ಇಂದರಿಯಾತೀತವಾದ ಸತ್ಯ

7

ಇಂದರಿಯಾತೀತವಾದ ಸತ್ಯ

ಗುರುರಾಜ ಕರಜಗಿ
Published:
Updated:

ಬಚ್ಚಿಟ್ಟು ಕೊಂಡಿಹುದೆ ಸತ್ಯ ಮಿಥ್ಯೆಯಾ ಹಿಂದೆ? |
ನಚ್ಚುವುದೆ ಮರೆಯೊಳಿಹುದನೆ ಸತ್ಯವೆಂದು ?||
ಅಚ್ಚರಿಯ ತಂತ್ರವಿದು; ಬ್ರಹ್ಮ ಸೃಷ್ಟಿಗಳೇಕೊ |
ಮುಚ್ಚ್ಚಿಹವು ಸಾಜತೆಯ– ಮಂಕುತಿಮ್ಮ ||31 ||

ಪದ-ಅರ್ಥ: ನಚ್ಚುವುದು=ನಂಬುವುದು, ಮರೆಯೊಳಿಹುದನೆ=ಮರೆಯೊಳು+ಇಹುದನೆ(ಇರುವುದನ್ನೆ), ಸಾಜತೆಯ=ಸಹಜತೆಯ

ವಾಚ್ಯಾರ್ಥ: ಸತ್ಯವೆನ್ನುವುದು ಸುಳ್ಳಿನ ಹಿಂದೆ ಅಡಗಿಕೊಂಡಿಹುದೇ? ಹಿಂದೆ ಮರೆಯಾಗಿರುವುದನ್ನೇ ಸತ್ಯವೆಂದು ನಂಬಬೇಕೇ? ಇದೊಂದು ಆಶ್ಚರ್ಯಕರವಾದ ತಂತ್ರ. ಭಗವಂತನ ಸೃಷ್ಟಿಗಳು ಏಕೋ ಸಹಜತೆಯನ್ನು ಮುಚ್ಚಿಕೊಂಡಿವೆ.

ವಿವರಣೆ: ಈ ಪ್ರಶ್ನೆಗಳು ಎಲ್ಲ ಸಾಧಕರನ್ನು ಕಾಡಿದ್ದವುಗಳೇ. ಕಣ್ಣಿಗೆಕಾಣದ್ದನ್ನು ಒಪ್ಪಿಕೊಳ್ಳುವುದು ಹೇಗೆ? ಅಥವಾ ನಮ್ಮ ಕಣ್ಣಿಗೆಕಂಡದ್ದು ಒಂದು ಸುಳ್ಳಿನ ಮರೆಯ ಹಿಂದೆ ಅಡಗಿದೆಯೇ? ಈ ಸೃಷ್ಟಿಗಳು ಏನೋ ಸಹಜತೆಯನ್ನು, ಸತ್ಯವನ್ನು ಮರೆಮಾಡಿದಂತಿದೆಎಂದು ಮನುಷ್ಯನ ಬುದ್ಧಿ ಕೇಳುತ್ತದೆ. ಬುದ್ಧಿ ಮನುಷ್ಯನ ಜ್ಞಾನಸಾಧನಗಳಲ್ಲಿ ಅತ್ಯಂತ ಪ್ರಮುಖವಾದದ್ದು. ಆದರೆ ಅದಕ್ಕೆ ಮಿತಿ ಇದೆ ಎನ್ನುವುದನ್ನು ನೆನಪಿಡಬೇಕು. ಬುದ್ಧಿ ಕೆಲಸ ಮಾಡಲು ಮೂಲ ಸಾಮಗ್ರಿಬೇಕು.

ಬಡಗಿಗೆ ಮರ, ಕುಂಬಾರನಿಗೆ ಮಣ್ಣು, ಕಮ್ಮಾರನಿಗೆ ಲೋಹ, ರೈತನಿಗೆ ನೆಲ ಹೇಗೆ ಬೇಕೋ ಹಾಗೆಯೇ ಬುದ್ಧಿಗೂ ಒಂದುದ್ರವ್ಯ ಬೇಕು. ಅದನ್ನು ಒದಗಿಸುವುವು ಪಂಚೇಂದ್ರಿಯಗಳು.ಈ ಇಂದ್ರಿಯಗಳು ತಮ್ಮ ಅನುಭವದಿಂದ ಪಡೆದ ವಸ್ತುಗಳು ಬುದ್ಧಿಯ ದ್ರವ್ಯ. ಅದನ್ನು ವಿಶ್ಲೇಷಿಸಿ ತೀರ್ಮಾನಕ್ಕೆ ಬರುತ್ತದೆ ಬುದ್ಧಿ.

ಆದರೆ ಎಲ್ಲಿ ಇಂದ್ರಿಯಗಳು ಕೆಲಸ ಮಾಡಲಾರವೋ ಅಲ್ಲಿ ಬುದ್ಧಿಗೆ ಯಾವಕಾರ್ಯವೂ ಇಲ್ಲ.

ಸತ್ಯದಲ್ಲಿ ಎರಡು ಬಗೆ. ಒಂದು ದೃಶ್ಯ ಮತ್ತೊಂದು ಅದೃಶ್ಯ. ದೃಶ್ಯ ಕಣ್ಣಿಗೆ ದೊರಕುವುದು. ಹಾಗೂ ಅದು ಇಂದ್ರಿಯಗಳಿಗೆ ಸಿಕ್ಕುವುದು. ಆದ್ದರಿಂದ ಬುದ್ಧಿ ಅದರ ಬಗ್ಗೆ ಯೋಚನೆ ಮಾಡಬಹುದು. ಆದರೆ ಅದೃಶ್ಯ ಸತ್ಯ ಇಂದ್ರಿಯಗಳಿಗೆ ನಿಲುಕುವುದಲ್ಲ. ಹೀಗಾಗಿ ಅಲ್ಲಿಗೆ ಬುದ್ಧಿಗೆ ಕೆಲಸವಿಲ್ಲ. ಈಶ್ವರ, ಪಾಪ, ಪುಣ್ಯ, ನರಕ, ಸ್ವರ್ಗ, ಮಾಯೆಇವೆಲ್ಲ ಇಂದ್ರಿಯಗಳ ಪರೀಕ್ಷೆಗೆ ನಿಲುಕುವುದಿಲ್ಲ.

ತರ್ಕ ಮನುಷ್ಯನ ಬುದ್ಧಿಯ ಹರಿತವಾದ ಅಸ್ತ್ರ. ಹೀಗೆಂದರೇನಾಯಿತು? ತರ್ಕದಿಂದ ಅದೃಶ್ಯ ಸತ್ಯದ ತಿಳುವಳಿಕೆ ಸಾಧ್ಯವಿಲ್ಲ. ಅಲ್ಲಿ ಶಾಸ್ತ್ರ ಮತ್ತು ಶ್ರದ್ಧೆಯಕಾರ್ಯ ಮಾತ್ರ ನಡೆಯುತ್ತದೆ. ಅದರಲ್ಲೂ ಮಾಯೆಯನ್ನು ಅರ್ಥೈಸುವುದು ಪರಮಕಷ್ಟ. ಜಗತ್ತೆಂಬುದೇ ಮಾಯೆ. ಅದಕ್ಕೆ ಸ್ವಂತ ಸ್ಥಿರವಾದ ರೂಪವಿಲ್ಲ. ಅದು ಕ್ಷಣಕ್ಷಣಕ್ಕೂ ಬದಲಾಗುತ್ತದೆ. ನಿನ್ನೆ ಇದ್ದ ದ್ವೀಪಗಳು ಮರೆಯಾಗಿ ಹೋಗಿವೆ, ಹೊಸ ದ್ವೀಪಗಳು ಸಮುದ್ರ ಮಧ್ಯದಲ್ಲಿಎದ್ದು ನಿಂತಿವೆ.

ಹಾಗಾದರೆ ಪ್ರಪಂಚಇಲ್ಲಎನ್ನೋಣವೇ? ಅಯ್ಯೋ ದಿನದಿನವೂ ನಾವು ಅನುಭವಿಸುವ, ಕಷ್ಟಪಡುವ, ಸುಖವನ್ನು ಹಂಚಿಕೊಳ್ಳುವ ಈ ಸ್ಥಳ ಯಾವುದು ಹಾಗಾದರೆ? ಅದು ಇದೆ ಎಂದರೆ ಇದೆ, ಇಲ್ಲವೆಂದರೆಇಲ್ಲ. ಅದಕ್ಕೇ ಈ ಕಗ್ಗ ಹೇಳುತ್ತದೆ ಸೃಷ್ಟಿಯೆಲ್ಲ ತನ್ನ ಸಹಜತೆಯನ್ನು, ಸತ್ಯತೆಯನ್ನು ಮರೆಮಾಚಿದೆ ಎಂದು. ಇದರ ತಾತ್ಪರ್ಯ ಇಷ್ಟು. ಬ್ರಹ್ಮಸತ್ಯ ಎನ್ನುವುದು ಮಾಯೆಯಾದ ಪ್ರಪಂಚದ ಹಿಂದೆ ಮರೆಯಾಗಿದೆ. ಈ ಮಾಯೆಯ ಪರದೆ ಸರಿಯುವವರೆಗೆ ಅದರ ಹಿಂದಿನ ಸತ್ಯ ನಮಗೆ ಹೊಳೆಯದು.

ಆ ಸತ್ಯವೂ ಬುದ್ಧಿಗೆ ಎಟುಕದು ಯಾಕೆಂದರೆ ಅದು ಇಂದ್ರಿಯಾತೀತವಾದದ್ದು. ಅಲ್ಲಿ ಶ್ರದ್ಧೆಗೆ ಮಾತ್ರ ಪ್ರವೇಶ.

ಬರಹ ಇಷ್ಟವಾಯಿತೆ?

 • 25

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !