ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಸಂಧಾನ ಅಂಕಣ: ಮೂರೂ ಬಿಟ್ಟರಷ್ಟೇ ಮತದಾರ ದೊಡ್ಡವ!

Published 27 ಅಕ್ಟೋಬರ್ 2023, 23:51 IST
Last Updated 27 ಅಕ್ಟೋಬರ್ 2023, 23:51 IST
ಅಕ್ಷರ ಗಾತ್ರ

‘ಮೂರೂ ಬಿಟ್ಟವ ಊರಿಗೆ ದೊಡ್ಡವ’ ಎಂಬ ಗಾದೆಯೊಂದು ನಮ್ಮಲ್ಲಿ ಇದೆ. ಕರ್ನಾಟಕದ ಮತದಾರರೂ ಈಗ ಮೂರೂ ಬಿಡಬೇಕಾದ ಹಂತ ತಲುಪಿದ್ದಾರೆ. ಅಂದರೆ, ಮತದಾರರು ಮಾನ, ಮರ್ಯಾದೆ, ಘನತೆ ಬಿಡಬೇಕು ಎಂದಲ್ಲ. ಅವುಗಳನ್ನು ಉಳಿಸಿಕೊಳ್ಳಲು ಈಗ ಚಾಲ್ತಿಯಲ್ಲಿರುವ ಮೂರೂ ಪಕ್ಷಗಳನ್ನು ಬಿಡಬೇಕಾಗಿದೆ ಅಷ್ಟೆ. ಆದರೆ ಈ ಮೂರು ಪಕ್ಷಗಳು ಬಿಟ್ಟರೂ ಬಿಡದ ಮಾಯೆಯಂತೆ ಇವೆ. ಮತದಾರರಿಗೆ ಮತ್ತೊಂದನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವೇ ಇಲ್ಲದಂತಾಗಿದೆ.

ಇಂತಹ ಸ್ಥಿತಿಯಲ್ಲಿ ಹೊಸದೊಂದು ಹುಟ್ಟಬಹುದು ಎಂಬ ಸಣ್ಣ ಆಸೆಯೂ ಅವರಲ್ಲಿದೆ. ಕರ್ನಾಟಕದ ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಯಾವ ಪಕ್ಷದಲ್ಲಿಯೂ ಕಾರ್ಯಕರ್ತರಿಗೆ ಮೂರು ಕಾಸಿನ ಬೆಲೆಯೂ ಇಲ್ಲದಂತಾಗಿದೆ. ಮತದಾರರಂತೂ ಅನಾಥರಾಗಿ ಎಷ್ಟೋ ವರ್ಷಗಳು ಕಳೆದುಹೋಗಿವೆ. ಪಕ್ಷಗಳಂತೂ ಮತದಾರರನ್ನು ಕೈಬಿಟ್ಟಿವೆ. ಈಗ ಮತದಾರರು ಮನಸ್ಸು ಮಾಡಬೇಕಷ್ಟೆ.

ಆಡಳಿತದಲ್ಲಿರುವ ಕಾಂಗ್ರೆಸ್ ಪಕ್ಷವನ್ನೇ ತೆಗೆದುಕೊಳ್ಳಿ. ಇದೇ ವರ್ಷದ ಮೇ ತಿಂಗಳಿನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಜಯ ಗಳಿಸಿದ ಕಾಂಗ್ರೆಸ್ ಪಕ್ಷಕ್ಕೆ ಈಗ ಸರ್ಕಾರ ಮುಖ್ಯವಾಗಿದೆ. ಪಕ್ಷ ಸೊರಗುತ್ತಿದೆ. ಕಾರ್ಯಕರ್ತರು ಪರದಾಡುತ್ತಿದ್ದಾರೆ. ಬೇರೆ ಪಕ್ಷಗಳಿಂದ ಬರುತ್ತಿರುವ ಮುಖಂಡರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದನ್ನು ಬಿಟ್ಟರೆ ಪಕ್ಷವನ್ನು ಚುರುಕುಗೊಳಿಸುವ ಇನ್ಯಾವುದೇ ಕೆಲಸ ನಡೆಯುತ್ತಿಲ್ಲ. ಕಾರ್ಯಕರ್ತರನ್ನು ಹುರಿದುಂಬಿಸುವ ಕೆಲಸವಾಗುತ್ತಿಲ್ಲ. ಬೇರುಮಟ್ಟದಲ್ಲಿ ಅವರನ್ನು ಸಜ್ಜುಗೊಳಿಸುವುದಕ್ಕೆ ಆದ್ಯತೆ ಸಿಗುತ್ತಿಲ್ಲ. ಇನ್ನೂ ಆ ಪಕ್ಷ ಗೆಲುವಿನ ಅಮಲಿನಲ್ಲಿಯೇ ಇದೆ. ಅದರಿಂದ ಹೊರಬರದಿದ್ದರೆ ಲೋಕಸಭಾ ಚುನಾವಣೆ ಹುಳಿ ಮಜ್ಜಿಗೆಯಾಗಬಹುದು.

ಪಕ್ಷ ಅಧಿಕಾರಕ್ಕೆ ಬಂದ ಮೂರು ತಿಂಗಳಿನಲ್ಲಿಯೇ ಸಚಿವರ ವಿರುದ್ಧ ಆರೋಪಗಳು ಕೇಳಿಬರುತ್ತಿವೆ. ‘ಶಾಸಕರ ಮಾತಿಗೇ ಬೆಲೆ ಇಲ್ಲದಂತಾಗಿದೆ. ಪಕ್ಷದ ಕಾರ್ಯಕರ್ತರ, ಜನಸಾಮಾನ್ಯರ ಕುಂದುಕೊರತೆಗಳನ್ನು ಕೇಳುತ್ತಿಲ್ಲ’ ಎಂಬ ಆರೋಪ ವ್ಯಾಪಕವಾಗಿ ಕೇಳಿಬಂದಿದ್ದರಿಂದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಅಖಾಡಕ್ಕೆ ಇಳಿಯಬೇಕಾಯಿತು. ಹಿಂದಿನ ಅವಧಿಯ ಸರ್ಕಾರದಲ್ಲಿ ಶೇ 40ರಷ್ಟು ಲಂಚ ಇದೆ ಎಂಬ ಆರೋಪವನ್ನೇ ಮುಂದಿಟ್ಟುಕೊಂಡು ಚುನಾವಣೆಯಲ್ಲಿ ಮತ ಗಳಿಸಿದ ಕಾಂಗ್ರೆಸ್ ಪಕ್ಷಕ್ಕೆ ಈಗಲೂ ಭ್ರಷ್ಟಾಚಾರವನ್ನು ಕಡಿಮೆ ಮಾಡಲು ಸಾಧ್ಯವಾಗಿಲ್ಲ. ಅಲ್ಲದೆ ಗುತ್ತಿಗೆದಾರರು ಈ ಪಕ್ಷದ ವಿರುದ್ಧವೂ ಕಮಿಷನ್ ಆರೋಪ ಮಾಡುತ್ತಿದ್ದಾರೆ. ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಸರ್ಕಾರಿ ನೌಕರರು ಮತ್ತು ಅಧಿಕಾರಿಗಳ ವರ್ಗಾವಣೆಯಲ್ಲಿ ಭಾರೀ ಪ್ರಮಾಣದ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಅದು ಸುಳ್ಳು ಎಂದು ನಿರೂಪಿಸಲು ಸಾಧ್ಯವಾಗಿಲ್ಲ. ‘ಹೌದು ವರ್ಗಾವಣೆಯಲ್ಲಿ ಭಾರೀ ಭ್ರಷ್ಟಾಚಾರ ನಡೆಯುತ್ತಿದೆ. ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಭಾರೀ ಪ್ರಮಾಣದ ಹಣ ವ್ಯಯ ಮಾಡುತ್ತಿರುವುದರಿಂದ ಅಭಿವೃದ್ಧಿಗೆ ಅನುದಾನ ಸಿಗುತ್ತಿಲ್ಲ. ಅನುದಾನವೇ ಇಲ್ಲದ ಮೇಲೆ ಭ್ರಷ್ಟಾಚಾರ ಮಾಡುವುದೆಂತು? ಅದಕ್ಕೇ ಈಗ ಸದ್ಯಕ್ಕೆ ವರ್ಗಾವಣೆ ದಂಧೆಯೇ ಕಾಮಧೇನು ಆಗಿದೆ’ ಎಂದು ಕಾಂಗ್ರೆಸ್ ಮುಖಂಡರೇ ಹೇಳುತ್ತಾರೆ. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ  ಅವರ ಪುತ್ರ ಆಡಳಿತ ನಡೆಸುತ್ತಿದ್ದರು ಎಂಬ ಆಪಾದನೆ ಇತ್ತು. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕೂಡ ‘ಸನ್ ಸ್ಟ್ರೋಕ್’ನಿಂದ ಮುಕ್ತವಾಗಿಲ್ಲ ಎಂಬ ಮಾತು ಪಕ್ಷದ ಒಳಗೇ ಇದೆ.

ಕಾಂಗ್ರೆಸ್ ಪಕ್ಷಕ್ಕೆ ಅದ್ಭುತ ಅವಕಾಶಗಳಿದ್ದವು. ಪ್ರಮುಖ ವಿರೋಧ ಪಕ್ಷವಾಗಿರುವ ಬಿಜೆಪಿಗೆ ಇನ್ನೂ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಸಾಧ್ಯವಾಗಿಲ್ಲ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷರನ್ನೂ ಬದಲಾಯಿಸಲು ಕಾಲ ಕೂಡಿಬಂದಿಲ್ಲ. ಆ ಪಕ್ಷ ಒಂದು ರೀತಿಯಲ್ಲಿ ನಾಯಕನಿಲ್ಲದ ನಾವೆಯಂತಾಗಿದೆ. ವಿಧಾನಸಭೆಚುನಾವಣೆಯಲ್ಲಿ ಸಿಕ್ಕ ಗೆಲುವು, ಗ್ಯಾರಂಟಿಗಳ ಅನುಷ್ಠಾನದಂತಹ ಕಾರಣಗಳಿಗಾಗಿ ಜನ ಇನ್ನೂ ಕಾಂಗ್ರೆಸ್ ಪಕ್ಷದಿಂದ ದೂರವಾಗಿಲ್ಲ. ಆದರೂ ಮುಂಬರುವ ಲೋಕಸಭಾ ಚುನಾವಣೆಗೆ ಪಕ್ಷವನ್ನು ಇನ್ನಷ್ಟು ಸಜ್ಜುಗೊಳಿಸುವ ಉತ್ಸಾಹ ಪಕ್ಷದಲ್ಲಿ ಕಾಣುತ್ತಿಲ್ಲ. ‘ಪಕ್ಷ ಮತ್ತು ಸರ್ಕಾರದ ಪ್ರಶ್ನೆ ಬಂದರೆ ಅಧಿಕಾರವನ್ನೇ ಆಯ್ಕೆ ಮಾಡಿಕೊಳ್ಳುವ, ಗುಣ ಮತ್ತು ಹಣದ ಆಯ್ಕೆ ಬಂದರೆ ಹಣವನ್ನೇ ಆಯ್ಕೆ ಮಾಡಿಕೊಳ್ಳುವ ಪ್ರವೃತ್ತಿ ಹೆಚ್ಚಾಗಿದ್ದೇ ಕಾಂಗ್ರೆಸ್ ಪಕ್ಷಕ್ಕೆ ದುಬಾರಿಯಾಗುತ್ತಿದೆ’ ಎಂಬ ಪಕ್ಷದ ಹಿರಿಯರ ಮಾತು ಬರೀ ಪಿಸುಮಾತಾಗಿದೆ.

ಡಿ.ಕೆ.ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರೂ ಹೌದು, ನೀರಾವರಿ ಸಚಿವರೂ ಹೌದು, ಬೆಂಗಳೂರು ಅಭಿವೃದ್ಧಿ ಮಂತ್ರಿಯೂ ಹೌದು. ಶಿವಕುಮಾರ್ ಅವರಿಗೆ ನೀರಾವರಿಗಿಂತ ಬೆಂಗಳೂರು ಅಭಿವೃದ್ಧಿಯ ಬಗ್ಗೆಯೇ ಹೆಚ್ಚು ‘ವರಿ’ ಎಂಬ ಮಾತು ಪಕ್ಷದ ವಲಯದಲ್ಲಿ ಇದೆ. ಮೇಲ್ನೋಟಕ್ಕೆ ಇದು ಸತ್ಯ ಎಂದೂ ಅನ್ನಿಸುತ್ತದೆ. ಅದಕ್ಕಾಗಿಯೇ ಕನಕಪುರ ಬೆಂಗಳೂರಿಗೆ ಸೇರಬೇಕು ಎಂದು ಅವರು ಬಯಸುತ್ತಾರೆ. ಅದಕ್ಕೆ ಸಕಾರಣಗಳೂ ಇರಬಹುದು. ಆದರೆ ಅದರ ಭಾರದಲ್ಲಿ ನೀರಾವರಿ ಇಲಾಖೆ ಅನಾಥವಾಗಬಾರದಲ್ಲ. ಬೆಂಗಳೂರು ಅಭಿವೃದ್ಧಿ ಎಷ್ಟು ಮುಖ್ಯವೋ ರಾಜ್ಯದ ಕಲ್ಯಾಣದ ದೃಷ್ಟಿಯಿಂದ ನೀರಾವರಿಯೂ ಅಷ್ಟೇ ಮುಖ್ಯ.

ಅಧಿಕಾರಕ್ಕೆ ಬಂದು ಆರು ತಿಂಗಳಾಗುತ್ತಿದೆ. ಕಾರ್ಯಕರ್ತರಿಗಾಗಲೀ ಮುಖಂಡರಿಗಾಗಲೀ ಯಾವುದೇ ಹುದ್ದೆ ಇನ್ನೂ ಲಭ್ಯವಾಗಿಲ್ಲ. ನಿಗಮ, ಮಂಡಳಿಗಳ ಅಧ್ಯಕ್ಷ, ಸದಸ್ಯರ ಭರ್ತಿಗೆ ಕ್ರಮ ಕೈಗೊಂಡಿಲ್ಲ. ಸಚಿವ ಸ್ಥಾನ ಸಿಗದೆ ಇರುವ ಶಾಸಕರೂ ಪಕ್ಷಕ್ಕಾಗಿ ದುಡಿದ ಮುಖಂಡರೂ ಯಾವುದಾದರೂ ಒಂದು ಹುದ್ದೆ ಲಭ್ಯವಾಗಬಹುದೆಂಬ ನಿರೀಕ್ಷೆಯಲ್ಲಿಯೇ ಇದ್ದಾರೆ. ಆದರೆ ಅದು ಸಿಗುವ ಮುನ್ಸೂಚನೆ ಕಾಣುತ್ತಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಈಗ ಎರಡು ಶಕ್ತಿ ಕೇಂದ್ರಗಳಿವೆ. ಮೂರನೇ ಕೇಂದ್ರ ಹುಟ್ಟುವ ನಿರೀಕ್ಷೆ ಇದೆ. ಶಕ್ತಿ ಕೇಂದ್ರಗಳು ಹೆಚ್ಚಾದ ಹಾಗೆ ಪಕ್ಷ ಬಡವಾಗುತ್ತದೆ.

ಕಾಂಗ್ರೆಸ್ ಪಕ್ಷದ ಕತೆ ಹೀಗಾದರೆ, ಪ್ರಮುಖ ವಿರೋಧ ಪಕ್ಷ ಬಿಜೆಪಿಯದ್ದೂ ಅದೇ ಕತೆ. ಅಲ್ಲಿಯೂ ಕಾರ್ಯ
ಕರ್ತರಿಗೂ ಗೌರವ ಇಲ್ಲ, ಮುಖಂಡರಿಗೂ ಗೌರವ ಇಲ್ಲ. ರಾಜ್ಯಮಟ್ಟದಲ್ಲಿ ಆ ಪಕ್ಷಕ್ಕೆ ಯಾರು ನಾಯಕರು ಎನ್ನುವುದೇ ತಿಳಿಯುತ್ತಿಲ್ಲ. ಸ್ಥಳೀಯ ನಾಯಕರಿಗೆ ಗೊತ್ತೇ ಆಗದಂತೆ ಕೇಂದ್ರದ ಮುಖಂಡರೇ ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಳ್ಳುವ ನಿರ್ಧಾರ ಪ್ರಕಟಿಸುತ್ತಾರೆ. ಅದನ್ನು ಒಪ್ಪಬೇಕೋ ಬೇಡವೋ ಎನ್ನುವ ಗೊಂದಲ ಸ್ಥಳೀಯ ನಾಯಕರದ್ದು. ನಾಯಕನೇ ಇಲ್ಲದಿರುವುದರಿಂದ ಈಗ ಎಲ್ಲರೂ ನಾಯಕರು. ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡುತ್ತಿದ್ದಾರೆ.

ವಿಧಾನಸಭೆಯ ಸೋಲಿನಿಂದ ಕಂಗೆಟ್ಟಿರುವ ಕಾರ್ಯಕರ್ತರಲ್ಲಿ ಉತ್ಸಾಹ ತುಂಬುವ ಕೆಲಸ ನಡೆಯುತ್ತಿಲ್ಲ. ‘ನಾವೂ ಜೀವಂತ ಇದ್ದೇವೆ’ ಎಂದು ತೋರಿಸಿಕೊಳ್ಳಲು ಹೋರಾಟಗಳು ನಡೆಯುತ್ತಿವೆ. ಮಾತಿನ ಅಬ್ಬರ ಜೋರಾಗಿಯೇ ಇದೆ. ಕಾಂಗ್ರೆಸ್ ನೇತೃತ್ವದ ಸರ್ಕಾರವನ್ನು ಬೀಳಿಸಿ ಹೊಸ ಸರ್ಕಾರ ರಚಿಸುವ ಮಾತನ್ನು ಆಡುತ್ತಿದ್ದಾರೆ. ಅಧಿಕಾರದಿಂದ ಹೊರಬಂದ ಚಡಪಡಿಕೆ ಅವರಲ್ಲಿ ಕಾಣುತ್ತಿದೆ. ಒಬ್ಬರ ವಿರುದ್ಧ ಇನ್ನೊಬ್ಬರು ಆರೋಪ ಮಾಡುವ ಪರಿಪಾಟವೂ ಮುಂದುವರಿದಿದೆ. ಬರೀ ಗುಂಪು ರಾಜಕಾರಣ.

ಜಾತ್ಯತೀತ ಜನತಾದಳ ಕುಟುಂಬದ ಪಕ್ಷವೇ ಹೌದು ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ತಂದೆ, ಮಕ್ಕಳು ಸೇರಿ ಬಿಜೆಪಿ ಜೊತೆ ಹೊಂದಾಣಿಕೆಯ ತೀರ್ಮಾನ ಮಾಡುತ್ತಾರೆ. ರಾಜ್ಯ ಘಟಕದ ಅಧ್ಯಕ್ಷರು ಅದನ್ನು ವಿರೋಧಿಸಿದರೆ ರಾಜ್ಯ ಘಟಕವೇ ವಿಸರ್ಜನೆಯಾಗುತ್ತದೆ. ಅಲ್ಲೂ ಕಾರ್ಯಕರ್ತರು ಅನಾಥರೇ ಆಗಿದ್ದಾರೆ. ಒಟ್ಟಿನಲ್ಲಿ ಮೂರೂ ಪಕ್ಷಗಳಲ್ಲಿ ಕಾರ್ಯಕರ್ತರು ಮೂಲೆಗುಂಪಾಗಿದ್ದಾರೆ. ಅವರಿಗೆ ಮೂರು ಕಾಸಿನ ಬೆಲೆಯೂ ಇಲ್ಲ. ಈಗ ಮತದಾರರು ತಮ್ಮ ಘನತೆ ಉಳಿಸಿಕೊಳ್ಳಲು ಮೂರನ್ನೂ ಬಿಡಬೇಕಾಗಿದೆ. ಆ ಮೂಲಕ ದೊಡ್ಡವರಾಗಬೇಕಿದೆ.

ತಮ್ಮನ್ನು ಬಿಟ್ಟರೆ ಬೇರೆ ಗತಿ ಇಲ್ಲ ಎಂಬ ಭಾವನೆ ರಾಜಕೀಯ ಪಕ್ಷಗಳಿಗೆ ಇರಬಹುದು. ಆದರೆ, ಮತದಾರರು ಮನಸ್ಸು ಮಾಡಿದರೆ ಮತ್ತೊಂದು ಹುಟ್ಟಬಹುದು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT