ಬುಧವಾರ, ಅಕ್ಟೋಬರ್ 21, 2020
25 °C

ಕಾಣದ್ದು – ಕಾಣುವುದು

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ವಾಯುವಂ ಕಾಣ್ಬನಾರ್? ತತ್ಕ್ರಿಯೆಯ ಕಾಣನಾರ್?|
ಮಾಯೆಯಂತಪರೀಕ್ಷ್ಯಸತ್ತ್ವದೀಕ್ಷ್ಯಕೃತಿ ||
ರಾಯನಂ ಕಾಣಲಾಗದೆ ಮಂತ್ರಿಯೆಡೆಸಾರ್ವ|
ದೇಯಾರ್ಥಿಯೊಲು ನೀನು – ಮಂಕುತಿಮ್ಮ || 144 ||

ಪದ-ಅರ್ಥ: ವಾಯುವಂ-ಗಾಳಿಯನ್ನು, ಕಾಣ್ಬನಾರ್=ಕಂಡವರಾರು, ತತ್ಕ್ರಿಯೆಯ=ಅದರ ಕಾರ್ಯವನ್ನು, ಕಾಣನಾರ್=ಕಾಣದವರು ಯಾರು, ಮಾಯೆಯಂತಪರೀಕ್ಷ್ಯಸತ್ತ್ವದೀಕ್ಷ್ಯಕೃತಿ= ಮಾಯೆಯ+ಅಂತ (ಆಂತರ್ಯ)+ಅಪರೀಕ್ಷ್ಯ(ಪರೀಕ್ಷಿಸಲಾಗದಂತಹ)+ಸತ್ತ್ವದ (ಪರ
ಸತ್ವದ)+ಈಕ್ಷ್ಯ ಕೃತಿ (ಕಣ್ಣಿಗೆ ಕಾಣಬಹುದಾದ ಕಾರ್ಯ), ಮಂತ್ರಿಯೆಡೆಸಾರ್ವ=ಮಂತ್ರಿಯೆಡೆ(ಮಂತ್ರಿಯ ಕಡೆಗೆ)+ಸಾರ್ವ(ಹೋಗುವ), 
ದೇಯಾರ್ಥಿ=ದಾನಬೇಡುವವನು.

ವಾಚ್ಯಾರ್ಥ: ವಾಯುವನ್ನು ಕಂಡವರಾರು? ಆದರೆ ಅದರ ಕಾರ್ಯವನ್ನು ಕಾಣದವರಾರು? ಮಾಯೆಯೂ ಅಂತೆಯೇ ಪರೀಕ್ಷೆಗೆ ನಿಲುಕಲಾರದ್ದು. ಅದು ಪರಸತ್ವದ ಕಾಣಬಹುದಾದ ಕೃತಿ. ಅರಸನನ್ನು ಕಾಣಲು ಸಾಧ್ಯವಿಲ್ಲದೆ ಮಂತ್ರಿಯ ಕಡೆಗೆ ಹೋಗುವ ದಾನ ಬೇಡುವವನಂತೆ ಇರುವುದು ನಿನ್ನ ಅವಸ್ಥೆ.

ವಿವರಣೆ: ಪ್ರಪಂಚದಲ್ಲಿ ಎಷ್ಟೊಂದನ್ನು ಕಣ್ಣಿಗೆ ಕಾಣಲಾಗುವುದಿಲ್ಲ ಆದರೆ ಅವುಗಳ ಪ್ರಭಾವ ನಮ್ಮ ಅನುಭವಕ್ಕೆ ಬರುತ್ತದೆ. ತಾಯಿಯ ಪ್ರೀತಿ ಕಣ್ಣಿಗೆ ಕಾಣುವುದಿಲ್ಲ ಆದರೆ ಆಕೆಯ ಮೈದಡುವಿಕೆ ಪ್ರೀತಿಯನ್ನು ಅನುಭವಕ್ಕೆ ತರುತ್ತದೆ. ಗಾಳಿ ಕಣ್ಣಿಗೆ ಕಾಣುವುದಿಲ್ಲ ಆದರೆ ಅದು ಮೈತಟ್ಟಿದಾಗ, ದೂಳೆಬ್ಬಿಸಿದಾಗ, ವಸ್ತುಗಳನ್ನು ಹಾರಿಸಿದಾಗ ಅದರ ಕಾರ್ಯ ಕಣ್ಣಿಗೆ ಕಾಣುತ್ತದೆ. ಅಂದರೆ ಮೂಲ ಕಣ್ಣಿಗೆ ಕಾಣದೆ ಹೋದರೂ ಅದರ ಕಾರ್ಯ ನಮಗೆ ಗೋಚರವಾಗುತ್ತದೆ. ಮಾಯೆಯೂ ಹಾಗೆಯೇ. ಅದನ್ನು ಪರೀಕ್ಷೆಮಾಡುವ ಉಪಕರಣಗಳು ನಮ್ಮಲ್ಲಿಲ್ಲ. ಅದು ಅಪರೀಕ್ಷ್ಯ-ಪರೀಕ್ಷೆಗೆ ನಿಲುಕಲಾರದ್ದು. ಆದರೆ ಮಾಯೆಯ ಕಾರ್ಯ ಈಕ್ಷ್ಯ-ಕಣ್ಣಿಗೆ ಕಾಣಬಹುದಾದದ್ದು. ಇಡೀ ಪ್ರಪಂಚವೇ ಅದರ ಕೃತಿ. ಈ ಪ್ರಪಂಚದ ಸೊಬಗು, ಆಕರ್ಷಣೆ, ಇಲ್ಲಿ ಬರುವ ಸುಖ, ದು:ಖ, ಸಂಭ್ರಮಗಳೆಲ್ಲವೂ ಅದರ ಕಾರ್ಯ. ಅವು ನಮಗೆ ಕಾಣುತ್ತವೆ. ಅಷ್ಟೇ ಅಲ್ಲ ನಮ್ಮನ್ನು ಸೆಳೆದುಕೊಂಡು ಅದೇ ಸತ್ಯ ಎಂಬ ನಂಬಿಕೆಯನ್ನು ಹುಟ್ಟು ಹಾಕಿಬಿಡುತ್ತವೆ. ಇದೆಲ್ಲ ಕಣ್ಣಿಗೆ ಕಾಣದ ಪರಸತ್ವದ ಕಾಣುವ ರೂಪ. ಅದನ್ನೇ ಕಗ್ಗ – ‘ಮಾಯೆಯಂತಪರೀಕ್ಷ್ಯಸತ್ವದೀಕ್ಷ್ಯಕೃತಿ’ ಎಂದಿದೆ ಅದು ಮಾಯೆಯ ಆಂತರ್ಯವಾದ ಅಪರೀಕ್ಷ್ಯ ಸತ್ವದ, ಈಕ್ಷ್ಯಕೃತಿ. ಮೂಲಸತ್ವ, ಬ್ರಹ್ಮಸತ್ವ ಮಾಯೆಗೆ ಕಾರಣವಾದರೂ ಅದು ಆಂತರ್ಯದಲ್ಲಿರುವುದು, ಕಣ್ಣಿಗೆ ಕಾಣದೆ ಇರುವುದು. ಆದ್ದರಿಂದ ಅದು ಅಪರೀಕ್ಷ್ಯ. ಆದರೆ ಅದು ನಮ್ಮ ಅನುಭವಕ್ಕೆ ಬರುವುದು ತನ್ನ ಕೃತಿಯಾದ ಮಾಯೆಯ ಮೂಲಕ. ಅದು ಬ್ರಹ್ಮಸತ್ವದ ಕಾಣಬಹುದಾದ ರೂಪ.

ಇದಕ್ಕೊಂದು ಸುಂದರವಾದ ಉದಾಹರಣೆಯನ್ನು ಕಗ್ಗ ಕೊಡುತ್ತದೆ. ರಾಜನನ್ನು ಕಾಣಲಾರದವರು ಮಂತ್ರಿಯನ್ನು ಕಾಣುವಂತೆ ನಾವು ಪರಸತ್ವವನ್ನು ಕಾಣದೆ ಅದರ ಸೃಷ್ಟಿಯಾದ ಮಾಯೆಯನ್ನೇ ಕಾಣುತ್ತಿದ್ದೇವೆ. ಹಿಂದೆ ರಾಜರಿದ್ದರು. ಈಗ ಮಂತ್ರಿಗಳೇ ರಾಜರ ಹಾಗೆ ಇರುವುದರಿಂದ ಉದಾಹರಣೆಯನ್ನು ಕೊಂಚ ಬದಲಾಯಿಸಿಕೊಳ್ಳಬಹುದು. ಮಂತ್ರಿಗಳ ದರ್ಶನಕ್ಕೆ ದಿನಗಟ್ಟಲೇ ಕಾದು ಸಾಕಾದಾಗ ಅವರ ಆಪ್ತಕಾರ್ಯದರ್ಶಿ ನಿಮ್ಮ ಅಹವಾಲನ್ನು ಇಸಿದುಕೊಂಡು ‘ಆಯ್ತು ನೀವಿನ್ನು ಹೋಗಿ, ನಾನಿದನ್ನು ಮಂತ್ರಿಗಳಿಗೆ ತಲುಪಿಸುತ್ತೇನೆ’ ಎಂದಾಗ ಅದಕ್ಕೇ ತೃಪ್ತಿಪಟ್ಟು ಬರುವಸ್ಥಿತಿ ನಮ್ಮದು. ಪರಸತ್ವ ದರ್ಶನ ನೀಡದಿದ್ದಾಗ ಅದರ ಸೃಷ್ಟಿಯಾದ ಪ್ರಪಂಚವನ್ನೇ ಕಂಡು ಸಂತೋಷಪಡುವ ದೀನರು ನಾವು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.