ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗಾಂಧಿ’ ಬಜಾರ್‌ನಲ್ಲಿ ಏಕಾಂಕ!

ಕಾಂಗ್ರೆಸ್‌ ಪಕ್ಷದಲ್ಲಿ ನಡೆಯುತ್ತಿರುವ ಒಂದೇ ಬಗೆಯ ನಾಟಕವನ್ನು ಜನ ಎಷ್ಟು ದಿನ ನೋಡಿಯಾರು?
Last Updated 26 ಆಗಸ್ಟ್ 2020, 20:30 IST
ಅಕ್ಷರ ಗಾತ್ರ

ಕಾಂಗ್ರೆಸ್ ಪಕ್ಷದಲ್ಲಿ ಈಗ ಏಕಾಂಕದ ನಾಟಕ ಸದ್ಯಕ್ಕೆ ಮುಗಿದಿದೆ. ನಾಟಕದ ಆರಂಭದ ದೃಶ್ಯದಲ್ಲಿಯೇ ಪ್ರೇಕ್ಷಕರಿಗೆ ಅಂತ್ಯವೂ ಗೊತ್ತಾಗಿ ಹೋಗಿದೆ. ಆದರೂ ದೇಶದ ಪ್ರೇಕ್ಷಕರು ಇನ್ನೂ ನೋಡುತ್ತಾ ಕುಳಿತಿದ್ದಾರೆ. ಕಾಂಗ್ರೆಸ್‌ನಲ್ಲಿ ಈಗ ಗಾಂಧಿ‘ಗರಿ’ಗಾಗಿ ಗಾಂಧಿಗಿರಿ ನಡೆಯುತ್ತಿದೆ. ಹೀಗೆ ನಡೆಯುತ್ತಿರುವುದು ಇದೇ ಮೊದಲು ಅಲ್ಲ. ಬಹುಶಃ ಇದೇ ಕೊನೆಯೂ ಆಗಿರಲಿಕ್ಕಿಲ್ಲ. ಮಹಾತ್ಮ ಗಾಂಧಿಯಿಂದ ಹಿಡಿದು, ಇಂದಿರಾ ಗಾಂಧಿ, ರಾಜೀವ್‌ ಗಾಂಧಿವರೆಗೆ ಎಲ್ಲರೂ ಇಂತಹ ನಾಟಕಗಳನ್ನು ಸಾಕಷ್ಟು ಆಡಿದ್ದಾರೆ. ಈಗ ರಾಹುಲ್ ಸರದಿ ಅಷ್ಟೆ.

ಕಾಂಗ್ರೆಸ್ ಪಕ್ಷಕ್ಕೆ ಒಬ್ಬ ಪೂರ್ಣಾವಧಿ ಅಧ್ಯಕ್ಷ ಬೇಕು ಎಂದು 23 ಮುಖಂಡರು ಬರೆದ ಪತ್ರದ ಬಗ್ಗೆ ಚರ್ಚೆ ನಡೆಸಲು ಕರೆಯಲಾಗಿದ್ದ ಪಕ್ಷದ ಕಾರ್ಯಕಾರಿ ಸಮಿತಿ ಸಭೆ ‘ಗಾಂಧಿ’ ಗುಣಗಾನದಲ್ಲಿ ಮುಕ್ತಾಯವಾಗಿದೆ. ಹೊಸ ಅಧ್ಯಕ್ಷ ಆಯ್ಕೆಯಾಗುವವರೆಗೆ ಸೋನಿಯಾ ಗಾಂಧಿ ಅವರೇ ಅಧ್ಯಕ್ಷರಾಗಿ ಮುಂದುವರಿಯುತ್ತಾರೆ ಎಂಬ ನಿರ್ಧಾರವನ್ನೂ ಕೈಗೊಳ್ಳಲಾಗಿದೆ. ಸೋನಿಯಾ ಗಾಂಧಿ ಬಿಟ್ಟರೆ ರಾಹುಲ್ ಗಾಂಧಿ, ಅದಿಲ್ಲವಾದರೆ ಪ್ರಿಯಾಂಕಾ ಗಾಂಧಿ. ಅಂತೂ ನೆಹರೂ– ಇಂದಿರಾ ಗಾಂಧಿ ಕುಟುಂಬದ ಕುಡಿಗಳಿಗೇ ಪಟ್ಟ ಕಟ್ಟುವ ಹುಮ್ಮಸ್ಸು ಕಾಣುತ್ತಿದೆ.

ಕಾಂಗ್ರೆಸ್ ಪಕ್ಷದಲ್ಲಿ ಸಾಮೂಹಿಕ ನಾಯಕತ್ವದ ಮಾತು ಕೇಳಿಬರುತ್ತಿರುವುದೂ ಇದೇ ಮೊದಲೇನಲ್ಲ. ಬಹಳ ಕಾಲದಿಂದಲೂ ಸಾಮೂಹಿಕ ನಾಯಕತ್ವ ಎನ್ನುವುದು ಬರೀ ಮಾತಾಗಿದೆಯೇ ವಿನಾ ಅನುಷ್ಠಾನಕ್ಕೆ ಬಂದಿಲ್ಲ. ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರದ ಕೆಲವು ಕಾಲ ಮಾತ್ರ ಕಾಂಗ್ರೆಸ್ ಪಕ್ಷದಲ್ಲಿ ಸಾಮೂಹಿಕ ನಾಯಕತ್ವ ಇತ್ತು. ನೆಹರೂ ಅವರು ಪ್ರಧಾನಿಯಾಗಿರುವವರೆಗೂ ಸಾಮೂಹಿಕ ನಾಯಕತ್ವಕ್ಕೆ ಒಂದಿಷ್ಟು ಬೆಲೆ ಇತ್ತು. 1969ರಲ್ಲಿ ಕಾಂಗ್ರೆಸ್ ಪಕ್ಷ ವಿಭಜನೆ ಆದ ನಂತರ ಕಾಂಗ್ರೆಸ್ ಪಕ್ಷದಲ್ಲಿ ಇಂದಿರಾ ಗಾಂಧಿ ಅವರ ಚಕ್ರಾಧಿಪತ್ಯ ಆರಂಭವಾಯಿತು. ಇಂದಿರಾ ಅವರಿಗೆ ರಾಜಕೀಯವಾಗಿ ಅಲ್ಲೊಂದು ಇಲ್ಲೊಂದು ಸೋಲಾಗಿರಬಹುದು. ಆದರೆ ಪಕ್ಷದಲ್ಲಿ ಇಂದಿರಾ ಕುಟುಂಬದ ಪಾರುಪತ್ಯ ಆಗಲೂ ಇತ್ತು, ಈಗಲೂ ಮುಂದುವರಿದಿದೆ. ಅದಿಲ್ಲವಾದರೆ ಪಕ್ಷಕ್ಕೆ ಭವಿಷ್ಯವೇ ಇಲ್ಲ ಎಂದು ನಂಬಿಕೊಂಡವರ ಸಂಖ್ಯೆ ಈಗಲೂ ಬಹಳ ದೊಡ್ಡದಿದೆ. ನಿಜಲಿಂಗಪ್ಪ, ಸೀತಾರಾಂ ಕೇಸರಿ, ಪಿ.ವಿ.ನರಸಿಂಹರಾವ್ ಮುಂತಾದವರು ಆಗಾಗ ಪಕ್ಷದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರೂ ಆಗೆಲ್ಲ ಎರಡು ಶಕ್ತಿ ಕೇಂದ್ರಗಳಿದ್ದವು.

ರವೀಂದ್ರ ಭಟ್ಟ

ಒಂದು ಕಾಲದಲ್ಲಿ ಲೋಕಸಭೆಯಲ್ಲಿ ಕಾಂಗ್ರೆಸ್ ಸದಸ್ಯರ ಸಂಖ್ಯೆ 415 ಇತ್ತು. ರಾಹುಲ್ ಗಾಂಧಿ ಪಕ್ಷದ ಅಧ್ಯಕ್ಷರಾದ ನಂತರ ಈ ಸಂಖ್ಯೆ 44ಕ್ಕೆ ಇಳಿಯಿತು. 2019ರ ಚುನಾವಣೆಯಲ್ಲಿ ಕೊಂಚ ಸುಧಾರಣೆ ಕಂಡು ಅದು 51ಕ್ಕೆ ಏರಿದೆ. ಈಗಲೂ ಲೋಕಸಭೆಯಲ್ಲಿ ಅಧಿಕೃತ ವಿರೋಧ ಪಕ್ಷದ ಸ್ಥಾನ ಕಾಂಗ್ರೆಸ್‌ಗೆ ಇಲ್ಲ. ಆದರೂ ಅಪ್ಪ ಹಾಕಿದ ಆಲದ ಮರಕ್ಕೇ ನೇಣು ಹಾಕಿಕೊಳ್ಳುವ ಪ್ರವೃತ್ತಿಯನ್ನು ಆ ಪಕ್ಷ ಬಿಡುವ ಯೋಚನೆ ಮಾಡುತ್ತಿಲ್ಲ ಅಥವಾ ಭಟ್ಟಂಗಿಗಳ ಮಹಾಪಡೆ ಅದಕ್ಕೆ ಅವಕಾಶ ನೀಡುತ್ತಿಲ್ಲ.

2019ರ ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಕಂಡ ನಂತರ ರಾಹುಲ್ ಗಾಂಧಿ ಅವರು ಪಕ್ಷದ ಅಧ್ಯಕ್ಷ ಸ್ಥಾನವನ್ನು ತ್ಯಜಿಸಿದರು. ಆಗಲೇ ಹೊಸ ನಾಯಕತ್ವದ ಶೋಧಕ್ಕೆ ಮುಂದಾಗಿದ್ದರೆ ಪಕ್ಷ ಇನ್ನಷ್ಟು ಏಟುಗಳಿಂದ ತಪ್ಪಿಸಿಕೊಳ್ಳಬಹುದಿತ್ತು. ಕಾಂಗ್ರೆಸ್ ಪಕ್ಷ ಮತ್ತು ಅದರ ನಾಯಕ ಎಷ್ಟೊಂದು ಬಲಹೀನರಾಗಿದ್ದರು ಎಂದರೆ, 2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಅವರು ಸತ್ಯವನ್ನೇ ಹೇಳುತ್ತಿದ್ದರೂ ಜನ ಅದನ್ನು ನಂಬುವ ಸ್ಥಿತಿಯಲ್ಲಿ ಇರಲಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ನಿಜವಾಗಿ ಈಗ ಬೇಕಿರುವುದು ದೇಶದ ಜನರಲ್ಲಿ ಹೊಸ ಭರವಸೆಯನ್ನು ಮೂಡಿಸುವ ನಾಯಕ. ಆರ್ಥಿಕ ಸಂಕಷ್ಟ, ಉದ್ಯೋಗ ನಷ್ಟ ಮುಂತಾದ ಕಷ್ಟಗಳ ಪ್ರವಾಹದಲ್ಲಿ ತೇಲಿ ಹೋಗುತ್ತಿರುವ ಪ್ರಜೆಗಳನ್ನು ದಡ ಸೇರಿಸುವ ಸಮರ್ಥ ನಾಯಕ ಬೇಕು. ಅಂತಹ ವಿಶ್ವಾಸ ಹುಟ್ಟಿಸುವ ನಾಯಕತ್ವದ ತಲಾಶ್‌ನಲ್ಲಿ ಇಡೀ ದೇಶ ಇದೆ. ಆ ಬಗೆಯ ನಾಯಕತ್ವ ರಾತ್ರಿ ಬೆಳಗಾಗುವುದರೊಳಗೆ ಸೃಷ್ಟಿಯಾಗುವುದಿಲ್ಲ ನಿಜ. ಆದರೆ ಅದರ ಪ್ರಕ್ರಿಯೆಯೇ ಶುರುವಾಗದಿದ್ದರೆ ಜನ ಭ್ರಮನಿರಸನಗೊಳ್ಳುತ್ತಾರೆ. ಅದೂ ಮಹಾತ್ಮ ಗಾಂಧಿ ಸಹಿತ ಕಾಂಗ್ರೆಸ್ಸಿನ ಎಲ್ಲ ಹತಾರಗಳನ್ನೂ ಬಿಜೆಪಿ ಬಾಚಿಕೊಂಡಿರುವಾಗ, ಜನ ನಂಬುವ ನಾಯಕನೊಬ್ಬ ಉದ್ಭವವಾಗುವುದು ಅಷ್ಟು ಸುಲಭದ ಮಾತಲ್ಲ.

ಸೋನಿಯಾ ಗಾಂಧಿ ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಟ್ಟರು. ರಾಹುಲ್ ಗಾಂಧಿ ಅಧ್ಯಕ್ಷ ಗಾದಿಗೇರಿದರು. ರಾಹುಲ್ ಆ ಸ್ಥಾನವನ್ನು ಬಿಟ್ಟರು. ಮತ್ತೆ ಸೋನಿಯಾ ಅವರನ್ನೇ ಕುಳ್ಳಿರಿಸಲಾಯಿತು. ಈಗ ಸೋನಿಯಾ ಅಧಿ ಕಾರ ತ್ಯಾಗಕ್ಕೆ ಸಿದ್ಧರಾಗಿದ್ದಾರೆ. ರಾಹುಲ್ ಅವರನ್ನು ಮತ್ತೆ ಪಟ್ಟಕ್ಕೇರಿಸುವ ಪ್ರಯತ್ನ ನಡೆಯುತ್ತಿದೆ. ಇದೇ ನಾಟಕವನ್ನು ಜನ ಎಷ್ಟು ದಿನ ನೋಡಿಯಾರು?

ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಕಾಂಗ್ರೆಸ್ ಪಕ್ಷ ಸಾಕಷ್ಟು ಬೆವರು ಹರಿಸಿದೆ. ನಂತರದ ದಿನಗಳಲ್ಲಿಯೂ ದೇಶದ ಒಟ್ಟಾರೆ ಅಭಿವೃದ್ಧಿಗೂ ಅದರ ಕಾಣಿಕೆ ಇದೆ. ಆದರೆ ಆಗಿನ ರಾಜಕೀಯವನ್ನೇ ಈಗಲೂ ಮಾಡುತ್ತೇವೆ ಎಂದರೆ ಅದು ಈಗ ನಡೆಯದ ನಾಣ್ಯ. ದೇಶದಲ್ಲಿ ಎಲ್ಲವೂ ಬದಲಾಗಿವೆ. ಕಾಂಗ್ರೆಸ್ ಮಾತ್ರ ಇನ್ನೂ ಹಳೆಯ ಸಂಪ್ರದಾಯದಲ್ಲೇ ಬಿದ್ದು ಒದ್ದಾಡುತ್ತಿದೆ.

ಇಂದಿರಾ ಕುಟುಂಬದ ವಿರುದ್ಧ ಮಾತನಾಡುವುದನ್ನು ಪಕ್ಷ ಆಗಲೂ ಸಹಿಸುತ್ತಿರಲಿಲ್ಲ, ಈಗಲೂ ಸಹಿಸುತ್ತಿಲ್ಲ. 1979ರಲ್ಲಿಯೇ ದೇವರಾಜ ಅರಸು ಅವರು ವಂಶಪಾರಂಪರ್ಯ ಆಡಳಿತವನ್ನು ಇಂದಿರಾ ಅವರ ಮುಂದೆಯೇ ಟೀಕಿಸಿದ್ದರು. 1979ರ ಜನವರಿಯಲ್ಲಿ ನಡೆದ ಇಂದಿರಾ ಕಾಂಗ್ರೆಸ್ ಅಧಿವೇಶನದಲ್ಲಿ ಮಾತನಾಡಿದ ದೇವರಾಜ ಅರಸು ಅವರು ‘ಕಾಂಗ್ರೆಸ್ ಪಕ್ಷವನ್ನು ವಂಶಾಡಳಿತದ ಕಪಿಮುಷ್ಟಿಯಿಂದ ಬಿಡುಗಡೆಗೊಳಿಸಬೇಕಿದೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಶ್ರಮಿಸಿದ ಪಕ್ಷ ಈಗ ತನ್ನ ಮೂಲ ಆಶಯವನ್ನು ಮಣ್ಣುಪಾಲು ಮಾಡಿ ವಂಶಾಡಳಿತಕ್ಕೆ ಮಣೆ ಹಾಕುತ್ತಿದೆ. ಇದು ನಿಲ್ಲಬೇಕು. ಇಂದಿರಾ ಗಾಂಧಿ ಅವರ ಪುತ್ರ ಸಂಜಯ್‌ ಗಾಂಧಿ ಅವರು ತಾನು ಪ್ರಧಾನಿ ಅವರ ಮಗ ಎನ್ನುವ ಕಾರಣಕ್ಕಾಗಿಯೇ ರಾಜ್ಯಗಳ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವುದನ್ನು ನಿಲ್ಲಿಸಬೇಕು’ ಎಂದು ಹೇಳುವ ಧೈರ್ಯ ತೋರಿದ್ದರು. ನಂತರ ಅವರು ಅಧಿಕಾರ ಕಳೆದುಕೊಂಡರು, ಆ ಮಾತು ಬೇರೆ. ಆದರೆ, 40 ವರ್ಷಗಳ ಹಿಂದೆ ಅವರು ಆಡಿದ ಮಾತು ಕಾಂಗ್ರೆಸ್ ಪಕ್ಷಕ್ಕೆ ಈಗಲೂ ಅನ್ವಯವಾಗುತ್ತದೆ. ಪಕ್ಷವೂ ಬದಲಾಗಿಲ್ಲ, ಅದರ ನಾಯಕರೂ ಬದಲಾಗಿಲ್ಲ, ಅವರ ಮನಃಸ್ಥಿತಿಯೂ ಬದಲಾಗಿಲ್ಲ. ಪಕ್ಷಕ್ಕೆ ಸಮರ್ಥ ನಾಯಕತ್ವ ಬೇಕು ಎಂದು ಪತ್ರ ಬರೆದವರ ಬಾಯಿ ಮುಚ್ಚಿಸುವ ಕೆಲಸ ನಡೆಯುತ್ತಿದೆಯೇ ವಿನಾ ಹೊಸ ನಾಯಕನೊಬ್ಬನ ಹುಡುಕಾಟಕ್ಕೆ ತಯಾರಿ ಕಾಣುತ್ತಿಲ್ಲ. ವಂಶಾಡಳಿತದ ವಿರುದ್ಧ ಆಗ ನಮ್ಮ ದೇವರಾಜ ಅರಸು ಅವರು ಗುಡುಗಿದ್ದರು. ಈಗ ಕರ್ನಾಟಕದ ಬಹುತೇಕ ಎಲ್ಲ ನಾಯಕರು ವಂಶಾಡಳಿತದ ಪರವಾಗಿಯೇ ನಿಂತಿದ್ದಾರೆ.

ಗುಲಾಂ ನಬಿ ಆಜಾದ್, ಆನಂದ ಶರ್ಮಾ, ಮುಕುಲ್ ವಾಸ್ನಿಕ್ ಮುಂತಾದವರು ಎರಡು ವಾರಗಳ ಹಿಂದೆಯೇ ಪತ್ರ ಬರೆದಿದ್ದರು. ಅದು ಮಾಧ್ಯಮದಲ್ಲಿ ಬಹಿರಂಗವಾದಾಗಲೇ ಸಂಚಲನ ಉಂಟಾಯಿತು. ಸಭೆಯೂ ನಡೆಯಿತು. ಸಭೆಯಲ್ಲಿ ಯಾವುದೇ ತೀರ್ಮಾನ ಕೈಗೊಳ್ಳಲಿಲ್ಲ. ನೆಹರೂ–ಗಾಂಧಿ ಕುಟುಂಬದ ಕುಡಿಯೇ ಮುಂದಿನ ಅಧ್ಯಕ್ಷರಾಗಬಹುದು ಎಂಬ ಸೂಚನೆಯನ್ನೂ ಸಭೆ ಹೊರಕ್ಕೆ ಹಾಕಿತು. ಇದನ್ನೆಲ್ಲಾ ನೋಡಿದರೆ ‘ನೀನು ಹೊಡೆದಂತೆ ಮಾಡು, ನಾನು ಅತ್ತಂಗೆ ಮಾಡುತ್ತೇನೆ’ ಎಂಬಂತಿದೆ ಎಂದು ಯಾರಿಗಾದರೂ ಅನ್ನಿಸದೇ ಇರದು.

ರಾಹುಲ್ ಗಾಂಧಿ ಅವರನ್ನೇ ಅಧ್ಯಕ್ಷರನ್ನಾಗಿ ಮಾಡುವುದಕ್ಕಾಗಿ, ಸಾಕಷ್ಟು ಭರವಸೆಯ ಮತ್ತು ಯುವ ನಾಯಕರನ್ನು ಪಕ್ಷ ಕಳೆದುಕೊಂಡಿದೆ. ರಾತ್ರಿ ಕಂಡ ಬಾವಿಗೆ ಹಗಲು ಬೀಳುವುದು ಬುದ್ಧಿವಂತಿಕೆಯಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT