ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಟವೇ ಧರ್ಮ (ಬೆರಗಿನ ಬೆಳಕು)

Last Updated 18 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ಗೋಳಾಡಲುಂ ಬೇಡ, ಲೋಲಾಪ್ತಿಯುಂ ಬೇಡ |

ಬಾಳು ಪರ ಚೇತನದ ಕೇಳಿಯೆಂದೆಣಿಸಿ ||
ಪಾಲಿಗನು ನೀನದರೊಳೆನಿಪಂತೆ ಬಾಳುತಿರು |
ಕೇಳಿಯುಂ ಧರ್ಮವೆಲೊ – ಮಂಕುತಿಮ್ಮ || 264 ||

ಪದ-ಅರ್ಥ: ಲೋಲಾಪ್ತಿ=ಅತಿಯಾದ ಆಸಕ್ತಿ, ಕೇಳಿ=ಆಟ, ಪಾಲಿಗ=ಪಾಲುದಾರ, ಭಾಗಸ್ಥ, ನೀನದರೊಳೆನಿಪಂತೆ=ನೀನು+ಅದರೊಳು+ಎನಿಪAತೆ(ಎನ್ನುವAತೆ)
ವಾಚ್ಯಾರ್ಥ: ಬದುಕಿನಲ್ಲಿ ಗೋಳಾಟವೂ ಬೇಡ, ಅತಿಯಾದ ಆಸಕ್ತಿಯೂ ಬೇಡ. ಈ ಬದುಕು ಪರಸತ್ವದ ಆಟ ಎಂದು ತಿಳಿದು, ಅದರಲ್ಲಿ ನೀನೂ ಒಬ್ಬ ಪಾಲುದಾರ ಎನ್ನುವಂತೆ ಬದುಕು ಸಾಗಿಸು. ಈ ಆಟವೂ ಒಂದು ಧರ್ಮವೇ ಸರಿ.

ವಿವರಣೆ: ಯಾವುದು ಅತಿಯಾದರೂ ಒಳ್ಳೆಯದಲ್ಲ. ಅತಿ ಸಮೃದ್ಧಿಯೂ ಕಷ್ಟ, ಅತಿಯಾದ ದು:ಖವೂ ಕಷ್ಟ. ಅದಕ್ಕೊಂದು ಪೂರ್ವಜರÀ ಮಾತಿದೆ, “ಅತಿಸರ್ವತ್ರ ವರ್ಜಯೇತ್”. ಎಂದರೆ ಯಾವುದನ್ನು ಅತಿಯಾಗಿ ಮಾಡಬೇಡ. ಗುಲಾಬ್‌ಜಾಮೂನ್ ತುಂಬ ರುಚಿ. ಸರಿ, ನೂರು ತಿಂದರೆ? ಹೊಟ್ಟೆ ಶುದ್ಧವಾಗಲೆಂದು ಜುಲಾಬಿನ ಮಾತ್ರೆ ತೆಗೆದುಕೊಳ್ಳಬೇಕು. ಅದು ಕಡಲೆಕಾಳಿಗಿಂತ ಚಿಕ್ಕದು. ಛೇ, ಇಷ್ಟು ದೊಡ್ಡ ದೇಹಕ್ಕೆ ಇಷ್ಟು ಚಿಕ್ಕದು ಹೇಗೆ ಸಾಕು ಎಂದು ಹತ್ತು ಮಾತ್ರೆ ನುಂಗಿದರೆ? ಅಂತೆಯೇ ಯಾವುದಾದರೂ ಎಷ್ಟು ಬೇಕೋ, ಎಷ್ಟು ಸರಿಯೋ ಎಂಬುದರ ತಿಳಿವಿರಬೇಕು. ಹಾಗೆಯೇ ಬದುಕಿನಲ್ಲಿ ಕೊಂಚ ಸಂತೋಷ ಇಣುಕಿದರೆ ಪ್ರಪಂಚವನ್ನೇ ಗೆದ್ದಂತೆ ಹಾರಾಡುವುದು ಬೇಕಿಲ್ಲ. ಸ್ವಲ್ಪ ಹಿನ್ನಡೆಯಾದರೆ, ತನ್ನಷ್ಟು ನಿರ್ಭಾಗ್ಯರು ಮತ್ತಾರಿಲ್ಲವೆಂದು ಪ್ರಪಂಚಕ್ಕೆಲ್ಲ ತಿಳಿಯುವಂತೆ ಗೋಳಾಡುವುದೂ ಬೇಡ.

ಈ ಜೀವನ ಪರಸತ್ವದ, ಭಗವಂತನ ಆಟದ ಒಂದು ಭಾಗ ಎಂದು ತಿಳಿಯುವುದು ಸರಿಯಾದದ್ದು. ಪ್ರತಿಯೊಂದು ಜೀವದ ಅಂತರAಗದಲ್ಲಿ ಬ್ರಹ್ಮಶಕ್ತಿಯ ಚೇತನದ ಅಂಶವಿದೆ. ಅದನ್ನು ನೆನಪಿಟ್ಟುಕೊಂಡು ಬದುಕಿನ ಎಲ್ಲ ಕಾರ್ಯಗಳನ್ನು ಶ್ರದ್ಧೆಯಿಂದ, ದಕ್ಷತೆಯಿಂದ ನಿರ್ವಹಿಸುವುದು ಕರ್ತವ್ಯ ಮತ್ತು ಧರ್ಮ. ಈ ಭಗವಂತ ಸೃಷ್ಟಿಸಿದ ಆಟದಲ್ಲಿ ನಮ್ಮದೂ ಒಂದು ಪಾಲಿದೆ, ನಾವೂ ಅದರಲ್ಲಿ ಪಾತ್ರಧಾರರು ಎಂದುಕೊAಡು ನಮ್ಮ ಪಾಲಿಗೆ ದೊರೆತ ಪಾತ್ರವನ್ನು ಅತ್ಯಂತ ತನ್ಮಯತೆಯಿಂದ ಮಾಡುವುದೇ ಧರ್ಮ. ಅದೇ ಒಂದು ಯಜ್ಞ. ನಮಗೆ ದೊರೆತ ಸುಖ, ದು:ಖಗಳು ದೇವರು ನೀಡಿದ ಪ್ರಸಾದ. ಸೇವೆ ಮಾಡಿದ್ದು ನಾವಾದರೂ ವರನೀಡಿದವನು ಭಗವಂತ. ಈ ಪ್ರಜ್ಞೆ ಸರ್ವಕಾಲದಲ್ಲೂ ಇದ್ದರೆ ಪಾಪ ನಮ್ಮನ್ನು ಸೋಕಲಾರದು ಎಂದು ಭಗವದ್ಗೀತೆ ಹೇಳುತ್ತದೆ.

ಕರ್ಮ ಮಾಡಿಯೂ ಪಾಪ ಅಂಟದಿರುವ ಮಾರ್ಗ ಇದು. ಒಂದು ರೀತಿಯಲ್ಲಿ ಇದು ಹಲಸಿನ ಹಣ್ಣನ್ನು ಬಿಡಿಸಿದ ಹಾಗೆ. ಹಣ್ಣು ಸುಲಿದಿರಬೇಕು ಆದರೆ ಕೈ ಅಂಟಾಗಬಾರದು. ಅದಕ್ಕೆ ಮೊದಲೇ ಕೈಗೆ ಎಣ್ಣೆ ಸವರಿಕೊಂಡಿರಬೇಕು. ಹಲಸಿನಹಣ್ಣು ಬದುಕು, ಸುಲಿಯುವ ಕೈ ಮನುಷ್ಯ ಮತ್ತು ಕೈಗೆ ಹಚ್ಚಿದ ಎಣ್ಣೆ ಭಗವತ್ ಪ್ರಜ್ಞೆ. ಆ ಪ್ರಜ್ಞೆಯಿಂದ ಕೈ ಅಂಟಾಗುವುದು ತಪ್ಪುತ್ತದೆ. ಈ ಕಗ್ಗದ ಅಧ್ಯಾತ್ಮಿಕ ಸಾರವನ್ನು ಕನಕದಾಸರು ಕಂಡರಿಸಿದ ಪರಿ ಅನನ್ಯವಾದದ್ದು

ತನು ನಿನ್ನದು ಜೀವನ ನಿನ್ನದೋ ರಂಗಾ ||
ಎನದಾವುದೊಂದನೀ ಜಗದೊಳು ನಾ ಕಾಣೆ ||
ಅನುದಿನದಲಿ ಬಹ ಸುಖದು:ಖ ನಿನ್ನದಯ್ಯ ||

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT