ಬಣ್ಣ ಬದಲಿಸುವವರ ಸ್ನೇಹ

7

ಬಣ್ಣ ಬದಲಿಸುವವರ ಸ್ನೇಹ

ಗುರುರಾಜ ಕರಜಗಿ
Published:
Updated:

ರಾಜ ಬ್ರಹ್ಮದತ್ತ ವಾರಾಣಸಿಯನ್ನು ಆಳುತ್ತಿದ್ದಾಗ ಬೋಧಿಸತ್ವ ಒಂದು ಉಡವಾಗಿ ಹುಟ್ಟಿದ್ದ. ಅವನು ನೂರಾರು ಉಡಗಳಿಗೆ ರಾಜನಾಗಿದ್ದ. ಅವನ ಮಗ ಗೋಹಪಿಲ್ಲಕ ಅದು ಹೇಗೋ ಏನೋ ಒಂದು ಗೋಸುಂಬೆಯ ಜೊತೆಗೆ ಸ್ನೇಹ ಬೆಳೆಸಿದ್ದ. ಹಗಲಿನ ಸಾಕಷ್ಟು ಸಮಯವನ್ನು ಗೋಸುಂಬೆಯ ಜೊತೆಗೇ ಕಳೆಯುತ್ತಿದ್ದ. ಹೋಗಿ ಹೋಗಿ ಗೋಸುಂಬೆಯನ್ನು ಗಟ್ಟಿಯಾಗಿ ಅಪ್ಪಿಕೊಳ್ಳಲು ನೋಡುತ್ತಿದ್ದ.

ಮಗನ ಹಾಗೂ ಗೋಸುಂಬೆಯ ಸ್ನೇಹವನ್ನು ಕಂಡು ಬೋಧಿಸತ್ವ ಹೇಳಿದ, ‘ಮಗೂ ನಿನಗೆ ಗೋಸುಂಬೆಯೊಂದಿಗಿನ ಸ್ನೇಹ ಒಳ್ಳೆಯದಲ್ಲ. ಯಾಕೆಂದರೆ ಅದು ಸಮಯಕ್ಕೆ ತಕ್ಕಂತ ಬಣ್ಣ ಬದಲಾಯಿಸುವ ಪ್ರಾಣಿ. ಅದನ್ನು ನಂಬುವುದು ಕಷ್ಟ. ಅದು ನಮ್ಮ ವಂಶಕ್ಕೇ ಆಪತ್ತು ತಂದೀತು. ಜೋಕೆ’.

ತಂದೆಯ ಉಪದೇಶದ ನಂತರವೂ ಗೋಹಪಿಲ್ಲಕ ಸ್ನೇಹ ಬಿಡಲಿಲ್ಲ. ಬೋಧಿಸತ್ವ ಯೋಚಿಸಿದ, ‘ಮಗ ಸ್ನೇಹವನ್ನು ಬಿಡುತ್ತಿಲ್ಲ. ಒಂದಲ್ಲ ಒಂದು ದಿನ ಗೋಸುಂಬೆಯಿಂದಾಗಿ ನಮ್ಮ ವಂಶಕ್ಕೆ ಆಪತ್ತು ಬರುತ್ತದೆ. ಅದನ್ನು ತಪ್ಪಿಸಲು ಸಿದ್ಧವಾಗಿರಬೇಕು’. ಅದೇ ಅರಣ್ಯಪ್ರದೇಶದಲ್ಲಿ ಒಂದು ಬಿಲವನ್ನು ಹುಡುಕಿತು. ಅದರ ಒಂದು ಮುಖ ಇಲ್ಲಿದ್ದರೆ ಅದರ ಇನ್ನೊಂದು ಮುಖ ತುಂಬ ದೂರದಲ್ಲಿತ್ತು. ಬರಬರುತ್ತ ಗೋಹಪಿಲ್ಲಕ ತುಂಬ ದಪ್ಪ
ವಾಗುತ್ತಿದ್ದ. ತನ್ನ ಧಡೂತಿ ದೇಹವನ್ನು ಹೊತ್ತುಕೊಂಡು ಗೋಸುಂಬೆಯನ್ನು ಅಪ್ಪಿಕೊಳ್ಳಲು ಹೋಗುತ್ತಿದ್ದ. ಗೋಸುಂಬೆಗೆ ಗಾಬರಿಯಾಯಿತು. ‘ಅದು ನನ್ನ ಮೈಮೇಲೆ ಬಿದ್ದರೆ ತಾನು ಸತ್ತೇ ಹೋಗುತ್ತೇನೆ. ಇದನ್ನು ಹೇಗಾದರೂ ದೂರ ಮಾಡಬೇಕು. ಈ ಉಡಗಳ ವಂಶವನ್ನೇ ನಾಶಮಾಡಬೇಕು’ ಎಂದು ತೀರ್ಮಾನಿಸಿತು.

‘ಗ್ರೀಷ್ಮ ಋತುವಿನಲ್ಲಿ ಮಳೆ ಬಿದ್ದಾಗ ಬಿಲಗಳಿಂದ ರೆಕ್ಕೆ ಗೊದ್ದಗಳು ಸಾವಿರದ ಸಂಖ್ಯೆಯಲ್ಲಿ ಹೊರಬಂದವು. ಅವುಗಳನ್ನು ತಿನ್ನಲು ನೂರಾರು ಉಡಗಳು ಬಿಲದಿಂದ ಹೊರಗೆ ಬಂದವು. ಇದನ್ನು ಕಂಡ ಗೋಸುಂಬೆ ಒಬ್ಬ ಬೇಟೆಗಾರನನ್ನು ಕರೆತಂದಿತು. ‘ಉಡಗಳ ಮಾಂಸ ತುಂಬ ಒಳ್ಳೆಯದು. ನನ್ನೊಂದಿಗೆ ಬಾ. ನಿನಗೆ ನೂರಾರು ಉಡಗಳನ್ನು ಹಿಡಿದುಕೊಡುತ್ತೇನೆ. ಒಂದೆರಡು ಹೊರೆ ಹುಲ್ಲುಗಳನ್ನು ತಂದು ಬಿಲದ ಸುತ್ತ ಹರಡಿ ಅದಕ್ಕೆ ಬೆಂಕಿ ಹಾಕು. ಉಡಗಳು ಹೊರಬಂದಾಗ ದೊಣ್ಣೆಯಿಂದ ಹೊಡೆದು ಕೊಲ್ಲು. ಪಾರಾಗಿ ಓಡಲು ಹೊರಟ ಉಡಗಳನ್ನು ನಿನ್ನ ಬೇಟೆ ನಾಯಿಗಳು ಹಿಡಿಯಲಿ’ ಎಂದಿತು. ಹಾಗೆಯೆ ಹುಲ್ಲನ್ನು ಬಿಲದ ಸುತ್ತ ಹರಡಿ ಬೆಂಕಿ ಹಾಕಿತು. ಹೊಗೆ ಬಿಲದಲ್ಲಿ ನುಗ್ಗಿತು. ಗಾಬರಿಗೊಂಡ ಕೆಲ ಉಡಗಳು ಹೊರಗೋಡಿ ಬಂದವು. ಬೇಟೆಗಾರ ಅವುಗಳನ್ನು ಹೊಡೆದು ಕೊಂದ. ಆಗ ರಾಜನಾದ ಬೋಧಿಸತ್ವ ಬಿಲದ ಬಾಗಿಲಿಗೆ ಬಂದು, ‘ಯಾರೂ ಹೊರಗೆ ಹೋಗಬೇಡಿ, ನನ್ನನ್ನು ಹಿಂಬಾಲಿಸಿ ಬನ್ನಿ” ಎಂದು ಸರಸರನೇ ಉದ್ದವಾದ ಬಿಲದ ದಾರಿಯಲ್ಲಿ ಸಾಗಿತು. ಉಳಿದ ಉಡಗಳು ಹಿಂಬಾಲಿಸಿದವು.

ದೂರದ ದಾರಿಯನ್ನು ಕ್ರಮಿಸಿ ಆ ಕಡೆಯ ಮುಖದಿಂದ ಹೊರಬಂದು ಬೆಂಕಿಯಿಂದ ಪಾರಾದವು. ಬೋಧಿಸತ್ವ ಗೋಹಪಿಲ್ಲಕನನ್ನು ಮುಂದೆ ಕೂಡ್ರಿಸಿಕೊಂಡು ಬುದ್ಧಿ ಹೇಳಿದ, ‘ಮಗೂ, ಕಂಡೆಯಾ, ನಿನ್ನ ಮಿತ್ರ ಗೋಸುಂಬೆಯ ಕೆಲಸವನ್ನು? ಅದು ಸರಿಯಾದ ಸಮಯಕ್ಕೆ ಕೈಕೊಟ್ಟು ನಮ್ಮ ವಂಶವನ್ನೇ ನಾಶಮಾಡಲು ಹೊಂಚು ಹಾಕಿದೆ. ಇನ್ನು ಮೇಲೆ ಹೀಗೆ ಬಣ್ಣ ಬದಲಾಯಿಸುವವರ ಸಂಗ ಮಾಡಬೇಡ’. ಗೋಹಪಿಲ್ಲಕ ತನ್ನ ತಪ್ಪು ತಿದ್ದಿಕೊಂಡಿತು.

ಇದು ಇಂದಿಗೂ ಸತ್ಯವೇ. ನಮ್ಮೊಡನೆ ಇರುವ ಬಣ್ಣ ಬದಲಾಯಿಸುವವರನ್ನು ಗುರುತಿಸೋಣ. ಆದರೆ ಆದಷ್ಟು ಅವರಿಂದ ದೂರವಿರಲೂ ಪ್ರಯತ್ನಿಸೋಣ. ಅದು ನಮ್ಮ ಶ್ರೇಯಸ್ಸಿಗೆ ಅವಶ್ಯಕ.

ಬರಹ ಇಷ್ಟವಾಯಿತೆ?

 • 16

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !