ಶನಿವಾರ, ಫೆಬ್ರವರಿ 27, 2021
25 °C

ಧರ್ಮಕ್ಕೆ ರಾಜಕಾರಣ ಬೆರೆಸಿದರೆ ಕಲಬೆರಕೆ ಅಲ್ಲವಂತೆ!

ಪ್ರಕಾಶ್ ರೈ Updated:

ಅಕ್ಷರ ಗಾತ್ರ : | |

Deccan Herald

ಅಂದು
ನಮ್ಮ ಬಳಿ ಭೂಮಿಯಿತ್ತು
ಅವರ ಬಳಿ ಬೈಬಲ್ ಇತ್ತು.
ಇಂದು
ನಮ್ಮ ಕೈಗಳಲ್ಲಿ ಬೈಬಲ್ ಇದೆ
ನಮ್ಮ ಭೂಮಿಯೆಲ್ಲ ಅವರ ವಶದಲ್ಲಿದೆ.

ಆಫ್ರಿಕಾದ ಡೆಸ್ಮಂಡ್ ಟುಟು ಎಂಬ ಕವಿಯ ಪದ್ಯ ಇದು. ಮನುಷ್ಯನನ್ನು ಸಂಕಷ್ಟಗಳಿಂದ ಧರ್ಮ- ದೇವರು ಬಿಡುಗಡೆಗೊಳಿಸುತ್ತವೆ ಎಂದು ನಂಬಿ ಮೋಸಹೋದ ಕವಿಯೊಬ್ಬನ ಈ ಅಳಲಿನಲ್ಲಿ ಶತಮಾನಗಳ ಇತಿಹಾಸವಿದೆ. ಧರ್ಮವನ್ನು ರಾಜಕೀಯವು ಹೇಗೆ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತದೆ ಅನ್ನುವುದಕ್ಕೆ ಸಾಕ್ಷಿ ಇದು. ಇದು ಈ ಕಾಲದ ಬಾಬತ್ತು ಅಲ್ಲವೇ ಅಲ್ಲ. ಮನುಷ್ಯ ಹುಟ್ಟಿದಾಗಿನಿಂದ, ಅಧಿಕಾರವೆಂಬ ಅಮಲಿಗೆ ಆತ ತನ್ನನ್ನು ಒಡ್ಡಿಕೊಂಡ ದಿನದಿಂದಲೇ ಈ ಹುನ್ನಾರವನ್ನು ಅಧಿಕಾರದಲ್ಲಿ ಇರುವವರು ಮಾಡಿಕೊಂಡೇ ಬಂದಿದ್ದಾರೆ.

‘ಧರ್ಮದ ಅಫೀಮು ಸೇವಿಸುವಂತೆ ಮಾಡುವುದು ಸುಲಭ’ ಅಂದಿದ್ದರು ಖುಷ್ವಂತ್ ಸಿಂಗ್. ಆ ಚಟದಿಂದ ಪಾರಾಗುವುದು ಸುಲಭ ಅಲ್ಲವೇ ಅಲ್ಲ. ಧರ್ಮದ ಹೆಸರಿನಲ್ಲಿ ಏನು ಮಾಡಿದರೂ ಇಲ್ಲಿ ಸಹ್ಯ. ಅದು ಅಪರಾಧವಲ್ಲ, ಧರ್ಮಹತ್ಯೆ. ಬಲಿಯೆಂಬುದು ಪವಿತ್ರವಾದದ್ದು. ಧರ್ಮವಿರೋಧಿಯನ್ನು ಗುಂಡಿಕ್ಕಿಯೋ ಇರಿದೋ ಸಾಯಿಸುವುದು, ಅದನ್ನು ಕೊಂಡಾಡುವುದು ಕೂಡ ನಮ್ಮಲ್ಲಿ ಕಿಂಚಿತ್ತೂ ಪಾಪಪ್ರಜ್ಞೆಯನ್ನು ಹುಟ್ಟುಹಾಕುವುದಿಲ್ಲ. ತಮಾಷೆಯೆಂದರೆ ಕೊಲ್ಲುವ ಮೂಲಕ ಹಿಂಸೆಯ ಮೂಲಕ ನಾವು ಧರ್ಮವನ್ನು ರಕ್ಷಿಸುತ್ತಾ ಇದ್ದೇವೆ ಎಂದು ಭಾವಿಸುತ್ತೇವೆ. ಅಹಿಂಸಾ ಪರಮೋಧರ್ಮಃ ಎಂದು ಹೇಳುವ ಧರ್ಮವನ್ನೂ ನಾವು ಹಿಂಸೆಯಿಂದಲೇ ಉಳಿಸಲು ನೋಡುವುದು ಮಾತ್ರ ವಿಪರ್ಯಾಸ.

