ಗುರುವಾರ , ಜೂನ್ 17, 2021
21 °C
ವಿಶ್ವಗುರುವಾಗುವ ಹುಮ್ಮಸ್ಸಿನಲ್ಲಿದ್ದ ಭಾರತ ಈಗ ಔಷಧಿಗಾಗಿ ಇನ್ನೊಬ್ಬರ ಮುಂದೆ ಕೈಯೊಡ್ಡುತ್ತಿದೆ

ಅನುಸಂಧಾನ: ಗಡ್ಡಕ್ಕೆ ಬೆಂಕಿ ಬಿದ್ದಿದೆ, ಟೊಂಕ ಕಟ್ಟುವವರಿಲ್ಲ!

ರವೀಂದ್ರ ಭಟ್ಟ Updated:

ಅಕ್ಷರ ಗಾತ್ರ : | |

‘ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡಲು ತೊಡಗಿದಂತೆ’ ಎಂಬುದೊಂದು ಗಾದೆ. ಸದ್ಯ ನಮ್ಮ ದೇಶ ಮತ್ತು ರಾಜ್ಯದ ಪರಿಸ್ಥಿತಿ ನೋಡಿದರೆ ಯಾರಿಗಾದರೂ ಹಾಗೇ ಅನಿಸುತ್ತದೆ. ಇದು ಗಡ್ಡಕ್ಕೆ ಬೆಂಕಿ ಬಿದ್ದಿದ್ದಲ್ಲ. ನಾವೇ ಕೈಯಾರೆ ನಮ್ಮ ಗಡ್ಡಕ್ಕೆ ಬೆಂಕಿ ಹಚ್ಚಿಕೊಂಡು, ಈಗ ಬಾವಿ ತೋಡಲು ಸಲಕರಣೆಗಳು ಎಲ್ಲಿವೆ ಎಂದು ಹುಡುಕುತ್ತಿದ್ದೇವೆ. ಅವು ಕೈಗೆ ಸಿಗುತ್ತಿಲ್ಲ. ಬೆಂಕಿ ಆರುತ್ತಲೂ ಇಲ್ಲ.

ಇದೇನು ಗುಟ್ಟಲ್ಲ. ಬಹಿರಂಗ ಸತ್ಯ. ಬೆಂಕಿ ಆರಿಸಲು ಟೊಂಕ ಕಟ್ಟಿ ನಿಲ್ಲುವ ನಾಯಕರೂ ಕಾಣುತ್ತಿಲ್ಲ. ಇಡೀ ದೇಶ ಅರಾಜಕತೆಯ ಸುಳಿಯಲ್ಲಿ ಸಿಕ್ಕಿದೆ ಎಂದು ಯಾರಿಗಾದರೂ ಅನಿಸಿದರೆ ಅದು ಆಕಸ್ಮಿಕವೂ ಅಲ್ಲ.

ವಿಶ್ವಗುರುವಾಗುವ ಹುಮ್ಮಸ್ಸಿನಲ್ಲಿದ್ದ ಭಾರತ ಈಗ ಔಷಧಿ ಮತ್ತು ವೈದ್ಯಕೀಯ ಸಲಕರಣೆಗಾಗಿ ಇನ್ನೊಬ್ಬರ ಮುಂದೆ ಕೈಯೊಡ್ಡಿ ನಿಂತಿದೆ. ಈಗ ನಾಲ್ಕಾರು ತಿಂಗಳ ಕೆಳಗೆ ನಮ್ಮ ರಾಜಕಾರಣಿಗಳು ‘ನಾವು ವಿಶ್ವಕ್ಕೇ ವ್ಯಾಕ್ಸಿನ್ ಸರಬರಾಜು ಮಾಡುವ ಮಟ್ಟಕ್ಕೆ ಬೆಳೆದಿದ್ದೇವೆ’ ಎಂದು ಕೊಚ್ಚಿಕೊಂಡಿದ್ದರು. ಈಗ ನೋಡಿ ಏನಾಗಿದೆ ಎಂದು. ದೇಶಕ್ಕೆ ಮುನ್ನೋಟದ ಮುತ್ಸದ್ದಿಗಳು ಇಲ್ಲದಿದ್ದರೆ ಏನಾಗುತ್ತದೆ ಎಂಬ ಅನುಭವ ಈಗ ನಮ್ಮ ಮತದಾರರಿಗೆ ನಿಧಾನವಾಗಿ ಅರಿವಾಗುತ್ತಿದೆ. ಗಡ್ಡ ಬಿಟ್ಟವರಿಗೂ ಅದರ ಅನುಭವ ಆಗಿರಬೇಕು. ಆರಿಸಿ ಕಳಿಸಿದವರೇ ಈಗ ಜರೆಯತೊಡಗಿದ್ದಾರೆ. ಆದರೆ ಎಲ್ಲವೂ ಈಗ ರೈಲು ಹೋದ ಮೇಲೆ ಟಿಕೆಟ್ ತೆಗೆದುಕೊಂಡಂತೆ ಆಗಿದೆ.

ನಮ್ಮನ್ನು ಆಳುವ ಮಹಾನುಭಾವರು ಹೇಗಿದ್ದಾರೆ ನೋಡಿ. ಗಡ್ಡಕ್ಕೆ ಬೆಂಕಿ ಬೀಳುತ್ತದೆ ಎಂದು ಗೊತ್ತಿದ್ದರೂ ಹಲವಾರು ಮಂದಿ ಎಚ್ಚರಿಸಿದ್ದರೂ ಗಡ್ಡಕ್ಕೆ ಬೆಂಕಿ ಹಚ್ಚಿಕೊಳ್ಳುವ ಪ್ರಕ್ರಿಯೆಯಿಂದ ಹಿಂದೆ ಸರಿಯಲಿಲ್ಲ. ಆ ವಿಚಾರದಲ್ಲಿ ಎಲ್ಲ ರಾಜಕೀಯ ಪಕ್ಷಗಳ ಮುಖಂಡರೂ ಪೈಪೋಟಿಗೆ ಬಿದ್ದಂತೆ ಸಜ್ಜಾಗಿ ನಿಂತಿದ್ದರು. ಅದರಲ್ಲಿ ಯಾರೂ ಕಮ್ಮಿಯಲ್ಲ, ಯಾರೂ ಹೆಚ್ಚಲ್ಲ. ಏಪ್ರಿಲ್ 18ರಂದು ಪ್ರಮುಖ ನಾಯಕರೊಬ್ಬರು ಪಶ್ಚಿಮ ಬಂಗಾಳದ ಅನ್ಸನ್ ಸೋಲ್‌ನಲ್ಲಿ ಭಾರೀ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗಿಯಾಗಿ, ‘ಇಷ್ಟೊಂದು ಭಾರೀ ಸಂಖ್ಯೆಯಲ್ಲಿ ಜನ ಸೇರಿರುವುದನ್ನು ಇದೇ ಮೊದಲ ಬಾರಿಗೆ ನೋಡುತ್ತಿದ್ದೇನೆ’ ಎಂದು ಖುಷಿಯಿಂದ ಹೇಳಿಕೊಂಡರು. ಆ ದಿನ ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಎರಡು ಲಕ್ಷಕ್ಕೂ ಹೆಚ್ಚಾಗಿತ್ತು. ನಂತರ ಅದು ಮೂರೂವರೆ ಲಕ್ಷದ ಗಡಿಯನ್ನೂ ದಾಟಿತು.

ನಿಜವಾಗಿ ಅಂತಹ ಪ್ರಚಾರ ಸಭೆಯನ್ನು ನಡೆಸಲು ಅವಕಾಶ ನೀಡಬಾರದಿತ್ತು. ಅಷ್ಟೊಂದು ಜನ ಯಾವುದೇ ಅಂತರವೂ ಇಲ್ಲದೆ ಪಾಲ್ಗೊಂಡಿದ್ದನ್ನು ನೋಡಿ ನಮ್ಮ ನಾಯಕರಾದರೂ ವಿಷಾದ ವ್ಯಕ್ತಪಡಿಸಬೇಕಿತ್ತು. ಆದರೆ ಅಲ್ಲಿ ಆಗಿದ್ದೇ ಬೇರೆ. ಇನ್ನು ಮುಂದೆ ಪ್ರಚಾರ ಸಭೆಯಲ್ಲಿ ಭಾಗಿಯಾಗುವುದಿಲ್ಲ ಎಂದು ಕಾಂಗ್ರೆಸ್ ಮುಖಂಡರೊಬ್ಬರು ಹೇಳಿದ್ದಕ್ಕೆ ಬಿಜೆಪಿ ಲೇವಡಿ ಮಾಡಿತು. ಸೋಲಿನ ಭಯದಿಂದ ಹಿಂದಡಿ ಇಟ್ಟಿದ್ದಾರೆ ಎಂದು ಕೇಕೆ ಹಾಕಿತು. ಪಶ್ಚಿಮ ಬಂಗಾಳದಲ್ಲಿ ಇನ್ನು ಉಳಿದ ಎಲ್ಲ ಕ್ಷೇತ್ರಗಳಿಗೂ ಏಕಕಾಲದಲ್ಲಿ ಚುನಾವಣೆ ನಡೆಸಿ ಎಂಬ ಮಮತಾ ಬ್ಯಾನರ್ಜಿ ಅವರ ಕೋರಿಕೆಯನ್ನು ತಿರಸ್ಕರಿಸಲಾಯಿತು. ಉತ್ತರಾಖಂಡದಲ್ಲಿ ಕುಂಭಮೇಳಕ್ಕೂ ಅವಕಾಶ ನೀಡಲಾಯಿತು. ಇಲ್ಲಿ ನಮ್ಮ ಮುಖ್ಯಮಂತ್ರಿಗಳು ಜ್ವರ ಬಂದಿದ್ದರೂ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗಿಯಾಗಿದ್ದರು. ನಂತರ ಅವರಿಗೆ ಕೋವಿಡ್ ದೃಢವಾಗಿ ಆಸ್ಪತ್ರೆ ಸೇರಿದರು.

ಅಭ್ಯರ್ಥಿಗಳೂ ಕೊರೊನಾ ಇದ್ದರೂ ಪ್ರಚಾರ ನಿಲ್ಲಿಸಲಿಲ್ಲ. ಇತರ ಸಚಿವರೂ ಶಾಸಕರೂ ಜನರನ್ನು ಸೇರಿಸಿಕೊಂಡು ಪ್ರಚಾರ ನಡೆಸಿದರು. ಸ್ಥಳೀಯ ಸಂಸ್ಥೆಗಳ ಚುನಾವಣೆಯ ನೆಪದಲ್ಲಿ ಮನೆ ಮನೆ ಪ್ರಚಾರವೂ ನಡೆಯಿತು. ಚುನಾವಣೆ ಮುಗಿದ ನಂತರ ಲಾಕ್‌ಡೌನ್ ಮಾಡುವುದಾಗಿ ಪ್ರಕಟ ಮಾಡಲಾಯಿತು. ಅಂತರ ಕಾಪಾಡಿಕೊಳ್ಳಿ, ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ ಎಂದು ಸ್ಪರ್ಧೆಗೆ ಬಿದ್ದವರಂತೆ ನಮ್ಮ ಮುಖಂಡರು ಜನರಿಗೆ ಕರೆ ನೀಡತೊಡಗಿದರು. ಇವೆಲ್ಲಾ ಹೇಳೋದು ವೇದಾಂತ, ತಿನ್ನೋದು ಬದನೆಕಾಯಿ ಎಂಬಂತೆ ಆಗಿದೆ.

ಕೊರೊನಾ ಎರಡನೇ ಅಲೆ ಬರುತ್ತದೆ, ಅದು ಮೊದಲ ಅಲೆಗಿಂತ ಭೀಕರವಾಗಿರುತ್ತದೆ ಎಂದು ತಜ್ಞರ ಸಮಿತಿ ಕಳೆದ ನವೆಂಬರ್‌ನಲ್ಲಿಯೇ ಎಚ್ಚರಿಕೆ ಕೊಟ್ಟಿದ್ದರೂ ನಮ್ಮ ಯಾವ ರಾಜಕೀಯ ನಾಯಕರೂ ಅದನ್ನು ಕಿವಿಯ ಮೇಲೆ ಹಾಕಿಕೊಳ್ಳಲೇ ಇಲ್ಲ. ಕೊರೊನಾ ಹೋಯ್ತು ಎಂದು ತಮ್ಮ ಹಳೆಯ ಆಟಗಳನ್ನು ಶುರು ಮಾಡಿಬಿಟ್ಟರು. ಜಾತ್ರೆ, ಮದುವೆ, ಕುಂಭಮೇಳ ಯಾವುದಕ್ಕೂ ಅಂಕೆಯೇ ಇರಲಿಲ್ಲ. ಜನರೂ ಅವರನ್ನೇ ಅನುಸರಿಸಿದರು. ವೈದ್ಯರು, ವಿಜ್ಞಾನಿಗಳ ಮಾತಿಗೆ ಕವಡೆ ಕಾಸಿನ ಕಿಮ್ಮತ್ತೂ ಇರಲಿಲ್ಲ. ಈಗ ಕೊರೊನಾ ಆರ್ಭಟ ಹೆಚ್ಚಾಗಿದೆ. ಎಲ್ಲರೂ ಬಾಯಿ ಬಾಯಿ ಬಡಿದುಕೊಳ್ಳುತ್ತಿದ್ದಾರೆ.

ಹಾದಿಯಲ್ಲಿ ಹೋಗುವ ಮಾರಿಯನ್ನು ಮನೆಗೆ ತಂದಿಟ್ಟುಕೊಂಡಿದ್ದೇವೆ. ಈಗ ಅದು ಮಹಾಮಾರಿಯಾಗಿ ಬೆಳೆದಿದೆ. ನಮ್ಮ ಟೊಳ್ಳುಗಳೆಲ್ಲಾ ಬಯಲಾಗಿವೆ. ಆಕ್ಸಿಜನ್ ಇಲ್ಲದೆ ಜನರು ಸಾಯುತ್ತಿದ್ದಾರೆ. ಆಸ್ಪತ್ರೆಗಳಲ್ಲಿ ಹಾಸಿಗೆಗಳೂ ಸಿಗುತ್ತಿಲ್ಲ. ವೆಂಟಿಲೇಟರ್ ಇಲ್ಲ. ವ್ಯಾಕ್ಸಿನ್ ಕೊರತೆ ಕಾಡುತ್ತಿದೆ. ಆದರೂ ನಮಗೆ ಬುದ್ಧಿ ಬಂದಿಲ್ಲ. ಕೊರೊನಾ ವೈರಸ್ ಬಂದಾಗ, ಲಾಕ್‌ಡೌನ್ ಜಾರಿಯಾದಾಗ ನಮ್ಮ ಜೀವಿತದ ಅವಧಿಯಲ್ಲಿ ಇಂತಹ ಸ್ಥಿತಿ ಬರುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಆದರೆ ಈಗಿನ ಸ್ಥಿತಿ ನೋಡಿ, ಜನ ಆಮ್ಲಜನಕ ಇಲ್ಲದೆ ಸಾಯುತ್ತಿದ್ದಾರೆ. ಉಸಿರಾಡಲು ಗಾಳಿ ಇಲ್ಲದೆ ಸಾಯುವ ಸ್ಥಿತಿ ಬರುತ್ತದೆ ಎನ್ನುವುದನ್ನು ಕಲ್ಪನೆ ಮಾಡಿಕೊಳ್ಳಲೂ ಸಾಧ್ಯವಿರಲಿಲ್ಲ. ಆದರೆ ಅದೆಲ್ಲಾ ಈಗ ನಿಜವಾಗುತ್ತಿದೆ.

ಕೊರೊನಾ ಕಾಲದಲ್ಲಿ ಚುನಾವಣೆ ನಡೆಸುವ ಚುನಾವಣಾ ಆಯೋಗದ ಸಾಹಸವನ್ನು ಕಟುವಾಗಿ ಟೀಕಿಸಿರುವ ಮದ್ರಾಸ್ ಹೈಕೋರ್ಟ್, ಆಯೋಗದ ಅಧಿಕಾರಿಗಳ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಬಹುದು ಎಂದೂ ಅಭಿಪ್ರಾಯಪಟ್ಟಿದೆ. ಇದೇ ರೀತಿಯ ಮಾತನ್ನು ಕೋಲ್ಕತ್ತ ಹೈಕೋರ್ಟ್ ಕೂಡ ಹೇಳಿತ್ತು. ಕರ್ನಾಟಕದ ಹೈಕೋರ್ಟ್ ಸಹ ‘ಅಂತರ ಪಾಲಿಸದ ಮತ್ತು ಕೊರೊನಾ ಮಾರ್ಗಸೂಚಿಯನ್ನು ಪಾಲಿಸದ ರಾಜಕಾರಣಿಗಳು ಹಾಗೂ ಮಠಾಧೀಶರ ವಿರುದ್ಧ ಎಫ್‌ಐಆರ್ ದಾಖಲಿಸಿ’ ಎಂದು ಸೂಚಿಸಿದೆ. ಆದರೆ ಇದ್ಯಾವುದರ ಬಗ್ಗೆಯೂ ಆಯೋಗ ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಕೊರೊನಾ ಸೋಂಕು ಹೆಚ್ಚಾಗಿದ್ದರೂ ಯಾಕೆ ಲಾಕ್‌ಡೌನ್ ಮಾಡಿಲ್ಲ, ತಕ್ಷಣವೇ ಲಾಕ್‌ಡೌನ್ ಘೋಷಿಸಿ ಎಂದು ಅಲಹಾಬಾದ್ ಹೈಕೋರ್ಟ್ ಉತ್ತರ ಪ್ರದೇಶದ ಸರ್ಕಾರಕ್ಕೆ ಹೇಳಿದರೆ, ಆ ಆದೇಶಕ್ಕೆ ಸುಪ್ರೀಂ ಕೋರ್ಟಿನಿಂದ ತಡೆಯಾಜ್ಞೆ ತರುತ್ತೇವೆಯೇ ವಿನಾ ಕೊರೊನಾ ಹರಡುವಿಕೆ ತಡೆಯಲು ಕ್ರಮ ಕೈಗೊಳ್ಳುವುದಕ್ಕೆ ಮುಂದಾಗುವುದಿಲ್ಲ. ನ್ಯಾಯಾಲಯದ ಬಗ್ಗೆ ನಮಗೆ ಸಿಟ್ಟು ಬರುತ್ತದೆಯೇ ವಿನಾ ನಮ್ಮ ತಪ್ಪಿನ ಅರಿವಾಗುವುದಿಲ್ಲ. ಇದೇ ಇಂದಿನ ಫಜೀತಿ.

ಹಾದಿಯಲ್ಲಿ ಹೋಗುವ ವಾಹನಗಳನ್ನು ವಶಪಡಿಸಿಕೊಳ್ಳುತ್ತಿರುವ ಪೊಲೀಸರು, ಮಾಸ್ಕ್ ಸರಿಯಾಗಿ ಹಾಕಿಕೊಂಡಿಲ್ಲ ಎಂದು ದಂಡ ವಿಧಿಸುವ ಮಾರ್ಷಲ್‌ಗಳು ಕಾಣುತ್ತಿದ್ದಾರೆ. ಆದರೆ ಮಾರ್ಗಸೂಚಿ ಉಲ್ಲಂಘಿಸಿದ ರಾಜಕಾರಣಿಗಳು ಮಾತ್ರ ರಾಜಾರೋಷವಾಗಿ ಓಡಾಡುತ್ತಾ ಇನ್ನಷ್ಟು ಉಲ್ಲಂಘನೆಗೆ ಅಣಿಯಾಗುತ್ತಿದ್ದಾರೆ. ಮಠಾಧೀಶರೂ ಕಡಿಮೆ ಏನಲ್ಲ. ಕೊರೊನಾ ಹೆಚ್ಚಾಗಲು ತಮ್ಮ ಕೈಲಾದ ಸಹಾಯವನ್ನು ಅವರೂ ಮಾಡಿದ್ದಾರೆ. ಅವರನ್ನು ಕೇಳುವವರೇ ಇಲ್ಲದಂತಾಗಿದೆ. ಇದು ಹೀಗೆಯೇ ಮುಂದುವರಿದರೆ ಈ ವ್ಯವಸ್ಥೆಯ ಬಗ್ಗೆಯೇ ನಂಬಿಕೆ ಹೊರಟು ಹೋಗುತ್ತದೆ.

ವಿಶ್ವಗುರುವಾಗಲು ಹೊರಟ ಭಾರತದ ಪಾಲಿಗೆ ಮತ್ತೊಂದು ವ್ಯಂಗ್ಯದ ಏಟಿದೆ. ಕೊರೊನಾ ವೈರಸ್ ತಡೆಯಲು ನಮ್ಮ ನಾಯಕರು ಹೆಣಗಾಡುತ್ತಿದ್ದರೆ ಪಕ್ಕದ ಪಾಕಿಸ್ತಾನ ‘ಭಾರತಕ್ಕೆ ನೆರವಾಗಲು ಸಿದ್ಧ’ ಎಂದು ಅಭಯ ಹಸ್ತ ಚಾಚುತ್ತಿದೆ. ರಾಮ ರಾಮ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು