ಬುಧವಾರ, ಏಪ್ರಿಲ್ 8, 2020
19 °C

ಎಲ್ಲರ ಹೃದಯಗಳಲ್ಲೂ ಸಾಮರಸ್ಯದ ಮಂದಿರ ಕಟ್ಟಲು ಈಗಲೂ ಕಾಲ ಮಿಂಚಿಲ್ಲ

ರವೀಂದ್ರ ಭಟ್ಟ Updated:

ಅಕ್ಷರ ಗಾತ್ರ : | |

ರಾಮಾಯಣವನ್ನು ಬರೆದ ಮಹಾಕವಿ ವಾಲ್ಮೀಕಿ, ಶ್ರೀರಾಮನನ್ನು ‘ವಿಗ್ರಹವಾನ್ ಧರ್ಮ’ ಎಂದು ಕರೆದರು. ಧರ್ಮವನ್ನೇ ದೇಹವಾಗಿಸಿಕೊಂಡವನು ಎನ್ನುವ ಅರ್ಥದಲ್ಲಿ ಅವರು ಹಾಗೆ ಹೇಳಿದ್ದಾರೆ. ಅವರದ್ದೇ ಅರ್ಥದಲ್ಲಿ ಹೇಳುವುದಾದರೆ, ರಾಮನಲ್ಲಿ ಇರುವುದು ಮನುಷ್ಯಧರ್ಮ ಮಾತ್ರ. ಅದಕ್ಕೆ ರಾಮಾಯಣದಲ್ಲಿ ಸಾಕಷ್ಟು ಉದಾಹರಣೆಗಳು ಸಿಗುತ್ತವೆ.

ರಾಕ್ಷಸ ಕುಲದಲ್ಲಿ ಜನಿಸಿದ ವಿಭೀಷಣ, ರಾಮನಲ್ಲಿ ಬಂದು ಶರಣಾಗತನಾದಾಗ ರಾಮನ ಜೊತೆ ಇದ್ದ ಎಲ್ಲರೂ ಆಕ್ಷೇಪಿಸಿದರೂ ರಾಮ ಮಾತ್ರ ವಿಭೀಷಣನನ್ನು ತನ್ನ ಪಕ್ಷಕ್ಕೆ ಸೇರಿಸಿಕೊಳ್ಳುತ್ತಾನೆ. ‘ಶರಣಾಗತರಾದವರನ್ನು ಯಾವುದೇ ಕಾರಣಕ್ಕೂ ಕೈಬಿಡುವುದಿಲ್ಲ. ವಿಭೀಷಣ ಅಷ್ಟೇ ಅಲ್ಲ, ಅವನ ಅಣ್ಣ ರಾವಣ ಬಂದರೂ ಸ್ವಾಗತಿಸುತ್ತೇನೆ’ ಎನ್ನುತ್ತಾನೆ. ಅದೇ ರೀತಿ ರಾಮ– ರಾವಣರ ಯುದ್ಧದ ಸಂದರ್ಭದಲ್ಲಿಯೂ ರಾವಣನ ರಥ ನಾಶವಾಗುತ್ತದೆ. ಬಿಲ್ಲು ಮುರಿದು ಹೋಗುತ್ತದೆ. ರಥವಿಲ್ಲದೆ ರಾವಣ ನೆಲದಲ್ಲಿ ನಿಂತಿರುತ್ತಾನೆ. ಆಗ ರಾಮ ‘ನೀನು ಮಹಾವೀರ ಎನ್ನುವುದು ಗೊತ್ತು. ಈಗಾಗಲೇ ನೀನು ಸಾಕಷ್ಟು ಮಂದಿಯ ವಿರುದ್ಧ ಗೆದ್ದಿದ್ದೀಯ ಎನ್ನುವುದೂ ಗೊತ್ತು. ಕೆಲವು ಕೆಟ್ಟ ಕೆಲಸಗಳನ್ನು ಮಾಡಿರುವುದೂ ಗೊತ್ತು. ಆದರೆ ಈಗ ನೀನು ಬರಿಗೈಯಲ್ಲಿ ಇದ್ದೀಯ. ಈಗ ನಾನು ನಿನ್ನ ಜೊತೆ ಹೋರಾಡಲಾರೆ. ನೀನು ಈಗ ಮನೆಗೆ ಹೋಗು. ನಾಳೆ ಹೊಸ ರಥ, ಹೊಸ ಬಿಲ್ಲಿನೊಂದಿಗೆ ಯುದ್ಧಕ್ಕೆ ಬಾ’ ಎನ್ನುತ್ತಾನೆ.

ಇವೆಲ್ಲವೂ ರಾಮಾಯಣದಲ್ಲಿಯೇ ಸಿಗುವ ಪಾಠಗಳು. ಆದರೆ ಈಗ ನಾವು ಇಂತಹ ಪಾಠಗಳನ್ನು ಕಲಿಯುತ್ತಿಲ್ಲ. ವಿಗ್ರಹವಾನ್ ಧರ್ಮವಾಗಿದ್ದ ರಾಮನನ್ನು ಧರ್ಮದ ವಿಗ್ರಹವನ್ನಾಗಿ ನಿಲ್ಲಿಸಲು ಯತ್ನಿಸುತ್ತಿದ್ದೇವೆ. ರಾಮಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ನೀಡಿದ ತೀರ್ಪು ಕೂಡ ರಾಮನನ್ನು ಧರ್ಮದ ವಿಗ್ರಹದಲ್ಲಿಯೇ ಸಿಲುಕಿಸಲು ಉತ್ತೇಜನ ನೀಡುವಂತಿದೆ. ಜೊತೆಗೆ ರಾಮಭಕ್ತರೂ ಆತನನ್ನು ವಿಗ್ರಹಕ್ಕಷ್ಟೇ ಸೀಮಿತಗೊಳಿಸಲು ಮುಂದಾಗಿದ್ದಾರೆ.

ರಾಮಾಯಣದಲ್ಲಿ ರಾಮನು ರಾವಣನನ್ನು ಕೊಂದ ನಂತರ ಸೀತೆಯು ರಾಮನನ್ನು ನೋಡಲು ಬರುತ್ತಾಳೆ. ಆದರೆ ಸೀತೆಯನ್ನು ರಾಮ ಸ್ವೀಕರಿಸುವುದಿಲ್ಲ. ಆಕೆಯ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸುತ್ತಾನೆ. ಸೀತೆ ತನ್ನ ಪಾವಿತ್ರ್ಯವನ್ನು ಸಾಬೀತುಪಡಿಸುವಂತೆ ಸೂಚಿಸುತ್ತಾನೆ. ಆಗ ರಾಮನ ಜೊತೆಗೆ ಇದ್ದ ಲಕ್ಷ್ಮಣ, ವಿಭೀಷಣ, ಸುಗ್ರೀವ ಮುಂತಾದ ನಾಯಕರಲ್ಲಿ ಯಾರೂ ಇದಕ್ಕೆ ಆಕ್ಷೇಪಿಸುವುದಿಲ್ಲ. ಯಾಕೆಂದರೆ ಧರ್ಮವನ್ನೇ ದೇಹವನ್ನಾಗಿಸಿಕೊಂಡ ರಾಮ ಹೀಗೆ ಮಾಡುತ್ತಿದ್ದಾನೆ ಎಂದರೆ, ಇದರಲ್ಲಿ ಏನೋ ವಿಶಿಷ್ಟ ಅರ್ಥ ಇದೆ ಎಂದು ಸುಮ್ಮನಾಗುತ್ತಾರೆ ಎಂದು ಕೆಲವರು ವಿಶ್ಲೇಷಿಸುತ್ತಾರೆ. ರಾಮ ಜನ್ಮಭೂಮಿ ವಿವಾದದ ಬಗ್ಗೆ ದೇಶದ ಅತ್ಯುನ್ನತ ನ್ಯಾಯಾಲಯ ನೀಡಿದ ತೀರ್ಪು ನೋಡಿ ಭಾರತೀಯರೂ ಹೀಗೆಯೇ ಅಂದುಕೊಂಡಿದ್ದಾರೆ. ಕಾನೂನಿಗಿಂತ ಹೆಚ್ಚಾಗಿ, ನಂಬಿಕೆಯ ಮೇಲೆ ನಂಬಿಕೆ ಇಟ್ಟ ತೀರ್ಪು ಇದಾದರೂ ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ಪೀಠ ಸರ್ವಾನುಮತದಿಂದ ನೀಡಿದ ತೀರ್ಪು ಸರಿ ಇದ್ದೇ ಇರುತ್ತದೆ ಎಂಬ ಭಾವನೆ ನಮ್ಮಲ್ಲಿ ಬಹಳಷ್ಟು ಮಂದಿಗೆ ಇದೆ.

ಶ್ರೀರಾಮಚಂದ್ರ ಅಯೋಧ್ಯೆಯಲ್ಲಿಯೇ ಹುಟ್ಟಿದ್ದ ಎನ್ನುವುದು ಹಿಂದೂಗಳ ನಂಬಿಕೆ. ಈ ವಿಚಾರದಲ್ಲಿ ಅವರಿಗೆ ಧಾರ್ಮಿಕ ಭಾವನೆಗಳು ಇವೆ. ರಾಮ ಇಲ್ಲಿ ಜನಿಸಿದ್ದ ಎನ್ನುವುದು ವಿವಾದರಹಿತವಾದದ್ದು. ಆದರೆ ಕೇವಲ ನಂಬಿಕೆಯ ಆಧಾರದ ಮೇಲೆ ಹಕ್ಕು ಸ್ಥಾಪಿಸಲು ಸಾಧ್ಯವಿಲ್ಲ. ಕಾನೂನು ಆಧಾರವೇ ಮಾನದಂಡ ಎಂದು ಹೇಳುವ ಸುಪ್ರೀಂ ಕೋರ್ಟ್, ವಿವಾದಿತ ಜಾಗವನ್ನು ರಾಮಲಲ್ಲಾಗೆ ನೀಡಿದೆ. ವಿವಿಧ ಧರ್ಮಗಳ ನಂಬಿಕೆಯ ನಡುವೆ ತಾರತಮ್ಯಕ್ಕೆ ಸಂವಿಧಾನದಲ್ಲಿ ಅವಕಾಶವಿಲ್ಲ. ಎಲ್ಲ ರೀತಿಯ ನಂಬಿಕೆ, ಪೂಜೆ ಮತ್ತು ಪ್ರಾರ್ಥನೆಗಳು ಸಮಾನ ಎಂದು ನ್ಯಾಯಪೀಠ ಇದೇ ಸಂದರ್ಭದಲ್ಲಿ ಹೇಳಿದೆ. ಆದರೆ ಅಂತಿಮ ತೀರ್ಪು ಬೇರೆಯದೇ ರೀತಿಯಲ್ಲಿ ಇದೆ. ತೀರ್ಪಿನ ಬಗ್ಗೆ ಅನುಮಾನಗಳು, ಪ್ರಶ್ನೆಗಳು ಹಾಗೆಯೇ ಉಳಿದುಬಿಡು
ತ್ತವೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ನ್ಯಾಯಮೂರ್ತಿ ಮಾರ್ಕಂಡೇಯ ಕಟ್ಜು ಅವರು ‘ಆರಾಧನೆಗಾಗಿ ಒಂದು ಮನೆಯನ್ನು ಕಟ್ಟಲಾಗಿದೆ ಎಂದರೆ, ಅದು ಮಂದಿರವೇ ಇರಲಿ ಅಥವಾ ಮಸೀದಿ ಅಥವಾ ಚರ್ಚು ಅಥವಾ ಗುರುದ್ವಾರವೇ ಆಗಿರಲಿ, ಅಲ್ಲಿ ಆರಾಧನೆ ಮಾಡುವ ಸಲುವಾಗಿಯೇ ಕಟ್ಟುತ್ತಾರೆಯೇ ಹೊರತು ಅಲಂಕಾರಕ್ಕಾಗಿ ಅಲ್ಲ ಎನ್ನುವುದು ಸಾಮಾನ್ಯ ಜ್ಞಾನ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ನಂಬಿಕೆಯ ಆಧಾರದಲ್ಲಿ ತೀರ್ಪು ನೀಡಲು ಸಾಧ್ಯವಿಲ್ಲ ಎಂದು ಹೇಳಿದ ಸುಪ್ರೀಂ ಕೋರ್ಟ್, ವಿವಾದಿತ ಜಾಗವನ್ನು ಹಿಂದೂಗಳಿಗೆ ನೀಡಿದ್ದೇ ಅಲ್ಲದೆ ಮಂದಿರ ನಿರ್ಮಾಣದ ಹೊಣೆಯನ್ನು ಕೇಂದ್ರ ಸರ್ಕಾರಕ್ಕೆ ವಹಿಸಿದೆ. ರಾಮಜನ್ಮಭೂಮಿ ವಿವಾದದ ಹಾಗೆಯೇ ಶಬರಿಮಲೆ ದೇವಾಲಯಕ್ಕೆ ಮಹಿಳೆಯರಿಗೆ ಪ್ರವೇಶ ಇಲ್ಲದ ವಿಷಯ ಕೂಡ ಸುಪ್ರೀಂ ಕೋರ್ಟ್ ವಿಚಾರಣೆಗೆ ಬಂದಿತ್ತು. ಆ ಬಗ್ಗೆ ಇನ್ನೂ ಸ್ಪಷ್ಟ ತೀರ್ಮಾನವನ್ನು ಕೋರ್ಟ್ ಪ್ರಕಟಿಸಿಲ್ಲ. ಇದಕ್ಕೆ ಸಂಬಂಧಿಸಿದಂತೆ ಈ ಹಿಂದೆ ನೀಡಿದ್ದ ತೀರ್ಪಿಗೆ ತಡೆಯಾಜ್ಞೆಯನ್ನೂ ನೀಡಿಲ್ಲ. ಅಂದರೆ ಈಗ ಕಾನೂನು ಪ್ರಕಾರ ಶಬರಿಮಲೆಗೆ ಎಲ್ಲ ಮಹಿಳೆಯರಿಗೂ ಪ್ರವೇಶವಿದೆ. ಆದರೆ ಅಲ್ಲಿ ಮಾತ್ರ ಮಹಿಳೆಯರಿಗೂ ಪ್ರವೇಶ ನೀಡುತ್ತಿಲ್ಲ.

ಶಬರಿಮಲೆ ದೇವಾಲಯಕ್ಕೆ ಮಹಿಳೆಯರಿಗೆ ಪ್ರವೇಶ ನೀಡದಿರುವ ವಿಷಯ ಕೂಡ ನಂಬಿಕೆಯ ಪ್ರಶ್ನೆ. ಶಬರಿಮಲೆ ಮಾತ್ರ ಯಾಕೆ? ಮಸೀದಿಗೂ ಮಹಿಳೆಯರಿಗೆ ಪ್ರವೇಶವಿಲ್ಲ. ಅದೂ ನಂಬಿಕೆಯ ಪ್ರಶ್ನೆ. ಈ ಬಗ್ಗೆಯೂ ಚರ್ಚೆ ಆಗಲಿ ಎಂದು ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ. ಅದಕ್ಕೆ ಇನ್ನು ಕೆಲವುಮಠಾಧೀಶರು ವಿರೋಧ ವ್ಯಕ್ತಪಡಿಸಿದ್ದಾರೆ. ಸಿದ್ಧಾರೂಢ ಮಿಶನ್‌ನ ಡಾ. ಆರೂಢಭಾರತೀ ಸ್ವಾಮೀಜಿ ಅವರು ಪೇಜಾವರ ಶ್ರೀಗಳ ಮಾತಿಗೆ ವಿರೋಧ ವ್ಯಕ್ತಪಡಿಸಿ ‘ದೇವರಿಗೆ ಹೆಣ್ಣು ಗಂಡು ಎಂಬ ಭೇದಭಾವ ಇಲ್ಲ. ಭೇದವಿದ್ದರೆ ಅದು ದೇವರೇ ಅಲ್ಲ. ಭಕ್ತರು ಸಹ ದೇವರನ್ನು ಹೆಣ್ಣು– ಗಂಡು ಎಂದು ನೋಡುವುದಿಲ್ಲ. ಮಹಿಳೆಯರ ಮುಟ್ಟಿನಿಂದ ದೇವರಿಗೆ ಮೈಲಿಗೆಯಾಗುತ್ತದೆ ಎಂದರೆ ತರುಣ ಭಕ್ತರನ್ನು ನೋಡಿದರೆ ಹೆಣ್ಣು ದೇವರ ಮನಸ್ಸು ಚಂಚಲವಾಗುತ್ತದೆ, ತರುಣಿ ಭಕ್ತೆಯರನ್ನು ನೋಡಿದರೆ ಗಂಡು ದೇವರಲ್ಲಿ ತಳಮಳ ಉಂಟಾಗುತ್ತದೆ ಎಂದು ಭಾವಿಸಬೇಕಾಗುತ್ತದೆ’ ಎಂದು ಹೇಳಿದ್ದಾರೆ. ಈಚರ್ಚೆಯ ಮಾತು ಹಾಗಿರಲಿ. ಆದರೆ ಬಹಳ ಅಪಾಯಕಾರಿ ಅಂಶ ಏನು ಎಂದರೆ, ನಂಬಿಕೆ ಎನ್ನುವುದು ಕಾನೂನು ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳುವ ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ನಂಬಿಕೆಗೇ ಹೆಚ್ಚಿನ ಮಹತ್ವ ನೀಡಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಅನಾಹುತಗಳಿಗೂ ಕಾರಣವಾಗಬಹುದು. ನಾಳೆ ಯಾವುದೋ ಪುಣ್ಯಾತ್ಮ ಅಸ್ಪೃಶ್ಯತೆ ಕೂಡ ಒಂದು ನಂಬಿಕೆ, ಅದರ ಆಚರಣೆಗೆ ಅವಕಾಶ ನೀಡಬೇಕು ಎಂದು ಕೋರ್ಟ್ ಮೆಟ್ಟಿಲು ಹತ್ತಬಹುದು! ಇನ್ನೊಬ್ಬ ಪುಣ್ಯಾತ್ಮ ಮನುವಿನ ಸಂವಿಧಾನಕ್ಕೂ ಒತ್ತಾಯಿಸಬಹುದು. ಶ್ರೀರಾಮಚಂದ್ರ ಅಂತಹ ಬುದ್ಧಿಯನ್ನು ಯಾರಿಗೂ ಕೊಡಬೇಡಪ್ಪ.

ಸೂಫಿ ಕವಿ ಅಮೀರ್ ಖುಸ್ರೊ ಒಂದೆಡೆ ಹೇಳುತ್ತಾನೆ. ‘ನಾನು ಪ್ರೇಮದ ಅನೇಕ ದೇವತೆಗಳ ಆರಾಧಕ. ನನಗೆ ಮುಸ್ಲಿಂ ಸಿದ್ಧಾಂತಗಳು ಬೇಕಿಲ್ಲ. ನನ್ನ ನರಗಳು ತಂತಿಗಳಂತೆ ಬಲಿಷ್ಠವಾಗಿವೆ. ನನಗೆ ಹಿಂದೂಗಳ ಜನಿವಾರವೂ ಬೇಕಿಲ್ಲ’ ಎಂದು. ರಾಮಜನ್ಮಭೂಮಿಯಲ್ಲಿ ಇಂತಹ ಸೌಹಾರ್ದದ ಸೌಧವೊಂದನ್ನು ನಾವು ಕಟ್ಟಬಹುದಿತ್ತು. ಅಂತಹ ಸೌಹಾರ್ದದ ಮಂದಿರ ಎಲ್ಲರ ಹೃದಯಗಳಲ್ಲಿಯೂ ಕಟ್ಟುವಂತಾಗಲಿ. ಅದಕ್ಕೆ ಈಗಲೂ ಕಾಲ ಮಿಂಚಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು