ಶುಕ್ರವಾರ, ಮೇ 27, 2022
21 °C

ಮೂಲದ ಒಂದಂಶ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಒಳಿತೆಂದು ಸೊಗಸೆಂದು ಜಗವು ಮೆಚ್ಚುವುದೆಲ್ಲ |
ಕಲೆಕಣಂಗಳು ಮಾತ್ರ ಪೂರ್ಣಂಗಳಲ್ಲ ||
ನಲಿವು ಚೆಲುವುಗಳ ಪರಿಪೂರ್ಣ ಮೂಲಾಕೃತಿಯೆ |
ಪರಬೊಮ್ಮನೆನ್ನುವರು – ಮಂಕುತಿಮ್ಮ || 126 ||

ಪದ-ಅರ್ಥ: ಕಲೆಕಣಂಗಳು= ಕಲೆ(ಅಂಶ)+ ಕಣಂ(ಒಂದು ಪುಟ್ಟ ಕಣ, ಕ್ಷಣ).

ವಾಚ್ಯಾರ್ಥ: ಜಗತ್ತು ಯಾವುದು ಒಳಿತು, ಸೊಗಸು ಎಂದು ಮೆಚ್ಚಿಕೊಳ್ಳುತ್ತದೋ ಅವೆಲ್ಲ ಕೇವಲ ಒಂದು ಅಂಶ, ಒಂದು ಕಣ ಮಾತ್ರ. ಅವು ಪೂರ್ಣಗಳಲ್ಲ. ಸಂತೋಷ, ಸೌಂದರ್ಯಗಳ ಅತ್ಯಂತ ಪರಿಪೂರ್ಣವಾದ ಮೂಲ ಆಕೃತಿಯೇ ಪರಬೊಮ್ಮ ಎಂದು ಕರೆಯಿಸಿಕೊಳ್ಳುತ್ತದೆ.

ವಿವರಣೆ: ನಾವು ಆರು ಜನ ಕುರುಡರು ಆನೆಯನ್ನು ಕಂಡ ಪರಿಯ ಕಥೆ ಕೇಳಿದ್ದೇವೆ. ಆರು ಜನ ಕುರುಡರು ಆನೆಯನ್ನು ತಿಳಿಯಲು ಪ್ರಯತ್ನಿಸಿದರು. ಒಬ್ಬ ಅದರ ಹೊಟ್ಟೆಯನ್ನು ಸ್ಪರ್ಶಿಸಿ, ಒಹೋ ಆನೆಯೆಂದರೆ ಒಂದು ದೊಡ್ಡ ಗೋಡೆ ಇದ್ದಂತೆ ಎಂದ. ಎರಡನೆಯವನು ಅದರ ಕೋರೆ ದಂತಗಳನ್ನು ಮುಟ್ಟಿ, ಕೈಯಾಡಿಸಿ. ‌‘ಇದು ಗುಂಡಾಗಿದೆ, ಉದ್ದವಾಗಿದೆ ಮತ್ತು ಚೂಪಾಗಿದೆ. ಆದ್ದರಿಂದ ಆನೆಯೆಂದರೆ ಒಂದು ಭರ್ಚಿ ಇದ್ದಂತೆ’ ಎಂದ. ಮೂರನೆಯವನು ಅದರ ಸೊಂಡಿಲನ್ನು ಹಿಡಿದು ಅದು ಅಲುಗಾಡುವುದನ್ನು ಗಮನಿಸಿ ಕೂಗಿದ, ‘ಇಲ್ಲ, ಆನೆಯೆಂದರೆ ಒಂದು ಬೃಹತ್ತಾದ ಹಾವಿದ್ದಂತೆ’. ನಾಲ್ಕನೆಯವನು ಆನೆಯ ಕಾಲಿನ ಮೇಲೆ ಕೈ ಆಡಿಸಿ, ಹೇಳಿದ, ‘ನಿಮಗಾರಿಗೂ ಸರಿಯಾಗಿ ತಿಳಿದಿಲ್ಲ. ಆನೆಯೆಂದರೆ ಒಂದು ದೊಡ್ಡ ಮರವಿದ್ದಂತೆ. ನಾನು ಅದರ ಕಾಂಡವನ್ನು ಹಿಡಿದಿದ್ದೇನೆ’. ಐದನೆಯವನು ಆನೆಯ ಕಿವಿಯನ್ನು ಹಿಡಿದು, ಅದು ಅಲುಗಾಡುವುದನ್ನು ಗಮನಿಸಿ, ‘ಈ ಆನೆಯನ್ನು ಗುರುತಿಸಲು ಕಣ್ಣೇ ಬೇಕಿಲ್ಲ. ಇದು ತುಂಬ ಸುಲಭ. ಆನೆ ಎಂದು ಮೊರ ಅಥವಾ ಬೀಸಣಿಕೆ’ ಎಂದ. ಕೊನೆಯವನು, ಆನೆಯ ಬಾಲವನ್ನು ಹಿಡಿದು, ಎಳೆದು ಹೇಳಿದ, ‘ಛೇ, ನಿಮಗಾರಿಗೂ ಆನೆಯ ಕಲ್ಪನೆಯೇ ಇಲ್ಲ. ಅದು ಒಂದು ಹಗ್ಗವಿದ್ದಂತಿದೆ’ ಎಂದ. ಅವರೆಲ್ಲ ವಾದಮಾಡತೊಡಗಿದರು. ತಾವೇ ಸರಿಯೆಂದರು.

ಹಾಗಾದರೆ ಅವರಲ್ಲಿ ಸರಿಯಾಗಿ ಗುರುತಿಸಿದವರು ಯಾರು? ಪ್ರತಿಯೊಬ್ಬರೂ ಅವರವರ ದೃಷ್ಟಿಯಲ್ಲಿ ಸರಿಯಾಗೆಯೇ ಇದ್ದರೂ ಒಟ್ಟು ಗ್ರಹಿಕೆಯಲ್ಲಿ ಎಲ್ಲರೂ ತಪ್ಪಿದ್ದರು. ಪ್ರತಿಯೊಬ್ಬನೂ ಒಂದೊಂದು ಭಾಗವನ್ನು ಸ್ಪರ್ಶಿಸಿ ಅದರ ಅನುಭವ ಪಡೆದಿದ್ದ. ಆದರೆ ಅದು 
ಸಂಪೂರ್ಣ ಅನುಭವವಾಗಿರಲಿಲ್ಲ. ಆತ ಕಂಡದ್ದು ಪೂರ್ಣ ಆನೆಯ ಒಂದು ಭಾಗ ಮಾತ್ರ.

ನಮ್ಮ ಸ್ಥಿತಿಯೂ ಹಾಗೆಯೇ ಇದೆ. ಕೈಗೆ ಸಿಕ್ಕುವ, ಅಳತೆಗೆ ದಕ್ಕುವ ಆನೆಯನ್ನು ಸಂಪೂರ್ಣವಾಗಿ ಗುರುತಿಸಲು ಇಷ್ಟು ಕಷ್ಟವಾದರೆ ಅತಿ ಸೂಕ್ಷ್ಮವಾದ, ವರ್ಣನೆಗೆ ದೊರಕದ, ಬುದ್ಧಿಗೆ ನಿಲುಕದ ಪರಮಾತ್ಮ ವಸ್ತುವನ್ನು ನಾವು ಗ್ರಹಿಸಿದ್ದೇವೆ ಎಂದು ಹೇಗೆ ಹೇಳುವುದು? ನಾವು ಇಂದ್ರಿಯಗಳಿಂದ ಭೌತಿಕ ಜಗತ್ತನ್ನು, ಮನಸ್ಸಿನಿಂದ ಭಾವನಾತ್ಮಕ ಜಗತ್ತನ್ನು, ಬುದ್ಧಿಯಿಂದ ವೈಚಾರಿಕ ಜಗತ್ತನ್ನು ಗುರುತಿಸುತ್ತೇವೆ. ಆದರೆ ಬ್ರಹ್ಮವಸ್ತು ಅಪರಿಮಿತ, ಅಖಂಡ, ಅಸದೃಶವಾದದ್ದು. ಅದು ನಮ್ಮ ಮನಸ್ಸು, ಬುದ್ಧಿಗಳಿಗೆ ಕಾರಣನಾದದ್ದು ಆದರೆ ಅವುಗಳಿಗೆ ನಿಲುಕದು. ಹಾಗಾದರೆ ನಾವೇನು ಮಾಡಬೇಕು? ನಮ್ಮ ಮನಸ್ಸು, ಬುದ್ಧಿ, ವಿಚಾರಗಳು ಆ ಮೂಲಶಕ್ತಿಯ ಒಂದೊಂದು ಕಿರಣಗಳನ್ನು ಹಿಡಿದುಕೊಳ್ಳುತ್ತವೆ. ಅದೇ ಮೂಲಶಕ್ತಿಯೆಂದು ಭ್ರಮೆ ಪಡುತ್ತಿವೆ. ನಾವು ತಿಳಿಯಬೇಕಾದದ್ದು ಇಷ್ಟೆ. ನಾವು ಕಂಡದ್ದು, ಅನುಭವಿಸಿದ್ದು ಸರಿ. ಆದರೆ ಇದೇ ಪರಮಸತ್ಯವಲ್ಲ. ಇದು ಮೂಲಸತ್ವದ ಒಂದು ಅಂಶಮಾತ್ರ, ಒಂದು ಕಣ ಮಾತ್ರ. ಈ ಅದ್ಭುತ ಸತ್ಯವನ್ನು ಕಗ್ಗ ಎಷ್ಟು ಸುಲಭವಾಗಿ ಹೇಳುತ್ತದೆ! ಯಾವುದನ್ನು ನಾವು ಒಳ್ಳೆಯದು, ಸುಂದರವೆಂದು ಮೆಚ್ಚುತ್ತೇವೋ ಅವೆಲ್ಲ ಮೂಲಶಕ್ತಿಯ ಒಂದು ಅಂಶ, ಒಂದು ಕಣ ಮಾತ್ರ. ನಾವು ಸಂತೋಷ, ಸೌಂದರ್ಯವೆಂದು ಭಾವಿಸುವ ಎಲ್ಲದರ ಮೂಲ ಆಕೃತಿಯೇ ಪರಬೊಮ್ಮ. ಅದರ ಪೂರ್ತಿ, ಸಮಗ್ರ ದೃಷ್ಟಿ ನಮಗೆ ದೊರೆತಿಲ್ಲ.‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.