ಒಂದು ಪುಟ್ಟ ಕತೆ ನೆನಪಾಗುತ್ತಿದೆ.

ಒಂದೂರು. ಅಲ್ಲೊಂದು ದೇವಾಲಯ. ಆ ದೇವಾಲಯದಲ್ಲಿ ಭಕ್ತರಿಗೆ ಕುಡಿಯಲಿಕ್ಕೆ ತೀರ್ಥ ಕೊಡುತ್ತಿರುತ್ತಾರೆ. ಅದೇ ಊರಿನ ಒಬ್ಬ ವಿಜ್ಞಾನಿ ಆ ತೀರ್ಥ ಕುಡಿಯಬೇಡಿ. ಅದರಲ್ಲಿ ರೋಗ ತರುವಂಥ ಬ್ಯಾಕ್ಟೀರಿಯಾಗಳು ಸೇರಿವೆ. ಅದು ಕುಡಿಯಲಿಕ್ಕೆ ಸರ್ವಥಾ ಯೋಗ್ಯವಲ್ಲ ಅನ್ನುತ್ತಾನೆ. ಆತನಿಗೆ ಇಡೀ ಊರಿನ ಮಂದಿ ಬಹಿಷ್ಕಾರ ಹಾಕುತ್ತಾರೆ. ಶಿಕ್ಷೆ ಕೊಡುತ್ತಾರೆ. ಮನುಕುಲವನ್ನು ಉಳಿಸಲು ಹೊರಟ ಅವನನ್ನು ಮಾನವತೆಯ ಶತ್ರು ಎಂಬಂತೆ ಬಿಂಬಿಸುತ್ತಾರೆ.

ನಮ್ಮಲ್ಲಿ ಆಗುತ್ತಿರುವುದು ಅದೇ ಅಲ್ಲವೇ? ಧರ್ಮವನ್ನೂ ರಾಜಕೀಯವನ್ನೂ ಬೆರೆಸಬೇಡಿ ಎಂದರೆ ಅಧಿಕಾರದಲ್ಲಿ ಇರುವವರಿಗೆ ಸಿಟ್ಟು ಬರುತ್ತದೆ. ಅವರೋ ಧರ್ಮವನ್ನೇ ತಮ್ಮ ಆಯುಧವನ್ನಾಗಿ ಮಾಡಿಕೊಂಡವರು. ಪ್ರತಿಯೊಬ್ಬ ರಾಜಕಾರಣಿಯೂ ತಮ್ಮ ತಮ್ಮ ಮೆಚ್ಚಿನ ಧರ್ಮದ ದೇವರುಗಳ ಕೈಗೊಂದು ಆಯುಧ ತುರುಕಿ ಯುದ್ಧಮಾಡಿಸುತ್ತಾರೆ. ಧರ್ಮದ ಹೆಸರಲ್ಲಿ ಕೊಲೆಗಳು ನಡೆಯುತ್ತವೆ. ಆ ಕೊಲೆಗಳನ್ನು ಖಂಡಿಸಿದವನ ಧರ್ಮ ಯಾವುದು ಎಂದು ನೋಡಲಾಗುತ್ತದೆ. ಧರ್ಮ ಮತ್ತು ಜಾತಿಯ ಹೆಸರಿನಿಂದಲೇ ಆತನನ್ನು ನಿಂದಿಸಲಾಗುತ್ತದೆ.

ಹೇಗೆ ಈ ಧರ್ಮವೆಂಬುದು ನಮ್ಮ ಏಕಾಂತದ, ವೈಯಕ್ತಿಕ ಆಚರಣೆ ಮಾತ್ರವೇ ಆಗದೇ ಸಾರ್ವಜನಿಕ ಜೀವನವನ್ನೂ ಕಲುಷಿತಗೊಳಿಸುವ ಸಂಗತಿಯಾಗಿದೆ ಎನ್ನುವುದನ್ನು ಯೋಚಿಸಿದಾಗ ಆತಂಕವಾಗುತ್ತದೆ. ಎಲ್ಲ ದೇವರೂ ಒಂದೇ ಎಂದು ಹೇಳುತ್ತೇವೆ, ನಂಬುವುದಿಲ್ಲ.

‘ಬೇಲಿಯೇ ಎದ್ದು ಹೊಲ ಮೇಯುವ ಹಾಗೆ’ ಎಂಬ ಗಾದೆಯೊಂದಿದೆ. ನಾವು ಅದನ್ನು ತಿರುಚಿಬಿಟ್ಟಿದ್ದೇವೆ. ಬೇಲಿಯನ್ನು ನಾವೇ ಹಾಕಿ, ಅದರೊಳಗೆ ಮೇಯಲು ನೋಡುತ್ತೇವೆ. ಅದು ಧರ್ಮದ ಬೇಲಿ. ಆ ಬೇಲಿಯನ್ನು ದಾಟುವುದು ಅಕ್ರಮ, ಅಪವಾದ, ಪಾಪ... ಎಂದೆಲ್ಲ ಭಾಷಣ ಮಾಡುತ್ತೇವೆ. ನಂಬಿಸುತ್ತಾ ಹೋಗುತ್ತವೆ. ಆ ನಂಬಿಕೆಯನ್ನು ಬಲಗೊಳಿಸುವ ಹುನ್ನಾರಗಳು ನಡೆಯುತ್ತಲೇ ಇರುತ್ತವೆ.

ಇತ್ತೀಚೆಗೆ ಗೋಹತ್ಯೆಯ ಗುಮಾನಿಯ ಮೇಲೆ ಥಳಿಸುವುದು, ಕೊಲೆ ಮಾಡುವುದು, ಧರ್ಮವನ್ನು ಧಿಕ್ಕರಿಸಿದ ಎಂದು ಹಲ್ಲೆ ನಡೆಸುವುದು, ‘ಧರ್ಮಗ್ರಂಥಗಳ ವಿರುದ್ಧ ಮಾತಾಡಿದವರನ್ನು ಕೊಲ್ಲಿ’ ಎಂದು ಕರೆ ನೀಡುವುದು- ಹೀಗೆ ಏನನ್ನು ಬೇಕಿದ್ದರೂ ಸಮರ್ಥಿಸಿಕೊಳ್ಳಬಹುದಾದ ಧರ್ಮವನ್ನು ನಾವು ಹೇಗೆ ನೋಡುತ್ತೇವೆ? ವೈಯಕ್ತಿಕವಾಗಿ ನಮಗೆ ಮತ್ತೊಬ್ಬರ ಮೇಲೆ ದ್ವೇಷವಿಲ್ಲ. ನಮಗೆ ಯಾರನ್ನು ಕೊಲ್ಲುವುದೂ ಬೇಕಿಲ್ಲ. ಆದರೆ ಧರ್ಮಕ್ಕಾಗಿ ಕೊಲ್ಲುತ್ತೇವೆ. ಅಂದರೆ ಇಲ್ಲಿ ಕೊಲ್ಲುವವನು ನೆಪ ಮಾತ್ರ. ತಾನು ಕೊಲ್ಲುವುದು ಒಂದು ಮಹತ್ತರವಾದ ಕಾರ್ಯಸಾಧನೆಗೆ ಎಂದು ಆತ ನಂಬುವಂತೆ ಮಾಡುವುದೇ ಧರ್ಮಕ್ಕಿರುವ ಶಕ್ತಿ. ಈ ಅಂಶಗಳನ್ನು ಆತನಲ್ಲಿ ತುಂಬುವವರು ಯಾರು ಎಂದು ಯೋಚಿಸಿ. ಅವರು ನಮ್ಮ ರಾಜಕಾರಣಿಗಳಲ್ಲದೇ ಮತ್ಯಾರೂ ಅಲ್ಲ. ಅದಕ್ಕೆ ಧರ್ಮಗುರುಗಳು ಜೊತೆಯಾಗುತ್ತಿದ್ದಾರೆ.

‘ಅಯ್ಯಾ, ಧರ್ಮಕ್ಕೆ ಹಾನಿಯಾಗುತ್ತಿದೆ. ನೀನೇನು ಮಾಡುತ್ತಿದ್ದೀಯಾ’ ಅಂತ ಕೇಳುವ ಮೂಲಕ ಪ್ರಚೋದಿಸುವ ಕೆಲಸವನ್ನು ಅವರು ಮಾಡುತ್ತಾರೆ.

‘ಧರ್ಮೋ ರಕ್ಷತಿ, ರಕ್ಷಿತಃ’ ಎಂಬ ಮಾತಿನ ಅರ್ಥ ಯಾರು ಧರ್ಮವನ್ನು ರಕ್ಷಿಸುತ್ತಾರೋ ಅವರನ್ನು ಧರ್ಮವು ರಕ್ಷಿಸುತ್ತದೆ ಅನ್ನುವುದು ಮಾತ್ರ. ಅದು ನಾವು ಈಗ ನೋಡುತ್ತಿರುವ ರಾಜಕೀಯ ಧರ್ಮಗಳ ಕುರಿತಾದ ಮಾತು ಅಲ್ಲ. ಅವರು ಮಾತಾಡುತ್ತಿರುವುದು ಮಾನವ ಧರ್ಮದ ಮೇಲೆ. ದಯೆಯೇ ಧರ್ಮದ ಮೂಲವಯ್ಯಾ ಎಂದು ಸಾರಿದಂಥ ಧರ್ಮದ ಕುರಿತು.

ಇತ್ತೀಚಿನ ಪ್ರಸಂಗ ನೆನಪಾಗುತ್ತಿದೆ. ನಮ್ಮ ತಮಿಳುನಾಡಿನ ತೂತ್ತುಕುಡಿಯಲ್ಲಿರುವ ಸ್ಟರ್‌ಲೈಟ್ ಕಾಪ್ಪರ್ ಎಂಬ ತಾಮ್ರ ತಯಾರಿಸುವ ಫ್ಯಾಕ್ಟರಿ ಇತ್ತು. ಅದರಿಂದ ಹೊರಬರುವ ಕಲುಷಿತ ನೀರನ್ನು ನದಿಗೆ ಬಿಡಲಾಗುತ್ತಿತ್ತು. ಅದರಿಂದಾಗಿ ಮೀನುಗಳು ಸಾಯುತ್ತಿದ್ದವು, ಆ ನೀರನ್ನು ಕುಡಿದ ಮಂದಿಗೆ ರೋಗ ಬರುತ್ತಿತ್ತು. ಎಷ್ಟೋ ವರ್ಷಗಳ ಕಾಲ ಆ ನೀರನ್ನು ಕುಡಿದವರು ಅನಾರೋಗ್ಯದಿಂದ ಬಳಲುತ್ತಿದ್ದರಲ್ಲದೇ, ಅವರಿಗೆ ಹುಟ್ಟುವ ಮಕ್ಕಳು ಕೂಡ ಅಂಗವೈಕಲ್ಯದಿಂದ ನರಳುತ್ತಿದ್ದರು.

ಇದನ್ನು ಪ್ರತಿಭಟಿಸಿ ಹೋರಾಟ ನಡೆಯುತ್ತದೆ. ತಾಮ್ರದ ಕಿಲುಬು ಈ ಎಲ್ಲಾ ಅನಾರೋಗ್ಯಕ್ಕೆ ಕಾರಣ ಅನ್ನುವುದು ಗೊತ್ತಾಗುತ್ತದೆ. ತಾಮ್ರದ ಫ್ಯಾಕ್ಟರಿಯನ್ನು ತಾಮ್ರದ ಗಣಿಗಾರಿಕೆಯನ್ನು ಮುಚ್ಚಬೇಕು ಎಂದು ಹೋರಾಟ ಶುರುವಾಗುತ್ತದೆ. ಆದರೆ ‘ಸ್ವಾಮೀಜಿ’ ಎಂದು ಕರೆಸಿಕೊಳ್ಳುವ ಒಬ್ಬ ವ್ಯಕ್ತಿ ಈ ಹೋರಾಟವನ್ನು ತೆಳುವಾಗಿಸಲು ಯತ್ನಿಸುತ್ತಾನೆ. ಆತ ಹೂಡುವ ವಾದವೂ ವಿಚಿತ್ರವಾಗಿರುತ್ತದೆ.

‘ತಾಮ್ರ ಶ್ರೇಷ್ಠವಾದದ್ದು. ನಾವೆಲ್ಲ ತಾಮ್ರದ ಪಾತ್ರೆಯಲ್ಲೇ ದೇವರಿಗೆ ಅಭಿಷೇಕ ಮಾಡುತ್ತೇವೆ. ತಾಮ್ರದ ಪಾತ್ರೆಗಳಲ್ಲಿ ತೀರ್ಥ ಸಂಗ್ರಹಿಸಿಟ್ಟು ಅದನ್ನು ಭಕ್ತಾದಿಗಳಿಗೆ ಕೊಡುತ್ತೇವೆ. ಇದನ್ನು ಶತಶತಮಾನಗಳಿಂದ ಮಾಡುತ್ತಾ ಬಂದಿದ್ದೇವೆ. ನಮಗೇನೂ ಆಗಿಲ್ಲ. ತಾಮ್ರದಿಂದ ರೋಗ ಬರುತ್ತದೆ ಎಂಬುದು ಸುಳ್ಳು. ಈ ಫ್ಯಾಕ್ಟರಿಯನ್ನು ಮುಚ್ಚಬೇಕಾಗಿಲ್ಲ...’

ಧರ್ಮವನ್ನು ನೇರವಾಗಿ ವಿಜ್ಞಾನದ ಜೊತೆ ಮುಖಾಮುಖಿ ಆಗಿಸುವ ಉಪಾಯ ಎಷ್ಟು ಕ್ರೌರ್ಯದ್ದು ಅನ್ನುವುದನ್ನು ನೋಡಿ. ತಾಮ್ರದ ಗಣಿಗಾರಿಕೆಯ ಹಂತದಲ್ಲಿ ಹೊರಬರುವ ಕಲುಷಿತ ನೀರೇ ಬೇರೆ, ತಾಮ್ರದ ಪಾತ್ರೆಯ ತಯಾರಿಕೆಯ ಸಂದರ್ಭದಲ್ಲಿ ಬಳಸಲಾಗುವ ರಾಸಾಯನಿಕಗಳೇ ಬೇರೆ, ತಾಮ್ರದ ಪಾತ್ರೆಯ ಗುಣವೇ ಬೇರೆ. ಆದರೆ ತಾಮ್ರವನ್ನು ದೈವತ್ವಕ್ಕೇರಿಸಿದರೆ, ಅದರ ವಿರುದ್ಧ ಎಲ್ಲಾ ಆರೋಪಗಳೂ ಕೊನೆಗೊಂಡಂತೆ. ದೇವರನ್ನು ಪ್ರಶ್ನಿಸುವುದು ಸಾಧ್ಯವೇ ಇಲ್ಲ. ಅಲ್ಲಿಗೆ ವಿಜ್ಞಾನದ ವಾದ ಧಾರ್ಮಿಕ ಕಲಹವಾಗಿ ಬದಲಾಗುತ್ತದೆ, ಅದಕ್ಕೆ ರಾಜಕೀಯವಾದ ಸ್ವರೂಪ ಬರುತ್ತದೆ. ಯಾವನೋ ಒಬ್ಬ ಬಂಡವಾಳಶಾಹಿಯ ಫ್ಯಾಕ್ಟರಿ ಉಳಿದುಕೊಳ್ಳುತ್ತದೆ. ಆ ನದಿದಂಡೆಯ ಮಂದಿ ಸಾಯುತ್ತಲೇ ಇರುತ್ತಾರೆ. ಧರ್ಮ ಹೀಗೂ ಕೊಲ್ಲಬಲ್ಲುದು ಎಂಬುದು ಯಾರಿಗೂ ಸುಲಭವಾಗಿ ಅರ್ಥವಾಗುವುದಿಲ್ಲ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎನ್ನುವಂತೆ ಈ ಸ್ವಾಮೀಜಿಗೆ ಪ್ರತಿಯಾಗಿ ಇನ್ನೊಬ್ಬ ಸ್ವಾಮೀಜಿಯ ಕತೆಯನ್ನು ಹೇಳುತ್ತೇನೆ ಕೇಳಿ. ಧರ್ಮಸೂಕ್ಷ್ಮ ಎಂದರೇನು ಎನ್ನುವುದನ್ನು ಹೇಳುವ ಕತೆ ಅದು.

ಒಬ್ಬ ಸ್ವಾಮೀಜಿ ಕುದುರೆಯೇರಿ ಕಾಡಿನ ಹಾದಿಯಲ್ಲಿ ಹೋಗುತ್ತಿರುತ್ತಾರೆ. ಅವರಿಗೆ ದಾರಿಯಲ್ಲೊಬ್ಬ ವ್ಯಕ್ತಿ ಬಳಲಿ ಬಿದ್ದಿರುವುದು ಕಾಣಿಸುತ್ತದೆ. ಸ್ವಾಮೀಜಿ ಕುದುರೆಯಿಂದ ಇಳಿದು ಅವನನ್ನು ಕುದುರೆಗೆ ಹತ್ತಿಸಿ, ತಾನು ನಡೆದುಕೊಂಡು ಹೋಗಲು ತೀರ್ಮಾನಿಸುತ್ತಾರೆ. ಆದರೆ ಕೆಳಗೆ ಬಿದ್ದಿದ್ದ ವ್ಯಕ್ತಿ ಕುದುರೆ ಏರುತ್ತಿದ್ದಂತೆ, ನಾಗಾಲೋಟದಲ್ಲಿ ಕುದುರೆಯನ್ನು ಓಡಿಸಿಕೊಂಡು ಹೋಗಿ ಮಾಯವಾಗತ್ತಾನೆ. ಆತ ಕಳ್ಳನೆಂದು ಸ್ವಾಮೀಜಿಗೆ ಗೊತ್ತಾಗುತ್ತದೆ.

ಇದಾಗಿ ಕೆಲವು ದಿನಗಳ ನಂತರ ಸ್ವಾಮೀಜಿ ಕುದುರೆ ಕೊಳ್ಳಲಿಕ್ಕೆ ಸಂತೆಗೆ ಹೋಗುತ್ತಾರೆ. ಅಲ್ಲಿ ಅದೇ ಕಳ್ಳ, ಅದೇ ಕುದುರೆಯನ್ನು ಮಾರಾಟಕ್ಕಿಟ್ಟಿರುತ್ತಾನೆ. ಸ್ವಾಮೀಜಿಯನ್ನು ನೋಡುತ್ತಿದ್ದಂತೆ ಆತ ಗಾಬರಿಯಾಗುತ್ತಾನೆ. ಸ್ವಾಮೀಜಿ ಆತನ ಬಳಿ ಹೋಗಿ, ಅವನ ಕಿವಿಯಲ್ಲಿ ಹೇಳುತ್ತಾರೆ...

‘ನೋಡಯ್ಯಾ, ನೀನು ಗಾಬರಿ ಆಗಬೇಕಿಲ್ಲ. ನೀನು ಕಳ್ಳ ಎಂದು ನಾನು ಯಾರಿಗೂ ಹೇಳುವುದಿಲ್ಲ. ನೀನು ನನ್ನ ಕುದುರೆಯನ್ನು ನನಗೆ ವಾಪಸ್ಸು ಕೊಡುವ ಅಗತ್ಯವೂ ಇಲ್ಲ. ಆದರೆ ನೀನು ಕುದುರೆ ಕದ್ದಿರುವ ಸಂಗತಿಯನ್ನು ಯಾರಿಗೂ ಹೇಳಬೇಡ. ಯಾಕೆಂದರೆ ನೀನು ನನ್ನ ಕುದುರೆ ಕದ್ದಿದ್ದು ಜಗತ್ತಿಗೆ ಗೊತ್ತಾದರೆ, ಮುಂದೆ ನಿಜವಾಗಿಯೂ ಬಳಲಿ ಬಿದ್ದಿರುವ ವ್ಯಕ್ತಿಗೆ ಮತ್ತೊಬ್ಬ ಕುದುರೆ ಸವಾರ ಸಹಾಯ ಮಾಡುವುದಕ್ಕೆ ಹೋಗುವುದಿಲ್ಲ. ನಿನ್ನಿಂದಾಗಿ ನಿಜವಾಗಿಯೂ ನೆರವು ಬೇಕಾಗಿರುವ ಒಬ್ಬನಿಗೆ ಅನ್ಯಾಯ ಆಗುತ್ತದೆ. ಹಾಗಾಗುವುದು ನನಗಿಷ್ಟವಿಲ್ಲ’.

ಇಂಥ ಧರ್ಮಸೂಕ್ಷ್ಮ ಗಾಂಧೀಜಿಗೆ ಇತ್ತು. ದೇಶಕ್ಕೆ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಅವರು ಆ ಸಂಭ್ರಮಾಚರಣೆಯಲ್ಲಿ ಭಾಗಿಯಾಗಲಿಲ್ಲ. ಬಂಗಾಳದ ವಿಷಣ್ಣತೆಯ ನಡುವೆ ಅಲೆದಾಡುತ್ತಿದ್ದರು. ಒಂದು ದೇಶದ ಬಾವುಟವನ್ನು ಕೆಳಗಿಳಿಸಿ, ನಮ್ಮ ದೇಶದ ಬಾವುಟವನ್ನು ಮೇಲೇರಿಸುವ ಹೊತ್ತಲ್ಲಿ, ಯಾವ ದೇಶದ ಬಾವುಟವನ್ನು ಇಳಿಸಲಾಗುತ್ತದೆಯೋ ಆ ದೇಶದ ಜನರ ಮನಸ್ಸಿಗಾಗುವ ನೋವನ್ನು ಅರ್ಥಮಾಡಿಕೊಳ್ಳಬಲ್ಲ ಶಕ್ತಿ ಅವರಿಗಿತ್ತು. ‘ಹಿಂದು ಮುಸ್ಲಿಂ ಮಾರಣಹೋಮದ ನಡುವೆ ಈ ಸಂಭ್ರಮದ ಆಚರಣೆ ಬೇಕೇನು’ ಅಂತ ಕೇಳಿದ್ದರಿಂದಲೇ ಅವರು ಮಹಾತ್ಮರಾದರು. ಧರ್ಮಸೂಕ್ಷ್ಮಗಳು ಗೊತ್ತಿದ್ದವರು ಮಾತ್ರ ಧಾರ್ಮಿಕ ವ್ಯಕ್ತಿ. ಮಿಕ್ಕವರು ಧರ್ಮದ ಮುಖವಾಡ ತೊಟ್ಟಿರುತ್ತಾರೆ ಅಷ್ಟೇ.

ಇವತ್ತು, ರಾಜಕಾರಣ ಮತ್ತು ಧರ್ಮದ ಅಪವಿತ್ರ ಮೈತ್ರಿಯ ಬಗ್ಗೆ ಯಾರೂ ಮಾತಾಡುತ್ತಿಲ್ಲ. ಧರ್ಮ ಮತ್ತು ರಾಜಕಾರಣ ಒಂದೇ ಎಂದು ಎಲ್ಲರೂ ಒಪ್ಪಿಕೊಂಡ ಹಾಗಿದೆ. ರಾಜಕೀಯದ ಎತ್ತರಕ್ಕೆ ಏರಬೇಕಾದರೆ ಧರ್ಮದ ಏಣಿ ಬೇಕೇ ಬೇಕು ಎಂಬುದನ್ನು ನಿರಾಕರಿಸುವ ಸ್ಥಿತಿಯಲ್ಲಿ ಯಾವ ರಾಜಕೀಯ ನಾಯಕನೂ ಇಲ್ಲ. ಇಂಥ ಹೊತ್ತಲ್ಲಿ ಧರ್ಮವೆಂಬುದನ್ನು ಪ್ರತಿಯೊಬ್ಬ ವ್ಯಕ್ತಿ ತನ್ನ ಒಳಿತಿಗಾಗಿ ಆಚರಿಸಬೇಕೇ ಹೊರತು, ಅದಕ್ಕೊಂದು ಸಾರ್ವಜನಿಕ ಸ್ವರೂಪವನ್ನು ಕೊಡಲಿಕ್ಕೆ ಹೋಗಬಾರದು. ಧರ್ಮ ವೈಯಕ್ತಿಕವಾದದ್ದು. ಅದನ್ನು ಸಾರ್ವಜನಿಕಗೊಳಿಸಿದಷ್ಟೂ, ಇನ್ನೊಬ್ಬರ ಮೇಲೆ ಹೇರಿದಷ್ಟೂ ಅಸಹ್ಯವಾಗುತ್ತವೆ.

ಧರ್ಮವನ್ನು ಬಳಸಿ ಗದ್ದುಗೆಯೇರಿದ ಮನುಷ್ಯನಿಂದ ಅಧಿಕಾರಪೀಠ ಬಲಿಪೀಠವಾಗುತ್ತದೆ ಎನ್ನುವುದನ್ನು ಮರೆಯುವಂತಿಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.