ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಖದ್ಯೋತನ ನಿಶ್ಚಲ ಧರ್ಮ

Last Updated 30 ಜೂನ್ 2022, 19:04 IST
ಅಕ್ಷರ ಗಾತ್ರ

ಖದ್ಯೋತನಂತೆ ಬಿಡುಗೊಳದೆ ಧರ್ಮವ ಚರಿಸು|
ವಿದ್ಯುಲ್ಲತೆಯ ತೆರದಿ ತೇಜಗಳ ಸೂಸು||
ಗೆದ್ದುದೇನೆಂದು ಕೇಳದೆ, ನಿನ್ನ ಕೈ ಮೀರೆ|
ಸದ್ದುಮಾಡದೆ ಮುಡುಗು – ಮಂಕುತಿಮ್ಮ ||662||

ಪದ-ಅರ್ಥ: ಖದ್ಯೋತ=ಸೂರ್ಯ, ಬಿಡುಗೊಳದೆ=ಎಡೆಬಿಡದೆ, ಚರಿಸು=ಮಾಡು, ವಿದ್ಯುಲ್ಲತೆ=ಮಿಂಚಿನ ಬಳ್ಳಿ, ಸೂಸು=ಹರಡು, ಗೆದ್ದುದೇನೆಂದು=ಗೆದ್ದುದು+ಏನೆಂದು, ಮುಡುಗು=ಬಾಗು.

ವಾಚ್ಯಾರ್ಥ: ಸೂರ್ಯನಂತೆ ಎಡೆಬಿಡದೆ ಧರ್ಮವನ್ನು ನಡೆಸು. ಮಿಂಚಿನಬಳ್ಳಿಯ ಹಾಗೆ ತೇಜಸ್ಸಿನ ಕಿರಣಗಳನ್ನು ಪಸರಿಸು. ನಾನು ಏನು ಗೆದ್ದೆ ಎಂದು ಕೇಳದೆ, ಕಾರ್ಯ ನಿನ್ನ ಮೀರಿದ್ದಾದರೆ ನಮ್ರತೆಯಿಂದ ಗದ್ದಲಮಾಡದೆ ತಲೆಬಾಗು.

ವಿವರಣೆ: ಧರ್ಮಗ್ರಂಥಗಳಲ್ಲಿ ಸೂರ್ಯನನ್ನು ಅತ್ಯಂತ ಉನ್ನತ ಸ್ಥಾನದಲ್ಲಿ ಇರಿಸಲಾಗಿದೆ. ಸೂರ್ಯನ ಮತ್ತೊಂದು ಹೆಸರು ದಿನಕರ. ಹೆಸರೇ ಹೇಳುವಂತೆ ದಿನ ಪ್ರಾರಂಭವಾಗುವುದು ಅವನ ಆಗಮನದಿಂದಲೇ. ದಿನ ಮುಗಿಯುವುದೂ ಅವನ ನಿರ್ಗಮನದಿಂದ. ಅವನಿಲ್ಲದೆ ವಿಶ್ವವಿಲ್ಲ, ಹಗಲು ರಾತ್ರಿಯ ವ್ಯತ್ಯಾಸವನ್ನು ನೀಡುವವನು ಅವನೇ. ಆದ್ದರಿಂದ ಆತ ಭುವನೇಶ್ವರ. ಸೂರ್ಯ ಪದದ ಅರ್ಥ ಸದಾ ಚಲನೆಯಲ್ಲಿರುವುದು. ಸೂರ್ಯ ಎಂದೆಂದಿಗೂ ಒಂದೇ ಸ್ಥಳದಲ್ಲಿ ಕ್ಷಣ ಮಾತ್ರವೂ ನಿಲ್ಲುವುದಿಲ್ಲ. ಹೀಗೆ ಸದಾ ಚಲನಶೀಲನಾಗಿ, ದಿನದ ಚೈತನ್ಯವನ್ನು ತುಂಬುವ ಮತ್ತು ಪ್ರಪಂಚಕ್ಕೆ ಜೀವನಾಧಾರನಾಗಿರುವ ಸೂರ್ಯ ಸತತವಾಗಿ ಧರ್ಮದ ನಿರ್ವಹಣೆ ಮಾಡುವವ. ಭಾನುವಾರ ನಮಗೆ ರಜಾದಿನ ಆದರೆ ಭಾನುವಿಗೆ ರಜೆಯೇ ಇಲ್ಲ. ಸ್ವಲ್ಪವೂ ವಿಶ್ರಾಂತಿಯಿಲ್ಲದೆ ದುಡಿಯುವ ಶಕ್ತಿಪುಂಜ ಸೂರ್ಯ. ಕಗ್ಗ ಹೇಳುತ್ತದೆ, ನಾವೂ ಕೂಡ ಸೂರ್ಯನ ಹಾಗೆ ಸದಾ ಧರ್ಮದಲ್ಲಿ ದುಡಿಯಬೇಕು.

ಆಕಾಶದಲ್ಲಿ ಛಕ್ಕೆಂದು ಹೊಳೆಯುವ ಮಿಂಚಿನ ಬಳ್ಳಿ ಇಡೀ ಆಗಸವನ್ನು ಬೆಳಗುತ್ತದೆ, ಕಣ್ಣು ಕೋರೈಸುತ್ತದೆ. ಅದು ಅಲ್ಲಿ ಇದ್ದದ್ದು ಕೇವಲ ಅರ್ಧಕ್ಷಣವಾದರೂ ಅದು ನೀಡುವ ಪ್ರಕಾಶ ಅಪಾರವಾದದ್ದು. ಆ ಶಕ್ತಿಯನ್ನು ಹಿಡಿದು ಶೇಖರಿಸಿಕೊಳ್ಳಲು ಸಾಧ್ಯವಿಲ್ಲ. ಮಿಂಚು ನಮ್ಮಿಂದ ಯಾವ ಪ್ರತಿಫಲವನ್ನು ಅಪೇಕ್ಷಿಸುತ್ತದೆ? ಸೂರ್ಯನಿಗಾದರೂ ದೇವತೆಯ ಸ್ಥಾನಮಾನ ದಕ್ಕಿದೆ. ಯಜ್ಞಗಳಲ್ಲಿ ಆತನಿಗೆ ಪ್ರಮುಖ ಸ್ಥಾನ. ಆದರೆ ಅಸಾಧ್ಯ ಶಕ್ತಿಯ ಅನಾವರಣವಾದ ಮಿಂಚಿಗೆ ಅದಾವುದೂ ಇಲ್ಲ. ಕಗ್ಗದ ಸಂದೇಶ, ಯಾವುದನ್ನೂ ಅಪೇಕ್ಷಿಸದೆ ನಮ್ಮಿಂದ ಸಾಧ್ಯವಾದಷ್ಟು ಬೆಳಕನ್ನು ಸಮಾಜಕ್ಕೆ ನೀಡಬೇಕು. ಮಿಂಚು ಬರುವುದು ಎರಡು ಪ್ರಚಂಡ ಮೋಡಗಳ ಘರ್ಷಣೆಯಿಂದ. ನಮ್ಮ ಬದುಕಿನಲ್ಲೂ ಕಷ್ಟಗಳ ಕಾರ್ಮೋಡಗಳ ಘರ್ಷಣೆಯಾದಾಗ, ಕೊರಗುವ ಬದಲು ಮಿಂಚಿನಂತೆ ಹೊಳೆಯಬೇಕು.

ನಮ್ಮೆಲ್ಲ ಪ್ರಯತ್ನಗಳನ್ನು ಮಾಡುವಾಗ ಯಶಸ್ಸಿಗೆ ಹಪಾಹಪಿಪಡುವುದು ಬೇಡ. ಗೀತೆಯಲ್ಲೂ, ಕರ್ಮಮಾಡು ಫಲದ ಚಿಂತೆ ಬೇಡ ಎಂದಿದೆ. ಹಾಗೆಂದರೆ, ಫಲ ಬೇಡವೆ? ಫಲವೇ ಬೇಡ ಎನ್ನುವುದಾದರೆ ಕರ್ಮ ಯಾಕೆ ಮಾಡಬೇಕು? ಗೀತೆಯ ಮಾತಿನ ಉದ್ದೇಶ ಅದಲ್ಲ. ನಿನ್ನ ಕಾರ್ಯವನ್ನು ಅತ್ಯಂತ ನಿಷ್ಠೆಯಿಂದ, ನಿನ್ನೆಲ್ಲ ಶಕ್ತಿ, ಏಕಾಗ್ರತೆಗಳನ್ನು ಹಾಕಿ ಮಾಡು, ಆಗ ಯಶಸ್ಸು ಖಂಡಿವಾಗಿಯೂ ದೊರೆಯುತ್ತದೆ. ಸರಿಯಾಗಿ ನೋಡಿಕೊಂಡು ವಾಹನ ಓಡಿಸಿದರೆ ಗುರಿ ಮುಟ್ಟುವುದು ಖಚಿತ. ಗುರಿಯನ್ನು ತಲೆಯಲ್ಲಿ ತುಂಬಿಕೊಂಡು ಲಕ್ಷ್ಯವಿಲ್ಲದೆ ವಾಹನ ನಡೆಸಿದರೆ ಗುರಿ ಮುಟ್ಟುವುದು ಕಷ್ಟ. ಇಷ್ಟೆಲ್ಲ ಪ್ರಯತ್ನ ಮಾಡಿದ ಮೇಲೂ, ಕಾರ್ಯಸಾಧನೆಯಾಗದಿದ್ದರೆ, ಕೈ ಮೀರಿದರೆ, ಕೋಲಾಹಲ ಬೇಡ. ಮತ್ತೊಮ್ಮೆ ಹೆಚ್ಚಿನ ಪ್ರಯತ್ನ ಮಾಡಲು ಯೋಜಿಸಿ, ವಿನಮ್ರವಾಗಿ ವಿಧಿಗೆ ಬಾಗು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT