ವಿಭಿನ್ನ ಅವಸ್ಥೆಗಳು

ಸೋಮವಾರ, ಜೂನ್ 17, 2019
25 °C

ವಿಭಿನ್ನ ಅವಸ್ಥೆಗಳು

ಗುರುರಾಜ ಕರಜಗಿ
Published:
Updated:

ಹಿಂದೆ ವಾರಾಣಸಿಯಲ್ಲಿ ಬ್ರಹ್ಮದತ್ತ ಆಡಳಿತ ಮಾಡುವಾಗ ಬೋಧಿಸತ್ವ ಅವನ ಸಾರಥಿಯಾಗಿದ್ದ. ರಾಜನಿಗೆ ನಾಲ್ಕು ಜನ ಮಕ್ಕಳು. ಅವರೆಲ್ಲರಿಗೂ ಸಾರಥಿಯ ಬಗ್ಗೆ ತುಂಬ ಸಲಿಗೆ. ಸಾರಥಿಗೂ ಆ ಹುಡುಗರು ತುಂಬ ಆತುರಗಾರರು ಎಂಬುದು ಗೊತ್ತು. ಒಂದು ದಿನ ಅವರು ಒಂದು ಕಿಂಶುಕ ವೃಕ್ಷದ ಬಗ್ಗೆ ಕೇಳಿದರು. ಆಗ ಸಾರಥಿ ಹೇಳಿದ, ‘ರಾಜಕುಮಾರರೇ ಕಿಂಶುಕ ಎಂಬುದು ಒಂದು ವಿಶೇಷ ವೃಕ್ಷ, ಕಾಡಿನಲ್ಲಿ ಬೆಳೆಯುತ್ತದೆ. ಅದರ ಹೂವುಗಳು ಕೆಂಪಗೆ ಹೊಳೆಯುತ್ತವೆ. ಅವು ದೊಡ್ಡದಾಗಿ ಚೂಪಾಗಿ ತಿರುಗಿರುವುದರಿಂದ ದೂರದಿಂದ ನೋಡಿದಾಗ ಗಿಳಿಯ ಕೊಕ್ಕಿನಂತೆ ಕಾಣುತ್ತವೆ. ಅದಕ್ಕೆಂದೇ ಮರವನ್ನು ಕಿಂಶುಕ ಎನ್ನುತ್ತಾರೆ. ಶುಕ ಎಂದರೆ ಗಿಳಿ’. ಈಗ ರಾಜಕುಮಾರರು ಆ ಕಿಂಶುಕ ಮರವನ್ನು ನೋಡಬೇಕೆಂದು ಹಟ ಹಿಡಿದರು.

ಆಗ ಸಾರಥಿ ‘ಆಯ್ತು ತೋರಿಸುತ್ತೆನೆ’ ಎಂದು ಹೇಳಿದ. ಆದರೆ ಆ ನಾಲ್ವರನ್ನೂ ಒಂದೇ ಬಾರಿಗೆ ಕರೆದುಕೊಂಡು ಹೋಗದೆ ಬೇರೆ ಬೇರೆಯಾಗಿ ಬೇರೆಬೇರೆ ಕಾಲದಲ್ಲಿ ಅವರನ್ನು ಕರೆದುಕೊಂಡು ಹೋದ. ಮೊದಲನೆಯವನನ್ನು ಕರೆದುಕೊಂಡು ಹೋದಾಗ ಅದು ಆಗ ತಾನೇ ಮೊಳೆತು ಒಂದೆರಡು ಹುಲ್ಲುಕಡ್ಡಿಯಂತೆ ನಿಂತಿತ್ತು. ಎರಡನೆಯವನನ್ನು ಕರೆದುಕೊಂಡು ಹೋದಾಗ ಅದು ಎಲೆಗಳನ್ನು ತುಂಬಿಕೊಂಡು ಹರಡಿತ್ತು. ಮೂರನೆಯವನು ಹೋದಾಗ ಮರದ ತುಂಬೆಲ್ಲ ಹೂವುಗಳು ಸುರಿದಿದ್ದವು. ನಾಲ್ಕನೆಯವನನ್ನು ಕರೆದೊಯ್ದಾಗ ಮರದಲ್ಲಿ ಗೊಂಚಲು ಗೊಂಚಲು ಹಣ್ಣುಗಳು ತುಂಬಿದ್ದವು.

ಮುಂದೊಂದು ದಿನ ರಾಜ ತನ್ನ ಮಕ್ಕಳೊಂದಿಗೆ ಕುಳಿತಾಗ ಕಿಂಶುಕ ಮರದ ವಿಷಯ ಬಂದಿತು. ಆಗ ರಾಜಕುಮಾರರೆಲ್ಲ ತಾವದನ್ನು ಕಂಡಿರುವುದಾಗಿ ಹೇಳಿದರು. ರಾಜ ಆ ಮರವನ್ನು ವರ್ಣಿಸಿ ಎಂದು ಮಕ್ಕಳಿಗೆ ಕೇಳಿದ. ಮೊದಲನೆಯವ ಹೇಳಿದ, ‘ಅಪ್ಪಯ್ಯ, ಸಾರಥಿ ಹೇಳಿದ್ದೆಲ್ಲ ಸುಳ್ಳು. ಆ ಮರ ತೀರಾ ಚಿಕ್ಕದು, ಒಂದೆರಡು ಹುಲ್ಲುಕಡ್ಡಿ ಇದ್ದಂತಿದೆ’. ಎರಡನೆಯವ ಕೋಪದಿಂದ ಹೇಳಿದ, ’ನೀನು ಯಾವ ಮರ ನೋಡಿದೆಯೋ ತಿಳಿಯದು. ಕಿಂಶುಕ ವೃಕ್ಷ ತುಂಬ ದೊಡ್ಡದು. ಅದರಲ್ಲಿ ಎಲೆಗಳು ತುಂಬಿಕೊಂಡಿವೆ. ಆದರೆ ಆ ಮರದಲ್ಲಿ ಒಂದು ಹೂವೂ ಇರುವುದಿಲ್ಲ’. ಮೂರನೇಯಾತ ಅವನನ್ನು ತಡೆದು ಹೇಳಿದ, ’ನೀನು ಮತ್ತಾವುದೋ ದೊಡ್ಡ ವೃಕ್ಷವನ್ನು ಕಿಂಶುಕ ಎಂದು ನೋಡಿ ಬಂದಿದ್ದಿಯಾ. ನಾನು ಮಾತ್ರ ಸರಿಯಾದ ಮರವನ್ನೆ ನೋಡಿದ್ದೆನೆ. ಅದರಲ್ಲಿ ಗಿಳಿಯ ಕೊಕ್ಕನ್ನು ಹೋಲುವ ಕೆಂಪಗೆ ಹೊಳೆಯುವ ಹೂವುಗಳಿವೆ’. ಆಗ ನಾಲ್ಕನೆಯವ ತಂದೆಗೆ ಹೇಳಿದ, ‘ನಾನು ನೋಡಿದ ಕಿಂಶುಕ ಮರ ಮಾತ್ರ ತುಂಬ ಸಮೃದ್ಧವಾದದ್ದು. ಅದರ ತುಂಬ ಗೊಂಚಲು, ಗೊಂಚಲು ಹಣ್ಣುಗಳು ಸುರಿದಿವೆ’. ನಾಲ್ಕು ರಾಜಕುಮಾರರ ನಡುವೆ ಚರ್ಚೆ ನಡೆಯಿತು, ಅದು ವಾದವಾಗಿ ಕೊನೆಗೆ ಜಗಳಕ್ಕೆ ಬಂದಿತು. ಆಗ ಸಾರಥಿ ಬಂದು, ‘ನೋಡಿ ರಾಜಕುಮಾರರೇ ತಾವೆಲ್ಲ ನೋಡಿದ್ದು ಅದೇ ಕಿಂಶುಕ ವೃಕ್ಷ. ಆದರೆ ಅದನ್ನು ಬೇರೆ ಬೇರೆ ಅವಸ್ಥೆಗಳಲ್ಲಿ ನೋಡಿದ್ದಿರಿ. ನೀವು ನೋಡಿದ್ದು ವೃಕ್ಷದ ನಾಲ್ಕು ಬೆಳವಣಿಗೆಯ ಹಂತಗಳು. ಅದು ಬದಲಾಗುತ್ತಲೇ ಹೋದರೂ ಅದು ಮೂಲದಲ್ಲಿ ಕಿಂಶುಕ ಮರವೇ’.

ಬುದ್ಧ ಹೇಳಿದ, ’ಎಲ್ಲರೂ ಧರ್ಮವನ್ನು ತಮಗೆ ತಿಳಿದಂತೆ ವ್ಯಾಖ್ಯೆ ಮಾಡುತ್ತಾರೆ. ಸಮಗ್ರವಾಗಿ ಧರ್ಮವನ್ನು ತಿಳಿಯದವರು ಕಿಂಶುಕದ ವಿಷಯದಲ್ಲಿ ನಾಲ್ವರು ಸಹೋದರರು ವಾಗ್ವಾದ ಮಾಡಿದಂತೆ ಬೇರೆ ಬೇರೆ ವಾದಗಳನ್ನು ಮಂಡಿಸುತ್ತಾರೆ. ಧರ್ಮವನ್ನು ಸಮಗ್ರವಾಗಿ ತಿಳಿದವರು ಮಾತ್ರ ಎಲ್ಲವೂ ಧರ್ಮದ ಬೇರೆ ಬೇರೆ ಅವಸ್ಥೆಗಳು ಎಂಬುದನ್ನು ಅರಿಯುತ್ತಾರೆ’.

ಇದು ಧರ್ಮದ ಸರಿಯಾದ ತಿಳುವಳಿಕೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !