ಶುಕ್ರವಾರ, ಜನವರಿ 27, 2023
27 °C

ಬೆರಗಿನ ಬೆಳಕು: ಸಮರ್ಥ ಗುರುವಿನ ಹುಡುಕಾಟ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ತರಣಿದರ್ಶನಕಿಂತ ಕಿರಣಾನುಭವ ಸುಲಭ |
ಪರಮಶಾಸ್ತ್ರಕ್ಕಿಂತ ಸರಿಯುದಾಹರಣೆ ||
ಪರಮತತ್ವ್ತವ ಕಂಡ ಗುರುವನರಸುವುದೆಲ್ಲಿ ? |
ದೊರೆತಂದು ನೀಂ ಧನ್ಯ – ಮಂಕುತಿಮ್ಮ || 774 ||ಪದ-ಅರ್ಥ: ತರಣಿದರ್ಶನಕಿಂತ=ತರಣಿ(ಸೂರ್ಯ)+ದರ್ಶನಕಿಂತ, ಕಿರಣಾನುಭವ=ಕಿರಣ+ಅನುಭವ, ಸರಿಯುದಾಹರಣೆ-
ಸರಿ+ಉದಾಹರಣೆ, ಗುರುವನರಸುವುದೆಲ್ಲಿ=ಗುರುವನ್ನು+ಅರಸುವುದು (ಹುಡುಕುವುದು)+ಎಲ್ಲಿ, ದೊರೆತಂದು=ದೊರೆತ+ಅಂದು.

ವಾಚ್ಯಾರ್ಥ: ಸೂರ್ಯನ ನೇರ ದರ್ಶನಕಿಂತ ಅವನ ಕಿರಣಗಳ ಅನುಭವ ಸುಲಭ. ಶ್ರೇಷ್ಠ ಶಾಸ್ತ್ರ ಪಾಠಗಳಿಗಿಂತ ಒಂದು ಸರಿಯಾದ ಮಾದರಿ ದೊಡ್ಡದು. ಪರಮತತ್ವ್ತವನ್ನು ಕಂಡಂತಹ ಗುರುವನ್ನು ಹುಡುಕುವುದೆಲ್ಲಿ? ಅಂಥ ಅವನು ದೊರೆತರೆ ನೀನು ಧನ್ಯ.
ವಿವರಣೆ: ಮನುಷ್ಯನ ಬದುಕಿನಲ್ಲಿ ಒಬ್ಬ ಗುರುವಿನ ಸ್ಥಾನ ತುಂಬ ದೊಡ್ಡದಾದದ್ದು. ಜೀವನಕ್ಕೆ ಸರಿಯಾದ ಮಾರ್ಗದರ್ಶನ ದೊರೆಯುವುದೇ ಸಮರ್ಥ ಗುರುವಿನಿಂದ. ಅದಕ್ಕೇ ತೈತ್ತರೀಯ ಉಪನಿಷತ್ತು ಹೇಳಿತು, ಆಚಾರ್ಯ: ಪೂರ್ವರೂಪಂ |
ಅಂತೇವಾಸಿ ಉತ್ತರ ರೂಪಂ ||
ಆಚಾರ್ಯ ಪೂರ್ವರೂಪ, ಶಿಷ್ಯ ಉತ್ತರರೂಪ. ಅವರ ನಡುವಿನ ಚಿಂತನೆಯೇ ಅನುಸಂಧಾನ. ಗುರುನೀಡುವ ಜ್ಞಾನವೇ ಆತ್ಮವಿದ್ಯೆ. ಕಬೀರರೂ ಹೇಳಿದರು, “ಮನೆಯ ಮುಂದೆ ಭಗವಂತ ಮತ್ತು ಗುರು ಏಕಕಾಲದಲ್ಲಿ ಬಂದು ನಿಂತರೆ ನಾನುಗುರುವನ್ನೇ ಮೊದಲಿಗೆ ವಂದಿಸಿ ಒಳಗೆ ಕರೆಯುತ್ತೇನೆ, ಯಾಕೆಂದರೆ ಭಗವಂತನನ್ನು ಪಡೆಯುವ ದಾರಿಯನ್ನು ತೋರುವವನೇ ಗುರು”. ಬಸವಣ್ಣನವರೂ, “ಶಿವಪಥವನರಿವಡೆ ಗುರುಪಥವೇ ಮೊದಲು” ಎಂದರು.
ಅಲೆಕ್ಸಾಂಡರ್ ಚಿಕ್ಕ ವಯಸ್ಸಿನಲ್ಲೇ ಅರ್ಧ ಪ್ರಪಂಚ ಗೆದ್ದವನು. ಅವನಿಗೆ ಗುರುವಾಗಿದ್ದವನು ಅರಿಸ್ಟಾಟಲ್. ಅವನಲ್ಲಿ ಸಂಪೂರ್ಣ ನಂಬಿಕೆ ಮತ್ತು ಗೌರವ. ಅವನನ್ನು ಒಬ್ಬರು ಕೇಳಿದರು, “ನಿಮ್ಮ ತಂದೆ ನಿಮಗೆ ಅಧಿಕಾರವನ್ನು, ಸಾಮ್ರಾಜ್ಯವನ್ನು ಕೊಟ್ಟರು. ಆದರೂ ನಿಮಗೆ ಗುರು ಅರಿಸ್ಟಾಟಲ್‌ನ ಬಗ್ಗೆ ಅಷ್ಟೊಂದು ಪೂಜ್ಯತೆ ಏಕೆ?” ಅಲೆಕ್ಸಾಂಡರ್ ಹೇಳಿದ, “ನನ್ನ
ತಂದೆ ನನಗೆ ದೇಹವನ್ನು ಕೊಟ್ಟರು. ಆದರೆ ಈ ದೇಹ ಅಶಾಶ್ವತ. ಆದರೆ ಗುರು ಶಾಶ್ವತವಾದ ಜ್ಞಾನವನ್ನು ಕೊಟ್ಟ. ತಂದೆ ನನ್ನನ್ನು ಆಕಾಶದಿಂದ ಭೂಮಿಗೆ ತಂದರು. ಗುರು ನನ್ನನ್ನು ನೆಲದಿಂದ ಆಕಾಶಕ್ಕೆ ಏರಿಸಿದರು. ಅದಕ್ಕೇ ಅವರ ಬಗ್ಗೆ
ಪೂಜ್ಯತೆ”. ಹೌದು. ಒಬ್ಬ ಸಮರ್ಥ ಗುರು ಏನೆಲ್ಲ ಮಾಡಬಲ್ಲ. ಕಗ್ಗದ ಸಾಲುಗಳು ಈ ವಿಷಯವನ್ನು ಒತ್ತುಕೊಟ್ಟು ಹೇಳುತ್ತವೆ. ಸೂರ್ಯನನ್ನು ನಾವು ಬರಿಗಣ್ಣಿನಿಂದ ನೇರವಾಗಿ ನೋಡಲಾರೆವು. ಆದರೆ ಸೂರ್ಯನ ಕಿರಣಗಳನ್ನು ಅನುಭವಿಸುವುದು ಸುಲಭ. ದೊಡ್ಡ ದೊಡ್ಡ ಶಾಸ್ತ್ರಗಳ ಓದುವಿಕೆಗಿಂತ ಬದುಕನ್ನುಬದಲಿಸುವ ಮಾದರಿ ಮೇಲು. ಆದರೆ ಹಾಗೆ ಪರಮಸತ್ಯವನ್ನು ಕಂಡು, ಬದುಕಿಗೆ ಮಾದರಿಯಾಗಬಲ್ಲ ಗುರು ನಮಗೆ ದೊರಕುವುದೆಲ್ಲಿ? ಅವನಿಗಾಗಿ ಜೀವನಪರ್ಯಂತ ಹುಡುಕಾಟ ನಡೆಯಲೇ ಬೇಕು. ಅಂಥವನು ನಮಗೆ ಒಂದು ವೇಳೆ ದೊರೆತರೆ ಬದುಕಿಗೆ ಧನ್ಯತೆ ಬರುತ್ತದೆ. ಅಂಥ ಗುರುವನ್ನುಪಡೆದ ಶಿಷ್ಯ ನಿಜವಾಗಿಯೂ ಧನ್ಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು