ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುರಣನ: ಮೀಸಲಾತಿ ಮೇಲಾಟದ ಅಪಾಯ...

ಮೀಸಲಾತಿಗೆ ಅರ್ಹರಾಗಿದ್ದರೂ ಅನುಕೂಲ ಪಡೆಯದವರಿಗಷ್ಟೇ ಪ್ರತಿಭಟಿಸುವ ನೈತಿಕ ಹಕ್ಕಿದೆ
Last Updated 18 ಫೆಬ್ರುವರಿ 2021, 21:27 IST
ಅಕ್ಷರ ಗಾತ್ರ

ಕರ್ನಾಟಕದಲ್ಲೀಗ ಅಸಂಗತವಾಗಿಯೂ ಅತಾರ್ಕಿಕವಾಗಿಯೂ ನಡೆಯುತ್ತಿರುವ ಮೀಸಲಾತಿ ಸಂಬಂಧಿ ಹೋರಾಟಗಳಿಂದಾಗಿ ಎರಡು ಅಪ್ರಸ್ತುತತೆಗಳು ಸೃಷ್ಟಿಯಾಗಬಹುದಾದ ಸಾಧ್ಯತೆಗಳು ತಲೆದೋರಿವೆ. ಈ ಪೈಕಿ, ಎರಡನೆಯ ಅಪ್ರಸ್ತುತತೆಯು ಸ್ವಲ್ಪ ಆತಂಕದ ವಿಚಾರ. ಅದರ ಕುರಿತು ಯೋಚಿಸಬೇಕಿದೆ.

ಮೊದಲನೆಯದಾಗಿ, ಅಪ್ರಸ್ತುತರಾಗಬಹುದಾದವರು ಈ ಹೋರಾಟಗಳಿಗೆ ನೇತೃತ್ವ ನೀಡುತ್ತಿರುವ ‘ಸ್ವಾಮಿಗಳು’. ಮಾಧ್ಯಮಗಳು ಅವರನ್ನು ‘ಶ್ರೀಗಳು’ ಎನ್ನುತ್ತವೆ. ಪ್ರಾಯಶಃ ‘ಜಾತಿಶ್ರೀ’ಗಳು ಎಂದು ಕರೆದರೆ ಹೆಚ್ಚು ಸೂಕ್ತವಾಗುತ್ತದೆ. ಇವರ ನಡುವೆ ಕೆಲವರು ಉಪಜಾತಿಶ್ರೀಗಳೂ ಪ್ರವರ್ಗಶ್ರೀಗಳೂ ಇದ್ದಾರೆ. ಇರಲಿ. ಇಂತಹವರೆಲ್ಲಾ ಈ ಹೋರಾಟದ ತರುವಾಯ ಅಪ್ರಸ್ತುತರಾಗಿಬಿಡುತ್ತಾರೆ ಅಂತ ಹೇಳಿದ್ದು, ಇವರೆಲ್ಲಾ ಸಾರ್ವಜನಿಕ ಬದುಕಿನಿಂದ ಕಣ್ಮರೆಯಾಗಿಬಿಡಬಹುದು ಎಂಬ ಅರ್ಥದಲ್ಲಿ ಅಲ್ಲ. ಮಂದಿ ತಮ್ಮತಮ್ಮ ಜಾತಿಶ್ರೀಗಳನ್ನು ಮುಂದೆಯೂ ಆರಾಧಿಸಬಹುದು. ಇವರು ಅಪ್ರಸ್ತುತ ಆಗುವುದು ಜಾತಿಯನ್ನು ಮೀರಿ ಇವರತ್ತ ಈ ತನಕ ಗೌರವದಿಂದ ನೋಡುತ್ತಿದ್ದವರ ದೃಷ್ಟಿಯಲ್ಲಿ. ಅಂತಹವರಿಗೆ ಮುಂದೆ ಈ ಜಾತಿಶ್ರೀಗಳನ್ನೆಲ್ಲಾ ‘ಸ್ವಾಮೀಜಿ’ ಎಂದು ಕರೆಯಲು ಕಷ್ಟವಾದೀತು. ತುಟಿಯಲ್ಲಿ ‘ಸ್ವಾಮೀಜಿ’ ಎಂದರೂ ಹೃದಯ ಪ್ರತಿಭಟಿಸೀತು.

ಮೀಸಲಾತಿಯಿಂದಾಗಿ ಇನ್ನೂ ಏನೂ ಲಭಿಸದ ದುರ್ಬಲ-ಧ್ವನಿವಿಹೀನ ವರ್ಗಗಳ ಕಡೆಗೆ ಕಡು ನಿರ್ಲಕ್ಷ್ಯ ತೋರಿಸುತ್ತಾ ತಮ್ಮ ಜಾತಿಗಳಿಗೆ ‘ಇನ್ನೂ ಬೇಕು’ ಎಂದು ಈ ಜಾತಿಶ್ರೀಗಳೆಲ್ಲಾ ಕೇಳಬಾರದು ಅಂತ ಸಂವಿಧಾನವೇನೂ ನಿರ್ಬಂಧ ವಿಧಿಸಿಲ್ಲ. ಆದರೆ ಆತ್ಮಸಾಕ್ಷಿಗೆ ಬದ್ಧರಾಗಿರುವ ಒಂದಷ್ಟು ಮಂದಿ ಸಮಾಜದಲ್ಲಿ ಇದ್ದಾರೆ. ಈಗಾಗಲೇ ಕಾವಿ ಕಂಡರೆ ಬೆಚ್ಚಿ ಬೀಳುವ ಸ್ಥಿತಿಯಲ್ಲಿರುವ ಇವರ ಮನಸ್ಸಿನಲ್ಲಿ ಇನ್ನು ಮುಂದೆ ಕರ್ನಾಟಕ ಬ್ರ್ಯಾಂಡ್‌ನ ಕಾವಿ ಎಂತೆಂತಹ ಭಾವನೆಗಳನ್ನು ಸ್ಫುರಿಸೀತು ಎನ್ನುವುದರಲ್ಲಿ ಕಾವಿಜೀವಿಗಳ ಅಪ್ರಸ್ತುತತೆಯನ್ನು ಊಹಿಸಬೇಕು.

ಎರಡನೆಯದಾಗಿ, ಈ ಹೋರಾಟಗಳಿಂದಾಗಿ ಮೀಸಲಾತಿಯ ಪರಿಕಲ್ಪನೆಯೇ ಅಪ್ರಸ್ತುತವಾಗಿಬಿಡಬಹುದು. ಮೀಸಲಾತಿಯನ್ನು ಕಾನೂನಿನ ಮೂಲಕ ಕಿತ್ತುಹಾಕಬಹುದು ಎಂದಲ್ಲ. ಆದರೆ ಮೀಸಲಾತಿಯ ಬಗ್ಗೆ ಸಾರ್ವಜನಿಕ ಅಭಿಪ್ರಾಯ ಇನ್ನಷ್ಟು ಕೆಡಬಹುದು. ನ್ಯಾಯಯುತವಾಗಿ ಮೀಸಲಾತಿ ಕೇಳುವವರನ್ನು, ನ್ಯಾಯಬದ್ಧವಾಗಿ ಅದನ್ನು ಪಡೆದವರನ್ನು ಕೀಳಾಗಿ, ತಾತ್ಸಾರದ ರೀತಿಯಲ್ಲಿ ನೋಡುವ ಇಂದಿನ ಜಾಯಮಾನ ಹೆಚ್ಚಬಹುದು. ಹೀಗಾಗಬೇಕು ಎನ್ನುವುದೇ ಈ ಹೋರಾಟಗಳಿಗೆ ಕಿಡಿ ಹಚ್ಚಿದವರ ಉದ್ದೇಶ ಇದ್ದಂತೆ ತೋರುತ್ತದೆ. ಮೀಸಲಾತಿ ಪರ ಇದ್ದೇವೆ ಎಂದುಕೊಳ್ಳುವವರು ಬೇಕಾಬಿಟ್ಟಿಯಾಗಿ ಮೀಸಲಾತಿಯ ಬಗ್ಗೆ ಬೇಡಿಕೆಗಳನ್ನು ಮುಂದಿರಿಸುವ ಮೂಲಕ ಮೀಸಲಾತಿ ವಿರೋಧಿಗಳ ಈ ಹುನ್ನಾರಕ್ಕೆ ನೆರವಾಗುತ್ತಿದ್ದಾರೆ. ಮೀಸಲಾತಿಯನ್ನು ಅಪ್ರಸ್ತುತಗೊಳಿಸಲು ಈ ತನಕ ಮೀಸಲಾತಿಯನ್ನು ಗೊತ್ತುಗುರಿಯಿಲ್ಲದೆ ವಿರೋಧಿಸುತ್ತಾ ಬಂದವರು ಮತ್ತು ಮೀಸಲಾತಿಯ ಪ್ರಯೋಜನವನ್ನು ಅನುಭವಿಸುತ್ತಾ ಬಂದವರು ಒಂದಾಗಿ ಶ್ರಮಿಸುತ್ತಿದ್ದಾರೆ ಎನ್ನುವುದು ವಿಪರ್ಯಾಸವೂ ಹೌದು, ಅಪಾಯಕಾರಿಯಾದ ಬೆಳವಣಿಗೆಯೂ ಹೌದು.

ಆಮಿಷಗಳನ್ನು ಒಡ್ಡಿ, ಸುಳ್ಳುಗಳನ್ನು ಪೋಣಿಸಿ, ಮೋಸದ ಬಲೆ ಬೀಸಿ ತಮ್ಮ ಎದುರಾಳಿಗಳನ್ನು ನೈತಿಕವಾಗಿ ಕೆಡಹುವುದರ ಮೂಲಕ ತಮ್ಮ ಪಾರಮ್ಯ ಸ್ಥಾಪಿಸುವ ಹೊಸ ರಾಜಕೀಯ ತಂತ್ರಗಾರಿಕೆಯ ಮುಂದುವರಿದ ಭಾಗವಾಗಿ ಈ ಮೀಸಲಾತಿಯನ್ನು ಅಪ್ರಸ್ತುತಗೊಳಿಸುವ ಯೋಜನೆಯನ್ನೂ ಹಾಕಿಕೊಂಡಹಾಗಿದೆ. ಯಾಕೆಂದರೆ ಮೀಸಲಾತಿಯ ಬೇಡಿಕೆ ಸಮರ್ಪಕವಾಗಿಯೂ ತರ್ಕಬದ್ಧವಾಗಿಯೂ ಇದ್ದಷ್ಟು ಕಾಲ ಅದನ್ನು ನೈತಿಕವಾಗಿ ಮತ್ತು ಸಾಂವಿಧಾನಿಕವಾಗಿ ಎದುರಿಸಲು ಯಾರಿಗೂ ಸಾಧ್ಯವಿಲ್ಲ. ಅದನ್ನು ಎಲ್ಲರೂ ತಲೆಬುಡ ಇಲ್ಲದೆ ಕಿತ್ತುಕೊಳ್ಳ ಹೊರಟರೆ ಅದರ ನೈತಿಕ ನೆಲೆಗಟ್ಟು ಕುಸಿಯುತ್ತದೆ. ಆಗ ಕೆಡವಲು ಸುಲಭ. ಈ ಹೊಸ ರಾಷ್ಟ್ರೀಯ ಭೇದ ನೀತಿಯ ಪ್ರಯೋಗವೇ ಇನ್ನೊಂದು ರೀತಿಯಲ್ಲಿ ಮೀಸಲಾತಿಯ ಮೇಲೆ (ಪರ್ಯಾಯವಾಗಿ ಸಂವಿಧಾನದ ಮೇಲೆ) ಆಗುತ್ತಿದೆ. ಇದನ್ನು ಮೀಸಲಾತಿಯಿಂದ ಪ್ರಯೋಜನ ಪಡೆಯುತ್ತಿರುವ ವರ್ಗಗಳು ಅರ್ಥ ಮಾಡಿಕೊಳ್ಳದೇ ಹೋದದ್ದು ಮರುಕದ ವಿಚಾರ.

ಮೀಸಲಾತಿಯು ಬಡತನ ನಿರ್ಮೂಲನ ಕಾರ್ಯಕ್ರಮವಲ್ಲ. ಅದು ಚಾರಿತ್ರಿಕವಾಗಿ ಅವಕಾಶ ವಂಚಿತರಾಗಿ ಉಳಿದವರನ್ನು ಸಬಲೀಕರಿಸಲು ಮತ್ತು ಅವರನ್ನು ಒಳಗೊಳ್ಳುವ ಮೂಲಕ ವ್ಯವಸ್ಥೆಯನ್ನು ಮರುರೂಪಿಸಲು ಸಂವಿಧಾನ ಆವಿಷ್ಕರಿಸಿರುವ ಒಂದು ಅಸ್ತ್ರ. ಇದರ ಅನಿವಾರ್ಯವನ್ನು ಅರ್ಥಮಾಡಿಕೊಳ್ಳಬೇಕಾದರೆ ಮೀಸಲಾತಿ ಇಲ್ಲದೇ ಹೋಗಿದ್ದರೆ ಏನಾಗುತ್ತಿತ್ತು ಎಂದು ಒಂದು ಕ್ಷಣ ಯೋಚಿಸಬೇಕು. ಶಾಸಕಾಂಗ ಮತ್ತು ಕಾರ್ಯಾಂಗದಲ್ಲಿ ಮೀಸಲಾತಿ ಇದೆ. ನ್ಯಾಯಾಂಗದಲ್ಲಿ ಮೀಸಲಾತಿ ಇಲ್ಲ. ಮಾಧ್ಯಮ ರಂಗವು ಖಾಸಗಿ ಕ್ಷೇತ್ರದಲ್ಲಿರುವುದರಿಂದ ಅದರಲ್ಲೂ ಮೀಸಲಾತಿ ಇಲ್ಲ. ಸಂವಿಧಾನ ಜಾರಿಗೆ ಬಂದು ಏಳು ದಶಕಗಳ ನಂತರವೂ ಎಷ್ಟು ಅವಕಾಶ ವಂಚಿತ ವರ್ಗಗಳ ಜನರಿಗೆ ನ್ಯಾಯಾಂಗದಲ್ಲಿ ಪ್ರಾತಿನಿಧ್ಯ ಪಡೆಯಲು ಸಾಧ್ಯವಾಗಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಮಾಧ್ಯಮ ರಂಗದ್ದೂ ಅದೇ ಕತೆ.

ಒಂದು ವೇಳೆ ಮೀಸಲಾತಿ ಇಲ್ಲದೇ ಹೋಗಿ ಶಾಸಕಾಂಗ ಮತ್ತು ಕಾರ್ಯಾಂಗದಿಂದಲೂ ಹೀಗೆ ಹಲವಾರು ಜಾತಿ-ಜನಸಮುದಾಯಗಳು ಹೊರಗುಳಿಯುತ್ತಿದ್ದದ್ದೇ ಆಗಿದ್ದರೆ ಈ ದೇಶದ ಅಧಿಕಾರ ವ್ಯವಸ್ಥೆಯಲ್ಲಿ ಅದೆಂತಹ ಅಸಮತೋಲನ ಸೃಷ್ಟಿಯಾಗುತ್ತಿತ್ತು ಎಂದು ಊಹಿಸಿ. ಈ ಅಸಮತೋಲನದ ಪರಿಣಾಮವನ್ನು ಎದುರಿಸಿ ಈ ದೇಶಕ್ಕೆ ಈ ತನಕ ಒಂದಾಗಿ ಉಳಿಯಲು ಸಾಧ್ಯವಾಗುತ್ತಿತ್ತೇ ಎಂದು ಯೋಚಿಸಿ. ಈ ದೇಶ ಉಳಿದಿದೆ. ಇದನ್ನು ಹೇಳಲು ಹಿಂಜರಿಕೆ ಯಾಕೆ?

ಗ್ರಂಥಗಳಲ್ಲಿ ಇರುವ ನೈತಿಕತೆಯನ್ನು ವ್ಯಾವಹಾರಿಕ ಬದುಕಿನಲ್ಲೂ ಅಳವಡಿಸಿಕೊಂಡಿರುವ ವಿದೇಶಿ ಸಮಾಜಗಳಲ್ಲಿ ಒಂದು ಸಂಸ್ಥೆ ವಿವಿಧ ವರ್ಗಗಳನ್ನು ಪ್ರತಿನಿಧಿಸುವ ಮಂದಿಗೆ ಹೆಚ್ಚು ಉದ್ಯೋಗ ನೀಡಿದರೆ ಅದು ಅವರಿಗೆ ಅಭಿಮಾನದ ವಿಷಯ. ಒಂದೇ ಸಾಮಾಜಿಕ ವರ್ಗದವರೇ ಸೇರಿಕೊಂಡಿದ್ದರೆ ಅದವರಿಗೆ ನಾಚಿಕೆಯ ವಿಷಯ. ಭಾರತದಿಂದ ಹೋಗಿ ಅಲ್ಲಿ ನೆಲೆಸಿರುವ ವಲಸಿಗರೂ ವಿದೇಶಿಯರ ಸಾಮಾಜಿಕ ನ್ಯಾಯದ ಈ ಮಾದರಿಯಿಂದ ಲಾಭ ಪಡೆಯುತ್ತಾರೆ. ಭಾರತದಲ್ಲಿರುವ ಅವರ ಬಂಧುಗಳು ಇಲ್ಲಿ ಕುಳಿತು ಮೀಸಲಾತಿಯನ್ನು ಅಣಕಿಸುತ್ತಾರೆ.

ಮೀಸಲಾತಿಯಿಂದ ದಕ್ಷತೆ ಕುಸಿದು ದೇಶ ಹಾಳಾಯಿತು ಎಂದು ಗೋಳಿಡುವವರಿಗೂ ಮೀಸಲಾತಿ ರಹಿತ ನ್ಯಾಯಾಂಗದ ಮತ್ತು ಪತ್ರಿಕಾರಂಗದ ಉದಾಹರಣೆಯ ಮೂಲಕ ಉತ್ತರಿಸೋಣ. ನ್ಯಾಯಾಂಗದ ಗುಣಮಟ್ಟ ಪತನದ ಬಗ್ಗೆ ದೇಶದಲ್ಲೀಗ ಚರ್ಚೆ ನಡೆಯುತ್ತಿದೆ. ಸುಪ್ರೀಂ ಕೋರ್ಟ್‌ನ ಓರ್ವ ನಿವೃತ್ತ ಮುಖ್ಯ ನ್ಯಾಯಮೂರ್ತಿಯವರೇ ‘ನ್ಯಾಯಾಂಗಕ್ಕೆ ಹೋದರೆ ನ್ಯಾಯ ಸಿಗುತ್ತದೆ ಎಂಬ ಖಾತರಿ ಇಲ್ಲ’ ಅಂತ ಮೊನ್ನೆ ಹೇಳಿದರಲ್ಲಾ? ಮೀಸಲಾತಿಯ ಹಂಗಿಲ್ಲದೆ ಉಳಿದ ಖಾಸಗಿ ಟಿ.ವಿ ಚಾನೆಲ್‌ಗಳೆಲ್ಲಾ ಅಪ್ಪಟ ಎಲೆಕ್ಟ್ರಾನಿಕ್ಸ್ಟ್ಯಾಬ್ಲಾಯ್ಡ್‌ಗಳಾಗಿದ್ದು, ವಾರ್ತಾಪ್ರಸಾರ ಕೂಗುಮಾರಿಗಳ ಜೋಡಾಟ-ಕೂಡಾಟ ಆಗಿದ್ದು, ಪತ್ರಿಕೆಗಳು ನ್ಯೂಸ್‌ ಲೆಟರ್‌ಗಳಿಗಿಂತ ಕಡೆಯಾದದ್ದು ಹೇಗೆ ಮತ್ತು ಯಾರ ಆಧಿಪತ್ಯದಲ್ಲಿ ಅಂತ ಕೇಳಬಹುದೇ?

ಮೀಸಲಾತಿ ವಿರೋಧಿಗಳು ಮೀಸಲಾತಿಗೆ ಮಾಡಿದಷ್ಟೇ ಅಪಚಾರವನ್ನು ಮೀಸಲಾತಿಯಿಂದ ಲಾಭ ಪಡೆಯುತ್ತಿರುವ ಕೆಲ ವರ್ಗಗಳೂ ಮಾಡುತ್ತಿವೆ. ಮೀಸಲಾತಿ ಎಂದರೆ ಅದೊಂದು ಅಗಣಿತ ನಿಧಿ, ಅದನ್ನು ಸಾಧ್ಯವಾದಷ್ಟು ಕಸಿದುಕೊಂಡು ತಮ್ಮವರಿಗಾಗಿ ಕೂಡಿಹಾಕಬೇಕು ಎನ್ನುವಂತೆ ಕೆಲವು ಜಾತಿಯವರು ವರ್ತಿಸುತ್ತಿದ್ದಾರೆ. ಮೀಸಲಾತಿಗೆ ಸಂಪೂರ್ಣ ಅರ್ಹವಾಗಿದ್ದರೂ ಈ ತನಕ ಅದರಿಂದಾಗಿ ಎಳ್ಳಷ್ಟೂ ಲಾಭ ಪಡೆಯಲು ಸಾಧ್ಯವಾಗದ ಕೋಟ್ಯಂತರ ಜನ ದೇಶದಲ್ಲಿ ಇದ್ದಾರೆ. ಅಂತಹವರು ಕರ್ನಾಟಕದ ಹಿಂದುಳಿದ ವರ್ಗಗಳ 1 ಮತ್ತು 2ಎ ಪ್ರವರ್ಗಗಳಲ್ಲೂ ಇದ್ದಾರೆ; ಪರಿಶಿಷ್ಟ ಜಾತಿ-ಪಂಗಡದ ಪಟ್ಟಿಗಳಲ್ಲೂ ಇದ್ದಾರೆ.

ಮೀಸಲಾತಿಯ ಬಗ್ಗೆ ಏನಾದರೂ ಧ್ವನಿ ಎತ್ತುವ ನೈತಿಕ ಹಕ್ಕು ಇರುವುದು ಅವರಿಗೆ ಮಾತ್ರ. ಅವರು ಧ್ವನಿಯನ್ನೂ ಎತ್ತಲಾರದ ದುರ್ಬಲರು. ಅಂತಹವರ ಪರವಾಗಿ ಮಾತನಾಡುವ ಅಥವಾ ಹೋರಾಡುವ ಮತ್ತು ಯಾವ್ಯಾವ ಜಾತಿಗಳು ಎಷ್ಟು ಅವಕಾಶವಂಚಿತವಾಗಿವೆ ಮ‌ತ್ತು ಮೀಸಲಾತಿಯಿಂದ ಯಾವ್ಯಾವ ಜಾತಿಗಳು ಎಷ್ಟು ಅವಕಾಶಗಳನ್ನು ಪಡೆದುಕೊಂಡಿವೆ ಎಂದು ಲೆಕ್ಕ ಕೇಳುವ ಧೈರ್ಯ ತೋರುವ ಯಾರೇ ಆಗಲಿ ಅವರು ಸ್ವಾಮಿಗಳೆಂದು ಕರೆಸಿಕೊಳ್ಳುವ ಜಾತಿಶ್ರೀಗಳಿಗಿಂತ ಹೆಚ್ಚು ಗೌರವಾರ್ಹರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT