾಟಕವೂ ಸೇರಿದಂತೆ ಹಲವು ರಾಜ್ಯಗಳಲ್ಲಿ ಇಂಥ ಕಾನೂನು ಇದೆ. ಆದರೂ ಹಲ್ಲೆಗಳು ನಡೆಯುತ್ತಿವೆ. ಆಸ್ಪತ್ರೆಯಲ್ಲಿ ಪೊಲೀಸರನ್ನೂ, ಭದ್ರತಾ ಸಿಬ್ಬಂದಿಯನ್ನೂ ನೇಮಿಸಿದರೆ ಹಲ್ಲೆಗಳು ನಡೆಯದೆ ಇರುತ್ತವೆಯೇ? ಪೊಲೀಸರು ಮತ್ತು ರಕ್ಷಣಾ ಸಿಬ್ಬಂದಿ ಮೇಲೆ ಹಲ್ಲೆ ನಡೆಯುತ್ತಿರುವ ವರದಿಗಳು ಎಲ್ಲೆಡೆಯಿಂದ ಬರುತ್ತಲೇ ಇವೆಯಲ್ಲವೆ? ವೈದ್ಯರು ಮತ್ತು ರೋಗಿಗಳ ನಡುವಣ ವಿಶ್ವಾಸ ನಾಶವಾಗಿರುವುದೇ ಸಮಸ್ಯೆಯ ಮೂಲ ಎಂದಾದರೆ, ಈ ವಿಶ್ವಾಸವನ್ನು ಮತ್ತೆ ಸ್ಥಾಪಿಸುವುದು ಹೇಗೆ? ಹಲ್ಲೆಯಿಂದಲೇ ಎಲ್ಲವನ್ನೂ ಪರಿಹರಿಸಿಬಿಡಬಹುದು ಎನ್ನುವ ಸಾಮಾಜಿಕ ಪ್ರವೃತ್ತಿಯೇಸಮಸ್ಯೆಯ ಮೂಲ ಎಂದಾದರೆ, ಇದನ್ನು ಕಿತ್ತು ಹಾಕುವುದು ಹೇಗೆ? ಪಶ್ಚಿಮ ಬಂಗಾಳದ ಸಮಸ್ಯೆ ಬಿಗಡಾಯಿಸಿದ್ದು ಈ ಪ್ರಶ್ನೆಗಳ ಮೇಲಲ್ಲ. ಅದು ಬಿಗಡಾಯಿಸಿದ್ದು ಪ್ರತಿಷ್ಠೆಗಳ ಮೇಲಾಟದಿಂದ. ಯಾರಾದರೂ ಒಬ್ಬರು ಪ್ರತಿಷ್ಠೆ ಬದಿಗಿಟ್ಟು ಸಂಧಾನಕ್ಕೆ ಕೈಚಾಚಿದರೆ, ಅಲ್ಲಿನ ಪ್ರತಿಭಟನೆ ನಿಂತೀತು. ಆದರೆ ಮೂಲ ಸಮಸ್ಯೆ ಬಗೆಹರಿಯುವುದಿಲ್ಲ.

ಘಟನೆಗಳು ಅವು ನಡೆದ ಕಾಲಧರ್ಮಕ್ಕೆ ಕನ್ನಡಿ ಹಿಡಿಯುತ್ತವೆ. ವೈದ್ಯ ವೃತ್ತಿಯ ಮೇಲಣ ನಂಬಿಕೆ ನಶಿಸಲು ಎಲ್ಲ ವೈದ್ಯರೂ ಕಾರಣರಲ್ಲದೇ ಇರಬಹುದು. ಆದರೆ, ಅಲ್ಲಿ ಕೆಲವೇ ಮಂದಿ ಮಾಡುವ ಅನಾಹುತಗಳಿಂದಾಗಿ ಇಡೀ ವೃತ್ತಿ ಸಮೂಹವೇ ಒಂದು ವಿಶ್ವಾಸಶೂನ್ಯ ಪರಿಸರದಲ್ಲಿ ಕಾರ್ಯವೆಸಗಬೇಕಾದ ಅನಿವಾರ್ಯ ಸೃಷ್ಟಿಯಾಗಿದೆ. ಒಂದು ಕಾಲದಲ್ಲಿ ಸಾಮಾನ್ಯ ಮನುಷ್ಯರಿಗೆ ತೀವ್ರತರ ಅಸಹಾಯಕತೆ, ಅಭದ್ರತೆ ಮತ್ತು ಆತಂಕ ಕಾಡುತ್ತಿದ್ದದ್ದು ಪೊಲೀಸ್ ಠಾಣೆಗಳಿಗೆ ಹೋಗಬೇಕಾದಾಗ ಮಾತ್ರ ಆಗಿತ್ತು. ಈಗ, ಆಸ್ಪತ್ರೆಗಳಿಗೆ ಹೋಗುವ ಅನುಭವ ಕೂಡಾ ಪೊಲೀಸ್ ಠಾಣೆಗಳಿಗೆ ಹೋಗುವ ಅನುಭವದಂತೆಯೇ ಇರುತ್ತದೆ. ಎಲ್ಲಾ ವೃತ್ತಿಗಳಲ್ಲಿ ತೊಡಗಿರುವವರ ವೃತ್ತಿಪರತೆ ಮತ್ತು ಪ್ರಾಮಾಣಿಕತೆ ಕುರಿತಾದ ಸಾರ್ವಜನಿಕ ನಂಬಿಕೆ ಕುಸಿದಿದೆ. ಆದರೆ ವೈದ್ಯಕೀಯ ರಂಗದಲ್ಲಿ ಈ ಕುಸಿತವು ಇತರ ರಂಗಗಳಲ್ಲಿ ಆಗಿದ್ದಕ್ಕಿಂತ ನೂರು ಪಾಲು ಹೆಚ್ಚು ಕುಸಿದದ್ದು ಯಾಕೆ ಎನ್ನುವ ಪ್ರಶ್ನೆಯನ್ನು ಹಿಂಬಾಲಿಸಿದರೆ, ಅದು ನಮ್ಮನ್ನು ಎಲ್ಲೆಲ್ಲಿಗೋ ಕರೆದೊಯ್ಯಬಹುದು. ಒಂದೇ ಮಾತಿನಲ್ಲಿ ಹೇಳುವುದಾದರೆ, ಯಾವ ರಂಗವನ್ನು ಕಡೆಗಣಿಸಬಾರದಿತ್ತೋ ಅದನ್ನು ಕಡೆಗಣಿಸಿದ, ಯಾವ ಕ್ಷೇತ್ರದಲ್ಲಿ ವಿದ್ಯಾಭ್ಯಾಸವನ್ನು ವ್ಯಾಪಾರೀಕರಣಗೊಳಿಸಬಾರದಿತ್ತೋ ಅದನ್ನು ವ್ಯಾಪಾರೀ ಕರಣಗೊಳಿಸಿದ, ಯಾವ ರಂಗದ ಬೌದ್ಧಿಕ, ನೈತಿಕ ಗುಣಮಟ್ಟ ಕುಸಿಯದಂತೆ ನಿಗಾ ಇಡಬೇಕಿತ್ತೋ ಅಲ್ಲಿ ಮನಸೋಇಚ್ಛೆ ರಾಜಿ ಮಾಡಿಕೊಂಡ ಪರಿಣಾಮಗಳನ್ನು ನಾವೀಗ ಎದುರಿಸುತ್ತಿದ್ದೇವೆ.

ಕೇಂದ್ರ ಸರ್ಕಾರವು ಪಶ್ಚಿಮ ಬಂಗಾಳ ಸರ್ಕಾರಕ್ಕೆ ಪತ್ರ ಬರೆದು, ‘ಈ ವಿಷಯವನ್ನು ಪ್ರತಿಷ್ಠೆ ಮಾಡಿಕೊಳ್ಳದೆ ಪರಿಹರಿಸಿ’ ಎಂದಿದೆ. ಆರೋಗ್ಯ ಸೇವೆಯು ರಾಜ್ಯಕ್ಕೆ ಸಂಬಂಧಿಸಿದ ವಿಚಾರ, ಕೇಂದ್ರಕ್ಕೇನು ಉಸಾಬರಿ ಎಂದು ಮಮತಾ ಕೇಳುವುದರಲ್ಲಿ ಅರ್ಥವಿಲ್ಲ. ಅದೇ ವೇಳೆ, ಕೇಂದ್ರ ಸಚಿವರು ಪಶ್ಚಿಮ ಬಂಗಾಳ ಸರ್ಕಾರಕ್ಕೆ ಈ ಪತ್ರ ಬರೆಯುವಾಗ, ಹಿಂದೊಮ್ಮೆ ವೈದ್ಯರ ಮೇಲೆ ಹಲ್ಲೆ ಮಾಡಿದ ಆರೋಪಿ ಸಂಸದರೊಬ್ಬರಿಗೆ ಮಂತ್ರಿ ಸ್ಥಾನ ನೀಡಿ ಗೌರವಿಸಿದ್ದು ತಮ್ಮದೇ ಸರ್ಕಾರ ಎನ್ನುವ ಅಂಶವನ್ನು ಮರೆತಿರಲಾರರು ಎಂದು ಭಾವಿಸೋಣ.

ವೈದ್ಯರ ಮೇಲೆ ಹಲ್ಲೆ ಮಾಡಿದ ಜನಪ್ರತಿನಿಧಿಗಳ ದೊಡ್ಡ ಪಟ್ಟಿಯೇ ಇದೆ ಮತ್ತು ಅದರಲ್ಲಿ ಎಲ್ಲಾ ಪಕ್ಷದವರೂ ಇದ್ದಾರೆ. ಆದರೆ ಹಿಂಸಾತ್ಮಕ ಆಕ್ರಮಣಗಳ ಪ್ರವೃತ್ತಿಯನ್ನು ಪೋಷಿಸುವ ವಿಚಾರದಲ್ಲಿ ಬಿಜೆಪಿಯನ್ನು ಯಾರೂ ಮೀರಿಸಲಾರರು. ಅದೀಗ ಆಳುವ ಪಕ್ಷ. ಅದರ ನೇತಾರ, ದೇಶದ ಬಹುಮಂದಿಗೆ ಸರ್ವ ಆದರ್ಶಗಳ ಮೂಲ. ಅಂದರೆ ಹಿಂಸೆಯ ವಿಚಾರದಲ್ಲಿ ಯಾವ ಸಂದೇಶಗಳು ಯಾವ ಹಂತದಿಂದ ಹೋಗಬಾರದಾಗಿತ್ತೋ ಅಂತಹ ಸಂದೇಶಗಳು ಅಂತಹ ಹಂತಗಳಿಂದ ಹೋಗಿವೆ, ಹೋಗುತ್ತಿವೆ. ದೂರು, ವಿಚಾರಣೆ, ಸಮಸ್ಯೆಯನ್ನು ಇನ್ನೊಬ್ಬರ ದೃಷ್ಟಿಯಿಂದ ನೋಡುವ ಸಂಯಮವಾಗಲೀ, ಕೋರ್ಟು, ನ್ಯಾಯ ಇತ್ಯಾದಿಗಳಾಗಲೀ ಭವ್ಯ ಭಾರತದ ನವ್ಯ ಸಂಸ್ಕೃತಿಯಲ್ಲಿ ಕೆಲಸಕ್ಕೆ ಬಾರದ ವಿಚಾರಗಳು, ಅವುಗಳಿಗೆ ಸ್ಥಾನವಿಲ್ಲ. ಎದುರಿಗೆ ಇದ್ದವನಿಗೆ ನಾಲ್ಕು ಬಿಗಿಯುವುದೇ ಎಲ್ಲದಕ್ಕೂ ಪರಿಹಾರ ಎನ್ನುವ ಭಾರತೀಯ ಪೊಲೀಸ್ ವ್ಯವಸ್ಥೆಯ ಮೂಲ ಸೂತ್ರವನ್ನು ಈಗ ಇಡೀ ಭಾರತೀಯ ಸಮಾಜವು ತಾರಕಮಂತ್ರ ಎಂದು ಸ್ವೀಕರಿಸಿದ ಹಾಗಿದೆ. ಇದಕ್ಕೆ ಸೂಕ್ತ ಹೆಸರು ಜಂಗಲ್ ರಾಜ್ ಅರ್ಥಾತ್ ಅರಣ್ಯ ನ್ಯಾಯ.

ಐದು ವರ್ಷಗಳ ಹಿಂದೆ ದೇಶದಲ್ಲಿ ಭಾರತೀಯ ಸಂಸ್ಕೃತಿ ಪುನರ್ ಪ್ರತಿಷ್ಠಾಪನೆಯಾಗಿ ರಾಮರಾಜ್ಯ ನೆಲೆಗೊಂಡಿದೆ ಎನ್ನುವವರು ಮೈಚಿವುಟಿಕೊಳ್ಳಬೇಕು. ಅವರು, ಇದಕ್ಕೂ ನೆಹರೂ ನೀತಿಗಳು ಮತ್ತು ಒಂದಾನೊಂದು ಕಾಲದ ಕಾಂಗ್ರೆಸ್ ಆಡಳಿತ ಕಾರಣ ಎಂದು ಸೋಷಿಯಲ್ ಮೀಡಿಯಾದಲ್ಲಿ ಕಟ್ಟುಕತೆಗಳನ್ನು ತೇಲಿಬಿಟ್ಟು ತಪ್ಪಿಸಿಕೊಳ್ಳಬಹುದು. ಆದರೆ, ಎಷ್ಟು ಕಾಲ ಎಂದು ಹೀಗೆ ತಪ್ಪಿಸಿಕೊಳ್ಳಲು ಸಾಧ್ಯ?ಹದಗೆಟ್ಟು ನಿಂತಿರುವುದು ವೈದ್ಯಕೀಯ ರಂಗವಷ್ಟೇ ಅಲ್ಲ. ಆದುದರಿಂದ, ಇಂದು ವೈದ್ಯರಿಗೆ ಆದದ್ದು ನಾಳೆ ವಕೀಲರಿಗೆ ಆಗಬಹುದು. ನಾಳೆ ವಕೀಲರಿಗೆ ಆದದ್ದು ನಾಡಿದ್ದು ಪತ್ರಕರ್ತರಿಗೆ ಆಗಬಹುದು. ನಾಡಿದ್ದು ಪತ್ರಕರ್ತರಿಗೆ ಆದದ್ದು ಮುಂದೊಂದು ದಿನ, ಕಾವಿ ತೊಟ್ಟ ಧರ್ಮೋದ್ಯಮಿಗಳಿಗೆ ಆಗಬಹುದು. ಈ ಹಂತದಲ್ಲೂ ಎಚ್ಚೆತ್ತುಕೊಳ್ಳಬೇಕಾದವರು ಎಚ್ಚೆತ್ತುಕೊಳ್ಳಲು ಉದಾಸೀನ ಮಾಡಿದರೆ, ಆ ನಂತರ ತಗೊಳ್ಳಿ- ಪೆಟ್ಟು, ಕಲ್ಲೇಟು, ಕೊಳ್ಳಿಏಟು ತಿನ್ನುವ ಸರದಿ ಪೊಲೀಸರದ್ದು, ನ್ಯಾಯಾಧೀಶರದ್ದು ಮತ್ತು ಚುನಾಯಿತ ಪ್ರತಿನಿಧಿಗಳದ್ದಾಗಲಿದೆ. ಈ ಸ್ಥಿತಿಗೆ ಅಂತರ್ಯುದ್ಧ ಎಂದು ಹೆಸರು.

ವಿವಿಧ ವರ್ಗಗಳ ಮಧ್ಯೆ ಇರಬೇಕಾದ ಕನಿಷ್ಠ ನಂಬಿಕೆಯೂ ಕಳೆದುಹೋದ ಕಾಲಕ್ಕೆ, ಮನುಷ್ಯರ ಆಂತರ್ಯದಲ್ಲಿ ಇರಬೇಕಾದ ಕನಿಷ್ಠ ಸಂಯಮ ಪ್ರಜ್ಞೆಯು ಸಂಪೂರ್ಣ ನಾಶವಾದ ಕಾಲಕ್ಕೆ ಬಲಿಷ್ಠ ನಾಯಕತ್ವ, ಕಠಿಣ ಕಾನೂನುಗಳು ಇತ್ಯಾದಿಗಳಿಗೆಲ್ಲಾ ಯಾವ ಅರ್ಥವೂ ಇರುವುದಿಲ್ಲ. ನಂಬಿಕೆ- ವಿಶ್ವಾಸಗಳನ್ನು ಕಾಲ ಕಸವನ್ನಾಗಿಸಿ, ಸಂಯಮಕ್ಕೆ ಕವಡೆ ಕಾಸಿನ ಕಿಮ್ಮತ್ತೂ ನೀಡದೆ, ಸುಳ್ಳಿನ ಸೌಧದ ಮೇಲೆ ಸೃಷ್ಟಿಯಾಗುವ ನಾಯಕತ್ವ ಈ ಪರಿಸ್ಥಿತಿಗೆ ಪರಿಹಾರವಾಗುವುದರ ಬದಲು ಪ್ರೇರಕವಾಗಿ ಕೆಲಸ ಮಾಡಲಿದೆ. ದೇಶದಾದ್ಯಂತ ವೈದ್ಯರ ಮೇಲೆ ಹಲ್ಲೆಗಳು ಹೆಚ್ಚುತ್ತಿರುವುದು ಇದಕ್ಕೊಂದು ಸಣ್ಣ ಪುರಾವೆ ಅಷ್ಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT