ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುರಣನ | ಚುನಾವಣೆ ಎಂಬ ಹಬ್ಬ, ಮಾರಿಹಬ್ಬ

ಜನಾದೇಶದ ಖರೀದಿ, ಜನಾದೇಶದ ಅಪಹರಣ, ಜನಾದೇಶದ ಸರ್ಜರಿ ನಡುವೆ...
Published 25 ಏಪ್ರಿಲ್ 2024, 20:20 IST
Last Updated 25 ಏಪ್ರಿಲ್ 2024, 20:20 IST
ಅಕ್ಷರ ಗಾತ್ರ

ಚುನಾವಣೆಯನ್ನು ಪ್ರಜಾತಂತ್ರದ ಹಬ್ಬ ಅಂತ ಕರೆಯುವುದು ರೂಢಿ. ಚುನಾವಣೆ ಒಂದು ಹಬ್ಬವೇ ಆಗಿದ್ದಲ್ಲಿ ಅದನ್ನು ಮಾರಿಹಬ್ಬ ಅಂತ ಕರೆಯುವುದು ಸೂಕ್ತ. ಮಾರಿಹಬ್ಬದಲ್ಲಿ ಎರಡು ವಿಧಗಳಿವೆ. ಒಂದು, ಊರ ದೇವತೆ ಮಾರಮ್ಮನನ್ನು ಪೂಜಿಸುವ ಹಬ್ಬ. ಇನ್ನೊಂದು ರೀತಿಯ ಮಾರಿಹಬ್ಬದಲ್ಲಿ ಊರ ಮಾರಿಯನ್ನು ಅಂದರೆ ಕೆಡುಕನ್ನು ಮೆರವಣಿಗೆಯಲ್ಲಿ ಕೊಂಡೊಯ್ದು ಊರ ಗಡಿಯಾಚೆ ಬಿಟ್ಟುಬರಲಾಗುತ್ತದೆ. ಇದನ್ನು ‘ಮಾರಿ ನೂಕುವುದು’ ಅಂತಲೂ ಕರೆಯುತ್ತಾರೆ. ಚುನಾವಣೆಯನ್ನು ಮಾರಿಹಬ್ಬ ಎಂದು ಕರೆಯಬಹುದಾಗಿರುವುದು ಈ ‘ಮಾರಿ ನೂಕುವುದು’ ಎನ್ನುವ ಅರ್ಥದಲ್ಲಿ. ಯಾಕೆಂದರೆ, ಬೇಡವಾದದ್ದನ್ನು ಅಥವಾ ಕೆಟ್ಟದ್ದನ್ನು ಹೊರದಬ್ಬಲು ಸಾಂವಿಧಾನಿಕವಾಗಿ ಈ ದೇಶದ ಸಾಮಾನ್ಯ ಜನರಿಗೆ ಚುನಾವಣೆ ಒಂದು ಅವಕಾಶ ಒದಗಿಸುತ್ತದೆ. ಈ ಅವಕಾಶದ ಬಳಕೆ ಹೇಗಾಗುತ್ತದೆ ಎನ್ನುವ ವಿಚಾರಕ್ಕೆ ಮತ್ತೆ ಬರೋಣ.

ಚುನಾವಣೆ ಎಂದರೆ ಪ್ರಜಾತಂತ್ರದ ಒಂದು ಸಂಭ್ರಮದ ಗಳಿಗೆ ಎನ್ನುವಂತೆ ಅದನ್ನು ವೈಭವೀಕರಿಸುವ ಕೆಲಸ ಪ್ರತಿಸಾರಿ ಚುನಾವಣೆ ಬಂದಾಗಲೂ ಈ ದೇಶದಲ್ಲಿ ನಡೆಯುತ್ತದೆ. ಮತದಾನದ ಹಕ್ಕು ಶ್ರೇಷ್ಠ ಹಕ್ಕು, ಮತದಾನದ ಮೂಲಕ ಆಳುವ ಅಧಿಕಾರವನ್ನು ಯಾರಿಗೆ ಬೇಕೋ ಅವರಿಗೆ ನೀಡಬಹುದಾದ ಸ್ವಾತಂತ್ರ್ಯ ಏನಿದೆ ಅದು ಶ್ರೇಷ್ಠ ಸ್ವಾತಂತ್ರ್ಯ ಎನ್ನುವುದೆಲ್ಲ ಸರಿ. ಆದರೆ ಈ ಹಕ್ಕಿನ ಶ್ರೇಷ್ಠತೆಯನ್ನು ಮಾತ್ರ ದೃಷ್ಟಿಯಲ್ಲಿ ಇಟ್ಟುಕೊಂಡು ಚುನಾವಣೆಯನ್ನು ಒಂದು ಹಬ್ಬ ಎನ್ನುವ ರೀತಿಯಲ್ಲಿ ಸಂಭ್ರಮಿಸಿ ಮೈಮರೆಯುವಾಗ, ದೇಶದ ಸಮಗ್ರ ಚುನಾವಣಾ ವ್ಯವಸ್ಥೆಯ ಕುರಿತಾದ ಕೆಲವು ಕರಾಳ ಸತ್ಯಗಳು ಮರೆತುಹೋಗಬಾರದು. ಸಂಭ್ರಮದಾಚೆಗಿನ ಚುನಾವಣಾ ವಾಸ್ತವಗಳನ್ನು ಗಮನಕ್ಕೆ ತಂದುಕೊಂಡರೆ, ಪ್ರತಿಬಾರಿಯೂ ಚುನಾವಣೆ ನಡೆದಾಗ ದೇಶದಲ್ಲಿ ಕಾಣಿಸುವುದು ಪ್ರಜಾತಂತ್ರದ ಜೀವಂತಿಕೆಯೋ ಅಥವಾ ಪ್ರಜಾತಂತ್ರ ಜೀವಚ್ಛವವಾಗುತ್ತಿರುವ ಲಕ್ಷಣವೋ ಎನ್ನುವ ಪ್ರಶ್ನೆಯೊಂದು ಕಾಡುತ್ತದೆ.

ಈ ದೇಶದಲ್ಲಿ ಸಮಾನತೆ ಎನ್ನುವ ಸಾಂವಿಧಾನಿಕ ಮೌಲ್ಯವನ್ನು ಎಲ್ಲಾದರೂ ಅಪ್ಪಟ ಸ್ವರೂಪದಲ್ಲಿ ಕಾಣಬಹುದಾದರೆ ಅದು ಮತಗಟ್ಟೆಗಳ ಮುಂದೆ ನಿಂತ ಮತದಾರರ ಸಾಲಿನಲ್ಲಿ ಮಾತ್ರ ಎನ್ನುವುದು ನಿಜ. ಅದೊಂದೇ ಸಾಲಿನಲ್ಲಿ ಈ ದೇಶದಲ್ಲಿ ಎಲ್ಲರೂ ಸಮಾನರು. ಆ ಸಾಲಿನಲ್ಲಿ ಮಾತ್ರ ಮುಂದೆ ಬಂದವರು ಮುಂದೆ ನಂತರ ಬಂದವರು ಹಿಂದೆ. ಸ್ಥಾನ, ಮಾನ, ಜಾತಿ, ಮತ, ಕುಲ, ಅಂತಸ್ತು ಎಲ್ಲವೂ ಆ ಒಂದು ಪಂಕ್ತಿಯಲ್ಲಿ ಮಾತ್ರ ಗೌಣ. ಆ ಸಾಲಿನಲ್ಲಿ ನಿಂತ ಎಲ್ಲರ ಬಳಿಯೂ ಇರುವುದು ಒಂದೇ ಒಂದು ವೋಟು. ಯಾರು ಏನೇ ಆಗಿದ್ದರೂ ಯಾರು ಏನೇ ಮಾಡಿದರೂ ಅಷ್ಟೇ– ಒಬ್ಬರಿಗೆ ಒಂದೇ ವೋಟು. ಆ ಒಂದು ವೋಟಿನ ಮೂಲಕ ಪ್ರತಿ ಪ್ರಜೆಗೂ ಸಂವಿಧಾನ ನೀಡಿದ ಸಾರ್ವಭೌಮ ಅಧಿಕಾರ ಆ ಪ್ರಜೆ ಬಯಸುವ ಯಾವುದೋ ರಾಜಕೀಯ ಪಕ್ಷಕ್ಕೆ ಅಥವಾ ಆ ಪಕ್ಷವನ್ನು ಪ್ರತಿನಿಧಿಸುವ ವ್ಯಕ್ತಿಗಳಿಗೆ ಐದು ವರ್ಷಗಳ ಅವಧಿಗೆ ವರ್ಗಾವಣೆಯಾಗುತ್ತದೆ.

ದೇಶದ ಪ್ರತಿ ಪ್ರಜೆಯೂ ತಾನು ಯಾರಿಗೂ ಕಡಿಮೆಯಿಲ್ಲ, ತಾನು ಯಾರಿಗಿಂತಲೂ ಹೆಚ್ಚಲ್ಲ ಎನ್ನುವ ಭಾವದಿಂದ ತನ್ನ ಬಳಿ ಇರುವ ಸಾರ್ವಭೌಮಾಧಿಕಾರವನ್ನು ವರ್ಗಾಯಿಸುವ ಆ ಕ್ಷಣದಲ್ಲಿ ಅನುಭವಿಸುವ ಧನ್ಯತೆಯ ಕ್ಷಣ ಶ್ರೇಷ್ಠವಾದದ್ದು. ಅಷ್ಟರಮಟ್ಟಿಗಿನ ಸಂಭ್ರಮವನ್ನು ಅರ್ಥ ಮಾಡಿಕೊಳ್ಳಬಹುದು. ಆ ಚೌಕಟ್ಟಿನ ಪಾವಿತ್ರ್ಯವನ್ನು ಅರ್ಥ ಮಾಡಿಕೊಳ್ಳಬಹುದು. ಆದರೆ ಚುನಾವಣೆ ಎಂದರೆ ಅಷ್ಟು ಮಾತ್ರ ಅಲ್ಲವಲ್ಲ.

ಒಂದು ಕ್ಷಣ ಚುನಾವಣೆಯ ಹೆಸರಿನಲ್ಲಿ ಮತಗಟ್ಟೆಯ ಹೊರಗೆ, ಚುನಾವಣೆ ಘೋಷಣೆ ಆಗುವುದಕ್ಕೆ ಮೊದಲು ಮತ್ತು ನಂತರ ಆಗುವ ಎಲ್ಲಾ ವಿದ್ಯಮಾನಗಳನ್ನು ಮನಸ್ಸಿಗೆ ತಂದುಕೊಂಡು ಚುನಾವಣೆಯ ಬಗ್ಗೆ ಯೋಚಿಸಿ ನೋಡಿ. ಚುನಾವಣೆಯ ಕಾಲದಲ್ಲಿ ಯಥೇಚ್ಛ ಹರಿಯುವ ಹಣದ ಹೊಳೆಯ ಬಗ್ಗೆ ಯೋಚಿಸಿ. ಆ ಹಣದ ಮೂಲಗಳ ಬಗ್ಗೆ ಊಹಿಸಿಕೊಳ್ಳಿ. ಚುನಾವಣೆಯ ಕಾಲದಲ್ಲಿ ಎಗ್ಗಿಲ್ಲದೆ ಹರಿಯಬಿಡಲಾಗುವ ಸುಳ್ಳುಗಳ ಬಗ್ಗೆ ಯೋಚಿಸಿ. ಚುನಾವಣೆಯ ಕಾಲದಲ್ಲಿ ಬಳಕೆಯಾಗುವ ತೋಳ್ಬಲದ ಬಗ್ಗೆ ಯೋಚಿಸಿ. ಚುನಾವಣಾ ಕಾಲದಲ್ಲಿ ಸೃಷ್ಟಿಸಲಾಗುವ ಭ್ರಮೆಗಳ ಬಗ್ಗೆ ಯೋಚಿಸಿ. ಯೋಚಿಸುತ್ತಾ ಹೋದ ಹಾಗೆ ಈ ದೇಶದಲ್ಲಿ ಚುನಾವಣೆಯ ಮೂಲಕ ಜನಾದೇಶವನ್ನು ಒಂದು ಪವಿತ್ರ ಒಪ್ಪಂದವಾಗಿ ಪಡೆದುಕೊಳ್ಳಲಾಗುತ್ತಿಲ್ಲ, ಬದಲಿಗೆ ಜನಾದೇಶವನ್ನು ಪರೋಕ್ಷವಾಗಿ ಖರೀದಿಸಲಾಗುತ್ತದೆ, ಜನಾದೇಶವನ್ನು ಬಲವಂತವಾಗಿ ಕಸಿದುಕೊಳ್ಳಲಾಗುತ್ತದೆ ಅಥವಾ ಜನರನ್ನು ಯಾವುದೋ ಉನ್ಮಾದದಲ್ಲಿ ಮುಳುಗಿಸಿ ಜನಾದೇಶವನ್ನು ಅಪಹರಿಸಲಾಗುತ್ತದೆ ಎನ್ನುವ ಸತ್ಯ ಗೋಚರಿಸುತ್ತದೆ.

ಎಪ್ಪತ್ತೈದು ವರ್ಷಗಳಷ್ಟೇ ತುಂಬಿರುವ ಜನತಂತ್ರ, ಆರಂಭದಲ್ಲಿ ಹೀಗೆಲ್ಲಾ ಆಗುವುದು ಸಹಜ, ಮುಂದೆ ಎಲ್ಲವೂ ಸರಿಹೋದೀತು ಅಂತ ಭಾವಿಸೋಣವೇ? ಇಲ್ಲ, ಚುನಾವಣೆಯಿಂದ ಚುನಾವಣೆಗೆ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತಿದೆ. ಈಗ ನಡೆಯುತ್ತಿರುವ ಚುನಾವಣಾ ಕಣದ ವಿದ್ಯಮಾನಗಳು ಈ ಮಾತಿಗೆ ಇನ್ನಷ್ಟು ಪುಷ್ಟಿ ನೀಡುತ್ತವೆ.

ಚುನಾವಣೆಯ ಕಾಲದ ಭ್ರಷ್ಟಾಚಾರದ ಬಗ್ಗೆ ಬಹಳ ಕಾಲದಿಂದ ಕೇಳಿದ್ದೇವೆ. ಅದೇನೋ ಬಿಡಿ, ಇದ್ದದ್ದರಲ್ಲಿ ಕಡಿಮೆ ಭ್ರಷ್ಟರನ್ನು ಜನ ಆಯ್ದುಕೊಳ್ಳುತ್ತಾರೆ ಎಂದು ಅದಕ್ಕೆ ಹೊಂದಿಕೊಂಡದ್ದಾಯಿತು. ಆದರೆ ಈಗ ಕಾಣಿಸುವುದು ಬರೀ ಭ್ರಷ್ಟತೆಯಷ್ಟೇ ಅಲ್ಲ, ಅತ್ಯಂತ ಭ್ರಷ್ಟರಾದವರು ಅತ್ಯಂತ ಭ್ರಷ್ಟಾತೀತರು ಎನ್ನುವಂತೆ ಜನರನ್ನು ಯಶಸ್ವಿಯಾಗಿ ನಂಬಿಸುವ ವಿದ್ಯಮಾನ. ಸುಳ್ಳುಗಳನ್ನು ಹರಿಯಬಿಡುವುದು ಬಹಳ ಕಾಲದಿಂದಲೂ ಚುನಾವಣೆಯ ಭಾಗ. ಅದೇನೋ ಬಿಡಿ, ಇದ್ದವರ ಪೈಕಿ ಕಡಿಮೆ ಸುಳ್ಳು ಹೇಳುವವರನ್ನು ಜನ ಆರಿಸಿಕೊಳ್ಳುತ್ತಾರೆ ಎಂದು ಅದಕ್ಕೂ ಹೊಂದಿಕೊಂಡದ್ದಾಯಿತು. ಆದರೆ ಈಗ ಹಾಗಲ್ಲ, ಅತ್ಯಂತ ಹೆಚ್ಚು ಸುಳ್ಳು ಹೇಳುವವರು ಅತ್ಯಂತ ಪ್ರಾಮಾಣಿಕರು ಎನ್ನುವಂತೆ ಜನರನ್ನು ಯಶಸ್ವಿಯಾಗಿ ನಂಬಿಸಲಾಗುತ್ತದೆ. ಹಿಂದಿನ ಚುನಾವಣೆಯ ಕಾಲದಲ್ಲಿ ನೀಡಿದ ಭರವಸೆಯನ್ನು ಮುಂದಿನ ಚುನಾವಣೆಯ ಕಾಲಕ್ಕೆ ಈಡೇರಿಸದೇ ಇರುವುದು ಬಹಳ ಕಾಲದಿಂದ ನಡೆದುಬಂದಿತ್ತು. ಇರಲಿ, ಇದ್ದವರಲ್ಲಿ ಕಡಿಮೆ ಅಸಮರ್ಥರನ್ನು ಜನ ಆರಿಸಿಕೊಳ್ಳುತ್ತಾರೆ ಅಂತ ಅದನ್ನೂ ಒಪ್ಪಿಕೊಂಡದ್ದಾಯಿತು. ಆದರೆ ಈಗ ಹಾಗಲ್ಲ. ಈಗ ಅತ್ಯಂತ ಕೆಟ್ಟ ಆಡಳಿತ ನೀಡಿದವರನ್ನು ಅದ್ವಿತೀಯ ಸಮರ್ಥ ನಾಯಕ ಅಂತ ಬಿಂಬಿಸಿ ನಂಬಿಸಲಾಗುತ್ತದೆ.

ಅಷ್ಟೇ ಅಲ್ಲ. ಭೀಕರವಾದ ಇತ್ತೀಚೆಗಿನ ಸತ್ಯ ಏನೆಂದರೆ, ಒಂದೊಮ್ಮೆ ಎಲ್ಲ ಕುತಂತ್ರಗಳನ್ನೂ ಮೀರಿ ನಿಂತು ಮತದಾರರು ಜನಾದೇಶ ನೀಡಿದರು ಅಂದುಕೊಳ್ಳಿ. ಅದೇನೂ ಅಂತಿಮವಲ್ಲ. ಕೆಲವೊಂದು ಸಂದರ್ಭಗಳಲ್ಲಿ ಚುನಾವಣೆ ಎಂಬುದು ಬರೀ ಸೆಮಿಫೈನಲ್. ಚುನಾವಣೆಯ ನಂತರ ಹೆಚ್ಚು ಹಣ ಮತ್ತು ಹೆಚ್ಚು ಅಧಿಕಾರ ಇದ್ದವರು ಏನೇನೋ ಹೆಸರಿನ ‘ಆಪರೇಷನ್’ ಮಾಡಿ, ಗೆದ್ದವರನ್ನು ಖರೀದಿಸಿ, ಖರೀದಿತರಿಂದ ರಾಜೀನಾಮೆ ಕೊಡಿಸಿ, ಯಾವುದೋ ಪಕ್ಷದಿಂದ ಗೆದ್ದವರನ್ನು ಮತ್ತೆ ಯಾವುದೋ ಪಕ್ಷದಿಂದ ಗೆಲ್ಲಿಸಿ ಜನಾದೇಶಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡುವ ವಿದ್ಯಮಾನ ಕೂಡ ನಡೆಯುತ್ತದೆ. ಅಂದರೆ ಮತದಾನದ ಮಾರಿಹಬ್ಬದಲ್ಲಿ ಊರಾಚೆಗೆ ನೂಕಿದ ಮಾರಿ ಮತ್ತೆ ವಕ್ಕರಿಸಿದಂತೆ.

ಇವೆಲ್ಲಕ್ಕೂ ಮಾಧ್ಯಮಗಳ ಯಥೇಚ್ಛ ಸಹಕಾರ ಸಿಗುತ್ತದೆ, ನ್ಯಾಯಾಂಗವೂ ಮೂಕಸಾಕ್ಷಿಯಾಗುತ್ತದೆ. ಇವನ್ನೆಲ್ಲ ನೆನೆಸಿಕೊಂಡಾಗ, ಚುನಾವಣೆಯನ್ನು ‘ಮಾರಿ ದೂಡುವ ಹಬ್ಬ’ ಎನ್ನುವ ಅರ್ಥದಲ್ಲಾದರೂ ಸಂಭ್ರಮಿಸಲು ಸಾಧ್ಯವೇ? ‘ಭರತ೦’ ಎಂಬ ಹೆಸರಿನ ಮಲಯಾಳಂ ಸಿನಿಮಾದ ಕ್ಲೈಮ್ಯಾಕ್ಸ್ ಸನ್ನಿವೇಶದಲ್ಲಿ, ಒಂದೇ ಕುಟುಂಬದೊಳಗೆ ಏಕಕಾಲದಲ್ಲಿ ಒಬ್ಬರ ಮದುವೆ ಮತ್ತು ಇನ್ನೊಬ್ಬರ ಶವಸಂಸ್ಕಾರ ನಡೆಯುತ್ತಿರುತ್ತದೆ. ಮತದಾನದ ಸಂಭ್ರಮವನ್ನು ಕಂಡಾಗಲೆಲ್ಲಾ ಈ ಸನ್ನಿವೇಶ ನೆನಪಾಗುತ್ತದೆ. ಅದೇನೇ ಇರಲಿ, ಸಂಭ್ರಮಿಸುವುದು ಕೂಡ ಒಂದು ವೈಯಕ್ತಿಕ ಆಯ್ಕೆ. ಅಷ್ಟೇಅಲ್ಲ, ಪ್ರಜಾತಂತ್ರದಲ್ಲಿ ಏನೇ ಕೆಟ್ಟರೂ ಅದನ್ನು ಸರಿಪಡಿಸಲು ಇರುವ ಅಂತಿಮ ಅಸ್ತ್ರ ಚುನಾವಣೆಯೇ ಆಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT