ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಸಂಧಾನ: ಹೋದರೆ ಒಂದು ಕಲ್ಲು, ಬಿದ್ದರೆ ಮಾವು

ಬಿಜೆಪಿ ಪ್ರಯೋಗ ಈಗಲ್ಲದಿದ್ದರೆ ಇನ್ಯಾವಾಗ? ಸೋಲೋ ಗೆಲುವೋ?
Published 26 ಏಪ್ರಿಲ್ 2023, 20:35 IST
Last Updated 26 ಏಪ್ರಿಲ್ 2023, 20:35 IST
ಅಕ್ಷರ ಗಾತ್ರ

ರಾಜ್ಯ ವಿಧಾನಸಭಾ ಚುನಾವಣೆ ಕಣ ಸಿದ್ಧವಾದ ನಂತರವೂ ಬಿಜೆಪಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಮಾಡಿದ ಪ್ರಯೋಗದ ಮಾತು ಮುಗಿದಿಲ್ಲ. ಅಭ್ಯರ್ಥಿಗಳ ಪಟ್ಟಿ ಜೊತೆಗೆ ಬಿಜೆಪಿ ಕೆಲವು ಅಚ್ಚರಿಗಳನ್ನೂ ಪ್ರಕಟಿಸಿತು. ಹಲವಾರು ಶಾಸಕರಿಗೆ ಟಿಕೆಟ್ ನೀಡಲಿಲ್ಲ. 72 ಕ್ಷೇತ್ರಗಳಲ್ಲಿ ಹೊಸಮುಖಗಳಿಗೆ ಮಣೆ ಹಾಕಿತು. ಬಿಜೆಪಿಯ ಈ ನಡೆಯಲ್ಲಿ ದೂರಾಲೋಚನೆ ಮತ್ತು ದುರಾಲೋಚನೆ ಎರಡೂ ಇದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ದೂರಾಲೋಚನೆ ಏನಪಾ ಎಂದರೆ ಪಕ್ಷವನ್ನು ಹೊಸದಾಗಿ ಕಟ್ಟುವುದು. ಆದಷ್ಟೂ ಆಡಳಿತ ವಿರೋಧಿ ಅಲೆಯನ್ನು ತಡೆಯುವುದು. ಕರ್ನಾಟಕದಲ್ಲಿ ಬಿಜೆಪಿ ಎಂದರೆ ಅದೇ ಹಳೇ ಮುಖಗಳು ಎನ್ನುವ ಭಾವನೆಯನ್ನು ತೊಡೆದು ಹಾಕುವುದು. ಹೊಸ ನಾಯಕತ್ವಕ್ಕೆ ಮಣೆ ಹಾಕುವುದು. ಪಕ್ಷ ಸಂಘಟನೆಯಲ್ಲಿ ಹಳಬರನ್ನು ಬಳಸಿಕೊಂಡು ಹೊಸ ಮುಖಗಳಿಗೆ ಅವಕಾಶ ನೀಡುವುದು. ಒಂದು ರಾಜಕೀಯ ಪಕ್ಷಕ್ಕೆ ಇದೆಲ್ಲಾ ಒಳ್ಳೆಯ ಆಲೋಚನೆಗಳೇ ಹೌದು. ಆದರೆ ವಿರೋಧ ಪಕ್ಷಗಳು ಮತ್ತು ಬಿಜೆಪಿಯಲ್ಲಿಯೇ ಇರುವ ಹಲವರು ಇದು ಬರೀ ದೂರಾಲೋಚನೆ ಅಲ್ಲ, ದುರಾಲೋಚನೆಯೂ ಇದೆ ಎಂದು ಗುರುತಿಸುತ್ತಾರೆ.

ಹಾಗಾದರೆ ದುರಾಲೋಚನೆ ಏನು? ಕರ್ನಾಟಕದ ಮಟ್ಟಿಗೆ ಬಿಜೆಪಿ ಎಂದರೆ ಯಡಿಯೂರಪ್ಪ, ಈಶ್ವರಪ್ಪ, ಜಗದೀಶ ಶೆಟ್ಟರ್ ಎಂದಾಗಿತ್ತು. ರಾಜ್ಯದಲ್ಲಿ ಬಿಜೆಪಿ ಪ್ರವರ್ಧಮಾನಕ್ಕೆ ಬಂದಾಗಿನಿಂದ ಈ ಚುನಾವಣೆಯ ಹೊತ್ತಿನವರೆಗೂ ಬಿಜೆಪಿಗೆ ಬಹುಮತ ಪಡೆದರೆ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆಯ ಅಗತ್ಯವೇ ಇರಲಿಲ್ಲ. ಪಕ್ಷದ ಎಲ್ಲ ನಾಯಕರೂ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಲು ಶ್ರಮಪಡುತ್ತಿದ್ದರು ಮತ್ತು ಅದು ಸಹಜ ಆಯ್ಕೆಯಾಗಿತ್ತು. ಆದರೆ ಇದೇ ಮೊದಲ ಬಾರಿಗೆ ಮುಖ್ಯಮಂತ್ರಿ ಯಾರಾಗಬೇಕು ಎನ್ನುವುದಕ್ಕೆ ಸರಳ ಉತ್ತರ ಇಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲೇ ಚುನಾವಣೆ ನಡೆಸುತ್ತೇವೆ ಎಂದು ಕೇಂದ್ರದ ನಾಯಕರು ಹೇಳುತ್ತಾರೆಯೇ ವಿನಾ ಪಕ್ಷ ಅಧಿಕಾರಕ್ಕೆ ಬಂದರೆ ಅವರನ್ನೇ ಮುಖ್ಯಮಂತ್ರಿ ಮಾಡುತ್ತೇವೆ ಎಂದು ನೇರವಾಗಿ ಹೇಳುತ್ತಿಲ್ಲ. ಇಲ್ಲಿದೆ ಅಸಲಿ ಆಟ.

ಮುಖ್ಯಮಂತ್ರಿ ಗಾದಿಗೆ ಟವೆಲ್ ಹಾಕಲು ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿ ಸಾಕಷ್ಟು ಮಂದಿ ಬಿಜೆಪಿಯಲ್ಲಿದ್ದರು. ಅದರಲ್ಲಿ ಮುಖ್ಯರೆಂದರೆ ಜಗದೀಶ ಶೆಟ್ಟರ್, ಕೆ.ಎಸ್.ಈಶ್ವರಪ್ಪ, ಲಕ್ಷ್ಮಣ ಸವದಿ, ಸಿ.ಟಿ.ರವಿ, ಆರ್.ಅಶೋಕ, ಸಿ.ಎಸ್.ಅಶ್ವತ್ಥನಾರಾಯಣ, ವಿ.ಸೋಮಣ್ಣ. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಕ್ಕೆ ಇಳಿಸುವ ಕಾಲದಲ್ಲಿ ಅರವಿಂದ ಬೆಲ್ಲದ ಮತ್ತು ಬಿ.ವೈ.ವಿಜಯೇಂದ್ರ ಅವರ ಹೆಸರುಗಳೂ ಈ ಸ್ಥಾನಕ್ಕೆ ಕೇಳಿಬಂದಿದ್ದವು. ಆದರೆ ಈಗ ಅವರ ಹೆಸರು ಅಷ್ಟೊಂದು ಚಾಲ್ತಿಯಲ್ಲಿ ಇಲ್ಲ. ಬದಲಾದ ಕಾಲದ ಮಹಿಮೆ ಅದು.

ಚುನಾವಣೆ ಘೋಷಣೆಗೆ ಮೊದಲೇ ಯಡಿಯೂರಪ್ಪ ಅವರು ಚುನಾವಣಾ ರಾಜಕೀಯದಿಂದ ನಿವೃತ್ತರಾಗಿಬಿಟ್ಟರು. ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವ ಮೊದಲೇ ಈಶ್ವರಪ್ಪ ಅವರೂ ನಿವೃತ್ತಿ ಘೋಷಿಸಿದರು. ಇದೇ ಸಂದರ್ಭದಲ್ಲಿ ಜಗದೀಶ ಶೆಟ್ಟರ್ ಅವರಿಗೂ ಟಿಕೆಟ್ ನಿರಾಕರಿಸಲಾಯಿತು. ಯಡಿಯೂರಪ್ಪ, ಈಶ್ವರಪ್ಪ ಅವರಂತೆ ಶೆಟ್ಟರ್ ಹೈಕಮಾಂಡ್ ಮಾತು ಕೇಳಲಿಲ್ಲ. ತಿರುಗಿ ಬಿದ್ದರು. ಪಕ್ಷ ತ್ಯಜಿಸಿ ಕಾಂಗ್ರೆಸ್ ಪಕ್ಷ ಸೇರಿದರು. ಅದೇ ರೀತಿ ಲಕ್ಷ್ಮಣ ಸವದಿಗೂ ಟಿಕೆಟ್ ನೀಡುವುದಿಲ್ಲ ಎಂಬ ಸ್ಪಷ್ಟ ಸಂದೇಶ ಹೈಕಮಾಂಡ್‌ನಿಂದ ಬಂದಿತ್ತು. ಅವರೂ ಕಾಂಗ್ರೆಸ್ ಪಕ್ಷ ಸೇರಿದರು. ಇದರಿಂದ ಬಿಜೆಪಿ ಪಕ್ಷಕ್ಕೆ ಲಾಭವಾಯಿತೋ ನಷ್ಟವಾಯಿತೋ ಎನ್ನುವುದು ಚುನಾವಣಾ ಫಲಿತಾಂಶದ ದಿನ ಗೊತ್ತಾಗುತ್ತದೆ. ಆದರೆ ಬಿಜೆಪಿಯಲ್ಲಿ ಮುಖ್ಯಮಂತ್ರಿ ಗಾದಿಗೆ ಸ್ಪರ್ಧಿಸುವ ನಾಲ್ಕು ಮಂದಿ ಕಡಿಮೆಯಾದರು ಎನ್ನುವುದು ಸತ್ಯ.

ಹಳೆ ಬೇರು ಹೊಸ ಚಿಗುರು ಎಂಬ ತತ್ವದ ಆಧಾರದಲ್ಲಿ ಟಿಕೆಟ್ ನೀಡಲಾಗಿದೆ. ವಯಸ್ಸಾದವರನ್ನು ಹಿಂದಕ್ಕೆ ಸರಿಸುವುದು, ವಂಶಾಡಳಿತ ಕೊನೆಗಾಣಿಸುವುದು ಮತ್ತು ಸ್ವಚ್ಛ ಪ್ರಾಮಾಣಿಕ ಮುಖಗಳಿಗೆ ಆದ್ಯತೆ ನೀಡಲು ಈ ರೀತಿ ಮಾಡಲಾಗಿದೆ ಎಂದು ಬಿಜೆಪಿ ನಾಯಕರು ಸಮರ್ಥಿಸಿಕೊಳ್ಳುತ್ತಾರೆ. ಆದರೆ ಇದೆಲ್ಲಾ ಬರೀ ಲೊಳಲೊಟ್ಟೆ ಅಷ್ಟೆ. ಬಿಜೆಪಿ ಪ್ರಕಟಿಸಿರುವ ಟಿಕೆಟ್ ಪಟ್ಟಿಯನ್ನು ನೋಡಿದರೆ ಅದರಲ್ಲಿ ಅಣ್ಣ, ತಮ್ಮ, ಅಪ್ಪ–ಮಗ, ಸೊಸೆ, ಹೆಂಡತಿ ಹೀಗೆ ಎಲ್ಲರಿಗೂ ಟಿಕೆಟ್ ನೀಡಲಾಗಿದೆ. ರೌಡಿ ಶೀಟರ್‌ಗಳಿಗೂ ಟಿಕೆಟ್ ಸಿಕ್ಕಿದೆ. 70 ಗಡಿ ದಾಟಿದವರೂ ಟಿಕೆಟ್ ಪಡೆದುಕೊಂಡಿದ್ದಾರೆ.

ರಾಜ್ಯದಲ್ಲಿ ಶೇ 40 ಭ್ರಷ್ಟಾಚಾರದ ಆರೋಪ ಭುಗಿಲೆದ್ದಾಗ ಮತ್ತು ಮೀಸಲಾತಿ ಹೋರಾಟಗಳು ಹೆಚ್ಚಾದಾಗಲೇ ಈ ಬಾರಿ ಸ್ವಂತ ಬಲದಲ್ಲಿ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ ಎನ್ನುವುದು ಬಿಜೆಪಿಗೆ ಮನದಟ್ಟಾಗಿತ್ತು. ಆಡಳಿತ ವಿರೋಧಿ ಅಲೆ ಸಾಕಷ್ಟು ಕಾಣಿಸಿಕೊಂಡಿತ್ತು. ಬಿಜೆಪಿ ಆಂತರಿಕವಾಗಿ ನಡೆಸಿದ ಸಮೀಕ್ಷೆಗಳಲ್ಲಿಯೂ ಪಕ್ಷಕ್ಕೆ ಬಹುಮತ ಬರುವ ಸಾಧ್ಯತೆ ಇಲ್ಲ ಎನ್ನುವುದು ಗ್ಯಾರಂಟಿಯಾಗಿತ್ತು. ಹೊಸ ಪ್ರಯೋಗ ಮಾಡುವುದಕ್ಕೆ ಇದೇ ಸಕಾಲ ಎಂದು ಬಿಜೆಪಿ ಹೈಕಮಾಂಡ್ ಚಿಂತನೆ ಮಾಡಿರಲಿಕ್ಕೂ ಸಾಕು. ಈಗ ಹೊಸ ಸಾಹಸಕ್ಕೆ ಕೈಹಾಕಿದರೆ ‘ಹೋದರೆ ಒಂದು ಕಲ್ಲು, ಬಿದ್ದರೆ ಮಾವಿನಕಾಯಿ’ ಎನ್ನುವುದು ಅದರ ಆಲೋಚನೆಯಾಗಿದೆ ಎಂದು ಪಕ್ಷದೊಳಗಿನವರೇ ಹೇಳುವ ಮಾತು. ಹೊಸ ಪ್ರಯೋಗ ಈಗಲೂ ಮಾಡದಿದ್ದರೆ ಮತ್ಯಾವಾಗ ಮಾಡುವುದು ಎಂದೂ ಹಿರಿಯ ನಾಯಕರು ಪ್ರಶ್ನೆ ಮಾಡುತ್ತಾರೆ.

ಟಿಕೆಟ್ ಹಂಚಿಕೆಯಲ್ಲಿ ಮಾಡಿದ ಪ್ರಯೋಗ ಚುನಾವಣೆಯಲ್ಲಿಯೂ ಮುಂದುವರಿಯುತ್ತದಾ ಎಂಬ ಪ್ರಶ್ನೆಯೂ ಇದೆ. ಅದಕ್ಕೆ ಸಾಕ್ಷಿ ಎಂದರೆ ಆರ್.ಅಶೋಕ ಮತ್ತು ವಿ.ಸೋಮಣ್ಣ ಅವರಿಗೆ ಎರಡು ಕಡೆ ಟಿಕೆಟ್ ನೀಡಿದ್ದು. ಅಶೋಕ ಅವರು ಒಕ್ಕಲಿಗರು. ಅವರನ್ನು ಒಕ್ಕಲಿಗ ನಾಯಕನನ್ನಾಗಿ ಮಾಡಲು ಪಕ್ಷ ಸಾಕಷ್ಟು ಪ್ರಯತ್ನ ಪಟ್ಟಿತು. ಮಂಡ್ಯ, ರಾಮನಗರ ಉಸ್ತುವಾರಿಯನ್ನಾಗಿ ಮಾಡಿತು. ಕೆಂಪೇಗೌಡ ಪ್ರತಿಮೆ ಸ್ಥಾಪನೆಯಲ್ಲಿ ಸಾಕಷ್ಟು ಅವಕಾಶ ನೀಡಿತು. ಅವರು ಉಪಮುಖ್ಯಮಂತ್ರಿಯೂ ಆಗಿದ್ದವರು. ಕಂದಾಯ ಸಚಿವರಾಗಿಯೂ ಸಾಕಷ್ಟು ಕೆಲಸ ಮಾಡಿದ್ದರು. ಕನಕಪುರದಲ್ಲಿ ಡಿ.ಕೆ.ಶಿವಕುಮಾರ್ ಅವರನ್ನು ಎದುರಿಸುವ ಸಾಹಸಕ್ಕೆ ಅವರನ್ನು ಇಳಿಸುವ ಮೂಲಕ ಅವರಿಗೆ ಅಂತಿಮ ಅವಕಾಶ ನೀಡಲಾಗಿದೆ. ಇದರಲ್ಲಿ ಗೆದ್ದರೆ ಅವರು ಒಕ್ಕಲಿಗರ ನಾಯಕರಾಗಿ ಹೊರಹೊಮ್ಮುತ್ತಾರೆ. ಸೋತರೆ? ಕಾಲವೇ ಉತ್ತರಿಸಬೇಕು.

ಇದೇ ತಂತ್ರ ಸೋಮಣ್ಣ ವಿಚಾರದಲ್ಲಿಯೂ ಅನುಸರಿಸಲಾಗಿದೆ. ರಾಮಕೃಷ್ಣ ಹೆಗಡೆ ಅವರ ನಂತರ ಲಿಂಗಾಯತರಿಗೆ ಯಡಿಯೂರಪ್ಪ ಅವರೇ ಸರ್ವಶ್ರೇಷ್ಠ ನಾಯಕ. ಅದರಲ್ಲಿ ಅನುಮಾನವೇ ಇಲ್ಲ. ಆದರೆ ಈ ಬಾರಿ ಅವರು ಚುನಾವಣೆಗೆ ಸ್ಪರ್ಧೆ ಮಾಡದೇ ಇರುವುದರಿಂದ ಅವರಂತೂ ಮುಂದೆ ಮುಖ್ಯಮಂತ್ರಿಯಾಗುವ ಸಾಧ್ಯತೆಗಳಿಲ್ಲ. ಲಿಂಗಾಯತ ಮಠಗಳೊಂದಿಗೆ ಆತ್ಮೀಯ ಸಂಬಂಧ ಹೊಂದಿದವರಲ್ಲಿ ಅಗ್ರಗಣ್ಯರು ಎಂದರೆ ಯಡಿಯೂರಪ್ಪ ಬಿಟ್ಟರೆ ಅದು ಸೋಮಣ್ಣ ಮಾತ್ರ. ಅವರಿಗೂ ಚಾಮರಾಜನಗರ ಮತ್ತು ವರುಣ ಕ್ಷೇತ್ರಗಳ ಟಿಕೆಟ್ ನೀಡಲಾಗಿದೆ. ಅವರೂ ಸಹ ಗೆದ್ದು ಬಂದರೆ ಯಡಿಯೂರಪ್ಪ ಉತ್ತರಾಧಿಕಾರಿ. ಇಲ್ಲವಾದರೆ ಅವರಿಗೂ ನಿವೃತ್ತಿಯೇ ಗತಿ. ಎಂಬಲ್ಲಿಗೆ ಬಿಜೆಪಿಯಲ್ಲಿ ಮುಖ್ಯಮಂತ್ರಿ ಕುರ್ಚಿಗೆ ಟವೆಲ್ ಹಾಕುವ ಇನ್ನಿಬ್ಬರಿಗೂ ತಡೆ ಒಡ್ಡಿದಂತಾಗಿದೆ.

ಶೆಟ್ಟರ್ ಕಾಂಗ್ರೆಸ್ ಸೇರಿರುವುದರಿಂದ ಉತ್ತರ ಕರ್ನಾಟಕದಲ್ಲಿ ಬಿಜೆಪಿಯನ್ನು ಗೆಲ್ಲಿಸುವ ಜವಾಬ್ದಾರಿ ಕೊಂಚವಾದರೂ ಅರವಿಂದ ಬೆಲ್ಲದ ಅವರ ಮೇಲಿದೆ. ಅದರಲ್ಲಿ ಅವರು ಗೆದ್ದರೆ ಹೈಕಮಾಂಡ್ ಗಮನ ಸೆಳೆಯಬಹುದು. ಇಲ್ಲವಾದರೆ ಅವರ ಓಟಕ್ಕೂ ತಡೆ. ಅಲ್ಲಿಗೆ ಬಿಜೆಪಿಯಲ್ಲಿ ಮುಖ್ಯಮಂತ್ರಿ ಹುದ್ದೆಗೆ ಸ್ಪರ್ಧೆ ಮಾಡುವ ಏಳು ಮಂದಿ ಹೊರಬಿದ್ದಂತಾಗಿದೆ. ಆದರೂ ಇನ್ನೂ ಕೆಲವರಿದ್ದಾರೆ. ಅವರಿಗೆ ಚುನಾವಣಾ ಕಣದಲ್ಲಿಯೇ ಅಡೆತಡೆಗಳು ಎದುರಾಗಬಹುದು ಯಾರಿಗೆ ಗೊತ್ತು? ಸೋಲ್ತಾರಾ? ಗೆಲ್ತಾರಾ? ಮೇ 13ಕ್ಕೆ ಗೊತ್ತಾಗುತ್ತದೆ. ಆದರೆ ಒಂದಂತೂ ನಿಜ. ಈ ಬಾರಿ ಚುನಾವಣಾ ಫಲಿತಾಂಶ ಅಚ್ಚರಿಗಳ ಮೂಟೆಯಾಗಿರುತ್ತದೆ. ಹೊಸ ಹೊಸ ಅಚ್ಚರಿಗಳನ್ನು ನೋಡಲು ನಾವು ಸಿದ್ಧರಾಗಬೇಕು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT