ಬುಧವಾರ, ಫೆಬ್ರವರಿ 19, 2020
24 °C
ಎರಡೂ ರಾಷ್ಟ್ರೀಯ ಪಕ್ಷಗಳಲ್ಲಿ ಸ್ಥಳೀಯ ದನಿ ದುರ್ಬಲವಾಗಿರುವಂತೆ ಕಾಣುತ್ತಿದೆ

ಕಾಂಗ್ರೆಸ್, ಬಿಜೆಪಿ: ನಿಧಾನವೇ ಪ್ರಧಾನ!

ಪ್ರೊ. ಸಂದೀಪ್ ಶಾಸ್ತ್ರಿ Updated:

ಅಕ್ಷರ ಗಾತ್ರ : | |

ಅತಿಯಾಗಿ ವಿಳಂಬ ಮಾಡುವುದು ಹಾಗೂ ಸಂಕಟ ಸೃಷ್ಟಿಸುವಂತಹ ರೀತಿಯಲ್ಲಿ ಕೆಲಸ ಮುಂದಕ್ಕೆ ಹಾಕುವುದು ಕರ್ನಾಟಕದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಬಹಳ ಇಷ್ಟ ಅನಿಸುತ್ತದೆ. ಉಪಚುನಾವಣೆಯ ಫಲಿತಾಂಶ ಘೋಷಣೆಯಾಗಿ ಸರಿಸುಮಾರು ಎರಡು ತಿಂಗಳುಗಳ ನಂತರ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟವು ಗುರುವಾರ (ಫೆ. 6) ವಿಸ್ತರಣೆ ಆಗುತ್ತಿದೆ. ಇತ್ತ ಕಾಂಗ್ರೆಸ್ಸಿನಲ್ಲಿ ಕೂಡ ಚಟುವಟಿಕೆಗಳು ಬಹಳ ನಿಧಾನಗತಿಯಲ್ಲಿ ಸಾಗುತ್ತಿವೆ.

ಉಪಚುನಾವಣೆಯಲ್ಲಿ ಕಾಂಗ್ರೆಸ್ ‍ಪಕ್ಷವು ಹೀನಾಯ ಪ್ರದರ್ಶನ ನೀಡಿದ ನಂತರ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ಹಾಗೂ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿದರು. ಅವರ ರಾಜೀನಾಮೆ ವಿಚಾರವಾಗಿ ಇದುವರೆಗೂ ಯಾವ ತೀರ್ಮಾನವನ್ನೂ ಕೈಗೊಳ್ಳಲಾಗಿಲ್ಲ. ಹೈಕಮಾಂಡ್ ಸಂಸ್ಕೃತಿಯ ಪ್ರಭಾವ ಮತ್ತು ಪರಿಣಾಮ ರಾಜ್ಯ ರಾಜಕೀಯದ ಎರಡೂ ಪ್ರಮುಖ ಪಕ್ಷಗಳಲ್ಲಿ ಬಹಳ ಸ್ಪಷ್ಟವಾಗಿ ಕಾಣಿಸುತ್ತಿವೆ. ರಾಜಕೀಯ ತೀರ್ಮಾನಗಳನ್ನು ತೆಗೆದುಕೊಳ್ಳುವ ವಿಚಾರದಲ್ಲಿ ಈ ಎರಡೂ ಪಕ್ಷಗಳ ರಾಜ್ಯ ಮಟ್ಟದ ನಾಯಕರ ಸಾಮರ್ಥ್ಯದ ಬಗ್ಗೆಯೇ ಪ್ರಶ್ನೆಗಳನ್ನು ಮೂಡಿಸುತ್ತಿವೆ.

ವಿಶ್ವಾಸಮತ ಯಾಚನೆ ವೇಳೆ 17 ಶಾಸಕರು ದೂರವಿದ್ದ ಪರಿಣಾಮವಾಗಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಉರುಳಿ, ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳಿಗೂ ಹೆಚ್ಚು ಸಮಯವಾಗಿದೆ. ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಒಳಗೆ ನಡೆದ ಬಂಡಾಯದಲ್ಲಿ ತನ್ನ ಪಾತ್ರ ಏನೇನೂ ಇಲ್ಲ ಎಂದು ಆ ಸಂದರ್ಭದಲ್ಲಿ ಬಿಜೆಪಿ ಅಧಿಕೃತ ಹೇಳಿಕೆ ನೀಡಿತ್ತು. ಆದರೆ, ಬಿಜೆಪಿ ಅಧಿಕಾರ ಹಿಡಿದ ನಂತರ ಬಂಡಾಯ ಶಾಸಕರಲ್ಲಿ ಬಹುತೇಕರನ್ನು ಬಿಜೆಪಿ ಸೇರಿಸಿಕೊಂಡಿದ್ದನ್ನು, ಉಪಚುನಾವಣೆಯಲ್ಲಿ ಅವರು ಕೇಸರಿ ವಸ್ತ್ರ ಧರಿಸಿದ್ದನ್ನು ಕಂಡ ನಂತರ, ರಾಜಕೀಯ ನಾಟಕದಲ್ಲಿ ಬಿಜೆಪಿ ನಾಯಕರು ಮೂಕಪ್ರೇಕ್ಷಕರಾಗಿರಲಿಲ್ಲ, ಹಿಂಬದಿಯಿಂದ ಎಲ್ಲವನ್ನೂ ಸಂಘಟಿಸಿದವರಾಗಿದ್ದರು ಎಂಬುದು ಹೆಚ್ಚೆಚ್ಚು ಸ್ಪಷ್ಟವಾಯಿತು. ಪಕ್ಷ ಬದಲಿಸಿದ, ಪುನಃ ಆಯ್ಕೆಯಾದ ಹನ್ನೊಂದು ಮಂದಿಯನ್ನು ಸಂಪುಟದಲ್ಲಿ ಸೇರಿಸಿಕೊಳ್ಳುವ ಅಗತ್ಯದ ಬಗ್ಗೆ ಮುಖ್ಯಮಂತ್ರಿ ನೀಡಿದ ಸಾರ್ವಜನಿಕ ಹೇಳಿಕೆಯ ನಂತರ ಇದು ಇನ್ನಷ್ಟು ಖಚಿತವಾಯಿತು.

ಬಿಜೆಪಿಯ ಶಾಸಕರಾಗಿ ಹೊಸದಾಗಿ ಆಯ್ಕೆಯಾದವರಿಗೆ ಮಂತ್ರಿ ಪದವಿಯ ಉಡುಗೊರೆ ದೊರೆಯಲು ಉಪಚುನಾವಣೆ ಫಲಿತಾಂಶ ಬಂದು ಸರಿಸುಮಾರು ಎಂಟು ವಾರಗಳು ಬೇಕಾದವು. ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಬಂದಿರುವ ವರದಿಗಳನ್ನು ನಂಬುವುದಾದರೆ, ಇವರಲ್ಲಿ ಒಬ್ಬರಿಗೆ ಸಂಪುಟದಲ್ಲಿ ಸ್ಥಾನ ಸಿಗುವುದಿಲ್ಲ. ಅವರಿಗೆ ಮುಂದಿನ ದಿನಗಳಲ್ಲಿ ಸೂಕ್ತ ರಾಜಕೀಯ ಬಹುಮಾನ ಸಿಗಲಿದೆ. ಸಂಪುಟ ವಿಸ್ತರಣೆಗೆ ಪಕ್ಷದ ವರಿಷ್ಠರಿಂದ ಒಪ್ಪಿಗೆ ಪಡೆದುಕೊಳ್ಳಲು ಆಗದಿದ್ದ ಕಾರಣಕ್ಕೆ ಮುಖ್ಯಮಂತ್ರಿ ಅವರಲ್ಲಿ ಇದ್ದ ಆತಂಕ ಈ ಎಂಟು ವಾರಗಳ ಅವಧಿಯಲ್ಲಿ ಸ್ಪಷ್ಟವಾಗಿ ಕಾಣುತ್ತಿತ್ತು.

ಮೊದಲು ಜಾರ್ಖಂಡ್ ವಿಧಾನಸಭಾ ಚುನಾವಣೆ ಅಡ್ಡಿಯಾಯಿತು. ನಂತರ ದೆಹಲಿ ವಿಧಾನಸಭಾ ಚುನಾವಣೆ ಘೋಷಣೆಯಾಗಿದ್ದು, ಮುಖ್ಯಮಂತ್ರಿಯವರ ದಾವೋಸ್ ಭೇಟಿ... ಇವೆಲ್ಲಾ ಸಂಪುಟ ವಿಸ್ತರಣೆಯ ವಿಳಂಬಕ್ಕೆ ಕಾರಣವೆಂದು ಹೇಳಲಾಯಿತು. ಆದರೆ ಸಂಪುಟ ವಿಸ್ತರಣೆಯ ಯಾವುದೇ ಯತ್ನಕ್ಕೆ ಅನುಮತಿ ನೀಡುವಲ್ಲಿ ಕೇಂದ್ರ ನಾಯಕತ್ವಕ್ಕೆ ಆತುರ ಇರಲಿಲ್ಲ ಎಂಬುದು ಸ್ಪಷ್ಟ. ಮಹಾರಾಷ್ಟ್ರ, ಹರಿಯಾಣ ಮತ್ತು ಜಾರ್ಖಂಡ್‌ನಲ್ಲಿ ಬಿಜೆಪಿ ಅನುಭವಿಸಿದ ಹಿನ್ನಡೆಯು ಕೇಂದ್ರ ನಾಯಕತ್ವವು ಕರ್ನಾಟಕದ ವಿಚಾರದಲ್ಲಿ ಒಂದು ನಿರ್ಧಾರಕ್ಕೆ ಬರಲು ಕಾರಣವಾಗಿರಬೇಕು– ಇನ್ನೂ ಒಂದು ರಾಜ್ಯವು ಬಿಜೆಪಿಯ ಕೈಯಿಂದ ಜಾರದಿರಲೆಂದು!

ಬಿಜೆಪಿಗೆ ಹೊಸದಾಗಿ ಬಂದವರು ಅನುಮಾನ, ಆತಂಕ ಹಾಗೂ ನಿರೀಕ್ಷೆಗಳನ್ನು ಹೊತ್ತು ಕಾದು ಕುಳಿತಿದ್ದ ಸಂದರ್ಭದಲ್ಲಿ, ಹೊಸಬರಿಗೆ ಕೊಡುತ್ತಿದ್ದ ಅಸಾಮಾನ್ಯ ಬೋನಸ್‌ ಅನ್ನು ಪಕ್ಷದ ನಿಷ್ಠರು ಕೂಡ ಕಳವಳದಿಂದ ಗಮನಿಸುತ್ತಿದ್ದರು. ಬಿಜೆಪಿಯ ಹಿರಿಯ ನಾಯಕರೊಬ್ಬರು ಚುಟುಕಾಗಿ, ಸ್ಪಷ್ಟವಾಗಿ ಹೇಳಿದ್ದು: ‘ಹಳೆಯ ಸೊಸೆಯಂದಿರಿಗಿಂತ ಹೆಚ್ಚಿನ ಪ್ರಾಧಾನ್ಯವನ್ನು ಹೊಸ ಸೊಸೆಯಂದಿರಿಗೆ ನೀಡಲಾಗುತ್ತಿದೆ!’

ಸಂದೀಪ್ ಶಾಸ್ತ್ರಿ

2008-2011ರ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲೂ ಯಡಿಯೂರಪ್ಪ ಅವರು ಇಂಥದ್ದೇ ಸ್ಥಿತಿ ಎದುರಿಸಿದ್ದರು. ಆಗ ಸರ್ಕಾರಕ್ಕೆ ಬೆಂಬಲ ನೀಡಿದ್ದ ಪಕ್ಷೇತರ ಶಾಸಕರು ಹಾಗೂ ‘ಮೊದಲ ಸುತ್ತಿನ ಆಪರೇ‍ಷನ್ ಕಮಲ’ದ ಫಲಾನುಭವಿಗಳು ಒಟ್ಟಾಗಿ ರಾಜಕೀಯ ಬೇಡಿಕೆ ಮುಂದಿಟ್ಟು, ಪಕ್ಷದ ವಿರುದ್ಧ ತಿರುಗಿಬಿದ್ದಿದ್ದರು. ಆಗ ಎದುರಾದ ರಾಜಕೀಯ ಬಂಡಾಯದಿಂದ ಬಿಜೆಪಿ ನೇತೃತ್ವದ ಸರ್ಕಾರವು ಪೂರ್ಣ ಪ್ರಮಾಣದಲ್ಲಿ ಹೊರಬರಲು ಸಾಧ್ಯವಾಗಲೇ ಇಲ್ಲ. ಇದರ ಪರಿಣಾಮವಾಗಿ ರಾಜ್ಯವು ಐದು ವರ್ಷಗಳಲ್ಲಿ ಬಿಜೆಪಿಯ ಮೂವರು ಮುಖ್ಯಮಂತ್ರಿಗಳನ್ನು ಕಾಣಬೇಕಾಯಿತು. ಯಡಿಯೂರಪ್ಪ ಅವರು ಬಿಜೆಪಿ ತೊರೆದಿದ್ದೂ ಆಯಿತು. ಹೊಸ ಸಚಿವರು ಪ್ರಮಾಣವಚನ ಸ್ವೀಕರಿಸುವುದನ್ನು ನೋಡಲು ಬಿಜೆಪಿ ನಾಯಕರು ಸಿದ್ಧವಾಗುತ್ತಿರುವ ಹೊತ್ತಿನಲ್ಲಿ ಈ ಎಲ್ಲ ಘಟನೆಗಳು ಅವರ ಮನಸ್ಸಿನಲ್ಲಿ ಹಾದುಹೋಗುತ್ತಿರಬಹುದು.

ಕಾಂಗ್ರೆಸ್ಸಿನಲ್ಲಿನ ಚಿತ್ರಣ ತೀರಾ ಭಿನ್ನವಾಗಿಯೇನೂ ಇಲ್ಲ. ಅದರ ರಾಜ್ಯ ನಾಯಕತ್ವದಲ್ಲಿ ಒಡಕು ಮೂಡಿದೆ. ಈ ಪಕ್ಷದಲ್ಲಿನ ಚರ್ಚೆಗಳು ಸಂಘಟನೆಯನ್ನು ಬಲಪಡಿಸುವುದಕ್ಕಿಂತಲೂ ಹೆಚ್ಚಾಗಿ ಹುದ್ದೆಗಳನ್ನು ಹಂಚಿಕೊಳ್ಳುವುದರ ಸುತ್ತ ನಡೆದಿವೆ. ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸ್ಥಾನ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನೀಡಿರುವ ರಾಜೀನಾಮೆ ವಿಚಾರದಲ್ಲಿ ಪಕ್ಷದ ವರಿಷ್ಠರು ಎರಡು ತಿಂಗಳುಗಳಿಂದ ಯಾವುದೇ ತೀರ್ಮಾನ ಕೈಗೊಂಡಿಲ್ಲವಾದ ಕಾರಣ, ಪಕ್ಷದ ರಾಜ್ಯ ನಾಯಕರಲ್ಲಿ ಎಲ್ಲರೂ ಒಂದೊಂದು ರೀತಿಯ ಲೆಕ್ಕಾಚಾರಕ್ಕೆ ಮುಂದಾಗಿದ್ದಾರೆ.

ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಸಿದ್ದರಾಮಯ್ಯ ಅವರು ಉಳಿಸಿಕೊಳ್ಳುವುದು ಬಹುತೇಕ ಖಚಿತವೆಂದು ತೋರುತ್ತಿದ್ದರೂ, ಅವರ ವಿರೋಧಿಗಳು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಬೇರೊಬ್ಬರನ್ನು ಬಯಸುತ್ತಿದ್ದಾರೆ. ಕೆಪಿಸಿಸಿಯ ಹಾಲಿ ಅಧ್ಯಕ್ಷರಿಗೆ ಯಾರ ಬೆಂಬಲವೂ ಇದ್ದಂತೆ ಕಾಣುತ್ತಿಲ್ಲ; ಆ ಹುದ್ದೆ ಕುರಿತ ಚರ್ಚೆ ಮುಂದುವರಿದಿದೆ. ಅಧಿಕಾರವನ್ನು ಹೇಗೆ ಹಂಚಿಕೊಳ್ಳಬೇಕು ಎಂಬ ವಿಚಾರದಲ್ಲಿ ಅನುಚಿತ ಕದನವೊಂದು ಪಕ್ಷದಲ್ಲಿ ನಡೆಯುತ್ತಿರುವುದು ಸ್ಪಷ್ಟ.

ಈ ಜಂಜಾಟದಲ್ಲಿ, ಸರ್ಕಾರವನ್ನು ಉತ್ತರದಾಯಿ ಆಗಿಸುವ ಹಲವು ಅವಕಾಶಗಳನ್ನು ಕಾಂಗ್ರೆಸ್ ಪಕ್ಷವು ಕಳೆದುಕೊಂಡಿದೆ. ಪಕ್ಷವನ್ನು ಪುನಃ ಸಂಘಟಿಸುವುದು ಹೇಗೆಂಬುದರ ಕುರಿತ ಚರ್ಚೆಗಳಿಗಿಂತ, ಯಾರು ಯಾವ ಹುದ್ದೆಯನ್ನು ಪಡೆದುಕೊಳ್ಳುವುದು ಎಂಬುದಕ್ಕೇ ಆದ್ಯತೆ ಸಿಗುತ್ತಿರುವುದರಿಂದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಉಂಟಾಗಿರುವ ಅತೃಪ್ತಿ, ಆತಂಕ ಏನೆಂಬುದು ಅವರ ಜೊತೆ ಚರ್ಚಿಸಿದಾಗ ಸ್ಪಷ್ಟವಾಗಿ ಗೊತ್ತಾಗುತ್ತದೆ. ಕಾಂಗ್ರೆಸ್ಸಿನ ವರಿಷ್ಠರಿಗೆ ರಾಷ್ಟ್ರಮಟ್ಟದಲ್ಲಿ ಹತ್ತು ಹಲವು ಸವಾಲುಗಳಿವೆ. ಹಾಗಾಗಿ, ಅವರ ಮನಸ್ಸಿನಲ್ಲಿ ಕರ್ನಾಟಕದ ಬಿಕ್ಕಟ್ಟು ಹಿಂದಕ್ಕೆ ತಳ್ಳಲ್ಪಟ್ಟಿದೆ. ವರಿಷ್ಠರು ಕೈಗೊಳ್ಳುವ ಯಾವುದೇ ತೀರ್ಮಾನವು ಪಕ್ಷದೊಳಗೆ ಇನ್ನೊಂದು ಸುತ್ತಿನ ಅಸಮಾಧಾನವನ್ನು, ಗುಂಪುಗಾರಿಕೆಯನ್ನು ಹುಟ್ಟುಹಾಕುವುದಿಲ್ಲ ಎಂಬ ಯಾವುದೇ ಭರವಸೆ ಕಾಂಗ್ರೆಸ್ಸಿನ ವಿಚಾರದಲ್ಲಿಯೂ ಇಲ್ಲ.

ಒಟ್ಟಾರೆಯಾಗಿ ಹೇಳಬೇಕೆಂದರೆ, ಬಿಜೆಪಿ ಮತ್ತು ಕಾಂಗ್ರೆಸ್‌ನಲ್ಲಿ ಸ್ಥಳೀಯ ದನಿ ಎಂಬುದು ದುರ್ಬಲವಾಗಿರುವಂತೆ ಕಾಣುತ್ತಿದೆ. ಎಲ್ಲ ಕ್ರಮಗಳನ್ನೂ ವರಿಷ್ಠರೇ ತೆಗೆದುಕೊಳ್ಳಲಿ ಎಂದು ಎರಡೂ ಪಕ್ಷಗಳ ಮುಖಂಡರು ತೀರ್ಮಾನಿಸಿದಂತೆ ಕಾಣುತ್ತಿದೆ. ಇದರ ಸಹಜ ಪರಿಣಾಮ ಎಂಬಂತೆ ರಾಜ್ಯದ ರಾಜಕಾರಣದಲ್ಲಿ ಸಣ್ಣಗಿನ ಬದಲಾವಣೆಯೊಂದನ್ನು ಗುರುತಿಸಬಹುದು. ಸ್ಥಳೀಯ ಮಟ್ಟದಲ್ಲಿ ಹೈಕಮಾಂಡ್ ಹೊಂದಿರುವ ಜೆಡಿಎಸ್ ಪಕ್ಷವು, ಬೇರೆ ಪಕ್ಷಗಳು ಸಮಸ್ಯೆಗೆ ಸಿಲುಕಿದಾಗ ತಾನು ಲಾಭ ಪಡೆದುಕೊಳ್ಳಲು ಯತ್ನಿಸುತ್ತಾ ಇರುತ್ತದೆ. ಕರ್ನಾಟಕಕ್ಕೆ ಇನ್ನಷ್ಟು ಉತ್ತಮವಾದ ರಾಜಕೀಯ ವ್ಯವಸ್ಥೆಯನ್ನು ಪಡೆಯುವ ಅರ್ಹತೆ ಇದೆ!

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು